ಹಾಗೆ ನಾನು ನಾಸ್ತಿಕನೇನೂ ಅಲ್ಲ. ಮಹಾ ದೈವಭೀರುವೂ ಅಲ್ಲ. ಭಕ್ತಿರಸದಲ್ಲಿ ಮಿಂದೆದ್ದಂಥ ಅನುಭವಗಳು ನನಗಾದದ್ದು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಸುಮಾರು ಎರಡೂವರೆ ವರ್ಷದ ಹಿಂದೆ ಪಂಜಾಬಿನ ಅಮೃತಸರದಲ್ಲಿರುವ ಸ್ವರ್ಣಮಂದಿರ ಎಂದು ಕರೆಯಲ್ಪಡುವ ಹರಮಂದಿರ್ ಸಾಹಿಬ್ ನ ಪರಿಸರದಲ್ಲಿ ನನಗೆ ಮನಸಿಗೆ ತುಂಬ ಆನಂದವೆನಿಸಿತ್ತು.
ಬೆಳಿಗ್ಗೆ ಬೆಳಿಗ್ಗೆಯೇ ಅಲ್ಲಿಗೆ ಹೋದ ನಮಗೆ ಸಿಖ್ ಧರ್ಮೀಯ ಕುಟುಂಬಗಳ ಜನರೇ ಅಲ್ಲಿ ವಿವಿಧ ಸೇವೆಗಳಿಗೆ ನಿಂತದ್ದು ನೋಡಿ ಆನಂದವಾಯಿತು. ಉದಾ ಸ್ವರ್ಣಮಂದಿರದ ಹೊರಗೆ ಅನತಿ ದೂರದಲ್ಲಿ ಸ್ವರ್ಣಮಂದಿರಕ್ಕೆ ಹೋಗುವ ಜನರ ಪಾದರಕ್ಷೆಗಳನ್ನು ಇಟ್ಟುಕೊಳ್ಳುವ, ಅವರು ದರ್ಶನ ಮುಗಿಸಿ ಬಂದಾಗ ಅವುಗಳನ್ನು ಮರಳಿಸುವ ಕೆಲಸವನ್ನು ಒಂದು ಕುಟುಂಬದ ತಾಯಿ ಮಗಳು ಉಚಿತವಾಗಿ ನಿರ್ವಹಿಸುತ್ತಿದ್ದರು, ಹೊರ ಆವರಣದ ಪ್ರವೇಶದ್ವಾರದಲ್ಲಿ ಭಕ್ತಾದಿಗಳು ನಡೆದು ಬರುವಲ್ಲಿ ಅವರ ಪಾದಗಳು ಜಲದಲ್ಲಿ ನೆಂದು ಶುದ್ಧಗೊಳ್ಳುವಂತೆ ಮೆಲ್ಲಗೆ ನೆಲಹಾಸಿನ ಮೇಲೆ ಜಲಪ್ರೋಕ್ಷಣೆಯನ್ನು ಇನ್ನೊಂದಿಷ್ಟು ಜನ ನಿರ್ವಹಿಸುತ್ತಿದ್ದರು.
ಅದು ಅವರವರು ವಹಿಸಿಕೊಂಡು ಸಲ್ಲಿಸುತ್ತಿದ್ದ ಸೇವೆ. ಸದ್ದಿಲ್ಲ ಗದ್ದಲವಿಲ್ಲ, ಅದಕ್ಕೆ ಇದಕ್ಕೆ ಅಂತ ರೇಟ್ ಫಿಕ್ಸ್ ಮಾಡಿ ದೋಚುವವರು ಮೊದಲೇ ಇಲ್ಲ. ಸರತಿಯಲ್ಲಿ ನಿಂತು ನಾವು ನಿಧಾನಕ್ಕೆ ನಡೆದು ವಿಶಾಲವಾದ ಜಲಾಶಯದ ಮಧ್ಯೆ ಇದ್ದ ಸ್ವರ್ಣಮಂದಿರದೊಳಗೆ ಪ್ರವೇಶಿಸಿದರೆ ಮೆಲ್ಲಗೆ ಅನುರಣಿಸುತ್ತಿದ್ದ ಗುರುವಾಣಿ. ಸ್ವರ್ಣಮಂದಿರಕ್ಕೆ ಮೇಲೊಂದು ಅಂತಸ್ತಿದೆ. ನಾವು ಮೆಟ್ಟಿಲೇರಿ ಅಲ್ಲಿಯೂ ಹೋದೆವು. ಅಲ್ಲಿ ನೋಡಿದರೆ ಸಿಖ್ ಪರಿವಾರಗಳ ಹಲವು ಮಹಿಳೆಯರು ಗುರುವಾಣಿಯ ಮುದ್ರಿತ ಪ್ರತಿಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಕೆಳಗೆ ರಾಗವಾಗಿ ವಾಚಿಸಲ್ಪಡುತ್ತಿದ್ದ ಗುರುವಾಣಿಯ ಜೊತೆಗೆ ತಾವೂ ಪಠಿಸುತ್ತಿದ್ದ ನೋಟ.
ಹಾಗೆ ಎರಡೂ ಪಾರ್ಶ್ವಗಳಲ್ಲಿ ಕುಳಿತು ಅದನ್ನು ಪಠಿಸುತ್ತಿದ್ದ ಅವರ ನಡುವೆ ಸಾಗಿ ಹೋಗುತ್ತಿದ್ದ ನಮ್ಮತ್ತ ಅವರ ಲಕ್ಷ್ಯವಿಲ್ಲ. ಅವರ ಕಣ್ಣು, ಕಿವಿ, ಮನಸು ಎಲ್ಲ ಗುರುವಾಣಿಯ ಪಠಣದಲ್ಲಿ, ಆಲಿಸುವಿಕೆಯಲ್ಲಿ ಮಗ್ನ. ಒಂದು ಧಾರ್ಮಿಕ ಮಹತ್ವದ ಸ್ಥಳ ಹೇಗಿರಬೇಕೆಂಬುದಕ್ಕೆ ಅದೊಂದು ಮಾದರಿ. ಹೇಗಿರಬಾರದೆಂಬುದಕ್ಕೆ ಮಾದರಿಗಳು ಭಾರತದಲ್ಲಿ ಹೇರಳವಾಗಿವೆ ಮತ್ತು ಅವುಗಳ ಪೈಕಿ ಹಲವು ಅತ್ಯಂತ ಸುಪ್ರಸಿದ್ಧ ತೀರ್ಥಕ್ಷೇತ್ರಗಳಾಗಿವೆ. ಪುರೋಹಿತವರ್ಗದ ಸ್ವಾರ್ಥದ, ದುರಾಶೆಯ ಕೂಪಗಳಾಗಿರುವ ಅವುಗಳ ಕುರಿತ ನನ್ನ ಆಸ್ಥೆ ಅಷ್ಟಕ್ಕಷ್ಟೇ.
ಸುಮಾರು ಹದಿನಾರು ವರ್ಷಗಳ ಹಿಂದೆ ದ್ವಾದಶ ಜ್ಯೋತಿರ್ಲಿಂಗಗಳಲ್ಲೊಂದಾದ ದ್ವೀಪಪಟ್ಟಣ ರಾಮೇಶ್ವರದ ಪರಿಸರದಲ್ಲಿ ಅಲ್ಲೇ ದೇವಾಲಯಕ್ಕೆ ಆನಿಕೊಂಡಂತಿದ್ದ ನೀರಿನಲ್ಲಿ ಮುಳುಗು ಹಾಕುವಂತೆ ನಮಗೆ ಹೇಳಲಾಯ್ತು. ಬಂಗಾಲ ಉಪಸಾಗರದ ಆ ಜಲದಲ್ಲಿ ತೊಯ್ಯುವದು ಇನ್ನುಳಿದಂತೆ ಅದ್ಭುತ ಅನುಭವವೇ ಆಗಿರಬಹುದಿತ್ತು, ಆದರೆ ಆ ಗಬ್ಬು ವಾಸನೆಗೆ ರೇಜಿಗೆ ಪಟ್ಟು ನಾವು ಕಾಶಿ ಜಂಗಮವಾಡಿಮಠದವರು ನಡೆಸುತ್ತಿದ್ದ ಯಾತ್ರಾನಿವಾಸದಲ್ಲಿ ಸ್ನಾನ ಮಾಡುವದೇ ಶ್ರೇಯಸ್ಕರ ಎಂದು ಬಗೆದೆವು. ಒಂದೆರಡು ವರ್ಷದ ಹಿಂದೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಪರಳಿ ವೈಜನಾಥ್ ಎಂಬ ಜ್ಯೋತಿರ್ಲಿಂಗವನ್ನು ಅದರ ಪಕ್ಕದಲ್ಲೇ ಕುಳಿತು ಸ್ಪರ್ಶಿಸಿದ್ದ ನನಗೆ ಕಳೆದ ವರ್ಷ ಔರಂಗಾಬಾದ್ ಬಳಿ ಇರುವ ಘೃಷ್ಣೇಶ್ವರ್ ಎಂಬ ಮತ್ತೊಂದು ಜ್ಯೋತಿರ್ಲಿಂಗ ದರ್ಶನಕ್ಕೆ ಶರ್ಟ್ ಕಳಚಿಟ್ಟು ಒಳಗೆ ಬರಬೇಕೆಂದು ಹೇಳಿದಾಗ ನಾನು ನನ್ನ ಮಗ ನಿರಾಕರಿಸಿದೆವು. ಗರ್ಭಗೃಹದಲ್ಲಿ ಪೂಜೆ ಮಾಡಿ ಮುಗಿಸಿ ನನ್ನ ಮಡದಿ ಹೊರಬರುವವರೆಗೆ ಆ ದೇವಾಲಯದ ವಾಸ್ತುಕಲೆಯನ್ನು ನೋಡುತ್ತ ನಿಂತು ಮರಳಿದೆ. ಏನು ನಿಯಮಗಳೋ ಯಾರು ಇವನ್ನು ಮಾಡುತ್ತಾರೋ.. ಸ್ವರ್ಣಮಂದಿರ ಬಿಟ್ಟರೆ ಕಳೆದ ವರ್ಷ ಜುಲೈ ಮಧ್ಯಭಾಗದಲ್ಲಿ ಕಾಶ್ಮೀರದಲ್ಲಿ ಸ್ಥಿತವಾಗಿರುವ ಅಮರನಾಥ್ ಗುಹೆಯ ಪರಿಸರದಲ್ಲಿ ಅನಿರ್ವಚನೀಯ ಆನಂದದ ಅನುಭೂತಿ ನನಗಾಯಿತು. ಕಣ್ಣು ಮುಚ್ಚಿ ಕ್ಷಣ ಧ್ಯಾನಿಸಿದರೆ ಹಿಮಾಲಯದ ಪರ್ವತಶ್ರೇಣಿಯ ಅಮರನಾಥ್ ಹಿಮಲಿಂಗ ರೂಪುಗೊಳ್ಳುವ ಆ ವಿರಾಟ್ ಗುಹೆಯ ಎತ್ತರ ಅಗಲ ಆಳಗಳನ್ನು ನಿರಾಯಾಸವಾಗಿ ಸ್ಮರಣೆಗೆ ತಂದುಕೊಳ್ಳುವಂತೆ ನಾನು ಅದನ್ನು ಕಣ್ತುಂಬಿಕೊಂಡೆ. ಮನೋಭಿತ್ತಿಯ ಮೇಲೆ ಮೂಡಿಸಿಕೊಂಡೆ. ಆ ಪ್ರಕೃತಿಯಲ್ಲೇ, ಇಡೀ ಪರಿಸರದಲ್ಲೇ ಶಿವ ಇದ್ದಂತೆ ಭಾಸವಾಗುತ್ತಿತ್ತು. ಎಲ್ಲ ತೀರ್ಥಕ್ಷೇತ್ರಗಳೂ ಇಂಥದೇ ಅನುಭೂತಿಯನ್ನು ಕೊಡುತ್ತವೆಂದಿಲ್ಲ. ಕೆಲವಂತೂ ನನ್ನಲ್ಲಿ ರೇಜಿಗೆ ಹುಟ್ಟಿಸಿವೆ.
ಕಳೆದ ವರ್ಷ ಜುಲೈನಲ್ಲಿ ಜಮ್ಮು-ಕಾಶ್ಮಿರ್, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿರುವ ವೈಷ್ಣೋದೇವಿ, ಅಮರನಾಥ್, ಮಥುರಾ, ರಿಷಿಕೇಶ್ ಮತ್ತು ಹರಿದ್ವಾರಗಳಲ್ಲಿ ನಾನು ಸಂಚರಿಸಿದೆ. ನಾವು ಜಮ್ಮುದಿಂದ ರೈಲಿನಲ್ಲಿ ಸಂಜೆ ಹೊರಟು ಮರುದಿನ ಬೆಳಿಗ್ಗೆ ಹರಿದ್ವಾರ್ ತಲುಪಿದೆವು. ತನ್ನ ಉಗಮಸ್ಥಳ ಗಂಗೋತ್ರಿಯ ಗೌಮುಖದಿಂದ ಸುಮಾರು ಇನ್ನೂರೈವತ್ತು ಕಿಲೋಮೀಟರ್ ದೂರ ಬೆಟ್ಟ ಗುಡ್ಡಗಳಲ್ಲಿ ಪ್ರವಹಿಸಿ ಉತ್ತರ ಭಾರತದ ಪ್ರಸ್ಥಭೂಮಿಗೆ ಗಂಗಾನದಿ ಪ್ರವೇಶಿಸುವ ಸ್ಥಳವೇ ಹರಿದ್ವಾರ. ಅಲ್ಲಿ ಗಂಗಾ ನದಿಯ ತಟಕ್ಕೆ ಸಮೀಪದಲ್ಲಿರುವ ಕರ್ನಾಟಕ ಧರ್ಮಶಾಲಾ ಎಂಬ ಕಟ್ಟಡವೊಂದರಲ್ಲಿ ಉಳಿದ ನಾವು ಆಮೇಲೆ ಒಂದು ಟ್ಯಾಕ್ಸಿ ಗೊತ್ತು ಮಾಡಿಕೊಂಡು ಸಾಲುಸಾಲಾಗಿ ದೇವಾಲಯಗಳ ದರ್ಶನ ಶುರು ಮಾಡಿದೆವು. ಹೊರಗೆ ಮಳೆ ಸುರಿಯುತ್ತಿತ್ತು.ನಮ್ಮ ಕುಟುಂಬದ ಮಹಿಳೆಯರು ಭಕ್ತಿಭಾವದಿಂದ ಕಂಖಾಲ್ ನಲ್ಲಿರುವ ದಕ್ಷೇಶ್ವರ ಮಂದಿರ, ಶೀತಲ್ ಮಾತಾ ಮಂದಿರ್, ಮಹಾಕಾಲಿ ಮಂದಿರ್, ಮಹಾಕಾಲೇಶ್ವರ್ ಮಂದಿರ್, ಆನಂದಮಯೀ ಮಾ ಆಶ್ರಮ, ಶಿವ್ ಶಕ್ತಿ ಪೀಠ್, ಮುಂತಾದವುಗಳನ್ನು ಸಂದರ್ಶಿಸುತ್ತಿರಬೇಕಾದರೆ ನಾನು ಫೋಟೋ ಕ್ಲಿಕ್ಕಿಸುತ್ತ, ಹರಿದ್ವಾರದಿಂದ ಋಷಿಕೇಶ್ ಗೆ ಹೋಗಿ ನಾವು ಮತ್ತೆ ಸಂಜೆ ಆರತಿ ಹೊತ್ತಿಗೆ ಹರಿದ್ವಾರದಲ್ಲಿರಬೇಕೆಂಬುದನ್ನು ಅವರಿಗೆ ಪದೇ ಪದೇ ನೆನಪಿಸುತ್ತ ಹೊರಟಿದ್ದೆ. ಏಕೆಂದರೆ ಹರಿದ್ವಾರ ಮಂದಿರಗಳ ನಗರ. ಪುರಾತನ ಮಂದಿರಗಳಿರುವಂತೆಯೇ ವಿಭಿನ್ನ ಧಾರ್ಮಿಕ ಟ್ರಸ್ಟ್ ಗಳು ತಮ್ಮದೇ ಆಧುನಿಕ ದೇವಾಲಯಗಳನ್ನು ಸಾಲುಸಾಲಾಗಿ ನಿರ್ಮಿಸಿಕೊಂಡಿರುವದನ್ನೂ ನೋಡಬಹುದು. ೧೯೮೩ ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಉದ್ಘಾಟಿಸಿದ ಭಾರತ್ ಮಾತಾ ಮಂದಿರ್ ಎಂಬ ಭಾರತಮಾತೆಗೆ ಸಮರ್ಪಿತವಾದ ಎಂಟಸ್ತಿನ ಒಂದು ಭವ್ಯ ದೇವಾಲಯವೂ ಅಲ್ಲಿದೆ. ಅವನ್ನೆಲ್ಲ ನೋಡುತ್ತ ನಿಂತರೆ ಇಡೀ ದಿನ ಅದರಲ್ಲೇ ಸವೆಯುತ್ತಿತ್ತು.
ಹರಿದ್ವಾರದ ದೇವಾಲಯಗಳ ತಮ್ಮ ದರ್ಶನವನ್ನು ಮೊಟಕುಗೊಳಿಸಿ ನಮ್ಮತ್ತ ಬಂದ ನಮ್ಮ ಮಹಿಳೆಯರೊಂದಿಗೆ ಋಷಿಕೇಶದತ್ತ ಹೊರಟೆವು. ಅಲ್ಲಿ ಮತ್ತೆ ಹಲವಾರು ದೇವಾಲಯಗಳು. ಅಖಿಲೇಶ್ವರ್ ಮಹಾದೇವ್ ಮಂದಿರ್ ಎಂಬ ದೇವಾಲಯಕ್ಕೆ ಹೋಗಿ, ಮೇಲೆ ಗಂಗಾನದಿಗೆ ಅಡ್ಡವಾಗಿ ತೂಗುವ ಲಕ್ಷ್ಮಣ ಝೂಲಾ ಎಂದು ಖ್ಯಾತವಾದ ಸೇತುವೆಯನ್ನು ದಾಟಿ ಮತ್ತೆ ಒಂದೆರಡು ದೇವಾಲಯಗಳಿಗೆ ಭೇಟಿ ಕೊಟ್ಟೆವು. ಕೇವಲ ಒಂದು ತಿಂಗಳ ಹಿಂದಷ್ಟೇ ಗಂಗೋತ್ರಿ,ಯಮುನೋತ್ರಿ, ರುದ್ರಪ್ರಯಾಗ್,ಬದರಿ, ಕೇದಾರ್ ಮುಂತಾದೆಡೆ ರಾಕ್ಷಸ ಮಳೆ ಸುರಿದು ಎಲ್ಲೆಂದರಲ್ಲಿ ನೀರು ನುಗ್ಗಿ ಆ ವಿಕೋಪಕ್ಕೆ ಹರಿದ್ವಾರ್ ಮತ್ತು ಋಶಿಕೇಶ್ ಗಳೂ ಪ್ರಭಾವಿತವಾದದ್ದನ್ನು ಟಿವಿ ತೆರೆಯ ಮೇಲೆ ನೋಡಿ ಮರುಗಿದ್ದೆವು. ಋಷಿಕೇಶ್ ನ ಪಾರ್ಕಿಂಗ್ ಲಾಟ್ ಒಂದನ್ನು ತೋರಿಸಿ ಗೈಡ್ ಹೇಳಿದ ಇದೆಲ್ಲ ಮುಳುಗಿತ್ತು, ವಾಹನಗಳು ಕೊಚ್ಚಿಕೊಂಡು ಹೋಗಿದ್ದವು ಎಂದು. ಮರಳಿ ಬರಬೇಕಾದರೆ ಮಾರ್ಗದಲಿ ರಾಮ್ ಝೂಲಾ ಎಂಬುದು ಒಂದಿದೆ. ಆ ಜಲಪ್ರಳಯದ ದೃಶ್ಯಗಳನ್ನು ನೋಡಿದವರಿಗೆ ಗಂಗಾ ನದಿ ಪ್ರವಾಹದ ನಡುವೇ ನಸುನೀಲಿ ಬಣ್ಣದ ದೊಡ್ಡದೊಂದು ಶಿವನ ಮೂರ್ತಿ ನಿಂತಿದ್ದ ನೋಟ ನೆನಪಿರಬಹುದು. ಪ್ರವಾಹದ ಹೊಡೆತಕ್ಕೆ ಕೊನೆಗೆ ಆ ಮೂರ್ತಿಯೂ ನೀರಿನಗುಂಟ ಹರಿದು ಹೋಯಿತು ಎಂದು ಹೇಳಿದ ನಮ್ಮ ಟ್ಯಾಕ್ಸಿ ಡ್ರೈವರ್ ಕಿಶನ್ ಅಲ್ಲಿಗೆ ಹೋಗೋಣವೇ? ಎಂದ. ಆ ದೃಶ್ಯವನ್ನು ಪದೇ ಪದೇ ಟಿವಿ ಸುದ್ದಿವಾಹಿನಿಗಳಲ್ಲಿ ತೋರಿಸಲಾಗಿತ್ತು. ಕಣ್ಣಿಗೆ ಕಟ್ಟಿದಂತಿದ್ದ ಆ ಮೂರ್ತಿ ಮನ:ಪಟಲದ ಮೇಲೆ ಬಂತು. ಆ ಮೂರ್ತಿಯೇ ಇಲ್ಲದ ಮೇಲೆ ಅಲ್ಲಿ ಹೋಗಿ ಮಾಡುವದೇನಿದೆ? ಬೇಡ ಎಂದೆ.
ಮರಳಿ ಹರಿದ್ವಾರಕ್ಕೆ ಬಂದಾಗ ಇಳಿಮಧ್ಯಾಹ್ನ. ನಮ್ಮ ಡ್ರೈವರ್ ಹರಿದ್ವಾರ ಪಟ್ಟಣದ ಒಳಗೆ ಒಂದೆಡೆ ಕೊಂಡೊಯ್ದ. ಅಲ್ಲಿ ರಸ್ತೆಯ ಉದ್ದಕ್ಕೂ ದೊಡ್ಡ ದೊಡ್ಡ, ಬಣ್ಣ ಬಣ್ಣದ ದೇವಾಲಯಗಳು, ಒಂದೆರಡಲ್ಲ, ಹಲವಾರು. ಅದರಲ್ಲೊಂದು ಅತ್ಯಂತ ಭವ್ಯವಾದ ದೇಗುಲ “ಮಂದಿರ್ ಮಾತಾ ಲಾಲ್ ದೇವೀಜೀ ಭಾರತ್ ದರ್ಶನ್: ಪವಿತ್ರ್ ಗುಫಾ ವೈಷ್ಣೋದೇವಿ” ಎಂಬ ಸುದೀರ್ಘ ಹೆಸರಿನ ಒಕ್ಕಣೆಯನ್ನು ಹೊಂದಿತ್ತು. ಆ ಒಕ್ಕಣೆಯನ್ನು ನೋಡುತ್ತ ಪರಿವೆ ಇಲ್ಲದೇ ನಾನು ದೇವಾಲಯದ ಆವರಣವನ್ನು ಪಾದರಕ್ಷೆಗಳನ್ನು ಧರಿಸಿಯೇ ಪ್ರವೇಶಿಸಿದ್ದೆ. ಅಲ್ಲಿ ಬಿಳಿ ಖಾದಿ ಜುಬ್ಬ ಧೋತರ ಉಟ್ಟ ಗೌರವರ್ಣದ ಎತ್ತರದ ಉತ್ತರಪ್ರದೇಶದ ಬ್ರಾಹ್ಮಣನೊಬ್ಬ ಯಜಮಾನನಂತೆ ಅಡ್ಡಾಡುತ್ತಿದ್ದ. ಅವನು ನಾನು ಪಾದರಕ್ಷೆಗಳ ಸಮೇತ ಪ್ರವೇಶಿಸಿದ್ದನ್ನು ಅವನು ಆಕ್ಷೇಪಿಸಿದ ರೀತಿ ಅವನ ಕುರಿತು ನನ್ನಲ್ಲಿ ಹೇಸಿಗೆಯನ್ನು ಹುಟ್ಟಿಸಿತು. ಅಲ್ಲೇ ಪ್ರಾಕಾರದೊಳಗೇ ಒಂದು ಅಂಗಡಿ ಇಟ್ಟುಕೊಂಡವನ, ಆತನ ಹೆಂಡತಿಯ ಹಾಗೂ ಮಕ್ಕಳ ಚಪ್ಪಲಿ ಬೂಟುಗಳು ಅಲ್ಲೇ ಅಂಗಡಿಯ ಹೊರಗೆ ನನ್ನ ಕಣ್ಣು ಮುಂದೇ ಇದ್ದವು. ಅವುಗಳತ್ತ ತೋರಿಸಿ ಆ ಹಾರುವನಿಗೆ ನಾನು ಹೇಳಿದೆ, ಇವೂ ದೇವಾಲಯದ ಪ್ರಾಂಗಣದೊಳಗೇ ಇವೆ.
ಅವಕ್ಕೆ ವಿನಾಯ್ತಿ ಇದೆಯೆ? ಮುಖಭಂಗಗೊಂಡವನಂತೆ ಕಂಡ ಆತ ಆ ಅಂಗಡಿಯವನ ಜೊತೆ ಜಗಳಕ್ಕೆ ಬಿದ್ದ. ಆದರೆ ಆ ಅಂಗಡಿಯಾತನೇನೂ ಅವನ್ನು ಹೊರಗಿಡಲಿಲ್ಲ. ನಮ್ಮ ಕುಟುಂಬದ ಸದಸ್ಯರು ಅಲ್ಲಿ ವೈಷ್ಣೋದೇವಿ ಗುಹೆಯನ್ನು ಕೃತ್ರಿಮವಾಗಿ ನಿರ್ಮಿಸಿದ್ದಾರೆಂದೂ ತೆವಳಿಕೊಂಡು ಹೋಗಿ ಅದನ್ನು ನೋಡುವಂತೆ ಮಾಡಲಾಗಿದೆ ಎಂದೂ ಹೇಳಿ ನನ್ನನ್ನು ಬರುವಂತೆ ಕರೆದರು ನಾನು ಆ ಬ್ರಾಹ್ಮಣ ಯಜಮಾನನಿಗೆ ಕೇಳುವಂತೆ ಇಂಗ್ಲಿಷ್ ನಲ್ಲಿ ಹೇಳಿದೆ. “ವೈಷ್ಣೋದೇವಿಯನ್ನೇ ನೋಡಿಕೊಂಡು ಬಂದಿದ್ದೇವಂತೆ, ಇನ್ನು ಅದರ ಆರ್ಟಿಫಿಸಿಯಲ್ ಸೆಟ್ ನೋಡುವ ಅಗತ್ಯ ಏನು? ನೀವು ಹೋಗಿ ಬನ್ನಿ”. ಆಮೇಲೆ ಅಲ್ಲೇ ನಿಂತಿದ್ದ ನನ್ನನ್ನು ಆ ಯಜಮಾನನು ಬಹಳ ಅಸಹನೆಯಿಂದ ನೋಡುತ್ತಿದ್ದನು. ಉದ್ದೇಶಪೂರ್ವಕವಲ್ಲದ ಲೋಪವೊಂದನ್ನು ಒಂದು ಮುಗುಳ್ನಗೆಯೊಂದಿಗೆ ತಿಳಿಸಿ ಹೇಳಿ ಅಲ್ಲಿಯ ನಿಯಮಗಳನ್ನು ಜನ ಗೌರವಿಸುವಂತೆ ಮಾಡುವದನ್ನು ಅವನ ಸಂಸ್ಕಾರ ಅವನಿಗೆ ಕಲಿಸಿರಲಿಲ್ಲ.
ಸಂಜೆ ಆರತಿಯ ಸಮಯ ಸನ್ನಿಹಿತವಾಯಿತು. ಗಂಗಾ ನದಿ ತಟದಲ್ಲಿ, ಹರ್ ಕಿ ಪೌಡಿ ಎಂದು ಕರೆಯಲ್ಪಡುವ ಸ್ಥಳದಲ್ಲಿ ನಡೆಯುವ ದೃಶ್ಯ ವೈಭವ ಅದು. ನಾವು ಅಲ್ಲಿ ತಲುಪುವ ವೇಳೆಗಾಗಲೇ ಅಪಾರ ಜನಸಂದಣಿ. ಆ ಮಾಸದಲ್ಲಿ ಕಾವಡಿಯಾ ಎಂದು ಕರೆಯಲ್ಪಡುವ ಭಕ್ತಜನ ಬೇರೆ ದೊಡ್ಡ ಸಂಖ್ಯೆಯಲ್ಲಿ ಅಲ್ಲಿ ಬಂದಿರುತ್ತಾರೆ. ನಡುವೆ ಒಂದು ಹಣತೆಯನ್ನೂ ಒಳಗೊಂಡಂತೆ ಬಿಲ್ವಗಳು ಮತ್ತು ಪುಷ್ಪಗಳಿಂದ ಕೂಡಿದ ದೊಣೆಗಳನ್ನು ಹಿಡಿದುಕೊಂಡು ಕತ್ತಲಾಗುತ್ತಿದ್ದಂತೆ ಮುಖ್ಯ ಪೂಜೆ ಪ್ರಾರ್ಥನೆ ಮುಗಿದೊಡನೆ ಅವುಗಳನ್ನು ಗಂಗೆಯಲ್ಲಿ ಹರಿಯ ಬಿಡಲು ಸನ್ನದ್ಧರಾಗಿ ಕುಳಿತ ಜನ ಎಲ್ಲೆಡೆಯೂ. ಕುಳಿತುಕೊಳ್ಳಲು ಒಂದು ಪ್ರಶಸ್ತ ಸ್ಥಳಕ್ಕೆ ಹುಡುಕುತ್ತ ಗಂಗಾನದಿ ದಂಡೆಯ ಕಾಂಕ್ರೀಟ್ ನೆಲದ ಮೇಲೆ ನಡೆದು ನಾವು ಹೋಗುತ್ತಿರಬೇಕಾದರೆ ಒಬ್ಬ ಬಂದು ದಿಯಾ ಸಮರ್ಪಣ್ ಕರನಾ ಹೈ? ಇತ್ಯಾದಿ ಏನೇನೋ ಕೇಳುತ್ತ ನನ್ನ ಹೆಂಡತಿ ಅದಕ್ಕೆಲ್ಲ ಹೂಂ ಗುಟ್ತುತ್ತ ನಾವು ಮುಂದೆ ಮುಂದೆ ಸಾಗಿ ಎಷ್ಟೆಂದರೆ ಹಲವು ಬ್ರಾಹ್ಮಣರು ಮಂತ್ರಪಠಣ ಮಾಡಿ ನೂರಾರು ದೊಡ್ಡ ದೀಪಗಳು ನಿಡಿದಾಗಿ ಉರಿಯುತ್ತ ಜ್ವಾಜ್ಯಲ್ಯಮಾನವಾದ ಬೆಳಕಿನ ಮೋಹಕ ನೋಟ ಸೃಷ್ಟಿಸುವ ಕೇಂದ್ರ ಸ್ಥಳಕ್ಕೇ ಬಂದೆವು. ಆಮೇಲೆ ಅವನು ಒಂದು ನಿಶ್ಚಿತ ಬೆಲೆಯ ಹೂ-ಹಣತೆಗಳ ದೊಣೆಗಳನ್ನು ನನ್ನ ಮತ್ತು ಅವಳ ಕೈಯ್ಯಲ್ಲೂ ಕೊಟ್ಟು ಪ್ರಮಾಣವಚನ ಬೋಧಿಸುವವರಂತೆ ಹಿಂದಿಯಲ್ಲಿ ಹೇಳುತ್ತ ಹೋದ, ನನ್ನ ಹೆಂಡತಿ ಅದನ್ನು ಪುನರುಚ್ಛರಿಸುತ್ತ ಹೋದಳು.
ಅದು “ನನ್ನ ಗಂಡನ ಯೋಗಕ್ಷೇಮವನ್ನು ನಾನು ಶ್ರದ್ಧೆ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ, ನನ್ನ ಮಾಂಗಲ್ಯ ಸೌಭಾಗ್ಯ ಸುದೀರ್ಘವಾಗಿರುವಂತೆ ಅನುಗ್ರಹವಾಗಲಿ”.. ಇತ್ಯಾದಿ ಪಠಣಗಳನ್ನೊಳಗೊಂಡಿತ್ತು. ಮದುವೆಯಾಗಿ ಇಪ್ಪತ್ತಾರು ವರ್ಷಗಳಾಗಿ ನನ್ನ ಯೋಗಕ್ಷೇಮವನ್ನು ಚೆನ್ನಾಗೇ ನೋಡಿಕೊಂಡು ಬಂದ ಒಬ್ಬ ಸೀಸನ್ಡ್ ಪತ್ನಿಗೆ ಹೊಸದಾಗಿ ಮಂತ್ರಿಮಂಡಳ ಸೇರಿದವರಿಗೆ ಪ್ರಮಾಣ ವಚನ ಬೋಧಿಸುವಂತಿದ್ದ ಆ ಸನ್ನಿವೇಶ ನನಗೆ ಆಗಲೇ ಕಿರಿಕಿರಿ ಎನ್ನಿಸತೊಡಗಿತ್ತು. ಆಮೇಲೆ ಅವನು ಎಂತೆಂಥದೋ ಘನ ವಿಚಾರಗಳನ್ನು ಆಶಯಗಳನ್ನು ನನಗೂ ಬೋಧಿಸುತ್ತ “ಇಸ್ ಸೇವಾ ಕೇ ಪ್ರತಿ ಮೈ…” ಎಂದು ತಡೆದು, ಹಣದ ವಿವಿಧ ಮೊಬಲಗು ಹೇಳಿ “ಇಸ್ ಮೇ ಆಪ್ ಕಾ ಮನೋಕಾಮನಾ ಪೂರೀ ಹೋನೇಕೇ ಲಿಯೇ ಐಸಿ ಐಸಿ ದಕ್ಷಿಣಾ ದೇನೇಕಾ ಸಂಕಲ್ಪ ಹೋತೇ ಹೈಂ, ಕಹಿಯೇ ಆಪ್ ಕೌನ್ಸಾ ಸಂಕಲ್ಪ ಚುನೋಗೇ” ಎಂದ. ಇದೊಂದು ಹಣದ ವಹಿವಾಟು ಎನ್ನುವದು ನನಗೆ ಗೊತ್ತಾಯಿತು. ಏಕೆಂದರೆ ಇವನಂಥ ಇನ್ನಷ್ಟು ಪಂಡಿತ್ ರ ಕೈಯ್ಯಲ್ಲಿ ಇನ್ನಿತರ ಭಕ್ತಾದಿಗಳು ಸಿಗೆಬಿದ್ದು “ಸಂಕಲ್ಪ” ಮಾಡುತ್ತಿದ್ದ ನೋಟವೂ ನನ್ನ ಕಣ್ಣಿಗೆ ಬಿಳುತ್ತಿತ್ತು. ನಾನು ನನ್ನ ಹೆಂಡತಿಯತ್ತ ನೋಡಿದೆ. ಅವಳು “ನೂರಾ ಐವತ್ ರೂಪಾಯಿ ಅಂತ್ ಹೇಳ್ರಿ” ಎಂದಳು. ಹೇಳಿದೆ. ಮರುಆಲೋಚನೆಯಲ್ಲಿ ನನಗೆ ಅದೂ ಹೆಚ್ಚು ಎನ್ನಿಸಿತು. ನಾನು ನೂರು ರೂಪಾಯಿ ಕೊಟ್ಟೆ. “ದೇಖಿಯೇಜೀ, ಆಪನೆ ಸಂಕಲ್ಪ್ ಕಿಯಾ ಹೈ ಢೇಡ್ ಸೌ ರೂಪಯೇ ದೇನೇಕಾ” ಎಂದ.
ನಾನು “ಹಮ್ನೇ ಜೋ ದಕ್ಷಿಣಾ ಭಕ್ತಿ ಸೇ ದೀ ಹೈಂ, ಆಪ್ ಕೋ ಉತ್ನೇಮೇ ಸಂತುಷ್ಟ್ ಹೋನಾ ಚಾಹಿಯೇ. ಹೈ ನಾ ಪಂಡಿತ್ ಜೀ” ಎಂದೆ. ಅವ್ನು ಹಾಂ ಎನ್ನಲಿಲ್ಲ, ಹೂಂ ಎನ್ನಲಿಲ್ಲ, ಹೊರಟ. ನಾನು ಪಂಡಿತ್ ಜೀ, ಇಧರ್ ಆಯಿಯೇ ಎಂದೆ. ಆತ ಬಂದ. ಮತ್ತೆ ಐವತ್ತು ರೂಪಾಯಿ ಆತನ ಕೈಗಿತ್ತೆ. ಭಗವಾನ್ ಆಪ್ಕಾ ಭಲಾ ಕರೇ ಎಂದು ಜನಸಂದಣಿಯಲ್ಲಿ ಕರಗಿ ಹೋದ. ದೊಡ್ಡ ದೊಡ್ಡ ಲೋಹದ ಆರತಿಗಳಲ್ಲಿ ಬೊಗಸೆ ಬೊಗಸೆ ಕರ್ಪೂರಗಳಿಂದೆದ್ದು ನಿಡಿದಾಗಿ ಉರಿದು ಕಂಗೊಳಿಸುತ್ತಿದ್ದ ಜ್ವಾಜ್ಯಲ್ಯಮಾನವಾದ ಬೆಳಕು ಗಂಗಾ ನದಿಯಲ್ಲಿ ಪ್ರತಿಫಲಿಸುತ್ತಿತ್ತು. ಜನ ತೇಲಿ ಬಿಟ್ಟ ದೊಣೆಗಳಲ್ಲಿಯ ದೀಪಗಳು ನೀರಿನಲ್ಲಿ ತೇಲುತ್ತ ಗಂಗೆ ಬೆಳಕಿನ ನದಿಯಾಗಿ ಹರಿಯುತ್ತಿದ್ದಳು. ಅದನ್ನು ಆನಂದಿಸಲು ಧಾರ್ಮಿಕತೆಯಾಗಲಿ, ನಂಬಿಕೆಯಾಗಲಿ, ಶ್ರದ್ಧೆಯಾಗಲಿ ಅಗತ್ಯವಿರಲಿಲ್ಲ. ಸೌಂದರ್ಯಪ್ರಜ್ಞೆ ಸಾಕಿತ್ತು.








0 Comments