
“ಇತ್ತ ಜಾವಾದಲ್ಲಿ ಬರೆದ ಕೋಡ್
ಎಕ್ಸಿಕ್ಯೂಟ್ ಆಗದೇ ಎಲ್ಲರೂ ಬೆವರುತ್ತಿದ್ದರೆ
ಅಲ್ಲೆಲ್ಲೋ ಬಂಜರಿನಲ್ಲಿ ಬೀಜ
ಟಿಸಿಲೊಡೆದಿದೆ”
(ಲ್ಯಾಬ್ ಎಕ್ಸಾಮ್)
ಈ ಸಾಲುಗಳ ಮೇಲೆ ಕಣ್ಣು ನೆಟ್ಟವು. ಒಂದು ಸಂಕಲನದ ಮೂವತ್ನಾಲ್ಕು ಕವಿತೆಗಳ ಮೇಲೆ ಕಣ್ಣಾಡಿಸುವಾಗ ಇಂಥ ಹಲವು ಸಾಲುಗಳ ಮೇಲೆ ಕಣ್ಣು ನೆಟ್ಟವು. ಆ ಸಾಲುಗಳು ಬರೀ ಚಮತ್ಕಾರಿಕ ಸಾಲುಗಳಾಗಿರದೇ ಅಲ್ಲೊಂದು ದರ್ಶನ ಅನುಭವಕ್ಕೆ ಬರುತ್ತಿತ್ತು. ನನಗೆ ಕವಿತೆ ಇಷ್ಟ. ಒಳ್ಳೆಯ ಕವಿತೆಗಳು ಹೆಚ್ಚು ಇಷ್ಟ. ಒಳ್ಳೆಯ ಕವಿತೆ ಯಾವುದು? ಅದು ಪ್ರಶ್ನೆ. ಹಲವು ಕವಿ-ಕವಯಿತ್ರಿಯರಿಗಾಗುವಂತೆ ನನ್ನಲ್ಲೂ ಆಗಾಗ ಕವಿತೆಗಳು ಗರ್ಭಕಟ್ಟಿದ ಮೇಲೂ ಕವಿತೆಗಳಾಗಿ ರೂಪುಗೊಳ್ಳದೇ ಹಲಿವುಳಿದು ಹೋಗಿವೆ.
ಆದರೆ
“ನಿನ್ನ ಕರೆ ಬರುವ ಕೆಲವೇ ಕ್ಷಣಗಳ ಮೊದಲು
ಕಂಪಿಸುತ್ತೇನೆ ನಾನು ಪೂರ್ಣಗೊಳ್ಳಲು
ಕಾದ ಅರ್ಧ ಗೀಚಿಟ್ಟ ಕವಿತೆಯಂತೆ”
(ನಿನ್ನ ಕರೆ)
ಎಂಬ ಉಪಮೆಯಲ್ಲಿ ಒಂದು ಅರೆಬರೆದ ಕವಿತೆ ಪೂರ್ಣಗೊಳ್ಳಲು ಕಾಯುತ್ತದೆ ಮತ್ತು ಕಂಪಿಸುತ್ತದೆ ಎಂಬ ಕಲ್ಪನೆಯಲ್ಲಿ ಕವಿತೆ ಸಜೀವಗೊಳ್ಳುವದನ್ನು ಕಂಡು ಓದುತ್ತ ಹೊರಟರೆ ಈ ಕವಯಿತ್ರಿಯ ಜಗತ್ತಿನಲ್ಲಿ ನದಿ, ಸಮುದ್ರ ರೇಖೆ ರಂಗೋಲಿ ಮುಗಿಲು ದೀಪ ಕಾಡು ಭೂಮಿ ಇವೇ ಹೆಚ್ಚು ಜೀವಂತ, ಮನುಷ್ಯರಿಗಿಂತ..
ಈ ಕವಯತ್ರಿಯ ಹೆಸರು ಕಾವ್ಯಾ ಕಡಮೆ, ಅವಳ ಕವನ ಸಂಕಲನದ ಹೆಸರು “ಧ್ಯಾನಕೆ ತಾರೀಖಿನ ಹಂಗಿಲ್ಲ”. ಶಿವಮೊಗ್ಗೆಯ ಅಹರ್ನಿಶಿ ಪ್ರಕಾಶನ ಇದನ್ನು ಪ್ರಕಟಿಸಿದೆ. ನಮ್ಮ ಯೂನಿವರ್ಸಿಟಿಯಲ್ಲಿ ಕಾವ್ಯಾ ಎರಡೋ ಮೂರೋ ವರ್ಷಗಳ ಹಿಂದೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗಾಗಿ ಓದುತ್ತಿದ್ದಾಗ ಆಗೊಮ್ಮೆ ಈಗೊಮ್ಮೆ ಸಿಗುತ್ತಿದ್ದಳು. ಪುಸ್ತಕಗಳನ್ನು ಎದೆಗವಚಿಕೊಂಡು ಮಂದಗತಿಯಿಂದ ಸಾಗುತ್ತ, ಯಥಾಪ್ರಕಾರ, ಒಬ್ಬಂಟಿಯಾಗಿ ತಾನು ವಾಸಿಸುತ್ತಿದ್ದ ಪೇಯಿಂಗ್ ಗೆಸ್ಟ್ ಹಾಸ್ಟೆಲ್ ನತ್ತ ಹೊರಟಾಗ ಕಣ್ಣಿಗೆ ಬೀಳುತ್ತಿದ್ದಳು. ಒಮ್ಮೆ ನಾನೂ ಮನೆಗೆ ಹೊರಟಿದ್ದಾಗ “ಬಾ, ಶ್ರೀನಗರ ಸರ್ಕಲ್ ವರೆಗೆ ಬಿಡುತ್ತೇನೆ” ಎಂದು ಕಾರಿನ ಡೋರ್ ತೆಗೆದರೆ ಬಂದು ಕುಳಿತಿದ್ದಳು.

ಆಗೆಲ್ಲ ನಾನು ಮಾತನಾಡುತ್ತಿದ್ದುದು ಇವರ ತಾಯಿ ಸುನಂದಾ ಕಡಮೆಯವರ ಕತೆ ಕಾದಂಬರಿಗಳ ಕುರಿತು. ಏಕೆಂದರೆ ಕಾವ್ಯಾ ಕಾವ್ಯ ಬರೆಯುತ್ತಾಳೆಂಬುದು ನನಗೆ ಗೊತ್ತಿರಲಿಲ್ಲ. ಮೊನ್ನೆ ಇವಳು ಕಳಿಸಿದ ಕವನ ಸಂಕಲನ ಓದುತ್ತಿದ್ದರೆ ಒಂದು ತಾಜಾತನ ಆವರಿಸಿಕೊಳ್ಳುತ್ತಿದೆ. ತನ್ನ ಮತ್ತು ತನಗೆ ನೈಜವಾದ ದೈನಂದಿನ ಬದುಕಿನ ನೋಟ-ನಡೆಗಳನ್ನು, ಸಾಮಾನ್ಯ ಅನುಭವಗಳನ್ನು ಲವಲವಿಕೆಯಿಂದ ಕವಿತೆಯಾಗಿಸುತ್ತ ಹೋಗುವ ಈಕೆ ನೋವನ್ನೋ ವಿಷಾದವನ್ನೋ ಮೈಮೇಲೆ ಎಳೆದುಕೊಳ್ಳದೇ ಒಂದು ನಿರುಮ್ಮಳ ಕಾವ್ಯಭಾಷೆಯನ್ನು ರೂಪಿಸಿಕೊಂಡು ಈ ಸಂಕಲನದಲ್ಲಿ ಪ್ರೌಢಿಮೆಯ ಸೂಚನೆಗಳನ್ನು ತೋರಿದ್ದಾಳೆ. ಇಲ್ಲಿಯ “ಇಸ್ತ್ರೀ” ಎಂಬ ಕವಿತೆಯಲ್ಲಿ ಬರುವ
’ಬಂಧನದಲ್ಲೂ ಸುಖವಿಲ್ಲ ಬಿಡುಗಡೆಯೂ
ಬೇಕಿಲ್ಲವಂತೆ ಅವಕ್ಕೆ”
ಎಂಬಂಥ ಸಂದಿಗ್ಧಗಳನ್ನು ನಿರ್ವಹಿಸಲು ಈ ಕವಿತೆಗಳು ತಮ್ಮದೇ ಆದ ರೀತಿಯಲ್ಲಿ ಯತ್ನಿಸಿವೆ. ಸಾಮಾನ್ಯ ಪ್ರೇಮಕವಿತೆಗಳಾಗಿ ತಮ್ಮ ಸಾಧ್ಯತೆಗಳನ್ನು ಮುಗಿಸಿಕೊಳ್ಳಬಹುದಾಗಿದ್ದ ಕವಿತೆಗಳು ಇಲ್ಲಿ ಬೇರೆಯದೇ ಆದೊಂದು ಪಾತಳಿಯನ್ನು ಪ್ರವೇಶಿಸುತ್ತವೆ. ಉದಾ: ಪುಟ್ಟ ಕಲ್ಲು ಬೆಂಚಿನ ಮೇಲೆ ಕುಳಿತ “ತಮ್ಮಿಬ್ಬರ” ಕುರಿತ ಒಂದು ಕವಿತೆಯಲ್ಲಿ ಯಾರೆಲ್ಲ ಇವರ ಸುತ್ತ ನೆರೆದು ನೆರವು ಕೇಳುತ್ತಿದ್ದಾರೆ? ಸ್ವತ: ದೇವರು, ಹಾಡುಗಾರ ಮತ್ತು ಕವಿ. ಯಾಕಾಗಿ? …
ಇವರಿಬ್ಬರ ಚಿತ್ರ ಬರೆಯಲು, ದೇವರು-
’ಕಾಫಿ ತಿಂಡಿ ಮುಗಿಸಿಕೊಂಡು ಪುರುಸೊತ್ತಾಗಿದ್ದಾನೆ
ತಿದ್ದಿದಲ್ಲೇ ತೀಡುತ್ತಾನೆ ತಾಳ್ಮೆಯಿಂದ ಕುಂಚವ’
“ನಿನ್ನ ನನ್ನ ಹಾಡ ಸಹಜ ಸ್ವರದಲ್ಲಿ ಹಿಡಿದಿಡಲು
ಮೋಡದಾಚೆಯ ಹಾಡುಗಾರನೊಬ್ಬ ಸೂಕ್ತ
ಆಲಾಪದ ತಲಾಶಿನಲ್ಲಿದ್ದಾನೆ ತೇಯುತ್ತಾನೆ
ರಾಗಗಳ ಜೀವ ತೇಯ್ದಂತೆ”
… … … … … …
“ನಮ್ಮ ಆತ್ಮಗಳ ಏಕಭಾವದಲ್ಲಿ ಸೇರಿಸಲು
ಜಗದಾಚೆಯ ಕವಿ ಪ್ರಯಾಸ ಪಟ್ಟಿದ್ದಾನೆ
ಪದಪದವ ಸೇರಿಸಿ ಹುಡುಕುತ್ತಾನೆ
ತನ್ಮಯನಾಗಿ ಶಬ್ದವ ಮೀರಿದ ತೀರವ”.
ತಮ್ಮ ಬಿಂಬಗಳಿಗೆ ನೈಜ ಬಿಸುಪಿನ ಹೊಳಪು ತರಲು ದೇವರು, ಒಂದೇ ಬಾರಿ ಶೃತಿ ಸೇರಿಸಲು ರಾತ್ರಿಯಿಡೀ ನಿದ್ದೆಗೆಟ್ಟ ಹಾಡುಗಾರ, ಒಂದೇ ಒಂದು ಮಿಂಚಿಗೆ ತನ್ನ ಕಾವ್ಯವ ನಿಶ್ಚಲವಾಗಿ ಅಣಿಗೊಳಿಸಲು ಕವಿ, ಹೀಗೆ “ತಮ್ಮ ಕೃತಿಗಳನ್ನು” ಪೂರ್ತಿಗೊಳಿಸಲು-
“ಧಿಡೀರನೆ ಪ್ರತ್ಯಕ್ಷರಾದ ಮೂವರನ್ನೂ ನಾವು
ಆಸ್ಥೆಯಿಂದ ನೋಡಿ ಚೆಲ್ಲಿದ್ದೇವೆ ನಗುವ”
ಎನ್ನುವ ಕವಿತೆ ಮುಂದುವರೆಯುವಲ್ಲಿ ಈ “ನಿನ್ನ ನನ್ನ” ದ ಮೂರ್ತತೆ ಇವಳ-ಅವನ, ಗಂಡಿನ-ಹೆಣ್ಣಿನ, ರೂಪರೂಪಾಂತರಗಳನ್ನು ದಾಟಿ ಅಮೂರ್ತವಾದ ಪ್ರಕೃತಿ-ಪುರುಷನ ಚಿತ್ರವಾಗುತ್ತ-
“ನಮ್ಮಿಬ್ಬರ ಹಸ್ತಗಳ ಮೇಲೆ ಅಚ್ಚಾದ
ಅಸಂಖ್ಯ ರೇಖೆಗಳು ಮಾತ್ರ ದಾರಿ
ತೋರುವ ಹುನ್ನಾರದಲ್ಲಿವೆ ತಾವೇ ನದಿಗಳಾಗಿ
ಹರಿದು
ನಮ್ಮಿಂದಲೇ ಹುಟ್ಟಿದ ಸಾವಿರ ನದಿಗಳ
ವಿಸ್ಮಿತ ತೀರದಲ್ಲಿ ನಿಂತೇ ಇದ್ದೇವೆ
ಅನಂತ ಬಿಂಬಗಳ ಪ್ರತಿಬಿಂಬವಾಗಿ
ಪ್ರಭು ಬರೆದ ಚಿತ್ರವೇ
ನಿಜದ ನಾವಾಗಿ”

ಈ ಸಂಕಲನದ ಕವಿತೆಗಳು ಸಾಮಾಜಿಕ ಇರುವಿಕೆಯ ವೈಷಮ್ಯ ವೈರುದ್ಧ್ಯಗಳ ಭಾರವನ್ನು ಮೈಮೇಲೆಳೆದುಕೊಂಡು ನಲುಗಲೂ ನಿರಾಕರಿಸಿವೆ. ಈ ಲಕ್ಷಣವನ್ನು ಒಂದು ಸಾಧಕ ಅಂಶವಾಗಿ ನೋಡಬೇಕಿಲ್ಲ, ಹಾಗೆಯೇ ಅದನ್ನು ಟೀಕಿಸುವ ಅಗತ್ಯವೂ ಇಲ್ಲ. ಇವು ಮನುಷ್ಯ ಸಂಬಂಧ, ಜಗತ್ತು, ಜೀವಜಾಲಗಳನ್ನು ಶೋಧಿಸುವ ತಮ್ಮದೇ ಆದೊಂದು ಕ್ರಮವನ್ನು ಮತ್ತು ಕಾವ್ಯಭಾಷೆಯನ್ನು ರೂಪಿಸಿಕೊಳ್ಳುತ್ತಿರುವಂತಿದೆ. ಹಾಗಂತ ಇಲ್ಲಿ ಸಾಮಾಜಿಕತೆಯ ಅಥವಾ ಲಿಂಗ ತಾರತಮ್ಯದ ಪರಿಗಣನೆಗಳು ಇಲ್ಲವೆಂದಲ್ಲ. ಆದರೆ ಅವುಗಳ ಅಭಿವ್ಯಕ್ತಿಯ ಕ್ರಮ ಬೇರೆ ಮತ್ತು ,ಬಹುಶ: ಅದಕ್ಕೆ ಆದ್ಯತೆ ಕಡಿಮೆ. “ವೃಕ್ಷದ ಮಕ್ಕಳು” ಎಂಬ ಕವಿತೆಯಲ್ಲಿ ಬರುವಂತೆ-
“ಬೀದಿಯಲಿ ಹಸಿದ ಬಾಲ್ಯ ಕಳೆಯುತ್ತಿರುವ
ಮಗುವಿಗೆ ಅನ್ನ ನೀಡು ಹಗಲೇ
ರಾತ್ರಿ ಚುಕ್ಕು ತಟ್ಟಿಸಿಕೊಳ್ಳದೇ
ನಿದ್ದೆ ಹೋದ ನೆನಪ ಮರೆಸು
ಪಕ್ಕದಲಿ ಮಾತೆಯಿರದ ರಾತ್ರಿಗಳಿಗೆ
ಮೂಡುವ ಚಂದ್ರನ ಕಾವಲು ಹಾಕು…”
ಎಂದು ರೂಪಕದ ಭಾಷೆಯಲ್ಲಿ ಸಾಗಿ “ಮಗು ಈಗ ನಿಂತಲ್ಲೇ ಬೇರು ಬಿಟ್ಟು ವೃಕ್ಷಗಳು ಬೇಕಾಬಿಟ್ಟಿ ನಡೆದಾಡುತಿರುವ” ಚಿತ್ರವನ್ನು ಕೊಟ್ಟು-
“ಅದರ ರೆಂಬೆ ಕೊಂಬೆ ಎಲೆ ಹೂ ತುಂಬ
ಆ ಮಗುವಿನದೇ ನೆರಳು”
ಎನ್ನುವ ಕಾಣ್ಕೆ.
“ನೀನು ಪದ್ಯಗಳು” ಎಂಬ ಶೀರ್ಷಿಕೆಯ ಕವಿತೆಗಳಲ್ಲಿ “ಅವನು ಅವಳು” ಸಂಬಂಧಗಳು ಅನುಭಾವದ ಆಧ್ಯಾತ್ಮಿಕವಾದ ನುಡಿಗಟ್ಟಿನಲ್ಲಿ ವ್ಯಕ್ತವಾದದ್ದನ್ನು ನೋಡಬಹುದು.
“ಮೈಗೆ ಆತುಕೊಳ್ಳುವದು ಹೋಗಲಿ ಕೈಗೆ
ಕೈ ತಾಗಿಸದೆಯೂ ನಾವು ಬಹು
ದೂರ ನಡೆಯಬಲ್ಲೆವು ಜೊತೆಗೆ
ರೆಕ್ಕೆಗೆ ಚಿಟ್ಟೆ ಭಾರವಾಗದ ಹಾಗೆ
ಸಹಜ ಉಸಿರಿನ ಹಾಗೆ ನಿರರ್ಗಳ
ಹರಿಯುವ ಜೀವಜಲದ ಹಾಗೆ…”
ಒಟ್ಟಾರೆಯಾಗಿ “ಈ ಕ್ಷಣ ಲೋಕದ ಜನರ ಸಿಹಿ ಅಸೂಯೆಗೆ” ಕಾರಣವಾಗುವಂತೆ ಬದುಕಬೇಕೆಂದಾಗ್ಯೂ
ಸ್ತ್ರೀಯನ್ನು ಪುರುಷ ಜಗತ್ತು ನೋಡಬಯಸುವ ನಿಯಮ-ನಿರೀಕ್ಷೆಗಳ ವಾಸ್ತವವನ್ನು ತಣ್ಣಗೆ ಲೇವಡಿ ಮಾಡುತ್ತದೆ ಇಲ್ಲಿಯ “ಬರುತ್ತೇನೆ” ಎನ್ನುವ ಕವಿತೆ-
“ಹುಬ್ಬು ತೀಡದೇ ಗೆಜ್ಜೆ
ಕುಣಿಸದೇ ಬಳೆಯ
ಕಿಂಕಿಣಿಯಿಲ್ಲದೇ ಮುಂಗುರುಳ
ನೇವರಿಸದೇ ವ್ಯಾಕ್ಸ್ ಮಾಡದೇ
ಪಿಸುನುಡಿಯದೇ ಉಗುರಿಗೆ-
ರೆಪ್ಪೆಗೆ-ಕೆನ್ನೆಗೆ-ತುಟಿಗೆ ಬಣ್ಣ
ತಾಗಿಸದೇ ಕಣ್ಣ ಕಾಡಿಗೆಯಿಲ್ಲದೇ
ಹುಬ್ಬಿನ ನಡುವೆ ಪುಟ್ಟ ಕುಂಕುಮವಿಡದೇ
ನತ್ತನ್ನು ನಗುವಾಗ ತೋರದೇ ಸೀಳ
ಹುರಿಗೊಳಿಸದೇ
ನಾಚದೇ ನುಲಿಯದೇ ಬಳುಕದೇ
ಹಾರದೇ ತಣಿಯದೇ ಓಲೈಸದೇ
ಒಮ್ಮೆ
ನಿನ್ನ ಮುಂದೆ ಬರುತ್ತೇನೆ
ಎಂದರೆ
ನೀನೇಕೆ ಹೀಗೆ ಬೆವರಬೇಕು?”
ಇಂಥದೇ ಧ್ವನಿ “ನಿಶ್ಯಬ್ದ” ಎನ್ನುವ ಕವಿತೆಯಲ್ಲೂ ಇದೆ.
“ಏಕೆ ಹೀಗೆ ಸತಾಯಿಸುತ್ತೀ?
ನಾನೇನು ನಿನ್ನ ಹತ್ತಿರ ಚಿನ್ನ
ಬಣ್ಣ ಕೇಳಲಿಲ್ಲ”
ಅಂದುಕೊಂಡೆ. ಹೇಳಿರಲಿಲ್ಲ
ಕೇಳಿಸಿತು ಅವನಿಗೆ
“ಅದಾದರೂ ಕೇಳಿದ್ದರೆ ಚೆನಾಗಿತ್ತು
ಯಾವಾಗೆಂದರಾವಾಗ ಕೊಟ್ಟುಬಿಡಬಹುದಿತ್ತು”
ಹೇಳಿದನಂತೆ ಅವನೂ
ನನಗೇ ಕೇಳಿಸಲಿಲ್ಲ.”
ತಾನು, ತನ್ನ ರೂಂಮೇಟ್, ತನ್ನ ತಂಗಿ, ಅವಳ ಗೋಳುಗಳು,ಆಧುನಿಕತೆಯ ಅನುಕರಣೆ, ತಾನು ತಿನ್ನುವ ಪಾನಿ ಪೂರಿ ಅಂಗಡಿಯ ಹುಡುಗ, ತಮ್ಮ ಕಡೆ ಫಿಷ್ ಫ್ರೈ ಮಾಡುವ ಬಗೆ, ಒಂದು ಹಳೆಯ ಅಲ್ಬಂ ಹೀಗೆ ಥರಾವರಿ ವಸ್ತುಗಳ ಬಗ್ಗೆ ಸ್ವಲ್ಪ ಗಂಭೀರವಾಗಿ, ಸ್ವಲ್ಪ ತುಂಟತನದಿಂದ, ಒಟ್ಟಾರೆಯಾಗಿ ಲವಲವಿಕೆಯಿಂದ ಬರೆಯುವ ಕಾವ್ಯಾಳ ಕೆಲವು ಕವಿತೆಗಳಲ್ಲಿ ಸಹಜವಾಗಿ ಮೂಡುವ ತಾತ್ವಿಕತೆ ಒಮ್ಮೊಮ್ಮೆ ತುಂಬ ಆಳದ್ದಾಗಿರುತ್ತದೆ. ಆ ಶಿವನೇ ಆಗಬೇಕು, ನಿನ್ನ ಧ್ಯಾನ, ಜಗದ ರಕ್ತ ಸೋರುತಿದೆ, ವಸಂತಕ್ಕೊಂದು ಹುಲಿ, ನಿನ್ನ ಉಸಿರು, ಸಾವು ಸೋತಿತು, ಬೆಕ್ಕು ಮತು ದೋಣಿ, ಆ ಒಂದು ಕಳಂಕ, ದಕ್ಕಿದಷ್ಟೇ ಕಡಲು ಇವು ಇಂಥ ಕೆಲ ಕವಿತೆಗಳು. ಇದರಲ್ಲಿ ಕೆಲವು ತಮ್ಮ ಅರ್ಥವಲಯಗಳನ್ನು ಸುಲಭಕ್ಕೆ ಬಿಟ್ಟುಕೊಡುವದಿಲ್ಲ. ಕೆಲವು ಕವಿತೆಗಳು ನಿಕಟ ಓದನ್ನು, ಮರು ಓದುಗಳನ್ನು ಬಯಸುತ್ತವೆ. ಅದು ಒಳ್ಳೆಯ ಕವಿತೆಗಳ ಲಕ್ಷಣ ಕೂಡ.
ನಾನಿಲ್ಲಿ ಬರೆದದ್ದು ವಿಮರ್ಶೆಯಲ್ಲ. ಇದು ಹೊಸ ಕವಯಿತ್ರಿಯೊಬ್ಬಳ ಕಾವ್ಯವನ್ನು ಸ್ವಾಗತಿಸಿ ಅವಳ ಸಂಕಲನಕ್ಕೆ ನಾನು ಒದಗಿಸುತ್ತಿರುವ ಒಂದು ಪ್ರವೇಶಿಕೆ. ಕಾವ್ಯದ ಮಾಧ್ಯಮದಲ್ಲಿ ವಿಷಯವನ್ನು ನಿರ್ವಹಿಸುವಲ್ಲಿ ಈ ಕವಯಿತ್ರಿ ಮೈಗೂಡಿಸಿಕೊಳ್ಳಬೇಕಾದ ನವಿರಿಗೆ ಇನ್ನೂ ಅವಕಾಶವಿದೆ, ಸಂವಹನದ ಸಾಧ್ಯತೆ ಈ ಕವಯಿತ್ರಿ ಸಾವಧಾನವಾಗಿ ಯೋಚಿಸಬೇಕಾದ ಇನ್ನೊಂದು ಆಯಾಮ. ಅಪ್ಪಟ ಕಾವ್ಯದ ಸಕಲ ಸೂಚನೆಗಳೂ ಈ ಪುಟ್ಟ ಕವನಸಂಕಲನದಲ್ಲಿವೆ ಎಂಬುದು ಮಾತ್ರ ನಿಸ್ಸಂದೇಹ.
ಅಶೋಕ ಶೆಟ್ಟರ್ ಕಾಲಂ : ಮೋಡ ಮುಸುಕಿದ ಹಗಲಿನಲಿ ಮುದಗೊಳಿಸುವ ಕವಿತೆಗಳೊಂದಿಗೆ..
ನಿಮಗೆ ಇವೂ ಇಷ್ಟವಾಗಬಹುದು…




ಮೈಗೆ ಆತುಕೊಳ್ಳುವದು ಹೋಗಲಿ ಕೈಗೆ
ಕೈ ತಾಗಿಸದೆಯೂ ನಾವು ಬಹು
ದೂರ ನಡೆಯಬಲ್ಲೆವು ಜೊತೆಗೆ
ರೆಕ್ಕೆಗೆ ಚಿಟ್ಟೆ ಭಾರವಾಗದ ಹಾಗೆ
ಸಹಜ ಉಸಿರಿನ ಹಾಗೆ ನಿರರ್ಗಳ
ಹರಿಯುವ ಜೀವಜಲದ ಹಾಗೆ… ಕಾವ್ಯ ಬರೆದ ಕವಿತೆಯ ಈ ಸಾಲುಗಳು ಯಾವ ಹುಡುಗಿ-ಹುಡುಗ ಓದಿದರೂ ತುಟಿಯಲ್ಲಿ ನಗದಿರಲು ಸಾಧ್ಯವೇ ಇಲ್ಲ.
ಮೈಗೆ ಆತುಕೊಳ್ಳುವದು ಹೋಗಲಿ ಕೈಗೆ
ಕೈ ತಾಗಿಸದೆಯೂ ನಾವು ಬಹು
ದೂರ ನಡೆಯಬಲ್ಲೆವು ಜೊತೆಗೆ
ರೆಕ್ಕೆಗೆ ಚಿಟ್ಟೆ ಭಾರವಾಗದ ಹಾಗೆ
ಸಹಜ ಉಸಿರಿನ ಹಾಗೆ ನಿರರ್ಗಳ
ಹರಿಯುವ ಜೀವಜಲದ ಹಾಗೆ… ಕಾವ್ಯ ಬರೆದ ಕವಿತೆಯ ಈ ಸಾಲುಗಳು ಯಾವ ಹುಡುಗಿ-ಹುಡುಗ ಓದಿದರೂ ತುಟಿಯಲ್ಲೇ ನಕ್ಕು , ಖುಷಿಪಡುವಂತಹವು.
ಅಶೋಕ ನಿಮ್ಮ ಬರಹ ನಿರಂತವಾಗಿರಲಿ.
ಕಾವ್ಯದ ಜೀವಂತಿಕೆಯನ್ನು ಸಂವೇದನೆಯೇ ಜಡಗೊಳ್ಳುತ್ತಿರುವ ಈ ಸಂದರ್ಭದಲ್ಲಿ ತೋರಿಸಿಕೊಟ್ಟ ನಿಮಗೆ ಮತ್ತು ಕಾವ್ಯಾಗೆ ಅಭಿನಂದನೆಗಳು.