ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಯಿ ಇಲ್ಲದ ಮನೆ..

ಮಮತಾ ಪಾಟೀಲ್

ಒಂದನೇ ಮಾರ್ಚ್ 2019 ರಂದು ನಮ್ಮ ಆಯಿ, ಅಮ್ಮಮ್ಮ ಅಂದರೆ ನಮ್ಮ ಅಮ್ಮನ ಅಮ್ಮ ನಮ್ಮನ್ನೆಲ್ಲಾ ಅಗಲಿದರು. ಎರಡು ತಿಂಗಳಿಂದ ಐಸಿಯೂನಲ್ಲಿದ್ದರು, ಹೀಗಾಗುತ್ತೇ ಅಂತ ಮೊದಲೇ ನಮಗೆಲ್ಲಾ ತಿಳಿದಿದ್ದರೂ, ಸುದ್ದಿ ತಿಳಿದ ನಂತರ ಸಿಡಿಲು ಬಡಿದಂಗಾಯಿತು. ಈಗ ಆ ಆಯಿಯಿಲ್ಲದ ಮನೆ, ಮನೆಯೇ ಅಲ್ಲ ಅನ್ನಿಸುತ್ತಿದೆ.

ನಮ್ಮ ಆಯಿ ಕಠಿಣ ಜೀವಿ, ಶಿಸ್ತಿನ ಸಿಪಾಯಿ, ಸ್ವಾಭಿಮಾನಿ, ತಾತನೂ ಅಷ್ಟೇ ಎಂದೂ ಯಾವುದಕ್ಕೂ ಯಾರ ಮುಂದೆಯೂ ಕೈ ಚಾಚಿದವರಲ್ಲ. ತುಂಬಾ ಶ್ರೀಮಂತರು, ಬೇಡಿ ಬಂದವರು ಅವರ ಮನೆಯಿಂದ ಎಂದೂ ಬರಿಗೈಯಿಂದ ಹೋದದ್ದನ್ನು ನಾ ಕಂಡಿಲ್ಲ.

ನಮ್ಮ ಆಯಿ ಸೋಮಾರಿಯಲ್ಲ, 80 ರ ವಯಸ್ಸಿನಲ್ಲೂ ಬತ್ತದ ಉತ್ಸಾಹ, ಅಸಹಾಯಕರಾಗಿ ಎಂದೂ ನಮಗಿದನ್ನು ಮಾಡಿಕೊಡಿ ಎಂದು ಕೇಳಿದವರಲ್ಲ, ಇದ್ದಕ್ಕಿದ್ದಂತೆ ಸಂಕ್ರಾಂತಿ ದಿನ ರಾತ್ರಿ ಬಿದ್ದುಬಿಟ್ಟರು, ಪೀಡ ಸಂಕ್ರಾಂತಿಯೋ ಏನೋ ಏಳಲೇ ಇಲ್ಲ. ಮನೆಯಲ್ಲಿ ತಾತ ಒಬ್ಬರೆ!  ಅಕ್ಕ ಪಕ್ಕದ ಮನೆಯವರೆಲ್ಲಾ ಸೇರಿ, ಪಕ್ಕದ ಪಟ್ಟಣದಲ್ಲಿರುವ ನಮ್ಮ ಅತ್ತೆ ಮಾಮನಿಗೆ ಕರೆ ಮಾಡಿ ತಿಳಿಸಿದ್ದಾರೆ. ರಾತ್ರೋ ರಾತ್ರಿ ಅವರು ಬಂದು ಆಯಿಯನ್ನು ಹೈದರಾಬಾದಿಗೆ ಕರೆತಂದಿದ್ದಾರೆ. ಇಲ್ಲಿ ನಮ್ಮ ದೊಡ್ಡ ಅತ್ತೆ ಮಾಮ ಇದ್ದಾರೆ.

ನಾನೆಂದೂ ಆಕೆಯನ್ನು ಐಸಿಯೂ ಬೆಡ್ ಮೇಲೆ ಆ ರೀತಿ ನೋಡುತ್ತೇನೆ ಎಂದು ಅಂದುಕೊಂಡಿರಲಿಲ್ಲ, ನೋಡಿದರೂಅದು ನನ್ನನ್ನು ಇಷ್ಟರ ಮಟ್ಟಿಗೆ ಕಾಡುತ್ತದೆ ಎಂದು ತಿಳಿದಿರಲಿಲ್ಲ. ಇಟ್ ಬ್ರೋಕ್ ಮಿ. ಸದಾ ರೇಷ್ಮೆ ಸೀರೆ, ಒಡವೆ, ಒಳ್ಳೆಯ ಬಾರ್ಡರ್ ಇರುವ ಕಾಟನ್ ಸೀರೆ ಉಡುತ್ತಿದ್ದ ಆಯಿ, ಆ ನೀಲಿ ಗೌನಿನಲ್ಲಿ, ನಿತ್ರಾಣವಿಲ್ಲದಂತೆ ಕಾಣುತ್ತಿದ್ದಳು.

ನಮ್ಮ ಆಯಿ ತಾತಾ, ನಮ್ಮ ಬಾಲ್ಯವನ್ನು ಹೆಚ್ಚು ಸುಂದರಗೊಳಿಸಿದವರು. ಹತ್ತನೆ ಕ್ಲಾಸ್ ಬರುವವರೆಗೂ ದಸರಾ ಮತ್ತು ಬೇಸಿಗೆ ರಜೆ ಬಂದರೆ ಸಾಕು ನಾನು ನಮ್ಮ ಅಕ್ಕ ಅಲ್ಲೇ ಠಿಕಾಣಿ ಹೂಡಿ ಬಿಡುತ್ತಿದ್ದವು. ನಮ್ಮ ಬಾಲ್ಯದ ಬಹುದೊಡ್ಡ ಭಾಗವನ್ನು ಅವರೇ ಆವರಿಸಿಕೊಂಡಿದ್ದಾರೆ.

ಆದರೆ, ನಾವು ದೊಡ್ಡವರಾಗುತ್ತಾ ಹೋಗುತ್ತಿದ್ದಂತೆ ಆಯಿ-ತಾತನ ಊರಿಗೆ ಹೋಗುವುದು ಕಡಿಮೆಯಾಗುತ್ತಾ ಹೋಯಿತು, ನಾವು ಓದಿನಲ್ಲಿ, ಕಾಲೇಜಿನಲ್ಲಿ, ಆಫೀಸಿನಲ್ಲಿ, ನಮ್ಮ ನಮ್ಮ ಬದುಕಿನಲ್ಲಿ ಬ್ಯಸಿಯಾಗುತ್ತಾ ಹೋದೆವು. ಸಮಯ ಕಳೆದಂತೆ ಭೇಟಿಯಾಗುವುದು, ಫೋನಿನಲ್ಲಿ ಮಾತನಾಡುವುದಷ್ಟೇ ಅಲ್ಲದೇ ಅವರ ಬಗ್ಗೆ ಯೋಚಿಸುವುದು ಕೂಡ ಕಡಿಮೆಯಾಗುತ್ತಾ ಬಂತು.

ನನ್ನ ಅಕ್ಕನ ಮದುವೆಯಾದ ನಂತರ ನಾನು ನನ್ನ ತಾತ ಆಯಿರನ್ನ ಭೇಟಿಯಾಗಿದ್ದು ನನ್ನ ತಂಗಿಯ ಮದುವೆಯಲ್ಲಿ. ಅಂದರೆ ಐದು ವರ್ಷಗಳನ್ನು ನಾನು ಆಯಿಯನ್ನು ನೋಡಿದ್ದು ಕೇವಲ ಎರಡು ಸಲ, ಎರಡನೇ ಸಲ ಐಸಿಯೂ ಬೆಡ್ ಮೇಲೆ, ಬ್ರೇನ್ ಸ್ಟ್ರೋಕ್ ಆಗಿ  ಆಯಿ, ನನ್ನನ್ನು ಗುರುತು ಹಿಡಿಯದ, ಮಾತನಾಡದ ಸ್ಥಿತಿಯಲ್ಲಿ ನಾನು ಆಕೆಯ ಎದುರಿನಲ್ಲಿದ್ದೆ. ಕಣ್ಣೀರು ನನಗೆ ಗೊತ್ತಿಲ್ಲದೆ ಹರಿದು ಹೋಗುತ್ತಿತ್ತು.

ಸಂಜೆ ಮನೆಗೆ ಬಂದು ತಾತನೊಂದಿಗೆ ಫೋನಿನಲ್ಲಿ ಮಾತನಾಡಿದೆ, ದುಃಖ ಇನ್ನೂ ಹೆಚ್ಚಾಯಿತು. ನಮ್ಮ ಆಯಿ ತಾತನದು ಬಾಲ್ಯ ವಿವಾಹ ಸುಮಾರು 70 ವರ್ಷಗಳಿಂದ ಜೊತೆಯಲ್ಲಿದ್ದಾರೆ, ಅವರಿಬ್ಬರೂ ಬಾಲ್ಯದ ಸ್ನೇಹಿತರು, ಸಂಗಾತಿಗಳು, ಎರಡು ದೇಹ ಒಂದು ಜೀವ. ಆಯಿ ಇಲ್ಲದೆ ತಾತ ಹೇಗಿರುತ್ತಾರೋ?

ನಾವು ಬಾಲ್ಯದಲ್ಲಿ ಆಡಿ ಬೆಳೆದ ಮನೆ ಅದು, ಆ ನೆನಪುಗಳಲ್ಲಿ ಆಯಿ ತಾತ ಸದಾ ಹಚ್ಚ ಹಸಿರಾಗಿದ್ದಾರೆ. ತುಂಬಾ ವರ್ಷಗಳಿಂದ ಅಲ್ಲಿಗೆ ಹೋಗಿಲ್ಲ, ಆಯಿ ಜೊತೆ ಹೆಚ್ಚು ಮಾತಾಡಿಲ್ಲ. ಹೀಗಾಗಿ ಅಲ್ಲಿ ಇನ್ನೂ ಆಯಿ ಇದ್ದಾಳೆ ಅನ್ನಿಸುತ್ತಿದೆ. ಆಕೆಯ ನಡೆ ನುಡಿ, ಅದ್ಭುತವಾದ ಕೈರುಚಿ, ಆಕೆಯ ಕಥೆಗಳು, ಸತ್ಯ ಘಟನೆಗಳು ನನ್ನ ಮನದಲ್ಲಿ ಹಾಗೇ ಇವೆ. ಆದರೆ ಆಯಿ ಇಲ್ಲದ ಆ ಮನೆಯನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

‍ಲೇಖಕರು Avadhi Admin

21 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading