’ಯಾವ ಮೋಹನ ಮುರಳಿ ಕರೆಯಿತೊ..’ – ಬಿ ವಿ ಭಾರತಿ

­­­­­­­­­­­ಹಾಗೊಂದು ಸಂಜೆ … ಮತ್ತೊಂದು ಬೆಳಗು …

– ಭಾರತಿ ಬಿ ವಿ

ಅಲ್ಲಿ ಮೂಲೆಯಲ್ಲಿ ಅವನ ಕಾರು ತಿರುಗುವುದು ಕಂಡಿತು. ಕೂತಿದ್ದವಳು ಎದ್ದು ನಿಂತಳು. ಅವನು ಬಾಗಿ ಕಾರಿನ ಬಾಗಿಲನ್ನು ತೆಗೆದ. ಆ ಕಾರು ಕೂಡಾ ಯಾಕೋ ‘ಅವನದ್ದು’ ಅನ್ನಿಸಿದ ಕೂಡಲೇ ಜಾಸ್ತಿ ಖುಷಿಯಲ್ಲಿ ಒಳಗೆ ಹೆಜ್ಜೆಯಿಟ್ಟಳು. ಪಕ್ಕದಲ್ಲಿ ಡ್ರೈವಿಂಗ್ ಸೀಟಿನಲ್ಲಿದ್ದ ಅವನು ಎಷ್ಟೊಂದು ಹತ್ತಿರದಲ್ಲಿದ್ದ. ಅವಳಿಗೇ ಗೊತ್ತಿಲ್ಲದ ಹಾಗೆ ಪಕ್ಕದಲ್ಲಿದ್ದವನ ಕೈ ಹಿಡಿದಳು. ಕತ್ತಿಯಂಥ ಕಣ್ಣು ಪಕ್ಕದಲ್ಲಿ … ಅವನ ಮುಖವನ್ನು ಪೂರ್ತಿಯಾಗಿ ಸವರಿದಳು. ಎಷ್ಟೊಂದು ‘ನನ್ನದು’ ಅನ್ನಿಸಿಬಿಟ್ಟಿತು ಹಾಳಾದ್ದು. ಆ ಕಣ್ಣು, ಮೂಗು, ಬಾಯಿ ಎಲ್ಲವನ್ನೂ ನೇವರಿಸಿದಳು.
ಎಲ್ಲಿಂದ ಬಂತು ಆ ಉತ್ಕಟತೆ? ಅವಳು ನಿಜಕ್ಕೂ ಅವಳಾಗಿರಲೇ ಇಲ್ಲ. ಎಲ್ಲಿಗೆ ಹೋಗೋಣ ಅಂತ ಅವನು ಕೇಳಿದರೆ ಅವಳು ಎಲ್ಲಿಗೋ ಒಂದು ಕಡೆ … ನಿನಗಿಷ್ಟ ಬಂದ ಕಡೆ .. ಅಂದಳು. ಅವನು ಮೌನವಾಗಿ ಮುಂದೆ ಓಡಿಸಿದ. ಅವಳು ಒಂದಿಡೀ ಜನ್ಮದ ಮಾತೆಲ್ಲ ಆಡುತ್ತ ಕೂತಳು. ನೀನು ಜಗಳಗಂಟ ಅಂದಳು ನಗುತ್ತಾ. ತಮ್ಮ ಮಧ್ಯೆ ನಡೆದ ಎಷ್ಟೊಂದು ಜಗಳಗಳನ್ನೆಲ್ಲ ನೆನಪಿಸಿಕೊಳ್ಳುತ್ತಾ ನೀನು ಕಡಿಮೆಯಿಲ್ಲ ಅಂದ. ಛೇ! ನಿನ್ನಂಥವನ ಜೊತೆ ಸುಮ್ಮನೆ ಜಗಳವಾಡುತ್ತೇನಲ್ಲ ನಾನು ಅಂತ ನಾಟಕವಾಡಿದಳು. ಅವನು ಸಾಕು ನಿನ್ನ ಬಡಿವಾರ ಅನ್ನುವ ಹಾಗೆ ನಗುತ್ತಾ ನೋಡುತ್ತಿದ್ದ. ನೀನು ತುಂಬ ಮುಕ್ತವಾಗಿ ಮಾತಾಡುತ್ತಿ ಅಂದ. ನಾನಿರೋದೇ ಹೀಗಲ್ಲವಾ? ಯಾವತ್ತು ಬೇರೆ ಥರ ಇದ್ದೆ ಅಂದುಕೊಂಡಳು. ಅಷ್ಟರಲ್ಲಿ ಊರಾಚೆಯ ಮೌನ ಶುರುವಾಯ್ತು. ಗಾಳಿಯ ಪಿಸು ಮಾತು ಶುರುವಾಯ್ತು. ಸಂಜೆಯಲ್ಲಿ ಬಳಲಿದ್ದ ಆಕಾಶ ಕಂಡಿತು…ಎಲ್ಲಿಗೆ ಹೋಗುತ್ತಿದ್ದಾನೆ ಅಂತಲೂ ಕೇಳಬೇಕೆನ್ನಿಸಲಿಲ್ಲ…ಎಲ್ಲಿಗೋ ಒಂದು…ಯಾವನಿಗೆ ಬೇಕು ಈ ಜಗತ್ತಿಗೆ ಸೇರಿದ ಸಂಗತಿಗಳೆಲ್ಲ?
ಇಲ್ಲೊಂದು ಅದ್ಭುತ ಜಾಗ ಇದೆ, ಹೋಗೋಣ? ಅಂದ. ಅವನ ಪಕ್ಕ ಕೈ ಹಿಡಿದು ಕೂತವಳಿಂದ ಉತ್ತರ ಬರಲಿಲ್ಲ. ಅವನು ಆ ಕಡೆ ಗಾಡಿ ಓಡಿಸಿದ. ಅವನ ಕೈ ಹಿಡಿದು ಒಳಗೆ ಕಾಲಿಟ್ಟ ಜಾಗ ಯಾಕಷ್ಟು ಸುಂದರವಾಗಿತ್ತು ಅಥವಾ ಅವನು ಜೊತೆಗಿದ್ದ ಅಂತ ಹಾಗನ್ನಿಸಿತೋ?! ಅವನ ತೋಳನ್ನು ಬಿಡದ ಹಾಗೆ ಹಿಡಿದಿದ್ದಳು ಅವಳು. ಕಚ್ಚಿಕೊಂಡ ಹಾಗೆ ಒಳಗೆ ಹೆಜ್ಜೆ ಹಾಕಿದರು ರಾಶಿ ರಾಶಿ ಮರಗಳ ಕಡೆಗೆ. ಅಲ್ಲಿ ಇಲ್ಲಿ ಪುಟ್ಟ ಪುಟ್ಟ ಮಂಟಪ. ಒಂದು ಮಂಟಪದ ಕೆಳಗಿದ್ದ ಬೆತ್ತದ ಕುರ್ಛಿಯಲ್ಲಿ ಕೂತರು ಇಬ್ಬರೂ. ಅವಳಿಗೆ ಟೇಬಲ್ಲಿನ ಒಂದು ಭಾಗದಲ್ಲಿ ಕೂರುವುದು ಅವನಿಂದ ಎಷ್ಟೊಂದು ದೂರ ಅನ್ನಿಸಿ ಅವನ ಛೇರಿಗೆ ಹತ್ತಿರಕ್ಕೆ ಎಳೆದುಕೊಂಡು ಕೂತಳು. ಟೀ ಸಾಕು ಅಂತ ನಿರ್ಧರಿಸಿ ಆರ್ಡರ್ ಕೊಟ್ಟ ಮೇಲೆ ಆ ಹುಡುಗ ಮರಗಳ ಮರೆಯಲ್ಲೆಲ್ಲೋ ಮಾಯವಾದ. ಮತ್ತೆ ಅವರಿಬ್ಬರೇ. ಅವಳು ಅಂತೂ ಕೊನೆಗೂ ನಿನ್ನ ನೋಡಿದೆ ಅಂದಳು. ಅವನು ಸುಮ್ಮಗೆ ಹೂಂ ಅಂದ. ನನಗೂ ನಿನ್ನ ನೋಡೋದಿತ್ತು ಅನ್ನುತ್ತಾನೇನೋ ಅಂತ ಕಾದಳು ಹುಚ್ಚಿ! ಅವನು ಅನ್ನಲಿಲ್ಲ…

ಬಿಳಿಯ ಮೇಲೆ ನೀಲಿ ಗೀರಿದ್ದ ಶರ್ಟಿನ ಅರ್ಧವನ್ನು ಕೆಂಪು ಸ್ವೆಟರ್ ಮುಚ್ಚಿತ್ತು. ಅವನು ಒಂಥವಾ ಜಗತ್ತಿನೆಡೆಗೆ ದಿವ್ಯ ನಿರ್ಲಕ್ಷ್ಯ ಇರುವವನ ಹಾಗೆ ಕೂತಿದ್ದ. ಅಯ್ಯೋ! ಯಾಕೋ ಅವನ ಕಣ ಕಣವನ್ನೂ ಆರಾಧಿಸುವ ಹಾಗಾಗಿ ಬಿಟ್ಟಿತು ಆ ಘಳಿಗೆಯಲ್ಲಿ. ಅಷ್ಟರಲ್ಲಿ ಟೀ ಎದುರು ಬಂದಿತು. ಸಕ್ಕರೆ, ಟೀ, ಹಾಲು ಎಲ್ಲ ಬೇರೆ ಬೇರೆ ಇದ್ದ ಟ್ರೇ ನೋಡುತ್ತಾ ನನಗೆ ಬ್ಲ್ಯಾಕ್ ಟೀ ಅಂದ. ಸಕ್ಕರೆ ಬೇಡ ಅಂದ. ಮತ್ತಿನ್ನೇನು ಟೀ ಬೆರೆಸುವುದು ನಿನಗೆ ಅಂತ ನಗುತ್ತಾ ಕರ್ರನೇ ಟೀ ಇದ್ದ ಕಪ್ ಅವನ ಕಡೆ ಚಾಚಿದಳು. ಆ ನಿಮಿಷಕ್ಕೆ ಅನ್ನಿಸಿತು ಇವನ ಜಗತ್ತೇ ಎಷ್ಟು ಸುಲಭ, ಹೀಗೇ ಇರುವುದು ಒಳ್ಳೆಯದೇನೋ. ಹಾಲು, ಸಕ್ಕರೆ, ಟೀ ಎಲ್ಲ ಬೆರೆಸಿ, ಸಕ್ಕರೆ ಕಲಕಿ, ಎಲ್ಲವೂ ಹದದಲ್ಲಿದ್ದರೆ ಕುಡಿಯುವ ಟೀ ಅದ್ಭುತ ಅನ್ನಿಸುತ್ತದೆ. ಆದರೆ ಹದದಲ್ಲಿ ಇರದಿದ್ದರೆ? ಮತ್ತಿಷ್ಟು ರಿಪೇರಿ ಕೆಲಸ ಶುರುವಾಗುತ್ತೆ. ಮತ್ತಿಷ್ಟು ಬೆರೆಸಿ, ಸೇರಿಸಿ, ಕಲಕಿ … ಅಷ್ಟರಲ್ಲಿ ಬಿಸಿ ಕಡಿಮೆಯಾಗಿ ಕೊನೆಗೆ ಟೀ ಕುಡಿದ ಖುಷಿ ಉಳಿಯುವುದೇ ಇಲ್ಲ. ಬದಲಿಗೆ ಬರೀ ಟೀ ಕುಡಿದರೆ ಒಳ್ಳೆಯದು. ಬದುಕಲ್ಲಿ ಎಲ್ಲವೂ ಹಾಗಿದ್ದರೇ ಒಳ್ಳೆಯದು, unassuming ಅನ್ನುವ ಥರ ಅನ್ನಿಸಿಬಿಟ್ಟಿತು. ಅಷ್ಟರಲ್ಲಿ ಸಣ್ಣಗೆ ಮಳೆ ಹನಿ ಶುರುವಾಯ್ತು. ಮಳೆಗಾಲವಾದರೂ ಒಂದು ಸಣ್ಣ ಮೋಡದ ತುಣುಕೂ ಇಲ್ಲದ ಆಕಾಶದಿಂದ ಸಣ್ಣ ಸಣ್ಣ ತುಂತುರು ಬೀಳಲು ಶುರುವಾಯ್ತು. ಭ್ರಮೆ?? ಕೇಳಿದಳು. ಅವನು ನಗುತ್ತಾ ಇಲ್ಲ ನಿಜಕ್ಕೂ ಮಳೆ ಅಂದ. ಅವಳು ಇರುಚಲು ಬೀಳದಿದ್ದರೂ ಬೀಳುತ್ತೆ ಅಂತ ನೆಪ ಹಾಕುತ್ತಾ ಛೇರ್ ಅವನ ಪಕ್ಕಕ್ಕೆ ಮತ್ತಿಷ್ಟು ಎಳೆದು ಕೂತಳು. ಮಳೆ ಸ್ವಲ್ಪ ಜೋರಾಯಿತು…
ನಿನ್ನದೆರಡು ಫೋಟೋ? ಅಂದಳು. ಅವನು ಬೇಡ ಅನ್ನುತ್ತಾನೇನೋ ಅಂದುಕೊಂಡಳು. ಹಾಗನ್ನಲಿಲ್ಲ ಅವನು. ಅವನು ಮತ್ತು ಅವನ ಕನಸುಗಣ್ಣು ಎರಡೇ ಸೆಕೆಂಡುಗಳಲ್ಲಿ ಅವಳ ಮೊಬೈಲಿನಲ್ಲಿ ಸೇರಿಕೊಂಡಿತು. ಮಂಟಪದ ಮೇಲೆ ಬೆಳೆದಿದ್ದ ಬಳ್ಳಿಗಳಿಂದ ನೀರು ತೊಟ್ಟಿಕ್ಕುವ ಶಬ್ದ ಮಾತ್ರ. ಕೆಲ ಕಾಲ ಮಾತಿಲ್ಲದೇ ಕೂತಿದ್ದರು. ಕಾಲ ಇಲ್ಲೇ freeze ಆಗಲಿ ಅನ್ನಿಸಿತು ಆ ಕ್ಷಣಕ್ಕೆ. ಮತ್ತಿಷ್ಟು ಟೀ? ಅವ ತಲೆಯಾಡಿಸಿದ. ಮತ್ತೊಂದು ಟೀ ಸುರಿದು ಎದುರಿಗಿಟ್ಟಳು. ಈಗ ಅವಳೂ ಕಪ್ಪು ಟೀ ಸುರುವಿಕೊಂಡಳು. ಈಗ ನಾನೂ unassuming! ಅಂತ ತನಗೆ ತಾನೇ ಅಂದುಕೊಳ್ಳುತ್ತಾ, ಅಭ್ಯಾಸವಿಲ್ಲದ್ದಕ್ಕೆ ಮುಖ ಚೂರು ಸಿಂಡರಿಸಿ ಟೀ ಹೀರುತ್ತಾ ಮಾತಾಡುತ್ತಲೇ ಕೂತಿದ್ದಳು. ಕತ್ತಲಾಗುತ್ತಾ ಹೋಯಿತು. freeze ಆಗದ ಕಾಲವನ್ನು ಕ್ರೂರಿ! ಅಂತ ಶಪಿಸಿದಳು. ಇಬ್ಬರೂ ಮಳೆಯಲ್ಲೇ ಎದ್ದು ನೆನೆಯುತ್ತ ಹೊರಟರು.

ನಾಳೆ ಬೆಳಿಗ್ಗೆ? ಸಿಗುತ್ತೀಯಾ? ಅಂದ ಅವ. ಇಲ್ಲ ಅನ್ನಲು ಅವಳಿಗೇನು ಕಾರಣವಿತ್ತು? …ತಲೆಯಾಡಿಸಿದಳು ಒಪ್ಪಿಗೆ ಅನ್ನುವ ಹಾಗೆ. ವಾಪಸ್ ಬರುವಾಗ ಸುತ್ತ ಕಗ್ಗತ್ತಲು. ಅವ ಇದ್ದಕ್ಕಿದ್ದ ಹಾಗೆ ಕಾರು ನಿಲ್ಲಿಸಿ ಅವಳನ್ನು ಬಾಚಿ ತಬ್ಬಿದ. ಅವಳು ಮರುಮಾತಿಲ್ಲದೇ ಅವನ ತೋಳಲ್ಲಿ ಸೇರಿದಳು. ಬಿಗಿದುಕೊಂಡಂತೆ ಕಾಣುವ ಅವನ ತುಟಿಗಳು ಅವಳ ತುಟಿಯ ಜೊತೆ ಸೇರಿದವು. ಈಗ ಕಾಲ freeze ಆಗಿದೆ ಅನ್ನಿಸಿತು ಅವಳಿಗೆ. ಎಷ್ಟು ಹೊತ್ತು ಕಳೆದಿತ್ತು? ಸೆಕೆಂಡುಗಳೋ? ನಿಮಿಷಗಳೋ? ಘಂಟೆಗಳೋ? ಯುಗಗಳೋ?! ಥೂ! ಯಾರಿಗೆ ಬೇಕು ಇವೆಲ್ಲ ಬೇಡದ ಲೆಕ್ಕಾಚಾರಗಳು ಅಂತ ತಲೆ ಕೊಡವಿ ಅವನಲ್ಲಿ ಮುಳುಗಿದಳು …ಅವನು ಆ ಬಳಿಕ ಹೊರಟಿದ್ದು, ಅವಳನ್ನು ಮೊದಲ್ಲಿದ್ದಲ್ಲಿಗೆ ಇಳಿಸಿದ್ದು, ಮತ್ತೆ ಹೊರಟಿದ್ದು ಯಾವುದೂ ಅವಳ ತಲೆಯಲ್ಲಿ register ಆಗಲೇ ಇಲ್ಲ ..!
ಅವತ್ತು ರಾತ್ರಿ ಅರೆ ನಿದ್ರಾಹೀನ ಸ್ಥಿತಿ. ಈ ರೀತಿ ಮಲಗಿ ಸಮಯ ಕೊಲ್ಲುವ ಬದಲು ಎದ್ದು ರೆಡಿ ಆಗುವುದೇ ಒಳ್ಳೆಯದು ಅನ್ನಿಸಿತು. ಇದ್ಯಾಕೆ ಬೆಳಗು ಆಗ್ತಲೇ ಇಲ್ಲವಲ್ಲ ಅನ್ನಿಸಿ ವಾಚ್ ಕಟ್ಟದ ಅವಳು ಹದಿನೈದು ಸಲ ಮೊಬೈಲ್ ತೆಗೆದು ನೋಡೇ ನೋಡಿದಳು. ಒಂದು ನಿಮಿಷಕ್ಕೆ ಒಂದು ನಿಮಿಷ ಮಾತ್ರ ಓಡುತ್ತಿತ್ತು ಕಾಲ! ಅಂತೂ ಕೊನೆಗೊಮ್ಮೆ 5 ಘಂಟೆಯಾದಾಗ ಅಬ್ಬಾ! ಅನ್ನಿಸಿ ತಯಾರಿ ಶುರು ಮಾಡಿದಳು. ತಲೆ ಸ್ನಾನ ಮಾಡಿ ನೀರು ತೊಟ್ಟಿಕ್ಕುವ ಕೂದಲನ್ನು ಗಾಳಿಗೆ ಬಿಟ್ಟು ಹಾಗೇ ರೋಡಿಗಿಳಿಯುವಷ್ಟರಲ್ಲಿ ಅವನು ಎದುರಾದ. ಮುಂಜಾವಿನ ನಿದ್ದೆಯಿಂದೆದ್ದು ಬಂದ ಅವ ಫ್ರೆಷ್ ಆಗಿ ಕಂಡ. ರಸ್ತೆಯುದ್ದಕ್ಕೂ ಉದುರಿದ ಹಳದಿ ಹೂಗಳ ಕಾರ್ಪೆಟ್ ಮೇಲೆ ಹೆಜ್ಜೆಯೂರುತ್ತಾ ಅವನ ಕಡೆ ನಡೆದಳು.
ಪಕ್ಕದಲ್ಲಿ ಕುಳಿತ ಕೂಡಲೇ ನೆನ್ನೆಯಂತೆ ಎಲ್ಲಿಗೆ ಅಂತ ಕೇಳದೇ ಯಾವುದೋ ರಸ್ತೆಯಲ್ಲಿ ಹೊರಟ. ಅವಳು ನೆನ್ನೆಯಂತೆ ಅವನಲ್ಲೇ ತಲ್ಲೀನಳು. ಯಾವ ರಸ್ತೆ ಅಂತೆಲ್ಲ ನೋಡಲೂ ಹೋಗಲಿಲ್ಲ. ಅವಳ ಒದ್ದೆ ಒದ್ದೆ ಕೂದಲಲ್ಲಿ ಕೈ ಆಡಿಸಿದ. ಪೂರಾ ಹಸಿ ಹಸಿ ಇದ್ದ ಹಿಂದಲೆಯ ಕೂದಲನ್ನು ಹಿಡಿದು ಸಣ್ಣಗೆ ಜಗ್ಗಿದ. ಅವಳು ಸಣ್ಣಗೆ ನಡುಗಿದಳು. ಆದರೂ ಕೊಸರಿಕೊಳ್ಳುವ ಗೋಜಿಗೇನೂ ಹೋಗಲಿಲ್ಲ. ಅವಳಿಗೆ ಮೊದಲ ಬಾರಿಗೆ ತಾನು ಹೆಣ್ಣು ಅನ್ನಿಸಿತು. ಆರಾಧನೆಯಿಂದ ಅವನ ಕಡೆ ನೋಡಿದಳು. ಉಹೂ, ಈ ಆರಾಧನೆ ನನಗೆ ಇಷ್ಟವಾಗುವುದಿಲ್ಲ. ನೀನು ನನ್ನನ್ನು ಒದ್ದರೆ ಮಾತ್ರ ನಾನು ನಿನ್ನ ಪಾದದ ಬಳಿ ಬಿದ್ದಿರುತ್ತೇನೆ. ನೀನು ಶರಣಾಗತಳಾದರೆ ನನಗೆ ಶುದ್ಧ ಬೋರ್ ಅನ್ನಿಸುತ್ತೀಯ ಅಂದ. ಅವನ ವಿಚಿತ್ರವನ್ನೆಲ್ಲ ಕಂಡಿದ್ದ ಅವಳಿಗೆ ಈ ಮಾತು ಅಸಹಜ ಅನ್ನಿಸಲೇ ಇಲ್ಲ. ಈ ದಿನದಂತೆ ನಾಳೆಯಿಲ್ಲದ ಈ ವ್ಯಕ್ತಿ ಯಾವಾಗಲೂ ಕುತೂಹಲ ಹುಟ್ಟಿಸುತ್ತಾನೆ, ಆಸಕ್ತಿ ಹಿಡಿದಿಡುತ್ತಾನೆ ಅಂದುಕೊಂಡಳು. ಅವನು ಊರಾಚೆ ಹೋದ … ಹೋದ .. ಹೋದ … ಹೋಗುತ್ತಲೇ ಇದ್ದ. ಇನ್ನೂ ಪೂರ್ತಿ ಬೆಳಕು ಕೂಡಾ ಹರಿಯದ ಮಬ್ಬು ಬೆಳಕಿನಲ್ಲಿ ಜನಸಂಚಾರ ಶುರುವಾಗಿತ್ತು. ರಸ್ತೆ ಅಂಚಿಗಿದ್ದ ಯಾವುದೋ ಗೂಡಂಗಡಿಯ ಸುತ್ತ ಹಳ್ಳಿ ಜನ ಸೇರಿ ಕಾಫಿ ಹೀರುತ್ತ ನಿಂತಿದ್ದರು. ಅವನೂ ನಿಲ್ಲಿಸಿ ಎರಡು ಟೀ ಅಂದ. ಆ ಟೀ ಆ ಛಳಿಗೋ, ಅವನ ಪಕ್ಕ ಕೂತು ಕುಡಿದದ್ದಕ್ಕೋ ಜಗತ್ತಿನ ಅತೀ ಸರ್ವ ಶ್ರೇಷ್ಠ ಟೀ ಅನ್ನಿಸಿತು!
ಮತ್ತೆ ಪ್ರಯಾಣ ಶುರುವಾಯ್ತು. ಅವನು ಯಾವುದೋ ತೋಟದ ಮಧ್ಯೆ ಇದ್ದ ಸಣ್ಣ ರಸ್ತೆಗೆ ಕಾರನ್ನು ತಿರುಗಿಸಿದ. ಎಳೆ ಬಿಸಿಲಿನಲ್ಲಿ ಪಕ್ಕ ಕೂತವಳನ್ನು ನೋಡುತ್ತಾ ನೀ ಚೆಂದ ಇದ್ದೀ ಅಂದ. ತಾನು ತುಂಬ ಚಂದವೇನೂ ಇಲ್ಲ ಅಂತ ಗೊತ್ತಿದ್ದ ಅವಳು ಸುಮ್ಮನೆ ನಕ್ಕಳು. ಅವಳ ನಗು ನೋಡಿ ಅವನು ಮತ್ತಿಷ್ಟೂ ಒತ್ತಿ ನಿಜ ಕ್ಕೂ ಮಾರಾಯ್ತಿ .. ನೀ ಚಂದವಿದ್ದೀ. ಯಾಕೆ ಈವರೆಗೆ ಯಾರೂ ಹಾಗೆ ಹೇಳಿಲ್ಲವಾ? ಅಂದ. ಅವಳು ನಗುತ್ತಲೇ ಅಡ್ಡಡ್ಡ ತಲೆಯಾಡಿಸಿದಳು ಇಲ್ಲ ಅನ್ನುವ ಹಾಗೆ. ಅವರ ಕಣ್ಣು ಸರಿಯಿಲ್ಲ ಅಂದ ತುಂಬ ಪ್ರಾಮಾಣಿಕತೆಯನ್ನು ಕಷ್ಟ ಪಟ್ಟು ತಂದುಕೊಳ್ಳುವ ಧಾಟಿಯಲ್ಲಿ. ಅವಳು ಇನ್ನಿಷ್ಟು ತುಂಟತನದಿಂದ ನಕ್ಕಳು ಸಾಕು ಮಾರಾಯ ನಿನ್ನ ಈ ತರಲೆಯೆಲ್ಲ ಅನ್ನುವ ಹಾಗೆ. ಅವ ಮಾತ್ರ ನಕ್ಕರೆ ತಾನು ಆಡಿದ್ದು ಸುಳ್ಳು ಅಂತ ಗೊತ್ತಾಗಿ ಬಿಡುತ್ತದಲ್ಲ ಅನ್ನುವ ಚಿಂತೆಗೆ ಬಿದ್ದವನ ಹಾಗೆ ಜಗತ್ತಿನಲ್ಲೇ ಇಲ್ಲದ ಗಾಂಭೀರ್ಯವನ್ನೆಲ್ಲ ಕಣ್ಣಲ್ಲಿ ಆರೋಪಿಸಿಕೊಂ­­­­ಡು ಕೂತಿದ್ದ. ಅದನ್ನು ಕಂಡು ಅವಳಿಗೆ ಇನ್ನಿಷ್ಟು ನಗು ಬಂತು … ಕದ್ದು ಸಕ್ಕರೆ ತಿಂದ ಮುದ್ದು ಮಗುವಿನ ಗಾಂಭೀರ್ಯದ ಮುಖ ನೋಡುತ್ತ ಕೂತಳು …
ಇದ್ದಕ್ಕಿದ್ದ ಹಾಗೆ ಅವ ಡ್ರೈವ್ ಮಾಡುವುದು ನಿಲ್ಲಿಸಿ ಕಾರನ್ನು ಆಫ್ ಮಾಡಿ ಅವಳ ತೊಡೆಯ ಮೇಲೆ ಮಲಗಿದ. ಅವಳಿಗೆ ಮಡಿಲಲ್ಲಿ ಮಿಂಚು ಬಿದ್ದಿದೆಯೇನೋ ಅನ್ನಿಸಿತು ಆ ಕ್ಷಣಕ್ಕೆ. ತುಂಬ ಪ್ರಖರ! ಮಾತಾಡದೇ ಅವನನ್ನು ಹೊಟ್ಟೆಗೆ ಒತ್ತಿಕೊಂಡಳು. ಆ ಕ್ಷಣಕ್ಕೆ ತನ್ನ ಮಗುವಿನ ಹಾಗೆ ಅನ್ನಿಸಿದ ಅವಳಿಗೆ. ಅವನ ಗಾಂಭೀರ್ಯವೂ ಸುಮ್ಮನೆ, ಸುಮ್ಮನೆ … ಈ ಮಗುವಿನ ಮುದ್ದು ಮುದ್ದೇ ನಿಜದ್ದು ಅನ್ನಿಸಿ ಬಿಟ್ಟಿತು. ಅವನು ತೊಡೆಯ ಮೇಲೆ ಮಲಗಿಯೇ ಮಲಗಿದಂತೆ ಮುದ್ದುಗರೆದ. ಮಧ್ಯೆ ಮಧ್ಯೆ ಮುದ್ದಿಸಿದ. ಅವಳು ಇಡಿಯಾಗಿ ಅವನಲ್ಲಿ ತಲ್ಲೀನಳಾದಳು. ತಲೆಯ ಕೂದಲಲ್ಲಿ ಬೆರಳಾಡಿಸಿದಳು. ಗಾಳಿಗೆ ಸಿಕ್ಕುಗಟ್ಟಿದ್ದ ಕೂದಲಿನ ಸಿಕ್ಕನ್ನು ಬೆರಳುಗಳ ಮಧ್ಯೆ ಸಿಕ್ಕಿಸಿ ಮೆತ್ತಗೆ ಬಿಡಿಸಿದಳು. ಕುತ್ತಿಗೆಯ ಬಳಿ ಉಬ್ಬಿದ್ದ ನರವನ್ನು ಸವರಿದಳು. ನೀನು ಯಾವಾಗಲೂ ಖುಷಿಯಾಗಿರು, ಆಯ್ತಾ? ಅಂದ. ಇದ್ದಕ್ಕಿದ್ದ ಹಾಗೆ ಯಾಕೆ ಹಾಗಂದನೋ ಗೊತ್ತಾಗಲಿಲ್ಲ ಅವಳಿಗೆ. ನೀನಿದ್ದರೆ ಖುಷಿಯಾಗೇ ಇರುತ್ತೇನೆ ಅನ್ನಲು ಹೋದವಳು ಯಾಕೋ ತುಂಬ ನಾಟಕೀಯ ಅನ್ನಿಸಬಹುದು ಅನ್ನಿಸಿ ಸುಮ್ಮನಾದಳು…
ಆ ಕ್ಷಣದಲ್ಲಿ ಅವನಿಗೆ ಒಂದು ಫೋನ್ ಕಾಲ್ ಬಂತು. ಆಗ ಅವಳಿಗೆ ಕಾಲ ಮತ್ತು ಭೌಗೋಳಿಕ ಜಗತ್ತಿನ ನೆನಪಾಯಿತು! ಸಮಯ ಮೀರುತ್ತಿದೆ ಅನ್ನಿಸಿ ಹೊರಡೋಣ? ಅಂದಳು. ಇನ್ನಿಷ್ಟು ಹೊತ್ತು ಇರು ಅನ್ನುತ್ತಾನೇನೋ ಅಂತ ಕಾದಳು. ಅವನು ಹಾಗೇನೂ ಅನ್ನದೇ ಕಾರನ್ನು ಹಿಂದಕ್ಕೆ ತಿರುಗಿಸಿದ. ಈಗ ಇಬ್ಬರ ಮಧ್ಯೆ ಮಾತಿರಲಿಲ್ಲ. ಅವಳ ಮುಖ ಪೇಲವವಾಗಿತ್ತು. ರಕ್ತವಿಲ್ಲದ ಮುಖದಲ್ಲಿ ನನಗ್ಯಾಕೋ ಇದೇ ಕಡೆ ನಿನ್ನನ್ನು ನೋಡುವುದು ಅನ್ನಿಸುತ್ತಿದೆ ಅಂದಳು. ಶ್ಶೋ! ಸ್ವಲ್ಪ ಸುಮ್ಮನಿರುತ್ತೀಯಾ? ಇಲ್ಲದ್ದೆಲ್ಲ ಮಾತಾಡುವುದು ನಿನಗೆ ಅಭ್ಯಾಸವಾಗಿ ಬಿಟ್ಟಿದೆ ಅಂದ. ಇಲ್ಲ ನಿಜಕ್ಕೂ ಅಂದಳು. ಮತ್ತೆ ಮಾತಾಡಿದರೆ ಪ್ರಯೋಜನ ಇಲ್ಲ ಅನ್ನಿಸಿ ಅವ ಮಾತು ನಿಲ್ಲಿಸಿದ.
ಅವಳನ್ನು ಮತ್ತದೇ ಹಳದಿ ಹೂಗಳ ಮೇಲೆ ಇಳಿಸಿದ. ಬರಲಾ ಅಂತ ಅವನಂದಾಗ ಹೂ ಅಂತಲೂ ಅನ್ನದೇ ನಿಂತಿದ್ದಳು. ಮತ್ತೆ ಹತ್ತಿ ಕೂತು ಬಿಡಲಾ ಅಂದುಕೊಳ್ಳುವಷ್ಟರಲ್ಲಿ ಅವನು ಕಾರು ಸ್ಟಾರ್ಟ್ ಮಾಡಿ ಹೊರಟು ಹೋದ. ಬಾಡಿ ಬಿದ್ದಿದ್ದ ಹಳದಿ ಹೂಗಳ ಮೇಲೆ ಕಾಲಿಟ್ಟರೆ ಅವುಗಳಿಗೆ ನೋವಾಗುತ್ತೇನೋ ಅನ್ನುವ ಹಾಗೆ ಹೂವಿಲ್ಲದ ಜಾಗಗಳನ್ನು ಆರಿಸಿ, ಪಾದ ಊರುತ್ತ ಅವಳು ನಡೆದಳು …
 

‍ಲೇಖಕರು avadhi

February 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: