ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ: ಜೆ ಎನ್ ಯು ಎಂಬ…


೧೮-೧೯ನೇ ಶತಮಾನದಲ್ಲಿ ಭಾರತದ ಇತಿಹಾಸ, ಸಂಸ್ಕೃತಿ, ಪರಂಪರೆ, ಧರ್ಮ, ಭಾಷೆ, ದರ್ಶನ, ಕಲೆ, ಸಾಹಿತ್ಯಗಳೇ ಮೊದಲಾದವುಗಳ ಗಂಭೀರ ಅಧ್ಯಯನಗಳಿಗೆ ಚಾಲನೆ ಕೊಟ್ಟ ಐರೋಪ್ಯರು,ಅದರಲ್ಲೂ ವಿಶೇಷವಾಗಿ ಆಂಗ್ಲರು, ಭಾರತೀಯ ಸಮಾಜದ ಕುರಿತು ನೆಲೆಯೂರಿಸಿದ ಒಂದು ಸ್ಥಿರಚಿತ್ರವೆಂದರೆ ಆರ್ಯರ ಆಗಮನ ಮೊದಲ್ಗೊಂಡು ಬ್ರಿಟಿಷರ ಆಗಮನದ ವರೆಗಿನ ತನ್ನ ಚರಿತ್ರೆಯುದ್ದಕ್ಕೂ ಅದು ಬದಲಾವಣೆ ಹೀನ ಸಮಾಜವಾಗಿತ್ತು ಎಂಬುದು. ಯಾವ ಸಮಾಜವೂ ಸಹಸ್ರಾರು ವರ್ಷಗಳ ಸುದೀರ್ಘ ಅವಧಿಯುದ್ದಕ್ಕೆ ಬದಲಾವಣೆರಹಿತವಾಗಿರುವದಿಲ್ಲ ಆ ಮಾತು ಬೇರೆ. ಭಾರತೀಯ ಸಮಾಜದ ಬದಲಾವಣೆರಾಹಿತ್ಯದ ಕುರಿತ ವಸಾಹತುಶಾಹಿ ಬರಹಗಳಲ್ಲಿ “ಬ್ರಿಟಿಷರ ಆಗಮನದ ವರೆಗಿನ” ಎಂಬ ಗಡಿ ಗಮನಾರ್ಹ.
ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಸಂದರ್ಭದಲ್ಲಿ ಭಾರತೀಯ ಇತಿಹಾಸ ಎಂಬ ಅಧ್ಯಯನಕ್ಷೇತ್ರವೊಂದಕ್ಕೆ ಬುನಾದಿ ಹಾಕಿದ ಬ್ರಿಟಿಷ್ ಚಿಂತಕರಿಗೆ ಭಾರತ ಇತಿಹಾಸದ ದಾಖಲೆಗಳನ್ನು ಅರ್ಥೈಸುವ ಕ್ರಮದಲ್ಲಿ ಭಾರತದಂಥ ಪ್ರಾಚೀನ, ಸಾಂಪ್ರದಾಯಿಕ, ಹಿಂದುಳಿದ ಸಮಾಜವೊಂದನ್ನು ಆಧುನಿಕ, ಪ್ರಗತಿಶೀಲ ಹಾಗೂ ಚಲನಶೀಲ ಸಮಾಜವಾಗಿ ಬ್ರಿಟಿಷ್ ಆಳ್ವಿಕೆ ಪರಿವರ್ತಿಸುತ್ತಿದೆ ಎಂದು ಸ್ಥಳೀಯರನ್ನು ನಂಬಿಸಿ ತಮ್ಮ ಆಳ್ವಿಕೆ ಮತ್ತದರ ಮುಂದುವರಿಕೆಗೆ ಒಂದು ಮಾನ್ಯತೆಯನ್ನು ಪಡೆದುಕೊಳ್ಳುವ ಉದ್ದೇಶವಿತ್ತೆಂಬುದು ಸ್ಪಷ್ಟ.
ಭಾರತದಂಥ ಒಂದು ವಿಶಾಲವ ಭೂಭಾಗದಲ್ಲಿ ಹರಡಿದ, ಬಹುಮುಖಿಯೂದ, ಹಲವು ಎಡರುತೊಡರುಗಳ ನಡುವೆಯೂ ಉಳಿದುಕೊಂಡು ಬಂದ ಸಮಾಜದ ಕುರಿತು ಮಾತಾಡುತ್ತ ಅದು ಒಂದು ಆದಿಮ ಬುಡಕಟ್ಟು ಸ್ವರೂಪದ ಗುಡ್ಡಗಾಡು ಸಮಾಜವೋ ಎಂಬಂತೆ ಅದರ ಬದಲಾವಣೆಹೀನತೆಯ ಕುರಿತು ಮಾತಾಡಿದ್ದು, ಬರೆದಿದ್ದು ಹಾಸ್ಯಾಸ್ಪದ. ಬದಲಾವಣೆಯ ಗತಿಯನ್ನು ನಾವು ಪ್ರಶ್ನಿಸಬಹುದು, ಬದಲಾವಣೆಯನ್ನೇ ಅಲ್ಲ.
ನಾನು ಇದನ್ನೆಲ್ಲ ಪಾಠ ಮಾಡುತ್ತೇನೆ. ಆದರೆ ಬದಲಾವಣೆಗಳೆಲ್ಲ ಏಕರೂಪಿಯೇ? ಬದಲಾವಣೆಯೇ ನೋವು ತರುವಂಥವಾದರೆ? ಬದಲಾವಣೆಗಳು ಮನಸು ಮುದುಡಿಕೊಳ್ಳುವಂಥವುಗಳಾದರೆ? ಒಪ್ಪಲು ನಿರಾಕರಿಸುವಂತಾಗುವದಾದರೆ? ಇಲ್ಲಿ ಬದಲಾವಣೆ ತರುವದು ನೋವೋ ನಲಿವೋ ಎಂಬುದು ಬದಲಾವಣೆಯ ಸ್ವರೂಪವನ್ನವಲಂಬಿಸಿದೆ. ಬದಲಾವಣೆ ಅಪರಿಹಾರ್ಯವೆಂದು ಗೊತ್ತಿದ್ದೂ , ಆ ಸತ್ಯವನ್ನು ಒಪ್ಪಿಕೊಂಡೂ ಬದಲಾವಣೆಯನ್ನು ಒಪ್ಪಿಕೊಳ್ಳಲಾಗದ ಸ್ಥಿತಿ ಒಮ್ಮೊಮ್ಮೆ ಇರುತ್ತದಲ್ಲ….
ಇವೆಲ್ಲ ನಾನು ಕಲಿತ ವಿಶ್ವವಿದ್ಯಾಲಯವೊಂದಕ್ಕೆ ಎರಡು ದಶಕಗಳ ನಂತರ ನಾನು ಇತ್ತೀಚೆ ಹೋದಾಗ ನನ್ನನ್ನು ಮುತ್ತಿಕೊಂಡ ವಿಚಾರಗಳು. ನಾನು ಕಲಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಮತ್ತೊಮ್ಮೆ ಹೋಗಲಾಗಲಿಲ್ಲವೆಂಬ ಅತೃಪ್ತಿ ಕಳೆದ ಇಪ್ಪತ್ತೆರಡು ವರ್ಷಗಳಿಂದಲೂ ಇತ್ತು. ಎರಡು ವರ್ಷಗಳ ಹಿಂದೆ ೨೦೧೧ರ ಡಿಸೆಂಬರ್ ನಲ್ಲಿ ರಾಷ್ಟ್ರೀಯ ಶೈಕ್ಷಣಿಕ ಅಧಿವೇಶನವೊಂದರಲ್ಲಿ ಪಾಲ್ಗೊಳ್ಳಲು ಪಂಜಾಬಿನ ಪಟಿಯಾಲಕ್ಕೆ ಹೋಗುವ ಮುನ್ನ ದೆಹಲಿಯಲ್ಲಿ ಸ್ವಲ್ಪ ಕಾಲ ಇದ್ದಾಗ ಲಭ್ಯವಿದ್ದ ಅಲ್ಪ ಕಾಲಾವಕಾಶದಲ್ಲೇ ಹಿಸ್ಟರಿ ಪ್ರೊಫೆಸರ್ ಗಳಾಗಿರುವ ಗೆಳೆಯರಾದ ಡಾ. ಅಶ್ವಥನಾರಾಯಣ ಮತ್ತು ಡಾ. ಬಾರಕೂರು ಉದಯ ಅವರನ್ನು ಕರೆದುಕೊಂಡು ಜೆ ಎನ್ ಯೂ ಕ್ಯಾಂಪಸ್ ಗೆ ಹೋಗಿ ಬಂದಿದ್ದೆ. ನಾನು ಕಲಿತ ಸೆಂಟರ್ (ಫಾರ್ ಹಿಸ್ಟಾರಿಕಲ್ ಸ್ಟಡೀಸ್) ಇದ್ದ ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್ ಕಟ್ಟಡವನ್ನು ಹುಡುಕುವದೂ ಕಷ್ಟವೆನ್ನಿಸಿತು. ಅದರ ಸುತ್ತ ಹಲವು ಇತರ ದೊಡ್ಡ ಕಟ್ಟಡಗಳು ಎದ್ದು ನಿಂತಿದ್ದವು. ಮೊದಲು ಸ್ಕೂಲ್ ಆಫ್ ಲೈಫ್ ಸೈನ್ಸಸ್, ಸ್ಕೂಲ್ ಆಫ್ ಎನ್ವಿರಾನ್ಮೆಂಟಲ್ ಸೈನ್ಸಸ್ ಮತ್ತು ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್ ಮಾತ್ರ ಅಲ್ಲಿ ಇದ್ದು ಇನ್ನುಳಿದಂತೆ ಸ್ಕೂಲ್ ಆಫ್ ಇಂಟರ್ನ್ಯಾಶನಲ್ ಸ್ಟಡೀಸ್, ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಮತ್ತು ಆಡಳಿತ ಕಟ್ಟಡಗಳು ಮುನಿರ್ಕಾ ರಸ್ತೆಗೆ ಮೇರೆಯಾಗಿದ್ದ “ಡೌನ್ ಕ್ಯಾಂಪಸ್” ನಲ್ಲಿದ್ದವು. ಈಗ ಎಲ್ಲವೂ ಮೇಲಿನ ಕ್ಯಾಂಪಸ್ ಗೇ ಶಿಫ್ಟ್ ಆಗಿವೆ. ಹೊಸ ಸ್ಕೂಲ್ ಗಳು ಉದಾ ಸ್ಕೂಲ್ ಆಫ್ ಆರ್ಟ್ ಅಂಡ್ ಅಸ್ಥೆಟಿಕ್ಸ್, ಸ್ಕೂಲ್ ಆಫ್ ಫಿಜಿಕಲ್ ಸೈನ್ಸಸ್, ಸ್ಕೂಲ್ ಆಫ್ ಬಯೋಟೆಕ್ನಾಲಜಿ ಇವು ಅಸ್ತಿತ್ವಕ್ಕೆ ಬಂದಿವೆ. ಹೊಸ ಹಾಸ್ಟೆಲ್ ಕಟ್ಟಡಗಳು ನಿರ್ಮಾಣಗೊಂಡಿವೆ.

ನಾವು ಅಲ್ಲಿ ಓದುತ್ತಿದ್ದಾಗ ಬಸ್ ಸಂಚರಿಸುವ ಮುಖ್ಯ ರಸ್ತೆಯಿಂದ ವಾಚನಾಲಯಕ್ಕೆ, ನಮ್ಮ ಅಧ್ಯಯನ ಕೇಂದ್ರಗಳಿಗೆ, ನಮ್ಮ ಅಧ್ಯಾಪಕರ ಮನೆಗಳು ಸ್ಥಿತವಾಗಿದ್ದ ಸಮುಚ್ಚಯಗಳಿಗೆ ಕಾಲ್ನಡಿಗೆಯಿಂದ ಹೋಗುವ ಮಾರ್ಗದಲ್ಲಿ ಎಲ್ಲೆಡೆ ಆಗ ಅಲ್ಲಿ ನೆಟ್ಟು ಬೆಳೆಸಿದ್ದ ಗಿಡಗಳು ನಮ್ಮಷ್ಟೇ ಎತ್ತರಕ್ಕಿದ್ದವು. ಅವುಗಳ ಪಕ್ಕ ಇದ್ದ ಕಿರಿದಾದ ಕಂಬಗಳ ಮೇಲಿನ ಮರ್ಕ್ಯುರಿ ವಿದ್ಯುದ್ದೀಪಗಳ ಮಂದ ಬೆಳಕಿನಲ್ಲಿ ಬೆಳಗುತ್ತ ರಾತ್ರಿ ಇಡೀ ವಾತಾವರಣ ಒಂಥರ ಮತ್ತೇರಿಸಿಕೊಂಡಂತಿರುತ್ತಿತ್ತು. ಅಂದು ಆಳೆತ್ತರ ಇದ್ದ ಆ ಗಿಡಗಳು ಕಳೆದ ಇಪ್ಪತ್ತೆರಡು ವರ್ಷಗಳ ಸುದೀರ್ಘ ಅವಧಿಯಲ್ಲಿ ಹೆಮ್ಮರಗಳಾಗಿ ಬೆಳೆದು ನಿಂತಿದ್ದು ಇಡೀ ಆವರಣ ಗೊಂಡಾರಣ್ಯದಂತೆ ಕಾಣುತ್ತಿತ್ತು. ನನಗೆ ಅಂಗೈ ರೇಖೆಗಳಂತೆ ಪರಿಚಿತವಿದೆ ಎಂದು ನಾನು ಭಾವಿಸಿದ್ದ ಪೂರ್ವಾಂಚಲ ಹಾಸ್ಟೆಲ್ ಗೆ ಹೋಗುವ ದಾರಿ ನನಗೇ ಗೊಂದಲವಾಗತೊಡಗಿತು. ಅಲ್ಲಿಗೆ ಹೋಗುವ ಮಾರ್ಗದ ತಿರುವಿನಲ್ಲಿ ಕಲ್ಲುಮಣ್ಣುಮಿಶ್ರಿತ ಹುಲ್ಲುಗಾವಲಿನಂತಿದ್ದ ಅರಾವಳಿ ಶ್ರೇಣಿಯ ಅಂಚುಪ್ರದೇಶವಾಗಿದ್ದ ಆ ವಿಶಾಲ ಖಾಲಿ ಸ್ಥಳದಲ್ಲಿ ಈಗ ಕೇಂದ್ರೀಯ ವಿದ್ಯಾಲಯದ ಒಂದು ಕಟ್ಟಡ ಎದ್ದು ನಿಂತಿತ್ತು. ನಾನಲ್ಲಿದ್ದ ವರ್ಷಗಳಲ್ಲಿ ವಿಶವಿದ್ಯಾಲಯದ ವಿದ್ಯಾರ್ಥಿ ಸಂಘದ ರಾಜಕೀಯವನ್ನು ನಿಯಂತ್ರಿಸುತ್ತಿದ್ದ ವಿಚಾರಧಾರೆ ಸಿಪಿಐ,ಸಿಪಿಎಂ ಪ್ರತಿನಿಧಿಸುವ ಸಾಂವಿಧಾನಿಕ ಮಾರ್ಗದ ಸ್ವರೂಪದ್ದಾಗಿದ್ದು ನಕ್ಸಲೈಟ್ ಸಂಘಟನೆಗಳು ಅಂಚಿನಲ್ಲೆಲ್ಲೋ ಇದ್ದರೆ ಈಗ ಜೆ.ಎನ್.ಯೂ ವಾಚನಾಲಯದ ಮುಖ್ಯ ಪ್ರವೇಶದ್ವಾರದ ಮೇಲ್ಭಾಗದಲ್ಲೇ “ನಕ್ಸಲ್ ಬಾರಿ ಏಕ್ ಹೀ ರಾಸ್ತಾ” ಎಂಬ ಢಾಳಾದ ಬರಹವಿತ್ತು. ಆ ಪ್ರವೇಶ ದ್ವಾರವೂ ಹೊಸದಾಗಿತ್ತು. ಮೊದಲು ವಾಚನಾಲಯದ ಹಿಂಭಾಗವಾಗಿದ್ದ ಇಟ್ಟಿಗೆಯ ಗೋಡೆಯನ್ನೊಡೆದು ಅದನ್ನು ನಿರ್ಮಿಸಲಾಗಿತ್ತು. ಮೊದಲು ಇನ್ನೊಂದು ಬದಿಗಿದ್ದ ಪ್ರವೇಶ ದ್ವಾರವನ್ನು ಇಟ್ಟಿಗೆಗಳನ್ನು ಜೋಡಿಸಿ ಮುಚ್ಚಿ ಹಾಕಲಾಗಿತ್ತು. ನಾವು ಕುಳಿತು ಚಹ ಕುಡಿಯುತ್ತಿದ್ದ ಪುಟ್ಟದೊಂದು ಕ್ಯಾಂಟೀನ್ ಕಣ್ಮುಚ್ಚಿತ್ತು.
ಆಗ ಒಂದು ಹಾಸ್ಟೆಲ್ ಮುಂದೆ ನಾಲ್ಕೋ ಆರೋ ಬೈಕ್ ಗಳಿದ್ದರೆ ಅದೇ ಜಾಸ್ತಿ. ಈಗ ಒಂದೊಂದು ಹಾಸ್ಟೆಲ್ ಮುಂದೆಯೂ ನೂರಾರು ಬೈಕ್ ಗಳು,. ಆಗ ಎಲ್ಲೋ ನಾಲ್ಕಾರು ಹಿರಿಯ ಪ್ರೊಫೆಸರುಗಳು ಕಾರು ಚಲಾಯಿಸಿಕೊಂಡು ಬರುತ್ತಿದ್ದರು, ಬಹುಪಾಲು ಇತರರು ಬಸ್ ಅಥವಾ ಕಾಲ್ನಡಿಗೆಯಲ್ಲಿಯೇ ಬರುತ್ತಿದ್ದರು. ಈಗ ಹತ್ತಾರು ಪಾರ್ಕಿಂಗ್ ಲಾಟ್ ಗಳಲ್ಲಿ ಮಿರಿಮಿರಿ ಮಿಂಚುತ್ತ ನಿಂತ ನೂರಾರು ಕಾರ್ ಗಳು. ಕಳೆದ ಎರಡು ದಶಕಗಳಿಗೆ ಮಿಕ್ಕಿ ಚಾಲ್ತಿಯಲ್ಲಿರುವ ಜಾಗತೀಕರಣದ ಪರಿಣಾಮವಾಗಿ ನಗರ ಭಾರತ ತಾಳಿದ ಹೊಸ ಅವತಾರದ ಢಾಳು ರೂಪ ವಿಶ್ವವಿದ್ಯಾಲಯದಲ್ಲಿ ಎಲ್ಲೆಲ್ಲೂ ಕಾಣುತ್ತಿತ್ತು. ಒಂದು ಎಲೀಟ್ ವಾತಾವರಣದ ಛಾಯೆ ಇತ್ತು.
ಜೆ.ಎನ್.ಯೂ ನಲ್ಲಿ ನಾನು ಪ್ರವೇಶ ಪಡೆದ ಅವಧಿ ಆ ವಿಶ್ವವಿದ್ಯಾಲಯ ಇನ್ನೂ ತನ್ನ ಶೈಶವಾವಸ್ಥೆಯಲ್ಲಿದ್ದಾಗಿನದು. ೧೯೬೯ರಲ್ಲಿ ಭಾರತೀಯ ಸಂಸತ್ತಿನ ಮಸೂದೆಯೊಂದರ ಪರಿಣಾಮವಾಗಿ ಮತ್ತು ಇಂದಿರಾಗಾಂಧಿಯವರ ಪ್ರಯತ್ನದ ಫಲವಾಗಿ ಆಕೆಯ ತಂದೆ ಜವಾಹರಲಾಲ ನೆಹರೂ ಅವರ ಹೆಸರಿನಲ್ಲಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ನಾನು ಹೋದಾಗ (೧೯೮೧) ಅದಕ್ಕೆ ಹನ್ನೆರಡರ ಎಳೇ ಪ್ರಾಯ. ಹೀಗಾಗಿ ವಿದ್ಯಾರ್ಥಿಗಳಲ್ಲಿ ತೀವೃ ರಾಜಕೀಯ ಪ್ರಜ್ಞೆಯೂ ಧ್ರುವೀಕರಣವೂ ಇದ್ದ ಆ ವಾತಾವರಣದಲ್ಲಿ ಯಾವುದಾದರೂ ಘಟಣೆ ಸಂಭವಿಸಿ ಅದರ ಕುರಿತ ಖಂಡನೆ ಮಂಡನೆಗಳು ವಿವಿಧ ವಿದ್ಯಾರ್ಥಿ ಸಂಘಟಣೆಗಳ ಕಾರ್ಯಕರ್ತರಲ್ಲಿ,ಜೆ.ಎನ್.ಯೂ ವಿದ್ಯಾರ್ಥಿ ಸಂಘದ ಜನರಲ್ ಬಾಡಿ ಮೀಟಿಂಗ್ ಗಳಲ್ಲಿ ನಡೆಯುತ್ತಿದ್ದರೆ “ಜೆ.ಎನ್.ಯೂ ಕೀ ಹಿಸ್ಟರಿಮೇ ಐಸೀ ಶರಮನಾಕ್ ಘಟನಾ ಪೆಹಲೀ ಬಾರ್ ಹುವಾ ಹೈ” (ಜೆ.ಎನ್.ಯೂ ವಿನ ಇತಿಹಾಸದಲಿ ಇಂಥ ನಾಚಿಕೆಗೇಡು ಘಟನೆ ಮೊದಲ ಬಾರಿಗೆ ನಡೆದಿದೆ) ಎಂಬಂಥ ಮಾತುಗಳು ಭಾಷಣ ಕಲೆಯಲ್ಲಿ ನಿಷ್ಣಾತರಾದ ಕಮ್ಯುನಿಸ್ಟ,ಸೋಶಲಿಸ್ಟ್ ಮೊದಲಾದ ವಿದ್ಯಾರ್ಥಿಸಂಘಟಣೆಗಳ ನಾಯಕಮಣಿಗಳ ಭಾಷಣಗಳಲ್ಲಿ ಆಗಾಗ ಕೇಳಬರುತ್ತಿತ್ತು. ಇದ್ದುದೇ ಹನ್ನೆರಡು ವರ್ಷಗಳ ಇತಿಹಾಸ, ಹೀಗಾಗಿ ಬಹುಪಾಲು ಘಟನೆಗಳು -ಒಳ್ಳೆಯವೋ ಕೆಟ್ಟವೋ- “ಪೆಹಲೀ ಬಾರ್” ಆಗಿರುತ್ತಿದ್ದವು, ಅಷ್ಟೇ!
ವಿಶ್ವವಿದ್ಯಾಲಯ ಆರಂಭವಾದ ಹೊಸತರಲ್ಲೇ ಸ್ಥಾಪಿತವಾದ ಎಡಪಂಥೀಯರ ಪ್ರಭಾವ ಕಾರಣವಾಗಿ ಮಾರ್ಕ್ಸಿಸ್ಟ್ ವಿದ್ಯಾರ್ಥಿಸಂಘಟಣೆಗಳ ಹಿಡಿತದಲ್ಲಿ ಜೆ.ಎನ್.ಯೂ ವಿದ್ಯಾರ್ಥಿ ಸಂಘ ಇತ್ತು. ಎಡಪಂಥೀಯ ಸಂಘಟಣೆಯ ಕೆಲವು ನಾಯಕರ ಆಸಕ್ತಿ ಕಾರಣವಾಗಿ ಜೆ.ಎನ್.ಯೂ ನಲ್ಲಿ ಪ್ರವೇಶಾತಿ ನೀತಿಯಲ್ಲಿ ಭಾರತದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳ, ಹಾಗೂ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಕೌಟುಂಬಿಕ ಹಿನ್ನೆಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರವೇಶದಲ್ಲಿ ಸ್ವಲ್ಪ ವೇಟೇಜ್ ಕೊಡುವ ನೀತಿಯೊಂದು ಅಳವಡಿಸಲ್ಪಟ್ಟು ಅಂಥ ಕೇಂದ್ರೀಯ ಉನ್ನತ ವಿದ್ಯಾಸಂಸ್ಥೆಯಲ್ಲಿ ಓದುವದನ್ನು ಕಲ್ಪಿಸುವದೂ ಸಾಧ್ಯವಿಲ್ಲದಂಥ ಸಾಮಾನ್ಯ ಹಿನ್ನೆಲೆಯ ಜನ ಕೂಡ ಆ ಪ್ರವೇಶಾತಿ ನೀತಿಯಿಂದಾಗಿ ಅಲ್ಲಿ ಓದುವದು ಸಾಧ್ಯವಾಗಿತ್ತು. ನೂರಾರು ಸಂಖ್ಯೆಯಲ್ಲಿ ದಲಿತ ವಿದ್ಯಾರ್ಥಿಗಳು ಕೂಡ ಅಲ್ಲಿ ಓದುತ್ತಿದ್ದರು. ಈಶಾನ್ಯ ಭಾರತದ ರಾಜ್ಯಗಳು, ಕಾಶ್ಮೀರ್ ಒಳಗೊಂಡಂತೆ ಭಾರತದ ಬಹುಪಾಲು ಎಲ್ಲ ರಾಜ್ಯಗಳನ್ನು ಪ್ರತಿನಿಧಿಸುವ ಸಾವಿರಾರು ವಿದ್ಯಾರ್ಥಿಗಳಿದ್ದ ಜೆ.ಎನ್.ಯೂ ದೆಹಲಿಯಲ್ಲೇ ಇದ್ದ ಇನ್ನೊಂದು ವಿಶ್ವವಿದ್ಯಾಲಯವಾದ ದೆಹಲಿ ವಿಶ್ವವಿದ್ಯಾಲಯಕ್ಕಿಂತ ಗುಣಾತ್ಮಕವಾಗಿ ತುಂಬ ಭಿನ್ನವಾಗಿತ್ತು. ಆಮೇಲೆ ಆ ಪ್ರವೇಶಾತಿ ನೀತಿ ಮೊಟಕಾಯಿತೆಂದು ಕೇಳಿದೆ. ಜೆ.ಎನ್.ಯೂ ಒಂದು ಎಲೀಟಿಸ್ಟ್ ಸಂಸ್ಥೆಯಾಗಿ ಬದಲಾಗಿದೆ ಎಂದು ಜನ ಹೇಳುತ್ತಿದ್ದುದನ್ನು ಕೇಳುತ್ತಿದ್ದೆ.
ನಾನು ಇದ್ದಾಗ ಹೇಗಿತ್ತು ಈಗಲೂ ಹಾಗೆಯೇ ಇದೆಯೇ ಎಂದು ನಾನು ಎಲ್ಲವನ್ನೂ ತೌಲನಿಕವಾಗಿ ನೋಡುವದು ಸಾಧ್ಯವಿರಲಿಲ್ಲ. ನಾನಿದ್ದಾಗ ಅಲ್ಲಿ “ಲೈಫ್” ರಾತ್ರಿ ಊಟದ ನಂತರವೇ ಆರಂಭವಾಗುತ್ತದೆ ಎಂಬಂತಿರುತ್ತಿತ್ತು. ಇಡೀ ಹಗಲು ವಿದ್ಯಾರ್ಥಿಗಳು ನಗರದ ಯಾವ್ಯಾವುದೋ ವಾಚನಾಲಯಗಳಿಗೆ, ಅರ್ಕೈವ್ಸ್ ಗಳಿಗೆ ಹೋಗಿರುತ್ತಿದ್ದವರು ನಸುಕತ್ತಲು ಆವರಿಸಿದಾಗ ಮರಳುತ್ತಿದ್ದರು. ರಾತ್ರಿ ಊಟದ ನಂತರ ಹಾಸ್ಟೆಲ್ ಮೆಸ್ ಗಳಲ್ಲಿ ಯಾವುದೋ ರಾಜಕೀಯ ಭಾಷಣ, ಅಥವಾ ವಿದ್ಯಾರ್ಥಿಸಂಘಟನೆಗಳ ಸಭೆಗಳು, ಅಥವಾ ಚುನಾವಣಾ ಪ್ರಚಾರ ಸಭೆಗಳು, ಇಲ್ಲವೇ ಅರುಣ್ ಜೈಟ್ಲಿ, ಪ್ರಕಾಶ ಕಾರಟ್., ಸೀತಾರಾಮ್ ಯೆಚೂರಿ, ರಾಮ್ ವಿಲಾಸ್ ಪಾಸ್ವಾನ್, ಅರುಣ್ ಶೌರಿ ಇಂಥ ಯಾರದೋ ಒಬ್ಬ ಅಮಂತ್ರಿತ ಮುಖಂಡರ ಭಾಷಣಗಳು, ಇಲ್ಲವೇ ಅದೇ ಮೆಸ್ ಗಳಲ್ಲಿ ಬಿರ್ಜು ಮಹಾರಾಜ್ ಅವರ ಕಥಕ್, ಅಥವ ಹರಿಪ್ರಸಾದ್ ಚೌರಾಸಿಯಾ ರ ಕೊಳಲು, ಅಥವಾ ಸ್ಪಿಕ್ ಮ್ಯಾಕೆ ಕಾರ್ಯಕ್ರಮಗಳಡಿ ಖ್ಯಾತ ಸಂಗೀತಗಾರರೊಬ್ಬರ ಸಂಗೀತ, ಅಥವಾ ಹಬೀಬ್ ತನ್ವೀರ್ ನಿರ್ದೇಶನದ ಯಾವುದೋ ಒಂದು ನಾಟಕ, ಅಥವಾ ದಿವಂಗತ ಸಫದರ್ ಹಶ್ಮಿ ತಂಡದ ಬೀದಿ ನಾಟಕಗಳು, ಏನೂ ಇಲ್ಲವೆಂದರೆ ಕೊನೆಗೆ ಸತ್ಲೆಜ್, ಗಂಗಾ ಮತ್ತು ಝೇಲಂ ಹಾಸ್ಟೆಲ್ ಗಳ ನಡುವಿನ ಹುಲ್ಲು ಹಾಸಿನ ಮೇಲೆ, ಅಥವಾ ಪೆರಿಯಾರ್ ಗೋದಾವರಿ ಹಾಸ್ಟೇಲ್ ಗಳ ನಡುವಿನ ಬಂಡೆಗಳ ಮೇಲೆ ಮಧ್ಯರಾತ್ರಿಯ ವರೆಗೆ ಪಕ್ಕದಲ್ಲಿದ್ದ ಚಹದ ಡಬ್ಬಾ ಅಂಗಡಿಯತ್ತ ತಿರುಗಿ “ಏ ಛೋಟೂ ದೋ ಕಪ್ ಚಾಯ್ ಲಾನಾ” ಎಂದು ಕೂಗು ಹೊಡೆಯುತ್ತ, ಸಿಗರೇಟು ಸೇದುತ್ತ ಅದೂ ಇದೂ ಮಾತಾಡುತ್ತ, ಹಾಡುತ್ತ ಗುಂಪುಗುಂಪಾಗಿ ಕುಳಿತಿರುತ್ತಿದ್ದ ಹುಡುಗ ಹುಡುಗಿಯರು..ಇಡೀ ವಾತಾವರಣ ಜೀವಂತವಾಗಿರುತ್ತಿತ್ತು. ಅನೌಪಚಾರಿಕವಾಗಿರುತ್ತಿತ್ತು.
ಇತ್ತೀಚೆಗಷ್ಟೇ ಜೆ.ಎನ್.ಯೂ ನ ಒಬ್ಬ ವಿದ್ಯಾರ್ಥಿ ತನ್ನ ಗೆಳತಿಯೊಬ್ಬಳಿಗೆ ಯಾವುದೋ ವಿಷಯಕ್ಕೆ ಸಂಬಂಧಿಸಿ ಅವಳು ತನ್ನ ಮಾತು ಕೇಳದಿದ್ದಾಗ ಚಾಕುವಿನಿಂದ ಇರಿದು ಕೊಂದ ಎಂದು ಎಲ್ಲೋ ಓದಿದೆ ಅಥವಾ ಕೇಳಿದೆ. ಇಂಥವನ್ನು ಆಗ ಅಲ್ಲಿ ಕಲ್ಪಿಸುವದೂ ಸಾಧ್ಯವಿರಲಿಲ್ಲ. ಈವ್ ಟೀಸಿಂಗ್ ಎಂಬ ಹುಡುಗಿಯರನ್ನು ಛೇಡಿಸುವ, ದೂಷಿಸುವ, ಕೀಟಲೆಗೈಯ್ಯುವದನ್ನು ಅಪ್ಪಿ ತಪ್ಪಿ ಕೂಡ ಯಾರೂ ಮಾಡುತ್ತಿರಲಿಲ್ಲ. ಒಮ್ಮೆ ಜೆ.ಎನ್.ಯೂ ನಲ್ಲಿ ಸ್ಪೋರ್ಟ್ಸ್ ಆಫೀಸರ್ ಆಗಿದ್ದ ಬಲದೇವ ಟೋಕಾಸ್ ಎಂಬಾತನ ಹೆಂಡತಿ ಏಶಿಯಾಡ್ ಅಂತರ್ರಾಷ್ಟ್ರೀಯ ಕ್ರೀಡಾಕೂಟಕ್ಕೆ ಒಂದು ಕ್ರೀಡಾತಂಡದೊಂದಿಗೆ ವ್ಯವಸ್ಥಾಪಕಳಾಗಿ ಬಂದಿದ್ದು ನಮ್ಮ ಹಾಸ್ಟೆಲ್ ನ ಹಿಂಭಾಗದಲ್ಲೇ ಅತನ ಮನೆಯಲ್ಲಿ ಇದ್ದಾಗ ಆತ ಅವಳನ್ನು ಸುಟ್ಟು ಹಾಕಿದ್ದ. ಏನೋ ನಡೆದಿದೆ ಎಂದು ಖಾತ್ರಿಯಾಗಿ ನಾವು ಕೆಲವರು ಅಲ್ಲಿ ಹೋದಾಗ ಸ್ವಲ್ಪ ಮುಂದಿದ್ದ ನಾನು ಟೋಕಾಸ್ ನ ಮನೆಯೊಳಗೆ ಪ್ರವೇಶಿಸಿದರೆ ಹಾಲ್ ನಲ್ಲಿ ಸೋಫಾದ ಮೇಲೆ ಕುಳಿತಿದ್ದ ಆ ಮಹಾಶಯ ಅಡುಗೆ ಕೋಣೆಯತ್ತ ಕೈ ಮಾಡಿದ ನಾನು ಹೋಗಿ ನೋಡಿದರೆ ಬಾಗಿಲಿನ ಕೆಳಗೆ ಎರಡಡಿ ಕೊರೆಯಲ್ಪಟ್ಟಿದ್ದ ಭಾಗದಿಂದ ಹೊಗೆ ಬರುತ್ತಿತ್ತು. ನಾನು ಬಾಗಿ ಒಳಗೆ ನೋಡಿ ದಂಗಾದೆ. ಅವನ ಹೆಂಡತಿಯ ಶರೀರ ದಹಿಸುತ್ತಿತ್ತು. ಸತ್ತೆನೋ ಕೆಟ್ಟೆನೋ ಎಂದು ಹೊರಗೋಡಿ ಬಂದ ನಾನು ಹಾಸ್ಟೆಲ್ಲಿನ ಉಳಿದ ವಿದ್ಯಾರ್ಥಿಗಳಿಗೆ ವಿಷಯ ತಿಳಿಸಿದರೆ ಅಲ್ಲಿಗೆ ಧಾವಿಸಿ ಬಂದ ಅವರೆಲ್ಲ “ಬೀವೀಕೋ ಜಲಾತಾ ಹೈ? ಸಾಲಾ” ಎಂದು ಟೋಕಾಸ್ ನನ್ನು ಅವನ ಮನೆಯಂಗಳದಲ್ಲಿ ಕೆಡವಿ ಉರುಳಾಡಿಸಿ ಒದ್ದರು. ಅಂದು ಆಲ್ಲಿ ತನ್ನ ಗೆಳತಿಯನ್ನು ತಿವಿದು ಕೊಂದ ವಿದ್ಯಾರ್ಥಿ ಇದ್ದಿದ್ದರೆ ಅವನ ಗತಿಯೂ ಅದೇ ಆಗಿರುತ್ತಿತ್ತು.
ಕಳೆದ ತಿಂಗಳು, ಜುಲೈ ೨೬ರಂದು, ಮತ್ತೊಮ್ಮೆ ನನ್ನ ಹೆಂಡತಿಯೊಂದಿಗೆ ದೆಹಲಿಯಲ್ಲಿ ತಿರುಗಾಡುತ್ತಿದ್ದಾಗ ನಾನು ಐದು ವರ್ಷ ಇದ್ದ ವಿಶ್ವವಿದ್ಯಾಲಯವನ್ನು ಅವಳೂ ನೋಡಲಿ ಎಂದು ಕರೆದುಕೊಂಡು ಹೋದೆ. ನಾನು ಹಿಂದೆ ಇದ್ದ ವಾತಾವರಣಕ್ಕೆ ನನ್ನನ್ನು ರಿಲೇಟ್ ಮಾಡಿಕೊಳ್ಳಲಾಗದಂಥ ಮತ್ತದೇ ಭಾವನೆ. ನಾನು ಏನನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ? ಗೊತ್ತಿಲ್ಲ. ಅಸಮಾಧಾನವೂ ಅಲ್ಲದ, ನೋವೂ ಅಲ್ಲದ, ಅತೃಪ್ತಿಯೂ ಅಲ್ಲದ, ನಿರಾಶೆಯೂ ಅಲ್ಲದ, ಆದರೆ ಇವೆಲ್ಲದರ ಒಂದೊಂದು ಸೂಕ್ಷ್ಮ ಎಳೆಗಳಿಂದ ಕೂಡಿಕೊಂಡಂತೆಯೂ ಇದ್ದ ನನ್ನ ಭಾವಲೋಕದಲ್ಲಿ ನಡೆದಿದ್ದ ಗುದುಮುರಿಗೆಯ ತಾತ್ಪರ್ಯವೇನು? ಗೊತ್ತಿಲ್ಲ.
ಜೆ ಎನ್ ಯು ನಾನು ಕಾಲು ಶತಮಾನಕ್ಕೂ ಮುಂಚೆ ಅಲ್ಲಿ ಇದ್ದಾಗಿನಂತೆ ಈಗ ಇಲ್ಲ. ಅಷ್ಟೆ..!
ಈಗ ಅದು ಮೊದಲಿದ್ದದ್ದಕ್ಕಿಂತ ಚೆನ್ನಾಗಿಯೂ ಇರಬಹುದು…, ಯಾರಿಗೆ ಗೊತ್ತು…!!
 
 

‍ಲೇಖಕರು avadhi

21 August, 2013

2 Comments

  1. Ramesh Aroli

    ತುಂಬಾ ಆಪ್ತವಾದ ಬರಹ ಸಾರ್. ಇತ್ತೀಚೆಗೆ ಜೆ ನ್ ಯು ಗೆ ಬರುವ ವಿಧ್ಯಾರ್ಥಿಗಳಲ್ಲಿ ಬಹುಪಾಲು ಸಿವಿಲ್ಸ್ ಪ್ರಿಪರೇಷನ್ ಗೆ ಅಂತ ಬರೊರೆ ಜಾಸ್ತಿ. ಆದರೆ ಇನ್ನು ಗಂಗಾ ಡಾಬಾ, 24/7 ಫುಡ್ ಕೋರ್ಟ್ ಪ್ರತಿ ಸಂಜೆ ಗುಂಪು ಗುಂಪುಗಳ ಬರಮಾಡಿಕೊಳ್ಳುತ್ತವೆ. ಒಂದೊಮ್ಮೆ ಜೆ ನ್ ಯು ಅಂದರೆ ಸುತ್ತಿಗೆ+ಕುಡುಗೋಲು ಕೆಂಪು ದ್ವಜಗಳ ಪ್ರತೀಕವಾಗಿತ್ತು ಇಂದು ಆಸಿಡ್, ಚಾಕು, ವಿಷದ ಬಾಟಲಿ, ರಕ್ತದ ಕಲೆಯಿಂದ ಸ್ವಲ್ಪ ಮಸುಕಾಗಿದೆ. ನಡುವೆ ವಿಧ್ಯಾರ್ಥಿ ಚುನಾವಣೆ ನಿಂತಿದ್ದೆ ಆ ಡಿಬೇಟಿಂಗ್ ಕಲ್ಚರ ಮಾಯವಾಗಿದೆ.

  2. malini guruprasanna

    idu ondu JNU kathe alla. Alli JNU hesaru tegedu tamma tamma college hesaru haakikondare idu pratiyobbara anubhava…. bekirali bedade irali badalaavane anivarya.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading