-ಎನ್ ಎಸ್ ಶ್ರೀಧರ ಮೂರ್ತಿ
ಇತ್ತೀಚೆಗೆ ನಮ್ಮನ್ನು ಅಗಲಿದ ಅ.ರಾ.ಸೇ ಎಂಬ ಮೂರು ಅಕ್ಷರಗಳಿಂದ ಜನಪ್ರಿಯರಾದ ಅಣಜಿ ರಾಮಪ್ಪ ಸೇತುರಾಮರಾಯರು ಹಾಸ್ಯ ಬರಹಗಾರರು ಎಂದೇ ಪ್ರಸಿದ್ಧರು. ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಆರಂಭಿಕ ಹಂತದಲ್ಲಿದ್ದಾಗ ಕೊರವಂಜಿಮೂಲಕ ಅದಕ್ಕೆ ಸರಿಯಾದ ಸ್ವರೂಪ ನೀಡಿದ ಹಿರಿಯರಲ್ಲಿ ಅವರೂ ಒಬ್ಬರಾದ ಈ ವಿಶ್ಲೇಷಣೆ ಸರಿಯಾದದ್ದೇ.ಆದರೆ ಅವರ ಕೊಡುಗೆ ಹಾಸ್ಯ ಸಾಹಿತ್ಯಕ್ಕೆ ಮಾತ್ರ ಸೀಮಿತವಾದದ್ದಲ್ಲ. ಇನ್ನೂ ವಿಸ್ತರಿಸಿ ಹೇಳುವುದಾದರೆ ಅವರ ಅಗಾಧವಾದ ಸಾಂಸ್ಕೃತಿಕ ಕೊಡುಗೆಗಳಲ್ಲಿ ಹಾಸ್ಯ ಸಾಹಿತ್ಯ ಒಂದು ಚಿಕ್ಕ ಭಾಗ ಮಾತ್ರ. ಅ.ರಾ.ಸೇ ಕನ್ನಡದ ಶ್ರೇಷ್ಠ ಪಂಡಿತರ ಶ್ರೇಣಿಯಲ್ಲಿ ನಿಲ್ಲಬಲ್ಲ ವಿದ್ವಾಂಸರು. ಆದರೆ ಆ ಪಾಂಡಿತ್ಯದ ಭಾರವನ್ನು ಹಾಸ್ಯದ ಮೂಲಕ ಇಳಿಸಿ ಹಗುರಾಗಿದ್ದರಿಂದ ಅಂತಹದೊಂದು ವಿಶ್ಲೇಷಣೆ ಅವರಿಗೆ ದೊರಕಲೇ ಇಲ್ಲ. ಕುಮಾರ ವ್ಯಾಸ ಭಾರತ,ಲಕ್ಷ್ಮೀಶನ ಜೈಮಿನಿ ಭಾರತ ಮತ್ತು ನಾಗರಸನ ಕನ್ನಡ ಭಗವದ್ಗೀತೆಯನ್ನು ಅವರು ಸಂಪಾದಿಸಿರುವ ಕ್ರಮ ಅವರಿಗಿದ್ದ ಆಳವಾದ ಓದಿಗೆ ಸಾಕ್ಷಿಯಾಗಿದೆ.
ನಾನು ಮೂವತ್ತು ವರ್ಷಗಳ ಹಿಂದೆ ಅ ರಾ ಸೇಯವರನ್ನು ಕಂಡಾಗ ಅವರು ಹಾಸ್ಯ ಸಾಹಿತಿ ಎಂದಷ್ಟೇ ತಿಳಿದುಕೊಂಡಿದ್ದೆ ಅವರ ಜೊತೆ ಮಾತಿಗೆ ತೊಡಗಿದಾಗ ಅನಂತ ಮೂರ್ತಿಯವರ ಸಂಸ್ಕಾರ ಕಾದಂಬರಿ ನಂಬಿಕೆ ಪ್ರಪಂಚದ ಬುನಾದಿಯನ್ನು ಅಲುಗಾಡಿಸಿದೆ ಎಂದು ಹೇಳಿದ್ದು ಮಾತ್ರವಲ್ಲದೆ ಭಾರತದಲ್ಲಿ ಶವ ಸಂಸ್ಕಾರದ ಸಂದರ್ಭದಲ್ಲಿ ಇಂತಹ ಶುಷ್ಕಚರ್ಚೆಗಳು ಎಂದಿಗೂ ನಡೆಯುವುದಿಲ್ಲ. ಕಾದಂಬರಿಯ ಮೂಲದ್ರವ್ಯವೇ ಶಿಥಿಲವಾಗಿದೆ ಎಂದಿದ್ದರು. ಅನಂತ ಮೂರ್ತಿಗಳು ಎಂದರೆ ಸರ್ವಶ್ರೇಷ್ಠ ಬರಹಗಾರರು ಎಂದು ನಾನು ನಂಬಿದ್ದ ಕಾಲ ಅದು. ಅ.ರಾ.ಸೇಯವರ ಈ ಮಾತುಗಳಿಂದ ನನಗೆ ಅಸಮಧಾನವೇ ಆಗಿತ್ತು. ಮುಂದೊಮ್ಮೆ ಅನಂತ ಮೂರ್ತಿಗಳ ಬಳಿ ಈ ವಿಷಯ ಪ್ರಸ್ತಾಪಿಸಿದ್ದಾಗ ಅವನು ನಾನು ಕಾದಂಬರಿ ಬರೆದಾಗಲೇ ಈ ಮಾತು ಹೇಳಿದ್ದ, ತಕರಾರು ಏನೇ ಇರಲಿ ಹಿ ಇಸ್ ಎ ಗ್ರೇಟ್ ಸ್ಕಾಲರ್, ಕುವೆಂಪು ಕಾದಂಬರಿಗಳ ಕುರಿತ ಅವನ ಓದು ಫೆಂಟಾಸ್ಟಿಕ್ ಆಗಿದೆ ಎಂದು ತಮಗೆ ಸಹಜವಾದ ಕಕ್ಕುಲತೆಯಲ್ಲಿ ಹೇಳಿದ್ದರು. ಆಗ ನನಗೆ ಅ.ರಾ.ಸೇ ನಾನು ಭಾವಿಸಿದ್ದಕ್ಕಿಂತಲೂ ದೊಡ್ಡ ಬರಹಗಾರರು ಎನ್ನುವುದು ಅರ್ಥವಾಯಿತು.
ಅಲ್ಲಿಂದ ಮುಂದೆ ಅವರ ಒಡನಾಟ ನನಗೆ ನಿರಂತರವಾಗಿ ದೊರಕುತ್ತಲೇ ಬಂದಿತು. ಆಗ ಅವರ ಪ್ರತಿಭೆಯ ಆಳ ವಿಸ್ತಾರಗಳು ಅರ್ಥವಾದವು. ಪಂಪನ ಪ್ರಸಿದ್ಧವಾದ ಚಾಗದ ಭೋಗದ ಗೇಯದ..ಎನ್ನುವ ಬನವಾಸಿ ವರ್ಣನೆಯ ಪ್ರಸ್ತಾಪ ಬಂದಾಗ ಅ.ರಾ.ಸೇ ಇದು ಸಂಸ್ಕೃತದ ಭ್ರಮರ ಗೀತೆಯ ಪ್ರಭಾವದಿಂದ ಮೂಡಿ ಬಂದಿದ್ದು ಎಂದಿದ್ದರು. ಇಂತಹ ವಿಶ್ಲೇಷಣೆಯನ್ನು ಎಲ್ಲಿಯೂ ಕೇಳಿರದ ನನಗೆ ಅಚ್ಚರಿಯೂ ಅಚ್ಚರಿ ಮುಂದೆ ಅ.ರಾ.ಸೇಯವರೇ ಭ್ರಮರಗೀತೆಯನ್ನು ಕನ್ನಡಕ್ಕೆ ತಂದರು. ಅದರ ಕೆಲ ಭಾಗಗಳನ್ನು ನಾನು ಪ್ರಕಟಿಸಿದೆ ಕೂಡ. ಕುಮಾರ ವ್ಯಾಸನ ಕುರಿತಂತೂ ಅ.ರಾ.ಸೇಯವರಿಗೆ ಅಪರಿಮಿತ ಪ್ರೀತಿ. ಅವರ ಭಾರತ ವ್ಯಾಖ್ಯಾನದ ಸೊಬಗನ್ನು ಬಲ್ಲವರೇ ಬಲ್ಲರು. ಅದರಲ್ಲಿಯೂ ಅಕ್ಷಯ ವಸ್ತ್ರ ಪ್ರಸಂಗವನ್ನು ಅವರು ವ್ಯಾಖ್ಯಾನಿದರೆ ಅದು ಮಹಾಭಾರತದ ಮಿತಿಯನ್ನು ದಾಟಿ ಹೆಣ್ಣಿನ ಶೋಷಣೆಯ ಕುರಿತ ವಿರಾಟ ಚಿತ್ರಣವಾಗಿ ಬಿಡುತಿತ್ತು. ಅವರು ಸಂಪಾದಿಸಿದ ಕುಮಾರವ್ಯಾಸ ಭಾರತ ಎಷ್ಟು ಶ್ರವಣ ಶುದ್ದವಾಗಿದೆಯೋ ಅವರ ಮುನ್ನುಡಿ ಕೂಡ ಅಷ್ಟೇ ಸೋದಾಹರಣವಾದದ್ದಾಗಿದೆ. ನಾಗರಸನ ಕನ್ನಡ ಭಗವದ್ಗೀತೆಯಲ್ಲಿ ವಿಶ್ವರೂಪ ದರ್ಶನವನ್ನು ಕಾಲದ ವರ್ಣನೆಯಾಗಿ ಅ.ರಾ.ಸೇ ಗ್ರಹಿಸಿದ ಕ್ರಮ ಗೀತಾ ಪರಂಪರೆಯನ್ನೇ ಹೊಸ ನೆಲೆಗೆ ಕರೆದುಕೊಂಡು ಹೋಗಬಲ್ಲಷ್ಟು ಶಕ್ತವಾಗಿತ್ತು. ಸಾಹಸ ಭೀಮ ವಿಜಯದಲ್ಲಿ ದ್ರೋಣಾಚಾರ್ಯರ ಅವಸಾನ ಸಂದರ್ಭದಲ್ಲಿ ಯುಧಿಷ್ಠರನೂ ಸುಳ್ಳು ಹೇಳುವ ಕಾಲ ಬಂದರೆ ನನ್ನ ಬದುಕಿಗೆ ಏನು ಅರ್ಥ ಎಂದು ದ್ರೋಣರು ಗ್ರಹಿಸಿದರು ಎಂದ ಅವರು ನೀಡಿದ್ದ ಅರ್ಥ ವಿವರಣೆ ಹೊಸ ಜಾಯಮಾನದ್ದಾಗಿತ್ತು.

ಅ.ರಾ.ಸೇಯವರ ಹಾಸ್ಯ ಸಾಹಿತ್ಯ ಓದಿ ನಕ್ಕು ಬಿಡುವಂತಹದಲ್ಲ. ಅದರಲ್ಲಿ ಆಳವಾದ ಜೀವನ ದರ್ಶನವಿರುತ್ತಿತ್ತು. ಬದುಕಿನ ನೋವಿನ ಒರತೆಯನ್ನು ಅವರು ನಗೆಯ ಮರೆಯಲ್ಲಿಟ್ಟು ಮನದಲ್ಲಿ ನಾಟಿಸಿ ಬಿಡುತ್ತಿದ್ದರು. ಕೊರವಂಜಿಯಲ್ಲಿ ಅವರು ನಿರಂತರವಾಗಿ ಬರೆದ ಹಾಸ್ಯ ಲೇಖನಗಳಲ್ಲಿ ಜಾಗತಿಕ ವಿದ್ಯಮಾನಗಳ ನೆಲೆಗಳಿದ್ದವು. ರಾಜಕೀಯ ವಿಡಂಬನೆಯನ್ನು ಅವರಷ್ಟು ಮೊನಚಾಗಿ ಅಷ್ಟೇ ವಿಚಾರ ಪೂರ್ಣವಾಗಿ ಬರೆದವರು ಅಪರೂಪ. ತಮ್ಮ ಹಾಸ್ಯ ಬರಹಗಳ ಕೇಂದ್ರವಾಗಿ ಮುಗಿಲ ಹಳ್ಳಿಯನ್ನುವ ಕಾಲ್ಪನಿಕ ಹಳ್ಳಿಯನ್ನು ಅವರು ಸೃಷ್ಟಿಸಿಕೊಂಡಿದ್ದರು. ನೆಲದಿಂದ ದೂರವಾದ ಆದರೆ ನೆಲಕ್ಕೆ ಆಧಾರವಾದ ಮುಗಿಲನ್ನು ಪರಿವರ್ತನೆಯ ರೂಪಕವಾಗಿ ಮಾಡಿಕೊಂಡ ಅವರು ವ್ಯಂಗ್ಯ ಕಟಕಿಗಳಿಗಿಂತ ಭಿನ್ನವಾದ ಹಾಸ್ಯವನ್ನು ಸೃಷ್ಟಿಸಿದ್ದರು. ಕೊರವಂಜಿಯ ನಿಲುಗಡೆ ಒಂದು ಮಾದರಿಯಲ್ಲಿ ಅವರ ಹಾಸ್ಯ ಬರಹಗಳಿಗಿದ್ದ ಸಾತತ್ಯಕ್ಕೆ ತಡೆಯನ್ನು ತಂದಿತು ಎನ್ನಬಹುದು. ಮುಂದೆ ಅವರು ಹಾಸ್ಯ ಬರಹಗಳನ್ನು ಬರೆದರಾದರೂ ತೀವ್ರತೆ ಕ್ರಮೇಣ ಅದರಲ್ಲಿ ಕರಗುತ್ತಾ ಬಂದಿತು.
ಅ.ರಾ.ಸೇಯವರ ಮಹತ್ದದ ಕೊಡುಗೆ ಎಂದರೆ ಬಾದರಾಯಣರು ರಚಿಸಿದರು ಎಂದು ನಂಬಲಾದ ಬ್ರಹ್ಮಸೂತ್ರಗಳನ್ನು ಕನ್ನಡಕ್ಕೆ ತಂದಿದ್ದು. ಇವುಗಳಿಗೆ ಪಂಥಗಳಿಗೆ ಅನುಗುಣವಾದ ವ್ಯಾಖ್ಯಾನಗಳು ಬಂದಿವೆ. ಆದರೆ ಅ.ರಾ.ಸೇ ಅವುಗಳಿಗಿರುವ ಧಮರ್ಾತೀತ ನೆಲೆಗೆ ಮಹತ್ವ ನೀಡಿ ಉಪಾಸನೆ ಎನ್ನುವುದು ಆತ್ಮೋನ್ನತಿಯ ಕಡೆಗೆ ಸಾಗುವ ಕ್ರಮವನ್ನು ತಾತ್ವಿಕವಾಗಿ ಹಿಡಿದಿದ್ದಾರೆ. ಅವರು ಅಧ್ಯಾತ್ಮ ಗ್ರಂಥಗಳ ರಚನೆ ಮಾಡಿದ್ದರೂ ಕರ್ಮಟರಾಗಿರಲಿಲ್ಲ ಇಂತಹದೊಂದು ವಿಶಾಲ ದೃಷ್ಟಿಕೋನ ಅವರಿಗಿದ್ದಿದ್ದರಿಂದಲೇ ಎಲ್ಲ ಧರ್ಮಗಳ ಪಾರಂಪರಿಕ ಪದ ಸಂಪತ್ತನ್ನು ವಿಶ್ಲೇಷಿಸುವ ‘ಪರಮಾರ್ಥ ಪದಕೋಶವನ್ನು ಸಂಪಾದಿಸುವುದು ಅವರಿಗೆ ಸಾಧ್ಯವಾಯಿತು. ಸದ್ಗುರು ಶಂಕರಲಿಂಗ ಭಗವಾನರ ಜೀವನ ಚಿತ್ರಣವನ್ನು ಶ್ರೀಗುರುಕಥಾಮೃತದಲ್ಲಿ ಅವರು ನೀಡಿದಾಗಲೇ ಇಂತಹದೇ ತಾತ್ವಿಕತೆಯನ್ನು ರೂಪಿಸಿಕೊಂಡಿದ್ದಾರೆ. ಅ.ರಾ.ಸೇಯವರು ಬೇಂದ್ರ ಕಾವ್ಯದಲ್ಲಿನ ಅಧ್ಯಾತ್ಮಿಕ ನೆಲೆಗಳನ್ನೂ ವಿಭಿನ್ನವಾಗಿ ವಿಶ್ಲೇಷಿಸಿದ್ದರು. ಬೇಂದ್ರಯವರ ಪ್ರಸಿದ್ದವಾದ ಬೆಳಗುಕವಿತೆಯಲ್ಲಿನ ‘ಇದು ಬರಿ ಬೆಳಗಲ್ಲೂ ಅಣ್ಣ ಎನ್ನುವ ರೂಪಕವನ್ನು ಅವಧೂತ ಗೀತೆಯ ಅವಿಭಜಿತ ಆಕಾಶಕ್ಕೆ ಹೋಲಿಸಿ ಬ್ರಹ್ಮಾನಂದ ಸ್ಥಿತಿಯಾಗಿ ವಿಶ್ಲೇಷಿಸಿದ್ದರು. ಅರವಿಂದರು ಹೇಳುವ ಉಷಾಲೋಕವನ್ನು ಈ ಕವಿತೆಯಲ್ಲಿ ಕಂಡ ಅ.ರಾ.ಸೇಯವರು ಹೊಸ ನೆಲೆಗೆ ಚಿಂತನೆಯನ್ನು ತಂದಿದ್ದರು. ಅ.ರಾ.ಸೇಯವರಿಗಿದ್ದ ಅಗಾಧ ಪಾಂಡಿತ್ಯಕ್ಕೆ ಹೋಲಿಸಿದರೆ ಅವರು ಬರೆದಿದ್ದು ಅಲ್ಪ ಮಾತ್ರ. ಕೊನೆಯ ದಿನಗಳಲ್ಲಿ ಅವರ ದೇಹ ಶಿಥಿಲವಾಗಿದ್ದರೂ ಚಿಂತನೆಗಳು ಪ್ರಖರವಾಗಿದ್ದವು. ಕೊನೆಯ ಐದು ವರ್ಷಗಳಲ್ಲಿ ನಿರಂತರವಾಗಿ ಅವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿದ್ದು ನನ್ನ ಬದುಕಿನ ಸುಕೃತವೇ ಸರಿ!






ಹಿರಿಯರಾದ ಅ.ರಾ.ಸೇ. ಅವರು ಬಾಲ್ಯದ ದಿನಗಳಲ್ಲಿಯೇ ನನಗೆ ಪರಿಚಿತರಾಗಿದ್ದವರು. ಅವರ ಊರಾದ ಭರಮಸಾಗರದಲ್ಲಿ ನಮ್ಮ ತಂದೆ ಕೆಲಸ ಮಾಡುತ್ತಿದ್ದರು.(1958-61) ಕುಮಾರವ್ಯಾಸನು ಮೊದಲು ನನ್ನ ಕಿವಿದೆರೆಗೆ ಬಂದಿದ್ದು ಶ್ರೀ ಛಾಯಣ್ಣನನವರ ಗಮಕ ಮತ್ತು ಅ.ರಾ.ಸೇ. ಅವರ ವ್ಯಾಖ್ಯಾನದ ಮೂಲಕವೇ. ಮರೆಯಲಾಗದ ಅನುಭವ.
ಅವರು ಕನ್ನಡದ ಅತ್ಯಂತ ಶ್ರೇಷ್ಠ ವಿಡಂಬನಕಾರರು ಮತ್ತು ಹಾಸ್ಯಕವಿಗಳ ಸಾಲಿನಲ್ಲಿ ಮೊದಲಿನವರು. ರಾಜಕಾರಣ, ಕ್ರೀಡೆ, ತಾರುಣ್ಯದ ಲಹರಿಗಳು ಯಾವುದೂ ಅವರ ಪ್ರತಿಭೆಯ ಮೂಸೆಯಲ್ಲಿ ಕರಗಿದಾಗ ಸಾಹಿತ್ಯವಾಗುತ್ತಿದ್ದವು. ಅವರು ಸೃಷ್ಟಿಸಿದ ‘ಮುಗಿಲಹಳ್ಳಿ’, ಚಿತ್ರದುರ್ಗ ಮತ್ತು ದಾವಣಗೆರೆಗಳ ಪ್ರಾಂತ್ಯದ ಜೀವನಕ್ರಮ ಮತ್ತು ಆಡುಮಾತುಗಳನ್ನು ಅಮರವಾಗಿಸಿತು. ಪದ್ಯರಚನೆಯಲ್ಲೂ ಗದ್ಯದಷ್ಟೇ ಪ್ರತಿಭೆ ಇತ್ತು.
ಶ್ರೀಧರಮೂರ್ತಿಯವರು ಅವರ ಬರವಣಿಗೆಗಳ ‘ವಾಚಿಕೆ’ಯನ್ನು ತಂದರೆ ಬಹಳ ಚೆನ್ನಾಗಿರುತ್ತದೆ. ತರಲಿ.
ಈ ಹಿರಿಯರಿಗೆ ನನ್ನ ಶ್ರದ್ಧಾಂಜಲಿ.
ಮಾಹಿತಿಪೂರ್ಣವಾದ ಲೇಖನಕ್ಕೆ ಧನ್ಯವಾದಗಳು.
ಲೇಖನ ಚೆನ್ನಾಗಿದೆ. HSR Sir ಛಾಯಣ್ಣನವರನ್ನು ಸ್ಮರಿಸಿದ್ದು ಔಚಿತ್ಯಪೂರ್ಣವಾಗಿದೆ. ಅವರ ಗಮಕ ಸಣ್ಣಂದಿನಲ್ಲಿ ಕೇಳಿದ್ದರೂ ಇಂದಿಗೂ ನೆನಪಾಗುತ್ತಲೇ ಇರುತ್ತದೆ.