ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರಿಫ್ ರಾಜಾ ಕವಿತೆ

ಈತ ಆರಿಫ್ ರಾಜಾ…. ರಾಯಚೂರಿನ ಹಳ್ಳಿಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿರುವ ಆರಿಫ್ ಕವನಗಳು ಕಾಡುತ್ತವೆ,

ನಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಕುಳಿತುಬಿಡುತ್ತವೆ. ಒಂದು ಕವನ ಇಲ್ಲಿದೆ. 

-ಭಾರತೀದೇವಿ

paintings-003
ನಮಗೆ ಮನೆ ಕೊಡುವುದಿಲ್ಲವಂತೆ
ಕಿರೀಟವಿಲ್ಲದ ಅರಸುಗಳ ಹಾಗೆ
ಹೆಸರಿಲ್ಲದ ಊರುಗಳಿಂದ ಬಂದ ಕೂಲಿಯಾಳುಗಳು ನಾವು
ನಮ್ಮ ಕತ್ತೆಗಳು ಹೊತ್ತ ಕೆಲಸದ ಮೂಟೆಗಳು
ಗದ್ದುಗೆಗಳ ಪ್ರಭಾವದಲಿ ಹಾಳಾದವು
 
ನಾವು ಪರವಾನಿಗೆ ಪತ್ರಗಳನ್ನಿಟ್ಟುಕೊಂಡೇ ಬಂದಿದ್ದೇವೆ
ನಮ್ಮನ್ನು ಯಾರು ಬೇಕಾದರೂ ಖರೀದಿಸಬಹುದು ರೂಪಾಯಿ ಪೈಸೆಗಳಿಗೆ
 
ಇಲ್ಲಿ ಚಾಕರಿ ಸುಲಭವಾಗಿ ಸಿಗುವುದಿಲ್ಲ ಗೊತ್ತು
ಕಳ್ಳರಿಗೆ ಕೊಲೆಗಡುಕರಿಗೆ ತಲೆಹಿಡುಕರಿಗೆ ಮೊದಲ ಆದ್ಯತೆ
ಇವರ ಸಾಲಿನಲ್ಲಿ ನಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು
 
ನಮಗೆ ಮನೆ ಕೊಡುವುದಿಲ್ಲವಂತೆ
ನಗರದಲ್ಲಿ ನಮಗೆ ಬಾಡಿಗೆಮನೆ ಸಿಗುವುದಿಲ್ಲವಂತೆ
ಏಕೆಂದರೆ ನಾವು
ಗಡ್ಡಬಿಟ್ಟಿರುತ್ತೇವೆ, ದನದ ಮಾಂಸ ತಿನ್ನುತ್ತಿರುತ್ತೇವೆ
ಕರ್ಫ್ಯೂ ಹೇರಿದಂತಿರುವ ತುರ್ತುಪರಿಸ್ಥಿತಿಯ ನಡಾವಳಿಗಳು
ನಮ್ಮನ್ನು ಅನುಮಾನದಿಂದ ಕಾಣುತ್ತವೆ
ಕ್ರೀಡೆಗಳಲ್ಲಿ ಸೇನೆಗಳಲ್ಲಿ ಸೌಹಾರ್ದ ಸಂಬಂಧಗಳಲ್ಲಿ
 
ಭಯೋತ್ಪಾದಕರಲ್ಲ
ಗುಲಾಮಿ ಸಂತತಿಯ ಕಪ್ಪು ಅಕ್ಷರಗಳು ನಾವು
ಗೋಡೆಗಳ ಮೇಲೆ ಬರಹಗಳನ್ನು ಬರೆಯುವೆವು
 
ಹಣೆಬರಹ ಬದಲಾಯಿಸುತ್ತೇವೆ ಅಕ್ಕರೆಯ ಹುಡುಗರು
ವ್ಯವಸ್ಥೆಯ ಹುಣ್ಣುಗಳನ್ನು ವರೆಸಿಹಾಕುತ್ತೇವೆ
ನಮ್ಮ ಹುಟ್ಟುಹಬ್ಬವನ್ನು ಯಾರೂ ಆಚರಿಸುವುದಿಲ್ಲ
ನಮ್ಮ ಗೆಳತಿಯರ ಹೊಟ್ಟೆಯಲಿ ಭಾರತೀಯರಾಗಿ ಹುಟ್ಟಿಬರುತ್ತೇವೆ
ಜಾತಿಗೊಂದು ಪ್ರಮಾಣ ಪತ್ರ ಬೇಡುವ
ಇಂಡಿಯಾಕ್ಕೆ ನಮ್ಮ ನಮಸ್ಕಾರಗಳು
 
ಮಾನವ ಬಾಂಬುಗಳ ದಾಳಿಗೆ ಒಳಗಾದ ನಿರ್ಜೀವ ಸ್ಮಾರಕಗಳು
ನಮ್ಮೊಳಗೆ ಝಂಡಾ ಹಾರಿಸುತ್ತಾ ನಗುತ್ತವೆ
ಎಲ್ಲಾ ದೇಶಗಳಲ್ಲೂ ಅಷ್ಟೆ
ಪ್ರಾರ್ಥನೆಯ ಭಾಷೆ ಪ್ರಭುತ್ವಕ್ಕೆ ಬೇಗ ಬರುವುದಿಲ್ಲ
 

‍ಲೇಖಕರು avadhi

3 February, 2009

4 Comments

  1. siddu devaramani

    ಪ್ರಾಥ೯ನೆ ಯ ಭಾಷೆ ಪ್ರಭುತ್ವ ಕ್ಕೆ ಬೇಗ ಬರುವುದಿಲ್ಲ ಎ೦ದ ನಿಮ್ಮ ಆಶಾವಾದದ ಬಗ್ಗೆ ನನಗೆ ಮರುಕವಿದೆ! ಆರಿಫ್, ನಮ್ಮನ್ನಾಳುವವರು ಯಾರೂ ದೊಡ್ಡದಾಗಿ ಯೋಚಿಸಿ ಮುನ್ನಡೆಸಿಯಾರೆ೦ಬ ಒ೦ದು ಸಣ್ಣ ಹೋಪ್ ನನ್ನಲ್ಲಿ ಇಲ್ಲ.. ಅನುಭವಿಸುವ ನೀವು ಮನುಷ್ಯರಾಗುತ್ತೀರಿ ..ಬೇಸರಿಸಿಕೊಳ್ಳದಿರಿ.. ಥ್ಯಾ೦ಕ್ಸ್.

  2. niranjana kottur

    wahh…super

  3. kaligananath gudadur

    Nijakkoo naavellaroo hemmepaduva kavanvidu.
    Kaligananath Gudadur

  4. arif_raja

    siddu’ivu mole tottininda jinugida kaviteyella

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading