-ಬಸವರಾಜ ಮುದನೂರ್
ಅಳಿಯ ಮಗನಾದನು; ಅತ್ತೆ ಮಗುವಾದಳು…
ಅದೊಂದು ತೀರ ಅಪರೂಪದ ಕಾರ್ಯಕ್ರಮ. ಮನೆಯ ಮುಂದೊಂದು ಕಲರ್ ಫುಲ್ ಶಾಮಿಯಾನ. ಆಗಮಿಸಿದ ಅತಿಥಿಗಳಿಗೆ ದಂಪತಿಯಿಂದ ತುಂಬು ಪ್ರೀತಿ, ಸತ್ಕಾರ. ರುಚಿಕಟ್ಟಾದ ಸವಿಯೂಟ, ಮತ್ತೊಂದು ಕಡೆ ಗೆಳೆಯರಿಂದ ಹಿಂದಿ, ತೆಲುಗು ಮತ್ತು ಕನ್ನಡದ ಇಂಪಾದ ಹಾಡುಗಳು, ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ಮನರಂಜನೆ. ಸಂಭ್ರಮೋತ್ಸವ; ಎಲ್ಲರ ಮೊಗದಲ್ಲೂ ಖುಷಿಯೋ ಖುಷಿ. ಕಣ್ಮನಕೆ ಆನಂದ ನೀಡುವ ನಿಜ ಹಬ್ಬ!
ಹೌದು, ದುರ್ಗದ ಪ್ರಜಾವಾಣಿ ಫೋಟೋಗ್ರಾಫರ್ ಚಂದ್ರು ಕಳೆದ ಶನಿವಾರ ವಿಶಿಷ್ಟ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ಆತ್ಮೀಯರಿಗೆ ಔತಣಕ್ಕೆ ಆಹ್ವಾನಿಸಿದ ಚಂದ್ರು ಏನು ವಿಶೇಷವೆಂದು ಕೇಳಿದರೆ ‘ಏನೇನೂ ಇಲ್ಲ. ಬರ್ತಡೇ ಪಾರ್ಟಿ ಅಲ್ಲ, ವೆಡ್ಡಿಂಗ್ ಆನಿವರ್ಸರಿ ಅಲ್ಲ. ಮದುವೆ ಮುಂಜಿ ಅಲ್ಲವೇ ಅಲ್ಲ. ಸುಮ್ಮನೆ ಸ್ನೇಹ ಸಮ್ಮಿಲನ; ಸೆಲ್ಫಿ ವಿಥ್ ಭೋಜನ. ಗಾನ ಬಜಾನಾ ಮತ್ತು ಕುಣಿಯೋಣ ಬಾರಾ ಅಷ್ಟೇ. ಖುದ್ ಖುಷಿ ಕೇಲಿಯೇ…’ ಎಂದು ಖುಷಿಯಿಂದಲೇ ಕರೆದಿದ್ದರು.
ಅವೆಂಚರ್ ಬೈಕು, ಸ್ಟೈಲಿಷ್ ಡ್ರೆಸ್ಸು, ಕಣ್ಣಿಗೆ ಕನ್ನಡಕ, ಕಾಲಿಗೆ ತರೇವಾರಿ ಶೂಸ್, ಹೆಗಲಿಗೊಂದು ಕ್ಯಾಮರಾ ಬ್ಯಾಗು ಧರಿಸುವ ಕೃಷ್ಣ ಚೆನ್ನಿಗ ಚಂದ್ರು ಬಂದರೆ ಸಾಕು ಗೆಳೆಯರ ಗುಂಪಿನಲ್ಲಿ ನಗುವಿನ ಬುಗ್ಗೆ ಚಿಮ್ಮುತ್ತದೆ. ಸೈಲೆಂಟಾಗಿ ನಿಂತವರ ನಡುವೆಯೂ ತಾನೇ ತಾನಾಗಿ ಮಾತಿನ ಮಂಟಪ ಶುರುವಾಗುತ್ತದೆ. ಹೀಗೆ ವಿಭಿನ್ನ ವ್ಯಕ್ತಿತ್ವದ ಗೆಳೆಯ ಚಂದ್ರು ಅಂದರೆ ‘ಜಾಲಿ ಬಾಯ್’ ಎಂಬುದೇ ಎಲ್ಲರ ಮನಸ್ಸಿನಲ್ಲಿ ಅಚ್ಚಾಗಿರುವುದು ಸಹಜ. ಆದರೆ, ಚಂದ್ರು ಕೇವಲ ಜಾಲಿ ಬಾಯ್ ಮಾತ್ರ ಅಲ್ಲ ‘ಮ್ಯಾಜಿಕ್ ಬಾಯ್’ ಎಂಬ ಸೋಜಿಗದ ಸಂಗತಿ ಮೊನ್ನೆ ಸಾಬೀತಾಯಿತು.
ಖಾಸಗಿ ಶಾಲಾ ಶಿಕ್ಷಕಿ ಆಗಿದ್ದ ಚಂದ್ರು ಅವರ ಅತ್ತೆ ನಿರ್ಮಲಾ ಅವರಿಗೆ ಸುಮಾರು ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆಯಿದ್ದು ಎರಡು ತಿಂಗಳ ಹಿಂದೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ವಾರಕಾಲ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯ ವೈದ್ಯರು ಆಕ್ಸಿಜನ್ ನಲ್ಲೇ ಇರಬೇಕಾಗುತ್ತದೆಂದು ಸೂಚಿಸಿದ್ದರು. ಬೆಂಗಳೂರಿನ ವೈದ್ಯರಿಗೆ ವೈದ್ಯಕೀಯ ವರದಿ ಕಳುಹಿಸಿ ಕೇಳಿದರೂ ಸಹ ಇಲ್ಲಿಯೂ ಅದೇ ಟ್ರೀಟ್ ಮೆಂಟ್ ನೀಡಲಾಗುತ್ತದೆ. ಮನೆಗೆ ಶಿಫ್ಟ್ ಮಾಡಿಬಿಡಿ ಎಂದು ಸೂಚಿಸಿದರು.
ವೈದ್ಯರೇ ಕೈಚಲ್ಲಿದ್ದು ಕಂಡು ಕಸಿವಿಸಿಗೊಳ್ಳುವ ಸ್ಥಿತಿಯಾದರೂ ಚಂದ್ರು ಮಾತ್ರ ಧೃತಿಗೆಡಲಿಲ್ಲ. ಬದಲಾಗಿ ಅತ್ತೆಯನ್ನು ಉಳಿಸಿಕೊಂಡೆ ಸಿದ್ಧ ಎಂದು ಛಲ ತೊಟ್ಟನು. ಅತ್ತೆ ಅವರ ಮನೆ ಬದಲು ತಮ್ಮ ಮನೆಗೆ ಶಿಫ್ಟ್ ಮಾಡಲು ಸಿದ್ಧತೆ ಮಾಡಿಕೊಂಡನು. ಮನೆಗೆ ಶಿಫ್ಟ್ ಮಾಡುವ ಮುನ್ನವೇ ಫೋಲ್ಡಡ್ ಕಾಟ್, ಎರಡ್ಮೂರು ಆಕ್ಸಿಜನ್ ಯಂತ್ರ, ಶುಗರ್, ಬಿಪಿ, ಆಕ್ಸಿಜನ್ ಲೆವಲ್ ತಪಾಸಣೆ ಯಂತ್ರ, ವಿದ್ಯುತ್ ಕೈಕೊಟ್ಟರೆ ಕೇಪಬಲ್ ಯುಪಿಎಸ್ ಯುನಿಟ್ ಎಲ್ಲದರ ಬಗ್ಗೆ ಮುಂಜಾಗ್ರತೆ ವಹಿಸಿ ಮನೆಯೇ ಮಿನಿ ಆಸ್ಪತ್ರೆಯಂತೆ ಸಿದ್ಧಪಡಿಸಿಕೊಂಡನು.

ಸಾಯಿರಾಂ ಮೆಡಿಕಲ್ ಶಾಂತುಗೆ ಕರೆ ಮಾಡಿದಾಗ ತಕ್ಷಣಕ್ಕೆ ನಮ್ಮ ಮನೆಯಲ್ಲೇ ಆಕ್ಸಿಜನ್ ಯಂತ್ರವಿದೆ ಎಂದು ಕೊಟ್ಟು ಕಳುಹಿಸಿದ್ರೆ, ಕೆಲ ದಿನದ ಬಳಿಕ ಡಾ.ಕಂಬಳಿಮಠ ಅವರು ಆಕ್ಸಿಜನ್ ಯಂತ್ರವೊಂದನ್ನು ನೀಡಿದರು. ಅಗತ್ಯಬಿದ್ದರೆ ಇರಲಿ ಎಂದು ಸಿಲಿಂಡರ್ ನ ಮತ್ತೊಂದು ಆಕ್ಸಿಜನ್ ಸಹ ಇರಿಸಿಕೊಳ್ಳಲಾಗಿತ್ತು. ಅಸಲಿಗೆ ಯುದ್ಧ ಗೆಲ್ಲುವವನಂತೆ ಚಂದ್ರು ಅತ್ತೆಯ ಜೀವ ರಕ್ಷಣೆಗೆ ಸಿದ್ಧತೆ ಮಾಡಿಕೊಂಡಿದ್ದನು. ‘ಬಂದುದೆಲ್ಲವೂ ಬರಲಿ ಗುರುವಿನ ದಯೆಯೊಂದಿರಲಿ’ ಎಂದು ದೇವರ ಮೇಲೆ ಭಾರ ಹಾಕಿ ಆಸ್ಪತ್ರೆಯಿಂದ ಅತ್ತೆಯನ್ನು ಮನೆಗೆ ಕರೆದುಕೊಂಡು ಹೊರಟಾಗ ಚಂದ್ರು ಕಣ್ಣಂಚಲಿ ತುಂಬಿದ್ದ ನೀರು ಕಪಾಳದಿಂದ ಧರೆಗಿಳಿದಿತ್ತಾದರೂ ಛಲ ನಿಷ್ಫಲಗೊಳ್ಳದೆಂಬ ನಂಬಿಕೆಯೂ ಅದೇ ಕಣ್ಣಲ್ಲಿ ಗೋಚರಿಸಿತ್ತು.
ಅಂಬುಲೆನ್ಸ್ ಮೂಲಕ ಮನೆಗೆ ಕರೆದುಕೊಂಡು ಬಂದಾಗ ಗೆಳೆಯರೆಲ್ಲಾ ಹೋಗಿದ್ದೆವು. ಮೇಲ್ಮಹಡಿಯ ಮನೆಗೆ ಅಕ್ಷರಶ: ಮಗುವಿನಂತೆ ಎತ್ತಿಕೊಂಡು ಹೋಗಬೇಕಾಯಿತು. ಅತ್ತೆಯ ಜೀವನ್ಮರಣದ ಹೋರಾಟ ಗಮನಿಸಿದ ಚಂದ್ರು ಕೆಲ ದಿನಕಾಲ ಬದುಕಿಗೆ ಆಸರೆಯಾದ ಸ್ಟುಡಿಯೋ ಬಾಗಿಲು ಹಾಕಿದರು. ಪತ್ನಿ ಅಭಿಲಾಷಾ ಮತ್ತು ಪೃಥ್ವಿಯ ಜತೆಗೂಡಿ ಹಗಲು- ರಾತ್ರಿ ಎನ್ನದೆ ಸರದಿ ಪ್ರಕಾರ ಕಾದು ಜತನದಿಂದ ಕಾಯ್ದುಕೊಂಡರು. ರಾತ್ರಿ ನಿದ್ದೆಗಣ್ಣಲ್ಲಿ ಅತ್ತೆ ಆಕ್ಸಿಜನ್ ತೆಗೆದಾಗ ಆಕ್ಸಿಜನ್ ಲೆವಲ್ ಏರುಪೇರಾಗಿದ್ದು ಕಂಡು ತಮ್ಮ ಉಸಿರೇ ನಿಂತಂತೆ ಆತಂಕಗೊಂಡರು. ನಿದ್ದೆಗೆಟ್ಟು ನಿರ್ಮಲಾ ಅವರ ಜೀವದತ್ತ ಚಿತ್ತ ನೆಟ್ಟರು.
ಆ ದಿನಗಳಲ್ಲಿ ಚಂದ್ರು ಕಂಡಾಗ ರಾತ್ರಿ ನಿದ್ದೆಗೆಟ್ಟ ಕಣ್ಣುಗಳು ನೋಡಲಾಗದ ಸ್ಥಿತಿ. ಕೆಂಪುಗಟ್ಟಿದ ಕಣ್ಣು, ಕೂತಲ್ಲಿ, ನಿಂತಲ್ಲಿ ನಿದ್ದೆ ಮಂಪರು ಕಂಡು ಗೆಳೆಯರೇ ‘ನಿಮ್ಮ ಆರೋಗ್ಯದ ಬಗ್ಗೆಯೂ ಗಮನವಿರಲಿ’ ಎಂದು ಹೇಳಿದ್ದುಂಟು. ಭರವಸೆ ಕಳೆದುಕೊಳ್ಳದೆ ಜನ್ಮದಾತೆಯಂತೆ ಅತ್ತೆಯನ್ನು ಕಂಡ ಚಂದ್ರು ಕೊನೆಗೂ ಅಂದುಕೊಂಡ ಯಶಸ್ಸು ಸಾಧಿಸಿದ್ದು ಶ್ರೇಷ್ಠ ಸಾಧನೆಯೇ ಸರಿ. ಕೇವಲ ಹಾರೈಕೆ ಮಾತ್ರ ಅಲ್ಲದೆ ನಿರ್ಮಲಾ ಅವರು ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಜಾಗರೂಕತೆ ವಹಿಸಿದ್ದು, ಪ್ರೀತಿ ಕಾಳಜಿ ತೋರಿದ್ದು, ಆತ್ಮಸ್ಥೈರ್ಯ ಮೂಡಿಸಿದ್ದು
ವೈದ್ಯಕೀಯ ಟ್ರೀಟ್ ಮೆಂಟ್ ಗಿಂತಲೂ ಹೆಚ್ಚಿನ ಕೆಲಸ ಮಾಡಿದೆ. ಕೊಂಚ ಚೇತರಿಸಿಕೊಳ್ಳುವ ಸಂದರ್ಭದಲ್ಲೇ ವೈದ್ಯಕೀಯ ಟ್ರೀಟ್ ಮೆಂಟ್ ಜತೆಗೆ ಯೋಗಗುರು ಮುರುಳಿ ಅವರಿಂದ ಅಗತ್ಯ ಯೋಗಾಸನ ಮಾರ್ಗದರ್ಶನ ಕೊಡಿಸಿದ್ದು ಜೀವ ಸಂಜೀವಿನಿಯಂತಾಗಿದೆ.
ಕಳೆದ ವಾರ ಚಂದ್ರು ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದಾಗ ಅತ್ತೆ ನಿರ್ಮಲಾ ಅವರು ಮೇಲ್ಮಹಡಿಯಿಂದ ತಾವೇ ಕೆಳಗಿಳಿದಿದ್ದರು. ನಗುಮೊಗದಲ್ಲೇ ಎಲ್ಲರನ್ನೂ ಮಾತನಾಡಿಸಿ ಅಚ್ಚರಿ ಮೂಡಿಸಿದರು. ‘ಎರಡು ವಾರದಿಂದ ಹಗಲು ಹೊತ್ತು ಆಕ್ಸಿಜನ್ ಬಳಸುತ್ತಿಲ್ಲ. ರಾತ್ರಿ ಹೊತ್ತು ಮಾತ್ರ ಆಕ್ಸಿಜನ್ ಬಳಸುತ್ತೇನೆ. ಈಗ ನನ್ನ ಕೆಲಸ ನಾನೇ ಮಾಡಿಕೊಳ್ಳುತ್ತೇನೆ. ಆಗಾಗ ಅಡುಗೆ ಮಾಡುತ್ತೇನೆ. ನಾನೇ ಮೇಲ್ಮಹಡಿಗೆ ಏರಿ ಇಳಿಯುತ್ತೇನೆ’ ಎಂದು ಹೇಳಿದ್ದು ಕೇಳಿ ನಮ್ಮೆಲ್ಲರಿಗೂ ಶಾಕ್. ಇದು ಪ್ರೀತಿ, ಕಾಳಜಿಯ ಟ್ರೀಟ್ ಮೆಂಟ್, ಆತ್ಮ ವಿಶ್ವಾಸದ ಬಲ ಎಂಬುದು ಮನದಟ್ಟಾಯಿತು. ವೈದ್ಯಲೋಕವೇ ನಿಬ್ಬೆರಗಾಗುವ ಫಲಿತಾಂಶ ಹೊರಹೊಮ್ಮಲು ಆಕ್ಸಿಜನ್ ಅಳಿಯನ ಕರಾಮತ್ತೇ ಕಾರಣವಾಗಿದೆ!
ಜಾತಿ ಸಂಕೋಲೆ ಮೀರಿ ಪ್ರೇಮಬಂಧಿಯಾಗಿದ್ದ ಚಂದ್ರು ಒಂದೂವರೆ ದಶಕದ ಹಿಂದೆ ಸಿನಿಮೆಟಿಕ್ ಆಗಿ ಪ್ರೇಮ ವಿವಾಹ ಆಗಿದ್ದನು. ಅದೇ ಚಂದ್ರು ಈಗ ಮನೆ ಅಳಿಯನಂತಾಗಿದ್ದು, ಅತ್ತೆ-ಮಾವನ ಮನ ಗೆದ್ದಿದ್ದು , ಅತ್ತೆಯ ಜೀವ ಉಳಿಸಿಕೊಂಡಿರುವ ಪರಿಶ್ರಮ ನಿಜ ಮಾದರಿ. ಬಲಭೀಮನ ವಾರ ಆಯೋಜಿಸಿದ ಕಾರ್ಯಕ್ರಮವೂ ಮಾದರಿ ಆಗಿತ್ತು. ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮ್ಯಾನೇಜರ್ ಸತ್ಯನಾರಾಯಣ, ಗಾಯಕರಾದ ಹರೀಶ್, ರಂಗ ನಿರ್ದೇಶಕ ಕೆ ಪಿ ಗಣೇಶಯ್ಯ, ಪತ್ರಕರ್ತರಾದ ವಿನಾಯಕ ತೊಡರನಾಳ್, ಕಿರಣ್, ದ್ವಾರಕನಾಥ್ ಮತ್ತಿತರರು ಹಾಡು ಹೇಳಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು.
ಚಂದ್ರುಗೆ ಹಾಡು ಸಮರ್ಪಣೆ ಮಾಡಿದ ಕೆಳಗೋಟೆ ಅಂಜನಪ್ಪ ಪ್ರೇಯಸಿ ರಾವೇ, ಊರ್ವಸಿ ರಾವೇ… ಹಾಡು ಆರಂಭಿಸಿದಾಗ ಅತ್ತೆ ನಿರ್ಮಲಾ ಅವರ ಕಣ್ಣಂಚಲಿ ನೀರು. ಹಾಡು ಮುಗಿಯುತ್ತಿದ್ದಂತೆ ‘ಚಂದ್ರು ನನ್ನ ಅಳಿಯ ಮಾತ್ರ ಅಲ್ಲ, ಮಗನೂ ಹೌದು. ನಾನಿಂದು ಬದುಕಿರಲು ಚಂದ್ರು ತೋರಿದ ಪ್ರೀತಿ, ಕಕ್ಕುಲತಿಯೇ ಕಾರಣ’ ಎಂದು ಮಗುವಿನಂತೆ ಕಣ್ಣೀರಾದರು. ನಿಷ್ಕಾರಣಕ್ಕೆ ಔತಣಕ್ಕೆ ಕರೆದಿದ್ದ ಚಂದ್ರು ಕಾರ್ಯಕ್ರಮ ಸಾರ್ಥಕತೆ ಕಂಡಿತು.






ಚಂದ್ರು ಅವರ ಮನಸ್ಥಿತಿ ಹಾಗೂ ಅವರ ಸಾಧನೆಯ ಫಲ.
ಭಗವಂತ ಯಾವಾಗಲೂ ಚೆನ್ನಾಗಿಟ್ಟಿರಲಿ.
ಬಸವರಾಜು ರವರ ಬರಹ & event narration is really awesome.
ಬಸವರಾಜ್ ಸರ್, ನಿಮ್ಮಗೆಳೆಯ ಅತ್ಆತೆಯನ್ನು ಆರೈಕೆ ಮಾಡಿದ್ದರ ಬಗ್ಗೆ ಭಾಳ ಆಪ್ತವಾಗಿ ಬರೆದೀರಿ… ಗೆಳೆಯನ ಬಗ್ಗೆ ಹೆಮ್ಮೆ ಅನಿಸುತ್ತೆ…. ಅಭಿನಂದನೆಗಳು ನಿಮ್ಮ ಗೆಳೆಯನಿಗೆ ಹಾಗೂ ಆಪ್ತವಾಗಿ ಬರೆದ ತಮಗೂ