ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಯೇ.. ಕಾಳೇ.. ಆಯೇ.. ಬೊಳ್ಳೇ.. ಆಯೇ..

ಬಾಬುನ ಗಾಡಿ

ಮನೋಹರ ಪ್ರಸಾದ್

ನನ್ನ ಬಾಲ್ಯದಲ್ಲಿ ಹಳ್ಳಿಯ ಮನೆಯ ನಡುರಾತ್ರಿಯ ಸಮಯ. ತಟ್ಟನೆ ಎಚ್ಚರಿಕೆ. ನೀರವ ಮೌನ, ಕಗ್ಗತ್ತಲ ನಡುವೆ ಕೇಳಿ ಬರುತ್ತಿದ್ದ ಕಪ್ಪೆಯ ವಟರ್‌ ವಟರ್‌.. ಒಂದಿಷ್ಟು ಮಳೆ ಹನಿದಿರಬಹುದು. ವಿದ್ಯುತ್‌ ಸಂಪರ್ಕವಿಲ್ಲದ ಪರಿಸರ. ನಡುರಾತ್ರಿಯ ನೀರವ ಮೌನವನ್ನು ಸೀಳಿಕೊಂಡು ಕೇಳಿಬಂತು..
ಆಯೇ.. ಕಾಳೇ.. ಆಯೇ.. ಬೊಳ್ಳೇ.. ಆಯೇ…..
ಇದು ಬಾಬಣ್ಣನ ದನಿ. ಎತ್ತಿನಗಾಡಿಯಲ್ಲಿ ಆತನ ಈ ಪಯಣ ಯಾವಾಗಲೂ ಸಾಗುತ್ತಿತ್ತು. ನನ್ನ ಉಪ್ಪರಿಗೆಯ ಕೋಣೆ ಮತ್ತು ಎತ್ತಿನಗಾಡಿ ಸಾಗುತ್ತಿದ್ದ ಮಣ್ಣರಸ್ತೆಯ ನಡುವಣ ಗುಡ್ಡೆಯನ್ನೆಲ್ಲಾ ಬಾಬಣ್ಣನ ಈ ನಡುರಾತ್ರಿಯ ಉರಲ್‌ ಆವರಿಸಿಕೊಂಡು ಬಿಡುತ್ತಿತ್ತು. ಅಲ್ಲಿಂದ ಆತ ಇನ್ನೂ ಎರಡು ಮೈಲಿ ಸಾಗಬೇಕಾಗಿತ್ತು. ಯಾರಧ್ದೋ ಮನೆಯ ಭತ್ತ, ಅಕ್ಕಿ, ತೆಂಗಿನಕಾಯಿ, ಬೈಹುಲ್ಲು, ಮುಳಿಹುಲ್ಲು ಇತ್ಯಾದಿ ವಸ್ತುಗಳನ್ನು ಬೈಲೂರು-ಕಾರ್ಕಳ-ಹಿರಿಯಡ್ಕ ಮುಂತಾದೆಡೆ ಕೊಟ್ಟು ಅವರಿಗೆ ಬೇಕಾದ ಪರಿಕರಗಳನ್ನು ಹಿಂದೆ ತರುವ ಕಾಯಕ. ನಡುರಾತ್ರಿಯಾದರೆ, ಗಾಡಿಯಲ್ಲಿ ಸೊತ್ತುಗಳಿರುತ್ತಿರಲಿಲ್ಲ. ಆದರೆ, ಬಾಬಣ್ಣನ ಪೂರ್ತಿ ಆ ದಿನದ ದುಡಿಮೆ ಒಳಸೇರಿರುತ್ತಿತ್ತು. ಆಗ ಅದ್ಭುತವಾದ ಉರಲ್‌ ಆ ಹಾದಿ ಪೂರ್ತಿ ಪ್ರತಿಧ್ವನಿಸುತ್ತಿತ್ತು: ಮರಗಿಡಬಳ್ಳಿ ಕಲ್ಲು ಮಣ್ಣು ಬಂಡೆ ಮತ್ತು ತಟ್ಟನೆ ಎಚ್ಚರವಾಗುತ್ತಿದ್ದ ನನ್ನ ಹೃದಯದಲ್ಲಿ..

ಬಾಬಣ್ಣನ ಎತ್ತಿನಗಾಡಿಯಲ್ಲಿ ಬಾಲ್ಯದಲ್ಲಿ ತುಂಬಾ ಸಲ ಕುಳಿತಿದ್ದೆ. ಎತ್ತುಗಳ ಮೂಗುದಾರ ಹಿಡಿಯುತ್ತಿದ್ದೆ. ಗಾಡಿ ಲಾಟಾನ್‌ ನೋಡುತ್ತಿದ್ದೆ. ಎತ್ತುಗಳ ಗೊರಸುಗಳಿಗೆ ಲಾಳ ಜೋಡಿಸುವುದನ್ನು ನೋಡಲಾಗದೆ ಓಡಿ ಹೋಗಿದ್ದೆ.
ಬಾಬಣ್ಣನ ಗಾಡಿ ಇಲ್ಲದ ನಮ್ಮೂರು ಸರಕು ಸಾಗಣೆ ವ್ಯವಸ್ಥೆಯನ್ನು ಊಹಿಸಲೂ ಸಾಧ್ಯವಿರಲಿಲ್ಲ. ಈಗ ಬಾಬಣ್ಣನೂ ಇಲ್ಲ; ಎತ್ತಿನ ಗಾಡಿಯೂ ಇಲ್ಲ. ಕೆಲವು ವರ್ಷಗಳ ಹಿಂದೆ ಸಿಕ್ಕಿದ ಒಂದು ಗಾಡಿಯನ್ನು ಖರೀದಿಸಿ ಹಳ್ಳಿಯ ಮನೆಯಲ್ಲಿ ಇರಿಸಿಕೊಂಡಿದ್ದೇನೆ. ಈ ಮೂಲಕ, ಬಾಲ್ಯದ ನೆನಪುಗಳನ್ನು ಆವಾಹಿಸಿಕೊಳ್ಳುತ್ತೇನೆ. ಈಗಲೂ ನಡುರಾತ್ರಿ ಮೌನವನ್ನು ಸೀಳುವ ದನಿ ಕೇಳಿಸಿದಂತಾಗುತ್ತದೆ-
ಆಯೇ.. ಕಾಳೇ.. ಆಯೇ.. ಬೊಳ್ಳೇ.. ಆಯೇ…..
 

‍ಲೇಖಕರು G

25 February, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading