ನಾಳೆ ‘ಅಂಕಿತಾ ಪುಸ್ತಕ’ದಿಂದ ಪುಸ್ತಕ ಸಂಭ್ರಮ.
ಪುಸ್ತಕದ ಆಹ್ವಾನ ಪತ್ರಿಕೆ, ಮುಖಪುಟ ಮತ್ತು ಜೋಗಿ ಪುಸ್ತಕಕ್ಕೆ ಯೋಗರಾಜ್ ಭಟ್ ಬರೆದ ಮುನ್ನುಡಿ ’ಅವಧಿ’ ಓದುಗರಿಗಾಗಿ.





ಯೋಗರಾಜ್ ಭಟ್ ಬರೆದಿದ್ದಾರೆ :
ಹಸಿವು-ದುಡಿಮೆ-ಬೊಜ್ಜು-ವ್ಯಾಯಾಮ-ಅಹಂಕಾರ-ಆರೋಗ್ಯ-ಅನಾರೋಗ್ಯ ಹಾಗೂ ಸಾವು ನಮ್ಮ ದೇಹದ ಜೊತೆ ಸದಾ ಇರುವ ಅಂಗೋಪಾಂಗಗಳು ಎನ್ನಬಹುದು. ಹುಟ್ಟಿನ ಸಂಭ್ರಮದ ನಂತರ ಎಂದೋ ಬರುವ ಸಾವು, ಸಾವಿನ ನಂತರ ನಾವೇನಾಗ್ತೇವೆ ಅಂತ ಗೊತ್ತಿಲ್ಲದೇ ಹಾರಾಡುವುದು, ‘ನಾವು’ ಎಂದರೇನೆಂದು ನಮಗೇ ಗೊತ್ತಾಗದಿರುವುದು- ಇದೆಲ್ಲಾ ನೋಡಿದರೆ ನಾವು ತೀರಾ ಪರೋಕ್ಷವಾಗಿ ಸಾವೆಂಬ ಆರಕ್ಕೆ ಮೂರಡಿ ಅಂತಿಮ ಸತ್ಯವನ್ನು ಒಳಗೊಳಗೇ ಹೊತ್ತು ತಿರುಗಾಡುತ್ತೇವೆ ಅನ್ನಿಸುತ್ತದೆ. ಅದಕ್ಕೆ ‘ಬದುಕು’ ಎಂದು ಹೆಸರಿಟ್ಟಿದ್ದೇವೇನೋ ಅನ್ನಿಸುತ್ತದೆ. ಇಲ್ಲದಿದ್ದರೆ ಮನುಷ್ಯ ಅನಾರೋಗ್ಯಕ್ಕೆ ಇಷ್ಟೆಲ್ಲ ಹೆದರಬೇಕಾಗಿರಲಿಲ್ಲ.
ಈ ಅನುಭವ ಕಥನ ಓದಿದಾಗ ಬರೆದವರು ತಮ್ಮ ಸ್ವಂತ ದೇಹದ ಬಗ್ಗೆ ಹದಿನೈದು ದಿನಗಳ ಕಾಲ ಎಷ್ಟು ಕಾಳಜಿ ವಹಿಸಿದ್ದರೋ, ಓದುವವರು ಒಂದೆರಡು ಗಂಟೆಗಳ ಕಾಲ ಅಷ್ಟೇ ಕಾಳಜಿ ವಹಿಸುತ್ತಾರೆ ಅನ್ನಿಸುತ್ತದೆ. ವಿವರಣೆಗಳಲ್ಲಿ ಮಾನವ ದೇಹ ಮತ್ತು ಆರೋಗ್ಯದ ನಿಗೂಢತೆಗಳೆಲ್ಲ ಲಘು ಹಾಸ್ಯದಲ್ಲಿ ಬಿಚ್ಚಿಕೊಂಡರೂ, ನಗುವ ಕಂಗಳಲ್ಲೇ ನಮ್ಮ ನಮ್ಮ ಹೊಟ್ಟೆಗಳ ಕಡೆ ತುಸು ವಿಷಾದದಿಂದಲೇ ನೋಡಿಕೊಳ್ಳುವಂತಾಗುತ್ತದೆ.
ಕತೆಗಾರಿಕೆಯಲ್ಲಿ ತುಂಬ ದಿನಗಳ ಹಿಂದೆಯೇ ಸೀಲು ಹೊಡೆದಂಥ ಕಿಡಿಗೇಡಿ ನಿರ್ಲಿಪ್ತತೆ ಗಿಟ್ಟಿಸಿಕೊಂಡಿರುವ ಜೋಗಿ, ಇಲ್ಲಿ ತಮ್ಮ ಸ್ವಂತ ದೇಹವನ್ನೇ ಪಾತ್ರವಾಗಿಸಿ, ತಾವು ಸ್ವತಃ ತುಸು ದೂರ ನಿಂತವರಂತೆ ಪೂರ್ತಿ ಮಜಾ ತಗೊಂಡು ಬರೆದಿರುವ ಅಪರೂಪದ ಕಥನ ಇದು. ಉದ್ದೇಶಪೂರ್ವಕವಾಗಿ ಗಹನವಾದದ್ದೇನನ್ನೋ ಹೇಳಿ ತಲೆಕೆಡಿಸದೆ, ಆರಾಮಾಗಿ ಯಾವುದೋ ಸರಳ ಅನುಭವ ಹೇಳಿ, ಓದುಗ ಇನ್ಯಾವತ್ತೋ ಅನ್ನ ತಿನ್ನುವಾಗಲೋ, ಸ್ನಾನ-ಪ್ರಕ್ಷಾಲನಗಳನ್ನು ಮಾಡುವಾಗಲೋ ಮನೋದೈಹಿಕ ಅರೋಗ್ಯದ ಬಗ್ಗೆ ಸೀರಿಯಸ್ಸಾಗುವಂತೆ ಮಾಡುವಲ್ಲಿ ಈ ಕಥನ ‘ಡಾಕ್ಟರ ಚೀಟಿ ‘ ರೀತಿಯಲ್ಲಿ ಯಶಸ್ವಿಯಾಗಿದೆ.
ಇನ್ನೊಂದಷ್ಟು ಪಾತ್ರಗಳ ಒಳತೋಟಿ ಥರದ್ದು, ವೇದಾಂತದ ಥರದ್ದು ಸೇರಿ ಇನ್ನೇನೋ ಆಗಬಹುದಾಗಿದ್ದ ಬರಹ ಥಟ್ಟನೆ ನಿಂತುಹೋಯಿತು ಅನ್ನಿಸುವುದು ಓದುಗನಾಗಿ ಇನ್ನೇನೋ ಬಯಸುವ ನನ್ನ ವೈಯಕ್ತಿಕ ನಿರಾಸೆ ಇರಬಹುದು ಅಥವಾ ತೀರ ಸರಳವಾಗಿ ಕತೆಯಿಲ್ಲದೇ ಕಾಲಕ್ಷೇಪ ಮಾಡುವುದು ನನಗೆ ತುಂಬ ಇಷ್ಟವಾಗಿರುವುದರಿಂದ ನಾನು ಹೀಗೆಲ್ಲ ಅನ್ನುತ್ತಿರಬಹುದು. ಓದುಗನಿಗೆ ಏನಾಗುತ್ತೆ ಎಂದು ಯೋಚಿಸುತ್ತಾ ಕೂತರೆ ಬರೆವವನಿಗೆ ಒಂದಕ್ಷರ ಹುಟ್ಟಲ್ಲ ಎಂಬ ದುರಂತ, ಅಷ್ಟಿಷ್ಟು ಬರೆದು ಈ ಮಧ್ಯೆ ಗೊತ್ತಾಗಿದೆ. ಆದ್ದರಿಂದ ನನ್ನ ಈ ಅನಿಸಿಕೆ, ಏನೂ ಹೇಳದೇ ಇನ್ನೇನೋ ಹೇಳಲು ಹೋಗಿ ಹೆಂಗ್ಹೆಂಗೋ ಆಗಿರಬಹುದು.
ಥೂ, ನಾನು ಎತ್ಲಾಗೆ ಹೊಂಟೆ, ನಂಗೇ ಗೊತ್ತಾಗ್ತಿಲ್ಲ. ಜಲ್ದಿ ಮುಗಿಸುತ್ತೇನೆ. ನಾನು ಕೂಡ ಒಂದೆರಡು ಬಾರಿ ಆಯುರ್ವೇದಿಕ್ ಸೆಂಟರುಗಳಲ್ಲಿ ಸಿಗರೇಟು ಬಿಡಲು ಯತ್ನಿಸಿ, ಗಂಜಿಗಿಂಜಿ ಕುಡಿದುಕೊಂಡು ಇದ್ದದ್ದರಿಂದ ಇಲ್ಲಿ ಜೋಗಿ ಹೇಳಿದ್ದೆಲ್ಲ ನನ್ನದೇ ಖಾಸಗಿ ವಿವರಗಳು ಅನಿಸುತ್ತಿವೆ. ಔಷಧಿ ಕೊಡುವ ಡಾಕ್ಟರಿಗೇ ಒಮ್ಮೆ ಸಿಗರೇಟು ಸೇದುವಂತೆ ಪುಸಲಾಯಿಸಿದ ಕಾರಣ ನನ್ನನ್ನು ಮರ್ಯಾದೋಚಿತವಾಗಿ ಅಲ್ಲಿಂದ ಓಡಿಸಲಾಗಿತ್ತು ಅನ್ನೋದು ಬೇರೆ ವಿಷಯ.
ಯಾವುದೇ ಕೃತಿ ಓದಿ ಮುಗಿಸಿದ ತಕ್ಷಣ ಅದೊಂದು ಹೊಸಲೋಕವನ್ನೂ, ಆ ಕ್ಷಣದ ಅದರದ್ದೇ ಆದ ಹೊಸ ಭಾವಪ್ರಾಪ್ತಿಯನ್ನೂ “ಟಪಕ್ಕಂತ’ ಕರುಣಿಸಬೇಕು. ಅದು ಇಲ್ಲಿದೆ. ಎಲ್ಲರೂ ತಮ್ಮತಮ್ಮ ದೇಹ ಎತ್ಲಾಗೆ ಹೊಂಟಿದೆ, ನಾವು ನಮಗೆ ತೋಚಿದ್ದು ಮಾಡಿದರೆ, ದೇಹ ತನಗೆ ತೋಚಿದ್ದು ಯಾಕೆ ಮಾಡುತ್ತದೆ, ದೇಹ –ಮನಸ್ಸು ಅಂದರೇನು- ಎಂದೆಲ್ಲ ಒಮ್ಮೆ ಘನಗಾಂಭೀರ್ಯದಿಂದ ಬಗ್ಗಿ ಹೊಟ್ಟೆ ನೋಡಿಕೊಂಡು ಮಿಸ್ಸುಮಾಡದೇ ಮೌನಾಚರಣೆ ಮಾಡಬೇಕಾಗಿ ಕೋರುತ್ತಾ ನನ್ನ ಪ್ರಾಸ್ತಾವಿಕ ಭಾಷಣ ಮುಗಿಸುತ್ತೇನೆ.
ನಮಸ್ತೆ
ಯೋಗರಾಜ ಭಟ್





suuuuuuuuper sir
ಯಾವುದೇ ಕೃತಿ ಓದಿ ಮುಗಿಸಿದ ತಕ್ಷಣ ಅದೊಂದು ಹೊಸಲೋಕವನ್ನೂ, ಆ ಕ್ಷಣದ ಅದರದ್ದೇ ಆದ ಹೊಸ ಭಾವಪ್ರಾಪ್ತಿಯನ್ನೂ “ಟಪಕ್ಕಂತ’ ಕರುಣಿಸಬೇಕು. ಅದು ಇಲ್ಲಿದೆ. ಎಲ್ಲರೂ ತಮ್ಮತಮ್ಮ ದೇಹ ಎತ್ಲಾಗೆ ಹೊಂಟಿದೆ, ನಾವು ನಮಗೆ ತೋಚಿದ್ದು ಮಾಡಿದರೆ, ದೇಹ ತನಗೆ ತೋಚಿದ್ದು ಯಾಕೆ ಮಾಡುತ್ತದೆ, ದೇಹ –ಮನಸ್ಸು ಅಂದರೇನು- ಎಂದೆಲ್ಲ ಒಮ್ಮೆ ಘನಗಾಂಭೀರ್ಯದಿಂದ ಬಗ್ಗಿ ಹೊಟ್ಟೆ ನೋಡಿಕೊಂಡು ಮಿಸ್ಸುಮಾಡದೇ ಮೌನಾಚರಣೆ ಮಾಡಬೇಕಾಗಿ ಕೋರುತ್ತಾ ನನ್ನ ಪ್ರಾಸ್ತಾವಿಕ ಭಾಷಣ ಮುಗಿಸುತ್ತೇನೆ…excellent…
ಭಟ್ರು ಯಾವಾಗ್ಲೂ ಹಿಂಗೇನೇ….. ಜೋಗಿ ಸರ್ ಗೆ, ಭಟ್ರು ಮುನ್ನಡಿಗೆ, ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅಭಿನಂದನೆಗಳು….
jogi sir nimma yochane yojane digvijayiayagali
excellent… ಜೋಗಿ ಸರ್ ಗೆ, ಭಟ್ರು ಮುನ್ನಡಿಗೆ, ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅಭಿನಂದನೆಗಳು….