
ಗೊರುರು ಶಿವೇಶ್
1996 ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾಸನದಲ್ಲಿ ನಡೆದಿತ್ತು. ಕವಿಗೋಷ್ಠಿಯ ಜೊತೆಗೆ ಮೊದಲ ಬಾರಿಗೆ ಆ ಸಂದರ್ಭದಲ್ಲಿ ಹನಿಗವನಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಆ ಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಚುಟುಕುಕವಿ ದುಂಡಿರಾಜರವರು ವಹಿಸಿದ್ದರು.
ದುಂಡಿರಾಜರ ಕವಿತೆಗಳನ್ನು ಹೆಚ್ಚಾಗಿ ಓದಿ ಹನಿಗವಿತೆಗಳೆಂದರೆ ಹೀಗೆ ಎಂಬ ಕಲ್ಪನೆ ನನ್ನಲ್ಲಿ ಒಡಮೂಡಿಸಿತ್ತು. ಪ್ರಾಸ, ಪದಗಳ ಸೀಳುವಿಕೆ, ಇಂಗ್ಲೀಷ್ ಪದಗಳನ್ನು ಸೀಳಿ ಅದರಲ್ಲಿನ ವಿವಿಧಾರ್ಥಗಳನ್ನು ಪಂಚ್ಗಳ ಮೂಲಕ ಆಸ್ವಾದಿಸಿ ಕವಿತೆಯ ಕೊನೆಗೆ ಮಂದಹಾಸವನ್ನು ಮೂಡಿಸುತ್ತಿದ್ದವು.
ಅವರ ಅನೇಕ ಕವಿತೆಗಳನ್ನು ಓದಿ ಅವರ ಅಭಿಮಾನಿಯಾಗಿದ್ದೆ (ಈಗಲೂ ಕೂಡ). ಅದೇ ಕವಿಗೋಷ್ಠಿಯಲ್ಲಿ ಒಬ್ಬರು ಮೈಕ್ನೆದುರು ನಿಂತು ತಮ್ಮ ಕಂಚಿನಕಂಠದಿಂದ ಕವಿತೆಯನ್ನು ವಾಚಿಸಲಾರಂಭಿಸಿದರು. ಅವರು ವಾಚಿಸಿದ ಆ ಕವಿತೆಗಳು ಈಗಲೂ ನೆನಪಿನಾಳದಲ್ಲಿ ಉಳಿದಿವೆ.
ಹತ್ತಾರು ವರುಷ
ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ
ನೂರು ವರುಷ
ಆಳಿದ ಅರಸ
ಹೆಣವಾಗಿ ಉಳಿಯಲಿಲ್ಲ
ಮೂರು ದಿವಸ.
‘ಬಾಳಿಕೆ’ ಎಂಬ ಶೀರ್ಷಿಕೆಯೊಡನೆ ಆ ಕವಿತೆ ವಾಚಿಸಿದಾಗ ವಿಭಿನ್ನವಾಗಿದ್ದ ಕವಿತೆಯಡೆಗೆ ಮನ ಸೆಳೆಯಲ್ಪಟ್ಟಿತ್ತು. ನಂತರ ಅವರು ವಾಚಿಸಿದ್ದು ‘ಅಂತರ’ ಎನ್ನುವ ಇನ್ನೊಂದು ಕವಿತೆ

ಏರಿದರೆ
ಮಂಚ, ಗದ್ದುಗೆ, ಸಿಂಹಾಸನ
ಹೆಚ್ಚೆಂದರೆ
ಎರಡು ಮೂರಡಿ ಮೇಲೆ
ಜಾರಿದರೆ
ಗೋರಿ, ಸಮಾಧಿ, ಬೃಂದಾವನ
ಹೆಚ್ಚೆಂದರೆ
ಎರಡು ಮೂರಡಿ ಕೆಳಗೆ
ವಿನೋದ, ವಿಷಾದದ ನಡುವಿನ ಅಂತರ ಅದೆಷ್ಟು ತೆಳುವಾಗಿದೆ ? ಕವಿತೆ ಎಷ್ಟು ಚೆನ್ನಾಗಿ, ಸರಳವಾಗಿ ಬಿಂಬಿಸಿದೆ ಎಂದು ಅಂದುಕೊಳ್ಳುವಷ್ಟರಲ್ಲಿ ಅವರು ಸಿಡಿಸಿದ ಮೂರನೇ ಕವಿತೆ ‘ವಿಯೋಗ ’ ಎಂಬುದಾಗಿತ್ತು.
ಬತ್ತಿಯಾದ ಹತ್ತಿ
ನೊಂದುಕೊಳ್ಳುತ್ತೆ
ತನ್ನ ಒಡಲೊಳಗೆ
ಬೆಚ್ಚಗೆ ಅಡಗಿದ್ದ
ಬೀಜವೆ ಎಣ್ಣೆಯಾಗಿ
ತನ್ನನ್ನೇ ಸುಡುತ್ತಿದೆಯೆಂದು
ಹನಿಗವಿತೆಯಲ್ಲಿ ಆಧ್ಯಾತ್ಮದ ಎಳೆಯನ್ನು ಕವಿ ತಂದ ಪರಿಯನ್ನು ಕಂಡು ಬೆರಗಾಗಿದ್ದೆ. ಅವರು ವಾಚಿಸಿದ ಕೊನೆಯ ಕವಿತೆ ‘ಕಣ್ಮರೆ’ ಕ್ಷಣ ಎದೆ ನಡುಗಿಸುವುದರ ಜೊತೆಗೆ ಮನವನ್ನಾವರಿಸಿತು.
ಹಲ್ಲಿ
ಹೆಕ್ಕಿ ಹೆಕ್ಕಿ
ನುಂಗುತ್ತಿತ್ತು ಇರುವೆಗಳ
ಮತ್ತೆ
ಸತ್ತ ಹಲ್ಲಿಯ
ಹೊತ್ತು ಸಾಗಿತ್ತು
ಇರುವೆಗಳ ಮೆರವಣಿಗೆ
ದೇಹವೆಲ್ಲ ಬಗೆದು
ಹುಡುಕುತ್ತಿದ್ದವು ಇರುವೆಗಳು
ಕಾಣಲಿಲ್ಲ ಕೊನೆಗೂ
ಒಳ ಹೊಕ್ಕ ಒಡನಾಡಿಗಳು
ಹನಿಗವಿತೆಗಳೆಂದರೆ ತಮಾಷೆಯ ಪದ್ಯಗಳೆಂದೆ ಎಣಿಸಿದ್ದ ನನ್ನ ಕಲ್ಪನೆಯನ್ನು ದೂರಮಾಡಿದ ಈ ಕವಿ ಜರಗನಹಳ್ಳಿ ಶಿವಶಂಕರ್. ಹನಿಗವಿತೆಗಳನ್ನು ಹೀಗೂ ಬರೆಯಬಹುದೆಂಬ ಕಲ್ಪನೆ ಮೂಡಿಸಿದ ಈ ಕವಿ ಇದೇ ರೀತಿಯ ಅನೇಕ ಕವಿತೆಗಳನ್ನು ಬರೆದಿದ್ದಾರೆ.
ಆಕಾಶ
ಮನಬಂದಂತೆ
ಸುರಿಸಿ ಮಳೆ
ನಿರ್ಮಲವಾಗಿಬಿಡುತ್ತೆ
ಆ ನೀರನ್ನೆಲ್ಲ
ಕಡಲಿಗೆ ಸೇರಿಸುವ
ಅದೆಷ್ಟು ಜವಾಬ್ದಾರಿ
ಆ ನೆಲಕ್ಕೆ
‘ಜವಾಬುದಾರಿ’ಎಂಬ ಹನಿಗವಿತೆ ಕೇವಲ ಭೂಮಿ ಆಕಾಶದ ಕಥೆಯನ್ನಷ್ಟೆ ಅಲ್ಲದೆ ಪ್ರಕೃತಿ, ಪುರುಷನ ರೂಪಕವೂ ಆಗಿದೆ. ‘ಯಾರು ಇದ್ದರೆ ಏನು ನನ್ನ ತಾಯವ್ವನೋಲೂರು’ ಎಂಬ ಜನಪದಗೀತೆಯನ್ನು ನೆನಪಿಸುವ ‘ನಿಯಮ’ ಹನಿಗವನ ಹೀಗಿದೆ.
ತಾವರೆಗೆ
ತುಂಬಿ ತುಳುಕುವ ಕೆರೆ
ಸುತ್ತು ಮುತ್ತುವ ತೆರೆ
ಆದರೆ
ಆಳ ತಳದ ಬೇರು
ನೀಡಬೇಕು ನೀರು.
ಆತ್ಮದ ಹುಡುಕಾಟದ ‘ಆದ್ಯಾತ್ಮ’ದ ಪ್ರಶ್ನೆಗೆ ಕವಿಯ ಉತ್ತರ ಹೀಗಿದೆ.

ದೇಹ
ಬೀಗುತ್ತಾ ಹೇಳಿತು
ಹೇ. . . ದವಸಧಾನ್ಯ
ಕಾಳು ಕಡ್ಡಿ
ನೀವು ನನಗೆ ಆಹಾರ
ದವಸಧಾನ್ಯವೂ
ವಿನಯದಿಂದ ಹೇಳಿತು
ಹೇ ದೇಹ
ನಮ್ಮ ಬೇರುಗಳು
ಮೆಲ್ಲಲು ಮುಂದೆ
ನೀನೆ ನಮಗೆ
ರುಚಿ ರುಚಿ ಗೊಬ್ಬರ
ಲೋಕದ ಬೆರಗು ಕಾವ್ಯದ ಬೆಡಗು ಎರಡನ್ನೂ ಒಳಗೊಂಡ ಶುಭಾಂಗಿ, ಜೊತೆಯಾದವರು, ಬುಗ್ಗೆ, ಭಾವ ಬದುಕು, ನೆನಪಿನ ನೆಂಟರು ಮುಂತಾಗಿ 14ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಜರಗನಹಳ್ಳಿ ಶಿವಶಂಕರ್ ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾಗಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವುದರ ಜೊತೆಗೆ 2004 2008ರ ಅವಧಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ನುಡಿ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರು ತಮ್ಮ 72ನೇ ವಯಸ್ಸಿನಲ್ಲಿ (ಜನನ 08- 09 – 1949) ನಮ್ಮನ್ನಗಲಿದ್ದಾರೆ. ಹನಿಗವಿತೆಗೊಂದು ಹೊಸ ಹಾದಿ ತೆರೆದ ಕವಿಗೊಂದು ನಮನ.






1 Comment