ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ – ಈ ಜೀವನಚರಿತ್ರೆ ಏಕೆ?…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಇನ್ನು ಮುಂದೆ ಧಾರಾವಾಹಿಯಾಗಿ ಪ್ರಕಟವಾಗಲಿದೆ.

ಈ ಅಂಕಣದಲ್ಲಿ ವಿದ್ವಾನ್ ಆರ್.ಕೆ.ಶ್ರೀಕಂಠನ್ ಟ್ರಸ್ಟ್ ನಿರ್ವಾಹಕ ಟ್ರಸ್ಟಿ ಮತ್ತು ಸಂಚಾಲಕ ರುದ್ರಪಟ್ಣಂ ಎಸ್ ರಮಾಕಾಂತ್ ಹಾಗೂ ಕನ್ನಡ ಆವೃತ್ತಿಯ ಸಂಪಾದಕರಾದ ವಿದುಷಿ ಡಾ॥ ಟಿ.ಎಸ್. ಸತ್ಯವತಿ ಅವರು ಬರೆದ ಪ್ರವೇಶಿಕೆ ಮಾತುಗಳು ಇಲ್ಲಿವೆ-

2

ಈ ಜೀವನ ಚರಿತ್ರೆ ಏಕೆ? 
ರುದ್ರಪಟ್ಣಂ ಎಸ್ ರಮಾಕಾಂತ್, 

ಈ ಜೀವನಚರಿತ್ರೆಗೆ ಅಕ್ಷರರೂಪ ಕೊಡುವ ನಿಟ್ಟಿನಲ್ಲಿ ಕ್ಷಿಪ್ರಗತಿಯಲ್ಲಿ ಜರುಗಿದ ಘಟನೆಗಳ ಸರಣಿಗೆ ಚಾಲನೆ ನೀಡಿದ್ದು ಆ ಆಕಸ್ಮಿಕ ಭೇಟಿ. ರಂಜನಿ ಗೋವಿಂದ್ (ದ ಹಿಂದೂ ಪತ್ರಿಕೆಯ ವಿಶೇಷ ವರದಿಗಾರರು) 2010ನೇ ಸಾಲಿನಲ್ಲಿ ನಮ್ಮ ತಂದೆಯವರ 90ನೆಯ ಜನ್ಮದಿನೋತ್ಸವದ ಸಂದರ್ಭದಲ್ಲಿ ಅವರ ಸಂದರ್ಶನಕ್ಕಾಗಿ ಆಗಮಿಸಿದಾಗ, ಈ ಒಂಬತ್ತು ದಶಕಗಳಲ್ಲಿ ಅವರ ಘನತೆಗೆ ತಕ್ಕ ಜೀವನಚರಿತ್ರೆಯನ್ನು ಇದುವರೆಗೆ ಬರೆಯಲಾಗಿಲ್ಲ ಎನ್ನುವ ದುರದೃಷ್ಟಕರ ವಾಸ್ತವದೆಡೆಗೆ ನಮ್ಮ ಮಾತುಕತೆ ಹೊರಳಿತು.

ಚಕಿತರಾದ ರಂಜನಿ ಸಂದರ್ಶನವನ್ನು ಮುಗಿಸಿದ ನಂತರ ಮತ್ತೊಮ್ಮೆ ಈ ವಿಷಯವನ್ನು ಪ್ರಸ್ತಾಪಿಸಿ ಶ್ರೀಕಂಠನ್ ರವರ ಸುದೀರ್ಘ ಗಾನಜೀವನದ ಕುರಿತು ಗಂಭೀರವಾದ ಅಧ್ಯಯನ ಮತ್ತು ಅನುಧ್ಯಾನವನ್ನು ಕೈಗೆತ್ತಿಕೊಳ್ಳುವ ಅಗತ್ಯ ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು. “ಇಂಥ ಸಾಂಪ್ರದಾಯಿಕ ಸಂಗೀತದ ಪರಮೋಚ್ಚ ಮಾದರಿಯೊಳಗೆ ಆಳವಾಗಿ ಮುಳುಗಿ ತಕ್ಕ ಕಾಣಿಕೆಯನ್ನು ಸಮರ್ಪಿಸುವುದು ಅತ್ಯಪೇಕ್ಷಣೀಯ ಅನುಭವವಾಗುತ್ತದೆ” ಎಂದು ಅವರು ನುಡಿದರು.

ನವದಶಕಗಳ ದೀರ್ಘಾವಧಿಯುದ್ದಕ್ಕೂ ವಿವರಪೂರ್ಣ ಮಾನಸಿಕ ವಿಹಾರ ಕೈಗೊಳ್ಳುವುದು ಈ ಕಾರ್ಯಕ್ಕೆ ಅನಿವಾರ್ಯವಾದುದರಿಂದ, ತಾವು ಮತ್ತು ಲೇಖಕರು ಇಷ್ಟು ಸಮಯವನ್ನು ನೀಡಲು ಸಾಧ್ಯವೇ ಎಂಬ ಅನುಮಾನ ನನ್ನ ತಂದೆಯವರಿಗಿತ್ತು. “ಪತ್ರಿಕೋದ್ಯಮಿಗಳು ಎಡೆಬಿಡದ ಕೆಲಸಗಳಲ್ಲಿ ತೊಡಗಿರುವುದರಿಂದ ಅವರು ಗ್ರಂಥರಚನೆಯ ಭಾರವನ್ನು ಹೊರುವುದು ಕಷ್ಟ, ಅಲ್ಲವೆ?

ಈ ಕೆಲಸಕ್ಕೆ ಅಗತ್ಯವಾದ ಸಮಯವನ್ನು ನೀಡಲು ನಿಮಗೆ ಸಾಧ್ಯವೆ?”ಎನ್ನುವುದು ಅವರು ರಂಜನಿಯವರನ್ನು ಕೇಳಿದ ಮೊದಲ ಪ್ರಶ್ನೆಯಾಗಿತ್ತು.

ಈ ಘಟನೆ ನನ್ನನ್ನು ಆಲೋಚಿಸುವಂತೆ ಮಾಡಿತು. ಯೋಚಿಸಿದಂತೆಲ್ಲ, ಈ ಸಂಕಲ್ಪವನ್ನು ಸಾಕಾರಗೊಳಿಸುವ ಅಗತ್ಯವನ್ನು ನಾನು ಹೆಚ್ಚುಹೆಚ್ಚಾಗಿ ಮನಗಂಡೆ. ಸಂಗೀತಜ್ಞ ಶ್ರೀಕಂಠನ್ ರವರ ಕುರಿತ ಪುಸ್ತಕವನ್ನು ಹೊರತರಲು ನಾನು ಬಯಸಿದುದು ಕೇವಲ ನನ್ನ ತಂದೆಯವರಿಗಾಗಿ ಅಲ್ಲ, ಅದು ಸಂಗೀತ ಪ್ರಪಂಚಕ್ಕೆ ನಾನು ಸಲ್ಲಿಸಬೇಕಾದ ಋಣ. ನನ್ನ ತಂದೆಯವರ ಪಕ್ವ ವಯಸ್ಸಿಗೆ ಸೂಕ್ತವೆನಿಸುವ ತ್ವರಿತಗತಿಯಿಂದ ಈ ವಿಷಯದತ್ತ ಗಮನ ಹರಿಸುವುದು ಮತ್ತು ಈ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯ ಎನಿಸಿತು.

ಈ ಕಾರ್ಯದ ಕುರಿತು ರಂಜನಿಯವರು ವ್ಯಕ್ತಪಡಿಸಿದ ಕಳಕಳಿ ಮತ್ತು ಅವಸರದ ಭಾವ, ಅವರನ್ನು ಗ್ರಂಥರಚನೆಯ ಹೊಣೆ ವಹಿಸುವಂತೆ ವಿನಂತಿಸಲು ನನ್ನನ್ನು ಪ್ರೇರೇಪಿಸಿತು. ಈ ಕೆಲಸವನ್ನು ಕೈಗೆತ್ತಿಕೊಳ್ಳಲು ತಮ್ಮ ಕಛೇರಿಯಿಂದ ಪೂರ್ವಾನುಮತಿ ಪಡೆಯಬೇಕಾದುದರಿಂದ ಮೊದಮೊದಲು ಅವರು ಸ್ವಲ್ಪ ಹಿಂಜರಿದರು. ಆದರೆ ಕಛೇರಿಯಿಂದ ಹಸಿರು ನಿಶಾನೆ ದೊರೆತೊಡನೆ, ಶ್ರೀಕಂಠನ್ ರವರ ಸಂಗೀತ ಸಾಧನೆಯ ಕುರಿತು ಅತೀವ ಆಸಕ್ತಿಯಿದ್ದ ಲೇಖಕಿ, ಸಮರದೋಪಾದಿಯಲ್ಲಿ ಹಲವು ಸುತ್ತಿನ ಸಂದರ್ಶನಗಳು, ಚರ್ಚೆಗಳು, ಪಯಣ ಮತ್ತು ಬರಹದಲ್ಲಿ ತೊಡಗಿದುದಕ್ಕೆ ಕಳೆದ ಮೂರು ವರ್ಷಗಳು ಸಾಕ್ಷಿಯಾದವು.

ನಮ್ಮ ತಂದೆಯವರು ಓರ್ವ ಸಂಗೀತ ಕಲಾವಿದರು ಮಾತ್ರವಲ್ಲ, ತಮ್ಮ ಆದರ್ಶಗಳಿಂದ ಗುರುತಿಸಲ್ಪಟ್ಟ, ಪ್ರಿಯಕರ ಸ್ವಭಾವದ, ವಿನಯಸಂಪನ್ನ ವ್ಯಕ್ತಿಯೂ ಹೌದು. ತಮ್ಮ ವೃತ್ತಿಜೀವನದುದ್ದಕ್ಕೂ ಸ್ಪಷ್ಟ ಉಚ್ಚಾರ, ರಾಗಲಕ್ಷಣ, ಲಯ, ಭಾವ ಮತ್ತು ಭಕ್ತಿಗಳಿಗೆ ಅವರು ನೀಡುತ್ತಿದ್ದಪ್ರಾಮುಖ್ಯತೆ ಅವರ ಕಛೇರಿಗಳ ಗುಣಮಟ್ಟವನ್ನು ಉತ್ತಮಿಕೆಯ ಸ್ತರದಲ್ಲೇ ಇರಿಸಿಕೊಳ್ಳಲು ನೆರವಾಗಿತ್ತು. ಈ ಪುಸ್ತಕದಲ್ಲಿ ಕಾಣಸಿಗುವ ನಾನು ಕ್ಲಿಕ್ಕಿಸಿದ ಛಾಯಾಚಿತ್ರಗಳು (ಕೆಲವು ಹಳೆಯವನ್ನು ಹೊರತುಪಡಿಸಿ) ಇಂದಿಗೂ ಜನರ ಆತ್ಯಂತಿಕ ಪೂಜ್ಯತೆಗೆ ಪಾತ್ರನಾಗಿರುವ ಈ ಸೃಜನಶೀಲ ಕಲಾವಿದನ ಸಂಗೀತದ ಸ್ಮøತಿಗಳನ್ನು ಸೆರೆ ಹಿಡಿದಿಟ್ಟಿವೆ.

ತಮ್ಮನ್ನರಸಿ ಬಂದ ಗೌರವಾದರಗಳಿಗೆ ಎಂದೂ ಅಂಟಿಕೊಳ್ಳದ ಶ್ರೀಕಂಠನ್ ನಿರಂತರ ಸೃಜನಶೀಲವಾಗಿರುವ ಜೀವನ ಹೇಗಿರುತ್ತದೆ ಎನ್ನುವುದನ್ನು ಸಂಗೀತ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ತಮ್ಮ 94ನೆಯ ವಯಸ್ಸಿನಲ್ಲೂ ಈ ಕಲಾಕೋವಿದ ಇನ್ನೂ ಕಛೇರಿಗಳನ್ನು ನೀಡುತ್ತಿದ್ದಾರೆ, ಸಂಗೀತ ಶಿಕ್ಷಣವನ್ನು ಧಾರೆಯೆರೆಯುತ್ತಿದ್ದಾರೆ, ಪ್ರಪಂಚ ಪರ್ಯಟನೆ ಮಾಡುತ್ತಿದ್ದಾರೆ ಮತ್ತು ಅಮೂಲ್ಯವಾದ ಸಂಗೀತ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಜಗತ್ತಿನ ವಿವಿಧ ವೇದಿಕೆಗಳ ಮೇಲೆ ಅವರು ನೀಡಿದ ಸಂಗೀತ ಕಛೇರಿಗಳನ್ನು ನಾಲ್ಕು ದಶಕಗಳ ಕಾಲ ಹತ್ತಿರದಿಂದ ಗಮನಿಸಿದ ನಾನು, ಅವರು ತಮ್ಮ ಚರಿತ್ರಾರ್ಹ ವೃತ್ತಿಜೀವನದಲ್ಲಿ ಅದ್ಭುತ ಗುಣಗಳನ್ನು ಅಳವಡಿಸಿಕೊಂಡ ಓರ್ವ ಸಂಗೀತಧರ್ಮ ಪರಿಪಾಲಕ ಎಂದು ದೃಢವಿಶ್ವಾಸದಿಂದ ಹೇಳಬಲ್ಲೆ.

‘ಶತಮಾನದ ಸಿರಿದನಿ-ಆರ್.ಕೆ.ಶ್ರೀಕಂಠನ್’ ಶೀರ್ಷಿಕೆಯ ಈ ಪುಸ್ತಕ ಶ್ರೀಕಂಠನ್ ರವರ ಸಾಧನೆಗಳಿಂದಾಚೆಗೂ ತನ್ನ ಪರಿಧಿಯನ್ನು ಚಾಚಿ, ಕಲೈಡೋಸ್ಕೋಪಿನಂತೆ ರುದ್ರಪಟ್ಣ ಗ್ರಾಮ, ಪಾರಂಪರಿಕ ಮೈಸೂರು ನಗರ ಮತ್ತು ಅವರನ್ನು ಪ್ರಾರಂಭಿಕ ವರ್ಷಗಳಲ್ಲಿ ರೂಪಿಸಿ, ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದ ಬೆಂಗಳೂರು ಮೆಟ್ರೋಪಾಲಿಟನ್ ನಗರದ ವೈವಿಧ್ಯಮಯ ದೃಶ್ಯಗಳ ದಿಗ್ದರ್ಶನ ಮಾಡಿಸುತ್ತದೆ.

ನಾನು ಆರ್.ಕೆ.ಮನೆತನದಲ್ಲಿ ಜನ್ಮ ತಳೆದಿರುವುದು ಮತ್ತು ನನ್ನ ತಾಯ್ತಂದೆಯರಿಗೆ, ಅದರಲ್ಲೂ ನನ್ನ ತಂದೆಗೆ ಓರ್ವ ಪುತ್ರನಾಗಿ ಹಾಗೂ ಸಂಗೀತಗಾರನಾಗಿ ಸೇವೆ ಸಲ್ಲಿಸುತ್ತಿರುವುದು ನನ್ನ ಪುಣ್ಯಾತಿಶಯವೇ ಸರಿ. ಜೀವನ ಮತ್ತು ಸಂಗೀತದಲ್ಲಿ ಅವರು ಎಂದೆಂದಿಗೂ ನನ್ನ ಆದರ್ಶವಾಗಿರುತ್ತಾರೆ.

****** ****** ************ ****** ******

Editor of Kannada Book – ‘Shatamaanada Siridani’ – by TS Sathyavathi  –  

-ವಿದುಷಿ ಡಾ॥ ಟಿ.ಎಸ್. ಸತ್ಯವತಿ

“ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ”

ಶ್ರೇಷ್ಠರ ಆಚರಣೆಯೇ ಇತರರಿಗೆ ಮಾದರಿ.

ಇದು ಎಲ್ಲ ಕಾಲಕ್ಕೂ ಎಲ್ಲ ಕ್ಷೇತ್ರಕ್ಕೂ ಅನ್ವಯಿಸುವ ಮಾತು. ನನ್ನ ಪೂಜ್ಯ ಗುರುವರ್ಯರಾದ ಆರ್ ಕೆ ಶ್ರೀಕಂಠನ್ ರವರ ಜೀವನಕ್ರಮ ಮತ್ತು ಸಾಧನೆಯ ಮಾರ್ಗ ಈ ಎರಡೂ ಕರ್ಣಾಟಕ ಸಂಗೀತ ಇತಿಹಾಸದಲ್ಲಿನ ಮೈಲಿಗಲ್ಲು. ಇಂತಹ ಬದುಕನ್ನು ಬರಹದಲ್ಲಿ ಹಿಡಿದಿಡುವುದು  ದುಸ್ಸಾಹಸವೆಂಬಂತಹ ಸಂದರ್ಭದಲ್ಲಿ ಖ್ಯಾತ ಪತ್ರಕರ್ತೆ ಶ್ರೀಮತಿ ರಂಜನಿ ಗೋವಿಂದ್ ರವರು ಈ ಸವಾಲನ್ನು ಸ್ವೀಕರಿಸಿದರಷ್ಟೇ ಅಲ್ಲದೆ ಅದನ್ನು ಅತ್ಯಂತಸಮರ್ಥವಾಗಿ ನಿರ್ವಹಿಸಿ ಪೂರೈಸಿದ್ದಾರೆ. ಅವರು ಹೊರತಂದಿರುವ ‘Voice of a Generation – R.K.Srikantan’  ಪುಸ್ತಕ ಇಂದಿಗೆ ಈ ವಿಷಯ ಕುರಿತ ಅಧಿಕೃತವೂ ಅಧಿಕಸುಂದರವೂ ಆದ ದಾಖಲೆಯೆನಿಸಿದೆ. ರಂಜನಿಯವರ ಈ ಕಾರ್ಯ, ಆ ಮಹಾನ್ ಚೇತನಕ್ಕೆ ನೀಡಿರುವ ಅನುಪಮ ಕೊಡುಗೆ.

ಇನ್ನು, ಆಂಗ್ಲಭಾಷೆಯಿಂದ ಇದನ್ನು ನಮ್ಮ ಕನ್ನಡಭಾಷೆಗೆ ತರಬೇಕೆಂಬ ಹಂಬಲದ ಫಲವೇ ‘ಶತಮಾನದ ಸಿರಿದನಿ’. ಮೂಲದ ಆಶಯಕ್ಕೆ ಕಿಂಚಿತ್ತೂ ಕುಂದು ಬಾರದ ರೀತಿಯಲ್ಲಿ ಭಾವಭಾಷಾಂತರವನ್ನು ಮಾಡಿರುವ ಯಶಸ್ಸು ಸಲ್ಲಬೇಕಿರುವುದು ನನ್ನ ಪ್ರಿಯಶಿಷ್ಯೆಯರಾದ ವಿದುಷಿ ಡಾ॥ ಸುಮನಾ ಹಾಗೂ ವಿದುಷಿ ಡಾ॥ ಆರತಿ ಬಾಲಸುಬ್ರಹ್ಮಣ್ಯಮ್ ಅವರಿಗೆ. ಈರ್ವರೂ ಉತ್ತಮ ಗಾಯಕಿಯರೂ, ಪ್ರೌಢ ವಾಗ್ಮಿಗಳೂ ಹಾಗೂ ಪ್ರಬುದ್ಧ ಭಾಷಾಭಿಜ್ಞರು. ಎಲ್ಲಕ್ಕಿಂತ ಮಿಗಿಲಾಗಿ ಗುರುವರ್ಯರ ಬಗೆಗೆ ಅಕೃತ್ರಿಮ ಪ್ರೇಮ ಹಾಗೂ ಭಕ್ತಿಯನ್ನುಳ್ಳವರು. ಹೀಗಾಗಿ, ನನ್ನ ಕಾರ್ಯ ಬಹು ಸುಲಭವಾಯಿತು. ಶ್ರಮ ಅವರದು, ಶ್ರೇಯಸ್ಸು ನನ್ನದೂ ಎಂಬಂತಾಯಿತು. ದುಡಿಮೆ ಅವರದು, ಸಂಪಾದನೆ ನನ್ನದು!! ಅನುಕೂಲಕ್ಕಾಗಿ ಅಲ್ಲಲ್ಲಿ ಮಾಡಿಕೊಂಡಿರುವ ಕನಿಷ್ಠ ಮಾರ್ಪಾಟುಗಳನ್ನು ಹೊರತುಪಡಿಸಿದರೆ ಕನ್ನಡ ಆವೃತ್ತಿ ಮೂಲದ ಪಡಿಯಚ್ಚೇ ಆಗಿರುವುದನ್ನು ಗಮನಿಸಬಹುದು.

ಈ ಪವಿತ್ರಕಾರ್ಯದಲ್ಲಿ ನನ್ನನ್ನು ತೊಡಗಿಸಿದ್ದಕ್ಕಾಗಿ ಶ್ರೀಮತಿ ರಂಜನಿ ಗೋವಿಂದ್ ರವರಿಗೂ ಹಾಗೂ ಗುರುಪುತ್ರರಾದ ಶ್ರೀಯುತ ಕುಮಾರ್ ರವರಿಗೂ ಆಭಾರಿಯಾಗಿದ್ದೇನೆ. ನಾಡಿನ ಸಹೃದಯ ಸಂಗೀತಾಭಿಮಾನಿಗಳು ಈ ನಮ್ರ ಯತ್ನವನ್ನು ಮೆಚ್ಚುವರೆಂದು ಆಶಿಸುತ್ತೇನೆ.

ಸುಪ್ರಭಾತದಲ್ಲಿ ಅರಳಿದ ಹೂ

ಸುಪ್ರಭಾತದಲ್ಲಿ ಅರಳಿದ ಹೂಗಳ ಮೇಲೆ ಕುಳಿತ ಇಬ್ಬನಿಯ ಬಿಂದುಗಳಂತೆ ಉಚ್ಚರಿಸಲ್ಪಡುವ ಪದಪುಂಜಗಳು; ಪ್ರಣವನಾದವನ್ನೇ ಸದಾ ಮೀಟುವ ತುಂಬುಕಂಠದ ಶ್ರೀಮಂತಿಕೆ; ಹೊಳೆವ ನಕ್ಷತ್ರರಾಶಿಯಂತೆ ಸ್ಪರ್ಧೆಯಲ್ಲಿ ಮಿಂಚುವ ಅನರ್ಘ್ಯ ಕೃತಿರತ್ನಗಳ ಬತ್ತದ ಭಂಡಾರ; ಕಾಲಪ್ರಮಾಣದಲ್ಲಿ, ದೇವಾಲಯದಲ್ಲಿ ಮೊಳಗುವ ಘಂಟಾರವದ ನಿಯತತೆ, ಖಾಚಿತ್ಯ; ನಿರೂಪಣೆಯಲ್ಲಿ ನ್ಯೂನಾತಿರೇಕಗಳಿಂದ ದೂರವಾದ ಪ್ರಮಾಣಬದ್ಧತೆ, ಔಚಿತ್ಯ; ಯುವಕರನ್ನೂ ನಾಚಿಸುವ ಹುರುಪು, ಸಡಗರ……

ಹೀಗೆ ಹೇಳುತ್ತಲೇ ಹೋಗಬಹುದು. ತಾವು ಬದುಕಿದ ತೊಂಭತ್ತನಾಲ್ಕು ವಸಂತಗಳ ವರೆಗೂ ಎಡೆಬಿಡದೆಪ್ರವಹಿಸಿದ ಶ್ರೀಕಂಠನ್ ರವರ ಗಾನಗಂಗೆಯ ವೈಖರಿ ಇದು. ಶ್ರುತಿಶುದ್ಧ, ಲಯಶುದ್ಧ, ರಾಗಶುದ್ಧ, ಸಾಹಿತ್ಯ ಶುದ್ಧ, ಭಾವಶುದ್ಧ – ಹೀಗೆ ಅವರ ಸಂಗೀತ ಪಂಚಾಂಗಶುಧ್ಧಿಗೆ ಪ್ರಸಿದ್ಧ.

ಆಸೇತುಹಿಮಾಚಲಪರ್ಯಂತ ಇರುವ ಕರ್ಣಾಟಕ ಶಾಸ್ತ್ರೀಯಸಂಗೀತಪ್ರಿಯರಿಗೆಲ್ಲ ಪ್ರಿಯವಾದ ಹೆಸರು ಆರ್ ಕೆ ಎಸ್. ತಮ್ಮ ಹದಿಮೂರು-ಹದಿನಾಲ್ಕರ ಸುಮಾರಿನಲ್ಲಿ ಕಚೇರಿ ನೀಡಲು ಆರಂಭಿಸಿದ ಆರ್ ಕೆ ಎಸ್ ಅವರದು ಎಂಟು ದಶಕಗಳನ್ನೂ ಮೀರಿ ಮುಂದುವರಿದ ಕಲಾಜೀವನದ ಅರ್ಥಪೂರ್ಣ ಅವಧಿ. ಮಿದಾಸ ಸ್ಪರ್ಶ- ಹಾಡಿದ್ದೆಲ್ಲ ಬಂಗಾರ. ರಾಜ್ಯ-ಹೊರರಾಜ್ಯಗಳ ಎಲ್ಲ ಎಲ್ಲೆಗಳನ್ನೂ ದಾಟಿ ಕಡಲಾಚೆಯ ಕಲಾರಸಿಕರನ್ನೂ ತನ್ನ ಸದೃಢ ಆದರೂ ಮಧುರ ಮೋಹಕ ಕಂಠದಿಂದ ಸೆಳೆದುಕೊಂಡಿರುವ ಶ್ರೀಕಂಠನ್ ರ ವರ್ಣರಂಜಿತ ಯಶೋಗಾಥೆ ಎಂಥವರನ್ನೂ ಬೆರಗುಗೊಳಿಸುವಂಥದ್ದು. ಅಮೆರಿಕೆಯ ಪಿಟ್ಸ್ಬರ್ಗ್ ನ  ವೆಂಕಟೇಶ್ವರ ದೇವಸ್ಥಾನದ ಆಹ್ವಾನದ ಮೇರೆಗೆ ೧೯೮೫ ಮತ್ತು ೧೯೮೬ ರಲ್ಲಿ ವಿದೇಶಪ್ರವಾಸ ಮಾಡಿದ ಈ ಗಾಯಕ-ಬೋಧಕ ಶಿಖಾಮಣಿ ಆ ನಾಡಿನ ಉದ್ದಗಲಕ್ಕೂ ಕಚೇರಿಗಳನ್ನು ನೀಡಿದುದೇ ಅಲ್ಲದೆ ಕೆನಡದ ಟೊರಂಟೊ ದಲ್ಲಿನ ಯಾರ್ಕ್

ವಿಶ್ವವಿದ್ಯಾಲಯದಲ್ಲಿ ಆರು ತಿಂಗಳು ಸಂದರ್ಶಕ ಶಿಕ್ಷಕರಾಗಿದ್ದು ನಮ್ಮ ಸಂಗೀತದ ಹಿರಿಮೆಯನ್ನು ಸ್ಥಾಪಿಸಿ ಬಂದಿದ್ದಾರೆ.

ಅಲ್ಲಿಂದೀಚೆಗೆ ಹಲವಾರು ಬಾರಿ ವಿದೇಶಗಳಲ್ಲಿ ಸಂಚಾರ ಮಾಡಿ ಎರಡು ಸಾವಿರದ ಮೂರರ ಜೂನ್ ನಲ್ಲಿ ಹದಿನೇಳು ಕಚೇರಿಗಳ ಮಹಾಸರಣಿಯಿಂದ ಅಮೆರಿಕೆಯ ಸಂಗೀತಸಹೃದಯಿಗಳ ಮನ ಸೂರೆಗೊಂಡಿದ್ದಾರೆ. 

ಗುರೂಣಾಂ ಗುರುಃ

ಆಚಾರ್ಯರಾಗಿ ಶ್ರೀಕಂಠನ್ ರ ಸ್ಥಾನ ಅತ್ಯುನ್ನತವಾದದ್ದು. ಗುರುವಾಗಿ ಅವರನ್ನು ಕಂಡಾಗಲೆಲ್ಲ ನೆನಪಾಗುವ ಕಾಳಿದಾಸನ ಶ್ಲೋಕ:

ಶ್ಲಿಷ್ಟಾ ಕ್ರಿಯಾ ಕಸ್ಯಚಿದಾತ್ಮಸಂಸ್ಥಾ

ಸಂಕ್ರಾಂತಿರನ್ಯಸ್ಯ ವಿಶೇಷಯುಕ್ತಾ ।

ಯಸ್ಯೋಭಯಂ ಸಾಧು ಸ ಶಿಕ್ಷಕಾಣಾಂ

ಧುರಿ ಪ್ರತಿಷ್ಠಾಪಯಿತವ್ಯ ಏವ ॥

ಕೆಲವರು ಉತ್ಕೃಷ್ಟವಾದ ಕಲಾರೂಪವನ್ನು ಪ್ರದರ್ಶಿಸಬಲ್ಲರು ಮಾತ್ರ. ಮತ್ತೆ ಕೆಲವರು ಇತರರಿಗೆ ಹೇಳಿಕೊಡಲು ಮಾತ್ರ ಸಮರ್ಥರು. ಯಾರಲ್ಲಿ ಈ ಎರಡು ಗುಣಗಳೂ ಸಂಗಮಿಸಿವೆಯೋ ಆತನೇ ಶಿಕ್ಷಕರ ಮುಂಚೂಣಿಯಲ್ಲಿರತಕ್ಕವನು. 

“ತಿಳಿದು ಪೇಳಲಿ ಬೇಕು” ಎಂಬ ಮಾತು ಆರ್ ಕೆ ಎಸ್ ಅಂಥವರಿಂದಲೇ ಹುಟ್ಟಿರಬೇಕು. ಶಿಕ್ಷಕರಾಗಿ ಅವರ ಶಿಸ್ತು, ಸಮಯಪಾಲನೆ ಸ್ಥಾಣುವಿನಂತೆ ಅಚಲ. ಶಿಷ್ಯಪ್ರೇಮ ಅನ್ಯಾದೃಶ. ಎಲ್ಲದರಲ್ಲೂ ಅತಿರೇಕವೆನಿಸದ ಅಂಶಗಳನ್ನು ಹದಪ್ರಮಾಣದಲ್ಲಿ ಹೊಸೆಯಬಲ್ಲ ಸಮನ್ವಯಾಚಾರ್ಯ.

ರಾಗ-ಕೃತಿಗಳ ಪಾಠಾಂತರ ಶುದ್ಧವಾಗಿರಬೇಕು, ಅದನ್ನು ಕಾಯ್ದುಕೊಳ್ಳಬೇಕು; ನಿರೂಪಣೆಯಲ್ಲಿ ಎಲ್ಲೂ ದುರ್ಬಲತೆ  ಇಣುಕಬಾರದು, ಆತ್ಮವಿಶ್ವಾಸ ತುಂಬಿರಬೇಕು; ಉಚ್ಚಾರಣೆ ಸ್ಪಷ್ಟಾತಿಸ್ಪಷ್ಟವಾಗಿರಬೇಕು, ಅಕ್ಷರಗಳನ್ನು ಅಗಿಯಬಾರದು; ಕಾಲಪ್ರಮಾಣದಲ್ಲಿ ಏರುಪೇರಾಗುವಂತಿಲ್ಲ, ಸಮತೆ ಸಾಧಿಸಬೇಕು; ಭಾವಶೈಥಿಲ್ಯ ಎಲ್ಲೂ ಕೂಡದು, ತನ್ನನ್ನೇ ಅರ್ಪಿಸಿಕೊಂಡಿರಬೇಕು; ಇದು ಅವರ ಪಾಠದಲ್ಲಿನ ಪಂಚಾಕ್ಷರೀಮಂತ್ರ.

ಹಿಂದೆ ರೇಡಿಯೋದಲ್ಲಿ ಸುದೀರ್ಘಕಾಲದವರೆಗೂ ಪ್ರಸಾರವಾಗುತ್ತಿದ್ದ ಅವರ ‘ಗಾನವಿಹಾರ – ಸಂಗೀತಪಾಠ ಕಾರ್ಯಕ್ರಮ’ಎಷ್ಟು ಜನಪ್ರಿಯವಾಯಿತೆಂದರೆ ನಾಡಿನ ಎಲ್ಲ ಸಂಗೀತವಿದ್ಯಾರ್ಥಿಯರೂ ಅವರ ಶಿಷ್ಯರೇ. ಆದರೆ ಅವರ ಅಪರೋಕ್ಷಶಿಷ್ಯರಾಗುವ ಭಾಗ್ಯ ಗಳಿಸಿದವರಲ್ಲಿ ಅನೇಕರು ಇಂದಿನ ಪ್ರಸಿದ್ಧ ವಿದ್ವಾಂಸವಿದುಷಿಯರಾಗಿದ್ದಾರೆ.

ಇಂತಹ ಸದ್ಗುರುವಿನಲ್ಲಿ ಮೂವತ್ತು ವರ್ಷಗಳಿಗಿಂತ ಅಧಿಕ ಕಾಲದವರೆಗೂ ಶಿಷ್ಯವೃತ್ತಿಯನ್ನು ಮಾಡುವ ಸೌಭಾಗ್ಯವನ್ನು ಕರುಣಿಸಿದ ಆ ದೈವಕ್ಕೆ ಶತಕೋಟಿ ಪ್ರಣಾಮಗಳು. ಅವರ ಶಿಷ್ಯ-ಪ್ರಶಿಷ್ಯರ ಸಂಪ್ರದಾಯಶುದ್ಧ ಸಂಗೀತಧಾರೆ ಅನವರತ  ಪ್ರವಹಿಸಲಿ ಎನ್ನುವುದು ಎಲ್ಲರ ಹೃದಯದ ಸದಾಶಯವಾಗಿದೆ.

Photos by : Mohan Srenivasan

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

4 March, 2022

1 Comment

  1. T S SHRAVANA KUMARI

    ಉ ‍ತ್ತಮ_ಆರಂಭ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading