ಜೀವನದಲ್ಲಿ ಮೊದಲ ಸಲ ಹಿಂಸೆ ಎಂಬ ಒಂದು ಪ್ರವೃತ್ತಿಯ ಕುರಿತು ನಾನು ಯೋಚಿಸುವಂತಾಗಿತ್ತು. ಆರ್. ಕೆ. ಪುರಂ ನಾಲ್ಕನೆಯ ಸೆಕ್ಟರ್ ನ ವಾಸದ ಮನೆಗಳ ಸಮುಚ್ಚಯಗಳನ್ನು ಬಲಕ್ಕೆ ಹಾಗೂ ಜೆ.ಎನ್.ಯು “ಡೌನ್ ಕ್ಯಾಂಪಸ್”ಅನ್ನು ಎಡಕ್ಕೆ ಇಟ್ಟುಕೊಂಡು ಮುನಿರ್ಕಾ ಕಡೆ ಸಾಗುವ ಹಾದಿಗುಂಟ ನಡೆದೆ. ಎಡಗಡೆ, ರಸ್ತೆಯ ಮಟ್ಟಕ್ಕಿಂತ ತುಸು ಎತ್ತರದಲ್ಲಿ ಸ್ಥಿತವಾಗಿದ್ದ ಮುನಿರ್ಕಾ ಮಾರುಕಟ್ಟೆಯಲ್ಲಿ ಸಾಲುಸಾಲಾಗಿದ್ದ ಸರದಾರ್ ಗಳ ಹೊಜೈರಿ ಮತ್ತಿತರ ಅಂಗಡಿಗಳಲ್ಲಿಯ ಮಾಲೆಲ್ಲ ಸುಟ್ಟು ನಿಶಿ ನಿಶಿ ಹೊಗೆಯಾಡುತ್ತಿತ್ತು. ಇಡೀ ವಾತಾವರಣದಲ್ಲಿ ಹೊಗೆ, ತಬ್ಬಲಿತನ ಮತ್ತು ವಿಷಾದ. ತಮ್ಮ ದೊಡ್ಡ ದೊಡ್ಡ ವಾಹನಗಳಲ್ಲಿ ಕಿಕ್ಕಿರಿದು ಕುಳಿತುಕೊಂಡ ಡೆಲ್ಲಿ ಪೋಲೀಸರು ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಓಡಾಡುತ್ತಿದ್ದರೆಂಬುದೇ ಅವರ ಮಹಾಸಾಧನೆ. ಹಾಗೆ ಅವರ ಗಾಡಿಗಳು ಓಡಾಡುತ್ತಿದ್ದ ರಸ್ತೆಯಿಂದ ಕೂಗಳತೆ ದೂರದಲ್ಲಿ ಮುನಿರ್ಕಾ ಮಾರುಕಟ್ಟೆಯ ಹಿಂಭಾಗದ ಜನವಸತಿಗಳಲ್ಲೇ ಸಿಖ್ಖರ ಮೇಲೆ ಹಲ್ಲೆಗಳಾಗುತ್ತಿದ್ದವೆಂಬುದು ಅವರ ಗಮನದಲ್ಲೂ ಇರಲಿಲ್ಲ…!
ನವೆಂಬರ್ 1. ಇಡೀ ದಿನ ದೆಹಲಿಯ ವಿವಿಧೆಡೆಗಳಲ್ಲಿ ಸಿಖ್ಖರ ಆಸ್ತಿ-ಪಾಸ್ತಿ,ಶಾಲೆಗಳು,ಫ್ಯಾಕ್ಟರಿಗಳು,ಮನೆಗಳು ಅಂಗಡಿಗಳು, ಗುರುದ್ವಾರಾಗಳ ಮೇಲಾಗುತ್ತಿದ್ದ ದಾಳಿ,ಹಲ್ಲೆ, ಕೊಲೆ, ಅತ್ಯಾಚಾರ, ಲೂಟಿಗಳ ಸುದ್ದಿಗಳು ಬರುತ್ತಲೇ ಇದ್ದವು.. ಸಾಯಂಕಾಲದ ಹೊತ್ತಿಗೆ ಬಳಲಿಕೆ ಅನಿಸತೊಡಗಿ ನಾನು ಹಾಸ್ಟೆಲ್ಲಿಗೆ ಮರಳಿದೆ. ಮರುದಿನ ಜ್ವರ ಬಂತು. ಸದ್ಯ ಅದು ಮಲೇರಿಯಾ ಜ್ವರ ಆಗಿರಲಿಲ್ಲ. ಮಲೇರಿಯ ಜ್ವರಕ್ಕೆ ನಮ್ಮ ವಿಶ್ವವಿದ್ಯಾಲಯದ ಹೆಲ್ಥ್ ಸೆಂಟರ್ ನಲ್ಲಿ ಕೊಡುತ್ತಿದ್ದ ಕ್ಲೋರೋಕ್ವಿನ್ ಎನ್ನುವ ಹೆಸರಿನ ಗುಳಿಗೆ ನನಗೆ ಮಲೇರಿಯಾಕ್ಕಿಂತ ಅಸಹ್ಯ ಎನ್ನಿಸುತ್ತಿತ್ತು. ಯಾವುದೋ ಆ೦ಟಿ-ಬಯೊಟಿಕ್ ಮಾತ್ರೆಗಳನ್ನು ನುಂಗಿ ಒಂದು ದಿನ ಪೂರ್ತಿ ಮಲಗಿ ಮರುದಿನ ನಾವು- ಭರತ್ ಶೇಖರ್, ಅಮಿತ್ ಸೇನ್ ಗುಪ್ತಾ, ನಂದೂ, ಪ್ರಭುಪ್ರಸಾದ್ ಮೊಹಪಾತ್ರಾ, ಮತ್ತಿತರ ಕೆಲ ಗೆಳೆಯರೆಲ್ಲ ಸೇರಿಕೊಂಡು ನಾಗರಿಕ್ ಏಕತಾ ಮಂಚ್ ಎಂಬ ವೇದಿಕೆಯ ಭಾಗವಾಗಿ ಬಾಧಿತ ಸಿಖ್ಖ್ ಸಮುದಾಯದ ಪರಿಹಾರ ಕೈಂಕರ್ಯದಲ್ಲಿ ತೊಡಗಿಕೊಂಡೆವು. ಹಾಗೆ ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರತಿಯೊಂದು ಹಾಸ್ಟೆಲ್ ಗಳಲ್ಲೂ ಹಲವಾರು ಅಂಥ ಗುಂಪುಗಳು ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದವು. ಅವರು ಇವರು ಅಂತಲ್ಲ, ಮಾರ್ಕ್ಸಿಸ್ಟರು, ಸಮಾಜವಾದಿ ಯುವಜನ ಸಭಾದವರು, ಮಾವೋವಾದಿಗಳು,”ಫ್ರೀ ಥಿಂಕರ್ಸ್” ಎಂಬ “ಬೇಲಿಯ ಮೇಲಿನ ನೀಲಿ ಹೂ”ಗಳಂಥ ಸೈದ್ಧಾಂತಿಕವಾಗಿ ಮಧ್ಯಮಮಾರ್ಗಿ ಅಥವಾ ತಟಸ್ಥವಾಗಿದ್ದ ತಳಿಗಳು, (ಅವು ಬಹುಪಾಲು ಐಏಎಸ್, ಐಪಿಎಸ್ ಎಂಬ ಸಿವಿಲ್ ಸರ್ವೀಸ್ ಕನಸಿನ ಗಿರಾಕಿಗಳು)….ಎಲ್ಲರೂ ಈ ದಾರುಣ ಸನ್ನಿವೇಶದಲ್ಲಿ ಕ್ರಿಯಾಶೀಲರಾಗಿದ್ದರು.
ಸಂಜೆಯಾದರೆ ಹಾಸ್ಟೆಲ್ ಗಳ ಹಲವಾರು ಕೋಣೆಗಳಲ್ಲಿ, ಮೆಸ್ ಗಳಲ್ಲಿ ಯಾವ ಯಾವ ಶಿಖ್ ನಿರಾಶ್ರಿತರ ಶಿಬಿರಗಳಲ್ಲಿ ಮಕ್ಕಳು ಕಾಣೆಯಾದ ಎಷ್ಟು ವರದಿಗಳಿವೆ, ಅವುಗಳ ವಯಸ್ಸು, ಲಿಂಗ, ಚೆಹರಾಪಟ್ಟಿ; ಇನ್ನಾವ ಶಿಬಿರಗಳಲ್ಲಿ ತಂದೆ-ತಾಯಿಯರಿಂದ ಬೇರ್ಪಟ್ಟ ಎಷ್ಟು ಮಕ್ಕಳಿವೆ ಮತ್ತು ಅವು ವಿವಿಧ ಶಿಬಿರಗಳಲ್ಲಿದ್ದವರ ಪೈಕಿ ಕಾಣೆಯಾದ ಯಾರ ಮಕ್ಕಳ ಚೆಹರೆ ಮತ್ತಿತರ ವಿವರಗಳನ್ನು ಹೋಲುತ್ತವೆ ಇತ್ಯಾದಿ ಟೇಬಲ್ ಮೇಲೆ ಯಾದಿಗಳನ್ನು ಹರಡಿಕೊಂಡು ಹೊತ್ತುಗೊತ್ತಿನ ಪರಿವೆ ಇಲ್ಲದೇ ಇಂಥ ಹುಡುಕಾಟದಲ್ಲಿ ವಿದ್ಯಾರ್ಥಿಗಳು ತೊಡಗಿರುತ್ತಿದ್ದರು. ನಮ್ಮ ಗುಂಪು ಮುಖ್ಯವಾಗಿ ಹಿಂಸೆ ಹಲ್ಲೆಗಳಿಂದ ನಿರ್ವಸಿತರಾದ, ಮನೆಮಾರು ಕಳೆದುಕೊಂಡು ತಾತ್ಕಾಲಿಕವಾಗಿ ಗುರುದ್ವಾರಾಗಳಲ್ಲಿ ಅಥವಾ ದೆಹಲಿ ಆಡಳಿತ ನಿರ್ಮಿಸಿದ್ದ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದವರಿಗೆ ದವಸ ಧಾನ್ಯ, ಹಾಸಿಗೆ, ಹೊದ್ದಿಕೆ, ಸೀಮೆ ಎಣ್ಣೆ, ಖಾದ್ಯ ತೈಲದ ಡಬ್ಬಗಳು, ಬ್ರೆಡ್ಡು-ಬಿಸ್ಕೀಟು,ಬಟ್ಟೆ ಬರೆ, ಸೋಪು ಇತ್ಯಾದಿ ಥರಾವರಿ ವಸ್ತುಗಳನ್ನು ಒದಗಿಸುವ ಹೊಣೆ ಹೊತ್ತುಕೊಂಡಿತ್ತು. ಉಟ್ಟು-ತೊಟ್ಟು ಬಳಸಿ ಬಿಸಾಡಿದ ಬಟ್ಟೆ- ಬರೆಗಳನ್ನು, ಹಾಸಿಗೆ ಹೊದಿಕೆಗಳನ್ನು ಕೊಡದೇ, ಉತ್ತಮ ಗುಣಮಟ್ಟದ, ಸಾಧ್ಯವಾದರೆ ಹೊಸವೇ ಆದಂಥ ವಸ್ತುಗಳನ್ನು ಕೊಡಬೇಕೆಂಬ ಮನವಿಗೆ ಸ್ಪಂದಿಸಿದ ದಾನಿಗಳು ಒಳ್ಳೆಯ ವಸ್ತು, ಗುಣಮಟ್ಟದ ಪದಾರ್ಥಗಳನ್ನೇ ಕೊಡುತ್ತಿದ್ದರು.
ಒಂದು ವಿಶಾಲ ಮೈದಾನದಂತಿದ್ದ ಸ್ಥಳದಲ್ಲಿ ಒಟ್ಟು ಹಾಕಲಾಗಿದ್ದ ಈ ಸಾಮಗ್ರಿಗಳನ್ನು ಆಯಾಯ ಮೊಹಲ್ಲಾಗಳ ಅಥವಾ ನಿರಾಶ್ರಿತ ಶಿಬಿರಗಳಲ್ಲಿದ್ದ ಜನರ ಸಂಖ್ಯೆ, ಅವರ ಬೇಡಿಕೆ ಮತ್ತು ಪ್ರಮಾಣಕ್ಕನುಗುಣವಾಗಿ ಸಂಗ್ರಹಿಸಿಕೊಂಡು ಒಬ್ಬ ಸಿಖ್ಖ್ ಟ್ರಾನ್ಸ್ ಪೋರ್ಟರ್ ನಮಗೆ ಈ ಕೆಲಸಕ್ಕೆಂದೇ ಬಿಟ್ಟುಕೊಟ್ಟಿದ್ದ ಮಿನಿ-ಟ್ರಕ್ ಒಂದರಲ್ಲಿ ಅವುಗಳನ್ನು ಹಾಕಿಕೊಂಡು ಹೊರಡುತ್ತಿದ್ದೆವು. (ಒಂದು ದಿನ ಆ ಕೆಲಸ ಕಾರ್ಯದಲ್ಲಿ ತೊಡಗಿದಾಗ “ಅಶೋಕಾ ಇದರ್ ಆವೋ, ಕರ್ನಾಟಕಾಸೇ ಕೋಯಿ ಹೈ ಯಂಹಾ” ಎಂದು ಗೆಳೆಯನೊಬ್ಬ ಕರೆದ. ಹೋಗಿ ನೋಡಿದರೆ ಅವರು ಈಗ ಗಣಿ ಕಳ್ಳರ ವಿರುದ್ಧ ನ್ಯಾಯಾಲಯದಲ್ಲಿ ಸಮರ ಸಾರಿರುವ ಸಮಾಜ ಪರಿವರ್ತನ ಸಮುದಾಯದ ಎಸ್.ಆರ್.ಹಿರೇಮಠ್ ಆಗಿದ್ದರು.ಯಾವುದೋ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದವರು ಆ ಪರಿಹಾರ ಕಾರ್ಯಗಳ ಕೇಂದ್ರಸ್ಥಳವನ್ನು ನೋಡಲು ಬಂದಿದ್ದಾಗಿ ಹೇಳಿದರು. ಧಾರವಾಡದಲ್ಲಿ ಅವರ ಸಂಸ್ಥೆಯದೊಂದು (ಆಗ ಅದರ ಹೆಸರು ಬೇರೆ ಇತ್ತು) ಆಫೀಸು ಇತ್ತು. ಮುಖತ: ಭೇಟಿ ಆಗಿರಲಿಲ್ಲವಾದರೂ ಅವರ ಚಟುವಟಿಕೆಗಳ ಕುರಿತು ನಾನು ಪತ್ರಿಕೆಗಳಲ್ಲಿ ಓದಿದ್ದೆ.)
ವಿದ್ಯುಕ್ತವಾಗಿ ಕೊಡಮಾಡಬೇಕಾದ ಪರಿಹಾರಗಳಿಗೆ ಸಂಬಂಧಿಸಿ ದೆಹಲಿ ಸರಕಾರ ಮಾನ್ಯ ಮಾಡಿದ್ದ ನಿರಾಶ್ರಿತ ಶಿಬಿರಗಳು ಕೇವಲ ಹತ್ತೋ ಹನ್ನೊಂದೋ ಅಷ್ಟೇ. ವಾಸ್ತವವಾಗಿ ಗುರುದ್ವಾರಾ, ಸಿಖ್ ಸಾಮುದಾಯಿಕ ಶಾಲೆ ಇತ್ಯಾದಿ ಹಲವೆಡೆಗಳಲ್ಲಿ ಸಿಖ್ಖರು ಆಶ್ರಯ ಪಡೆದುಕೊಂಡು ಅವೂ ನಿರಾಶ್ರಿತ ಶಿಬಿರಗಳೇ ಆಗಿ ಮಾರ್ಪಟ್ಟಿದ್ದವು. ನಾಗರಿಕ ಹಕ್ಕುಗಳ ವೇದಿಕೆಯವರು ಪ್ರಕಟಿಸಿದ ದಾಖಲೆಗಳಲ್ಲಿ ಕನಿಷ್ಟ ಹನ್ನೆರಡು ಗುರುದ್ವಾರಗಳಲ್ಲಿ ಇಂಥ ನಿರಾಶ್ರಿತರು ಸಾವಿರಾರು ಸಂಖ್ಯೆಯಲ್ಲಿ ಇದ್ದರು. ಇದು ನಮಗೆ ಗೊತ್ತಿತ್ತು. ಏಕೆಂದರೆ ಪರಿಹಾರ ಕಾರ್ಯದ ಜೊತೆಗೇ ಇದೆಲ್ಲ ಮುಗಿದ ಮೇಲೆ ಸಿಖ್ಖರ ಮೇಲಿನ ಈ ಹಲ್ಲೆ, ಹತ್ಯೆ,ಲೂಟಿಗಳ ವಿರುದ್ಧ ಒಂದು ಬೃಹತ್ ಪ್ರಮಾಣದ ಪ್ರತಿಭಟಣಾ ಮೆರವಣಿಗೆಯನ್ನು ನಡೆಸುವ ನಿಟ್ಟಿನಲ್ಲಿ ಬೆಂಬಲ ಕ್ರೋಢೀಕರಿಸಲು ನಾವು ರಾಧಾ ಕುಮಾರ್ ನೇತೃತ್ವದಲ್ಲಿ ಸಿಖ್ ಗುರುದ್ವಾರಾಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದೆವು.

ಇತ್ತೀಚೆಗೆ ೨೦೧೦ರಲ್ಲಿ ಜಮ್ಮು ಕಾಶ್ಮೀರದ ವಿವಿಧ ಜನವರ್ಗಗಳ ಜೊತೆ ಮಾತನಾಡಿ ಅವರ ಭಾವನೆ ಬೇಡಿಕೆಗಳ ಕುರಿತು ವರದಿ ನೀಡಲು ಕೇಂದ್ರ ಸರಕಾರವು ಪತ್ರಕರ್ತ ದಿಲೀಪ್ ಪಡಗಾಂವಕರ್ ಅವರ ನೇತೃತ್ವದಲ್ಲಿ ನೇಮಿಸಿದ್ದ ಮೂವರು ಸದಸ್ಯರ ಇಂಟರ್ಲೊಕ್ಯೂಟರ್ಸ್ ಸಮಿತಿಯಲ್ಲಿ ಈ ರಾಧಾ ಕುಮಾರ್ ಒಬ್ಬಳಾಗಿದ್ದಳು.. ಸಮಿತಿಯ ವರದಿಯ ಕುರಿತು, ವಿಶೇಷವಾಗಿ ರಾಧಾ ಕುಮಾರ ವಿಚಾರಗಳ ಕುರಿತು ಕಳೆದ ವರ್ಷ ತೀಕ್ಷ್ಣ ಟೀಕೆ ವ್ಯಕ್ತವಾಗಿತ್ತು. ಈಕೆ ಖ್ಯಾತ ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಪ್ರೊ. ಧರ್ಮಾಕುಮಾರ್ ಅವರ ಮಗಳು. (ಧರ್ಮಾಕುಮಾರ್ ಬಗ್ಗೆ ತಾನು ಹೊಂದಿದ್ದ ಆಕರ್ಷಣೆ ಅಥವಾ ಏಕಮುಖ ಪ್ರೀತಿ-ಪ್ರಶಂಸೆಯ ಬಗ್ಗೆ ಖುಶವಂತ ಸಿಂಗ್ ತಮ್ಮ ವಾಡಿಕೆಯ ಶೈಲಿಯಲ್ಲಿ ತಮ್ಮನ್ನೂ ಗೇಲಿ ಮಾಡಿಕೊಂಡು ಬರೆದದ್ದನ್ನು ಅವರ “ವಿಮೆನ್ ಆಯ್೦ಡ್ ಮೆನ್ ಇನ್ ಮೈ ಲೈಫ್” ಪುಸ್ತಕದಲ್ಲಿ ಓದಬಹುದು!) ಕುಳ್ಳಗೆ ಇನ್ನೂ ವಿದ್ಯಾರ್ಥಿನಿಯಂತೆ ಕಾಣುತ್ತಿದ್ದ ಬಾಬ್ ಕಟ್ ನ ರಾಧಾ ಕುಮಾರ್ ಅದ್ಭುತ ಸಂಘಟಕಿ. ತಮ್ಮ ವಿರುದ್ಧ ಇಡೀ ಒಂದು ಆಳುವ ಎಷ್ಟ್ಯಾಬ್ಲಿಷ್ಮೆಂಟ್ ಸಂಚು ಹೂಡಿದ ಆತಂಕಕಾರಿ ಸನ್ನಿವೇಶದಲ್ಲಿ ಕುಗ್ಗಿಹೋದಂತಿದ್ದ ವಯೋವೃದ್ಧ ಸಿಖ್ಖ್ ಧಾರ್ಮಿಕ ಮುಖ್ಯಸ್ಥರಲ್ಲಿ ಅವಳು ಸ್ಥೈರ್ಯ ತುಂಬಿ ಅವರನ್ನು ಒಂದು ಅತ್ಯಂತ ಅಗತ್ಯವಾದ ಸಾತ್ವಿಕ ಪ್ರತಿಭಟನೆಗೆ ಸಜ್ಜುಗೊಳಿಸಿದ ಪರಿಯನ್ನು ನಾನು ಆಕೆಯ ಟೀಂ ನ ಭಾಗವಾಗಿಯೇ ಬಲ್ಲೆ.
ದಿಲ್ಲಿಯ ಸಂತೆ-ಪೇಟೆ, ಜನಸಂದಣಿಯ ಸ್ಥಳಗಳಲ್ಲಿ ಆ ಉದ್ದೇಶಿತ ಪ್ರತಿಭಟನಾ ಮೆರವಣಿಗೆಯ ಕರಪತ್ರಗಳನ್ನು ಗೆಳೆಯರೊಂದಿಗೆ ಹಂಚುತ್ತ ಸಾಗುವಾಗ ನಮ್ಮದು ಅರಣ್ಯರೋದನ ಎನಿಸುತ್ತಿತ್ತು.ಪರಿಹಾರ ಕಾರ್ಯವನ್ನೆಲ್ಲ ಮುಗಿಸಿ ಮರಳಿ ನಾವು ಹಾಸ್ಟೆಲ್ ಗೆ ಬರಬೇಕಾದರೆ ರಾತ್ರಿಯೇ ಆಗುತ್ತಿತ್ತು. ದಣಿದು ಹೆಣವಾಗಿರುತ್ತಿದ್ದೆವು. ಆದರೆ ಕೊನೆಗೂ ಪ್ರತಿಭಟನಾ ಮೆರವಣಿಗೆಗೆ ನಿಗದಿಯಾದ ದಿನದಂದು ಅಲ್ಲಿ ಸೇರಿದ ಜನರ ಸಂಖ್ಯೆ, ಕಾಂಗ್ರೆಸ್ ನ ಮುಖ್ಯ ಕಛೇರಿ ಇರುವ ಬೀದಿಯಲ್ಲಿ, ಆ ಕಟ್ಟಡದ ಮುಂದೆ ನಿಂತು ನೋಡುತ್ತಿದ್ದ ಆ ಪಕ್ಷದ ಮುಖಂಡರೆಡೆಗೇ ಕೈ ತೋರಿಸಿ ಹೀಗಳೆಯುತ್ತ ಪ್ರತಿಭಟನಾಕಾರರು “ಕಾಂಗ್ರೆಸ್ ಐ ಕಾತಿಲ್ ಹೈ” ಎಂದು ಕೂಗುತ್ತ ಸಾಗಿದ್ದ ರೋಷ ಕಂಡು ನಮ್ಮ ಪ್ರಯತ್ನ ಸಾರ್ಥಕವೆನಿಸಿ ಕಣ್ಣು ಹನಿಗೂಡಿದ್ದವು.
ಆದರೆ ಅದನ್ನು ಮೀರಿ ವಾರಗಟ್ಟಲೇ ನಡೆದ ವಿದ್ಯಮಾನಗಳ ಆಳದಲ್ಲಿದ್ದ ಅಮಾನವೀಯತೆ ಅಪಾರ ಮಾನಸಿಕ ಆಘಾತವನ್ನು ಉಂಟು ಮಾಡಿತ್ತು. ತಮ್ಮ ದುಡಿಕೆ-ಗಳಿಕೆಯಲ್ಲಿ ಹೇಗೋ ತಿಂದುಂಡು ಇದ್ದ ಹೆಂಗಸರು, ಮಕ್ಕಳು ಪರಿಹಾರ ಸಾಮಗ್ರಿ ಒಯ್ದ ನಾವು ಗಾಡಿಯಿಂದ ಕೆಳಗೆ ಧುಮುಕಿದೊಡನೆ ಉಸಿರಾಡಲೂ ಕಷ್ಟವಾಗುವಂತೆ ನಮ್ಮ ಸುತ್ತ ಮುಕುರಿ ನಿಡಿದಾಗಿ ಕೈಚಾಚಿ ಪಾತ್ರೆ ಪದಾರ್ಥಗಳಿಗೆ ಹಾಸಿಗೆ ಹೊದ್ದಿಕೆಗಳಿಗೆ ಅಂಗಲಾಚುವದನ್ನು ನೋಡಿದಾಗ ತುಂಬ ಖೇದವಾಗುತ್ತಿತ್ತು. ಅದಕ್ಕಿಂತ ದು:ಖವಾಗುತ್ತಿದ್ದುದು ಹೋದೆಡೆಯಲ್ಲೆಲ್ಲ ಹೆಂಗಳೆಯರು ಹಿಂದಿನ ದಿನವೋ ಅಥವಾ ಅದರ ಹಿಂದಿನ ದಿನವೋ ನಡೆದ ಘಟನೆಗಳನ್ನು ನಮ್ಮ ಮುಂದೆ ಹೇಳಿಕೊಂಡು ಬಿಕ್ಕುವಾಗ. ಶೂನ್ಯ ನೋಟದಿಂದ ಆ ಹೆಂಗಳೆಯರು ಹೇಳುತ್ತಿದ್ದ ವಿವರಗಳು ಬಹುಪಾಲು ಒಂದೇ ಬಗೆಯಾಗಿದ್ದವು.
ಆಯಾಯ ಸ್ಥಳಗಳ ಸ್ಥಳೀಯ ಕಾಂಗ್ರೆಸ್ ರಾಜಕಾರಣಿಗಳ ಹೆಸರನ್ನು ಹೇಳಿ “ಉನ್ ಕೇ ಸಾಥ್ ಬೀಸ್ ಪಚ್ಚೀಸ್ ಲೋಗ ಥೇ. ಇದರ್ ಉದರ್ ಸೇ ಮಿಟ್ಟೀ ಕೆ ತೇಲ್ ಲಾಯೇ, ಫಿರ್ ಮೇರೆ ಮರ್ದಕೋ ಜಲಾ ಡಾಲಾ ಉನ್ಹೋನೆ. ಮೇರಾ ಮರದ್ ಕಾ ಕೋಯಿ ಕಸೂರ್ ನೈ ಥಾ, ಮೇರಾ ಮರದ್ ಜಲತಾ ಹುವಾ ಇಧರ್ ಭಾಗಾ ಉಧರ್ ಭಾಗಾ…”( ಆ ಮುಖಂಡನ ಜೊತೆ ಇಪ್ಪತ್ತು ಇಪ್ಪತ್ತೈದು ಜನ ಇದ್ದರು, ಅಲ್ಲಿಂದ ಇಲ್ಲಿಂದ ಸೀಮೆ ಎಣ್ಣೆ ಸಂಗ್ರಹಿಸಿ ತಂದರು, ನನ್ನ ಗಂಡನನ್ನು ಸುಟ್ಟು ಹಾಕಿದರು. ನನ್ನ ಗಂಡನದೇನೂ ತಪ್ಪಿರಲಿಲ್ಲ. ಮೈಗೆ ಬೆಂಕಿ ಹತ್ತಿಸಿಕೊಂಡ ನನ್ನ ಗಂಡ ಉರಿಯುತ್ತ ಅದೋ ಅತ್ತ ಓಡಿದ ಮತ್ತೆ ಇತ್ತ ಓಡಿ ಬಂದ). ಎರಡೂ ಅಂಗೈಗಳಿಂದ ಮುಖಕ್ಕೆ ರಪ್ಪನೆ ಬಡಿದುಕೊಳ್ಳುವದು “ಮೇರಾ ಮರದ್ ಕಾ ಕೋಯಿ ಕಸೂರ್ ನೈ ಥಾ” ಎನ್ನುವದು.., ಆ ಹೆಂಗಸರು ಪದೇ ಪದೇ ಅದನ್ನು ಹೇಳುತ್ತಿದ್ದರು. ಅವರ ಗಂಡಂದಿರದೇನು ಕಸೂರ್ (ತಪ್ಪು) ಇರಲು ಸಾಧ್ಯ ಪಾಪ..? ಅವರು ಸಿಖ್ಖ್ ಸಮುದಾಯದಲ್ಲಿ ಹುಟ್ಟಿದ್ದರು, ಅದೇ ದೊಡ್ಡ ತಪ್ಪಾಗಿತ್ತು..! ಏಕೆಂದರೆ ಇಂದಿರಾ ಗಾಂಧಿಯನ್ನು ಹತ್ಯೆ ಮಾಡಿದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಕೂಡ ಸಿಖ್ಖರಾಗಿದ್ದರು ಮತ್ತು ಇಂದಿರಾ ಗಾಂಧಿಯ ಜನಪ್ರಿಯತೆಯನ್ನು ಬಿಂಬಿಸಲು ಮತ್ತು ಆಕೆಯನ್ನು ಕೊಲ್ಲುವ ದಾಷ್ಟ್ಯ ತೋರಿದ ಜನರ ಸಮುದಾಯದ ಮೇಲೆ “ಸೇಡು” ತೀರಿಸಿಕೊಳ್ಳಲು ಕಾಂಗ್ರೆಸ್ ಗೆ ಇದ್ದ ತಾಕತ್ತನ್ನು ತೋರಿಸಲು ಸಾವಿರಾರು ಜನ ಸಿಖ್ಖರ ಮಾರಣಹೋಮ ಆಗಬೇಕಿತ್ತು, ಅಷ್ಟೇ..!

ದೆಹಲಿ ಪೊಲೀಸರು, ಕೇಂದ್ರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಗಲಭೆಗ್ರಸ್ಥ ಪ್ರದೇಶಗಳಲ್ಲಿ ಮೌನಪ್ರೇಕ್ಷಕರಂತೆ ಸೈಟ್ ಸೀಯಿಂಗ ಮಾಡುತ್ತ ನಿರುಮ್ಮಳವಾಗಿ ಅಡ್ಡಾಡುವದನ್ನು ನೋಡಿದಾಗ ಇದೆಲ್ಲ ವ್ಯವಸ್ಥಿತ ಸಂಚಿನ ಪರಿಣಾಮವೆನ್ನುವದು ದಿಲ್ಲಿವಾಸಿಗಳಿಗೆ ಬಲುಬೇಗ ಖಚಿತವಾಗುತ್ತ ಹೋಯಿತು. ನೆರೆಹೊರೆಯ ಹಿಂದುಗಳು ಸಿಖ್ಖ್ ಕುಟುಂಬಗಳನ್ನು ತಮ್ಮ ಮನೆಗಳಲ್ಲಿ ಬಚ್ಚಿಟ್ಟು ರಕ್ಷಿಸಿದರು. ತಾವು ಸಿಖ್ಖ್ ಎಂಬುದನ್ನು ಸುಲಭ ಸಾಧ್ಯವಾಗಿ ಗುರುತಿಸಬಹುದಾದ ತಮ್ಮ ಐಡೆಂಟಿಟಿಯ ಚಿಹ್ನೆಗಳನ್ನು – ಪಗಡಿ, ಕಡಗ, ಕೇಶ ಇತ್ಯಾದಿ-ಸಿಖ್ ಗಂಡಸರು ತೊರೆದರು. ಉತ್ತರ ಭಾರತದ ವಿವಿಧೆಡೆ ವಿಶೇಷವಾಗಿ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಜನಾಂಗೀಯ ಹತ್ಯೆ-ಹಲ್ಲೆಗಳ ಕುರಿತು ದೇಶ ವಿದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗತೊಡಗಿದಾಗ ಸಾವಿರಾರು ಜನರ ಸಾವುಗಳ ಮೇಲೆ, ಹಲವು ಸಾವಿರ ಇತರ ನಿರ್ಗತಿಕರ ನಿಟ್ಟುಸಿರುಗಳ ಮೇಲೆ “ಕಾನೂನು ಸುವ್ಯವಸ್ಥೆ” ಸ್ಥಾಪಿಸಲು ನಿರ್ಧರಿಸಿದ ಆಡಳಿತ ಇಡೀ ಉಸ್ತುವಾರಿಯನ್ನು ಮಿಲಿಟರಿಗೆ ಒಪ್ಪಿಸಿತು.. ಕರ್ಫ್ಯೂ ಸಡಿಲವಾದ ಒಂದು ಸಂಜೆ ಅಪಾರ ಸಾವು ನೋವುಗಳು ಸಂಭವಿಸಿದ್ದ ತ್ರಿಲೋಕಪುರಿ ಮೊದಲಾದ ಯಮುನಾ ನದಿಯಾಚೆಗಿನ ಪುನರ್ವಸತಿ ಪ್ರದೇಶಗಳಿಗೆ ಹೋಗಲು ಅನುಮತಿಗಾಗಿ ಸಮೀಪದಲ್ಲಿ ನಿರ್ಮಿತವಾದ ಮಿಲಿಟರಿ ಠಾಣ್ಯಕ್ಕೆ ನಾವು ಹೋದೆವು.
ಆಗಲೇ ಕತ್ತಲಾಗುತ್ತ ಬಂದಿತ್ತು. ಬಿಗಿದ ಮುಖಮುದ್ರೆಗಳ ಕಟ್ಟುಮಸ್ತಾದ ಯೋಧರು ನಮಗೆ ಮರುದಿನ ಬರುವಂತೆಯೂ ಮತ್ತು ಮಿಲಿಟರಿ ವಾಹನದಲ್ಲೇ ನಾವು ಹೋಗಬೇಕೆಂತಲೂ ಹೇಳಿದರು. ಮರುದಿನ ಮಿಲಿಟರಿ ವಾಹನದಲ್ಲಿ, ಯೋಧರ ಬೆಂಗಾವಲಿನಲ್ಲಿ ನಾವು ಅಲ್ಲಿಗೆ ಹೋದಾಗ ನಮ್ಮನ್ನು ಎದುರುಗೊಂಡದ್ದು ಲೇನ್ ಗಳಲ್ಲಿ ವಿಭಜಿತವಾಗಿದ್ದ ಸಾಲು ಸಾಲು ಮನೆಗಳ ಅವಶೇಷಗಳು- ನೂರಾರು ಮನೆಗಳ ಮೋಟು ಗೋಡೆ, ಮಣ್ಣು, ಇಟ್ಟಿಗೆ, ದೇವರ ಪಟಗಳು, ತಿಳಿನೀಲಿ, ತಿಳಿ ಹಸಿರು ಬಣ್ಣದ ಶಿವ, ನಾನಕ್ ಇತ್ಯಾದಿ ಮಣ್ಣಿನ ವಿಗ್ರಹಗಳು, ಬಡಪಾಯಿ ಮನೆಬಳಕೆ ವಸ್ತುಗಳ ರಾಶಿ…. ಅಲ್ಲಿ ಬದುಕಿದ್ದ ಜನರ ಜೀವನಮಟ್ಟ ಎಷ್ಟು ಕನಿಷ್ಟತಮವಾಗಿತ್ತು ಎಂಬುದನ್ನು ಆ ಒಟ್ಟು ಪರಿಸರವೇ ಹೇಳುತ್ತಿತ್ತು. ಅಲ್ಲಿ ವಾಸಿಸಿದ್ದ ಸಿಖ್ಖರು ಅದಾಗಲೇ ಒಮ್ಮೆ ೧೯೪೭ರ ಭಾರತ ವಿಭಜನೆ ಎಂಬ ಚಾರಿತ್ರಿಕ ಅವಘಡಕ್ಕೆ ತುತ್ತಾಗಿ ತಮ್ಮ ಮೂಲನೆಲೆಗಳಿಂದ ನಿರ್ವಸಿತರಾಗಿ ಹೊರಬಿದ್ದು ಯಮುನಾ ನದಿಯಾಚೆಯ ಪುನರ್ವಸತಿ ಪ್ರದೇಶಗಳಲ್ಲಿ ನೆಲೆಗೊಳಿಸಲ್ಪಟ್ಟಿದ್ದವರು. ಹಾಗೂ ಹೀಗೂ ಒಂದು ಬದುಕು ಕಟ್ಟಿಕೊಂಡ ಆ ಪೀಳಿಗೆಯ ನಂತರದ ಇನ್ನೊಂದು ಪೀಳಿಗೆಯ ಜನರ ಬದುಕನ್ನು ಹಾಂ ಹಾಂ ಅನ್ನುವದರಲ್ಲಿ ಕೆಲವು ಹಿಂಸ್ರ ಜನ ಬರಡುಗೊಳಿಸಿ ಹೊಸಕಿಹಾಕಿದ ಅವಶೇಷಗಳು ನಮ್ಮ ಕಣ್ಣು ಮುಂದಿದ್ದವು. ಆಮೇಲೆ ಮಂಗೋಲಪುರಿ, ಸುಲ್ತಾನಪುರಿಯಲ್ಲೂ ಇಂಥದೇ ಕರುಣಕಥೆಗಳು. ಮೂರು ದಿನಗಳ ವರೆಗೆ ನಡೆದ ಈ ಸಾವಿನ ನೃತ್ಯ ಕೊನೆಗೂ ಕೊನೆಗೊಂಡದ್ದು ಇಂದಿರಾ ಗಾಂಧಿಯವರ ಅಂತ್ಯಸಂಸ್ಕಾರದೊಂದಿಗೇ. ತ್ರಿಲೋಕಪುರಿ ಎಂಬ ಒಂದೇ ಕಾಲನಿಯಲ್ಲಿ ಸುಮಾರು ೩೫೦ ಸಿಖ್ಖರ ಹತ್ಯೆಯಾಗಿತ್ತು. ಸುಟ್ಟ ಶರೀರಗಳ, ಚೆಲ್ಲಾಡಿದ ಹೆಣಗಳ ದಾರುಣತೆ ಸೃಷ್ಟಿಸಿದ್ದ ವಿಲಕ್ಷಣ ಮೌನದ ನಡುವೆ ಮಾತು ಕಳೆದುಕೊಂಡು ಮೂಕರಾದಂತೆ ನಾವೂ ಮೌನವಾಗಿಯೇ ಆ ಪ್ರದೇಶವನ್ನು ನೋಡಿ ನಿಟ್ಟುಸಿರಾದೆವು.ಒಂದು ವಾರದಲ್ಲಿ ಒಟ್ಟು ದಿಲ್ಲಿಯಲ್ಲಿ ಮೂರು ಸಹಸ್ರ ಹೆಣಗಳು ಬಿದ್ದಿದ್ದವು. ಎಲ್ಲವೂ ವಯಸ್ಕ ಸಿಖ್ಖರ ಹೆಣಗಳು..
ಇದೆಲ್ಲ ಮುಗಿದು ಎರಡೋ ಮೂರೋ ವಾರಗಳು ಗತಿಸಿದ ಮೇಲೆ ಈ ಮಧ್ಯೆ ಸ್ವತಂತ್ರ ಭಾರತದ ಆರನೇ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ೪೦ ರ ಯುವಕ ರಾಜೀವ ಗಾಂಧಿ ಬೋಟ್ ಕ್ಲಬ್ ನಲ್ಲಿ ಒಂದು ಜನಸಭೆಯಲ್ಲಿ ಹೇಳಿದ ಮಾತು ಹೀಗಿತ್ತು: “ಇಂದಿರಾಜಿಯವರ ಕೊಲೆಯ ನಂತರ ದೇಶದಲ್ಲಿ ಕೆಲವೆಡೆ ದಂಗೆಗಳಾದವು.. ಆದರೆ ಒಂದು ಬೃಹದಾಕಾರದ ಮರ ಉರುಳಿದಾಗ ಅದರ ಸುತ್ತ ಮುತ್ತಲಿನ ನೆಲ ಸ್ವಲ್ಪ ಅಲುಗಾಡುವದು ಸ್ವಾಭಾವಿಕ”…!
ದೇಶದ ಪ್ರಧಾನಿಯ ಈ ಮಾತು ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆದ ಒಂದು ವ್ಯವಸ್ಥಿತ ಮಾರಣಹೋಮದ ತನಿಖೆ ಸರಿಯಾಗಿ ಆಗಿ ತಪ್ಪಿತಸ್ಥರು ಶಿಕ್ಷೆಗೊಳಪಡುವ ಎಲ್ಲಾ ಸಾಧ್ಯತೆಗಳನ್ನು ನುಂಗಿ ನೀರು ಕುಡಿಯಿತು. ಆ ಘಟಣೆ ನಡೆದು ೨೯ ವರ್ಷ ಕಳೆದಿವೆ. ಆ ಜನಾಂಗೀಯ ಹತ್ಯಾಕಾಂಡದ ಅಪರಾಧಿಗಳಿಗೆ ಶಿಕ್ಷೆ ಇಂದಿಗೂ ಆಗಿಲ್ಲ.
ಅಶೋಕ ಶೆಟ್ಟರ್ ಕಾಲಂ : ಮಾರಣಹೋಮವ ಮರತೇನಂದರ ಮರೆಯಲಿ ಹ್ಯಾಂಗ….
ನಿಮಗೆ ಇವೂ ಇಷ್ಟವಾಗಬಹುದು…




ದುಃಖ ಉಮ್ಮಳಿಸಿ ಬಂತು ಸರ್.
ಆಳುವವರಲ್ಲಿ ಎದ್ದು ಕಾಣುವುದು ಕನಿಷ್ಟ ಮನುಷ್ಯತ್ವದ ಕೊರತೆ. ಇತ್ತೀಚಿನ ಮಂತ್ರಿ ಮಹೋದಯರೂ ಇದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಆದರೆ ಮಾಧ್ಯಮಗಳಲ್ಲಿ ಈ ಕಾಂಡದ ಬಗ್ಗೆ ಚರ್ಚೆಯಾಗುವುದು ತೀರಾ ಅಪರೂಪ .
Anta naramedadalli neravagi palgaondida mukandaroo indigo hage muktavagi odadikondidare. monne ee case mathe reopen agide…
ಅಬ್ಬಾ..!! ಎಂತಹ ಅಮಾನವೀಯ ಘಟನೆ… ಇದನ್ನೆಲ್ಲ ಕಂಡ ನಿಮ್ಮ ಮನಸ್ಸು ಹೇಗಿರಬೇಕೆಂದು ಊಹಿಸಿಕೊಳ್ಳಬಹುದು. ಈ ಲೇಖನ ಓದಿ ಬೆಂಗಳೂರಿನಲ್ಲಿ ಕಾವೇರಿ ಗಲಾಟೆಗಳಲ್ಲಿ ತಮಿಳು ಜನರಿಗೆ ನೀಡಿದ ಚಿತ್ರಹಿಂಸೆ ನೆನಪಾಯಿತು. ಕಾವೇರಿ ಗಲಾಟೆಯಲ್ಲಿ ನಮ್ಮ ಮನೆ ಸುತ್ತಮುತ್ತ ಇದ್ದಂತಹ ತಮಿಳು ಜನರಿಗೆ ಆಶ್ರಯ ನೀಡಿದ್ದು, ಆ ತಮಿಳು ಜನರ ನೋವಿಗೆ ಸ್ಪಂದಿಸಿ ಅವರೆಲ್ಲರಿಗೂ ಸಹಾಯ ಮಾಡುತ್ತಿದ್ದ ನಮ್ಮ ಅಪ್ಪಾ ಅಮ್ಮನ ಕೆಲಸ ಕಣ್ಣೆದುರು ಬಂದಿತು.
uncle niwu inta ghatanege sakshiyagidiri andre great matte awarigella help mado bagyakuda sikkide nimge.. e janangiy galabegalhu yawaga niltawo nam deshadalli awagle rajakiy samajik suvyavaste kanoke sadya ansutte.. yaro obru sattodru anta saviraru amayakaranna sayisodu enta amanaviy krutya kelidrene mai jumm annutte niw adyage adannella nodidro…
ಮೂರು ಸಹಸ್ರ ಯುವ ಸಿಖ್ಖರ ಹೆಣಗಳು ಮತ್ತು ….ನೆಲ ಅಲುಗಾಡುವುದು ಸ್ವಾಭಾವಿಕ.
ಸ್ವಾಭಾವಿಕ ಪದದ ಅರ್ಥ ಬದಲಿಸಿಬಿಟ್ಟಿದ್ದಾರೆ ಈ ಜನ. ಮನಕಲಕುವ ಕಥನ ಸರ್. ಓದಲಿಕ್ಕೆ ಹೀಗಿದೆ ನೈಜವಾಗಿ ಕಂಡಿದ್ದರೆ ಪ್ರಾಣನೇ ಹೋಗುತಿತ್ತು.