ಅಹವಿ ಹಾಡು : ಇದು ನನ್ನ ಕಥೆ…

ಈ ಭಾನುವಾರ ಅಂದರೆ ಡಿಸೆಂಬರ್ 8, 2013 ರಂದು ಬೆಳಿಗ್ಗೆ 10.30 ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ

ಬಿಡುಗಡೆಯಾಗುತ್ತಿರುವ ನಾನು ಬರೆದಿರುವ ‘ಸಾಸಿವೆ ತಂದವಳು’ ಪುಸ್ತಕದ ಒಂದಿಷ್ಟು ಪುಟಗಳು

***

ಮರುದಿನ ಕಣ್ಣು ಬಿಟ್ಟಾಗ ದೇಹವೆಲ್ಲ ಅಸಹನೀಯ ನೋವು. ಎಲ್ಲ ಆಪರೇಷನ್‌ಗೆ ಒಳಗಾದ ದೇಹಗಳ ಥರವೇ ನನ್ನ ದೇಹ ಕೂಡಾ ಜರ್ಝರಿತವಾಗಿತ್ತು. ಕೈಯಂತೂ ಎತ್ತಲೂ ಸಾಧ್ಯವಾಗದಷ್ಟು ನೋವು. ಬಲಗೈ ಕಂಕುಳು ಮತ್ತು ರಟ್ಟೆಯ ಮಧ್ಯ ಭಾಗದಲ್ಲಿ ಒಂದು ಫುಟ್ ಬಾಲ್ ಇಟ್ಟಿದ್ದಾರೇನೋ ಅನ್ನುವಂತ ಫೀಲಿಂಗ್. ಎಲ್ಲ ಸಹಿಸಿಕೊಂಡು ನರಳದೇ ಭಂಡತನದಿಂದ ಅವಡುಗಚ್ಚಿ ಮಲಗಿದ್ದೆ. ಡಾಕ್ಟರ್ ರೌಂಡ್ಸ್‌ಗೆ ಬಂದರು. ‘ಈಗ ಹೇಗಿದ್ದಿ?’ ಅಂದರು. ‘ನನಗೆ ಭಯ ಆಗ್ತಿದೆ’ ಅಂದೆ ಸಣ್ಣ ಮಗುವಿನ ಹಾಗೆ. ‘ಈಗ ಭಯ ಪಟ್ಟರೆ ಉಪಯೋಗವಿಲ್ಲಮ್ಮಾ’ ಅಂದರು. ಅಂದರೆ …?! ಪರಿಸ್ಥಿತಿ ಕೈ ಮೀರಿ ಹೋಗಿದೆ ಅಂತ ಹೇಳುತ್ತಿದ್ದಾರಾ? ಅಂತ ನಾನು ಗಾಭರಿಯಾಗುವಷ್ಟರಲ್ಲೇ ‘ಅಲ್ಲಮ್ಮಾ ಗಡ್ಡೆ ಎಲ್ಲ ತೆಗೆದಿದ್ದಾಯ್ತು. ಈಗ ಯಾಕೆ ಭಯ ಹೇಳು’ ಅಂತ ಅವರು ವಾಕ್ಯ ಸರಿ ಮಾಡಿ ಹೇಳಿದರು. ನನಗೆ ಸ್ವಲ್ಪ ಸಮಾಧಾನವಾಯ್ತು. ಅಷ್ಟರಲ್ಲಿ ಫಿಸಿಯೋ ಥೆರಪಿಸ್ಟ್ ಬಂದು ಎಕ್ಸರ್ಜ಼ೈಸ್‌ಗಳನ್ನು ಮಾಡಿಸಲು ಶುರು ಮಾಡಿದರು. ನೋಡ್ಸ್‌ಗಳನ್ನು ತೆಗೆದಿದ್ದರಿಂದ ಬಲಗಡೆ ಕೈನ ರಟ್ಟೆಯ ಭಾಗ ಪೂರ್ತಿ ಕೊರಡಾದ ಹಾಗೆ ಅನ್ನಿಸುತ್ತಿತ್ತು. ಇಡೀ ಕೈ ಪೂರ್ತಿ ಹೆಣ ಭಾರ. ಅಂಥ ಕೈಯನ್ನು ಅಲ್ಲಾಡಿಸುವಾಗ ನರಕ ಯಾತನೆಯಾಗಿ ಹೋಗಿತ್ತು. ಈಗ ದೇಹ ನನ್ನ ಮಾತು ಕೇಳುವುದನ್ನು ನಿಲ್ಲಿಸಿತ್ತು! ಆಮೇಲೆ ಅವರಿಂದ ಒಂದು ಡೂಸ್ ಅಂಡ್ ಡೋಂಟ್ಸ್‌ಗಳ ಪಟ್ಟಿ ತಯಾರಾಗಿ ನಿಂತಿತ್ತು … ಬದುಕಿರುವವರೆಗೂ ಭಾರ ಎತ್ತುವ ಹಾಗಿಲ್ಲ … ಅತಿ ಬಿಸಿ ಮುಟ್ಟುವ ಹಾಗಿಲ್ಲ … ಅತೀ ತಣ್ಣನೆಯದ್ದೂ no no … ತುಂಬ ಟೈಟ್ ಆದ ಬಟ್ಟೆ ಹಾಕುವ ಹಾಗಿಲ್ಲ … ಎಕ್ಸರ್‌ಸೈಜ಼್ ನಿಲ್ಲಿಸುವ ಹಾಗಿಲ್ಲ … ಬಲಗೈಗೆ ಇಂಜೆಕ್ಷನ್ ತೆಗೆದುಕೊಳ್ಳೋ ಹಾಗಿಲ್ಲ … ಬಲಗೈಗೆ ಬಿ.ಪಿ ನೋಡಿಸಿಕೊಳ್ಳುವ ಹಾಗಿಲ್ಲ … ಅವರು ಹೇಳುತ್ತಾ ಹೋದಾಗ ಕೈ ಭರ್ತಿ ಹತ್ತು, ಹದಿನೈದು ತರಕಾರಿ, ಹಣ್ಣು, ಮತ್ತಿತರ ವಸ್ತುಗಳ ಸಣ್ಣ ಪುಟ್ಟ ಬ್ಯಾಗ್ ಹೊರಲಾರದೇ ಹೊತ್ತು ನಾನು ಮನೆಗೆ ಹೋಗ್ತಿದ್ದರೆ ಥೇಟ್ ಗೂಡ್ಸ್ ಟೆಂಪೋ ಥರ ಕಾಣುತ್ತಿದ್ದೆನಲ್ಲಾ ಆ ದಿನಗಳು ನೆನಪಾದವು. ಆ ನಾನು ಇನ್ನಿಲ್ಲ, ಆ ಸ್ವಾತಂತ್ರ್ಯದ ದಿನಗಳೂ ಇನ್ನಿಲ್ಲ ಅನ್ನಿಸಿ ತುಂಬ ದುಃಖ ಬಂತು. ಮರುಕ್ಷಣ ಬಯ್ದುಕೊಂಡೆ ‘ಆಸೆಬುರುಕ ಮನಸ್ಸೇ ಅವತ್ತು ನಾನು ಬದುಕ್ತೀನಾ ಅಂತ ಕೇಳಿದ್ದೆ. ಇವತ್ತು ನೋಡು ಬರೀ ಬದುಕಿದರಷ್ಟೇ ಸಾಲದು, ಎಲ್ಲವೂ ಮೊದಲಿನ ಹಾಗೇ ಇರಬೇಕು ಅಂತೀಯ. ನಾಚ್ಕೆ ಆಗಲ್ವಾ ನಿನಗೆ?’ ಅಂತ.

ಆಪರೇಷನ್ ಆದ ಮೂರು ದಿನಕ್ಕೆ ಡಿಸ್ಚಾರ್ಜ್ ಆಗಿ ಮನೆಗೆ ಬಂದೆ. ಬೇರೆ ರೀತಿಯ ಖಾಯಿಲೆಯಾದರೆ ಆಪರೇಷನ್ ಮುಗಿದ ಕೂಡಲೇ ಗುಣವಾಗುವ ಪ್ರೋಸೆಸ್ ಶುರುವಾಗುತ್ತದೆ. ಆದರೆ ಕ್ಯಾನ್ಸರ್ ಹಾಗಲ್ಲವಲ್ಲ. ಆಪರೇಷನ್ ಆದ ಮೇಲೆಯೇ ಟ್ರೀಟ್‌ಮೆಂಟ್ ಶುರುವಾಗುವುದು! ಹಾಗಾಗಿ ನಾಳಿನ ಬಗ್ಗೆ ತುಂಬ ಆತಂಕ ಮೂಡಿಬಿಡುತ್ತದೆ. ಅಮ್ಮ ಈ ವಯಸ್ಸಲ್ಲಿ ನನ್ನ ಸೇವೆಗೆ ನಿಂತಳು. ಅವಳಿಗೆ ಒಂದೇ ಒಂದು ನಿಮಿಷ ಬಿಡುವಿಲ್ಲ. ಆ ವಯಸ್ಸಿನಲ್ಲಿ ಅವರನ್ನು ನೋಡಿಕೊಳ್ಳಬೇಕಾದ ನನಗೆ ಬರೀ ಬಿಡುವೇ. ಬೆಳಗೆದ್ದರೆ ಕೆಲಸವೇ ಇಲ್ಲ. ಪಕ್ಕದಲ್ಲಿ ಗಂಡ, ಅಪ್ಪ, ಮಗ. ಅಲ್ಲಾಡಿಸಿದರೆ ಮುರಿದುಹೋಗುತ್ತೇನೋ ಅನ್ನುವಷ್ಟು ನೋಯುವ ಕೈಗಳಿಗೆ ಎಕ್ಸರ್‌ಸೈಜ಼್ ಮಾಡಿಸಬೇಕಿತ್ತು. ಕೈ ಅಸಾಧ್ಯ ನೋವು. ಮಗನಿಗೆ ಪರೀಕ್ಷೆಯ ಸಮಯ. ಒಂದು ಕೈಲಿ ಬುಕ್ ಹಿಡಿದು ಮತ್ತೊಂದು ಕೈಲಿ ನನ್ನ ಕೈಗಳನ್ನು ಚೂರು ಚೂರೇ ಎಳೆದೆಳೆದು ವ್ಯಾಯಾಮ ಮಾಡಿಸಿದ. ಅಮ್ಮ ಪಾಪ ಅಡಿಗೆ ಮನೆಯಲ್ಲಿ ಸದಾ ಕಾಲ. ಅಪ್ಪ ಕೂತ ಕಡೆಗೆ ಊಟ ತರುತ್ತಿದ್ದರು, ತಟ್ಟೆ ತೊಳೆಯಲು ಹಾಕುವುದಕ್ಕೆ ಅವರೇ ತೆಗೆದುಕೊಂಡು ಹೋಗುತ್ತಿದ್ದರು. ಕೊನೆಗೆ ಮಗ್‌ನಲ್ಲಿ ನೀರು ತಂದು, ಕೈ ಕೂಡಾ ತೊಳೆಸಿ ಬಿಟ್ಟರು. ಡ್ರೈನ್ ಕ್ಯಾನ್‌ನಲ್ಲಿದ್ದ ರಕ್ತ 50 ಮಿ.ಲೀಗಿಂತ ಕಡಿಮೆ ಆಗುವವರೆಗೆ ಆ ಪೈಪ್ ತೆಗೆಯೋದಿಲ್ಲ ಅಂತ ಹೇಳಿದ್ದರಿಂದ ಅದನ್ನು ದಿನಾ ಅಳೆಯಬೇಕಿತ್ತು. ಮಿಸ್ಟರ್ ಕ್ಲೀನ್ ಆದ ನನ್ನ ಗಂಡ ಒಂಚೂರೂ ಅಸಹ್ಯವಿಲ್ಲದೇ ಅದನ್ನು ಕೂತು ಅಳೆದ. ಎಲ್ಲರೂ ‘ಸದಾ ನಿನ್ನ ಸೇವೆಯಲ್ಲಿ … ’ ಅನ್ನೋ ಹಾಗೆ ನಿಂತಿರುತ್ತಿದ್ದರು. ಗಂಡ ಬಚ್ಚಲಿನಲ್ಲಿ ಕೂರಿಸಿ ಸ್ಪಾಂಜ್ ಬಾತ್ ಮಾಡಿಸುವಾಗ ನಾನು ‘ಸಿನೆಮಾಗಳಲ್ಲಿ ಹೀರೋಯಿನ್‌ಗೆ ಹೀರೋ ಸೇವೆ ಮಾಡ್ತಾನಲ್ಲ .. ಅದೇ ಹಾಲು -ಜೇನು ಸಿನೆಮಾದಲ್ಲಿ ಮಾಧವಿಗೆ ರಾಜ್‌ಕುಮಾರು, ನಂಜುಂಡಿ ಕಲ್ಯಾಣದಲ್ಲಿ ರಾಘವೇಂದ್ರ ರಾಜ್‌ಕುಮಾರು ಮಾಲಾಶ್ರೀಗೆ ಸೇವೆ ಮಾಡುವಾಗ್ಲೆಲ್ಲ ಅಂದುಕೊಳ್ತಿದ್ದೆ ಕಣೋ .. ಭಗವಂತಾ ಬರೀ ನಾನೇ ಮಾಡೋದಾಯ್ತು. ನನ್ನ ಹಣೇಲಿ ಸೇವೆ ಮಾಡಿಸಿಕೊಳ್ಳುವ ಭಾಗ್ಯ ಬರೆದೇ ಇಲ್ವಲ್ಲೋ ನೀನು ಅಂತ. ಕೊನೆಗೂ ದೇವರು ನನ್ನ ಮೊರೆ ಕೇಳಿದ ನೋಡು’ ಅಂತ ನಗುತ್ತಿದ್ದೆ. ಆ ಸ್ಥಿತಿಯಲ್ಲೂ ಮಸುಕಾಗದ ನನ್ನ ದರಿದ್ರ sense of humour (ಹಾಸ್ಯ ಪ್ರಜ್ಞೆ) ಕಂಡು ಅವನು ತಲೆ ಚೆಚ್ಚಿ ಕೊಳ್ಳುತ್ತಿದ್ದ.

ನನ್ನ ಸೇವೆಗೆ ನಾಕು ಜನ ನಿಂತ ಮೇಲೆ ನನಗೆ ಕೆಲಸವೇನು ಇದ್ದೀತು? ರೂಮಿನಲ್ಲಿ ಮಲಗಿ ಸದಾಕಾಲ ‘ಮುಂದೇನು’ ಅನ್ನೋ ಉತ್ತರವಿಲ್ಲದ ಪ್ರಶ್ನೆ ಕೇಳಿಕೊಳ್ಳುವುದೇ ಬದುಕಾಗಿ ಹೋಯ್ತು. ಮೊದಲಿಂದ ನಾನು ಮನೆಯಲ್ಲಿ ಅರೆಕ್ಷಣ ಕೂತವಳಲ್ಲ. ಆಫೀಸ್, ನಾಟಕ, ಸಿನೆಮಾ, ಸ್ನೇಹಿತೆಯರು, ಬುಕ್ ಬಿಡುಗಡೆ ಸಮಾರಂಭ, ಬೀದಿ ಬೀದಿಯ ಹೋಟೆಲ್‌ಗಳಿಗೆ ಭೇಟಿ, ಪುಸ್ತಕದ ಅಂಗಡಿಗೆ ಭೇಟಿ, ಓದುವುದು, ಬರೆಯುವುದು … ಒಂದರೆಕ್ಷಣ ಬಿಡುವಿಲ್ಲದ ಬದುಕು. ಅಂಥಾ ನಾನು ಈಗ ಹಾಸಿಗೆಯಲ್ಲಿ ಬಂಧಿಸಲ್ಪಟ್ಟಿದ್ದೆ. ಆ ನೇತಾಡುತ್ತಿರುವ ಪೈಪ್‌ನ ಮೂಲಕ ತುಂಬುವ ರಕ್ತ, ನೀರು, ಏನೇನೋ. ಒಂಥರಾ ವಿಷಾದ ವಿಷಾದ ಭಾವ.

ಮನೆಗೆ ಬಂದ ಮರುದಿನವೇ ಯಾಕೋ ಬಲ ತೋಳು ನೂರು ಕೆ. ಜಿ ತೂಕ ಇದೆಯೇನೋ ಅಂತ ಭ್ರಮೆ ಹುಟ್ಟಿಸುವಷ್ಟು ಭಾರ ಭಾರ. ನಿಮಿಷ ನಿಮಿಷಕ್ಕೂ ಜಗ್ಗಲು ಶುರುವಾಯ್ತು. ಮತ್ತೆ ಆಸ್ಪತ್ರೆಗೆ ಓಟ. ಆ ಟ್ಯೂಬ್ ಒಳಗೇ ಬ್ಲಾಕ್ ಆಗಿ ಹೊರಬರಬೇಕಿದ್ದ ರಕ್ತ, ಮತ್ತೇನೇನೋ ದ್ರವವೆಲ್ಲ ಹೊರಗೆ ಬರದೇ ಅಲ್ಲೇ ಶೇಖರವಾಗಿ ಹೋಗಿತ್ತು. ಅದಕ್ಕೆ ಆ ಪರಿಯ ಭಾರ ಮತ್ತು ನೋವು. ಕಂಕುಳಿಗೊಂದು ಇಂಜೆಕ್ಷನ್ ಚುಚ್ಚಿ, ಮೊದಲೇ ಕೊರಡಾಗಿದ್ದ ಆ ಜಾಗವನ್ನ ಇನ್ನೂ ಕೊರಡಾಗಿಸಿ, ಒಂದು ಟ್ಯೂಬ್ ತೂರಿಸಿ ಅಲ್ಲಿ ಸಂಗ್ರಹವಾಗಿದ್ದ ದ್ರವ ಹೊರ ತೆಗೆದರು. ಈಗ ಕೈ ಹಗುರಾಯ್ತು ಅಂತ ಸಂಭ್ರಮಿಸುತ್ತಾ ಮನೆಗೆ ಬಂದ ಸ್ವಲ್ಪ ಹೊತ್ತಿನ ಮೇಲೆ ಕಂಕುಳಿನ ಭಾಗಕ್ಕೆ ಚುಚ್ಚಿದ ಇಂಜೆಕ್ಷನ್‌ನ ಯಮಯಾತನೆ. ಅದಕ್ಕೊಂದು ಮಾತ್ರೆ. ಎಲ್ಲ ಸರಿಯಾಯ್ತು ಅನ್ನುವಷ್ಟರಲ್ಲಿ ಮತ್ತೆ ಎರಡೇ ದಿನಕ್ಕೆ ಮಣ ಭಾರದ ತೋಳು. ಮತ್ತೆ ಕಂಕುಳಿಗೊಂದು ಇಂಜೆಕ್ಷನ್ … ಮತ್ತೆ ಸಿರಿಂಜ್ ಹಾಕಿದರೆ ಮತ್ತೊಂದಿಷ್ಟು ದ್ರವ … ಬದುಕು ತುಂಬ, ತುಂಬ ದುಃಖ ತರಿಸುತ್ತಿತ್ತು.

ಅವತ್ತೊಂದು ದಿನ ರಾತ್ರಿ. ಆಪರೇಷನ್ ಆದಾಗಿನಿಂದ ನನಗೆ ಸುಖ ನಿದ್ರೆ ಅನ್ನುವುದು ಬರುತ್ತಲೇ ಇರಲಿಲ್ಲ. ಒಂದೇ ಪಕ್ಕಕ್ಕೆ ಮಲಗಿ ಮಲಗಿ ಮೈ ಕೈ ಎಲ್ಲ ಅಸಾಧ್ಯ ನೋವು. ಯಾಕೋ ಮಲಗಿದ ಅರ್ಧ ಘಂಟೆಗೆ ಎಚ್ಚರವಾಗಿ ಹೋಯ್ತು. ಸುಮ್ಮನೇ ಹಾಳು ಹಾಳು ಯೋಚನೆಗಳು ಶುರುವಾದವು. ನಾವು ಸುಮಾರು ವರ್ಷದಿಂದ ಮನೆ ಕಟ್ಟದೇ ಸೋಮಾರಿತನದಿಂದ ಕೂತಿದ್ದವರು ಆಗ ತಾನೇ ಮನೆ ಕಟ್ಟಿಸಲು ಶುರು ಮಾಡಿದ್ದೆವು. ಗಜಗರ್ಭಕ್ಕೆ ಆಕಾರ ಮೂಡ್ತಿದ್ದ ದಿನಗಳವು. ಮಗ ಇನ್ನು ಎರಡೇ ತಿಂಗಳಲ್ಲಿ ಇಂಜಿನಿಯರಿಂಗ್ ಕೊನೆಯ ವರ್ಷಕ್ಕೆ ಕಾಲಿಡುವುದರಲ್ಲಿದ್ದ. ಅಲ್ಲಿಗೆ ಆ ಜವಾಬ್ದಾರಿ ಮುಗಿಯುತ್ತಿತ್ತು (ನಿಜಕ್ಕೂ ಹೇಳಬೇಕೆಂದರೆ ಕಳೆದ ಮೂರು ವರ್ಷದಲ್ಲಿ ಅವನನ್ನು ಎಬ್ಬಿಸೋ ಒಂದು ಕೆಲಸ ಬಿಟ್ಟು ಮತ್ತೇನೂ ಮಾಡದ ನಾನು ಜವಾಬ್ದಾರಿ ಅಂತ ಅದನ್ನ ಕರೆದುಕೊಳ್ಳೋದೂ ಮೂರ್ಖತನ ಮತ್ತು ಉದ್ಧಟತನ!) ನಾನು ಮತ್ತು ನನ್ನ ಗಂಡ ಇನ್ನೆರಡು ವರ್ಷ ಕೆಲಸ ಮಾಡಿ, ಆಮೇಲೆ ಕೆಲಸ ಸಾಕು ಮಾಡಿ ಊರೂರು ಮತ್ತು ದೇಶ ದೇಶ ಸುತ್ತೋ ಕಾರ್ಯಕ್ರಮ ಹಾಕಿಕೊಂಡಿದ್ದೆವು. ಕಾಂಬೋಡಿಯಕ್ಕೆ ಹೋಗಿ ಅಂಗ್‍ಕೋರ್ ವಾಟ್ ನೋಡಿ ಬರಬೇಕು. ಇಟಲಿಗೆ ಹೋಗಿ ಪಾಂಪೆಯಲ್ಲಿ ಮುಳುಗಿ ಬಿಡಬೇಕು ಅಂತೆಲ್ಲ ಕನಸಿತ್ತು. ಬದುಕಿನ ಮಧ್ಯ ಭಾಗದಲ್ಲಿ ಯಾಕೋ ಬರೆಯುವುದನ್ನು ನಿಲ್ಲಿಸೇ ಬಿಟ್ಟಿದ್ದ ನಾನು, ಮತ್ತೆ ಬರೆಯಲು ಶುರು ಮಾಡಿದ್ದೆ. ಅದೆಷ್ಟೊಂದು ಬರೆಯುವುದು ಬಾಕಿ ಇತ್ತು. ಎಷ್ಟೆಲ್ಲ ಕೆಲಸ ಬಾಕಿ ಉಳಿದಿದ್ದವು ಬದುಕಲ್ಲಿ. ಈಗ ಹತ್ತು ದಿನಗಳ ಅಂತರದಲ್ಲಿ ನನ್ನ ಎಲ್ಲ ಕನಸುಗಳೂ ಮುರಿದು ಬಿದ್ದಿದ್ದವು. ಎಲ್ಲ ನೆನಪಾಗಿ ಹೋಯಿತು ಆ ಸರಿ ರಾತ್ರಿಯಲ್ಲಿ. ಕಣ್ಣು ಬಿಟ್ಟ ಆ ನಿಮಿಷದಲ್ಲಿ ಅಸಹಾಯಕತೆ ಚಾಚಿ ಬಂದುಬಿಟ್ಟಿತು. ಪಕ್ಕದಲ್ಲಿ ಮಲಗಿದ್ದವನನ್ನು ಎಬ್ಬಿಸಿದೆ. ಅವನು ಪಾಪ ಏನಾಯಿತೋ ಅಂತ ಗಾಭರಿಯಿಂದ ಎದ್ದು ಕೂತ. ಕ್ಯಾನ್ಸರ್ ಅಂತ ಗೊತ್ತಾದ ದಿನದಿಂದ ಒಂದೇ ಒಂದು ಹನಿ ಕಣ್ಣೀರು ಹಾಕಿರದ ನಾನು, ಅವನ ತೊಡೆ ಮೇಲೆ ತಲೆಯಿಟ್ಟು ತುಂಬ, ತುಂಬ ಹೊತ್ತು ಬಿಕ್ಕಳಿಸಿ, ಬಿಕ್ಕಳಿಸಿ ಅತ್ತುಬಿಟ್ಟೆ. ಅವನು ಮಾತಾಡಲಿಲ್ಲ. ಅಳಬೇಡ ಅಂತಲೂ ಅನ್ನಲಿಲ್ಲ. ಸುಮ್ಮನೆ ತಲೆ ಸವರುತ್ತ ಕೂತಿದ್ದ.

ಅವತ್ತು ಅತ್ತ ನಾನು ಮತ್ತೆ ಅತ್ತಿದ್ದು ಆಗಸ್ಟ್ 14 ನನ್ನ ಟ್ರೀಟ್‌ಮೆಂಟ್ ಎಲ್ಲ ಮುಗಿಯಿತು ಅಂದ ದಿನ ಮಾತ್ರ. ಅವೆರಡು ದಿನ ಬಿಟ್ಟರೆ ನಾನು ಇನ್ನೊಂದೇ ಒಂದು ದಿನಕ್ಕೂ ಕಣ್ಣೀರು ಹಾಕಲಿಲ್ಲ …

***

ಸಣ್ಣವಳಾಗಿರುವಾಗ ಸಣ್ಣ ಪುಟ್ಟ ಗಾಯವಾಗಿ ರಕ್ತ ಬಂದರೆ ‘ಅಯ್ಯೋ! ನಕ್ತಾ’ ಅಂತ ಹಾಡಿ ಹಾಡಿ ಅಳುತ್ತಿದ್ದೆನಂತೆ ನಾನು. ಅಂಥಾ ಪುಕ್ಕಲಿ. ಜಾಂಡೀಸ್, ಟೈಫಾಯಿಡ್ ಅಂತ ಖಾಯಿಲೆಗಳು ಮಾತ್ರ ನನಗೆ ಬಂದಂಥ ಅತೀ ದೊಡ್ಡ ಖಾಯಿಲೆಗಳು ಅನ್ನಬೇಕು. 20 ವರ್ಷದ ಕೆಳಗೆ ಹೆರಿಗೆ ನೋವು ಅನುಭವಿಸಿದ್ದೆನಲ್ಲ, ಅದೇ ಆವರೆಗೆ ನಾನು ಅನುಭವಿಸಿದ ಅತೀ ಹೆಚ್ಚಿನ ನೋವು. ಮುತ್ತತ್ತಿಯಿಂದ ಮರಳಿದ ನಂತರ ರಾತ್ರಿ ಶುರುವಾಯ್ತು ನೋಡಿ ಆ ನೋವು! ನಾನು ಹುಟ್ಟಿದಾಗಿನಿಂದ ಎಂದೂ ಅನುಭವಿಸದಂಥ ನೋವು ಅದು. ಈ ನೋವಿನ ಮುಂದೆ ಹೆರಿಗೆ ನೋವು ಏನೇನೂ ಅಲ್ಲ ಅನ್ನಿಸಿಬಿಟ್ಟಿತು.

ಈ ನೋವು ದೇಹವನ್ನು ಚಪಾತಿ ಹಿಟ್ಟನ್ನು ಕಲೆಸಿದ ನಂತರ ನಾದುತ್ತೀವಲ್ಲ ಹಾಗೆ ನಾದಿ ಬಿಟ್ಟಿತು. ತಲೆಯಿಂದ ಹಿಡಿದು ಕಾಲ್ಬೆರಳಿನ ತನಕ ನೋವು to the power of n (ಟು ದಿ ಪವರ್ ಆಫ಼್ ಎನ್). ನನ್ನ ದೇಹ ನಾನೇ ಮುಟ್ಟಿಕೊಳ್ಳಲಾಗದಷ್ಟು ನೋವು. ಆ ಥರದ ನೋವನ್ನು ಹೇಗೆ ವಿವರಿಸುವುದು? ಅದಕ್ಕೆ ನನ್ನಲ್ಲಿ ಪದಗಳೇ ಇಲ್ಲವಲ್ಲ. ಮೊಣಕಾಲು, ಮೊಣಕೈ, ಬೆರಳುಗಳ ಸಂದಿ, ಕಾಲ್ಬೆರಳು, ಬೆನ್ನು, ಹೊಟ್ಟೆ … ಎಲ್ಲ ಭಾಗದ ಕಣ ಕಣದಲ್ಲೂ ಅಸಾಧ್ಯ ನೋವು. ಎಲ್ಲ ಜಾಯಿಂಟ್‌ಗಳೂ ಪದ ಹಾಡುತ್ತಿದ್ದವು. ಒಂದೊಂದು ಚಲನೆ ಮಾಡಲು ಹೊರಟರೆ, ಎಣ್ಣೆ ಕಾಣದ ತುಕ್ಕು ಹಿಡಿದ ಹಳೆಯ ಬಾಗಿಲು, ಕಿಟಕಿಗಳ ಥರ ಹಿಡಿತ. ಇಡೀ ದೇಹದ ಯಾವ ಭಾಗವೂ ನನ್ನ ಅಧೀನದಲ್ಲಿರಲಿಲ್ಲ! ಎಡದಿಂದ ಬಲಕ್ಕೆ ಹೊರಳಬೇಕಾದರೆ ಬಾಯಿಂದೊಂದು ಚೀತ್ಕಾರ ಹೊರಡುತ್ತಿತ್ತು. ಇದು ಯಾವುದೂ ಕೀಮೋದಿಂದ ಆಗಿದ್ದು ಅಂತ ಅಂದುಕೊಳ್ಳಲು ನನಗೆ ಅದೇ ಮೊದಲ ಕೀಮೋ ಆದ್ದರಿಂದ ಅದರ ಬಗ್ಗೆ ಯಾವ ಜ್ಞಾನವೂ ಇರಲಿಲ್ಲ ಬೇರೆ! ಹಾಗಾಗಿ ಇದು ಪ್ರಯಾಣದ ಆಯಾಸಕ್ಕೆ ಆಗಿದ್ದು ಅಂದುಕೊಂಡು ‘ಅಯ್ಯೋ! ಮುತ್ತತ್ತಿಗೆ ಹೋಗಬಾರದಿತ್ತು. ಆ ಪ್ರಯಾಣದ ದೆಸೆಯಿಂದಲೇ ಇದೆಲ್ಲ ಆಗಿದ್ದು’ ಅಂತ ಪರಿತಪಿಸಿದೆ.

ಇಡೀ ರಾತ್ರಿ ನಿದ್ದೆಯಿಲ್ಲ. ಮಾರನೆಯ ದಿನದ ಹೊತ್ತಿಗೆ ನೋವಿಲ್ಲದ ದೇಹದ ಒಂದು ಮಿಲಿಮೀಟರ್ ಜಾಗ ಉಳಿದಿರಲಿಲ್ಲ. ಜೊತೆಗೆ ಆ ಸುಸ್ತು ಬೇರೆ. ಆವರೆಗೆ ಸುಸ್ತು ಎಂದರೆ ಏನು ಅಂತ ನನಗೆ ಗೊತ್ತಿರಲೇ ಇಲ್ಲ. ಇಡೀ ದಿನ ಮನೆ ಮತ್ತು ಆಫೀಸಿನಲ್ಲಿ ಕೆಲಸ ಮಾಡಿ, ಅಷ್ಟೆಲ್ಲ ತಿರುಗಿದರೂ ನನಗೆ ಯಾವತ್ತೂ ದೇಹಕ್ಕೆ ಸುಸ್ತು ಅಂತ ಅನ್ನಿಸುತ್ತಲೇ ಇರಲಿಲ್ಲ. ಇಡೀ ದಿನದ ಓಡಾಟದ ನಂತರವೂ ರಾತ್ರಿ 9ಕ್ಕೆ ಗಂಡ ಭೇಲ್ ತಿಂದು ಬರೋಣ ಬಾ ಅಂದರೆ ಮೂರು ನಿಮಿಷದಲ್ಲಿ ರೆಡಿ ನಾನು. ಅಂಥಾ ನನಗೆ ಸುಸ್ತು ಅಂದರೆ ಏನು ಅನ್ನೋದರ ದಿವ್ಯ ಅನಾವರಣವಾಗಿ ಬಿಟ್ಟಿತು. ಇಡೀ ರಾತ್ರಿ ನರಳಿ ನರಳಿ ಊಳಿಟ್ಟೆ.

ಮರುದಿನ ಬೆಳಿಗ್ಗೆ ಎದ್ದು ನೀರು ಕುಡಿದರೆ ಅದು ನೀರು ಅಂತಲೇ ಗೊತ್ತಾಗಲಿಲ್ಲ. ಆ ಥರ ಕೊರಡು ಕೊರಡು ಬಾಯಿ. ಜ್ವರ ಬಂದಾಗ ಕೂಡಾ ನಾಲಿಗೆ ರುಚಿ ಕಳೆದುಕೊಳ್ಳೋ ವಿಷಯ ಎಲ್ಲರಿಗೂ ಅನುಭವವಿರುತ್ತದೆ. ಆದರೆ ಇದು ರುಚಿರಾಹಿತ್ಯದ ಪಾರಾಕಾಷ್ಠೆ. ಕಣ್ಣುಮುಚ್ಚಿ ತಿಂದರೆ, ತಿನ್ನುತ್ತಿರುವುದು ಚಪಾತಿಯೋ, ಚಪ್ಪಲಿಯೋ ಅಂತ ಕೂಡಾ ಗೊತ್ತಾಗದ ಸ್ಥಿತಿ. ನಾಲಿಗೆಯ ಮೇಲೆ ಒಂದು ಅಡಿಯಷ್ಟು ಕೋಟಿಂಗ್ ಇದೆಯೇನೋ ಅನ್ನುವಂಥ ಅನುಭವ. ಇಡೀ ದಿನ ಟಂಗ್ ಕ್ಲೀನರ್‌ನಲ್ಲಿ ನಾಲಿಗೆ ಕೆರೆದೇ ಕೆರೆದೆ. ಉಹೂ … ಎಲ್ಲ ವ್ಯರ್ಥ. ನಾಲಿಗೆ ಸತ್ತುಹೋಗಿತ್ತು! ಅಸಾಧ್ಯ ಹೊಟ್ಟೆ ಉರಿ, ಸಿಕ್ಕಿದ್ದೆಲ್ಲಾ ತಿನ್ನಬೇಕು ಅನ್ನಿಸುವಂಥಾ ಒಂದು ಫೀಲಿಂಗ್. ಬಾಯಿಗಿಟ್ಟರೆ ಏನು ತಿನ್ನುತ್ತಿದ್ದೀನಿ ಅಂತಲೇ ಗೊತ್ತಾಗದ ಸ್ಥಿತಿ. ಆದರೆ ತಿನ್ನಲೇ ಬೇಕು.

ಇದು ನಾಲಿಗೆಯ ಕಥೆ. ಇನ್ನು ಇಡೀ ದೇಹದ ಕಥೆ ಹೇಗೆ ಹೇಳಲಿ? ಹಲ್ಲುಜ್ಜಲು, ಟಾಯ್ಲೆಟ್‌ಗೆ ಹೋಗಲು ಮನಸ್ಸು ದಬ್ಬುತ್ತಿದ್ದರೂ ದೇಹದ ಒಂದೇ ಒಂದು ಅಂಗುಲ ಅದರ ಮಾತು ಕೇಳುತ್ತಿರಲಿಲ್ಲ. ಮೂತ್ರ ವಿಸರ್ಜನೆಯಂಥ ಒಂದು ಸಣ್ಣ ಕೆಲಸಕ್ಕೆ ಸುಮಾರು ಅರ್ಧ ಘಂಟೆ ಮನಸನ್ನು ಮೋಟಿವೇಟ್ (motivate) ಮಾಡಿಕೊಳ್ಳಬೇಕು! ಹಾಗೆ ಮಾಡಿಕೊಂಡರೆ ಮೂತ್ರವಿಸರ್ಜನೆ ಇನ್ನು ಎರಡು ಸೆಕೆಂಡ್ ತಡೆದರೆ ಹಾಸಿಗೆಯಲ್ಲೇ ಮಾಡಿಕೊಂಡು ಬಿಡುತ್ತೇನೆ ಅಂತನ್ನಿಸುವ ಕೊನೆ ಘಳಿಗೆಯಲ್ಲಿ, ದೇಹ ಹೆಜ್ಜೆ ಮೇಲೆ ಹೆಜ್ಜೆಯಿಡುತ್ತಾ ನನ್ನ ರೂಮಿನಿಂದ ಸುಮಾರು 18-20 ಹೆಜ್ಜೆ ದೂರವಿದ್ದ ಟಾಯ್ಲೆಟ್ ಸೇರುತ್ತಿತ್ತು. ಅಷ್ಟು ಹೊತ್ತು ತಯಾರಿ! ಅಲ್ಲಿ ಕೆಲಸ ಮುಗಿದ ಮೇಲೆ ಕಮೋಡ್‌ನಿಂದ ಮೇಲಕ್ಕೆ ಏಳಲು ಮತ್ತೆ 10 ನಿಮಿಷಗಳ ಮಾನಸಿಕ ಸಿದ್ಧತೆ.

ಸಿನೆಮಾಗಳಲ್ಲಿ ಹೀರೋ ಫುಟ್ ಬಾಲ್ ಆಟಗಾರನೋ, ಕರಾಟೆ ಪಟುವೋ ಆಗಿದ್ದವನು, ಎಂಥದ್ದೋ ಆಗಿ ಹೋಗಿ ಮತ್ತೆ ಆಡಲಾರದ ಅಸಹಾಯಕ ಸ್ಥಿತಿಯಲ್ಲಿ ನಿಂತಿರುವಾಗ ‘come on you can do it (ನೀನು ಇದನ್ನು ಮಾಡಬಲ್ಲೆ)’ ಅಂತ ಜನರು ಹುರಿದುಂಬಿಸುತ್ತಾರಲ್ಲ ಹಾಗಾಗಿತ್ತು ನನ್ನ ಸ್ಥಿತಿ. ವ್ಯತ್ಯಾಸವೆಂದರೆ, ಇಲ್ಲಿ ನನ್ನನ್ನು ಬೇರೆ ಯಾರೂ ಹುರಿದುಂಬಿಸುವ ಸಾಧ್ಯತೆ ಇರಲಿಲ್ಲ. ನನ್ನನ್ನು ನಾನು ಮಾತ್ರ ಹುರಿದುಂಬಿಸಿಕೊಳ್ಳಲು ಸಾಧ್ಯವಿತ್ತು ಅಷ್ಟೇ. ಇದೆಲ್ಲ ಹುರಿದುಂಬಿಸುವಿಕೆ ಟಾಯ್ಲೆಟ್ ಕಮೋಡ್‌ನಿಂದ ಎದ್ದು ರೂಮಿಗೆ ಹೋಗಿ ಮಲಗುವಂಥ ಯಕಃಶ್ಚಿತ್ ಕೆಲಸಕ್ಕೆ! ರೂಮಿಗೆ ಬಂದು ಹಾಸಿಗೆಯ ಮೇಲೆ ದೊಪ್ಪಂತ ಬಿದ್ದರೆ ಹಿಮಾಲಯ ಪರ್ವತ ನಾಲ್ಕು ಸಲ ಹತ್ತಿ ಇಳಿದೆನೇನೋ ಅನ್ನುವ ಹಾಗೆ ಮೇಲುಸಿರು. ಊಟ ಮಾಡೋದಿಕ್ಕೆ ಹಾಸಿಗೆಯಿಂದ ಎದ್ದು ಗೋಡೆಗೆ ಒರಗಿ ಕೂಡಬೇಕಲ್ಲ ಅದಕ್ಕೂ 15 ನಿಮಿಷದ ತಯಾರಿ ಬೇಕಿತ್ತು. ಸ್ನಾನ ಅಂದರೆ ಏನು ಅನ್ನೋದನ್ನ ನಾನು ಮರೆತೇ ಬಿಟ್ಟಿದ್ದೆ. ಒಂದೇ ಒಂದು ದಿನ ಸ್ನಾನ ಮಾಡದೆ ಇರೋದು ಸಾಧ್ಯವಾಗದ ನನಗೆ ಕೀಮೋ ಆದ ಮೇಲೆ ಒಂದು ವಾರ ಸ್ನಾನ ಮಾಡಲು ಆಗಲೇ ಇಲ್ಲ. ಸ್ನಾನವಿರಲಿ, ಹಾಕಿದ್ದ ನೈಟಿ ಕಳಚಿ ಫ್ರೆಷ್ ಆದ ನೈಟಿ ಹಾಕಲೂ ಕೂಡಾ ಆಗುತ್ತಿರಲಿಲ್ಲ. ಅಂಥಾ ಅಸಹಾಯಕ ಸ್ಥಿತಿ. ಅದೇ ಕೊಳೆ ಬಟ್ಟೆಯಲ್ಲಿ ಇಡೀ ಒಂದು ವಾರ ಮಲಗಿದ್ದೆ. ಮಾತಾಡಲೂ ಆಗುತ್ತಿರಲಿಲ್ಲ. ಬಾಯಿಂದ ‘ಉಶ್ಶಪ್ಪ … ಉಶ್ಶಪ್ಪ’ ಅನ್ನುವುದೊಂದು ಬಿಟ್ಟರೆ ಬೇರೆ ಇನ್ನೊಂದು ಸದ್ದು ಹೊರಡುತ್ತಿರಲಿಲ್ಲ.

 

‍ಲೇಖಕರು G

December 5, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Sarala

    ella mahileyaruu odele bekaada pustaka barediddeeri Bharathi. neevu geddu bandiddu bari saavonde alla ansita ide.

    ಪ್ರತಿಕ್ರಿಯೆ
  2. Sumangala

    ನಿಮ್ಮ ಕಥೆ ಓದಿದ ಮೇಲೆ ನಿಮ್ಮ ಯಾತನೆಯ ಮುಂದೆ ಪದಗಳು ಸೇರಿದಂತೆ ಎಲ್ಲವೂ ನಿರ್ಜೀವ ಅನ್ನಿಸುತ್ತದೆ, ಎಲ್ಲವನ್ನು ನೀವು ಗೆದ್ದಿರಲ್ಲ ಎಂಬ ಒಂದು ಸಮಾಧಾನ ಎಷ್ಟೆಲ್ಲ ಜನರಿಗೆ ಚೈತನ್ಯ ಹುಟ್ಟಿಸುವುದು…

    ಪ್ರತಿಕ್ರಿಯೆ
  3. Uday Itagi

    ಭಾರತಿ ಮೇಡಂ,
    ಯಾರ ಅನುಕಂಪಕ್ಕೂ ಪಾತ್ರರಾಗದೆ ಕ್ಯಾನ್ಸರ್ ನಂಥ ಭಯಂಕರ ಖಾಯಿಲೆಯನ್ನು ದಿಟ್ಟವಾಗಿ ಎದುರಿಸಿನಿಂತ ದಿಟ್ಟೆ ನೀವು. ಮಾತ್ರವಲ್ಲ ಇತರೆ ಕ್ಯಾನ್ಸರ್ ರೋಗಿಗಳಿಗೂ ಮಾದರಿಯಾಗುವಂತೆ ಬದುಕಿದವರು ನೀವು. ಮೊನ್ನೆ ಯಾರೋ ನಿಮ್ಮ ಪುಸ್ತಕದ ಮುಖಪುಟವನ್ನು facebook ನಲ್ಲಿ ಹಾಕಿ ಇಂತಿಂಥ ದಿನ ಬಿಡುಗಡೆಯಾಗುತ್ತದೆ ಎಂದು ಬರೆದಿದ್ದರು. ನಾನಲ್ಲಿ ಈ ಪುಸ್ತಕವನ್ನು ಓದಲು ಕಾತರನಾಗಿದ್ದೇನೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೆ. ಜೊತೆಗೆ ಮೊನ್ನೆ ಉದಯವಾಣಿಯಲ್ಲಿ ನೇಮಿಚಂದ್ರರು ನಿಮ್ಮ ಮತ್ತು ನಿಮ್ಮ ಪುಸ್ತಕದ ಬಗ್ಗೆ ಬರೆದಿರುವದನ್ನು ಸಹ ಓದಿದ್ದೆ.
    ದೂರದ ಲಿಬಿಯಾದಲ್ಲಿರುವ ನಾನು ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರಲಾಗುವದಿಲ್ಲವಾದ್ದರಿಂದ ಇಲ್ಲಿಂದಲೇ ನಿಮಗೂ ಮತ್ತು ನಿಮ್ಮ ಸಮಾರಂಭಕ್ಕೂ ಶುಭ ಹಾರೈಸುತ್ತೇನೆ. ಜೊತೆಗೆ ನಿಮ್ಮ ಆಪ್ತ ಶೈಲಿಯ ಅನನ್ಯ ಬರಹಗಳು ಇನ್ನಷ್ಟು ನಿಮ್ಮ ಲೇಖನಿಯಿಂದ ಹರಿದುಬರಲಿ ಎಂದು ಆಶಿಸುತ್ತೇನೆ. ಯಾವಾಗ ನಿಮ್ಮೀ ಪುಸ್ತಕವನ್ನು ಓದಿಯೇನೋ ಎಂಬ ಕಾತುರದಲ್ಲಿದ್ದೇನೆ. ನಿಮ್ಮಂಥ ದಿಟ್ಟೆಯರಿಗೆ wish you a long life ಅಂತಾ ಹೇಳಿದರೆ ಅದು ಕ್ಲೀಷೆ ಎನಿಸುವ ಸಾಧ್ಯತೆಯಿರುವದರಿಂದ all the best ಅಂತಾ ಮಾತ್ರ ಹೇಳಬಲ್ಲೆ.
    ಪ್ರೀತಿಯಿಂದ
    ಉದಯ್ ಇಟಗಿ
    ಲಿಬಿಯಾ

    ಪ್ರತಿಕ್ರಿಯೆ
  4. y k sandhya sharma

    hrudaya kalakuva nimma yaatanaamaya anubhava oduttidda haage nanna kannininda niiru hariyitu.hotteyalli yamayaatane. oh! nanna baayi kattide.nimma novu nannadaagide.bhagavantha nimage olleya aarogya kodalendu prarthisuttene- nimma gelethi SANDHYA

    ಪ್ರತಿಕ್ರಿಯೆ
  5. Anil Talikoti

    “ಅವತ್ತು ಅತ್ತ ನಾನು ಮತ್ತೆ ಅತ್ತಿದ್ದು ಆಗಸ್ಟ್ 14 ನನ್ನ ಟ್ರೀಟ್‌ಮೆಂಟ್ ಎಲ್ಲ ಮುಗಿಯಿತು ಅಂದ ದಿನ ಮಾತ್ರ. ಅವೆರಡು ದಿನ ಬಿಟ್ಟರೆ ನಾನು ಇನ್ನೊಂದೇ ಒಂದು ದಿನಕ್ಕೂ ಕಣ್ಣೀರು ಹಾಕಲಿಲ್ಲ” ನಿಮ್ಮ ಈ ಛಲ, ಕಾಠಿಣ್ಯಕ್ಕೆ ನನ್ನದೊಂದು ಸಲಾಮು. ನೋವು ನುಂಗಿ ಅದನ್ನು ತಾಳ್ಮೆಯಿಂದ ಹೊರತಳ್ಳಿ, ಅಕ್ಷರಕ್ಕಿಳಿಸಿ ಎಷ್ಟೊ ಜನರಿಗೆ ಮಾದರಿಯಾಗಿದ್ದಿರಿ. ನಿಮ್ಮ ಮನೆಯವರ ಸಂಪೂರ್ಣ ಸೇವಾ ಮನೋಭಾವ ಅತ್ಯಂತ ಪ್ರಶಂಸನೀಯ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: