'ಆಭರಣ ಇಲ್ಲದ ಸುಂದರಿಯ ಮುಂದೆ ರೂಪಕ ಅಹಂಕಾರ' – ಜೋಗಿ ಬರೀತಾರೆ

ಜೋಗಿ

ನಿತಾಂತ ಹಗಲಿನ ಕೊನೆಗೊಂದು ನಿಶೀಥ ಇರುಳು. ಅಲ್ಲಿ ಎವೆಯಿಕ್ಕದೆ ದಿಟ್ಟಿಸುತ್ತಿರುವ ಕುರುಡುಗಣ್ಣಿನ ಅನಾಥಪಕ್ಷಿ. ಅದು ನೀರವತೆಯನ್ನು ಕದಡುತ್ತಿರುವಂತೆ ಭಾಸವಾಗುತ್ತಿದೆ. ಮೈನವಿರೇಳಿಸುವ ಆ ಅನೂಹ್ಯ ಘಟನೆಗೆ ನಾನು ದಿಗ್ಭ್ರಾಂತನಾಗಿ ನಿಂತುಬಿಟ್ಟೆ. ಆಗಷ್ಟೇ ನೀಲಾಗಸದಲ್ಲಿ ಬಿದಿಗೆ ಚಂದ್ರಮ ಕಾಣಿಸಿಕೊಳ್ಳುತ್ತಿದ್ದ.
ಹೀಗೊಂದು ಸಾಲನ್ನು ಆಗಷ್ಟೇ ಪದವಿ ಮುಗಿಸಿದ ಹುಡುಗ ನನಗೆ ಓದಿ ಹೇಳಿದ. ಅವನಿಗೆ ಸರಾಗವಾಗಿ ಓದುವುದಕ್ಕೆ ಬರುತ್ತಿತ್ತು. ಮಾತಿನ ಲಯವೂ ಹೊಳೆಯುತ್ತಿತ್ತು. ಆದರೆ ಈ ಸಾಲುಗಳಲ್ಲಿರುವ ನಿತಾಂತ, ನಿಶೀಥ, ಎವೆಯಿಕ್ಕದೆ, ನೀರವತೆ, ಅನೂಹ್ಯ, ದಿಗ್ಭ್ರಾಂತ, ನೀಲಾಗಸ ಮುಂತಾದ ಪದಗಳು ಅವನಿಗೆ ಅರ್ಥವಾಗುವಂತಿರಲಿಲ್ಲ. ಇದನ್ನು ಮತ್ತಷ್ಟು ಸರಳವಾಗಿ ಹೇಳಲು ಯತ್ನಿಸಿದರೆ ಆ ಸಾಲು ಚಂದ ಕಳಕೊಂಡು ಬೋಳು ಬೋಳಾಗಿಬಿಡುವ ಸಾಧ್ಯತೆ ಇತ್ತು. ಸುಂದರವಾಗಿ ಹೇಳಲು ಹೋದರೆ ಅರ್ಥವೇ ಆಗದಿರುವ ಸಾಧ್ಯತೆಯಿತ್ತು. ಈ ಗೊಂದಲದಿಂದ ಹೊರಗೆ ಬರುವುದು ಹೇಗೆ ಎಂದು ಯೋಚಿಸುತ್ತಿದ್ದೆ.
ಭಾಷೆ ಸರಳವಾಗುತ್ತಾ ಹೋಗಬೇಕಾ? ಅಥವಾ ವಿದ್ಯಾರ್ಥಿಗಳು ಭಾಷೆಯನ್ನೇ ಚೆನ್ನಾಗಿ ಕಲಿಯುವಂತಾಗಬೇಕಾ? ಎರಡನೆಯದನ್ನು ನಾವು ನಿರೀಕ್ಷಿಸುವ ಹಾಗಿಲ್ಲ ಅನ್ನುವುದು ನನಗಂತೂ ಇತ್ತೀಚೆಗೆ ಅರಿವಿಗೆ ಬಂದಿದೆ. ಒಂದು ಭಾಷೆಯಲ್ಲಿರುವ ಸಮಾನಾರ್ಥಕ ಪದಗಳನ್ನೆಲ್ಲ ವಿದ್ಯಾರ್ಥಿಗಳು ಕಲಿಯಬೇಕು ಅಂತ ನಿರೀಕ್ಷಿಸುವುದು ತಪ್ಪು. ಆತ ಭಾಷೆಯಲ್ಲೇ ಕೆಲಸ ಮಾಡುವವನಾಗಿದ್ದರೆ ಅವೆಲ್ಲ ಬೇಕಾಗುತ್ತದೆ. ಕವಿಗೆ ಪದಸಂಪತ್ತು ಬೇಕು. ಶಬ್ದ ಭಂಡಾರ ಬೇಕು. ಅದು ಒಬ್ಬ ಇಂಜಿನಿಯರ್ಗೋ ಬಸ್ ಡ್ರೈವರಿಗೋ ಗುಮಾಸ್ತನಿಗೋ ಬೇಕಾಗಿಲ್ಲ. ಅವನಿಗೆ ಹೇಳಿದ್ದು ಅರ್ಥವಾದರೆ ಸಾಕು. ಅದನ್ನು ರೂಪಕವಾಗಿ ಹೇಳಿ ಆತನನ್ನು ಬೆಚ್ಚಿ ಬೀಳಿಸಬಲ್ಲೆ ಅಂತ ಕವಿ ನಿರೀಕ್ಷಿಸವುದೂ ತಪ್ಪು.
ಮೊನ್ನೆ ಎಚ್ ಎಸ್ ವೆಂಕಟೇಶಮೂರ್ತಿ ಅವರ ಕವಿತಾ ಸಂಕಲನವೊಂದನ್ನು ಓದುತ್ತಿದ್ದೆ. ಅವರು ವಾಚೋವಿಧೇಯ ಎಂಬ ತುಂಬ ಸುಂದರವಾದ ಪದವೊಂದನ್ನು ಬಳಸಿದ್ದರು. ಈ ಪದವನ್ನು ನಾನು ಆ ಮೊದಲು ಓದಿದ್ದು ಎಚ್ಚೆಸ್ಕೆ ಅವರ ಬರಹದಲ್ಲಿ. ಬಿಜಿಎಲ್ ಸ್ವಾಮಿ ಅವರ ಕುರಿತು ಬರೆಯುತ್ತಾ ಎಚ್ಚೆಸ್ಕೆ ಸಾಹಿತ್ಯ ವಾಚೋ ವಿಧೇಯ, ಬರೆವಣಿಗೆಯಲ್ಲಂತೂ ಅಪ್ರಮೇಯ. ಇದೊಂದು ಅಭೂತಪೂರ್ವ ರಸವತ್ ಗ್ರಂಥ. ಅಧಿಕೃತ ವ್ಯವಸ್ಥಿತ ಸಾಹಿತ್ಯ ಸೌರಭ ಎಂದು ಬರೆದಿದ್ದರು. ಆ ಕಾಲಕ್ಕೆ ಆ ಎಲ್ಲಾ ಪದಗಳನ್ನು ನಮಗೆ ತಿಳಿಸಿ ಹೇಳುವವರಿದ್ದರು. ಆದರೂ ಅವನ್ನೆಲ್ಲ ಒಟ್ಟಾರೆಯಾಗಿ ಓದಿದಾಗ ಅಧಿಕೃತ ವ್ಯವಸ್ಥಿತ ಸಾಹಿತ್ಯ ಸೌರಭ ಎಂಬುದು ಏನನ್ನು ಹೇಳುತ್ತದೆ ಅನ್ನುವುದು ಅರ್ಥವೇ ಆಗುತ್ತಿರಲಿಲ್ಲ. ಎಚ್ಚೆಸ್ಕೆಯವರು ತುಂಬ ಚುರುಕಾಗಿ, ಚುಟುಕಾಗಿ ಮತ್ತು ಅರ್ಥಗರ್ಭಿತವಾಗಿ ಬರೆಯುತ್ತಾರೆ ಎಂದು ನಮ್ಮನ್ನು ನಮ್ಮ ಹಿರಿಯರು ನಂಬಿಸಿದ್ದರು.
ಇವತ್ತು ಅದನ್ನೇ ಓದಲು ಕೊಟ್ಟರೆ ಹುಡುಗರು ಕಂಗಾಲಾಗುತ್ತಾರೆ. ಆ ಭಾಷೆ ಈಗ ಬಹುತೇಕ ಸತ್ತೇ ಹೋಗಿದೆ. ವಾಚೋ ವಿಧೇಯ. ಮಾತಿಗೆ ವಿಧೇಯವಾಗಿರುವಂಥದ್ದು ಯಾವುದು? ಅರ್ಥವೋ ಕಾವ್ಯವೋ ಭಾವವೋ ಪರಿಣಾಮವೋ ಎಂದು ಪ್ರಶ್ನಿಸಿಕೊಂಡು ಒಂದು ಶಬ್ದದ ಹಿಂದೆ ಬೀಳುವವರಿಗೆ ವಯಸ್ಸಾಗಿದೆ. ಒಂದು ಕಾಲದಲ್ಲಿ ಹೀಗೆ ಪದಗಳ ಪತ್ತೇದಾರಿಕೆ ಮಾಡುವುದು ಕೂಡ ರೋಚಕ ಸಂಗತಿಯಾಗಿತ್ತು. ಯಾವುದಾದರೊಂದು ಪದದ ಅರ್ಥ ಹೊಳೆಯದೇ ಹೋದರೆ ನಾವು ನಿಘಂಟಿನ ಬೆನ್ನು ಹತ್ತಿ, ಅದರ ಮೂಲ ಹುಡುಕುತ್ತಾ ಹೋಗುತ್ತಿದ್ದೆವು. ಪಾವೆಂ ಆಚಾರ್ಯ, ಜಿ ವೆಂಕಟಸುಬ್ಬಯ್ಯ, ಶಿವರಾಮ ಕಾರಂತ, ಕಿಟೆಲ್ ಏನೇನು ಹೇಳಿದ್ದಾರೆ ಅಂತ ಹುಡುಕುತ್ತಿದ್ದೆವು. ಹಾಗೆ ಪದವ್ಯಸನಕ್ಕೆ ಸಿಕ್ಕಿದವರು ಸಿಕ್ಕ ಸಿಕ್ಕವರ ಬಳಿ ಅರ್ಥ ಕೇಳುತ್ತಾ, ಅರ್ಥ ಹುಡುಕುತ್ತಾ, ಆ ಪದ ಯಾವ ಭಾಷೆಯಿಂದ ಬಂದದ್ದು ಎಂದು ತಿಳಿದುಕೊಳ್ಳಲು ಪೇಚಾಡುತ್ತಿದ್ದರು.
ಬರಹಗಾರರ ಕಷ್ಟ ನೋಡಿ. ನಿಘಂಟು, ಪದಕೋಶ, ಪದಾರ್ಥ ಚಿಂತಾಮಣಿ, ಶಬ್ದಕೋಶ, ಶಬ್ಧಾರ್ಥ ಕೋಶ, ಅರ್ಥಕೋಶ- ಹೀಗೆ ಒಂದೊಂದಕ್ಕೂ ಪರ್ಯಾಯ ಪದಗಳು ಲೇಖಕನಿಗೆ ಗೊತ್ತಿರಲೇಬೇಕು. ಹಾಗೆ ಗೊತ್ತಿಲ್ಲದೇ ಹೋದರೆ ಅವನ ಬರಹ ಬಡವಾಗುತ್ತಾ ಹೋಗುತ್ತದೆ. ಸೊರಗುತ್ತದೆ. ಇಷ್ಟೂ ಪದಗಳನ್ನು ಓದುವವನಿಗೂ ಆ ಪದಗಳು ಗೊತ್ತಿರಬೇಕಾಗುತ್ತದೆ. ಇಲ್ಲದೇ ಹೋದರೆ ಲೇಖಕ ಅಪ್ರಸ್ತುತನಾಗುತ್ತಾ ಹೋಗುತ್ತಾನೆ. ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುದಿ ತಾನಂತೆ… ಮುನ್ನೀರಂತೆ ವಿಶಾಲವಂತೆ… ಎಂಬ ಸಾಲುಗಳನ್ನು ಪಿಯೂಸಿ ಓದುತ್ತಿರುವ ವಿದ್ಯಾರ್ಥಿಗೆ ಕೇಳಿಸಿದರೆ ಆಕೆಗೆ ಏನೂ ಅರ್ಥವಾಗಲಿಲ್ಲ. ಅದನ್ನೆಲ್ಲ ಇಂಗ್ಲಿಷಿಗೆ ತರ್ಜುಮೆ ಮಾಡಿ ಹೇಳಿದಾಗ ಆ ಇಡೀ ಪದ್ಯ ಹೊಳೆಯಿತು.

-2-

ಈ ಸಂಧಿಕಾಲದ ಬಹುದೊಡ್ಡ ಸಮಸ್ಯೆಯೇ ಅದು. ಕನ್ನಡ ಕವಿತೆ, ಕಾದಂಬರಿ ಓದುವವನ ಸರಾಸರಿ ವಯಸ್ಸು ನಲವತ್ತಕ್ಕೆ ತಲುಪಿದೆ. ಮೂವತ್ತು ವರುಷಗಳ ಹಿಂದೆ ಅದು ಇಪ್ಪತ್ತಾಗಿತ್ತು. ನಾವೀಗ ಇಪ್ಪತ್ತು ವರ್ಷ ವಯಸ್ಕರಾಗಿದ್ದೇವೆ. ನಲವತ್ತು ದಾಟಿದವರ ಮುಂದೆ ಈ ಕಾಲದ ತಲ್ಲಣಗಳನ್ನು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಈ ಕಾಲದವರಿಗೆ ಈ ಕಾಲದ ಸಂದಿಗ್ಧಗಳನ್ನು ಹೇಳುವುದಕ್ಕೆ ನಮ್ಮಲ್ಲಿ ಭಾಷೆಯಿಲ್ಲ.
ಸರಳವಾಗಿ ಹೇಳುವುದನ್ನು ಕಲಿಯದ ಹೊರತು, ಸಾಹಿತ್ಯಕ್ಕೆ ಉಳಿಗಾಲ ಇಲ್ಲ ಎಂಬುದನ್ನು ವಿಮರ್ಶಕರು ಒಪ್ಪಲಿಕ್ಕಿಲ್ಲ. ಗಂಭೀರವಾಗಿ ಬರೆಯುವ ಲೇಖಕರೂ ಒಪ್ಪಲಿಕ್ಕಿಲ್ಲ. ಆದರೆ ಪತ್ರಕರ್ತನಾದವನು ಅದನ್ನು ಮರೆಯುವ ಹಾಗೇ ಇಲ್ಲ. ದಿನನಿತ್ಯ ಓದುಗರ ಜೊತೆ ಮಾತಾಡಬೇಕಾದ ಅನಿವಾರ್ಯ ಪತ್ರಕರ್ತನದು. ಈಚೀಚಿನ ಹುಡುಗರು ತುಂಬ ತೆಳುವಾಗಿ ಬರೆಯುತ್ತಾರೆ, ಮತ್ತೆ ಮತ್ತೆ ಹೇಳುತ್ತಾರೆ ಎಂದು ದೂರುವುದು ಸುಲಭ. ಆದರೆ ಗಂಭೀರವಾಗಿ ಬರೆಯುವವರು ಓದುಗರಿಂದ ದೂರವಾಗುತ್ತಿದ್ದಾರೆ ಅನ್ನುವುದು ಕೂಡ ಸತ್ಯ. ಅನೇಕ ಅಂಕಣಗಳು ಓದುಗರನ್ನು ಯಾವತ್ತೋ ಕಳಕೊಂಡಿವೆ. ಸಾಹಿತ್ಯದ ಕುರಿತ ಅಂಕಣಗಳನ್ನು ಎಷ್ಟು ಮಂದಿ ಓದುತ್ತಾರೆ ಎಂದು ಸಮೀಕ್ಷೆ ಮಾಡಿದಾಗ ತುಂಬ ನಿರಾಶಾದಾಯಕ ಉತ್ತರ ಸಿಕ್ಕಿ, ಅಂಥ ಅಂಕಣಗಳನ್ನು ಪ್ರೋತ್ಸಾಹಿಸುವ ಸಾಹಿತ್ಯ ಪ್ರಿಯ ಸಂಪಾದಕರೊಬ್ಬರು ಕಂಗಾಲಾಗಿದ್ದರು. ಸುಮಾರು ಹತ್ತು ವರುಷಗಳ ಹಿಂದೆ ಬೆಂಗಳೂರು, ಮೈಸೂರು, ಹಾಸನ, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯದ ಕುರಿತ ಲೇಖನಗಳನ್ನು ಓದುವವರು ಶೇಕಡಾ ಒಂದರಷ್ಟೂ ಇಲ್ಲ. ತುಂಬ ಜನಪ್ರಿಯವಾಗಿದೆ ಅಂದುಕೊಂಡಿದ್ದ ಆ ಸಂಪಾದಕರ ಲೇಖನವನ್ನು ಓದುತ್ತಿದ್ದವರು ಅವರ ಸಮೀಪವರ್ತಿಗಳೇ ಆಗಿದ್ದರು. ಅದೂ ಅವರನ್ನು ಮೆಚ್ಚಿಸಲು ಮಾತ್ರ ಓದುತ್ತಿದ್ದರು. ಈಗಲೂ ಪತ್ರಿಕೆಯೊಂದರಲ್ಲಿ ಬರುತ್ತಿರುವ ಹಿರಿಯ ಲೇಖಕರ ಕೃತಿಗಳ ಕುರಿತ ಲೇಖನಮಾಲೆಯನ್ನು ಯಾರಾದರೂ ಓದುತ್ತಾರೋ ಗೊತ್ತಿಲ್ಲ? ಅದನ್ನು ತಿಳಿದುಕೊಳ್ಳಲೆಂದು ನನಗೆ ಗೊತ್ತಿರುವ ಸಾಹಿತ್ಯಾಸಕ್ತ ಮಿತ್ರರನ್ನೆಲ್ಲ ಕೇಳುತ್ತಾ ಬಂದೆ. ಅವರೊಬ್ಬರೂ ಅದನ್ನು ಓದಿರಲಿಲ್ಲ ಮತ್ತು ಅದು ಪ್ರಕಟವಾಗುವುದೇ ಬಹುತೇಕರಿಗೆ ಗೊತ್ತಿರಲಿಲ್ಲ.
ಯಾರಿಗೆ ಯಾವುದು ತಲುಪುತ್ತದೆ ಮತ್ತು ಯಾಕೆ ತಲುಪುತ್ತದೆ ಅನ್ನುವುದು ಗೊತ್ತಿಲ್ಲದ ಸ್ಥಿತಿಯಲ್ಲಿ ನಾವಿದ್ದೇವೆ. ಇತ್ತೀಚೆಗೆ ಗೇರುಸೊಪ್ಪೆಯಲ್ಲಿ ಸಿಕ್ಕ ಹಿರಿಯ ಅಧ್ಯಾಪಕರೊಬ್ಬರು ಕುತೂಹಲಕರವಾದ ಸಂಗತಿಯೊಂದನ್ನು ಹೇಳಿದರು. ನಾವು ನಾಳೆಯ ಬರಹಗಾರರನ್ನು ತಯಾರು ಮಾಡುತ್ತಿದ್ದೇವೆಯೇ ಹೊರತು, ನಾಳೆಯ ಓದುಗರನ್ನಲ್ಲ. ನಮಗೀಗ ತುರ್ತಾಗಿ ಬೇಕಾಗಿರುವುದು ಬರಹಗಾರರಲ್ಲ, ಓದುಗರು. ಬರೆಯುವವರು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಆದರೆ ಓದುಗರು ಸಿಗುವುದು ಕಷ್ಟ. ಓದುಗರನ್ನು ಸೃಷ್ಟಿಸುವುದು ಇನ್ನೂ ಕಷ್ಟ. ಬರಹಗಾರ ದುಡ್ಡು, ಖ್ಯಾತಿ, ಹೇಳಿಕೊಳ್ಳಲೇ ಬೇಕಾದ ತಹತಹದಿಂದಾಗಿ ಬರೆಯುತ್ತಾನೆ. ಓದುಗನಿಗೆ ಅಂಥ ಯಾವ ಪ್ರಲೋಭನೆಗಳೂ ಇಲ್ಲ. ಅವನಿಗೆ ಮನರಂಜನೆಯೂ ಅದರಿಂದಲೇ ಸಿಗಬೇಕು ಅಂತೇನಿಲ್ಲ. ನಾನು ಭಾನುವಾರ ಎಲ್ಲಾ ಪತ್ರಿಕೆಗಳನ್ನೂ ತರಿಸುತ್ತಿದ್ದೆ. ಅವುಗಳಲ್ಲಿ ಬರುವ ವಾರದ ಕತೆಗಳನ್ನು ಓದುತ್ತಿದ್ದೆ. ವಾರಕ್ಕೆ ಐದು ಕತೆಗಳಂತೆ, ತಿಂಗಳಿಗೆ ಇಪ್ಪತ್ತು ಕತೆ ಓದುವುದೇ ಒಂದು ಖುಷಿಯಿತ್ತು. ತರಂಗದಲ್ಲಿ ಬರುತ್ತಿದ್ದ ಕಾದಂಬರಿಗಳನ್ನೆಲ್ಲ ಕತ್ತರಿಸಿ ಪುಸ್ತಕ ಮಾಡುತ್ತಿದ್ದೆ. ಅವನ್ನು ಬೈಂಡ್ ಮಾಡಿಸಿ ಇಟ್ಟುಕೊಳ್ಳುತ್ತಿದ್ದೆ. ಈಗ ಅವೆಲ್ಲ ನನಗೂ ಬೇಡ ಅನ್ನಿಸುತ್ತಿದೆ. ನನಗೆ ತುಂಬ ಗೊತ್ತಿರುವ ಯಾರಾದರೂ ಹಿರಿಯರ ಕತೆಯಿದ್ದರೆ ಓದುತ್ತೇನೆಯೇ ಹೊರತು, ಹೊಸಬರನ್ನು ಓದುವ ಸಾಹಸ ಮಾಡುವುದಿಲ್ಲ.
ಇಂಗ್ಲಿಷ್ ಭಾಷೆಗೂ ಇಂಥದ್ದೇ ದುರ್ದೆಸೆ ಬಂದಿತ್ತು. ಬಹುತೇಕ ಲೇಖಕರು ಇಂಟರ್ನ್ಯಾಷನಲ್ ಬೆಸ್ಟ್ ಸೆಲ್ಲರ್ಗಳಾಗಲು ಹೋಗಿ, ಸಾಹಿತ್ಯದ ರುಚಿಯನ್ನೇ ಕಳಕೊಳ್ಳುವಂತೆ ಮಾಡಿದರು. ಹೊಸದಾಗಿ ಇಂಗ್ಲಿಷ್ ಕಲಿತವರಿಗೆ ಓದುವುದಕ್ಕೆ ಪುಸ್ತಕಗಳೇ ಇಲ್ಲದಂತಾಗಿಬಿಡುವ ಹೊತ್ತಿಗೆ ಚೇತನ್, ಅಮೀಶ್ ತ್ರಿಪಾಠಿಯಂಥವರು ಬರೆಯಲು ಶುರುಮಾಡಿದರು. ಅವರು ಒಂದಷ್ಟು ಕಾಲ ಸರಳವಾದ ಭಾಷೆಯಲ್ಲಿ ತಮ್ಮ ಕಾಲದ ಸಂಗತಿಗಳ ಜೊತೆಗೇ, ನಿಗೂಢವಾದದ್ದನ್ನು ಹೇಳಿ ಬೆಚ್ಚಿಬೀಳಿಸಿದರು. ಹಾಗೆ ನೋಡಿದರೆ ನಮ್ಮಲ್ಲಿ ಒಂದು ಕಾಲದಲ್ಲಿ ಕೆಟಿ ಗಟ್ಟಿ ಹೇಳಿದ್ದನ್ನೇ ಇವತ್ತು ಚೇತನ್ ಭಗತ್ ಹೇಳುತ್ತಿದ್ದಾನೆ. ಮನು ಬರೆದಿದ್ದನ್ನೇ ಅಮೀಶ್ ಬರೆಯುತ್ತಿರುವುದು. ಆದರೆ ಭಾಷೆ ಬೇರೆಯಾಗಿದೆ.
ಹೊಸ ಭಾಷೆಯ ಆಕರ್ಷಣೆ ಅದು. ಅಕ್ಷರ ಅಭ್ಯಾಸವೇ ಕಷ್ಟಕರ ಆಗಿದ್ದ ಕಾಲದಲ್ಲಿ, ಕನ್ನಡ ಓದಲು ಕಲಿಯುವುದೇ ಒಂದು ಹೆಮ್ಮೆಯ ಸಂಗತಿಯಾಗಿತ್ತು. ನನಗೆ ಓದಲು ಬರೆಯಲು ಬರುತ್ತದೆ ಅಂತ ಹೇಳಿಕೊಳ್ಳುವುದೇ ರೋಮಾಂಚಗೊಳಿಸುತ್ತಿತ್ತು. ಈ ಆ ರೋಮಾಂಚ ಇಂಗ್ಲಿಷಿಗಿದೆ. ಕಾಸ್ಮೋಪಾಲಿಟನ್ ಜಗತ್ತು ಸರಳ ಸಾಮಾನ್ಯ ಭಾಷೆಯನ್ನೇ ಪ್ರೋತ್ಸಾಹಿಸುತ್ತಾ ಹೋಗುತ್ತದೆ. ಅದೇ ಕಾರಣಕ್ಕೆ ಎಲ್ಲರಿಗೂ ಚೇತನ್ ಭಗತ್ ಗೊತ್ತಿರುವ ಲೇಖಕ ಮತ್ತು ಓದಲೇಬೇಕಾದ ಲೇಖಕ ಆಗಿಬಿಡುತ್ತಾನೆ.
ಮತ್ತೆ ಭಾಷೆಯ ಸರಳತೆಯ ಮಾತಿಗೆ ಬಂದರೆ ಗೊಂದಲ ಶುರುವಾಗುತ್ತದೆ. ಯಕ್ಷಗಾನದ ಭಾಷೆ ಎಷ್ಟೋ ಹಿಂದಿದೆ. ಹಳೆಗನ್ನಡವಂತೂ ಅರ್ಥಮಾಡಿಕೊಳ್ಳಲಾರದಷ್ಟು ಹಿಂದಕ್ಕೆ ಹೋಗಿದೆ. ಅದು ಲ್ಯಾಟಿನ್ನಿನಂತೆ ಕೇಳಿಸುತ್ತಿದೆ. ಕನ್ನಡದಲ್ಲೂ ಸರಳವಾಗಿ ಬರೆಯಿರಿ ಅಂತ ಹೇಳುವವರು ಪದೇ ಪದೇ ಎದುರಾಗುತ್ತಾರೆ. ಸರಳವಾಗಿ ಬರೆದಾಗಲಾದರೂ ಓದುತ್ತಾರಾ ಅನ್ನುವುದು ಮತ್ತೊಂದು ಪ್ರಶ್ನೆ.
ಸರಳವಾಗಲು ಹೋಗಿ ಅಂದ ಕೆಡಿಸಿಕೊಳ್ಳಬೇಕಾ? ಅಂದವಾಗಲು ಹೋಗಿ ಸಂಕೀರ್ಣವಾಗಬೇಕಾ? ಈ ಪ್ರಶ್ನೆಯ ಜೊತೆಗೆ ಮತ್ತೊಂದು ಬಹುಮುಖ್ಯ ಪ್ರಶ್ನೆಯೂ ನಮ್ಮೆದುರಿಗೆ ಇದೆ: ವರ್ತಮಾನವನ್ನು ಹಿಡಿಯಬೇಕಿದ್ದರೆ ವರ್ತಮಾನದ ಜನಪದವನ್ನೇ ಹಿಡಿಯಬೇಕು. ಯೋಗರಾಜ ಭಟ್ಟರು ಹಾಡುಗಳಲ್ಲಿ ಹಿಡಿದಂತೆ. ಅವರು ಸರಳವಾಗಿಯೂ ಈಗಿನ ಹುಡುಗರಿಗೆ ಬೇಕಾದಂತೆಯೂ ಅದರಲ್ಲೊಂದು ತಾತ್ವಿಕತೆ ಇರುವಂತೆಯೂ ಬರೆಯಬಲ್ಲರು. ಒಂದು ನಾಲ್ಕುಸಾಲು ನೋಡಿ:
 
ಯಾಕಾರು ಸಿಗುತೀವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವಾ ಗಂಡಸ್ರಿಗೆ
ಹೆಂಗೋ ಇದ್ವಿ ನಾವು ತಕ್ಕಮಟ್ಟಿಗೆ
ಸುತ್ತಿಗೇಲಿ ಹೊಡಕೊಂಡ್ವಿ ಹೆಲ್ಮೆಟ್ಟಿಗೆ
 
ಇದರ ಪಕ್ಕದಲ್ಲೇ ಕಾಯ್ಕಿಣಿಯವರ ಅಪ್ಪಟ ಕಾವ್ಯವನ್ನಿಟ್ಟು ನೋಡಿ:
 
ಹರಿವ ನೀರಿನ ಎದೆಗು ಒಂದು ಹೂವು
ಬಿದ್ದು ತೇಲುವ ಎಲೆಗೆ ಹೂಕಂಪನ
ಜೇನು ತೊಟ್ಟಿಲ ಹನಿ ಅಘನಾಶಿನಿ
ಬಿದ್ದ ಹೂವಿನ ಒಳಗೆ ಸ್ತಬ್ಧತೀರ
 
ಅದಾ ಇದಾ? ಯಾವುದು ಶಾಶ್ವತ? ಯಾವುದು ಕ್ಷಣಿಕ? ಯಾವುದು ಮಾಯಕ? ಯಾವುದು ಮಾರ್ಮಿಕ?
ಕಷ್ಟ ಉಂಟು ಮಾರಾಯ್ರೇ ಬರೆಯೋನಿಗೆ!
 
 

‍ಲೇಖಕರು avadhi

August 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. vishwanath sunkasal

    ತುಂಬಾ ಇಷ್ಟವಾಯ್ತು ಬರಹ. ಹೌದು,ಈ ಉಭಯ ಸಂಕಟ ಎಲ್ಲ ಪ್ರೌಢ ಬರಹಗಾರರಿಗೂ ಎದುರಾಗುತ್ತದೆ. ಆದರೆ ನನ್ನ ಪ್ರಕಾರ ಒಬ್ಬ ಶ್ರೇಷ್ಟ ಬರಹಗಾರ ಸರಳವಾಗಿಯೂ, ಗಂಭೀರವಾಗಿಯೂ ಬರೆಯಬಲ್ಲ. ಉದಾಹರಣೆಗೆ ಕಾಯ್ಕಿಣಿಯವರ ಮುಂಗಾರು ಮಳೆಯ ಹಾಡನ್ನು ಎಲ್ಲ ಯುವ ಮಿತ್ರರೂ ಇಷ್ಟಪಟ್ಟರು. ಹಾಗೆಯೇ ಮ್ಹೇಲ್ಚ್ಚೆ ಉದ್ವಾಹ್ರರಿಸಿದಂಥ, ಅರ್ಥ ಮಾಡಿಕೊಳ್ಳಲು ಕಷ್ಟವಾಗುವ ಕಾವ್ಯವನ್ನೂ ಬರೆಯಬಲ್ಲರು. ಮುಖ್ಯವಾಗಿ ನಾವು ಯಾಕೆ ಮತ್ತು ಯಾರಿಗಾಗಿ ಬರೆಯುತ್ತೇವೆಂಬುದು ಮುಖ್ಯ. ಓದುಗರಿಗಾಗಿ ಮತ್ತು ಪ್ರಸಿದ್ಧಿಗಾಗಿ ಬರೆಯುತ್ತೀರೆಂದರೆ ಬೇಕಾದಹಾಗೆ ಬರೆಯಬಹುದು. ತನಗಾಗಿ ಮತ್ತು ತನ್ನ ಬರಹವನ್ನು ಜೀರ್ಣಿಸಿಕೊಳ್ಳಬಲ್ಲವರಿಗಾಗಿ ಬರೆಯುತ್ತೇನೆಂದಿದ್ದರೆ ಸ್ವಂತದ ಎಲ್ಲ ಸಾಮರ್ಥ್ಯಗಳನ್ನೂ ಒಟ್ಟುಗೂಡಿಸಿ ’ಗಟ್ಟಿ’ಬರಹವನ್ನು ಬರೆಯಬಹುದು.
    ಆದರೆ ಇಲ್ಲಿ ಸಮಸ್ಯೆ ಏನೆಂದರೆ, ಹೆಚ್ಚಿನ ಸಲ ನಾವು ಎರಡನ್ನೂ ಅಪೇಕ್ಷಿಸುತ್ತೇವೆ. ತಾನು ಬರೆದದ್ದು ಓದುಗರು ಮೆಚ್ಚಬೇಕು ಮತ್ತು ತಾನು ಮಾತ್ರ ತನಗೆ ಇಷ್ಟವಾಗುವಂತೆಯೇ ಬರೆಯುತ್ತೇನೆ ಎಂಬ ಚಿಕ್ಕ ಹಟ ಲೇಖಕನಿಗೆ ಇದ್ದೇ ಇರುತ್ತದೆ.ಇದು ಸ್ವಾಭಾವಿಕ. ಇಂಥ ಸಂದರ್ಭದಲ್ಲೇ ಗೊಂದಲಕ್ಕೊಳಗಾಗುವುದು.
    ಆದರೆ ಪತ್ರಕರ್ತರಿಗೆ ಇವೆರಡೂ ಅನಿವಾರ್ಯ. ಸರಳವಾಗಿರಬೇಕು ಎಂಬುದು ವ್ಯವಸ್ಥೆಯ ಅನಿವಾರ್ಯತೆ. ಅದನ್ನು ಸಾಹಿತ್ಯವಾಗಿಸಬೇಕೆಂಬುದು ಪತ್ರಕರ್ತ ಬರಹಗಾರನ ಅಪೇಕ್ಷೆ.
    ಭವಭೂತಿ (?) ಹೇಳಿದಂತೆ ”ಕಾಲವೂ ಅನಂತ, ಪೃಥಿವಿಯೂ ವಾಶಾಲವಾದದ್ದು. ಎಂದಾದರೊಮ್ಮೆ ನನ್ನ ಬರಹವನ್ನು ಅರ್ಥೈಸಿಕೊಳ್ಳುವ ಗಟ್ಟಿಗ ಬರಬಹುದು. ಅವನಿಗಾಗಿ ನಾನು ಬರೆಯುತ್ತೇನೆ’ ಎಂಬ ಹಠವಿದ್ದರೆ ಮಾತ್ರ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಬಹುದು ಅನಿಸುತ್ತದೆ

    ಪ್ರತಿಕ್ರಿಯೆ
    • Kiran

      ಭವಭೂತಿ (?) ಹೇಳಿದಂತೆ: It is indeed attributed to ಭವಭೂತಿ. May be, the Question mark was not required.

      ಪ್ರತಿಕ್ರಿಯೆ
  2. malini guruprasanna

    kavya odida kudale artha adare adaralli yaava hosatanavide? odida kudale artha aagabekagiruvudu Text book, padya alla. modala salugalannu modalu odidaga sphurisada artha dakkidaga siguva anandave bere. kavya vachyavaagabaaradu. odu yavattu udapheyalla, odigu ondu dignity ide.

    ಪ್ರತಿಕ್ರಿಯೆ
  3. Anil Talikoti

    ನಿಮ್ಮ ಶೀರ್ಷಿಕೆಯೆ ಹೇಳುವಂತೆ ಸುಂದರಿಯಾಗಿದ್ದರೆ ಆಭರಣದಗತ್ಯವಿಲ್ಲ-ಬಹುದೊಡ್ಡ ಸಮಸ್ಯೆಯೆಂದರೆ ಸೌಂದರ್ಯದ definition, ಕಾಲಕ್ಕೆ ತಕ್ಕಂತೆ ಬದಲಾಗುವ ಬಾಬತ್ತೆ ಇದು ಎಂಬುವದೂ ಪ್ರಶ್ನೆಯೆ. ನನಗೇನೋ ನಿಮ್ಮ ಉದಾಹರಣೆಯಲ್ಲಿ ಕಾಯ್ಕಿಣಿ ಬರಹ ಯೋಚನೆಗೆ ಹಚ್ಚಿ, ಅದರ ರುಚಿ ಹೆಚ್ಚಿಸುತ್ತದೆ. ಭಟ್ಟರ ಹಾಡು ಪಿಜ್ಜಾ ಆದರೆ ಕಾಯ್ಕಿಣಿ ಅವರದು ಮಸಾಲೆ ದೋಸೆ. ಬಾಯಿ ರುಚಿಗೆ ಆಗಾಗ ಪಿಜ್ಜಾ ತಿಂದರೂ ಹಪಹಪಿಸಿ ತಿನ್ನುವದು ದೋಸೆನೆ. ಪತ್ರಕರ್ತನು ಪರಕಾಯ ಪ್ರವೇಶಿಸಿ ದಿನನಿತ್ಯ ಓದುಗರಿಗೊಂದು, ಸಾಹಿತ್ಯಾಸಕ್ತರಿಗೆ ಇನ್ನೊಂದು ರೀತಿಯಲ್ಲಿ ಬರೆಯಲೇಬೇಕಾದ ಅನಿವಾರ್ಯ ಕಾಲವಿದು. ‘ಯಾರಿಗೆ ಯಾವುದು ತಲುಪುತ್ತದೆ ಮತ್ತು ಯಾಕೆ ತಲುಪುತ್ತದೆ ಅನ್ನುವುದು ಗೊತ್ತಿಲ್ಲದ ಸ್ಥಿತಿ’ – ಇದು ಸಧ್ಯಕ್ಕೆ ಎಲ್ಲಾ ರಂಗಗಳೂ ಎದುರಿಸುತ್ತಿರುವ ಸವಾಲು. ಓದುಗರನ್ನು ತುರ್ತಾಗಿ ಬೆಳೆಸುವ ಕಾರ್ಯವಂತೂ ಆಗಲೆ ಬೇಕಾಗಿದೆ. ಬರಹ ತುಂಬಾ ಇಷ್ತವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: