ಯಮುನೆಯ ದಡದ ರಾಜನಗರಿಯಲ್ಲಿ ಕೊಲೆ ದಂಗೆ ಮುಂತಾಗಿ..
ದೆಹಲಿಯಲ್ಲಿ 1984 ರಲ್ಲಿ ನಡೆದ ಇಂದಿರಾಗಾಂಧಿ ಹತ್ಯೆ ನಂತರ ದೇಶದ ರಾಜಧಾನಿ ದೆಹಲಿಯಲ್ಲಿ ಸಿಖ್ಖರ ವಿರುದ್ಧ ನಡೆದ ಕೊಲೆ ದಂಗೆಗಳಲ್ಲಿ ಶಾಮೀಲಾಗಿದ್ದ ಆರೋಪದಿಂದ ಜಗದೀಶ್ ಟೈಟ್ಲರ್ ಎಂಬ ಕಾಂಗ್ರೆಸ್ ರಾಜಕಾರಣಿಗೆ ಕೆಲ ವರ್ಷಗಳ ಹಿಂದೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐ ಎಂಬ ಸದಾ ಶಂಕಿತ ಸಂಸ್ಥೆಯನ್ನು ಮೊನ್ನೆ ಕೋರ್ಟ್ ತರಾಟೆಗೆ ತೆಗೆದುಕೊಂಡು ಮೊಕದ್ದಮೆ ದಾಖಲಿಸಿ ಸರಿಯಾಗಿ ತನಿಖೆ ನಡೆಸುವಂತೆ ಹೇಳುವದರೊಂದಿಗೆ ಮುಗಿದುಹೋದದ್ದು ಎಂದು ಭಾವಿಸಲಾಗಿದ್ದ ಅಧ್ಯಾಯವೊಂದು ಮತ್ತೆ ತೆರೆದುಕೊಂಡು ಒಂದು ಕರಾಳ ವಿದ್ಯಮಾನದ ನೆನಪುಗಳನ್ನು ಜೀವಂತಗೊಳಿಸಿದೆ.
31 ಅಕ್ಟೋಬರ್ 1984. ಪೂರ್ವಾಹ್ನ ಹನ್ನೊಂದುವರೆ ಹೊತ್ತಿಗೆ ನಮ್ಮ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಬ್ರಹ್ಮಪುತ್ರಾ ಹಾಸ್ಟೆಲ್ ನ ನನ್ನ ಕೋಣೆಯಲ್ಲಿ ಕುಳಿತು ನಾವು ಕೆಲ ಗೆಳೆಯರು ಪಾಕಿಸ್ತಾನದ ಸಿಯಾಲ್ ಕೋಟ್ ನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆಯನ್ನು ಟ್ರಾನ್ಸಿಸ್ಟರ್ ನಲ್ಲಿ ಆಲಿಸುತ್ತ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಕಾರಿಡಾರ್ ನಲ್ಲಿ ಏನೋ ಮಾತು, ಏನೋ ಉದ್ಗಾರ, ಏನೋ ಗದ್ದಲ. ಹೊರಗೆ ಬಂದರೆ 666+ಬಸ್ ನಲ್ಲಿ ಹಾಸ್ಟೆಲ್ ಗೆ ಮರಳಿದ್ದ ಕೆಲ ವಿದ್ಯಾರ್ಥಿಗಳು ನಂಬಲನರ್ಹ ಸುದ್ದಿಯೊಂದನ್ನು ತಂದಿದ್ದರು. ಅದೆಂದರೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯ ಮೇಲೆ ಆಕೆಯ ಅಂಗರಕ್ಷಕರಿಂದಲೇ ಗುಂಡಿನ ದಾಳಿ ನಡೆದು ಆಕೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (AIIMS) ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದಾಳೆ ಎಂಬುದು.
ದೆಹಲಿಯ ರಸ್ತೆಗಳಲ್ಲಿ ಈ ಪ್ರಭಾವಿ ಮಹಿಳೆಯ ಸವಾರಿ ದಾಟಿ ಹೋಗುತ್ತಿದ್ದರೆ ಅತ್ತಲಿನ ಜನ ಮತ್ತು ವಾಹನಗಳು ಅತ್ತಲೇ ಇತ್ತ ಕಡೆಯವು ಇತ್ತಲೇ ಎಂಬಂತೆ ಆಕೆಯ ಮತ್ತು ಆಕೆಯ ಬೆಂಗಾವಲಿನ ವಾಹನಗಳು ದಾಟಿ ಹೋಗುವ ವರೆಗೆ ನಿಂತು ಬಿಡಬೇಕಾಗುತ್ತಿದ್ದ ಸ್ಥಿತಿ ನಮ್ಮದಿತ್ತು. ಕ್ರಿಕೆಟ್ ಕಮೆಂಟರಿ ಬಿಟ್ಟು ಸುದ್ದಿಮೂಲಗಳಾದ ಬಿಬಿಸಿ ಇತ್ಯಾದಿಗಳನ್ನು ತಡಕಾಡಿದೆವು. ಟಿವಿ ರೂಮ್ ಗೆ ಬಂದು ಆಗ ಊರಿಗೊಬ್ಬಳೇ ಪದ್ಮಾವತಿ ಎಂಬಂತಿದ್ದ ಏಕಮಾತ್ರ ಚಾನೆಲ್ ದೂರದರ್ಶನ್ ಆನ್ ಮಾಡಿದರೆ ಆ ಸುದ್ದಿ ನಿಜ ಎಂದು ಗೊತ್ತಾಯಿತು. ಸುದ್ದಿ ವಾಚಕಿಯರೂ ಗರ ಬಡಿದವರಂತಿದ್ದರು.
ಮೆಸ್ ಶುರು ಆಗುವ ವರೆಗೆ ಕಾಯುತ್ತಿದ್ದು ಅದರ ಕುರಿತೇ ಯೋಚಿಸುತ್ತ ಮಾತನಾಡುತ್ತ ಊಟ ಮುಗಿಸಿ ಮತ್ತೆ ಸುದ್ದಿಗಾಗಿ ಟಿವಿ ಮುಂದೆ ಕೂತೆವು. ಮಧ್ಯಾಹ್ನ ಒಂದೂವರೆಯ ಹೊತ್ತಿಗೆ ರೇಡಿಯೋ ಆಸ್ಟ್ರೇಲಿಯಾ, ಬಿಬಿಸಿ ಮುಂತಾದ ಮಾಧ್ಯಮಗಳು ಇಂದಿರಾ ಕೊನೆಯುಸಿರೆಳೆದಿದ್ದಾರೆ ಎಂದು ಘೋಷಿಸಿದವು. ದೆಹಲಿಯ ಎಲ್ಲ ದಿನಪತ್ರಿಕೆಗಳ ಕಚೇರಿಗಳ ಮುಂಭಾಗದಲ್ಲೂ ಆ ಸುದ್ದಿ ಸ್ಪಾಟ್ ನ್ಯೂಜ್ ಆಗಿತ್ತೆಂದು ಗೊತ್ತಾಯಿತು. ಮಧ್ಯಾಹ್ನದ ಹೊತ್ತಿಗೆ ಪ್ರಸಿದ್ಧ ದಿನಪತ್ರಿಕೆಗಳು ಹೊರತಂದ ಒಂದು ಪುಟದ ವಿಶೇಷ ಎಡಿಶನ್ ಗಳು ಇಂದಿರಾ ಗಾಂಧಿಯ ಹತ್ಯೆಗೆ ಕಾರಣರಾದವರು ಅವಳ ಅಂಗರಕ್ಷಕ ಪಡೆಯ ಇಬ್ಬರು ಸಿಖ್ಖರು ಎಂದೂ ಪ್ರಕಟಿಸಿದವು. ತನ್ನ ವಿಶ್ವಾಸಾರ್ಹತೆ ಕುರಿತು ಎಂದೂ ತಲೆ ಕೆಡಿಸಿಕೊಳ್ಳದ ಮತ್ತು ಸರಕಾರೀ ಸುದ್ದಿಮಾಧ್ಯಮದಂತಿದ್ದ ದೂರದರ್ಶನ್ ಮಾತ್ರ ಇಂದಿರಾ ಗಾಂಧಿ ಇನ್ನೂ ಜೀವಂತವಾಗಿಯೇ ಇದ್ದಾರೆಂಬಂತೆ ಬಿಂಬಿಸುತಿತ್ತು.
ಪೈಲಟ್ ಕೆಲಸಕ್ಕೆ ರಾಜೀನಾಮೆ ನೀಡಿ ತನ್ನ ತಾಯಿಯ ಬೆನ್ನೆಲುಬಾಗಿ ನಿಲ್ಲಲು ಬಂದಿದ್ದ “ಯುವರಾಜ” ರಾಜೀವ ಗಾಂಧಿ ಬಂಗಾಲದ ಪ್ರವಾಸದಲ್ಲಿದ್ದರು. ತರಾತುರಿಯಿಂದ ಅವರನ್ನು ಪ್ರಧಾನಿ ಎಂದು ಆಯ್ಕೆ ಮಾಡಬೇಕಾಗಿತ್ತು. ರಾಷ್ಟ್ರಾಧ್ಯಕ್ಷ ಗ್ಯಾನಿ ಜೈಲ್ ಸಿಂಗ್ ಅವರು ದೆಹಲಿಗೆ ಬರುವಂತೆ ರಾಜೀವ ಗಾಂಧಿಗೆ ತುರ್ತು ಸಂದೇಶ ಕಳಿಸಿ, ರಾಜೀವ ಗಾಂಧಿ ಬರುತ್ತಿರುವದು ಖಚಿತವಾಗಿ ಕಾಂಗ್ರೆಸ್ಸ್ ಸಂಸದರು ’ಒಮ್ಮತ’ದಿಂದ ಅವರಿಗೆ ಪಟ್ಟ ಕಟ್ಟಲು ತೀರ್ಮಾನಿಸಿ ಔಪಚಾರಿಕತೆ ಒಂದೇ ಬಾಕಿ ಎಂಬಂತಾದಾಗ ದೂರದರ್ಶನ ಕೂಡ ಇಂದಿರಾ ಅವರ ಮರಣದ ಸುದ್ದಿಯನ್ನು ಬಿತ್ತರಿಸಿತು.
ದೆಹಲಿಗೆ ಓದಲು ಬಂದಿದ್ದು, ನನ್ನ ಕೋಣೆಯಲ್ಲೇ ಇದ್ದ ನನ್ನ ಸಂಬಂಧಿಯೊಬ್ಬನೊಂದಿಗೆ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ನಾನು 666+ ಬಸ್ ಏರಿ ಇಂದಿರಾಗಾಂಧಿ ಯವರ ಪಾರ್ಥಿವ ಶರೀರ ಪವಡಿಸಿದ್ದ AIIMS ಕಡೆಗೆ ಹೊರಟೆ. ಆ ಬಸ್ ನಮ್ಮ ಹಾಸ್ಟೆಲ್ ನಿಂದ ಹೊರಟು ಮುನಿರ್ಕಾ ದಾಟಿ ವಿವೇಕಾನಂದ ಮಾರ್ಗ, ಸರೋಜಿನಿ ನಗರ್, ಶ್ರೀ ಅರಬಿಂದೋ ಮಾರ್ಗ ಇತ್ಯಾದಿ ಸಂಚರಿಸಿ AIIMS ಬಳಿ ಸಾಗಿ, ಹೌಜ್ ಖಾಸ್ ವಯಾ ಮತ್ತೆ ಮರಳಿ ನಮ್ಮ ಹಾಸ್ಟೆಲ್ ಸ್ಥಿತವಾಗಿದ್ದ ಪೂರ್ವಾಂಚಲಕ್ಕೇ ಬರುತ್ತಿತ್ತು. AIIMS ಮುಂದೆ ಆಗಲೇ ಸಾಕಷ್ಟು ಜನಸಂದಣಿ ಇತ್ತು. ಸಂಭವಿಸಬಹುದಾದ ಗಲಾಟೆ ಇತ್ಯಾದಿಗಳ ಬಗ್ಗೆ ಹಿರಿಯ ಕಾನೂನು ಸುವ್ಯವಸ್ಥೆ ಅಧಿಕಾರಿಗಳಿಗೆ ಸೂಚನೆ ಬೆಳಿಗ್ಗೆ ಹತ್ತಕ್ಕೇ ತಲುಪಿ, ಹತ್ತೂವರೆಗಾಗಲೇ ದೆಹಲಿಯ ಪೋಲಿಸ್ ಕಮಿಶನರ್ ಹಾಗೂ ಲೆಫ್ಟನೆಂಟ್ ಗವರ್ನರ್ ಇದ್ದ ಸಭೆಯಲ್ಲಿ ಬಂದೋಬಸ್ತ್ ಗಾಗಿ ಸೇನೆಯನ್ನು ನಿಯೋಜಿಸುವ ತೀರ್ಮಾನವೂ ಆಗಿತ್ತೆಂದು ಬಿತ್ತರವಾಗಿತ್ತು. ಅಲ್ಲಿ ನೋಡಿದರೆ ಪೋಲೀಸ್ ಬಲ ಅಷ್ಟಾಗಿ ಇದ್ದುದು ಕಂಡುಬರಲಿಲ್ಲ. ಇಂದಿರಾಗಾಂಧಿಯ ಪ್ರಾಣದ ಬಗ್ಗೆ ಉಳಿದ ಜನವರ್ಗದವರ ಹಾಗೆ ತಾವೂ ಚಿಂತಿತರಾಗಿದ್ದ ಹಲವಾರು ಸಿಖ್ಖರನ್ನೂ ಒಳಗೊಂಡು ಎಲ್ಲೆಡೆಯಿಂದ ಆಗಮಿಸುತ್ತಿದ್ದ ಜನರ ಸಂಖ್ಯೆ ಹೆಚ್ಚುತ್ತಲೇ ಇತ್ತು.

ಸಮಯ ಸುಮಾರು ಐದು ಗಂಟೆ ಅಗುತ್ತಿದ್ದಂತೆ AIIMS ಬದಿಯ ರಸ್ತೆಯಲ್ಲಿ ಒಂದೆಡೆಯಿಂದ ಜನಸಂದಣಿಯ ನಡುವೆ ಸ್ವಲ್ಪ ಸಂಚಲನ. ನೋಡಿದರೆ ಅತ್ತಲಿಂದ ಒಂದು ಗುಂಪು ಬಂತು. ಆ ಗುಂಪಿನಲ್ಲಿ ಇದ್ದ ಜನರಿಗಿಂತ ಢಾಳಾಗಿ ಕಂಡಿದ್ದು ಅವರೆಲ್ಲರೂ ಎತ್ತಿ ಹಿಡಿದಿದ್ದ ಉದ್ದನೆಯ ಕೋಲುಗಳು. ಅಲ್ಲಿ ನಡೆದ ಮೊಟ್ಟ ಮೊದಲ ಘಟನೆಗಳಿಗೆ ನನ್ನ ಕಣ್ಣು ಸಾಕ್ಷಿಯಾದವು. ಅಲ್ಲಿ ನೆರೆದ ಜನಸಂದಣಿಯಲ್ಲಿ ಬೆರೆತುಹೋಗಿದ್ದ ಸರ್ದಾರ್ಜಿಗಳನ್ನು (ಸಿಖ್ಖರಿಗೆ ಸಂಬಂಧಿಸಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಶಬ್ದ) ಗುರಿಯಾಗಿಟ್ಟುಕೊಂಡು ಹಿಂಸಾಚಾರಕ್ಕೆ ಮೊದಲಾಯಿತು. ಅವರು ತಲೆಗೆ ಧರಿಸುವ ಬಣ್ಣಬಣ್ಣದ ಪಗಡಿಗಳಿಂದ ಸರ್ದಾರ್ ಗಳನ್ನು ಗುರುತಿಸುವದು ಸುಲಭ. ಅವರ ಪಗಡಿ ಕೀಳುವದು ಅದಕ್ಕೆ ಬೆಂಕಿ ಇಟ್ಟು ಕೋಲಿನಿಂದ ಮೇಲೆತ್ತಿ ತೂರುವದು…ಹತ್ತಾರು ಇಂಥ ಘಟನೆಗಳಾದ ಮೇಲೆ ದೈಹಿಕ ಹಲ್ಲೆಗಳೂ ಪ್ರಾರಂಭವಾದವು.
ಹೊತ್ತು ಮುಳುಗುವ ಹೊತ್ತಿಗೆ ಇಡೀ ವಾತಾವರಣ ತ್ವೇಷಮಯವಾಗತೊಡಗಿತ್ತು. ಪೊಲೀಸರೇನೋ ಇದ್ದರು. ಅವರು ಏನೂ ಮಾಡುತ್ತಿರುವಂತೆ ತೋರಲಿಲ್ಲ. ಆಮೇಲೆ ವಿವಿಧ ದಿಕ್ಕುಗಳಿಂದ ಸ್ಕೂಟರ್ ಮೇಲೆ ಒಬ್ಬಂಟಿಯಾಗಿಯೋ ಅಥವಾ ಪತ್ನಿಸಮೇತರಾಗಿಯೋ ಬರುತ್ತಿದ್ದ ಸಿಖ್ಖರನ್ನು ಅವರ ಗಾಡಿ ಚಲಿಸುತ್ತಿರುವಾಗಲೇ ರಟ್ಟೆ ಹಿಡಿದೆಳೆದು ಅಥವಾ ಕಲ್ಲು ತೂರಿ ಅವರ ಸಮತೋಲನ ತಪ್ಪಿಸಿ ಕೆಡವಿ ಪೆಟ್ರೋಲ್ ಟ್ಯಾಂಕಿನ ಮುಚ್ಚಳ ತೆಗೆದು ಕಡ್ದಿಗೀರಿ ಬೆಂಕಿ ಹಚ್ಚುವ ಚಟುವಟಿಕೆಗಳಿಗೆ ಮೊದಲಾಯಿತು.
ನನ್ನ ಜೊತೆ ಬಂದ ನನ್ನ ಸಂಬಂಧಿ ಮರಳಿ ಹಾಸ್ಟೆಲ್ ಗೆ ಹೋಗೋಣ ಬಾ ಎಂದು ಒಂದೇ ಸಮನೇ ಹೇಳ ಹತ್ತಿದ. ಇನ್ನು ಮುಂದೆ ಅಲ್ಲಿ ಏನೇನು ನಡೆಯಬಹುದು ಎಂಬುದು ಯಾರೂ ಊಹಿಸಲು ಬರುವಂತಿರಲಿಲ್ಲ. ಅವನು ಗಾಬರಿಯಾದಂತಿತ್ತು. ನನಗೆ ಬಿಟ್ಟು ಕದಲುವ ಮನಸಿರಲಿಲ್ಲ. ನೀನು ಹೋಗು ನಾನು ಇನ್ನೊಂದೆರಡು ತಾಸು ಬಿಟ್ಟು ಬರುತ್ತೇನೆ ಎಂದು ಅವನನ್ನು 666+ ಬಸ್ ಹತ್ತಿಸಿ ಬಂದು ನೋಡಿದರೆ ಆಗಲೇ ಕತ್ತಲಾಗಿದ್ದರಿಂದ ರಸ್ತೆಯುದ್ದಕ್ಕೂ ಅಲ್ಲಲ್ಲಿ ಹತ್ತಿಪ್ಪತ್ತು ವಾಹನಗಳು ಧಗ ಧಗ ಉರಿಯುತ್ತಿದ್ದ ದೃಶ್ಯ. ಅಲ್ಲಿದ್ದ ಒಬ್ಬಿಬ್ಬರೊಂದಿಗೆ ಕೂಡಿ ನಮ್ಮ ಕೈಲಾದದ್ದನ್ನು ಮಾಡಲು ತೀರ್ಮಾನಿಸಿ ಎರಡು ಪ್ರಮುಖ ಮಾರ್ಗಗಳು ಪರಸ್ಪರ ಸಂಧಿಸುವ ಒಂದು ಚೌಕದಿಂದ AIIMS ಇರುವ ದಿಕ್ಕಿನಲ್ಲಿ ಹೊರಟು ಬರುತ್ತಿದ್ದ ವಾಹನ ಸವಾರರಲ್ಲಿ ಸಿಖ್ಖರನ್ನು ತಡೆದು ನಿಲ್ಲಿಸಿ ಪರಿಸ್ಥಿತಿಯ ಕುರಿತು ತಿಳಿಹೇಳಿ ವಾಪಸ್ ಕಳಿಸತೊಡಗಿದೆವು. ಹಾಗೆ ಬಹಳಷ್ಟು ಜನರನ್ನು ಕಳಿಸಿದೆವು.
ಸಾಲಾಗಿ ಅಲ್ಲಲ್ಲಿ ಉರಿಯುತ್ತಿದ್ದ ವಾಹನಗಳ ಬೆಂಕಿಯ ಬೆಳಕನ್ನು ನೋಡುತ್ತಲೇ ಸನ್ನಿವೇಶದ ಅಪಾಯ ಅರಿತ ಅವರೆಲ್ಲ ಬಂದ ದಾರಿಯಲ್ಲೇ ಮರಳಿದರು. ಒಬ್ಬ ಹುರಿಮೀಸೆಯ ಸರದಾರ್ ಮಾತ್ರ ತನ್ನ ಪಂಜಾಬಿ ಅಕ್ಸೆಂಟ್ ನ ಹಿಂದಿಯಲ್ಲಿ “ಗಾಂಧಿಕೋ ಗೋಡ್ಸೆ ನೆ ಮಾರಾ ಥಾ. ಚಿತ್ಪಾವನ್ ಬಮ್ಮನ್ ಥಾ ನಾ ವೊ, ಕಿತ್ನೇ ಚಿತ್ಪಾವನ್ ಬಮ್ಮನೋಂಕೋ ಮಾರಾ ಥಾ ಲೋಗೋನೆ ತಬ್ ಇಸ್ ಮುಲ್ಕ್ ಮೇ?” ಎಂಬಂಥ ಹುಚ್ಚು ಮಾತಿಗಿಳಿದ. ಆ ವಾದಿಭಯಂಕರನಿಗೆ ಅಯ್ಯಾ ಮಹಾಶಯ, ನಡೆಯುತ್ತಿರುವದಕ್ಕೆಲ್ಲ ನಾವು ಕಾರಣ ಅನ್ನೋ ಹಾಗೆ ನಮ್ಮನ್ನು ಹೀಗೆಲ್ಲ ಕೇಳ್ತಿದಿಯಲ್ಲ, ಅದನ್ನು ನಾಳೆ ನಾಡಿದ್ದು ಮತ್ಯಾರ ಜೊತೆಗಾದರು ಚರ್ಚಿಸು. ಈಗ ಸುಮ್ಮನೇ ಬಂದ ದಾರಿಯಲ್ಲಿ ಮರಳಿ ಹೋಗುವದರಲ್ಲಿಯೇ ನಿನ್ನ ಹಿತವಿದೆ ಎಂದೆವು. ಅವನು ಹೋದ. ರಾತ್ರಿಯಾದಂತೆ ಇತ್ತ ಬರುವ ಜನರ ಸಂಖ್ಯೆಯೂ ಕಡಿಮೆಯಾಗುತ್ತ ಹೋಯಿತು.
ಎಷ್ಟು ಹೊತ್ತು ನಾವು ಹಾಗೆ ಅಲ್ಲಿ ನಿಂತಿರಲು ಸಾಧ್ಯ? ಉಳಿದಿಬ್ಬರೂ ಹೋದರು. ನಾನು ಮರಳಿ 666+ ಹಿಡಿಯಲು ಆ ಘಟನೆಗಳು ನಡೆಯುತ್ತಿದ್ದ ಸ್ಥಳಕ್ಕೇ ಬರಬೇಕು. ಬಸ್ ಸಂಚಾರ ಸ್ಥಗಿತಗೊಂಡರೆ ಹೇಗೆಂಬುದು ನನ್ನ ಚಿಂತೆ. ಅಲ್ಲಿ ಸಿಖ್ಖರನ್ನು ಹೊಡೆಯುವ, ಅಟ್ಟಿಸಿಕೊಂಡು ಹೋಗುವ, ಕೆಳಗೆ ಬೀಳಿಸಿ ಒದೆಯುವ ದೃಶ್ಯಗಳು ನಡೆದೇ ಇದ್ದವು. ಒಬ್ಬ ಪೊಲೀಸ್ ಅಧಿಕಾರಿ ನಿಂತಿದ್ದ. “ಸರದಾರೋಂಕಾ ಪಿಟಾಯಿ ಹೋ ರಹೀ ಹೈ, ಢೂಂಡ್ ಢೂಂಡ ಕೇ ಉನ್ಹೇ ಬುರೀ ತರಹ್ ಸೇ ಮಾರಾ ಜಾ ರಹಾ ಹೈ, ಆಪ್ ಕುಛ್ ಕರ್ತೇ ಕ್ಯೌಂ ನೈ” ಎಂದೆ. “ಅಬ್ ತಕ್ ಸಿರ್ಫ್ ಪಿಟಾಯಿ ತೋ ಹೋ ರಹಾ ಹೈ, ಲಾಶ್ ನೈ ಗಿರೇ ನಾ” ಎಂದನವ ತಣ್ಣಗಿನ ದನಿಯಲ್ಲಿ..

ಆಮೇಲೇನಿದೆ..ಹಲವು ತಳಬುಡವಿಲ್ಲದ ವದಂತಿಗಳು. ಅವುಗಳನ್ನು ಹಬ್ಬಿಸುವವರೂ ಇದ್ದರು, ನಂಬುವವರೂ ಇದ್ದರು.. ಇಂದಿರಾ ಗಾಂಧಿಯ ಹತ್ಯೆಯನ್ನು ಸಿಖ್ಖರು ದೀಪ ಬೆಳಗಿಸಿ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ, ನೂರಾರು ಹಿಂದೂಗಳ ಶವ ತುಂಬಿಕೊಂಡು ಪಂಜಾಬಿನಿಂದ ಟ್ರೇನುಗಳು ದಿಲ್ಲಿ ನಿಲ್ದಾಣಕ್ಕೆ ಆಗಮಿಸಿವೆ, ಸಿಖ್ಖರು ಕುಡಿಯುವ ನೀರಿಗೆ ವಿಷ ಬೆರೆಸಿದ್ದಾರೆ…!!! ಯಥಾಪ್ರಕಾರ ಗೃಹ ಸಚಿವರು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿರುವಾಗಲೇ ರಾತ್ರಿ ದೆಹಲಿಯ ಹಲವು ಭಾಗಗಳಲ್ಲಿ ಬೆಂಕಿ ಮತ್ತು ಹಿಂಸಾಚಾರ ಭುಗಿಲೆದ್ದಿತು.
ಅಂದು ರಾತ್ರಿ ಮತ್ತು ಮರುದಿನ ನವೆಂಬರ್ ಒಂದರ ಇಡೀ ಹಗಲು ಮತ್ತು ರಾತ್ರಿ ಸಶಸ್ತ್ರ ಯುವಕರ ಗುಂಪುಗಳು ಟ್ರಕ್ಕುಗಳಲ್ಲಿ ,ಟೆಂಪೋಗಳಲ್ಲಿ, ಸ್ಕೂಟರ್-ಬೈಕ್ ಗಳಲ್ಲಿ ಆಗಮಿಸಿ ಪೂರ್ವದಲ್ಲಿ ಮುನಿರ್ಕಾ,ಸಾಕೇತ್, ಸೌಥ್ ಎಕ್ಸ್‌ಟೆನ್ಶನ್, ಲಾಜಪತ್ ನಗರ್, ಜಂಗಪುರಾ, ಕೇಂದ್ರದಲ್ಲಿ ದೆಹಲಿ ನಗರದ ಹೃದಯಭಾಗವಾದ ಕನಾಟ್ ಪ್ಲೇಸ್ ನ ಮಾರುಕಟ್ಟೆ ಸಂಕೀರ್ಣಗಳು ಮತ್ತು ನಂತರ ಯಮುನಾ ನದಿಯಾಚೆಯ ತ್ರಿಲೋಕಪುರಿಯಂಥ ಪುನರ್ವಸತಿ ಕಾಲನಿಗಳಲ್ಲಿ ಹಾಗೂ ಮಂಗೋಲಪುರಿ, ಸುಲ್ತಾನಪುರಿ ಮೊದಲಾದೆಡೆ ಹರಡಿ ಹುಡುಕಿ ಹುಡುಕಿ ಸಿಖ್ಖರ ಮನೆಗಳು, ಅಂಗಡಿಗಳು ಮತ್ತು ಗುರುದ್ವಾರಾಗಳನ್ನು ಸುಟ್ಟು, ಲೂಟಿ ಮಾಡಿ ಕೇಕೆ ಹಾಕಿ ಕೆನೆದವು.
ದುರದೃಷ್ಟದ ಸಂಗತಿ ಎಂದರೆ ದೊಡ್ಡ ಕಾಂಗ್ರೆಸ್ ನಾಯಕರ ಸೂಚನೆಗನುಗುಣವಾಗಿ, ಸ್ಥಳೀಯ ಸಣ್ಣ ಪುಟ್ಟ ಕಾಂಗ್ರೆಸ್ ಪುಢಾರಿಗಳ ತಾಳಕ್ಕೆ ತಕ್ಕಂತೆ ಕುಣಿದು ಸಿಖ್ಖರನ್ನು ಜೀವಂತ ಸುಟ್ಟು, ಅವರ ಮನೆಗಳಲ್ಲಿದ್ದ ಬೆಲೆ ಬಾಳುವ ಎಲ್ಲವನ್ನೂ ದೋಚಿ ಮನೆಗಳಿಗೆ ಬೆಂಕಿ ಹಚ್ಚಿದವರಲ್ಲಿ ನೆರೆಹೊರೆಯ ಗ್ರಾಮಗಳಿಂದ ತರಲ್ಪಟ್ಟ ಝುಗ್ಗಿ-ಝೋಪಡಿಗಳಲ್ಲಿ ವಾಸಿಸುತ್ತಿದ್ದ ಗುಜ್ಜರ್ ಮತ್ತು ಜಾಟ್ ಕೃಷಿಕರಲ್ಲದೇ ಭಂಗಿ ಮೊದಲಾದ ಪರಿಶಿಷ್ಟ ಜಾತಿ ಪಂಗಡಗಳ ಜನ ಕೂಡ ಗಮನಾರ್ಹ ಸಂಖ್ಯೆಯಲ್ಲಿ ಇದ್ದರೆಂಬುದು.
“ಈ ತನಕ ಕೇವಲ ಹೊಡೀ ಬಡೀ ಆಗಿದೆ, ಹೆಣಗಳೇನೂ ಬಿದ್ದಿಲ್ವಲ್ಲ” ಎಂದಿದ್ದನಲ್ಲ ತಣ್ಣಗಿನ ದನಿಯಲ್ಲಿ ಆ ಪೊಲೀಸ್ ಅಧಿಕಾರಿ, ಮರುದಿನ ಬರೀ ಸಾವಿನದೇ ಸುದ್ದಿ. ಹೆಣಗಳ ರಾಶಿಯೇ ಬಿದ್ದಿತು. ನಾವು ಕಣ್ಣಾರೆ ನೋಡಲಿಲ್ಲ ಆದರೆ ನಾಗರಿಕ್ ಏಕತಾ ಮಂಚ್ ನ ಭಾಗವಾಗಿ ಮೂರು-ನಾಲ್ಕು ದಿನಗಳ ನಂತರ ಪರಿಹಾರ ಸಾಮಗ್ರಿ ಹಂಚಲು ತ್ರಿಲೋಕಪುರಿ, ಮಂಗೋಲಪುರಿ, ಸುಲ್ತಾನಪುರಿ ಮುಂತಾದ ಪ್ರದೇಶಗಳಿಗೆ ಹೋದಾಗ ಆ ಸಾವುಗಳ ಕುರಿತ ಕಣ್ಣೀರ ಕತೆಗಳನ್ನು ಕೇಳಿಯೇ ಕೇಳಿದೆವು.
ಖುಶವಂತ ಸಿಂಗ್ ಬರೆದ “ಡೆಲ್ಲಿ” ಎಂಬ ಶೀರ್ಷಿಕೆಯ, “ಏ ನಾವೆಲ್” ಎಂದು ಅವರು ಕರೆದಿರುವ ಆದರೆ ಸೃಜನಶೀಲ ರೀತಿಯಲ್ಲಿ ಕಟ್ಟಿಕೊಟ್ಟ ಪುರಾತನ ನಗರವೊಂದರ ಇತಿಹಾಸದ ಉತ್ಕೃಷ್ಟ ಮಾದರಿ ಎಂದು ನನಗನಿಸಿರುವ ಪುಸ್ತಕದಲ್ಲಿ ದೆಹಲಿಯ ಚರಿತ್ರೆಯ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಡೆದು ಹೋದ ಹಲವು ಇಂಥ ಮಾರಣಹೋಮಗಳ, ಕ್ರೌರ್ಯಗಳ, ಹಿಂಸ್ರ ಕಥಾನಕಗಳನ್ನು ಓದಿದ್ದೆ. ಆ ಊರಿನಲ್ಲಿ ನಡೆದ ಅಂಥದೊಂದು ದಾರುಣ ವಿದ್ಯಮಾನದ ಪ್ರತ್ಯಕ್ಷ ಸಾಕ್ಷಿಯಾಗಿ ಅನುಭವಿಸಿರಲಿಲ್ಲ. ಮುಂದಿನ ಎರಡು ದಿನ ನಮ್ಮ ಕ್ಯಾಂಪಸ್ ನ ಮಗ್ಗುಲಿಗೇ ಇದ್ದ ಮುನಿರಕಾ ಸಮೇತ ಎಲ್ಲೆಡೆ ನಡೆದ ವಿದ್ಯಮಾನಗಳನ್ನು ಕಂಡು, ಕೇಳಿ ಮಾನಸಿಕವಾಗಿ ಕುಗ್ಗಿ ಹೋಗುವದಷ್ಟೇ ಅಲ್ಲ ಮೂರನೇಯ ದಿನ ನನಗೆ ಜ್ವರವೇ ಬಂದಿತು. ದೆಹಲಿಯ ಕುರಿತು ಆಗಿನಿಂದ ಅಷ್ಟಿಷ್ಟು ಇದ್ದ ಭಾವನಾತ್ಮಕ ತಂತು ಅದೇಕೋ ಕಡಿದೇ ಹೋಯಿತು.
(ಮುಂದಿನ ವಾರಕ್ಕೆ..)





aagina paristhithi tumba chennaagi chithrisiddeera …