ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ : ವಾಘಾ ಬಾರ್ಡರ್‌ನಲ್ಲೊಂದು ಸಂಜೆ

ವಿಚಿತ್ರ ಆಕರ್ಷಣೆಯ ಗಡಿಯಲ್ಲೊಂದು ಸಂಜೆ

26-11 ಎಂದು ಖ್ಯಾತವಾದ ಘಟನೆಯಲ್ಲಿ ತನ್ನ ಹಲವು ಇತರ ದುರುಳ ಸಂಗಾತಿಗಳೊಂದಿಗೆ ಕರಾಚಿಯಿಂದ ಹೊರಟು ಸಮುದ್ರಮಾರ್ಗವಾಗಿ ಮುಂಬೈ ಪ್ರವೇಶಿಸಿ ಪಾಕಿಸ್ತಾನದಲ್ಲಿ ಕುಳಿತು ಆಡಿಸುತ್ತಿದ್ದ ಸೂತ್ರಧಾರರ ಸೂಚನೆಗನುಗುಣವಾಗಿ ಬೇಕಾಬಿಟ್ಟಿಯಾಗಿ ಗುಂಡು ಹಾರಿಸಿ, ಗ್ರೆನೇಡ್ ಎಸೆದು ವಿದೇಶಿಯರೂ ಒಳಗೊಂಡಂತೆ ನೂರಾರು ಜನರನ್ನು ಕೊಂದ ಅಜಮಲ್ ಕಸಾಬ್. ನಂತರ ಜೀವಂತವಾಗಿ ಸೆರೆಸಿಕ್ಕು ಭಾರತದ ವಿರುದ್ಧ ಸಮರ ಸಾರಿದ ಅಪಾದನೆಯಲ್ಲಿ ಅರ್ಥರ್ ರೋಡ್ ಜೈಲಲ್ಲಿದ್ದ ಅವನಿಗೆ ಭಾರತ ಸರಕಾರ ಹಲವು ಕೋಟಿ ರೂಪಾಯಿ ವ್ಯಯಿಸಿ ವರ್ಷಗಟ್ಟಲೆ ಸುರಕ್ಷಿತವಾಗಿಟ್ಟು, ವಕೀಲರನ್ನು ಒದಗಿಸಿ ನ್ಯಾಯಪ್ರಕ್ರಿಯೆ ಮುಗಿಯುವವರೆಗೆ, (ಭಾರತದ ರಾಷ್ಟ್ರಪತಿಗಳಿಂದ ಆತನ ಕ್ಷಮಾದಾನ ಅರ್ಜಿ ತಿರಸ್ಕೃತವಾಗಿ ಅವನಿಗೆ ಗಲ್ಲು ಶಿಕ್ಷೆ ಕಾಯಂ ಆಗುವ ವರೆಗೆ) ಅವನ ಕೂದಲು ಕೊಂಕದಂತೆ ನೋಡಿಕೊಂಡದ್ದು ಒಂದೆಡೆ,
ಲಾಹೋರ್ ಬಾಂಬ್ ಬ್ಲಾಸ್ಟ್ ಕೇಸ್ ನಲ್ಲಿ ಅಪಾದಿತನಾಗಿ ಕಳೆದ ಇಪ್ಪತ್ಮೂರು ವರ್ಷಗಳಿಂದ ಪಾಕಿಸ್ತಾನದ ಜೈಲಲ್ಲಿ ಕೊಳೆಯುತ್ತಿರುವ ಭಾರತೀಯ ಸಂಜಾತ ಸರಬ್ ಜೀತ್ ಸಿಂಗ್ ಮೇಲೆ ಮೊನ್ನೆ ಜೈಲಿನಲ್ಲೇ “ಸಹಕೈದಿ”ಗಳಿಂದ ಮಾರಣಾಂತಿಕ ಹಲ್ಲೆ ನಡೆದು ಆತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಈಗ ಸಾವು ಬದುಕಿನ ನಡುವೆ ಸೆಣಸುತ್ತಿರುವದು ಇನ್ನೊಂದೆಡೆ. ಆತ ಜೈಲು ಸೇರುವ ಸಮಯದಲ್ಲಿ ಹಸುಳೆಯಾಗಿದ್ದ ಆತನ ಮಗಳು ಈಗ ತರುಣಿ. ತನ್ನ ತಂದೆಯ ದುರ್ವಿಧಿಗಾಗಿ ಆಕೆ ಕಣ್ಣೀರು ಸುರಿಸುತ್ತಿದ್ದಾಳೆ, ತನ್ನ ತಮ್ಮನನ್ನು ಪಾಕಿಸ್ತಾನವೆಂಬ ನರಕದಿಂದ ಹೊರತರಲು ಇನ್ನಿಲ್ಲದ ಪಾಡು ಪಟ್ಟ ಆತನ ಅಕ್ಕ ಗೋಡೆಯತ್ತ ಮುಖ ಮಾಡಿ ಸೆರಗಿನಿಂದ ಕಣ್ಣೀರೊರೆಸಿಕೊಳ್ಳುತ್ತಾಳೆ. ಈ ಎರಡು ದೇಶಗಳ ವಿದೇಶೀ ವಿಭಾಗಗಳು ಜಾಗತಿಕ, ಪ್ರಾದೇಶಿಕ ಜಿಯೋ-ಪೊಲಿಟಿಕಲ್ ಲೆಕ್ಕಾಚಾರ ಹಾಕುತ್ತ ರೋಲರ್ ಕೋಸ್ಟರ್ ಆಡುತ್ತವೆ. ಪಾಕಿಸ್ತಾನವೆಂಬ ನಾಯಿಬಾಲದಂಥ ದೇಶ ಮತ್ತೊಂದು ದುಸ್ಸಾಹಸ ಮಾಡುತ್ತದೆ. ಭಾರತ ಉರಿದೆದ್ದಂತೆ ಮಾಡಿ ಮತ್ತೆ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳುವದು ತನ್ನದೇ ಭುಜದ ಮೇಲಿನ ಹೊರೆಯೇನೋ ಎಂಬಂತೆ ತನ್ನ ಒತ್ತಡವನ್ನು ಸಡಿಲಿಸುತ್ತದೆ, ಕ್ರಿಕೆಟ್ ಆಡಿಸುತ್ತದೆ….!
ಭಾರತ ಪಾಕಿಸ್ತಾನವೆಂಬ ಎರಡು ದೇಶಗಳ ನಡುವೆ ತುಂಬ ವಿಲಕ್ಷಣವಾದ ಹಲವು ಇಂಥ ವೈರುಧ್ಯಗಳಿವೆ. ಇವೆರಡು ದೇಶಗಳ ವಿಭಜನೆಯ ಇತಿಹಾಸ ಒಂದು ದುರಂತ ಕತೆ. ಖೂಳ ಸಿದ್ಧಾಂತಗಳು ತಂದಿಟ್ಟ ಯಾತನೆಗಳ, ನಿಟ್ಟುಸಿರುಗಳ, ನೋವುಗಳ, ಅಗಲಿಕೆಗಳ, ನೆನಪುಗಳ ಅಂತ್ಯವಿಲ್ಲದ ಚರಮಗೀತ. ವಾಘಾ ಬಾರ್ಡರ್ ಎಂಬ ಗಡಿರೇಖೆಯೊಂದನ್ನು ತಲುಪುವ ಯಾರಿಗೇ ಆದರೂ ಮನಸಿನಲ್ಲಿ ಏನೇನೋ ತುಮುಲಗಳೇಳುತ್ತವೆ. ತಾವು ತೆರೆಯ ಮೇಲೆ ನೋಡಿದ ಹಲವು ದೃಶ್ಯಗಳು,ಕತೆ ಕಾದಂಬರಿಗಳಲ್ಲಿ ಓದಿದ ಹಲವು ಕಥಾನಕಗಳು ನೆನಪಾಗುತ್ತವೆ. ಚೀನದ, ಬಾಂಗ್ಲಾದೇಶದ ಗಡಿಗಳಲ್ಲಿ ಬಹುಶ: ಈ ಅನುಭವ ಆಗಲಿಕ್ಕಿಲ್ಲ. ಏಕೆಂದರೆ ಈ ಗಡಿಯ ಕತೆಯೇ ಬೇರೆ. ಇದು ಕರುಳಬಳ್ಳಿಗಳು ಅತ್ತಿತ್ತ ಹಂಚಿ ಹೋದ ಕತೆ. ಇಲ್ಲಿ ಈ ದೇಶಗಳ ನಡುವಿನ ವಿಚಿತ್ರ ಹಗೆತನದ ಸಂಬಂಧದಿಂದಾಗಿ ದೇಶ ವಿಭಜನೆಯ ಕಾಲದಲ್ಲಿ ಬೇರ್ಪಟ್ಟು ಈ ವಾಘಾ ಗಡಿಯ ಆಚೆ ಈಚೆ ಆಗಿರುವ ತಮ್ಮ ರಕ್ತಸಂಬಂಧಿಗಳನ್ನು, ಸುಲಭಕ್ಕೆ ನೋಡಲಾಗದ, ಸ್ಪರ್ಶಿಸಲಾಗದ, ನೋವು-ನಲಿವುಗಳಲ್ಲಿ ಪಾಲ್ಗೊಳ್ಳಲಾಗದ ಜನರ ಬೇಗುದಿಗಳಿವೆ. ಈ ಎರಡೂ ದೇಶಗಳಲ್ಲಿ ಕಲೆ, ಸಂಗೀತ,ಸಾಹಿತ್ಯ,ಕ್ರೀಡೆಗೆ ಸಂಬಂಧಿಸಿದಂತೆ ಅಪ್ಪಟವಾದ ಪಾರಸ್ಪರಿಕವಾದ ಪ್ರೀತಿ ಮೆಚ್ಚುಗೆಗಳಿವೆ. ಮೆಹದೀ ಹಸನ್, ಗುಲಾಂ ಅಲಿ, ಅಬಿದಾ ಪರ್ವೀನ್, ರೇಶ್ಮಾ,ಅದ್ನಾನ್ ಸ್ವಾಮಿ, ಇಮ್ರಾನ್ ಖಾನ್, ವಾಸೀಂ ಅಕ್ರಮ್ ಮೊದಲಾದವರ ಪ್ರತಿಭೆಯ ಆರಾಧಕರು ಇಲ್ಲಿರುವಂತೆಯೇ ಇಲ್ಲಿಯ ಸಂಗೀತಗಾರರ, ನಟ-ನಟಿಯರ, ಕ್ರೀಡಾಪಟುಗಳ, ಸೂಫಿ ಸಂತರ, ಕವಿಗಳ ಹುಚ್ಚರು, ಆರಾಧಕರು ಅಲ್ಲೂ ಇದ್ದಾರೆ. ಅಧಿಕೃತ ವೀಸಾ ಹೊಂದಿದ್ದು ಭೂಮಾರ್ಗವಾಗಿ ಭಾರತದೊಳಕ್ಕೆ ಬರಬಯಸಿದ ಪಾಕಿಸ್ತಾನಿಗಳು, ಪಾಕಿಸ್ತಾನದೊಳಕ್ಕೆ ಹೋಗಬೇಕಾದ ಭಾರತೀಯರು ೧೯೯೯ರ ವರೆಗೆ ಎರಡೂ ದೇಶಗಳ ಮಧ್ಯೆ ಭೂಮಾರ್ಗದ ಏಕೈಕ ಗಡಿಯಾಗಿದ್ದ ಈ ವಾಘಾ ಬಾರ್ಡರ್ ನಲ್ಲಿ ಆಚೆ ಈಚೆ ಆಗುತ್ತಾರೆ, ತಮಗಾಗಿ ಕಾಯ್ದು ನಿಂತ ವಾಹನಗಳನ್ನೇರಿ ತಮ್ಮೂರ ಬಸ್ ಸ್ಟ್ಯಾಂಡಿನಲ್ಲಿ ಇಳಿದು ನಡೆದು ವಿವಿಧ ಓಣಿ ಬೀದಿಗಳಲ್ಲಿ ಕಣ್ಮರೆಯಾಗುವಂತೆ ಕಣ್ಮರೆಯಾಗುತ್ತಾರೆ.
ಒಂದೂವರೆ ವರ್ಷದ ಹಿಂದೆ (2011 ಡಿಸೆಂಬರ್) ಪಂಜಾಬ್ ನ ಪಟಿಯಾಲಾದಲ್ಲಿ ನಡೆದ ಭಾರತೀಯ ಇತಿಹಾಸ ಕಾಂಗ್ರೆಸ್ ನ 72ನೇ ವಾರ್ಷಿಕ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಹೊರಟ ನಾವು ಮೊದಲು ಬೆಳಿಗ್ಗೆ ಅಮೃತಸರದಲ್ಲಿ ಸ್ವರ್ಣಮಂದಿರ್ ಎಂದು ಜನಪ್ರಿಯವಾಗಿ ಕರೆಯಲಾಗುವ ಹರಮಂದಿರ್ ಸಾಹಿಬ್ ಗೆ ಹೋದರೆ ಅಲ್ಲಿ “ಸಂತ” ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಮತ್ತವನ ಪ್ರತ್ಯೇಕತಾವಾದಿ ಭಯೋತ್ಪಾದಕ ಸಮೂಹವನ್ನು ಸಂಹರಿಸಲು ೧೯೮೩ರಲ್ಲಿ ಭಾರತದ ಸೇನೆ ಒಳಹೊಕ್ಕು ಸಿಖ್ಖರ ಪವಿತ್ರ ಅಕಾಲ್ ತಖ್ತ್ ಅನ್ನು ಗುಂಡಿನ ಸುರಿಮಳೆಯಿಂದ ವಿರೂಪಗೊಳಿಸಿದ, ನಂತರ ಇಂದಿರಾಗಾಂಧಿ ಹತ್ಯೆಯೇ ಮೊದಲಾದ ಅದರಿಂದಾದ ಪರಿಣಾಮಗಳ ನೆನಪು. ಮಧ್ಯಾಹ್ನ ಜಾಲಿಯಾಂವಾಲಾಬಾಗ್ ಗೆ ಹೋದರೆ ಸ್ವಾತಂತ್ರ್ಯಫೂರ್ವದ ವರ್ಷಗಳಲ್ಲಿ ಒಂದು ವೈಶಾಖಿಯ ಪವಿತ್ರ ದಿನದಂದು ಆ ಸಾರ್ವಜನಿಕ ಉದ್ಯಾನದಲ್ಲಿ ಸೇರಿದ್ದ ನಿರಾಯುಧ ಸಿಖ್ಖರ ಮೇಲೆ ಹೆಂಗಸರು ಮಕ್ಕಳೆನ್ನದೇ ಜನರಲ್ ಡಯರ್ ಫೈರಿಂಗ್ ಮಾಡಿಸಿ ಸಹಸ್ರಾರು ಜನರ ಸಾವಿಗೆ ಕಾರಣನಾದ ಚರಿತ್ರೆಯ ಕರಾಳ ಪುಟದ ನೆನಪು.
ಸಾಲದೆಂಬಂತೆ ಇಳಿಮಧ್ಯಾಹ್ನ ಮೂರು ವರೆ ಗಂಟೆಯ ಹೊತ್ತಿಗೆ ಒಂದು ಅಟೋರಿಕ್ಷಾ ಏರಿ ನಾವು ಆರು ಜನ- ನಾನು, ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರೊಫೆಸರ್ ಬಿ.ಸುರೇಂದ್ರರಾವ್, ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ. ಅಶ್ವಥನಾರಾಯಣ, ಡಾ ಎಂ. ಜಮುನ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಡಾ ಬಾರಕೂರು ಉದಯ ಮತ್ತು ಡಾ.ಕುಮಾರಸ್ವಾಮಿ- ( ರಿಕ್ಷಾದ ಹಿಂದಿನ ಸೀಟಿನಲ್ಲಿ ನಾಲ್ವರು, ಡ್ರೈವರ್ ನ ಎಡಬಲಕ್ಕೆ ಇಬ್ಬರು., ಹೀಗೆ ಆಸೀನರಾಗಿ!) ವಾಘಾ ಗಡಿಗೆ ಹೊರಟೆವು. ಅಲ್ಲಿ ಹೋದರಂತೂ ನೆನಪುಗಳ ಸಂತೆ ನೆರೆಯುತ್ತದೆ.

ಅಲ್ಲಿಗೆ ಹೊರಟದ್ದು ಸೂರ್ಯಾಸ್ತದ ಸಮಯದಲ್ಲಿ ಅಲ್ಲಿ ನಡೆಯುವ ಎರಡೂ ದೇಶಗಳ ಧ್ವಜವನ್ನು ಕೆಳಗಿಳಿಸುವ ಬೀಟಿಂಗ್ ರಿಟ್ರೀಟ್ ಎಂಬ ಹೆಸರಿನ ಸಮಾರಂಭವನ್ನು ನೋಡಲು. ಅಷ್ಟು ಬೇಗ ತಲುಪಬೇಕೆಂದು ಹೊರಟದ್ದು ಸರಿಯಾದ ಸ್ಥಳಾವಕಾಶ ಸಿಗಲೆಂದು.ಅಮೃತಸರ್ ದಿಂದ ಲಾಹೋರ್ ಗೆ ಹೋಗುವ ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿ (G.T.Road) ನಮ್ಮ ಪಯಣ. ದೇಶ ವಿಭಜನೆಯ ವೇಳೆ ಲಕ್ಷಾಂತರ ಜನ ತಮ್ಮ ಜಾನುವಾರುಗಳನ್ನು ಹೊರಡಿಸಿಕೊಂಡು ಕೂಸುಕುನ್ನಿಗಳನ್ನು ಕಟ್ಟಿಕೊಂಡು ಗಂಟು ಮೂಟೆಗಳ ಸಮೇತ ಭಾರವಾದ ಹೃದಯಗಳಿಂದ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಶಾಶ್ವತವಾಗಿ ಸ್ಥಳಾಂತರಗೊಂಡ ಐತಿಹಾಸಿಕ ಮಾರ್ಗ ಅದು. ಅಗಣಿತ ಸಾವು ನೋವುಗಳನ್ನು ಕಂಡ ನೆಲ.
ಅಲ್ಲಿ ಮುಕ್ಕಾಲು ಗಂಟೆ ಸಾಗಿ ಭಾರತದ ಕೊನೆಯ ಹಳ್ಳಿಯಾದ ಅಟ್ಟಾರಿ ದಾಟಿ ನಾವು ವಾಘಾ ಗಡಿ ತಲುಪಿದಾಗ ವಿವಿಧ ನಗರಗಳ ಅಂತರವನ್ನು ತೋರಿಸುವ ಫಲಕಗಳಲ್ಲಿ ಲಾಹೋರ್ 23 ಕಿ.ಮೀ ಎಂದು ಇತ್ತು. ಧಾರವಾಡದಿಂದ ಹುಬ್ಬಳ್ಳಿ ಎಷ್ಟು ದೂರವೋ ಅಷ್ಟು, ಅರ್ಧ ಗಂಟೆಯ ಪಯಣ. ಜನ ತಮ್ಮ ಕೂಸು ಕುನ್ನಿಗಳನ್ನೆತ್ತಿಕೊಂಡು ಬಿರುಸಿನ ಹೆಜ್ಜೆಗಳನ್ನಿಟ್ಟು, ಕೆಲವರು ಓಟದ ನಡಿಗೆಯಲ್ಲಿ, ಆ ಸಮಾರಂಭ ನಡೆಯುವ ಸ್ಥಳಕ್ಕೆ ಧಾವಿಸುತ್ತಿದ್ದರು. ಅಶ್ವಾರೋಹಿ ಯೋಧರ ಹದ್ದಿನ ಕಣ್ಣಿನ ಕಾವಲು ಹಾದಿಯುದ್ದಕ್ಕೂ. ಒಂದೆಡೆ ಮೆಟಲ್ ಡಿಟೆಕ್ಟರ್ ಟೆಸ್ಟ್. ಕೆಮರಾ ಕವರ್, ಬ್ಯಾಗ್ ಇತ್ಯಾದಿಗಳನ್ನೆಲ್ಲ ಒಂದು ಕಡೆ ಡೆಪಾಜಿಟ್ ಮಾಡಿ ಖಾಲಿ ಕೈ ಬೀಸಿಕೊಂಡು ಅಲ್ಲಿ ತಲುಪಿದಾಗ ಸಾವಿರಾರು ಜನ ಆಗಲೇ ನೆರೆದಿದ್ದರು.
ಪ್ರವೇಶ ದ್ವಾರ ದಾಟಿ ಹಿಂದಿರುಗಿ ನೋಡಿದರೆ ಮೇಲೆ ಅದರ ಮಧ್ಯದಲ್ಲಿ ಮಹಾತ್ಮಾಗಾಂಧಿಯವರ ಚಿತ್ರ. ಪಾಕಿಸ್ತಾನದ ಪ್ರವೇಶದ್ವಾರದಲ್ಲಿ ಮಹಮದಾಲಿ ಜಿನ್ನಾ ಚಿತ್ರ. ಭಾರತದ ಗಡಿ ಸಂರಕ್ಷಣಾ ಪಡೆಯ ಯೋಧರು ಇತ್ತ ಮತ್ತು ಪಾಕಿಸ್ತಾನಿ ರೇಂಜರ್ಸ್ ಅತ್ತ ಸರ್ವ ಸನ್ನದ್ಧರಾಗುತ್ತಿದ್ದರು. ಗಡಿಯ ಮಧ್ಯದ ದ್ವಾರದಾಚೆ ಪಾಕಿಸ್ತಾನಿ ಜನ ಕುಳಿತಿದ್ದರು. ಲಾಹೋರ್ ಮತ್ತಿತರ ಸ್ಥಳಗಳಿಂದ ಬಂದಿದ್ದ ಆ ಪಾಕಿಸ್ತಾನಿಗಳ ಸಂಖ್ಯೆ ಭಾರತೀಯ ಪ್ರೇಕ್ಷಕರ ಸಂಖ್ಯೆಯ ಅರ್ಧದಷ್ಟೂ ಇರಲಿಲ್ಲ. ದೇಶ ವಿಭಜನೆಯ ಭಾಗವಾಗಿ ವಿವಾದಾತ್ಮಕ Radcliffe Line ಎಂಬ ವಿಭಾಜಕ ರೇಖೆ ಎಳೆಯಲ್ಪಟ್ಟು, ಸ್ವಾತಂತ್ರ್ಯ ಸಿಕ್ಕಾಗ ಅಲ್ಲಿದ್ದ ವಾಘಾ ಎಂಬ ಹಳ್ಳಿಯನ್ನು ಇಬ್ಭಾಗಿಸಿದ ಆ ಗಡಿಯ ಸಂಕೇತವಾಗಿ ಎರಡು ಪ್ರತ್ಯೇಕ ಕಭ್ಭಿಣದ ದ್ವಾರಗಳು ಅಲ್ಲಿದ್ದವು.
ಈಚೆ ಭಾರತದ ಗಡಿಸಂರಕ್ಷಣಾ ಪಡೆಯ ಠಾಣೆ ಮತ್ತು ಆಚೆ ಪಾಕಿಸ್ತಾನಿ ರೇಂಜರ್ಸ್ ಠಾಣೆಗಳು. ಆಯಾ ದೇಶದ ಪ್ರವೇಶದ್ವಾರಗಳ ಆಚೆ ಈಚೆ ಒಬ್ಬೊಬ್ಬ ಕುದುರೆಸವಾರ ಯೋಧ ನಿಂತಿರುತ್ತಾನೆ. ಗಡಿರಕ್ಷಣಾ ಪಡೆಯವರು ಬಿಗಲ್ ಊದುತ್ತಿರುವಂತೇ ಸರತಿಯಂತೆ ಇಬ್ಬರು ಭಾರತದ ಯೋಧರು ಬಿರುಸಾಗಿ ಮಧ್ಯದ ದ್ವಾರದ ವರೆಗೆ ಹೋಗಿ ಮರಳುತ್ತಾರೆ. ಆಮೇಲೆ ಪಾಕಿಸ್ತಾನಿ ಇಬ್ಬರು ಯೋಧರು ತುರುಸಿನಿಂದ ಅದೇ ದ್ವಾರದ ವರೆಗೆ ಬಂದು ಮರಳಿ ಹೋಗುತ್ತಾರೆ. ಅವರು ಟೊಂಕದ ಮೇಲೆ ಕೈ ಇಟ್ಟುಕೊಂಡು ಗರಕ್ಕನೇ ಹೊರಳುವದು, ಕಾಲುಗಳನ್ನು ತಮ್ಮ ಸೊಂಟದ ಸಮಾಂತರಕ್ಕೆ ತಂದು ನೆಲಕ್ಕೆ ಧೊಪ್ಪನೇ ಅಪ್ಪಳಿಸುವದು, ಪರಸ್ಪರರತ್ತ ಕೆಣಕುವ ರೀತಿಯಲ್ಲಿ ಹಸ್ತಗಳನ್ನು ಚಾಚುವದು. ಹಾಗೂ ಆಯಾಯ ದೇಶಗಳವರು ತಮ್ಮ ಯೋಧರ ನಡಿಗೆಯ ತುರುಸಿಗೆ ಬಿರುಸಿಗೆ ಉತ್ತೇಜನ ಕೊಡುವದು…ಅತ್ತ ಪಾಕಿಸ್ತಾನದ ಪೇಕ್ಷಕರು ಪಾಕಿಸ್ತಾನ್ ಜಿಂದಾಬಾದ್ ಎಂದರೆ ಇತ್ತ ಕಡೆ ಭಾರತೀಯರು ತಮ್ಮ ದೇಶಕ್ಕೆ ಜೈಕಾರ ಹೇಳುವದು ಹೀಗೆ ಈ “ಸಮಾರಂಭ” ನಡೆಯುತ್ತದೆ. ನಾಲ್ಕಾರು ಸಲ ಇದು ಪುನರಾವರ್ತನೆ ಆದ ಮೇಲೆ ಆಯಾಯ ದೇಶದ ಧ್ವಜ ಹಿಡಿದು ಅತ್ತಿತ್ತ ವಾಲಾಡಿಸುತ್ತ ಪ್ರವೇಶದ್ವಾರದ ವರೆಗೆ ನಡೆದು ಹೋಗುವ ಅವಕಾಶ ಆಯ್ದ ಕೆಲ ನಾಗರಿಕರಿಗೂ, ವಿಶೇಷವಾಗಿ ತರುಣಿಯರಿಗೆ, ದೊರೆಯುತ್ತದೆ. ಈಗ ಹಾಡು ಕುಣಿತಗಳೂ ನಡೆಯುತ್ತವೆ.
ನಾವು ಹೋದ ದಿವಸ ಮಿಲಿಟರಿ ಸಮವಸ್ತ್ರದಲ್ಲಿಲ್ಲದೇ ಬಿಳಿ ಬಟ್ಟೆ ಧರಿಸಿದ್ದ ಬಿ ಎಸ್ ಎಫ್ ನ ಓರ್ವ ಯೋಧ ಭಾರತದ ಪ್ರೇಕ್ಷಕರಿಗಿಂತ ಕಡಿಮೆ ಸಂಖ್ಯೆಯಲ್ಲಿದ್ದ ಪಾಕಿ ಪ್ರೇಕ್ಷಕರತ್ತ ಕೈತೋರಿ ಭಾರತೀಯರನ್ನು ಹೆಚ್ಚು ಜೋರಾಗಿ ಕೂಗುವಂತೆ, ಪಾಕಿಗಳ ಕಿವಿಗೆ ಸರಿಯಾಗಿ ತಲುಪುವಂತೆ ದೊಡ್ಡದಾಗಿ ಧ್ವನಿ ಮೊಳಗಿಸುವಂತೆ ಉತ್ತೇಜಿಸುತ್ತಿದ್ದ. ಅವನ ಆ ಭಂಗಿ, ನೋಟ, ಚಲನೆ ಇವೆಲ್ಲ ತಮ್ಮಷ್ಟಕ್ಕೆ ತಾವೇ ಮನರಂಜಕವಾಗಿದ್ದವು. ಅದರಲ್ಲಿ ದೇಶಭಕ್ತಿ ಗೀತೆ, ಅದಕ್ಕೆ ಕಾಲೇಜು ಕನ್ಯೆಯರ, ಇತರ ತರುಣಿಯರ ನೃತ್ಯ ಇವೆಲ್ಲ ಸೇರಿ ಒಂದು ವಿಶಿಷ್ಟ ವಾತಾವರಣವೇ ನಿರ್ಮಾಣವಾಗಿತ್ತು. ಅಂತಿಮವಾಗಿ ಸೂರ್ಯಾಸ್ತವಾಗುತಿದ್ದಂತೆ ದ್ವಾರಗಳನ್ನು ತೆರೆದು ಮಧ್ಯ ಭಾಗದಲ್ಲಿರುವ ಧ್ವಜಸ್ಥಂಭಗಳಿಂದ ತಮ್ಮ ತಮ್ಮ ದೇಶಗಳ ಧ್ವಜಗಳನ್ನು ಸಮಸಮಾಂತರವಾಗಿ ಕೆಳಗಿಳಿಸಿ ಎರಡೂ ಕಡೆಯ ಯೋಧರು ಬಿರುಸಿನಿಂದ ಹಸ್ತಲಾಘವ ಮಾಡಿದೊಡನೆ ದ್ವಾರಗಳು ಮುಚ್ಚುತ್ತಿದ್ದವು. ಸಮಾರಂಭ ಕೊನೆಗೊಂಡಿತೆಂದು ಅರ್ಥ. (ಪರಸ್ಪರ ವಿಶ್ವಾಸ ಕುದುರಿಸುವ ಕ್ರಮಗಳ ಭಾಗವಾಗಿ ಸೂರ್ಯಾಸ್ತದ ಸಮಯಕ್ಕೆ ಭಾರತದ ಅಟ್ಟಾರಿಯಿಂದ ಲಾಹೋರ್ ಗೆ ಹೋಗುವ ಬಸ್ಸು ಬಂದು ಮಧ್ಯದ ದ್ವಾರಗಳನ್ನು ದಾಟಿ ಪಾಕಿಸ್ತಾನದ ದಿಕ್ಕಿನತ್ತ ಹೋಗುವದರೊಂದಿಗೆ ಈಗ ಈ ಸಮಾರಂಭ ಮುಗಿಯುತ್ತದೆ).
ನಾವು ಫೋಟೋ ತೆಗೆಯುತ್ತ ಒಟ್ಟು ಅದರ ಅರ್ಥ,ಸಂದೇಶ,ಸಾರ್ಥಕ್ಯಗಳನ್ನು ವಿಮರ್ಶಾತ್ಮಕವಾಗಿ ಗ್ರಹಿಸುತ್ತಿದ್ದೆವು. ೧೯೫೯ರಿಂದ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದು ಎರಡೂ ದೇಶಗಳ ಸಂರಕ್ಷಣಾ ಪಡೆಗಳು ಜಂಟಿಯಾಗಿಯೇ ಪ್ರತಿನಿತ್ಯ, ಸಂಯೋಜಿತ ರೀತಿಯಲ್ಲಿ, ನಡೆಸುವ ಕಾರ್ಯಕ್ರಮ. ಮೊದಲೆಲ್ಲ ಇದು ತುಂಬ ಪ್ರವೋಕೇಟಿವ್ಹ್ ಆದಂಥ ರೀತಿಯಲ್ಲಿ ನಡೆಯುತ್ತಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಇದರ ಬಿರುಸನ್ನು ತುಸು ತಗ್ಗಿಸಲಾಗಿದೆ. ಆದರೆ ಒಂದು ಥರದ ಜಿಂಗೋಯಿಜಂ ಇದ್ದೇ ಇರುತ್ತದೆ.
ತ್ರಿವರ್ಣ ಧ್ವಜಗಳನ್ನು ಬೀಸುತ್ತ ಶತ್ರುದೇಶದ ಪ್ರಜೆಗಳನ್ನು ಮೂದಲಿಸುವಂತೆ ನಮ್ಮವರ ಹಾರಾಟವೇ ಅಂದು ತುಸು ಜಾಸ್ತಿ ಇತ್ತು. ಪಾಕಿಸ್ತಾನಿಗಳು ಬಹುಪಾಲು ತೆಪ್ಪಗೆ ಕುಳಿತಿದ್ದರು. ಕೂಗಿದರೆ ಕೇಳಿಸುವ ಅಂತರದಲ್ಲಿ ಪಾಕಿಸ್ತಾನದ ಗಂಡಸರು,ಹೆಂಗಸರು, ಮಕ್ಕಳು.., ಇತ್ತ ಭಾರತದ ಅದೇ ಥರದ ಪ್ರಜೆಗಳು. ಆದರೆ ಒಂದು ಹಂತದಲ್ಲಿ ಒಂದು ಸಂಸ್ಕೃತಿಯನ್ನು ಹಂಚಿಕೊಂಡಿದ್ದೆವೆಂಬ, ವಸಾಹತು ಆಳ್ವಿಕೆಯಲ್ಲಿ ಸಮಾನ ಐತಿಹಾಸಿಕ ಅನುಭವಗಳ ಬಲಿಪಶುಗಳಾಗಿದ್ದೆವೆಂಬ ಯೋಚನೆಯೂ ಇಲ್ಲದಂತೆ ಕುಳಿತ ಜನ….!

ಅಟ್ಟಾರಿ ಕಡೆಯಿಂದ ಬಸ್ ಬಂತು. ದಾಟಿ ಹೋಯಿತು. ಜನ ಮೇಲೇಳತೊಡಗಿದರು. ನಾನು ಮತ್ತು ಡಾ. ಸುರೇಂದ್ರರಾವ್ ಪರಸ್ಪರ ಮುಖ ನೋಡಿಕೊಂಡೆವು.ರಾಯರು ತಮ್ಮ ಗಡ್ಡ ಕೆರೆದುಕೊಳ್ಳುತ್ತ ತಮ್ಮ ಯಥಾಪ್ರಕಾರದ ಗಡಿಬಿಡಿ ಗಡಿಬಿಡಿ ಸೌಥ್ ಕೆನರಾ ಅಕ್ಸೆಂಟ್ ನಲ್ಲಿ “ಆಯ್ತು., ಇಟ್ಸ್ ಆಲ್ ರೈಟ್. ಇದಿಷ್ಟು ಅಂತ ಆಯ್ತಲ್ಲಾ, ಇನ್ನು ಮೇಲೆ ನಾನಿದನ್ನು ನೋಡಲು ಬರುತ್ತೇನೆ ಅಂತ ಅನ್ನಿಸುವದಿಲ್ಲ”. ಎಂದರು. “ನಾನೂ ಇನ್ನು ಮುಂದೆ ಎಂದಾದರೂ ಇದನ್ನು ನೋಡಲು ಮತ್ತೆ ಇಚ್ಛಿಸುತ್ತೇನೆ ಅಂತ ನನಗೂ ಅನ್ನಿಸುವದಿಲ್ಲ” ಎಂದೆ.
ಫೇಸ್ ಬುಕ್ ನಲ್ಲಿ ವಾಘಾ ಗಡಿಯ ಚಿತ್ರಗಳ ಅಲ್ಬಂ ಅಪ್ ಲೋಡ್ ಮಾಡುತ್ತ ಅದಕ್ಕೆ ಪೀಠಿಕೆಯ ರೂಪದಲ್ಲಿ ನಾನು ಕೆಲ ಸಾಲುಗಳನ್ನು ಬರೆದೆ:
“We were there to watch this parade.The partition that took place in 1947 was not merely a partition of territory.It was a partition of hearts,very primary family bonds,a common heritage, culture and much more. But the overwhelming atmosphere there was a sort of Jingoism,especially on the part of our countrymen vis-a-vis a small contingent of Pakistani spectators across the divide.For me the whole thing was a sad commentary on a queer relation that the two neighbours have had.”

‍ಲೇಖಕರು avadhi

1 May, 2013

3 Comments

  1. NAVALKAL

    shetter sir
    olleya lekhana

  2. ಅಶೋಕ ಶೆಟ್ಟರ್

    ಮೊನ್ನೆ ಈ ಬರಹವನ್ನು ನಾನು ಬರೆಯುತ್ತಿದ್ದಾಗ ಪಾಕಿಸ್ತಾನದ ಜೈಲೊಂದರಲ್ಲಿ ಸಹಕೈದಿಗಳಿಂದ ಹಲ್ಲೆಗೊಳಗಾದ ಸರಬ್ ಜೀತ್ ಸಿಂಗ್ ಸಾವು ಬದುಕಿನ ನಡುವೆ ಸೆಣಸುತ್ತಿದ್ದ. ಈ ಬರಹದ ಆರಂಭದಲ್ಲಿ ಪ್ರಸ್ತಾಪಿತನಾದ ಆತ ಈಗ ಆ ಮಾರಣಾಂತಿಕ ಹಲ್ಲೆಯ ಪರಿಣಾಮವಾಗಿ ಅಸು ನೀಗಿದ್ದಾನೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ

  3. bharathi b v

    kanneduru nadedanthe barediddiri ashok … tuuuumba ishtavaythu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading