ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆನಂದ್ ಬೋವಿ ಬರೆದ ಸಣ್ಣ ಕಥೆ ’ಓಟ’

ಕಥೆ

ಆನಂದ್ ಬೋವಿ

ದೌಡ ದೌಡ ತುಂಬಿ ಚೆಲ್ಲ್,ಇನ್ನ ಅಲ್ಲಿ ತನಕ ತೋಡಬೆಕು ಬುಟ್ಟಿ ಎತಕೊಂಡು ಅತ್ಲಾಗ ಹೊಕ್ಕಿಯಲ್ಲ ಹಣಿಮ್ಯಾಲಿನ ಬೆವರ ಹನಿ ಮುಂಗೈಯಿಂದ ತಿಕ್ಕಿದ ಭರಮಪ್ಪ ಕರಿ ಮುಖದಾಗ ನೆಟ್ಟಗ ಹೊಳಿವ ಆ ಎರಡ ಕಣ್ಣು ಕಿಸಿದು ಯಲ್ಲವ್ವನ ಮ್ಯಾಲ ಸಿಟ್ಟಿಗೆ ಬಂದ.
ಮಾರಾಯ ನಿಂದ ಇದ ಆತ ಎರಡ ಬಗಸಿ ಮಣ್ಣ ಉಳಿದಿಲ್ಲ ಸಿಟಕ ಸಿಟಕ ಮಾಡತಿ ಮೊದ್ಲ ಉಳದ ಮಣ್ಣ ಕೆಬರಾಕ ನೋಡು ತಲಿಮ್ಯಾಗಿನ ಕಬ್ಬಿಣ ಬುಟ್ಟಿ ತೋಡಿದ ತೆಗ್ಗಿನ್ಯಾಗ ಎಸ್ದ ಯಲ್ಲವ ತನ್ನ ಹಿರ್ಯಾನ ಮೋತಿ ನೋಡಿ ದಗದಗ ಉರಿದ್ಳು. ಅಕಿ ಬುಟ್ಟಿ ಎಸದ ಆರ್ಬಟಕ್ಕೆ ಮ್ಯಾಲಕ್ಕ ಎದ್ದ ಧೂಳು ಆತನ ಕಣ್ಣಾಗ ಬಿದ್ರು ತೋರಿಸದ ಭರಮಪ್ಪ, ಅಕಿ ಜೋಡಿ ಗುದ್ದಾಡಿದರ ಆಗೊ ಕೆಲಸಕ್ಕು ಸಂಚಕಾರ ಅಂದಕೊಂಡು ಹಾರಿ ಮ್ಯಾಲಿನ ಹಿಡಿತ ಜೋರು ಮಾಡಿ ಗಟ್ಟಿ ಇದ್ದ ಮಣ್ಣಿನಲ್ಲಿ ಫಳ ಫಳ ಉದುರುವ ಕಲ್ಲುಗಳ ಮೂತಿ ನೋಡಿ ಗುದ್ದಿ ಗುದ್ದಿ ಕೆಡವ ತೊಡಗಿದ. ಸುಂಬಲ ಸೋರುಸುತ್ತ ಕಸಿ ಇಲ್ಲದ ಚಡ್ಡಿ ಒಂದ ಕೈಯಾಗ ಹಿಡಕೊಂಡು ಓಡಿ ಬಂದ ಮಗ ಚೆನ್ಯಾ ಅವನ ಹಿಂದಿಂದ ಓಡಿಬರುತ್ತ ಅಣ್ಣನ ಕೈಯಾನ ಚಾಕಲೆಟ ಕಸಗೊಳ್ಳಾಕ ಅಳುತ್ತಿದ್ದ ಮಗಳು ಲಕ್ಷ್ಮವ್ವನ ಸವಾರಿ ಇವರ ಕೆಲಸದ ಜಾಗಕ ಬಂದು ಗುದಮುರಗಿ ಚಾಲು ಮಾಡಿದಮ್ಯಾಲ ಕುಕ್ಕರಸಿ ಕುಂತ ಯಲ್ಲವ್ವ, ಮಗನ ಸುಂಬಳಾ ತನ್ನ ಸೀರಿ ಸೆರಗೀಲೆ ತಿಕ್ಕಿ ಅರ್ದ ಚಾಕಲೇಟ ಕಡಿದು ಮಗಳ ಬಾಯಾಗ ಹಾಕಿ ಲೊಚಕ್ನ ಆಕಿ ಮುಖಕ್ಕ ಮುತ್ತ ಕೊಟ್ಟು ಗಂಡನ ಮುಖ ನೋಡಿದಳು.
ಕಟಮಳ್ಳಿ ಖತ್ರಿ ಮೂರದಾರಿ ಮೂರ ದಿಕ್ಕ ದಿಕ್ಕಗಿ ಮುಖಮಾಡಿ ನಿಂತಮ್ಯಾಲ ಗದ್ದಲದೊಳಗಿನ ಗೂಡಾಗಿತ್ತು. ಕಟಮಳ್ಳಿ ಖತ್ರಿ ಖತ್ರಿ ಚೀರುತ್ತಾ ಬರುವ ರಿಕ್ಷಾ ಟೆಂಪೋ ಕ್ಲೀನರಗಳ ಅವಾಜು, ಖತ್ರಿ ತುಂಬ ತುಂಬಿದ ಹತ್ತಾರು ಅಂಗಡಿಗಳ ಜೋರಾದ ವ್ಯಾಪಾರ, ಸುತ್ತಲಿನ ಊರಿನ ಸಂತೆಗೆ ಬರುವ ಜನರ ನೂಕಾಟ, ಯಾವಾಗಲೂ ತೆರೆದೆ ಇರುವ ಬಾರಂಗಡಿಗಳ ಬಾಟಲಿಯ ಶಬ್ದ, ಮೂಲೆಯ ದಾಭಾದಲ್ಲಿ ಬೇಯುತ್ತಿದ್ದ ಕೋಳಿಯ ಮಸಾಲೆ ವಾಸನೆ, ಒಂದೆಸವನೆ ಓಡಾಡುವ ಗಾಡಿಗಳು ಎಬ್ಬಿಸುವ ಧೂಳು. ಇತ್ತಿತ್ಲಾಗ ಜನಯಾಕ ಹಿಂಗ ಮಾಡಾಕ ಹತ್ಯಾರ ಗೊತ್ತಿಲ್ಲ, ಯಾವೂರ ನೋಡಿದ್ರು ಜನಜಂಗುಳಿ ತುಂಬೇತಿ,ಅಂತಾದರಾಗ ಮೂರು ಊರಕಡೆ ಮೂತಿ ಮಾಡಿ ನಿಂತ ಕಟಮಳ್ಳಿ ಖತ್ರಿಒಳಗ ಜನ ತುಂಬಿದ್ರಾಗ ಆಶ್ಚರ್ಯವಿಲ್ಲ. ಹಿಂದಿನಕಾಲ ಆಗಿದ್ರ ಮೂರದಾರಿ ಸೇರೊ ಕಡೆ ಲಿಂಬೆಹಣ್ಣು,ಕುಂಕಮ ಭಂಡಾರ ಊದು ಎಲೆ ಅಡಿಕೆ ಹಾಕಿ ಒಂದ ನರಪಿಳ್ಳೆನು ಇತ್ತ ಸುಳಿದಂಗ ಮಾಡತಿದ್ರು. ಆದ್ರ ಈಗ ಈ ದಾರಿಗಳ ಕೂಡು ಜಾಗ ಸರ್ಕಲ್ ಆಗಿ ಸಾವಕಾಶ ಸಂತಿ ಮಾಡೋ ಮಾಕರ್ೆಟ ಆಗೇವು. ಇಂತ ಕಟಮಳ್ಳಿ ಖತ್ರಿ ಒಳಗ ನಮ್ಮನೆಲ್ಲ ದಿಟ್ಟಿಸಿ ನೋಡೊವಂಗ ಸೆಳೇವ ಶಕ್ತಿ ಯಾವುದು ಅಂದ್ರ ನಮ್ಮ ವೀರ ಮಹಿಳೆ ಕಿತ್ತೂರ ಚೆನ್ನಮ್ಮ, ಅಭಿಮಾನವೋ ಆತ್ಮೀಯತೆಯೋ ಮುಗಿಲ ಮುಟ್ಟೊವಂಗ ಕಂಚಿನ ಕಲ್ಲಾಗ ಹೊಳಿಯುತ್ತಾ ನಟ್ಟ ನಡಕ ಖತ್ರಿ ಒಳಗ ಯಾರಿಗೂ ಅಂಜದಂಗ ಚನ್ನಮ್ಮ ಕತ್ತಿ ಝಳಪಿಸುತ್ತ ಕುದುರಿಮ್ಯಾಲ ಕುಂತಾಳ.
ಆಂದ್ರದ ಕಂಪನಿಯೊಂದು ಕೇಬಲ್ ಎಳಿಯೊ ಕೆಲಸಕ್ಕ ಕನರ್ಾಟಕ ತುಂಬ ತೆಗ್ಗ ತೋಡಾಕ ಪ್ರಾರಂಬಿಸಿತ್ತು, ರಸ್ತೆ ಗುಂಟ ಎರಡ ಪೂಟ ತೆಗ್ಗಿನೊಳಗ ಕೇಬಲ್ ವೈರ್ ಜೋಡಸಾಕ ಬೆವರ ಹನಿ ಸುರಿಸಿ ತೆಗ್ಗ ತೋಡೊ ಕೆಲಸಕ್ಕ ಗುಡದರಿ ಊರಾಗಿನ ಜನ ಗುಳೆ ಎದ್ದು ಎದ್ಚಾ ತದ್ವಾ ಓಡಿ ಬಂದಿದ್ರು, ಮಳೆಬೀಳತಿದ್ರು ಬೆಳೆನೆ ಬಾರದ ಭೂಮಿ ತನ್ನ ತುಂಬ ಪ್ಲಾಟ್ ಗಳನ್ನ ತುಂಬಿ ಮನೆ ನಿಂತಮ್ಯಾಲ ಹೊಲದಾಗಿನ ಕೆಲಸಕ್ಕ ಬ್ಯಾಸರಾ ಮಾಡಕೊಂದು ಹಳ್ಳಿ ಜನ ಬಾಳದಿನಾ ಆಗೇತಿ, ಅದ ಗೌಡ, ಅದ ರೈತ,ಅದ ಮೂವತ್ತ ರೂಪಾಯಿ ಪಗಾರ,ಅದ ಅರ್ದ ಚೀಲ ಜ್ವಾಳಕ್ಕ ಕೂಲಿಜನ ಕರಗಿ ಹೋಗಿದ್ದ ಕಾಲ ತಾನತಾನಾಗಿ ಬದಲಾಗಿ ಮುನ್ನೂರು ನಾಲ್ಕನೂರು ರುಪಾಯಿಗಳಿಗೆ ಮನಸೋತು ಹೊಲದಾಗಿನ ರೆಂಟೆ ಕುಂಟೆ ಬಿಸಾಡಿ ಸಲಕೆ ಗುದ್ಲಿ ಉಸುಕು ಸಿಮೆಂಟ ಹಿಡದಮ್ಯಾಲ ಸಣ್ಣ ಪಗಾರದ ಮಾತ ದೂರಾಗಿ ಬ್ಯಾರೆ ಬ್ಯಾರೆ ಕೆಲಸಕ್ಕಂತ ಜನ ಊರ ಬಿಡುದ ಮಾಮೂಲಿ ಆಗೇತಿ. ಭರಮಪ್ಪ ಯಲ್ಲವ್ವ ತಮ್ಮ ಎರಡ ಎಳೆ ಕೂಸ ಕಟಕೊಂಡು ಊರಬಿಟ್ಟು ತಿಂಗಳಮ್ಯಾಲಾತು, ಹತ್ತು ಪೂಟ ಉದ್ದ ಕಾಲುವೆಯನ್ನ ಎರಡ ಪೂಟ ಆಳದಾಗ ತಗ್ಯಾಕ ಸಾವಿರ ರುಪಾಯಿದಂಗ ಹೊಂದಿಸಕೊಂಡು ಕೆಲಸಾ ಮಾಡಕೋತ ಹತ್ತ ಕಿಲೋ ಮೀಟರ ದೂರ ಬಂದಾರ ಕೆಲಸ ಇರೋ ಜಾಗದಾಗ ಟೆಂಟ ಹೊಡೆದ ಗಂಡ ಹೆಂಡತಿ ಬ್ಯಾಸರಕಿ ಬ್ಯಾಸರಕಿ ಅನದ ಮಣ್ಣ ತೋಡಿ ತೋಡಿ ದಾರಿಮಾಡಾಕತ್ತಾರು.
ಡಾಂಬರ ರಸ್ತೆ ಮಗ್ಗಲಕ ಗಟಾರದಂಗ ತೆಗ್ಗ ತೋಡಕೋತ ಬರಾಕತ್ತ ತಿಂಗಳಮ್ಯಾಲಾತು, ಬಿರುಸ ಜಾಗಾ ಬಂದಾಗ ಮಯ್ಯಾಗಿನ ಕಸುವು ಕರಗಿ ಜೀವ ಹೋದಂಗ ಆಗತಿತ್ತು,ಪಳ್ಳ ಜಾಗಾ ಬಂದಾಗ ಮಣ್ಣು ಧಳ ಧಳ ಉದುರಿ ಬರಿ ಮಣ್ಣ ತುಂಬಿ ಹೊರ ಹಾಕೊದು ಆಗತಿತ್ತು, ಗಟ್ಟಿ ನೆಲದಾಗ ಮುಂದ ಮುಂದ ಯಲ್ಲವ್ವಾ ನೀರ ಸುರಿವಿ ಹಸಿ ಮಾಡಿ ಗಂಡನ ಕೆಲಸ ಹಗರ ಮಾಡತಿದ್ಲು, ಬರೀ ಕೂಲಿ ಕೆಲಸಾ ಮಾಡೋ ಭರಮಪ್ಪನ ಕರಿ ಮೈ ಬಿಸಿಲು ಮಳೆ ಚಳಿಗೆಲ್ಲಾ ಅಳಕದೆ ಗಟ್ಟಿಯಾಗಿ ಬಾಳದಿವಸ ಆಗಿತ್ತು, ಮನ್ಯಾಗಿನ ಅತ್ತಿ ಮಗಳು ಯಲ್ಲವ್ವನ್ನ ಮದವಿ ಆದಮ್ಯಾಲ ಅವನ ಕಸುವು ಹತ್ತರಷ್ಟಾಗಿತ್ತು, ಆಕಿ ದುಡಿಯುವ ಹೆಣ್ಣಮಗಳು,ಗಂಡಮಾಡೊ ಕೆಲಸಕ್ಕ ಆಸರಾಗಿ ಬಂಡಿ ಎತ್ತಿನಾಂಗ ಅವನ ಜೋಡಿ ಜೋಡಾಗಿದ್ಲು, ಇವರಿಗೇನು ಆಕಾಶಕ್ಕ ಮುಚ್ಚಣಕಿ ಹಚ್ಚೊ ಆಸೆ ಇರಲಿಲ್ಲ, ವಾರಿ ಮ್ಯಾಲ ಇರೊ ಹೊಲಗಳು ತಮ್ಮ ವೈಭವ ಕಳಕೊಂಡು ಪ್ಯಾಟಿ ಜನ ಮನಿಕಟ್ಟು ಜಾಗಾ ಆಗಿ ಶ್ರೀಮಂತರ ಪಾರ್ಮ ಆಗಿ ಬದಲಾವಣೆ ಹೊಂದಿದಮ್ಯಾಗ ಹಳ್ಳಿ ಊರಾಗ ಕೆಲಸ ಸಿಗದ ಗೋವಾ ಮಹಾರಾಷ್ಟ್ರದ ಕಡೆ ಅಡ್ಯಾಡಿ ಇತ್ತಿತ್ತಲಾಗ ಸಿಮಿಂಟ್ ಕಲಸೊ ಕೆಲಸಕ್ಕ ಹತ್ತಿದ್ರು, ನೆಲೆ ಇಲ್ಲದ ಜೀವನ ಆಗಿದ್ರಿಂದ ಇಬ್ಬರೂ ಇದ್ದ ಬಿದ್ದ ಕೆಲಸಾ ಮಾಡಕೋತ ತಮ್ಮ ಬದುಕಿನ ಒಡಲಿಗೆ ಬೆಳಕ ಹೊತ್ತಿಸತಿದ್ರು, ಕೆಲಸಾ ಮಾಡೋ ಜಾಗದ ಸಮೀಪ ನೀರ ಇರೊ ಜಾಗ ನೋಡಿ ಟೆಂಟ ಹಾಕಿ ಓಡಾಡಿ ಕಟ್ಟಿಗೆ ಕುಳ್ಳು ಆರಿಸಿ ಅಲ್ಲೇ ಸಿಗೋ ಮೂರು ಕಲ್ಲು ಸಂದಿಯೊಳಗ ಬೆಂಕಿ ಹಚ್ಚಿ ಅಕ್ಕಿ ಬೇಸಿ ಮಕ್ಕಳಿಗೆ ತುತ್ತು ಮಾಡಿ ತಿನ್ನಿಸುವುದು ಯಲ್ಲವ್ವನ ಕಾಯಕ ಆದ್ರ, ಬ್ಯಾಸರ ಆಗೇತ ನನಗ ಅನ್ನುತ್ತಿದ್ದ ಭರಮಪ್ಪ,ಯಲ್ಲವ್ವನ ಅಪ್ಪನ್ನ ಅವ್ವನ್ನ ಬಯಕೊಂತ ಮಲಗತಿದ್ದ,

ಭೋಲೊ ಭಾರತ ಮಾತಾಕಿ ಜೈ,ಕಿತ್ತೂರ ಚನ್ನಮ್ಮಾಜಿ ಕೀ ಜೈ,ನೂರಾರು ಮಂದಿ ಸರ್ಕಲ್ ತುಂಬ ಘೋಷಣೆ ಕೂಗಾಕ ಪ್ರಾರಂಬಿಸಿದ್ರು ಸುತ್ತಲಿನ ಜನ ಕೂಡಿದ ಮಂದಿ ಜೊತೆ ಜೈ ಅನ್ನಾಕ ಶುರು ಮಾಡಿದ್ರು ಮೂರುದಾರಿ ಡಾಂಬರಕ್ಕ ಗುದ್ದಿ ರಸ್ತೆ ಮ್ಯಾಲ ಅಡ್ಡಾಡುವರೆಲ್ಲಾ ಇವರ ಪರ್ಮಿಶನ್ ತಗೊಂಡ ಮುಂದಹೋಗಬೇಕು ಅನ್ನೊ ದಾಟಿಯೊಳಗ ಕೆಲಸಾಮಾಡುತ್ತಿದ್ದ ಭರಮಪ್ಪ ಯಲ್ಲವ್ವ ಕೆಲಸಾ ಬಿಟ್ಟು ಕಳವಳದಿಂದ ಅವರನ ನೋಡಾಕ ಪ್ರಾರಂಬಿಸಿದರು. ಅವರು ಜೋರಾಗಿ ಕಿರಿಚಿದಾಗಲೊಮ್ಮೆ ಜನಾ ಚಪ್ಪಾಳೆ ತಟ್ಟತಿದ್ರು ಒಬ್ಬರನ ಬಿಟ್ಟು ಒಬ್ರು ಬಾಷಣ ಪ್ರಾರಂಬಿಸಿದ್ರು ನಮ್ಮ ಜನಕ್ಕ ಅನ್ಯಾಯ ಆಗೇತಿ ನಮ್ಮ ಭಾಷೆ ಸಾಯಾಕ ಹತ್ತೇತಿ ನಮ್ಮ ಸರ್ಕಾರ ಭಂಡ ಸಕರ್ಾರ ನ್ಯಾಯಕ್ಕಾಗಿ ನಾವು ಸತ್ತರು ಚಿಂತೆಯಿಲ್ಲ ನಮ್ಮ ಹೋರಾಟ ನಿಲ್ಲಿಸೋದಿಲ್ಲ ಅವರ ದ್ವನಿ ಜೋರಾಗಿ ಗದ್ದಲದಲ್ಲಿ ಮಾಯವಾಗತಿತ್ತು.
ಚನ್ನಮ್ಮನ ಮೂರ್ತಿಗೆ ಮಾಲಿ ಹಾಕಲಾಕ ದೊಡ್ಡದೊಂದು ನಿಚ್ಚಣಕಿ ತಂದು ಕುದರಿಗೆ ಹಚ್ಚಿ ನಿಲ್ಲಿಸಿದರು,ನಾ ಮಾಲಿ ಹಾಕತೆನಿ ನಾ ಹಾಕತೇನಿ ನಿಚ್ಚಣಿಕಿ ಹತ್ತಲಾಕ ಎಳದಾಡಿ ಕೂಗಾಕ ಶುರು ಮಾಡಿದರು ನಮ್ಮ ಹೋರಾಟಕ್ಕ ಚನ್ನಮ್ಮನಂಗ ಕಸುವು ಬರ್ಲಿ ನಾವು ನುಗ್ಗತಿವಿ ಬರಬರುತ್ತ ಮಂದಿ ಹಿಂಡು ಬಾಳಾತು ಹಗರಕ ಖತ್ರಿಯೊಳಗಿನ ಅಂಗಡಿ ಮಂದಿ ಶೆಟರ್ ಜೆಗ್ಗಿ ಕೀಲಿ ಬಡಿಯತೊಡಗಿದರು.ಅದವ್ಯಾಳ್ಯಾಕ ಸೊಂಯ್ ಸೊಮಯ್ ಹಾರ್ನ ಮಾಡಕೋತ ಪೋಲಿಸ ವ್ಯಾನ ಜಮಾ ಆತು.
ಯಲ್ಲವ್ವನ ಮುಖ ನೋಡಿದ ಭರಮಪ್ಪ ನಿಟ್ಟುಸಿರೆಳೆದ,ಅಲ್ಲೆ ಆಟಾ ಆಡತಿದ್ದ ತನ್ನ ಯಾಡ ಮಕ್ಕಳ್ನ ಓಡಿ ಹೊಗಿ ಎತಕೊಂಡ ಬಂದು ಯಲ್ಲವ್ವ ಶೆರಗಿನೊಳಗ ಮುಚಕೊಂಡಳು,ಕೈಯಾಗಿನ ಹಾರಿ ಸಲಕಿ ಅಲ್ಲೆ ಬಿಟ್ಟ ಎದ್ದ ಭರಮಪ್ಪ ಬಾ ಅಲ್ಲೆ ಯಾದರ ಅಂಗಡಿಯಾಗ ಸೇರಕೊಳ್ಳೊನು ಯಲ್ಲವ್ವನ ಕೈ ಹಿಡಿದು ಗೂಡ ಅಂಗಡಿ ಸಂದಿಯೊಳಗ ಸೇರಿಕೊಂಡು ಚೀರಾಡತಿದ್ದ ಮಂದಿ ದಿಟ್ಟಿಸತೊಡಗಿದ.
ಪೋಲಿಸ ಸಾಹೆಬನೊಬ್ಬ ಗಲಾಟೆ ಮಾಡಬೇಡಿ,ಶಾಂತಿ ಕಾಪಾಡಿ ನಿಮ್ಮ ಮೆರವಣಿಗೆ ಶಾಂತಿಯಿಂದ ಇರಲಿ,ಬರುತ್ತಲೇ ಇದ್ದ ನೂರಾರು ಮಂದಿ ಗುಂಪಿನೊಳಗೆ ಅನ್ಯಾಯ ಅನ್ಯಾಯ ದಿಕ್ಕಾರ ದಿಕ್ಕಾರ ಈ ಶಬ್ದ ಬಿಟ್ಟರ ಮತ್ತೇನು ಕೇಳಸ್ತಿರಲಿಲ್ಲ, ಅದ ವ್ಯಾಳೆಕ್ಕ ಸವದತ್ತಿಯಿಂದ ಬಂದ ಬಸ್ಸು ಕಟಮಳ್ಳಿ ಖತ್ರಿಯೊಳಗ ಹಾರ್ನ ಮಾಡಿತು.ನಿಚ್ಚಣಿಕಿ ಏರಿ ಮೂತರ್ಿಗೆ ಮಾಲಿ ಹಾಕಾಕ ಜಗ್ಗಾಡತಿದ್ದ ಜನ ತಾಮುಂದು ನೀ ಮುಂದು ಓಡುತ್ತ ಬಸ್ಸಿನಮ್ಯಾಲ ಮುಕ್ರಿ ಬಿದ್ದರು,ಬಸ್ಸಿಗೆ ಅಡ್ಡಲಾಗಿ ಕುಳಿತು ಕೇಕೆ ಹಾಕ ತೊಡಗಿದರು ಬಸ್ಸಿನೊಳಗ ಕುಳಿತ ಮಂದಿ ಹಣೆ ಹಣೆ ಚೆಚ್ಚಕೊಂಡು ಬಸ್ಸಿನಿಂದ ಇಳಿದು ಬೇರೆ ದಿಕ್ಕಿಗೆ ಮುಖಮಾಡಿ ನಿಂತರು, ಒಂದರಹಿಂದ ಒಂದು ಹಿಂಗ ಸಣ್ಣ ಗಾಡಿ ದೊಡ್ಡ ಗಾಡಿ ಆಕಡೆ ಈ ಕಡೆಯಿಂದ ಬಂದು ಖತ್ರಿಯಲ್ಲಿ ಜಮಾಆಗಿ ಹೋಗಿಬರೋ ದಾರಿಯಲ್ಲ ಬಂದಾತು,ನಿಂತಗಾಡಿಯಲ್ಲ ಹಿಂದುಕ್ಕು ಹೋಗದ ಮುಂದುಕ್ಕು ಹೋಗದ ಒಂದುಕ್ಕೊಂದು ತಿಕ್ಯಾಡಕೊತ ಹೊಗಿ ಬಿಟಕೊತ ತಿಣಿಕ್ಯಾಡತೊಡಗಿದವು,ಇನ್ನ ಸುಮ್ನ ಇದ್ರ ಮೈಮ್ಯಾಲ ಬರತೈತಿ ವಿಚಾರ ಮಾಡಿದ ಪೋಲಿಸರು ಕೂಡಿದ ಮಂದಿಯೊಳಗ ಲೀಡರನ ಹುಡುಕತೊಡಗಿದರು.
ನೊಡ್ರಿ ನೀವು ಚನ್ನಮ್ಮನ ಮೂರ್ತಿ ಕೆಳಗ ಕೂತು ಹೊರಾಟ ಮಾಡ್ರಿ ರಸ್ತೆ ಕುಲ್ಲಾ ಮಾಡಿ ಗಾಡಿಗೆಲ್ಲಾ ದಾರಿ ಮಾಡಿ ಕೊಡ್ರಿ ಪೋಲಿಸನೊಬ್ಬ ಕೆಮ್ಮಿದ ದಿಕ್ಕಾರ ದಿಕ್ಕಾರ ಬಂಡ ಸಕರ್ಾರಕ್ಕೆ ದಿಕ್ಕಾರ ಯಾವ ಮಾತು ಅವರ ಕಿವಿಗೆ ಬೀಳಲಿಲ್ಲ,
ಲಾಠಿ ಹಿಡಿದು ಪೋಲಿಸರು ಬೀಸತೊಡಗಿದರು. ರಸ್ತೆಯ ದಿಕ್ಕಿಗೆಲ್ಲ ದಿಕ್ಕಾರ ದಿಕ್ಕುಪಾಲಾಗಿ ಅಪ್ಪಳಿಸತೊಡಗಿತು ಅಲ್ಲೊಂದು ಇಲ್ಲೊಂದು ತೂರಿ ಬಂದ ಕಲ್ಲುಗಳು ಚನ್ನಮ್ಮನ ಕುದುರಿಯ ಬಾಲಕ್ಕೆ ಬಡಿದು ಕೆಳಗೆ ಬಿದ್ದವು,ಖತ್ರಿಯತುಂಬ ಒಂದ ಅರ್ದತಾಸಿನಲ್ಲಿ ಚಪ್ಪಲಿಗಳ ರಾಸಿ ಬಿಟ್ಟರೆ ಮತ್ತೇನು ಇರಲಿಲ್ಲ. ಗದ್ದಲ ನಿರಾಳವಾಯಿತು ಓಡೊಡಿ ದಿಕ್ಕುಪಾಲಾದ ಜನ ಒಬ್ಬಬ್ಬರೆ ಕರಗಿ ಹೋದರು ತಾಸಗಟ್ಟಲೆ ಸಾಲು ಹಚ್ಚಿ ನಿಂತಿದ್ದ ಗಾಡಿಗಳೆಲ್ಲ ಸಂದಿಗೋಂದಿಗಳಲ್ಲಿ ಗುದ್ದಾಡಿ ಹಾರ್ನ ಮಾಡಿ ದಾರಿ ಸಿಕ್ಕ ಕಡೆ ಸರಿದಾಡಿ ಹೋದವು ದಿನವೆಲ್ಲಾ ಹರತಾಳದಿಂದ ಕದಡಿ ಹೋಗಿದ್ದ ಜಾಗೆ ನಿರಾಳತೆಯಿಂದ ಸ್ಥಬ್ದವಾಯಿತು ನೆತ್ತಿಯ ಮ್ಯಾಲಿನ ಸೂರ್ಯ ನಿದ್ರೆಗೆ ಜಾರಿ ಹೋದಮೆಲೆ ತಲೆಯ ಮ್ಯಾಲಿನ ಟವೆಲ ಬಿಚ್ಚಿದ ಭರಮಪ್ಪ ತನ್ನ ಹಾರೆ ಸಲಾಕೆ ಹುಡುಕಲು ಕೆಬರಿದ್ದ ತಗ್ಗಿನ ಕಡೆ ಹೆಜ್ಜೆ ಹಾಕಿದ.
ನಾಲ್ಕು ದಿವಸಕ್ಕಂತ ಹೊಡೆದಿದ್ದ ಡೇರೆಯಿಂದ ಇಣುಕಿಹಾಕಿದ ಯಲ್ಲವ್ವ ಇಷ್ಟ ಮಂದಿ ಒಮ್ಮಿಂದೊಮ್ಮೆಲೆ ಎಲ್ಲಿಗೆ ಹೊದ್ರು,ತಲೆ ಕೆಬರಿಕೊಂಡಳು ಅಲ್ಲೆ ಬಿದ್ದು ನಿದ್ದೆ ಹೋಗಿದ್ದ ಮಕ್ಕಳಿಗೆ ಸೀರೆಯೊಂದನ್ನು ತೆಗೆದು ಮುಖದ ತುಂಬ ಮುಚ್ಚಿ ಹಾರಾಡಿ ಕಚ್ಚುತಿದ್ದ ಸೊಳ್ಳೆಯನ್ನೆಲ್ಲ ತನ್ನ ಸೆರಗಿನಿಂದ ಬೀಸಿ ಅವುಗಳ ಗೊಂಯ್ ಗೊಂಯ್ ಶಬ್ದ ಎದುರಿಸಲಾಗದೆ ಗಂಡನ್ನ ಕೂಗುತ್ತ ಹೊರಗೆ ಬಂದಳು.
ಸರ್ಕಲ್ಲಿನ ತುಂಬೆಲ್ಲ ಚಲ್ಲಾಪಿಲ್ಲಿಯಾಗಿದ್ದ ಚಪ್ಪಲಿಗಳ ಮೆಲೆ ಸಾವಕಾಶ ಹೆಜ್ಜೆ ಹಾಕುತ್ತ ಮೂತರ್ಿಯ ಕೆಳಗೆ ಬಂದು ನಿಂತಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹೋವಿನ ತುಂಡುಗಳು ದಿಟ್ಟಿಸಿ ನೋಡುತಿದ್ದ ಮೂರ್ತಿಯ ಕಣ್ಣುಗಳು ಅವಳನ್ನೆ ಕರೆಯುವ ಭಾಸವಾಯಿತು. ಕುದುರೆಯ ಬೆನ್ನಿಗೆ ಆನಿಸಿಟ್ಟಿದ್ದ ನಿಚ್ಚಣಿಕೆಯನ್ನ ಅಲುಗಾಡಿಸಿ ಗಟ್ಟಿಯಾಗಿದ್ದನ್ನ ಖಾತ್ರಿಮಾಡಿಕೊಂಡು ಕುದುರಿಯ ಕಾಲುಗಳನ್ನು ಮುಟ್ಟಿದಳು ಕುದುರೆ ಹೂಂಕರಿಸಿ ಬಾಲ ಅಲ್ಲಾಡಿಸಿ ಇವಳನ್ನು ಆಸೆಗಣ್ಣಿನಿಂದ ನೋಡಿದಂತೆ ಆಯಿತು. ಸುತ್ತಮುತ್ತಲು ಕಣ್ಣಾಡಿಸಿದಳು ಖತ್ರಿಯ ತುಂಬ ಸುಡಗಾಡದ ನಿಶಬ್ದತೆ ತುಂಬಿ ತುಳುಕುತಿತ್ತು ಯಲ್ಲವ್ವನ ನರನಾಡಿಗಳಲ್ಲಿ ಶಕ್ತಿ ತುಂಬಿ ಬಂತು ನಿಚ್ಚಣಿಕೆಯ ಹಲ್ಲುಗಳ ಮೆಲೆ ಒಂದೊಂದೆ ಹೆಜ್ಜೆ ಇಡುತ್ತ ಹಿಮಾಲಯದ ತುತ್ತ ತುದಿಗೆ ಹೋದಷ್ಟು ಖುಸಿ ಪಡುತ್ತ ಕುದುರೆಯ ಬೆನ್ನು ತಟ್ಟಿ ಕೈಯಾಡಿಸಿದಳು. ಊರಿನ ಬೀದಿದೀಪಗಳೆಲ್ಲ ಮಿಂಚಿನಂತೆ ಕಾಣುತ್ತಿದ್ದವು ರಾತ್ರಿಯ ನಿರಾಳತೆಯಲ್ಲಿ ಒಂಟಿಸವಾರಿ ಮಾಡುವ ಸೈನಿಕನಂತೆ ಕತ್ತಲಿನ ಕಾಮರ್ೊಡಕ್ಕೆ ಬೆಳದಿಂಗಳಿನ ಚಿತ್ರ ಬರೆದಂತೆ ಯಲ್ಲವ್ವನ ಸ್ಪರ್ಶದಿಂದ ಕುದುರೆ ರೋಮಾಂಚನಗೊಂಡಿತು, ಅವಳ ಎದೆ ಉಬ್ಬಿ ಬಂದಿತು ರಣೋತ್ಸಾಹದಲ್ಲಿ ಮೈಮೇಲಿನ ರೋಮಗಳೆಲ್ಲ ನಿಮಿರಿ ನಿಂತವು ಕುದುರೆಯ ಮುಖವಾಡಕ್ಕೆ ಬಿಗಿದಿದ್ದ ಹಗ್ಗದ ಎಳೆಗಳನ್ನೆಲ್ಲ ಗಟ್ಟಿಯಾಗಿ ಜಗ್ಗಿ ಹಾರಗುದುರೆ ಏರುವ ದೀರನಂತೆ ಯಲ್ಲವ್ವ ಕಟಮಳ್ಳಿ ಖತ್ರಿಯೊಳಗಿನ ಕರಿ ಕಲ್ಲ ಕುದುರೆ ಮ್ಯಾಲೆ ಏರಿ ಕುಳಿತಳು.
ಕುದುರೆಯ ಕಾಲುಗಳಲ್ಲಿ ವಿದ್ಯುತ್ ಸಂಚಾರವಾಯಿತು ನೂರಾರು ವರ್ಷಗಳಿಂದ ಹೆಜ್ಜೆ ಕೀಳದೆ ಗೂಟಕ್ಕೆ ಕಟ್ಟಿದರೀತಿ ನೆಟ್ಟಿದ್ದ ಪಾದದ ಉಗುರುಗಳಲ್ಲಿ ರಕ್ತ ಹರಿಯತೊಡಗಿತು ಚೆಂಡು ಅಲ್ಲಾಡಿಸಿದ ರಬಸಕ್ಕೆ ನೆಲವೆಲ್ಲ ಅಧುರಿತು ಬೆಚ್ಚಿದ ಯಲ್ಲವ್ವ ಕುದುರೆಯನ್ನು ಗಟ್ಟಿಯಾಗಿ ತಬ್ಬಿಕೊಂಡಳು ಅದು ಕುದುರೆಗೆ ಸೂಚನೆ ಕೊಟ್ಟಂತೆ ಅನಿಸಿತು,ನಿಂತು ನಿಂತಲ್ಲಿ ಜಿಡ್ಡು ಜಿಡ್ಡಾದ ತನ್ನ ಮೈಯನ್ನೆಲ್ಲಾ ಒಟ್ಟುಗೂಡಿಸಿ ಒಮ್ಮೆಲೆ ಕುದುರೆ ಹಾರಿತು,ನೋಡು ನೋಡತಿದ್ದಂತೆ ಝೆಂಕರಿಸುತ್ತಾ ಶರವೇಗದಲ್ಲಿ ಓಡತೊಡಗಿತು ಭೂಮಿಯ ಧೂಳೆಲ್ಲ ಆಕಾಶದೆತ್ತರ ಹಾರತೊಡಗಿತು ಗಟ್ಟಿ ಹೆಜ್ಜೆಯ ಹೊಡೆತಕ್ಕೆ ನೆಲವೆಲ್ಲ ಅದುರತೊಡಗಿತು ನಿಂತ ನೀರೆಲ್ಲ ಕಟ್ಟೆ ಒಡೆದು ಹರಿಯ ತೊಡಗಿದವು ಕತ್ತಲೆ ಮೌನವನೆಲ್ಲ ಸೀಳಿ ವಿಶ್ರಾಂತಿ ಇಲ್ಲದೆ ಬಿಕ್ಕತೊಡಗಿತು,ಯಲ್ಲವ್ವ ಹಂತ ಹಂತವಾಗಿ ಕುದುರೆಯನ್ನು ಪಳಗಿಸಿದಳು ನುರಿತ ಸವಾರನಂತೆ ಅದರ ಹಗ್ಗ ಹಿಡಿದು ಝಳಪಿಸಿದಳು ಅದರ ವೇಗದಲ್ಲಿ ಹೆಚ್ಚು ಕಡಿಮೆ ಮಾಡಿ ನಸು ನಕ್ಕಳು ಬೆಟ್ಟ ಹಳ್ಳ ಗುಡ್ಡ ಕೊಳ್ಳ ಕಣೆವೆ ನಧಿ ಸಮುದ್ರ ದಾಟಿ ಓಡುತ್ತಿದ್ದ್ ಕುದುರೆ ಓಡುತ್ತಲೇ ಇತ್ತು ಹಳ್ಳಿ ನಗರ ಮನೆ ಮಠ ಮಂದಿ ಮಸೀದಿ ಗಂಡಸರು ಹೆಂಗಸರು ಮಕ್ಕಳು ಯಾರು ಅಡ್ಡ ಬಂದರೂ ಅಂಜದೆ ನುಗ್ಗುತ್ತಲೇ ಇತ್ತು.
ಓಡಿತು ಓಡಿತು ಎಲ್ಲವನ್ನು ದಿಕ್ಕರಿಸಿ ಇದ್ದ ನೆರಳು ಬಿಸಿಲು ಹಸಿವು ಆಯಾಸಗಳಿಗೆಲ್ಲ ಬೆದರದೆ ತನ್ನ ಕಾಲಿನ ಎಲಬುಗಳು ಸವೆಯುವಷ್ಟು ಓಡಿತು,ಇನ್ನು ಸಾದ್ಯವೇ ಇಲ್ಲ ಎನ್ನುವಾಗ ಸುಮ್ಮನೆ ನಿಂತಿತು,ಕುದುರೆಯೊಂದಿಗೆ ಆಯಾಸಕ್ಕೆ ಒಳಗಾಗಿದ್ದ ಯಲ್ಲವ್ವ ಚಂಗನೆ ಜಿಗಿದಳು ಬಸವಳಿದ ದೇಹಕ್ಕೆ ವಿಶ್ರಾಂತಿ ಬೇಕೆಂದು ಸಮೀಪದ ಮನೆಯೋಳಗೆ ಹೊಕ್ಕು ಮೆತ್ತನೆಯ ಗಾದಿಯ ಮೇಲೆ ಉರುಳಿದಳು.
ತಣ್ಣನೆಯ ತಂಗಾಳಿ ಕಿಡಕಿಯೊಳಗೆ ಸುಯ್ಯನೇ ಸೂಸ ತೊಡಗಿತು ಆಕೆಯ ಆಯಾಸದ ಕಣ್ಣಿನೊಳಗೆ ತಣ್ಣನೆಯ ಬಾವ,ಆಕಡೆ ಈ ಕಡೆ ಹೊರಳಾಡಿ ಹುಡುಕಾಡಿದಳು ಮನುಷ್ಯ ಪ್ರಾಣಿಯ ಸುಳಿವೇ ಇಲ್ಲ, ನೀರಡಿಕೆಯಿಂದ ಬಾಯಿ ಒಣಗತೊಡಗಿತು ಮನೆಯತುಂಬ ಸುತ್ತಾಡಿ ಹುಡುಕತೊಡಗಿದಳು,ಗೋಡೆಯತುಂಬ ತುಂಬಿದ ಬಟನ್ಗಳನ್ನೆಲ್ಲ ತಡಕಾಡಿ ಒತ್ತಿದಳು ಮನೆಯತುಂಬ ಬೆಳ್ಳನೆಯ ಬೆಳಕು ನಲ್ಲಿಯ ತುಂಬ ಸರ ಸರನೆ ನೀರು ಓಡಿ ಕೈಯೊಡ್ಡಿ ನೀರನ್ನೆಲ್ಲಾ ಗುಟಗರಿಸಿ ಕುಡಿದಳು,ವಿಶಾಲವಾದ ಟೇಬಲ ಮೇಲೆ ಹಣ್ಣು ಹಂಪಲ ಹುಳಿ ಕಾರದ ಮೃಷ್ಟಾನ್ನ ಫಲಗಳು ಕೈಗೆ ಸಿಕ್ಕಷ್ಟು ಬಾಯಿಗೆ ತುರುಕಿದಳು ನಿರಾಳವಾಗಿ ಮನೆತುಂಬ ಹೆಜ್ಜೆ ಇಟ್ಟಳು ಕಾಲಿಟ್ಟರೆ ಹೊಳೆಯುವ ಟೈಲ್ಸಗಳು,ಬಟನ್ ಒತ್ತಿದರೆ ಬೀಳುವ ನೀರು,ಕುದಿಯುವ ಅನ್ನ ಕುಣಿಯುವ ಟೀವಿ,ಮೆತ್ತನೆಯ ಹಾಸಿಗೆ ಗೋಡೆಯತುಂಬ ಬಣ್ಣದ ಚಿತ್ತಾರ ಯಲ್ಲವ್ವ ತನ್ನ ಗುಡಿಸಲನ್ನು ನೆನೆಸಿಕೊಂಡು ಕಣ್ಣು ಮಿಟುಕಿಸಿದಳು.ಕತ್ತಲು ಬೆಳದಿಂಗಳು ಬಿಸಿಲು ಎಲ್ಲವನ್ನ ಚಿಟ್ಟೆಯಂತೆ ಹಾರಾಡಿ ಕೂಗಾಡಿ ಅರಮನೆಯ ತುಂಬ ಚೀರಿ ಚೀರಿ ಸಂಬ್ರಮಿಸಿದಳು, ಆಕೆಯ ರಟ್ಟೆಯಲ್ಲಿ ರಕ್ತ ಕಡಿಮೆಯಾಯಿತು ಹಾರಿಯೊಂದಿಗೆ ಗುದ್ದಾಡಿದ ಒರಟು ಕೈಗಳು ನಿಮಿರಿ ನಿಂತವು ಅಲ್ಲಿ ಇಲ್ಲಿ ಕೋಣೆಯ ತುಂಬ ಕೆಲಸಕ್ಕಾಗಿ ಹುಡುಕಾಡಿದಳು,ಇಲ್ಲವೇ ಇಲ್ಲ ಆಕೆಗೆ ಇಲ್ಲಿ ಕೆಲಸವೇ ಇಲ್ಲ, ಎಲ್ಲವೂ ಮಾಯಾ ಲೋಕ ಯಂತ್ರಗಳ ಕರಾಮತ್ತು ಯಲ್ಲವ್ವನ ಕಣ್ಣಲ್ಲಿ ನಿಟ್ಟುಸಿರು ದುಡಿದ ಜೀವಕ್ಕೆ ದುಡಿತದ ಹಂಬಲ ಬೆವರು ಮೈಯಿಂದ ಹೊರಹಾಕುವ ತವಕ ಆಕೆಯ ಕನಸು ನುಚ್ಚುನೂರಾಗಿ ಕಣ್ಣುಗಳಲ್ಲಿ ನಿರಾಸೆ ತುಂಬಿತು.
ಧಳ ಧಳ ಮಳೆ ಸುರಿಯತೊಡಗಿತು ಲೇ ಯಲ್ಲಿ ಕುದುರಿ ಏರಿ ಏನ ಕಡ್ಯಾಕತ್ತಿ,ದೌಡ ದೌಡನ ಇಳೀ,ಯಾರದ್ರು ನೋಡಿದ್ರ ಕಾಲಮರ್ಗಿ ತಗೋಂಡು ಹೊಡಿತಾರ ನಿನ್ನ ನಿದ್ದಿ ಮಬ್ಬಿಗೆ ಆ ಕಲ್ಲಿನ ಕುದುರಿನು ಸಾಕಾಗಲಿಲ್ಲ ಭರಮಪ್ಪ ಸಿಟ್ಟಿನಿಂದ ನೀರು ಗೊಜ್ಜುತಿದ್ದ ಕನಸಿನ ಲೋಕದಿಂದ ವಾಸ್ತವಕ್ಕೆ ಬಂದ ಯಲ್ಲವ್ವ ತಡಿ ಮಾರಾಯ ನಿದ್ದಿ ಬಂದದ್ದ ಗೊತ್ತಗಲಿಲ್ಲ ಅನಕೊತ ಕುದುರೆಮ್ಯಾಲಿಂದ ಒಮ್ಮೆಲೆ ಚಂಗನೆ ಜಿಗಿದಳು. ರಾತ್ರಿಯಲ್ಲ ತನ್ನ ಕನಸಿನ ಕರಾಮತ್ತಿನೊಳಗೆ ಭರಮಪ್ಪನ ಸಾರಾಯಿಯ ಗಬ್ಬು ವಾಸನೆಯನ್ನು ಆಶ್ವಾದಿಸುತ್ತ ಆತನ ಎದೆಯ ಮೇಲಿನ ಕೂದಲನ್ನು ಕೈಯಾಡಿಸುತ್ತ ಮಲಗಿದಳು.
ಮುಂಜಾನೆಯ ಸೂರ್ಯ ಹುಟ್ಟುವ ಮುಂಚೆಯೇ ಕಟಮಳ್ಳಿಯ ಖತ್ರಿ ತುಂಬ ಜೆ ಸಿ ಬಿ ಗಾಡಿಯ ಕಿರುಚಾಟ ರಸ್ತೆಯನ್ನೆಲ್ಲ ಕುಕ್ಕುತ್ತಿತ್ತು, ಗಡಬಡಿಸಿ ಎದ್ದ ಭರಮಪ್ಪ ಆಗಲೆ ಹಾಜರಾಗಿದ್ದ ಮೇಸ್ತ್ರಿಯ ಮುಖನೋಡಿ ಆಕಾಶದ ಕಡೆ ನೋಡತೊಡಗಿದ ಜೆ ಸಿ ಬಿ ಮುಂದಿನ ಹಲ್ಲು ಭರಮಪ್ಪ ತೋಡಿದ ತೆಗ್ಗನ್ನು ಸವರತೊಡಗಿತು,
ರೀ ಸಾಹೇಬ್ರ ಗಾಡಿ ಯಾಕ ಬಂದೈತಿ
ಭರಮಪ್ಪ ನೋಡು ನಮಗ ಕೆಲಸದ ಒತ್ತಡ ಬಾಳ ಐತಿ,ದವುಡ ಕೆಲಸಾ ಮಾಡಬೇಕಂತಾ ಮ್ಯಾಗಿನ ಸಾಹೆಬ್ರು ಬೈಯಾಕ ಹತ್ಯಾರ ನಿನ್ನ ಇಷ್ಟ ದಿವಸದ ಪಗಾರ ಇಸಕೊಂಡು ಹೋಗು, ಉಳಿದ ಕೆಲಸಾ ಜೆ ಸಿ ಬಿ ಯಿಂದ ಮಾಡಸ್ತೆವಿ ಮೇಸ್ತ್ರಿಯ ದ್ವನಿ ಜೋರಾಗಿತ್ತು.
ಗುಡಿಸಲಿನಿಂದ ಹೊರಗೆ ಬಂದ ಯಲ್ಲವ್ವ ಇವರ ಮಾತು ಕೇಳುತ್ತಾ ಸಣ್ಣ ಮುಖಮಾಡಿ ಖತ್ರಿಯೊಳಗಿನ ಕದುರೆಯನ್ನು ದಿಟ್ಟಿಸತೊಡಗಿದಳು.
 

‍ಲೇಖಕರು G

8 January, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading