ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆತ್ಮಹೊಕ್ಕಿ ಅಲೆದಾಡುವ ‘ಅಂತರಂಗ!

ದಿನೇಶ್ ಕುಕ್ಕುಜಡ್ಕ
ಈ ಬಾರಿಯ ನೀನಾಸಂ ಮರುತಿರುಗಾಟದ ನಾಟಕ ‘ಅಂತರಂಗ’ ರಾಜ್ಯದ ಆಯ್ದ ಕಡೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಫ್ರೆಂಚ್ ನಾಟಕಕಾರ ಮಾರಿಸ್ ಮೆಟರ್‌ಲಿಂಕ್‌ನ ‘ಇಂಟೀರಿಯರ್’ ನಾಟಕವನ್ನು ‘ಅಂತರಂಗ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಒದಗಿಸಿಕೊಟ್ಟವರು ಶ್ರೀ ಮಾಧವ ಚಿಪ್ಪಳಿಯವರು. ಈ ಬಾರಿ ‘ನೀನಾಸಂ’ಗಾಗಿ ಈ ನಾಟಕವನ್ನು ನಿರ್ದೇಶಿಸಿದ್ದು ಕೇರಳದ ಪ್ರತಿಭಾನ್ವಿತ ಯುವ ನಿರ್ದೇಶಕ ಶಂಕರವೆಂಕಟೇಶ್ವರನ್.

ಶಂಕರವೆಂಕಟೇಶ್ವರನ್ ಅಂದರೇನೇ ನಿಧಾನಗತಿಯ (ಸ್ಲೋ ಮೋಷನ್) ರಂಗಚಲನೆಯೊಂದಿಗೆ ಪ್ರೇಕ್ಷಕನನ್ನು ಅಂತರಂಗದ ತಾದಾತ್ಮ್ಯತೆಗೆ ಸೆಳೆಯುವ ಥಿಯೇಟರ್ ಮಾಂತ್ರಿಕ ಎಂಬುದಕ್ಕೆ ಅವರು ‘ನೀನಾಸಂ’ಗಾಗಿ ಈ ಹಿಂದೆ ನಿರ್ದೇಶಿಸಿದ ‘ನೀರಿನ ನಿಲುದಾಣ’ ರಂಗಪ್ರಯೋಗವೂ ಸಾಕ್ಷಿ. ಅದೂ ಕೂಡಾ ಮೆಟರ್‌ಲಿಂಕನ ‘ದಿ ವಾಟರ್ ಸ್ಟೇಷನ್’ ಕೃತಿಯ ಕನ್ನಡ ರೂಪಾಂತರ. ನಾಟಕವನ್ನು ಯಾವತ್ತೂ ‘ರಂಗಪ್ರಯೋಗ’ ಎನ್ನುವ ಶಬ್ದದೊಂದಿಗೇ ಯಾಕೆ ತಳುಕುಹಾಕಬೇಕು ಎಂಬುದು ಅರ್ಥವಾಗಬೇಕಿದ್ದರೆ ಈ ಪ್ರಯೋಗದ ಮಾದರಿಯನ್ನೊಮ್ಮೆ ನೋಡಲೇಬೇಕು. ಆರಂಭದಿಂದ ಅಂತ್ಯದವರೆಗೂ ಅದೊಂದು ಅನ್ಯಾದೃಶವಾದ ಧ್ಯಾನದೊಂದಿಗಿನ ಯಾನ!

ಮೆಟರ್‌ಲಿಂಕನ ಕೃತಿಕರ್ತೃ ವಿವರಗಳನ್ನು ಹುಡುಕಹೊರಟರೆ ಆತ ಗೊಂಬೆನಾಟಕಗಳನ್ನೇ ಹೆಚ್ಚಾಗಿ ರಚಿಸಿದ್ದ ಎಂಬ ಮಾಹಿತಿ ಸಿಗುತ್ತದೆ. ಗೊಂಬೆಗಳು ಮಾತಾಡಲಾರವು. ಆದರೆ ಜಗತ್ತಿನ ನಾಟಕ ರಂಗದಲ್ಲಿ ಮರೆಯ ಸೂತ್ರಧಾರನ ಆಟದ ಕೈಗಳಿಗೆ ತಕ್ಕಂತೆ ಕುಣಿಯಬಲ್ಲವು. ಕಾಲದ ಹೊಡೆತಕ್ಕೆ ಸಿಕ್ಕಿ ಪಕ್ಕಾಗುವ ಮಾನವ ಹೃದಯಕ್ಕೆ ಅನುಭವವೇದ್ಯವಾಗಿ ದಕ್ಕುವ ಸರಳ ಅಧ್ಯಾತ್ಮವದು! ಮೆಟರ್‌ಲಿಂಕ್ ಹೃದಯಗ್ರಾಹಿಯಾಗಿಸಲು ಹೊರಡುವುದೂ ಅದನ್ನೇ.

ಮನುಷ್ಯನಿಗೆ ಹೆಚ್ಚು ಕಾಡುವುದು ಸಾವು. ಅದು ಆದ್ಯಂತವಾಗಿ ಕಾಡುವ ಭಯ. ಬದುಕಿನ ಯಾವುದೋ ಹಂತದಲ್ಲಿ ಅದರೊಂದಿಗಿನ ಮುಖಾಮುಖಿಯೇ ಮನುಷ್ಯನ ಎಲ್ಲ ತಲ್ಲಣಗಳಿಗೂ ಮಧ್ಯಂತರ ತೀರ್ಪು ಕೊಟ್ಟಂತೆ! ಮತ್ತೆ ಮತ್ತೆ ಕೊನೆಯಿಲ್ಲದ ಈ ಆಧ್ಯಾತ್ಮಿಕ ವ್ಯಾಜ್ಯದ ಮುಂದುವರಿಕೆ…. ಸಾವು ಬದುಕಿನ ವರ್ತುಲ. ಈ ನಾಟಕಕಾರ ಸಾವು ಬದುಕುಗಳ ಅಂಥದೊAದು ಮುಖಾಮುಖಿಯನ್ನು ಅತ್ಯಂತ ಗಂಭೀರವಾಗಿ ಪ್ರೇಕ್ಷಕರೆದುರು ಕಟ್ಟುತ್ತಾನೆ.

ಈ ಭೀಕರ ಮ್ಲಾನಮೌನಕ್ಕೊದಗುವ ಸನ್ನಿವೇಶವನ್ನು ಮೆಲೋಡ್ರಾಮಾ ಕಟ್ಟಿ ಆಡಿದರೆ ಅದು ಖಂಡಿತಾ ಹಾಸ್ಯಾಸ್ಪದವಾದೀತು. ಹಾಗಾಗಿ ಇಂಥದೊಂದು ಸನ್ನಿವೇಶವು ನಿರ್ದೇಶಕನಿಂದ ಅನಿವಾರ್ಯವಾಗಿ ಬೇಡುವುದು ನಾಟಕದುದ್ದಕ್ಕೂ ಹೆಪ್ಪುಗಟ್ಟುವ ಮೌನವನ್ನು. ಕೃತಿಯೊಂದು ತಾನೇ ತಾನಾಗಿ ತನ್ನ ಚಲನೆಯ ವಿನ್ಯಾಸಗಳ ಅಗತ್ಯಗಳನ್ನು ಬೇಡಿ ಪಡೆಯುತ್ತಿದ್ದರೆ ನಿರ್ದೇಶಕನಾದರೂ ಏನು ತಾನೇ ಮಾಡಲು ಸಾಧ್ಯ? ಶಂಕರ ವೆಂಕಟೇಶ್ವರನ್‌ರಂತಹ -ಈ ಸೂಕ್ಷ್ಮಗಳನ್ನು ಸಮರ್ಥವಾಗಿ ಹಿಡಿಯಬಲ್ಲ ಗಟ್ಟಿ ನಿರ್ದೇಶಕನ ಕೈಗೆ ಇಂಥ ಕೃತಿ ಸಿಕ್ಕಾಗಲೇ ಅದು ಹೊತ್ತು ಮೂಡಿ-ಹೊತ್ತು ಮುಳುಗಿದಷ್ಟೇ ಹದವಾಗಿ ಮತ್ತು ಸಹಜವಾಗಿ ಮೂಡಿಬರಲು ಸಾಧ್ಯವಾಯಿತು ಕೂಡಾ!

ಎನ್‌ಎಸ್‌ಡಿ ಮಾದರಿಯ ರಂಗಚಲನೆಗಳನ್ನೇ ಬಹುತೇಕ ಅನುಕರಿಸುವ ಭಾರತೀಯ ರಂಗ ಮಾಧ್ಯಮಕ್ಕೆ ಈ ರೀತಿಯ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವ ಅಗತ್ಯವಿದೆಯೆಂಬುದನ್ನು ನೀನಾಸಂ ಬಹಳ ಅಧಿಕಾರಯುತವಾಗಿಯೇ ನಿರೂಪಿಸಹೊರಟಂತಿದೆ- ಈ ಅಪರೂಪದ ರಂಗಪ್ರಯೋಗದ ಮೂಲಕ. ನಿರ್ದೇಶಕ ಶಂಕರ್‌ವೆAಕಟೇಶ್ವರನ್ ಹಾಗೂ ಮೆಟರ್‌ಲಿಂಕರ ಈ ಜುಗಲ್ ಬಂಧಿ- ಮೆಲುಸಂಗೀತದಂತಾ ಈ ಸೊಗಸಾದ ನಿರೂಪಣೆಗೆ ಹೇಳಿ ಮಾಡಿಸಿದಂತಿರುವ ಸಾಂಸ್ಕೃತಿಕ ಮೇಳೈಕೆ. ನೋಡುಗನನ್ನು ಬರಿಯ ನೋಡುವಿಕೆಗಷ್ಟೇ ಅಲ್ಲ: ಒಂದು ಬಗೆಯ ಆಳ ಧ್ಯಾನಕ್ಕೆ ತಳ್ಳುವ ರಂಗಾವಧೂತರಿವರೀರ್ವರೂ!

ತುಂಬು ನೆಮ್ಮದಿಯ ಕುಟುಂಬವೊಂದು ಮುಚ್ಚಿರುವ ಬಾಗಿಲಿನ ತಮ್ಮ ಮನೆಯೊಳಗೆ ತಮ್ಮದೇ ಸುಖ ಲೋಕದಲ್ಲಿ ಮುಳುಗಿರುವ ವೇಳೆ, ಅಲ್ಲೆಲ್ಲೋ ಹೊರಗಡೆ ಅದೇ ಮನೆಯ ಹಿರಿಯ ಮಗಳೊಬ್ಬಳ ಸಾವಾಗುತ್ತದೆ. ಊರ ಜನರಿಗೆ ಅದಾಗಲೇ ಗೊತ್ತಾಗಿ ಹೋಗಿರುವ ಈ ಸಂಗತಿಯು ಮನೆಯೊಳಗಿರುವ ಈ ಸಂಸಾರಕ್ಕಿನ್ನೂ ತಿಳಿದಿರುವುದಿಲ್ಲ. ವಿಷಯ ತಿಳಿಸಲೆಂದು ಆ ಮನೆಯ ಬಳಿಗೆ ಬರುವ ಈರ್ವರು ವ್ಯಕ್ತಿಗಳಿಗೆ ಕಿಟಕಿಯೊಳಗೆ- ಒಂದು ತೆಳ್ಳನೆ ಪರದೆಯಾಚೆ ತೆರೆದುಕೊಂಡಿರುವ ಆ ಪುಟ್ಟ ಜಗತ್ತಿನ ಆನಂದ ಎದೆ ಇರಿಯುವಷ್ಟು ಮರುಕ ಹುಟ್ಟಿಸುತ್ತದೆ. ಇನ್ನೊಂದೇ ಒಂದು ಕ್ಷಣದಲ್ಲಿ ನಿರ್ದಾಕ್ಷಿಣ್ಯವಾಗಿ ಹರಿದು ಬಿಡಲಿರುವ ಆ ಇಬ್ಬನಿಯಂಥಾ ಆನಂದದ ಕ್ಷಣಿಕತೆಯು ಹೊರಗಿನಿಂದ ಪರಾಂಬರಿಸುತ್ತಿರುವ ಆ ಈರ್ವರೂ ಆಗಂತುಕರು ಒಂದಷ್ಟು ಹೊತ್ತು ಕನಲಿಬಿಡುವಂತೆ ಮಾಡುತ್ತದೆ. ಅವರ ಹೃನ್ಮನಗಳನ್ನು ಮರಗಟ್ಟಿಸಿಬಿಟ್ಟಂಥ ಹೆಪ್ಪುಗಟ್ಟುವ ಆ ವಿಷಾದವೇ ನಾಟಕದ ಬಹುಮುಖ್ಯ ಭಾಗ. ಒಳಗಿನ ಆನಂದ- ಹೊರಗಿನ ಕಠೋರ ವಾಸ್ತವ… ಎರಡು ಸ್ಥಿತಿಗಳನ್ನೂ ತಾತ್ಕಾಲಿಕವಾಗಿ ಪರಸ್ಪರ ಮರೆಯಾಗಿಸಿರುವುದು ಒಂದು ತೆಳ್ಳಗಿನ ಸತ್ಯ ಮಾತ್ರ! ಒಂದು ಮಾತು- ಒಂದು ಗೋಡೆಯ ದಾಟು- ಬಾಗಿಲಿನ ಸಣ್ಣದೊಂದು ಕೀರಲು ಸದ್ದು- ರಂಗದ ಮೇಲಿನ ಒಂದೇ ಒಂದು ಪುಟ್ಟ ಚಲನೆ… ಇಡೀ ದೃಶ್ಯವನ್ನೇ ಕಲಸಿ ಭೀಬತ್ಸವಾಗಿಸಬಿಡಬಹುದಾದದ್ದು!

ಎಲ್ಲ ತಲ್ಲಣಗಳ ಮಧ್ಯೆ ನಿತ್ಯ ಏನೂ ಆಗಿಲ್ಲವೆಂಬAತೆ ಬದುಕುತ್ತಿರುವ ಪ್ರತೀ ಮಾನವ ಜೀವಿಯ ಬಾಳಿನ ಒಂದಲ್ಲ ಒಂದು ಹಂತದಲ್ಲಿ ಬಿರುಗಾಳಿಯೆಬ್ಬಿಸಿಬಿಡಬಹುದಾದ ಒಂದು ವಾಸ್ತವಿಕ ಕ್ಷಣವದು. ಅದರ ಮುಖಾಮುಖಿಯು ಸಾವು-ಬದುಕುಗಳ ಆಧ್ಯಾತ್ಮಿಕ ಸತ್ಯವನ್ನು ಪ್ರಜ್ಞೆಯ ಒಳಹರಿಸಿ ಶಾಶ್ವತ ಸ್ಥಿತಪ್ರಜ್ಞತೆಯನ್ನು ಸ್ಥಾಪಿಸಿಬಿಡುವ ಬದುಕಿನ ಬಹುಮುಖ್ಯ ಬಿಂದುವೂ ಆಗಿಬಿಡಬಹುದಾದ ಕರಾಮತ್ತಿನ ಹೊತ್ತದು!

ಹಾಗಾಗಿಯೇ- ಆ ಒಂದೇ ಒಂದು ಕಠೋರ ಕ್ಷಣವನ್ನು ‘ಯುಗದ ಚಲನೆಯನ್ನಾಗಿರಿಸಿ’ ಅಷ್ಟೂ ಭಾವುಕ ವಿವರಗಳನ್ನು ಪ್ರೇಕ್ಷಕರ ಎದೆಯೊಳಗೆ ತೊಟ್ಟಿಕ್ಕಿಸಿ ಇಳಿಸಲು ನಿರ್ದೇಶಕ ಶಂಕರ ವೆಂಕಟೇಶ್ವರನ್ ಕಂಡುಕೊಂಡಿರುವ ಬಹು ಅನಿವಾರ್ಯ ಮತ್ತು ಪರಿಣಾಮಕಾರಿ ತಂತ್ರವೇ ಈ ನಿಧಾನ ಚಲನೆಯ ಪ್ರಯೋಗಾತ್ಮಕ ಶೈಲಿ!

ಮತ್ತು ಆ ಒಂದೇ ಒಂದು ಕ್ಷಣಕ್ಕಾಗಿ-ಅದರ ಎಲ್ಲಾ ವಿಮರ್ಶಾತ್ಮಕ ಗ್ರಹಿಕೆಗಳ ಸಹಿತವಾಗಿ ಪ್ರೇಕ್ಷಕನನ್ನು ಸಜ್ಜುಗೊಳಿಸುವ ಪೂರ್ವತಯಾರಿಯೇ ಇಡೀ ನಾಟಕದ ಸಿಂಗಲ್ ಪಾಯಿಂಟ್ ಅಜೆಂಡಾ! ಹಾಗಾಗಿ ಮುಂದೆ ಊರ ಜನ ಶವಹೊತ್ತು ತರುವ ವೇಳೆ ಅನಿವಾರ‍್ಯವಾಗಿ ಮನೆಯ ಯಜಮಾನನಿಗೆ ಆ ಆಗಂತುಕರಲ್ಲೊಬ್ಬ ಮರಣವಾರ್ತೆ ತಿಳಿಸಬೇಕಾದ ಸಂದರ್ಭವೊದಗಿದಾಗ ಆಘಾತಕ್ಕೊಳಗಾಗುವ ಮನೆಮಂದಿಯ ಸ್ಥಿತಿ ಪ್ರೇಕ್ಷಕನನ್ನು ಬಾಧಿಸುವುದೇ ಇಲ್ಲ! ಏಕೆಂದರೆ, ಅಷ್ಟರಲ್ಲಾಗಲೇ ನೋಡುಗನನ್ನು ಸಾವು ಬದುಕುಗಳ, ಸಂತೋಷ-ದುಃಖಗಳ, ವಿನೋದ-ವಿಷಾದಗಳ ಅನಿವರ‍್ಯ ಆವರ್ತವೆಂಬ ಅಧ್ಯಾತ್ಮದೊಂದಿಗೇ ಮಾನಸಿಕವಾಗಿ ಹದಗೊಳಿಸಿಬಿಟ್ಟಿರುತ್ತಾರೆ ಶಂಕರವೆಂಕಟೇಶ್ವರನ್! ಕಟ್ಟಕಡೆಗೊಮ್ಮೆ ಮೆಲೋಡ್ರಾಮಾದಂಥ ನಿರಾಶಾದಾಯಕ ಎಂಡಿಂಗ್ ನ್ನೂ ಸಹಜವಾಗಿಯೇ ನಿರೀಕ್ಷಿಸುವ ಪ್ರೇಕ್ಷಕನನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ನಿರ್ದೇಶಕ, ಮನೆಯೊಡತಿಯು ಭೀಕರವಾಗಿ ಬಾಯಿ ಕಳೆದು ರೋಧಿಸುವಂತೆ ಆಂಗಿಕವಾಗಿ ನಟಿಸುವಲ್ಲಿಗೆ ನಿಶ್ಯಬ್ದವಾಗಿ ದೀಪ ಆರಿಸುತ್ತಾನೆ! ಸಿಂಬಾಲಿಸಂ ಮಾದರಿಯ ಉತ್ತುಂಗದ ಉದಾಹರಣೆಯಿದು.

ಮೌನವೇ ಮಾತಾದಾಗ ಮಾತು ನಿರರ್ಥಕ. ಹಾಗಾಗಿ ಇಡೀ ನಾಟಕದಲ್ಲಿ ಮಾತಿನ ಸಂವಹನಕ್ಕಾಗಿ ಆಂಗಿಕ ಚಲನೆಗಳನ್ನು ತೋರುವವರು ನಾಲ್ಕೇ ಮಂದಿ. ಅವರಲ್ಲಿ ಮೊದಲ ಇಬ್ಬರು ಆ ಆಗಂತುಕರು. ಸ್ವತಃ ಆ ಪಾತ್ರಗಳೇ ಧ್ವನಿಹೊರಡಿಸಿ ಮಾತಾಡಿದರೆ, ಅತ್ಯಂತ ಸೂಕ್ಷ್ಮವಾದ ಆ ಭಾವವಿವರಗಳಿಗೆ ಧಕ್ಕೆಯೊದಗಿ ಧ್ಯಾನಕ್ಕಿಳಿದ ನೋಡುಗನ ಭಾವಗ್ರಹಿಕೆಗೆ ಎಲ್ಲಿ ತೊಡಕಾಗಬಹುದೋ ಎಂಬ ಕಾಳಜಿಯೊಂದಿಗೇ ಇಡೀ ನಾಟಕವು ಪಾತ್ರಧಾರಿಗಳ ಬರಿಯ ಆಂಗಿಕ ಚಲನೆಯೊಂದಿಗೇ ಸಂಯೋಜಿಸಲ್ಪಟ್ಟಿದೆ. ಅವರ ಕಂಠಧ್ವನಿಗಳು ಹಿನ್ನೆಲೆಯ ಭಾಷಿಕ ಪಾತ್ರಧಾರಿಗಳಿಂದ ನಿರ್ವಹಿಸಲ್ಪಡುತ್ತದೆ. ನಾಟಕದ ಬಹು ಗಮನೀಯ ಅಂಶವಿದು.

ಮಿಕ್ಕಂತೆ ಯಜಮಾನನೂ ಸೇರಿದಂತೆ ಮನೆಯೊಳಗಿನ ಮಂದಿಯ ಸಂತಸದ ಕ್ಷಣಗಳು, ಅತ್ಯಂತ ನಾಜೂಕಿನ ಜಪಾನೀ ಶೈಲಿಯ ಹಿನ್ನೆಲೆ ಸಂಗೀತದೊಂದಿಗೆ ನಿಧಾನಗತಿಯ ಚಲನೆಯಲ್ಲೇ ನಿರ್ವಹಿಸಲ್ಪಡುತ್ತದೆ. ನಾಟಕದ ಆರಂಭದಲ್ಲಿ ಬಾಗಿಲೆಳೆದು ಮುಚ್ಚುವ ಮನೆಯ ಯಜಮಾನ ಮನೆಯೊಡತಿಯ ಬಳಿ ಸಾರಿ, ಆಕೆಯ ಕೈಯಲ್ಲಿರುವ ಹಸುಗೂಸಿನೆಡೆಗೆ ದೃಷ್ಟಿ ಹರಿಸಿ ಅಲ್ಲಿಂದಾಚೆ ದೂರ ಮೂಲೆಯ ಕುರ್ಚಿಯೆಡೆಗೆ ಸರಿದು ಪತ್ರಿಕೆ ಹಿಡಿದು ಓದುತ್ತ, ನಗುತ್ತ, ಮತ್ತೆ ಮರಳಿ ಊಟದ ಮೇಜಿನ ಬಳಿ ಸರಿದು ಕುಳಿತುಕೊಳ್ಳುತ್ತ, ಪೋಕರಿಯಾಡುವ ಮಗನನ್ನು ಗದರುತ್ತ…… ಇವಿಷ್ಟೂ ಮೌನವಾಗಿ; ಆದರೆ ಮೌನವೇ ಅಲ್ಲವೆಂಬಷ್ಟು ಮನಮೋಹಕವಾಗಿ ಜರಗುವ ವೇಳೆ, ಸಮಾನಾಂತರವಾಗಿ ಇನ್ನೊಂದೆಡೆ-ಸಾವಿನ ವಿವರ ತಿಳಿದ ಆ ಆಗಂತುಕರ ಆಂಗಿಕ ಸಂಭಾಷಣೆಗಳು ನಡೆಯುತ್ತಿರುತ್ತವೆ. ಅತ್ಯಂತ ದುಃಖಕರವಾದ ಹೊರ ಸನ್ನಿವೇಶದ ವಿವರಗಳು ಪ್ರೇಕ್ಷಕರಿಗೆ ಒದಗಿಬರುತ್ತಿರುವ ಜೊತೆಜೊತೆಗೇ ಮನೆಯೊಳಗಿನ ಭಾವಪೂರ್ಣ ವಿವರಗಳೂ ದಕ್ಕುತ್ತಿರುತ್ತವೆ. ಇವೆರಡು ಸನ್ನಿವೇಶಗಳೂ ನೋಡುಗನೆದೆಯಾಳಕ್ಕೆ ಜೊತೆಜೊತೆಯಾಗಿಯೇ ಇಳಿಯುವ ಈ ವಿಚಿತ್ರ ಅನುಭವವಿದೆಯಲ್ಲ, ಅದುವೇ ನಾಟಕದ ಭಾವವೈಭವ! ಹಸುಗೂಸನ್ನೆತ್ತಿ ಮುದ್ದಿಸುತ್ತ, ಹಾಲೂಡಿಸುತ್ತ, ಲಲ್ಲೆಗರೆಯುತ್ತ, ಕಂದನ ಮುಖ ನೋಡಿ ಸುಖಿಸುತ್ತಿರುವ ತಾಯಿ ಪ್ರಪಂಚ- ಅದು ಸೃಷ್ಟಿಯ ಆಹ್ಲಾದತೆಯ ಮುಖ ಹೊತ್ತ ನಮ್ಮೊಳಗಿನದೇ ಜೀವಚಿಲುಮೆಯ ಪ್ರಪಂಚ. ಇನ್ನೇನು ಕ್ಷಣಹೊತ್ತಲ್ಲೇ ಜೀವನಿರ್ಗಮದ ಮ್ಲಾನ ಕಾರ್ಮೋಡ ಜಿಗಿದು ಧುತ್ತನೆ ಮೇಲೆರಗಲು ಹೊಂಚುಹಾಕುವ ಧಾತಾರನ ಬೊಂಬೆಯಾಟದ ವಿಷಾದವೈಭವ ನಮ್ಮೆದುರೆದುರೆದುರೇ ಹಾಯುತ್ತ ಹಾಯುತ್ತ ಬದುಕಿನ ಆಳ ಅಗಲಗಳನ್ನು ವಿವರಿಸುವ ವಿಧಿಯ ಪಾಠದಂತೆ ಭಾಸವಾಗುತ್ತದೆ!

ಎಲ್ಲಕ್ಕೂ ಕಲಶವಿಟ್ಟಂತೆ ನೀನಾಸಂನಂಥ ವೃತ್ತಿಪರ ನಟರ ಪರಿಣಾಮಕಾರಿ ನಿರ್ವಹಣೆ ಅಭಿನಂದನಾರ್ಹ. ಮನಸ್ಸಿಗೆ ಖುಷಿಕೊಡುವ ಆಶ್ಚರ್ಯ ಚೂಡಾಮಣಿಯಂಥ ವಿಭಿನ್ನ ಪ್ರಯೋಗವೂ ಅಗತ್ಯವೆಂಬುದಾದರೆ, ಆತ್ಮಕ್ಕೆ ತಟ್ಟುವ ‘ಅಂತರಂಗ’ದಂಥ ಈ ಪ್ರಯೋಗವೂ ಅಷ್ಟೇ ಅಗತ್ಯ ಹಾಗೂ ಚೇತೋಹಾರಿ.

ನಾಟಕವೆಂದರೆ- ಮಾನಸಿಕವಾಗಿ ನಾವೇ ಸಿದ್ಧಗೊಳಿಸಿ ನಂಬಿಕೊಂಡಂಥ ತಾಂತ್ರಿಕ ಆಕರ್ಷಣೆಗಳು ಇಲ್ಲಿ ಅಲಭ್ಯ. ನಾಟಕದ ವಿವಿಧ ಅಂಗಗಳನ್ನು ನಿಜಾರ್ಥದಲ್ಲಿ ಮಿತಗೊಳಿಸಿ ಎಷ್ಟು ತಲುಪಬೇಕೋ ಅಷ್ಟನ್ನು ಮಾತ್ರ ಪ್ರೇಕ್ಷಕನಿಗೆ ತಲುಪಿಸುವಲ್ಲಿ ಇದೊಂದು ಯಶಸ್ವೀ ರಂಗಪ್ರಯೋಗ. ಮತ್ತು ನೀನಾಸಂ ಇಂಥ ಪರ್ಯಾಯ ಶೈಲಿಯ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿರುವುದು ಕೂಡ ದೇಶೀಯ ರಂಗಭೂಮಿಯ ಅದೃಷ್ಟವೆನ್ನಬೇಕು.

‍ಲೇಖಕರು avadhi

27 February, 2020

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. T S SHRAVANA KUMARI

    ವಿಮರ್ಶೆ ತುಂಬಾ ಆಕರ್ಷಣೀಯವಾಗಿದೆ. ನಾಟಕ ನೋಡಬೇಕು ಅನ್ನಿಸುತ್ತಿದೆ.

  2. prathibha nandakumar

    ಬರಹ ಚೆನ್ನಾಗಿದೆ

  3. ಸುಂದರ ಕೇನಾಜೆ

    ಒಂದು ನಾಟಕ ಅಥವಾ ದೃಶ್ಯ ಮಾಧ್ಯಮ ಹೇಳುವುದನ್ನು ಲಿಪೀಕರಣಗೊಳಿಸುವುದು ಅಭಿನಯಕ್ಕಿಂತ ಸವಾಲಿನ ಕೆಲಸ. ದಿನೇಶ್ ಇಲ್ಲಿ ಅಂತರಂಗದ ಅಂತರಂಗವನ್ನು ಬಿಚ್ವಿಟ್ಟಿದ್ದಾರೆ. ನಾಟಕ ವಿಮರ್ಶೆಗಳ ಸಾಲಿನಲ್ಲಿ ಇದೊಂದು ಅತ್ಯುತ್ತಮ ವಿಮರ್ಶೆ. “ಗೆರೆಗಳ ಗಾರುಡಿಗನ ಕೈಯಲ್ಲಿ ಅಕ್ಷರ ಚಮತ್ಕಾರ”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading