“ನಡುರಾತ್ರಿಯಲ್ಲಿ ‘ಆಕೆ’ ಗೆ ಎಚ್ಚರವಾದಾಗ ತಾನೀಗ ರೈಲ್ವೇ ಟ್ರ್ಯಾಕ್ ಮೇಲಿದ್ದೇನೆಂಬುದು ಖಾತರಿಯಾಯಿತು ! ”
* * * * * * * * * * * *
ಅಲ್ಲಿಗೆ ಈ ಕತೆ ಮುಗಿಯಿತು.
ಏನಿದು? ಒಂದು ಅಸಂಬಂದ್ಧ ವಾಕ್ಯವನ್ನು ಬರೆದು ಕತೆ ಮುಗಿಯಿತು ಎಂದುಬಿಟ್ಟರೆ ಆಯ್ತೆ? ಇದೇನು ಕತೆಯ ಮಧ್ಯಭಾಗವೋ, ಕತೆಯೊಂದರ ಕೊನೆ ಸಾಲೋ, ಅಥವಾ ಆಧುನಿಕ ರಿವರ್ಸ್ ನರೇಶನ್ ಕತೆಯೊಂದರ ಮೊದಲ ವಾಕ್ಯವೋ ಎಂದು ನೀವು ಕೇಳಬಹುದು. ಹಾಗಂತಲೇ ಹೇಳಿದ್ದು ಇದು ಅತೀ ಸಣ್ಣ ಕತೆ ಎಂದು. ಇದನ್ನೊಂದು ಅಸಂಬದ್ಧ ಸಾಲು ಮಾತ್ರ ಎಂದು ನೀವು ಪರಿಗಣಿಸದಿರಲಿ ಎಂಬ ಕಾರಣಕ್ಕೆ ಈ ಕತೆಯ ಪ್ರತಿ ಪದಗಳ ರಹಸ್ಯವೇನಿರಬಹುದು ಎಂದು ನಿಮಗೆ ಪರಿಚಯಿಸಲು ಪ್ರಯತ್ನಿಸುತ್ತೇನೆ.
ಅಂದರೆ ಈ ಕತೆಯನ್ನು ‘ನಾನು-ನೀವು’ ಸೇರಿ ಕಟ್ಟಬೇಕಿದೆ ಅಂದಹಾಗಾಯಿತು. ಅಥವಾ ಈ ವಾಕ್ಯ ಓದಿದ ಕ್ಷಣವೇ ನಿಮ್ಮ ತಲೆಯಲ್ಲಿ ಒಂದು ಕತೆ ಹುಟ್ಟಿರಬಹುದು. ನನಗನ್ನಿಸಿದ್ದನ್ನು ನಾನು ತಿಳಿಸಿಬಿಡುತ್ತೇನೆ ಉಳಿದಂತೆ ನೀವುಂಟು ಮತ್ತು ಕತೆಯುಂಟು.
*******************
ನಡುರಾತ್ರಿಯಲ್ಲಿ;
ಅಂದರೆ ಹಗಲಲ್ಲಿ ಅಲ್ಲ
ಮುಸ್ಸಂಜೆಯಲ್ಲೂ ಅಲ್ಲ.
ಬೆಳಗಿನ ಜಾವದಲ್ಲೂ ಅಲ್ಲ.
ದಿನದ ಬೇರೆ ಯಾವ ಸಮಯವೂ ಅಲ್ಲ. ಆಕೆ ರೈಲ್ವೇ ಟ್ರ್ಯಾಕ್ ಮೇಲೆ ತನ್ನನ್ನು ತಾನು ಕಂಡು ಕೊಂಡಾಗ ನಡುರಾತ್ರಿಯೇ ಆಗಿತ್ತು ಎಂದರ್ಥ. ಅಂದರೆ ಈ ಕತೆ ಬೆಳಿಗ್ಗೆಯೋ, ಮಧ್ಯಾಹ್ನವೋ, ಸಂಜೆಯೋ ಪ್ರಾರಂಭವಾಗಿದೆ. ಈ ವಾಕ್ಯ ಬರುವಷ್ಟರಲ್ಲಿ ನಡುರಾತ್ರಿಯಾಗಿರಬೇಕು ಅಥವಾ ಇದು ಕತೆಯ ಮಧ್ಯ ಭಾಗದಲ್ಲಿ ಬರುವ ಸಾಲಾಗಿದ್ದರೆ ನಡುರಾತ್ರಿ ಎಂಬುದು ಕೇವಲ ಒಂದು ಸಮಯದ ಗುರುತು ಮಾತ್ರ. ಏಕೆಂದರೆ ಅನಂತರವೂ ಕತೆಯಲ್ಲಿ ಬೆಳಗಾಗಬಹುದು. ಮರುದಿನ, ಮುಂದಿನ ವಾರ, ಮುಂದಿನ ತಿಂಗಳು ಅಥವಾ ಹಲವು ವರ್ಷಗಳ ಅನೇಕ ರಾತ್ರಿಗಳು ಕತೆಯಲ್ಲಿ ಬಂದು ಹೋಗಬಹುದು. ಆಗ ಈ ವಾಕ್ಯದಲ್ಲಿರುವ ‘ನಡುರಾತ್ರಿ’ ಯಲ್ಲಿ ಎಂಬ ಪದ ಅಷ್ಟೇನೂ ಪ್ರಾಮುಖ್ಯತೆ ಪಡೆಯದೇ ಒಂದು ಸಣ್ಣ ‘ಘಟ್ಟ’ವಾಗಬಹುದಷ್ಟೇ. ಅಲ್ಲದೆ ನಡು ರಾತ್ರಿಯಲ್ಲಿ ಎಂಬ ಪದ ‘ಆಕೆ’ ಎಂಬ ಪದದೊಂದಿಗೆ ಸೇರಿ ನಿಮ್ಮಲ್ಲಿ ಒಂದು ‘ಭಯಾನಕ’ವಾದ ಕಲ್ಪನೆಗೂ ಕಾರಣವಾಗಿರಬಹುದು. ಅಂಥ ಅನೇಕ ಕಲ್ಪನೆಗಳನ್ನು ಹಾಗೆಯೇ ಕೂಡಿಟ್ಟುಕೊಂಡಿರಿ ಮುಂದಿನ ಪದಗಳ ಬಗ್ಗೆಯೂ ‘ಸಂಶೋಧನೆ’ ಮಾಡಿದ ನಂತರ ಅವು ಅರ್ಥ ಪಡೆದುಕೊಂಡಾವು.
******************

‘ಆಕೆ’ ;
ಯಾರು ಆಕೆ ?
ಓರ್ವ ಹೆಂಗಸೇ?
ಹುಡುಗಿಯೇ?
ಮಧ್ಯ ವಯಸ್ಕಳೇ?
ಪರಿತ್ಯಕ್ತೆಯೇ?
ಅನಾಥಳೇ?
ತುಂಬು ಸಂಸಾರದ ಸದಸ್ಯಳಾಗಿದ್ದು ಸಾಕಷ್ಟು ನೋವುಂಡವಳೇ?
ಈ ಮುಂಚೆಯೇ ಆ ಮಾರ್ಗದಲ್ಲಿ ಹೋಗಿರುವ ಯಾವುದಾದರೂ ರೈಲಿನಿಂದ ತಳ್ಳಲ್ಪಟ್ಟವಳೆ? ತಳ್ಳಲ್ಪಟ್ಟಳಾ ಅಥವಾ ಅವಳೇ ಹಾರಿದ್ದಾಳೆಯೇ ?
ಕೌಟುಂಬಿಕ ಕಲಹದಿಂದ ನೊಂದು ತಾನಾಗಿಯೇ ಇಲ್ಲಿ ಬಂದು ಮಲಗಿರುವಳೆ?
ಪುಂಡ ಪೋಕರಿಗಳ ಗುಂಪೊಂದು ಅವಳನ್ನು ಬೆನ್ನತ್ತಿದ ಪರಿಣಾಮ ಓಡಿ, ಓಡಿ ಕತ್ತಲಲ್ಲಿ ಮುಂದುವರಿಯಲಾರದೆ ಅಲ್ಲೇ ಮಲಗಿಬಿಟ್ಟಳೇ? ಕಾಮುಕರ ಗುಂಪೊಂದು ಮಾಡಿದ ‘ಸಾಮೂಹಿಕ ಅತ್ಯಾಚರಕ್ಕೊಳಗಾದ ನತದೃಷ್ಟೆ ‘ಆಕೆ’ ಮನೆಗೆ ಮುಖ ಮಾಡಲಾಗದೆ ಬಂದಿಲ್ಲಿ ಬಿದ್ದಳೆ?
ತಮ್ಮ ‘ಪ್ರೇಮ’ಕ್ಕೆ ಎರಡೂ ಮನೆಯವರು ಒಪ್ಪದ ಕಾರಣ ಯಾವುದೋ ಊರಿಗೆ ಪರಾರಿಯಾಗಲು ನಿರ್ಧರಿಸಿ ಇನ್ನೂ ಬಾರದ ತನ್ನ ಪ್ರಿಯಕರನಿಗಾಗಿ ಅದೆಷ್ಟೋ ದಿನಗಳಿಂದ ಪ್ಲಾಟ್‍ಫಾರಂನಲ್ಲಿ ಕಾದೂ ಕಾದೂ ಮನನೊಂದು ಈ ದಿನ ಟ್ರ್ಯಾಕ್ ಮೇಲೆ ಬಂದು ಹೀಗೆ ಮಲಗಿದಳೇ?
ಕಠಿಣ ಶ್ರಮ ಹಾಕಿ ಬರೆದ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಆರನೇ ಬಾರಿಯೂ ತೇರ್ಗಡೆಯಾಗದ ಕಾರಣ ‘ಆಕೆ’ ರೋಸಿದ್ದಾಳೆಯೇ?
ಸಾಕಷ್ಟು ಬುದ್ಧಿವಂತೆಯಾಗಿದ್ದು, ಒಳ್ಳೆಯ ಕೆಲಸದಲ್ಲಿದ್ದರೂ ಯಾವೊಂದು ಮದುವೆ ಪ್ರಸ್ತಾಪವೂ ಸರಿಹೊಂದದೆ, ತನಗಾಗಿ ಯಾವ ಗಂಡನ್ನೂ ದೇವರು ಸೃಷ್ಟಿಸಿಲ್ಲ ಎಂಬ ಹತಾಶೆಗೆ ತಲುಪಿದವಳೇ?
ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಹಳ್ಳಿಯಿಂದ ಬಂದ ಮಹಿಳೆಯರ ಗುಂಪಿನಿಂದ ತಪ್ಪಿಸಿಕೊಂಡು ಕಂಗೆಟ್ಟವಳಾ?
ಸಿನಿಮಾ ಹಿರೋಯಿನ್ ಆಗಲೇಬೇಕೆಂಬ ಆಸೆಯಿಂದ ಕಳುಹಿಸಿದ ತನ್ನ ಪೋಟೋಗಳನ್ನು ನಿರ್ದೇಶಕ ದುರುಪಯೋಗ ಪಡಿಸಿಕೊಂಡನೆಂಬ ಕಾರಣಕ್ಕೆ ಸಮಾಜಕ್ಕೆ ಮತ್ತೆ ಮುಖ ತೋರಿಸಲಾರದ ಸ್ಥಿತಿಗೆ ಬಂದವಳೇ?
‘ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಾಗಲಿಲ್ಲವಲ್ಲೇ ಬಂಜೆ ನೀನು’ ಎಂಬ ನಿಂದನೆಗೆ ತುತ್ತಾಗಿ ಮನೆಯೊಳಗೆ ಕೇವಲ ತೊತ್ತಾಗಿ ಇರಲಾರದ ತನ್ನಲ್ಲದ ತಪ್ಪಿಗೆ ತಲೆ ಕೊಡುತ್ತಿರುವವಳೆ?
ರಾತ್ರಿ ಹತ್ತರ ನಂತರ ಬೆಳಗಿನ ಜಾವದ ತನಕ ಯಾವ ರೈಲುಗಳೂ ಆ ಟ್ರ್ಯಾಕ್‍ನಲ್ಲಿ ಬರುವುದಿಲ್ಲ ಎಂಬುದನ್ನು ಖಚಿತವಾಗಿ ಬಲ್ಲ ವೃದ್ಧ ಭಿಕ್ಷುಕಿಯೇ? ಅವಳಿಗದು ನಿತ್ಯದ ನಿದ್ದೆಯೇ?
ಇವಳೇನಾದರೂ ಮಿಥಿಲೆಗೆ ಹೋದ ಕೃಷ್ಣನ ನಿರೀಕ್ಷೆಯಲ್ಲಿ, ವಿರಹದಲ್ಲಿ ವಿವಶವಾಗಿ, ವೈರಾಗ್ಯದಿಂದ ಬಂದಿಲ್ಲಿ ಮಲಗಿರುವ ರಾಧೆಯೇ?
ಅಣ್ಣನನ್ನು ಹಿಂಬಾಲಿಸಿದ ಲಕ್ಷ್ಮಣನ ಬರುವಿಕೆಯನ್ನು ಕಾದು ಬಸವಳಿದ ಊರ್ಮಿಳೆಯೇ?
ಇಂದ್ರನನ್ನು ಮೋಹಿಸಿದ ಕಾರಣಕ್ಕೆ ಶಾಪಕ್ಕೆ ತುತ್ತಾದ ಅಹಲ್ಯೆಯೇನಾದರೂ ತಪ್ಪಿಸಿಕೊಂಡಿರುವಳೇ?
ಹೀಗೆ ಈ ‘ಆಕೆ’ ಯಾರಾಗಿದ್ದಳು ಎಂಬುದರ ಮೇಲೆ ‘ನಡುರಾತ್ರಿ’ಯಲ್ಲಿ ಅನ್ನುವ ಪದ ತೀವ್ರತೆಯನ್ನು ಪಡೆಯುತ್ತದೆ. ನಮಗೀಗ ‘ನಡುರಾತ್ರಿ’ ಮತ್ತು ‘ಆಕೆ’ ಎಂಬೆರೆಡು ಪದಗಳ ಬಗ್ಗೆ ತಿಳಿದದ್ದು ಕತೆಗಿರುವ ವಿವಿಧ ಆಯಾಮಗಳನ್ನು ಅರ್ಥೈಸಿಕೊಳ್ಳಲು ಅನುಕೂಲವಾಯಿತು ಮುಂದಿನ ಪದಗಳತ್ತ ಗಮನಹರಿಸೋಣ. ಕತೆ ಅರ್ಧಕ್ಕೆ ನಿಲ್ಲಬಾರದಲ್ಲವೆ?
* * * * * ***********
ಎಚ್ಚರವಾದಾಗ ;
ಅಂದರೆ ಆಕೆ ಈ ಕತೆಯ ಈ ಹಂತದಲ್ಲಿ ಎಚ್ಚರವಾಗಿದ್ದಾಳೆ ಎಂದು ಅರ್ಥ. ಹಾಗೆಯೇ ಅಲ್ಲಿಯ ತನಕ ಆಕೆ ಅಲ್ಲಿ ಮಲಗಿದ್ದಳು ಮತ್ತು ನಿದ್ರಿಸುತ್ತಿದ್ದಳೆಂದು, ಆ ಕ್ಷಣಕ್ಕೆ ಅವಳಿಗೆ ಎಚ್ಚರವಾಗಿದೆ ಎಂದೂ ತಿಳಿಯಬೇಕಾಗುತ್ತದೆ.
ಈ ಪದ ಅವಳಿಗೆ ಗೊತ್ತಿಲ್ಲದೇ, ಆಕೆಯನ್ನು ರೈಲ್ವೇ ಟ್ರ್ಯಾಕಿನ ಮೇಲೆ ತಂದು ಹಾಕಲಾಗಿದೆ ಎಂಬುದನ್ನು ಹೆಚ್ಚು ಒತ್ತಿ ಹೇಳುತ್ತದೆ. ಹಾಗೆ ತಂದು ಹಾಕಲು ಇರಬಹುದಾದ ಕಾರಣಗಳನ್ನು ಈಗಾಗಲೇ ‘ಆಕೆ’ಯ ಬಗ್ಗೆ ಊಹಿಸುವಾಗ ನಾವು ಕಂಡುಕೊಂಡಿದ್ದೇವೆ.
ಅಲ್ಲದೆ ‘ ಆಕೆ ’ ಗೆ ಮೂರ್ಛೆ ಹೋಗುವ ಕಾಯಿಲೆಯೇನಾದರೂ ಇದ್ದು, ಆಗ ತಾನೆ ಎಚ್ಚರವಾಗಿರಬಹುದೇ?
ಇದು ಕತೆಯ ಆರಂಭದ ವಾಕ್ಯವಾಗಿದ್ದಲ್ಲಿ ಎಚ್ಚರವಾದ ಮೆಲೆ ಆಕೆ ಏನನ್ನೋ ಮಾಡುತ್ತಾಳೆ, ಎಲ್ಲಿಗೋ ಹೋಗುತ್ತಾಳೆ ಎಂಬುದನ್ನು ಖಚಿತವಾಗಿ ಹೇಳುತ್ತದೆ. ಹಾಗೆಯೇ ಕತೆ ಮಧ್ಯಭಾಗದ ಸಾಲಾಗಿದ್ದರೆ ಆಗ ಈ ಹಿಂದೆ ಎಚ್ಚರವಾಗಿದ್ದ ಅವಳು ಈಗ ಬಂದು ಮಲಗಿದ್ದಾಳೆ ಅಥವಾ ಮಲಗಿಸಲಾಗಿದೆ ಎಂದೂ, ಇನ್ನೇನು ಎಚ್ಚರವಾಗಲಿರುವುದರಿಂದ ಮುಂದೇನು ಮಾಡಿಯಾಳು, ಕತೆ ಹೇಗೆ ಸಾಗುತ್ತದೆ ಎಂದು ಕುತೂಹಲ ಮೂಡಿಸುತ್ತದೆ.
ಒಂದು ವೇಳೆ ‘ಎಚ್ಚರವಾದಾಗ’ ಎಂಬುದು ಈ ಕತೆಯ ಕೊನೇ ಸಾಲು ಆಗಿದ್ದಲ್ಲಿ ಒಂದು ರೀತಿಯ ತಾತ್ವಿಕ ಮತ್ತು ತಾರ್ಕಿಕ ಅರ್ಥಗಳನ್ನು ನೀಡುತ್ತದೆ. ಯಾವುದೋ ಒಂದು ದೊಡ್ಡ ಕತೆ ಈಗಾಗಲೇ ನಡೆದಿದೆ ಅದನ್ನು ಆಕೆ ಕನಸಿನಲ್ಲಿ ಕಂಡಂತೆ ಓದುಗರಿಗೆ ವಿವರಿಸಿ ಈಗ ‘ಎಚ್ಚರವಾದಳು’ ಎಂಬಂತ ಅರ್ಥ ಪಡೆದುಕೊಳ್ಳಬಹುದು. ಅಥವಾ ಗಾಂಧೀಜಿಯ ರಾಮರಾಜ್ಯದ ಕನಸು ಸಾಕಾರಗೊಂಡು ಆಕೆ ನಡುರಾತ್ರಿಯಲ್ಲಿ ‘ಎಚ್ಚರಗೊಂಡು’ ದಿಟ್ಟವಾಗಿ ಮುನ್ನಡೆಯಬಲ್ಲವಳೇ? ಹಾಗೂ ‘ಎಚ್ಚರವಾದಾಗ’ ಎಂಬುದು ಕಾಲ ಸೂಚಕವೂ ಆದ್ದರಿಂದ ಆಕೆ ಹಾಗೆ ಅಲ್ಲಿ ಮಲಗಿ ಎಷ್ಟು ದಿನಗಳಾದವು? ವರ್ಷಗಳಾದವು? ಶತಮಾನಗಳೇ ಆದವೇ? ಹಾಗಾದರೆ ಈಗ ‘ಎಚ್ಚರ’ ವಾಗುವಂತಹ ವಿಸ್ಮಯ ಏನಾದ್ರೂ ನಡೀತೆ?
* * * * * *
‘ತಾನು + ಈಗ’ – ತಾನೀಗ ;
ಎಂಬ ಪದದಿಂದ ಮೊದಲು ಸ್ಪಷ್ಟವಾಗುವುದೇನೆಂದರೆ ಈ ಕತೆ ತೃತೀಯ ಪುರುಷ ನಿರೂಪಣೆಯಲ್ಲಿದೆಯೇ ಹೊರತು ಪ್ರಥಮ ಪುರುಷದಲ್ಲಲ್ಲ ಎಂದು . ಒಂದು ವೇಳೆ ‘ತಾನೀಗ’ ಬದಲು ‘ನಾನೀಗ’ ಎಂದು ಹೇಳಿದ್ದರೆ ಆಗ ಅದು ಪ್ರಥಮ ಪುರುಷ ನಿರೂಪಣೆಯಲ್ಲಿದೆ ಅನ್ನಿಸುತ್ತಿತ್ತು. ಜೊತೆಗೆ ಕತೆಗಾರ್ತಿ ( ಆಕೆ ಎಂಬ ಪದದಿಂದ ಇದು ಸ್ಪಷ್ಟವಾಗದು. ತಾನು ಒಂದು ಪಾತ್ರವಾಗಿ ಕತೆ ಕಟ್ಟಿದ್ದಾಳೆ ಎಂದು ತಿಳಿಯಬೇಕಾಗುತ್ತಿತ್ತು. ಆದರೆ ಇಲ್ಲಿ ‘ತಾನೀಗ’ ಎಂಬ ಪದ ಬಳಸಿರುವುದು ಕತೆಗಾರನ ಅಥವಾ ಕತೆಗಾರ್ತಿಯ ಜಾಣ್ಮೆಯಾಗಿದ್ದು ಬೇರೊಬ್ಬ ಹೆಂಗಸಿನ ಕತೆ ಹೇಳುತ್ತಿರುವುದಾಗಿ ಸ್ಪಷ್ಟ ಪಡಿಸುತ್ತಾನೆ(ಳೆ). ಇಂಥ ಒಂದೇ ಸಾಲಿನ ಕತೆಗೆ ಈ ಪದ ‘ಸ್ಪಷ್ಟತೆ’ ಮತ್ತು ‘ಅಸ್ಪಷ್ಟತೆ’ ಎರಡನ್ನೂ ತಂದುಕೊಡುತ್ತದೆ.
ಹಾಗಾಗಿ ‘ತಾನೀಗ’ ಎಂಬ ಪದ ಕತೆಯಲ್ಲಿರುವ ಪಾತ್ರ, ಕತೆಗಾರನೋ, ಕತೆಗಾರಳೋ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿ, ಅದೊಂದು ಬೇರೊಬ್ಬಳ ಹೆಣ್ಣಿನ ಕತೆ ಎಂದು ನಿಖರವಾಗಿ ದಾಖಲಿಸುತ್ತದೆ. ಅಲ್ಲದೇ ಅಂಥ ಸರ್ವನಾಮ ಪದಕ್ಕೆ ಇನ್ನೇನು ವಿಶೇಷ ಅರ್ಥ ಇರಬೇಕಿಲ್ಲ ಬಿಡಿ ಎಂಬ ತೀರ್ಮಾನಕ್ಕೂ ಬರಬಹುದು.
* * * * * *
ರೈಲ್ವೇ ಟ್ರ್ಯಾಕ್ ;
ಇದು ಕತೆ ನಡೆಯುವ ಸ್ಥಳ. ಒಂದೇ ಸಾಲಿನಲ್ಲಿ ಪೂರ್ತಿ ಕತೆಯಿರುವುದರಿಂದ ರೈಲ್ವೇ ಟ್ರಾಕ್‍ನಲ್ಲಿಯೇ ಕತೆ ಆರಂಭವಾಗಬೇಕು ಅಥವಾ ಮುಕ್ತಾಯಗೊಳ್ಳಬೇಕು. ‘ಆಕೆ’ ಯಾರಿರಬಹುದು ಎಂದು ಮಾಡಿದ ಊಹೆಗಳಲ್ಲಿ ಯಾವುದೊಂದು ನಿಜವಾದರೂ ‘ರೈಲ್ವೆ ಟ್ರ್ಯಾಕ್’ ನ್ನೇ ಕತೆಗಾರ ಸೂಚಿಸಲು ಕಾರಣವೇನಾದರೂ ಇದೆಯೇ? ಅಸಾಯಕ ಹೆಣ್ಣಿನ ಪರಿಸ್ಥಿತಿಯೊಂದನ್ನು ಚಿತ್ರಿಸಲು ‘ ರೈಲ್ವೆ ಟ್ರ್ಯಾಕ್’ ನ್ನೇ ಏಕೆ ಆಯ್ದುಕೊಳ್ಳಬೇಕು? ಹೇಗೂ ನಡುರಾತ್ರಿ ಎಂಬ ಪದ ಬಳಸಿರುವುದರಿಂದ ಒಂದು ಪಾರ್ಕ್, ಒಂದು ರಸ್ತೆ, ರಾಷ್ಟ್ರೀಯ ಹೆದ್ದಾರಿ , ಪಾಳು ಬಿದ್ದ ಬಂಗಲೆ , ಪ್ಲೈ ಓವರ್, ಏರ್‍ಪೋರ್ಟ್ ರೋಡು, ದಟ್ಟಡವಿಯ ಮಧ್ಯಭಾಗ, ಉತ್ತರ ಭಾರತದಿಂದ ಬಂದ ಯಾವುದೋ ಒಂದು ಗೂಡ್ಸ್ ಲಾರಿ. ಹೀಗೆ ಅನೇಕ ಸ್ಥಳಗಳಿದ್ದವು. ಆದರೆ ರೈಲ್ವೇ ಟ್ರ್ಯಾಕ್ ಮೇಲೆಯೇ ಕಥಾ ಸ್ಥಳವನ್ನು ಆರಿಸಿರುವುದು ತಕ್ಷಣಕ್ಕೆ ಅದೊಂದು ಸುದ್ದಿ ಯಾಗಬಲ್ಲದು, ಮರುದಿನ ಬೆಳಗ್ಗೆ ದೇಶವೇ ಅವಳ ಬಗ್ಗೆ ಮಾತಾಡಬಹುದು ಎಂಬ ಕಾರಣಕ್ಕಿದ್ದರೂ ಇರಬಹುದು. ಒಟ್ಟಿನಲ್ಲಿ ನಡುರಾತ್ರಿಯಲ್ಲಿ ರೈಲ್ವೆ ಟ್ರ್ಯಾಕಿನ ಮೇಲೆ ಓರ್ವ ಹೆಣ್ಣು ಇದ್ದಾಳೆ ಎಂಬುದು ಅನೇಕ ಅ(ನ)ಗತ್ಯ ಕುತೂಹಲಗಳಿಗೆ ಕಾರಣವಾಗುವುದಂತೂ ನಿಜವಲ್ಲವೇ? ಅದೊಂದು ಸಾಧಾರಣ ಕಥಾತಂತ್ರವಿರಬಹುದು ಅಷ್ಟೇ. ಇದೊಂದು ಸ್ಥಳ ಸೂಚಕ ಪದವಾಗಿದ್ದರೂ ಇಂಥದ್ದೇ ರೈಲ್ವೇಸ್ಟೇಷನ್ ಅಥವಾ ಮಾರ್ಗ ಎಂದು ಹೇಳದ ಕಾರಣ ಕತೆಯು ಮತ್ತಷ್ಟು ಸಾರ್ವಜನಿಕವಾಗಿಯೂ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿದೆ. ಅಲ್ಲದೆ ಓದುಗರು ಈ ಹಿಂದೆ ಯಾವತ್ತೋ ರೈಲ್ವೇ ಟ್ರಾಕಿನ ಮೇಲೆ ಬಿದ್ದಿದ್ದ ವ್ಯಕ್ತಿಯೊರ್ವನನ್ನು ನೆನಪಿಗೆ ತಂದುಕೊಳ್ಳಲೂ ಬಹುದು. ಹೀಗೆ ಒಂದು ವಾಕ್ಯದ ಈ ಕತೆಯಲ್ಲಿ ರೈಲ್ವೆ ಟ್ರ್ಯಾಕ್ ಎಂಬ ಪದ ವಿಶೇಷವಾಗಿ ಗೋಚರಿಸುತ್ತದೆ.
* * * * * * * * * * * *
ಖಾತರಿಯಾಯಿತು ;
ಅಂದರೆ ಆಕೆಗೆ ಈಗ ಎಲ್ಲಿದ್ದೇನೆಂದು ತಿಳಿಯುವುದು ಮುಖ್ಯ ಎಂಬುದನ್ನು ಈ ಪದ ಸ್ಪಷ್ಟೀಕರಿಸುತ್ತದೆ. ಅಲ್ಲದೆ ಖಾತರಿಪಡಿಸಿಕೊಳ್ಳುವ ಪ್ರಮೇಯ ಬರುವುದು ಉದ್ದೇಶವಿಲ್ಲದೇ ಬೇರೊಂದು ಸ್ಥಳ ತಲುಪಿದಾಗ, ಅಥವಾ ನಮಗೆ ಅರಿವಿಲ್ಲದೇ ಯಾರಾದರೂ ನಮ್ಮನ್ನಲಿಗೆ ಕೊಂಡೊಯ್ದಾಗ ಮಾತ್ರ. ಹಾಗಾಗಿ ‘ಆಕೆ’ ಯ ಹಿಂದೆ ಏನೋ ರಹಸ್ಯವಿದೆ ಎಂಬುದನ್ನಂತೂ ಊಹಿಸಲು ಈ ಪದ ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ಕತೆಯ ಕೊನೆಯ ಪದವೂ ಇದೇ ಆಗಿದ್ದು, ಆ ಕುತೂಹಲ ತಣಿಯದೆ ಆಕೆಗೇನೋ ತನ್ನ ಸ್ಥಳ ಖಾತರಿಯಾಗುತ್ತದೆ ಆದರೆ ಓದುಗನಿಗೆ ಮಾತ್ರ ಏನೊಂದೂ ಖಾತರಿಯಾಗದೇ ಅನೇಕ ಗೊಂದಲಗಳನ್ನು ತಲೆಗೆ ಬಿಡುತ್ತಲೇ ಒಂದಿಷ್ಟು ಸಾಧ್ಯತೆಗಳನ್ನು ಯೋಚಿಸಲು ಪ್ರೇರೇಪಿಸುತ್ತದೆ. ಅದಕ್ಕೇ ನಾನು ಆರಂಭದಲ್ಲಿ ಹೇಳಿದ್ದು ‘ ಈ ಕತೆಯನ್ನು ‘ ನಾನು-ನೀವು ಸೇರಿ ಕಟ್ಟಬೇಕಿದೆ ‘ ಎಂದು.
* * * * * * * * * * * * * * * * * * * * * *
ಇಲ್ಲಿಗೆ ಕತೆ ಮುಗಿಯಿತು.
ಅಥವಾ
ಈಗ ಈ ಕತೆ ಪ್ರಾರಂಭವಾಯಿತು.
ಎಂದು ನಾನು ಮಾರ್ಮಿಕವಾಗಿ ಹೇಳುತ್ತಿದ್ದರೆ, ‘ ಅತೀ ಸಣ್ಣ ಕತೆ’ ಅಂತ ನಮ್ಮನ್ನು ದಾರಿ ತಪ್ಪಿಸಿದ್ದಾರೆ. ಇದ್ರಲ್ಲಿ ಎಂಥಾ ಮಣ್ಣು ಇಲ್ಲ ಎಂದು ಓದುಗನೊಬ್ಬ ‘ಸುಂದರಿಯ ಸಂಕಟ’ ಎಂಬ ಮುಂದಿನ ಕತೆಗೆ ಪುಟ ತಿರುವಿಸಬಹುದು . ನಾನೇನು ಮಾಡ್ಲಿ ಹೇಳಿ ಒಂದಿಡೀ ಕಥಾ ಸಂಕಲನದಲ್ಲಿ ಎಲ್ಲಾ ಕತೆಗಳನ್ನೂ ಓದುಗರಿಗೇ ಬರೆದುಬಿಟ್ಟರೆ ಸಾಕಾ? ವಿಮರ್ಶಕರಿಗೆ ಅಂತಾನೂ ಒಂದು ಕತೆ ಇರೋದು ಬೇಡ್ವೆ ?
( ಕನ್ನಡದ ಖ್ಯಾತ ಕತೆಗಾರರು,ಅನುವಾದಕರೂ ಆದ ಎಸ್.ದಿವಾಕರ್ ಅವರು ಗ್ವಾಟೆಮಾಲಾದ ‘ಅಗೊಸ್ತೊ ಮೊಂತೆರ್ರೋಸೊ’ ನ ಅತೀ ಚಿಕ್ಕ ಕತೆ ‘ಡೈನೊಸಾರ್’ ಬಗ್ಗೆ ಬರೆದ ಟಿಪ್ಪಣಿಯನ್ನು ಓದಿ ಈ ವೃತ್ತಾಂತವನ್ನು ಬರೆಯಲು ನನಗೆ ಪ್ರೇರಣೆಯಾಯಿತು ಎಂದು ನಿಸ್ಸಂಶಯವಾಗಿ ಹೇಳ ಬಯಸುತ್ತೇನೆ.)
'ಆಕೆ' ಎಂಬ ಒಂದು ಸಾಲಿನ ಕತೆ !
ನಿಮಗೆ ಇವೂ ಇಷ್ಟವಾಗಬಹುದು…





ತುಂಬಾ ಚೆನ್ನಾಗಿದೆ ಸರ್