ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ : ಜೈ ಭೋಲೆನಾಥ್!!

ನನ್ನ ಅಮರನಾಥ್ ಯಾತ್ರೆ

ಅಮರನಾಥ್ ಯಾತ್ರೆಯೆಂಬುದು ನನಗೆ ಪ್ರತಿವರ್ಷ ಜುಲೈ ತಿಂಗಳ ಸುಮಾರಿಗೆ ನಾನು ಟಿವಿಯಲ್ಲಿ ನೋಡುತ್ತಿದ್ದ ಸುದ್ದಿಗಳ ತುಣುಕುಗಳಲ್ಲೊಂದಾಗಿರುತ್ತಿತ್ತು. ಇಂದು ಅಮರನಾಥ್ ಯಾತ್ರಿಗಳ ಒಂದು ಜಥ್ಥಾ ಬಾಲ್ತಾಲ್ ನಿಂದ ಚಲಿಸಿತು ಎಂತಲೋ ಅಥವಾ ಹವಾಮಾನ ಬಿಗಡಾಯಿಸಿದ ಕಾರಣ ಪಹಲ್ಗಾಂ ಬಳಿಯ ಚಂದನವಾಡಿ ಬೇಸ್ ಕ್ಯಾಂಪ್ ನಿಂದ ಹೊರಡಬೇಕಾಗಿದ್ದ ಯಾತ್ರೆಯನ್ನು ನಾಳೆಗೆ ಮುಂದೂಡಲಾಗಿದೆಯೆಂದೋ ಇರುತ್ತಿದ್ದ ವರ್ತಮಾನಗಳನ್ನು ಕೇಳುತ್ತಿದ್ದೆ ಅಷ್ಟೇ. ಹಾಗೆಯೇ ಸುದ್ದಿವಾಹಿನಿಗಳಲ್ಲಿ ದೊಡ್ಡ ಗುಹೆಯೊಂದರಲ್ಲಿ ಚಳಿಗಾಲದ ಅವಧಿಯಲ್ಲಿ ಪ್ರಾಕೃತಿಕವಾಗಿ ನಿರ್ಮಿತವಾಗಿರುತ್ತಿದ್ದ ಒಂದು ಎತ್ತರದ ಹಿಮಲಿಂಗವನ್ನೂ ಅದನ್ನು ನೋಡಲು ಸಾಲುಗಟ್ಟಿ ನಿಂತ ಶ್ರದ್ಧಾಳುಗಳನ್ನೂ ತೋರಿಸಲಾಗುತ್ತಿತ್ತು.
ನನ್ನ ನೂರೆಂಟು ಗೋಳುಗಳ ನಡುವೆ ಈ ವರ್ಷ ನಾನೇ ಸ್ವತ: ನಮ್ಮ ಕುಟುಂಬದ ಕೆಲ ಸದಸ್ಯರೊಂದಿಗೆ ಅಮರನಾಥ ಯಾತ್ರೆ ಕೈಗೊಳ್ಳುವ ಪ್ರಸಂಗವೊದಗಿ ಬಂತು. ಚಾರ್ ಧಾಮ್ (ಗಂಗೋತ್ರಿ,ಯಮುನೋತ್ರಿ,ಕೇದಾರನಾಥ್,ಬದರಿನಾಥ್) ಯಾತ್ರೆಯಂತೆ ಇದು ಅನಿಯಂತ್ರಿತವಾಗಿ ಯಾರೂ ಹೋಗಬಹುದಾದ ಯಾತ್ರೆಯಲ್ಲ. ಅಮರನಾಥಕ್ಕೆ ತೆರಳುವ ಪ್ರತಿ ಯಾತ್ರಿಯೂ ಪೂರ್ವಭಾವಿಯಾವಿ ನೋಂದಾಯಿಸಿಕೊಂಡಿರಬೇಕಾಗಿರುತ್ತದೆ. ಅದಕ್ಕೆ ಅಗತ್ಯವಿರುವ ಕಾಗದಪತ್ರಗಳನ್ನು ಅಮರನಾಥ್ ಯಾತ್ರಾ ಶ್ರೈನ್ ಬೋರ್ಡ್ ನಿಂದ ಪಡೆದು ವಿವರಗಳನ್ನು ತುಂಬಿ ಮರಳಿ ಜಮ್ಮು ಮತ್ತು ಕಶ್ಮೀರ್ ಬ್ಯಾಂಕ್ ನ ಶಾಖೆಯೊಂದರಲ್ಲಿ ಸಲ್ಲಿಸಬೇಕಾಗುತ್ತದೆ. ಕಳೆದ ವರ್ಷದ ವರೆಗೆ ಈ ಔಪಚಾರಿಕತೆಯನ್ನು ಆನ್ ಲೈನ್ ಮೂಲಕ ಮಾಡಬಹುದಿತ್ತು. ಈಗ ಭದ್ರತಾ ಕಾರಣಗಳಿಗಾಗಿ ಅದನ್ನು ಕೈ ಬಿಟ್ಟು ನೇರ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಹಾಗೆಯೇ ಪ್ರತಿವರ್ಷ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದಾಗಿ ಗಮನಾರ್ಹ ಸಂಖ್ಯೆಯಲ್ಲಿ ಯಾತ್ರಿಗಳು ಮರಣ ಹೊಂದುತ್ತಿದ್ದುದು ಒಂದು ಸಮಸ್ಯೆಯಾಗಿ ಈಗ ದೇಶಾದ್ಯಂತದ ಜಿಲ್ಲಾಸ್ಪತ್ರೆಗಳಲ್ಲಿ ಪೂರ್ವಭಾವಿಯಾಗಿಯೇ ಅಮರನಾಥ್ ಯಾತ್ರೆಗೆ ಹೋಗಬಯಸುವವರು ತಮ್ಮ ದೈಹಿಕ ಕ್ಷಮತೆಯನ್ನು ನಿಗದಿತ ವೈದ್ಯರ ಪ್ರಮಾಣಪತ್ರದ ಮುಖೇನ ಸಾಬೀತುಪಡಿಸಬೇಕಾಗುತ್ತದೆ.
ಹೀಗೆ ಎಂದೂ ಧಾರವಾಡ ಜಿಲ್ಲಾಸ್ಪತ್ರೆಯ ಸಮೀಪಕ್ಕೂ ಸುಳಿಯದಿದ್ದ ನಾನೂ ನನ್ನ ಹೆಂಡತಿಯೂ ಮಾರ್ಚ್ ತಿಂಗಳಲ್ಲಿ ಒನ್ ಫೈನ್ ಮಾರ್ನಿಂಗ್ ಕೈಯ್ಯಲ್ಲಿ ಬೆಂಗಳೂರಿನಲ್ಲಿರುವ ನನ್ನ ಹೆಂಡತಿಯ ಅಕ್ಕನ ಮಗಳು ಪುಷ್ಪಾಂಜಲಿ ಗುರುಮಠ್ ನನಗೆ ಮೇಲ್ ಮಾಡಿದ ಫಾರ್ಮ್ಗಳ ಪ್ರಿಂಟ್-ಔಟ್ ಗಳನ್ನು ಹಿಡಿದುಕೊಂಡು ಅದನ್ನು ಸರ್ಟಿಫೈ ಮಾಡಲೆಂದು ನಿಗದಿಯಾಗಿದ್ದ ವೈದ್ಯರ ನೇಮ್ ಪ್ಲೇಟ್ ನೋಡಿ ಆ ಕೋಣೆಯಲ್ಲಿ ಹೋದರೆ ಅವರು ಮೊದಲು ಕೆಳಗೆ ರಿಸೆಪ್ಶನ್ ನಲ್ಲಿ ನೋಂದಣಿ ಮಾಡಿಸಬೇಕೆಂದೂ ಆಮೇಲೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಇವೆ ಅಥವಾ ಇಲ್ಲ ಎಂಬುದಕ್ಕೆ ಅಗತ್ಯವಿರುವ ರಕ್ತ ಮೂತ್ರ ಇತ್ಯಾದಿ ಪರೀಕ್ಷೆ ಗಳೆಲ್ಲ ಆದ ಮೇಲೆ ತಮ್ಮ ಹತ್ತಿರ ಬರುವದೆಂದೂ ಅವೆಲ್ಲ ಪರೀಕ್ಷೆಗಳ ಫಲಿತಾಂಶವನ್ನು ನೋಡಿ ತಾವು ಪ್ರಮಾಣಪತ್ರ ಕೊಡುವದಾಗಿಯೂ ಹೇಳಿದರು. ಅಂದರೆ ಕೊನೆಯದಾಗಿ ಎಲ್ಲಿ ಹೋಗಬೇಕೋ ಅಲ್ಲಿ ನಾವು ಮೊದಲು ಹೋಗಿದ್ದೆವು..! ಆಮೇಲೆ ಕೆಳಗೆ ಬಂದು ನೋಂದಾಯಿಸಿಕೊಂಡು ಯಾವ ಯಾವ ಪರೀಕ್ಷೆಗಳನ್ನು ಮಾಡುತ್ತಾರೆಂದು ನೋಡಿದರೆ ಅವುಗಳದೊಂದು ದೊಡ್ಡ ಯಾದಿಯೇ ಇತ್ತು. ಬ್ಲಡ್ ಗ್ರೂಪಿಂಗ್ ನಿಂದ ಪ್ರಾರಂಭವಾಗಿ ಐ ಸೈಟ್, ಕಲರ್ ವಿಜನ್,ರಕ್ತದೊತ್ತಡ,ಇಸಿಜಿ,ಮೂತ್ರದಲ್ಲಿ ಸಕ್ಕರೆ, ಅಲ್ಬ್ಯುಮಿನ್ ಇತ್ಯಾದಿಗಳ ಪ್ರಮಾಣ,ಬ್ಲಡ್ ಶುಗರ್ ಲೆವೆಲ್, ಎಲುವುಕೀಲುಗಳ ಸ್ಥಿತಿ…ಇತ್ಯಾದಿ, ಮನಸಿನಲ್ಲಿ ಕುಮಾರಿ ಪುಷ್ಪಾಂಜಲಿಯನ್ನು ಬೈದುಕೊಳ್ಳುತ್ತಲೇ ವಾರ್ಡಿನಿಂದ ವಾರ್ಡಿಗೆ, ವೈದ್ಯರಿಂದ ವೈದ್ಯರಿಗೆ, ಲ್ಯಾಬ್ ನಿಂದ ಲ್ಯಾಬ್ ಗೆ ಅಡ್ಡಾಡಿ ಎಲ್ಲವನ್ನೂ ಒಯ್ದು ನೀನಿಯರ್ ಸ್ಪೇಶಲಿಸ್ಟ್ ಟೇಬಲ್ ಮೇಲಿಟ್ಟು ಕೊನೆಗೆ ಸ್ಪೆಸಿಫೈಡ್ ವೈದ್ಯರು ಸರ್ಟಿಫೈ ಮಾಡಿದ ಮೇಲೆ ಅವುಗಳನ್ನು ಬೆಂಗಳೂರಿಗೆ ಕಳುಹಿಸಿ ನಿಸೂರಾದೆವೆಂದುಕೊಂಡಿದ್ದೆವು. ಜಿಲ್ಲಾಸ್ಪತ್ರೆಯಲ್ಲಿ ಯಾರ ಸೋಂಕು ತಗುಲಿತೋ ನಾನೂ ನನ್ನ ಹೆಂಡತಿಯೂ ಒಂದು ವಾರ ಜ್ವರ ಬಂದು ಮಲಗಿದೆವು.
ವಿಷಯಕ್ಕೆ ಬರೋಣ. ಕಲ್ಹಣನ “ರಾಜತರಂಗಿಣಿ” ಎಂಬ ಹನ್ನೆರಡನೆ ಶತಮಾನದ ಕೃತಿಯಲ್ಲಿ ಅಮರನಾಥ ಯಾತ್ರೆಯ ಪ್ರಾಚೀನತೆ ವ್ಯಕ್ತವಾಗುತ್ತದೆ ( “ರಾಜತರಂಗಿಣಿ” ಯನ್ನು ಇತಿಹಾಸ ಕೃತಿಯೆಂದೂ ಕಲ್ಹಣನನ್ನು ಇತಿಹಾಸಕಾರನೆಂದೂ ಹೇಳಲಾಗುತ್ತದೆ. ಆದರೆ ಅದನ್ನು ಓದಿದರೆ ಬೋಧಪ್ರದ ಸ್ವರೂಪದ ಪಾಪಪುಣ್ಯಾದಿಗಳ, ರಾಜರ,ಮನುಷ್ಯರ,ಸ್ತ್ರೀಯರ ಗುಣಾವಗುಣಗಳ ಆದರ್ಶೀಕೃತ ಕಥನದಂತೆ ಅದು ಭಾಸವಾಗುತ್ತದೆ. ಕಾವ್ಯ ಪರಂಪರೆಗೆ ಸಹಜವಾದ ಲಕ್ಷಣಗಳಿಂದ ಕೂಡಿದ ಅದರಲ್ಲಿ ಕಾಶ್ಮೀರವನ್ನು ಆಳಿದ ರಾಜಮನೆತನಗಳು, ರಾಜರುಗಳು ಮೊದಲಾದ ವಿವರಗಳಲ್ಲಿ ಅಸಾಧ್ಯ ಅವಾಸ್ತವ ಸಂಗತಿಗಳೂ, ಪರಸ್ಪರ ತಾಳೆಯಾಗದ ವಿವರಗಳೂ, ದಾಖಲಿತ ಇತಿಹಾಸ ಹಾಗೂ ಪುರಾಣ ಮಹಾಕಾವ್ಯಗಳೇ ಮೊದಲಾದವುಗಳು ಕಟ್ಟಿಕೊಡುವ ಪಾರಂಪರಿಕ ವೃತ್ತಾಂತಗಳ ಕಲಸುಮೇಲೋಗರವೂ ಕಂಡುಬರುತ್ತದೆ, ಅದಿರಲಿ. ಆದರೆ ಕಾಶ್ಮೀರದ ಭೂಸ್ವರೂಪ, ಪರಿಸರ, ಹವಾಗುಣ, ಜನ ಮೊದಲಾದವುಗಳ ಕುರಿತ ಗ್ರಹಿಕೆ ಅಥೆಂಟಿಕ್ ಆಗಿದೆ). ಆ ಕೃತಿಯ ಮೊದಲ ತರಂಗದಲ್ಲಿ ಸುಶ್ರವನೆಂಬ ಶಾಪಗ್ರಸ್ತ ನಾಗನ ಶಾಪವಿನೋಚನೆಯು ಒಬ್ಬ ಬ್ರಾಹ್ಮಣ ಯುವಕನಿಂದ ಆಗಿ, ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳಾದ ಚಂದ್ರಲೇಖೆಯಲ್ಲಿ ಬ್ರಾಹ್ಮಣ ಯುವಕನು ಅನುರಕ್ತನಾದಾಗ ನಾಗನು ಅವಳನ್ನು ಬ್ರಾಹ್ಮಣನಿಗೆ ಕೊಟ್ಟನೆಂದೂ ಆದರೆ ರಾಜನೊಬ್ಬನು ಅವಳಲ್ಲಿ ಕಾಮವಾಂಛಿತನಾಗಿ ಅವಳನ್ನು ಎಳೆದೊಯ್ಯಬಯಸಿದಾಗ ಕ್ರುದ್ಧನಾಗಿ ಆ ರಾಜನ ನಗರವನ್ನು ನಾಶಮಾಡಿದನೆಂದೂ ಪರಿಣಾಮವಾಗಿ ಆದ ಘೋರ ಜನಕ್ಷಯದಿಂದ ಪಶ್ಚಾತ್ತಾಪ ಪಟ್ಟು ಖಿನ್ನನಾಗಿ ದೂರದ ಪರ್ವತವೊಂದರಲ್ಲಿ ಕ್ಷೀರಸಾಗರದಂತೆ ಧವಲವಾದ ಸರೋವರವೊಂದನ್ನು ನಿರ್ಮಿಸಿ ಅಲ್ಲೇ ನೆಲಸಿದನೆಂದೂ ಜಾಮಾತೃಸರೋವರವೆಂದು ಅದನ್ನು ಕರೆಯುತ್ತಾರೆ ಎಂದೂ ಒಂದು ಗತಕಾಲದ ಕಥೆ ಹೇಳುವ ಸಂದರ್ಭದಲ್ಲಿ ಕಲ್ಹಣನು” ಅಮರೇಶ್ವರಯಾತ್ರೆಗೆ ಹೋಗುವಾಗ ಇಂದಿಗೂ ಆ ಸರೋವರ ಗೋಚರಿಸುತ್ತದೆ” ಎನುತ್ತಾನೆ.
ಅಂದರೆ ಹನ್ನೆರಡನೇ ಶತಮಾನಕ್ಕಾಗಲೇ ಅಮರನಾಥ ಯಾತ್ರೆಗೆ ಹಿರಿದಾದ ಮಹತ್ವ ಮತ್ತು ಪ್ರಾಚೀನತೆ ಇತ್ತು. ಪಹಲಗಾಂ ಬಳಿಯ ಚಂದನವಾಡಿಯಿಂದ ಹೊರಟರೆ ಅಮರನಾಥಗಿಂತ ಮೊದಲು ಸಿಗುವ ಶೇಷನಾಗ್ ಎಂಬಲ್ಲಿರುವ ಸರೋವರವೇ ಆ ಜಾಮಾತೃಸರೋವರದ ಇಂದಿನ ನೆಲೆ ಎಂಬುದು ಈಗಿನ ನಂಬಿಕೆ. ಹಾಗೆಯೇ ಎರಡನೇ ತರಂಗದಲ್ಲಿ ವಿಶಿಷ್ಟ ಸನ್ನಿವೇಶದಲ್ಲಿ ಕಶ್ಮೀರದ ರಾಜನೆಂದು ರಾಜ್ಯಾಭಿಷಿಕ್ತನಾದ ಸಂಧೀಮತಿ ಎಂಬುವನ ಶಿವ ಭಕ್ತಿಯ ಕುರಿತು ಹೇಳುತ್ತ ಅವನು “ವನಭೂಮಿಯಲ್ಲಿ ವಸಂತ ಮಾಸ ಕಳೆಯುತ್ತ ದೇವತೆಗಳಿಗೂ ದುರ್ಲಭವಾದ ಕಶ್ಮೀರದಲ್ಲಿ ಗ್ರೀಷ್ಮ ಕಾಲದಲ್ಲಿ ರಮ್ಯ ಹಿಮಲಿಂಗಗಳನ್ನು ಅರ್ಚಿಸುತ್ತ ಕೃತಾರ್ಥನಾಗುತ್ತಿದ್ದನು” ಎನ್ನುತ್ತಾನೆ ಕಲ್ಹಣ.
ಅಮರನಾಥಕ್ಕೆ ಆಗಮಿಸಬೇಕಾದರೆ ಯಾವ ಯಾವ ನಿಯಮ, ನಿಷ್ಠೆಗಳನ್ನು ವಿಧಿಕರ್ಮಗಳನ್ನು ಅನುಸರಿಸಬೇಕೆಂದು ಶಿವನು ಹೇಳಿಯಾದ ಮೇಲೆ ಅಮರೇಶ ಮಹದೇವನ ಕತೆಯನ್ನು ಆಲಿಸುವ ಹಾಗೂ ಮಹಾದೇವನು ಗುಹೆಯಲ್ಲಿ ಸ್ಥಿತಗೊಂಡು ಹೇಗೆ ಮತ್ತು ಯಾಕೆ ಅಮರೇಶನೆಂದು ಕರೆಯಲ್ಪಟ್ಟ ಎಂಬುದನ್ನು ತಿಳಿಯುವ ಇಚ್ಚೆಯನ್ನು ಪಾರ್ವತಿ ಮಾತೆಯು ವ್ಯಕ್ತಪಡಿಸಿದಾಗ ಭಗವಾನ್ ಶ್ರೀ ಸದಾಶಿವನು ಹೇಳಿದ ಶ್ರೀ ಅಮರನಾಥ ಕಥೆಯನ್ನೂ ಸ್ವಲ್ಪ ಕೇಳಿ ಬಿಡಿ.
ಆದಿಕಾಲದಲ್ಲಿ ಬ್ರಹ್ಮಾ,ಪ್ರಕೃತಿ, ಅಹಂಕಾರ ಸ್ಥಾವರ,(ಪರ್ವತಾದಿಗಳು) ಕಾಡು (ಮನುಷ್ಯ), ಸಂಸಾರಗಳ ಉತ್ಪತ್ತಿಯಾಗಿ ಆ ನಂತರ ಕ್ರಮಾನುಸಾರವಾಗಿ ದೇವತಾ, ಋಷಿ, ಪೂರ್ವಪಿತೃ, ಗಂಧರ್ವ, ರಾಕ್ಷಸ, ಸರ್ಪ,ಯಕ್ಷ,ಭೂತಗಣ,ಕೂಷ್ಮಾಂಡ,ಭೈರವ, ಹದ್ದು,ದಾನವಾದಿಗಳೂ ಉತ್ಪತ್ತಿಯಾದವು.ಹೀಗೆ ಹೊಸ ಪ್ರಕಾರದ ಭೂತಗಳ ಸೃಷ್ಟಿಯಾಯಿತು. ಆದರೆ ಇಂದ್ರಾದಿ ದೇವತೆಗಳ ಸಹಿತ ಎಲ್ಲರ ಜೀವಗಳು ಮೃತ್ಯುವಿನ ವಶದಲ್ಲಿತ್ತು. ದೇವತೆಗಳುಶ್ರೀ ಸದಾಶಿವನ ಬಳಿ ಹೋಗಿ, ಅವನನ್ನು ಸ್ತುತಿಸಿ,ನಮ್ಮನ್ನು ಮೃತ್ಯು ಬಾಧಿಸುತ್ತದೆ,ಅದು ನಮ್ಮನ್ನು ಬಾಧಿಸದಂಥ ಉಪಾಯವನ್ನು ಹೇಳು ಎಂದಾಗ ಸದಾಶಿವನು ನಾನು ನಿಮ್ಮನ್ನು ಮೃತ್ಯುಭಯದಿಂದ ರಕ್ಷಿಸುತ್ತೇನೆ ಎಂದು ಅಭಯವಿತ್ತು ತನ್ನ ಶಿರದಿಂದ ಚಂದ್ರಮನನ್ನು ಕೆಳಗಿಳಿಸಿ ಅದರಿಂದ ಜೀವದೃವ್ಯವನ್ನು ಹಿಂಡಿ ಇದು ನಿಮ್ಮ ಮೃತ್ಯುರೋಗದ ಔಷಧಿ ಎಂದನು. “ಹೇ ದೇವಿ,ಈ ಚಂದ್ರಕಲೆಯನ್ನು ಹಿಂಡಿದ ಪರಿಣಾಮ ಪವಿತ್ರ ಅಮೃತದ ಧಾರೆಯೇ ಹರಿಯಿತು. ವಾಸ್ತವವಾಗಿ ಆ ಧಾರೆಯು ಅಮರಾವತಿ ನದಿಯಾಗಿದೆ”. ಎಂದು ಹೇಳುತ್ತಿದ್ದಾನೆ ಪರಶಿವನು ಪಾರ್ವತಿಗೆ…ಚಂದ್ರಕಲೆಯನ್ನು ಹಿಂಡುವ ಸಮಯದಲ್ಲಿ ಶಿವನ ಮೈಮೇಲೆ ಬಿದ್ದ ಹನಿಗಳು ಒಣಗಿ ಪೃಥ್ವಿಯ ಮೇಲೆ ಬಿದ್ದವು, ಆ ಅಮೃತ ಬಿಂದುಗಳ ಕಣಗಳೇ ಗುಹೆಯಲ್ಲಿರುವ ಭಸ್ಮವು.
ದೇವತೆಗಳ ಕುರಿತು ಪ್ರೀತಿ ತೋರುತ್ತ ಸದಾಶಿವನು ದ್ರವೀಭೂತವಾದನು. ಜಲಸ್ವರೂಪಿಯಾದ ಸದಾಶಿವನನ್ನು ಕಂಡು ದೇವತೆಗಳು ನತಮಸ್ತಕರಾಗಿ ನಮಿಸಿದರು. ನಂತರ ಸದಾಶಿವನು ಭಾವವಿಭೋರನಾಗಿ ತನ್ನ ವಾಸ್ತವ ಸ್ವರೂಪವನ್ನು ಪುನ: ಅವರಿಗೆ ತೋರಿದನು. ಹೀಗಾಗಿ ಪ್ರತಿಯೊಂದು ಪಕ್ಷದಲ್ಲಿ (ಕೃಷ್ಣ-ಶುಕ್ಲ) ಅಮೃತ ದ್ರವವಾಗುತ್ತದೆ ಮತ್ತೆ ಘನೀಭೂತವಾಗುತ್ತದೆ. ಶಿವನು ಹೇಳಿದ: “ಹೇ ದೇವತೆಗಳೇ ನೀವು ಈ ಗುಹೆಯಲ್ಲಿ ನನ್ನ ಹಿಮಲಿಂಗ ಶರೀರವನ್ನು ನೋಡಿದ್ದೀರಿ.ಇಂದಿನಿಂದ ನನ್ನ ಈ ಅನಾದಿಲಿಂಗ ಶರೀರವು ತ್ರಿಲೋಕಗಳಲ್ಲಿ ಅಮರೇಶ ಎಂಬುದಾಗಿ ಖ್ಯಾತವಾಗುವದು.ನನ್ನ ಕೃಪೆಯಿಂದ ನಿಮಗಿನ್ನು ಮೃತ್ಯುವಿನ ಭಯವಿಲ್ಲ ನೀವಿಲ್ಲೇ ಇದ್ದು ಅಮರರಾಗಿ ಶಿವರೂಪವಾಗಿರಿ”.ಈ ವರವನ್ನು ಕೊಟ್ಟ ದಿನದಿಂದ ಸದಾಶಿವನು ಲೀನವಾಗಿ ಗುಹೆಯಲ್ಲೇ ಇರತೊಡಗಿದನು.
ಈ ಕಥೆಯನ್ನು ಮುಂದುವರಿಸಿ ಶಿವನು ಹೇಳುತ್ತಾನೆ, “ಹೇ ಮಹೇಶ್ವರಿ,ಗರ್ಭಪಾತ ಮಾಡಿಸುವವನು, ಗುರುವಿನ ಶಯ್ಯೆಯನ್ನೇರುವವನು,ಮದಿರೆಯನ್ನು ಸೇವಿಸುವವನು,ಚಿನ್ನವನ್ನು ಕದಿಯುವವನು,ಗೋಹತ್ಯೆ ಮಾಡುವವನು,ಬ್ರಹ್ಮಹತ್ಯೆ ಇತ್ಯಾದಿ ಮಾಡುವವನೂ ಒಂದು ವೇಳೆ ಅಮರನಾಥನ ರಸಮಯಲಿಂಗ ಶರೀರದ ದರ್ಶನ ಮಾಡಿದ್ದೇ ಆದರೆ ಅವನು ಆ ಕ್ಷಣವೇ ಸಮಸ್ತ ಪಾಪಗಳಿಂದ ಮುಕ್ತನಾಗುತ್ತಾನೆ.” ಮೇಲಿನ ಯಾದಿಯಲ್ಲಿರುವ (ಒಂದನ್ನುಳಿದು) ಪಾಪಕರ್ಮಗಳನ್ನೇನೂ ನಾನು ಮಾಡಿಲ್ಲವಾದರೂ ಅಮರನಾಥನ ದರ್ಶನಕ್ಕೆ ನಾನು ಹೋದದ್ದು ನನ್ನ ಹೆಂಡತಿಯನ್ನು ಅವಳ ಕುಟುಂಬವರ್ಗದವರ ಜೊತೆ ಕಳಿಸಿ ಇಲ್ಲಿ ಟೆನ್ಶನ್ ಮಾಡಿಕೊಂಡು ಕೂಡ್ರುವದಕ್ಕಿಂತ ನಾನೂ ಅವಳ ಜೊತೆ ಹೋಗಿ ಬಿಡುವದೇ ಲೇಸು ಎಂಬ ಕಾರಣಕ್ಕಾಗಿ. ಆದರೆ ಅದು ಅಷ್ಟು ಪ್ರಾಪಂಚಿಕವಾಗಲಿಲ್ಲ. ನನಗೆ ಆ ಯಾತ್ರೆ ನೀಡಿದ ಅನುಭವ ಮತ್ತು ಅನುಭೂತಿ ಇದುವರೆಗಿನ ನನ್ನ ಯಾವುದೆ ಯಾತ್ರೆ, ಪ್ರಯಾಣದ ಅನುಭವಕ್ಕಿಂತ ಭಿನ್ನವೂ ಅನಿರ್ವಚನೀಯವೂ ಆಗಿತ್ತುಎಂದು ನಾನು ಹೇಳದಿದ್ದರೆ ಆತ್ಮವಂಚನೆಯಾಗುತ್ತದೆ.
ಪರ್ವತದಿಂದ ಹನಿ ಹನಿಯಾಗಿ ಆ ಗುಹೆಯಲ್ಲಿ ನೀರು ತೊಟ್ಟಿಕ್ಕುತ್ತದೆ. ಪಾದರಕ್ಷೆಗಳನ್ನು ಒಂದು ಫರ್ಲಾಂಗ್ ಮೊದಲೇ ಕಳಚಿಟ್ಟು ಬರಿಗಾಲಲ್ಲಿ ಅಲ್ಲಿ ನಡೆದಾಗ ಪಾದಗಳು ಶೀತಲವಾಗುತ್ತವೆ. ಏರುಮುಖವಾಗಿ ಚಲಿಸಿ ಮೆಟ್ಟಿಲೇರುವಾಗ ಉಸಿರಾಟದ ತೊಂದರೆಯಾಗುತ್ತದೆ. ನಾಲ್ಕಾರು ಮೆಟ್ಟಿಲೇರುತ್ತಲೇ ನಿಂತು ವಿಶ್ರಮಿಸುವಂಥ ತೇಕು. ಆ ಕಷ್ಟಗಳು ಅನುಭವಕ್ಕೆ ಬರುತ್ತಿರುತ್ತಿದ್ದಂತೆಯೇ ನಾನು ಮತ್ತೆ ಮತ್ತೆ ಆ ವಿರಾಟ್ ಗುಹೆಯ ಆಳ ಅಗಲ ಎತ್ತರಗಳನ್ನು ಅದೆಷ್ಟು ಸಲ ತದೇಕಚಿತ್ತನಾಗಿ ನೋಡಿದೆನೆಂದರೆ ಬದುಕಿನಲ್ಲಿ ಯಾವುದೇ ಕ್ಷಣ ನಾನು ಕಣ್ಮುಚ್ಚಿ ಧ್ಯಾನಿಸಿದರೂ ಆ ಗುಹೆ ಅದರ ವಾಸ್ತವ ಆಕಾರದ ಆಗಾಧತೆಯೊಂದಿಗೇ ನನ್ನ ಮನೋಭಿತ್ತಿಯ ಮೇಲೆ ಮೂಡಬೇಕು, ಹಾಗೆ. ಅದು ಶಾಶ್ವತವಾಗಿ,ಅಚ್ಚೊತ್ತಿದಂತೆ, ಮನಪಟಲದಲ್ಲಿ ಮೂಡಿದೆ.
ಅಮರನಾಥಕ್ಕೆ ಹೋಗಲು ನಾವಾಯ್ದುಕೊಂಡದ್ದು ಸ್ವಲ್ಪ ಸುಲಭದ ಮಾರ್ಗ. ನನ್ನ ಕುಟುಂಬದ ಇತರ ಸದಸ್ಯರು ಕಷ್ಟದ ಮಾರ್ಗ ಆಯ್ದುಕೊಂಡಿದ್ದರೂ ನಾನು ಸುಲಭದ ಮಾರ್ಗವನ್ನೇ ಆಯ್ದುಕೊಳ್ಳುತ್ತಿದ್ದೆ. ಬಹಳ ಕಷ್ಟ ಪಡುವ ಭಕ್ತರಿಗೆ ದೇವರು ಬಹಳ ಮುತುವರ್ಜಿ ವಹಿಸಿ ಒಲಿಯುತ್ತಾನೆ ಎಂಬುದರಲ್ಲಿ ನನಗೆ ನಂಬುಗೆ ಇಲ್ಲ. ನಾನು ದೇವರ ಒಲುಮೆಗಾಗಿ ಹೋದವನೂ ಅಲ್ಲ.ನನಗೆ ಒಂದು ಖಾತ್ರಿಯಾಯಿತು. ನಮ್ಮಲ್ಲಿ ಆಧ್ಯಾತ್ಮ ,ಧ್ಯಾನ ಇತ್ಯಾದಿಗಳು ಧರ್ಮಮೂಲದವು ಎಂಬ ಗ್ರಹಿಕೆ ಎಷ್ಟು ಗಾಢವಾಗಿದೆ ಎಂದರೆ ಹೇ ಜನರೇ ನಾನು ಹುಟ್ಟಿನ ಕುರಿತು ಯೋಚಿಸುತ್ತೇನೆ, ಸಾವಿನ ಕುರಿತು ಯೋಚಿಸುತ್ತೇನೆ, ಅಸ್ತಿತ್ವದ ಸಾರ್ಥಕ್ಯ,ಉದ್ದೇಶ,ಮೌಲ್ಯ,ತತ್ವ,ಔಚಿತ್ಯಗಳ ಕುರಿತು ಯೋಚಿಸುತ್ತೇನೆ, ಇವು ನನಗೆ ಸ್ಪಿರಿಚುಅಲ್ ಸಂಗತಿಗಳು ರಿಲಿಜಿಯಸ್ ಅಥವಾ ಥಿಯಲಾಜಿಕಲ್ ಸಂಗತಿಗಳಲ್ಲ. ಇವುಗಳಿಗೂ ಸುಡುಗಾಡು ಧರ್ಮಗಳಿಗೂ ಅರ್ಥಾತ್ ಸಂಬಂಧವಿಲ್ಲ ಎಂದು ಚೀರಾಡಿ ಹೇಳಬೇಕಾಗುತ್ತದೆ. ಹಾಗೆಯೇ ಅಮರನಾಥ್ ಅಥವಾ ಇನ್ನಾವುದೇ ಯಾತ್ರೆ ಕೂಡ ಧಾರ್ಮಿಕವಾಗದೇ ನಮ್ಮನ್ನು ಲೌಕಿಕದ ಅನುಭವಗಳೇ ಆತೀತದ ಕುರಿತ ಗ್ರಹಿಕೆಗೆ ಕೊಂಡೊಯ್ಯುವ ಆಧ್ಯಾತ್ಮಿಕ ಸಂಗತಿಯಾಗಬಹುದು ಎನ್ನಿಸುತ್ತದೆ. ನನಗನ್ನಿಸಿದ್ದು ಅದು.
ಶ್ರೀನಗರದಲ್ಲಿ ಶಂಕರಾಚಾರ್ಯ ದೇಗುಲಕ್ಕೆ ನಾವು ಹೋದಾಗ ಅದಾಗಲೇ ಅಮರನಾಥ್ ಗೆ ಹೋಗಿ ಬಂದ ಮಹಾಶಯರೊಬ್ಬರು ಅಲ್ಲಿದ್ದರು. ಅವರು ನಾವಿನ್ನೂ ಅಲ್ಲಿಗೆ ಹೋಗಲಿರುವವರು ಎಂದು ಗೊತ್ತಾದಾಗ ಕೊಟ್ಟ ಟಿಪ್ಸ್ ನಲ್ಲಿ ಮುಖ್ಯವಾದುದು: “ಸೀಜನ್ ಡೌನ್ ಇದೆ, ಗುಹೆಗೆ ಕರೆದೊಯ್ಯಲು ಕುದುರೆಯವರು ಆರುನೂರು, ಏಳುನೂರು ರೂಪಾಯಿ ಕೇಳಿದರೆ ಕೊಡಬೇಡಿ, ನಾಲ್ಕುನೂರು ಐದುನೂರು ರುಪಾಯಿಗೆ ಹೊಂದಿಸಿಕೊಳ್ಳಿ.” ಬಾಲ್ತಾಲ್ ನಿಂದ ನಾವು ಹೆಲಿಕ್ಯಾಪ್ಟರ್ ಏರಿ ಹೋದೆವಾದರೂ ಪಂಚತರ್ಣಿ ಎಂಬ ನಯನ ಮನೋಹರ ಸ್ಥಳದಿಂದ ಹೊಟ್ಟೆಪಾಡಿಗಾಗಿ ತಮ್ಮ ತಮ್ಮೊಳಗೆ ಅಪಾರ ಸ್ಪರ್ಧೆಯ ಸಂಘರ್ಷದಲ್ಲಿದ್ದ ಬಡಪಾಯಿಗಳ ಕುದುರೆಗಳನ್ನು ಏರಿ ಹೋದೆವು. ಅವರ ಮತ್ತು ಹೆಗಲ ಮೇಲೆ ಪಾಲ್ಕಿ ಹೊತ್ತು ಯಾತ್ರಿಗಳನ್ನು ಗುಹೆಗೆ ಕೊಂಡೊಯ್ಯುತ್ತಿದ್ದ ಯುವ ಕಶ್ಮೀರಿ ಮುಸಲರ ಪಾಡು ನೋಡಿದಾಗ ಅವರಿಗೆ ಐವತ್ತೋ ನೂರೋ ರೂಪಾಯಿ ಹೆಚ್ಚಿಗೆ ಕೊಟ್ಟು ಅವರ ಮುಖದಲ್ಲಿ ಮೂಡುವ ಹೊಳಪಿನಲ್ಲೋ ಅವರ ಕಣ್ಣಲ್ಲಿ ಮೂಡುತ್ತಿದ್ದ ಕೃತಜ್ಞತೆಯಲ್ಲೋ ಶಿವನನ್ನು ಕಾಣುವ ಮನೋಭಾವವನ್ನು ಶ್ರೀನಗರದ ಶಂಕರ ಮಂದಿರದಲ್ಲಿ ಸಿಕ್ಕ ಅಮರನಾಥ ಯಾತ್ರಿ ಬೆಳೆಸಿಕೊಂಡಿದ್ದರೆ ಅವನ ಯಾತ್ರೆ ಆಧ್ಯಾತ್ಮಿಕವಾಗುತ್ತಿತ್ತಲ್ಲವೇ ಎನ್ನಿಸುತ್ತಿತ್ತು.
ಹೆಲಿಕ್ಯಾಪ್ಟರ್ ನಲ್ಲಿ ಬರುವಾಗ ನಾವು ಯಾವ ಬಾಲ್ತಾಲ್ ನಿಂದ ಆಗಸಕ್ಕೆ ಹಾರಿ ಪರ್ವತಗಳ ಮಧ್ಯೆ ಸಾಗುತ್ತಿದ್ದೆವೋ ಅದೇ ಬಾಲ್ತಾಲ್ ನಿಂದ ಕುದುರೆಗಳ ಮೇಲೆ ಕುಳಿತು ಮತ್ತು ಕಾಲ್ನಡಿಗೆಯಿಂದ ಹೊರಟ ಜನ ಇರುವೆಗಳಂತೆಯೂ ಅವರು ನಡೆಯುತ್ತಿದ್ದ ದಾರಿ ಅದು ಹೇಗೆ ಅಲ್ಲಿ ನಡೆಯುತ್ತಿದ್ದಾರೆ ಎಂದು ನಾವು ಗಾಭರಿ ಪಡುವಂತೆ ಇಕ್ಕಟ್ಟಾಗಿಯೂ ಕಾಣುತ್ತಿದ್ದರೆ ನಾವು ಪಂಚತರ್ಣಿಯಿಂದ ಕುದುರೆ ಏರಿ ಹೊರಟಾಗ ಎಕ್ಜಾಕ್ಟಾಗಿ ಅದೇ ಸ್ಥಿತಿಯಲ್ಲಿದ್ದೆವು. ಕೆಲವು ಕಡೆಗಳಲ್ಲಂತೂ ಎಷ್ಟು ಇಕ್ಕಟ್ಟಾಗಿರುತ್ತಿತ್ತೆಂದರೆ ಎದುರಿನಿಂದ ಬಂದ ಸಾಲು ಕುದುರೆಗಳು ಪರ್ವತದ ಗೋಡೆಗೆ ತಮ್ಮ ಹೊಟ್ಟೆಯನ್ನು ಸವರಿಕೊಂಡು ನಿಂತು ಅವುಗಳ ಹೊಟ್ಟೆಗೆ ನಮ್ಮ ಕಾಲು ತಾಕುವಷ್ಟು ಸಮೀಪದಲ್ಲಿ ನಮ್ಮ ಸಾಲು ದಾಟಬೇಕು. ಆಮೇಲೆ ಅವು ಈ ಕಡೆ ಬರಬೇಕು. ಆಯತಪ್ಪಿದರೆ ಪ್ರಪಾತ ಮಗ್ಗುಲಲ್ಲೇ ಇತ್ತು.ಇವುಗಳ ಉಸಾಬರಿಯೇ ಬೇಡ ಎಂದು ಸ್ವಲ್ಪ ಮೇಲೇರಿ ನಡೆದ ಕಾಲ್ನಡಿಗೆಯವರು ಚೀನದ ಕತೆಗಾರ ಲೂ ಷೂನ್ The earth had no roads to begin with, but when many men pass one way, a road is made ಎಂದು ಹೇಳಿದಂತೆ, ಪಾಪ ತಮ್ಮದೇ ಆದ ಬೇರೆಯದೇ ಕಾಲ್ದಾರಿಯನ್ನು ನಿರ್ಮಿಸಿಕೊಂಡಿದ್ದರು.
ಕುದುರೆಗಳ ಮತ್ತು ಅವುಗಳ ಪಕ್ಕಕ್ಕೆ ಇರುವ ಅವುಗಳ ಮಾಲಿಕರ ಹೆಜ್ಜೆಗಳ ನಡೆ ಇಂಚುಗಳ ಲೆಕ್ಕದಲ್ಲಿರುತ್ತಿತ್ತು. ನಾನು ಹತ್ತಿದ ಕುದುರೆಯವನಾದ ಐಜಾಜ್ ಅಹಮದ್ ನನಗೆ ಹೇಳುತ್ತಿದ್ದ.”ನೀವು ನಿಮ್ಮ ಗಮ್ಯ ತಲುಪಿ ಇಳಿಯುವ ವರೆಗೆ ನಮ್ಮ ಐಡಿ ಕಾರ್ಡ್ ನಿಮ್ಮ ಬಳಿ ಇರುತ್ತದೆ ಸಾಬ್, ವಾಹನ ಚಾಲಕರು ವಾಹನ ಅಪಘಾತವಾದಾಗ ತಾವು ಜಿಗಿದು ಪರಾರಿಯಾಗುತ್ತಾರೆ. ನಮ್ಮದು ಹಾಗಲ್ಲ. ನಿಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುವದು, ಕರೆತರುವದು ನಮ್ಮ ಜವಾಬ್ದಾರಿ”.
ನಾವು ಅಮರನಾಥ ಗುಹೆಯಿಂದ ಮರಳಿ ಬಂದಾಗ ಇನ್ನೂ ಹಾರಾಡುತ್ತಿದ್ದ ಹೆಲಿಕ್ಯಾಪ್ಟರುಗಳ ಸದ್ದು ನಾವು ಟಾಯ್ಲೆಟ್ ಗೆ ಹೋಗಿ ಒಂದು ಕಪ್ ಚಹ ಕುಡಿದು ಬರುವಷ್ಟರಲ್ಲಿ ಅಡಗಿತ್ತು. ಸಂಜೆ ನಾಲ್ಕು ಘಂಟೆಯ ಹೊತ್ತಿಗೆ ಬೆಟ್ಟದಲ್ಲಿ ಮಂಜು ಆವರಿಸಿಕೊಂಡಿತು. ಇನ್ನೂ ಎರಡು ತಾಸು ಸಮಯವಿದೆ. ಮಂಜು ಕರಗಿ ಹೆಲಿಕಾಪ್ಟರ್ ಹಾರಾಟ ಶುರು ಆದರೂ ಆಗಬಹುದು ಎಂಬ ಆಶೆ ಕರಗಿ ವಾತಾವರಣ ಎಷ್ಟು ಶೀತಲವಾಗತೊಡಗಿತೆಂದರೆ ಒಳಗೆ ಬನಿಯನ್ ಅಂಡರವೇರ್, ಅದರ ಮೇಲೆ ಥರ್ಮಲ್, ಅದರ ಮೇಲೆ ಪ್ಯಾಂಟು ಷರ್ಟು, ಅದರ ಮೇಲೆ ಉದ್ದ ತೋಳಿನ ಸ್ವೆಟರ್, ಅದರ ಮೇಲೆ ಜರ್ಕಿನ ಧರಿಸಿದ ನಾವು ಕೈಗೆ ಗ್ಲೋವ್ಸ್ ಹಾಕಿಕೊಂಡು ತಲೆಗೆ ಕಿವಿ ಮುಚ್ಚುವಂತೆ ಟೋಪಿ ಹಾಕಿಕೊಂಡು ನಿಂತಿರಬೇಕಾದರೆ ಎಪ್ಪತ್ತು ವರ್ಷ ವಯಸ್ಸಿನ ಒಬ್ಬ ಕಾಶ್ಮೀರಿ ವೃದ್ಧ ಬಂದು ನಮ್ಮ ವಾಸ್ತವ್ಯಕ್ಕಾಗಿ ತನ್ನ ಟೆಂಟ್ ಗಳನ್ನು ನಾವು ನೋಡಬಹುದೆಂದ. ಗಡಗಡ ನಡುಗುತ್ತಿದ್ದ ನಾವು ನಮ್ಮ ಸ್ಫೋರ್ಟ್ಸ್ ಶೂಜ್ ನತ್ತ ನೋಡಿಕೊಂಡು ಆತ ಧರಿಸಿದ ಹವಾಯಿ ಚಪ್ಪಲಿಯತ್ತ ನೋಡಿದೆವು. ನಮ್ಮ ಬೆಚ್ಚನೆಯ ಟೋಪಿಯಡಿ ಇದ್ದ ಮುಖದಲ್ಲಿಯ ಕಣ್ಣುಗಳನ್ನು ಪಿಳಿಪಿಳಿ ಬಿಟ್ಟುಕೊಂಡು ನೋಡಿದೆವು. ಅವನು ಬಕನೆತ್ತಿಯಲ್ಲಿದ್ದ. ಕೂದಲು ನೆರೆತಿದ್ದವು.
ಕುದುರೆ ಏರಿ ಹೋಗುವಾಗ ಮರಳಿ ಬರುವಾಗ ನನಗರಿವಿಲ್ಲದೇ ನಾನು, ವಿಶೇಷವಾಗಿ ಕುದುರೆಗಳು ತೀರ ಎತ್ತರದ ಮೆಟ್ಟಿಲಿನಂತಿದ್ದ ರಚನೆಗಳನ್ನು ಪ್ರಯಾಸ ಪಟ್ಟು ಏರುವಾಗ ಅಥವಾ ಕಡಿದಾದ ಇಳಿಜಾರುಗಳಲ್ಲಿ ಮೆಟ್ಟಿಲುಗಳಂತಾಗಿದ್ದ ಮಣ್ಣಿನ ರಚನೆಗಳಲ್ಲಿ ಇಳಿಯುವಾಗ ಮನಸು ಆತಂಕದ ಅನುಭವದಲ್ಲಿದ್ದಾಗ “ಜೈ ಭೋಲೇನಾಥ್” ಎನ್ನುತ್ತಿದ್ದೆ. ಎದುರಿನಿಂದ ಬರುತ್ತಿದ್ದ ಇನ್ನ್ಯಾರೋ ಯಾತ್ರಿ ಅಥವಾ ಯಾತ್ರಿಣಿ ಅದಕ್ಕೆ ಪ್ರತ್ಯುತ್ತರ ಎಂಬಂತೆ “ಜೈ ಭೋಲೇನಾಥ್” ಎನ್ನುತ್ತಿದ್ದರೆ ಇದು ಸಮಾನ ಅನುಭೂತಿಗಳ ಒಂದು ಲೋಕ ಎನ್ನಿಸುತ್ತಿತ್ತು.
“ಜೈ ಭೋಲೆನಾಥ್” ಎಂಬ ಆ ಮೃದುಮಧುರ ಘೋಷಗಳೂ, ಆ ಸಂಜೆ ಮತ್ತು ರಾತ್ರಿಯ ಶೀತಲ ಹವೆಯೂ, ಅಮರನಾಥ ಗುಹೆಯ ಸುತ್ತಲಿನ ನಲವತ್ತೈವತ್ತು ಕಿಲೋಮೀಟರ್ ಫಾಸಲೆಯಲ್ಲಿ ಶಾಶ್ವತವಾದ ಕಟ್ಟಡಗಳೆಂಬ ಯಾವ ರಚನೆಯೂ ಇಲ್ಲದ ಜನವಿದೂರವಾದ ಪ್ರಿಸ್ಟೈನ್ ವಾತಾವರಣವೂ, ಮರುದಿನ ಹರಡಿದ ನಚ್ಚನೆಯ ಬಿಸಿಲೂ ಹೆಜ್ಜೆ ಹೆಜ್ಜೆಗೆ ಉತ್ತರ ಪ್ರದೇಶ, ಪಂಜಾಬ್, ದಿಲ್ಲಿ, ಹಿಮಾಚಲ ಪ್ರದೇಶದ ಶಿವಭಕ್ತ ಮಂಡಲಿಗಳು, ಭೋಲೇನಾಥ ಟ್ರಸ್ಟ್ ಗಳು ಟೆಂಟ್ ಹಾಕಿ ಬಿಸಿಬಿಸಿಯಾದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ನೀವು ಬಂದು ಸ್ವಲ್ಪ ತಿಂಡಿ ತಿಂದು, ಒಂದು ಕಪ್ ಚಹ ಕುಡಿದು ಅಥವಾ ಭೋಜನ ಮಾಡಿ ಹೋದಿರಾದರೆ ನಮ್ಮ ಶ್ರಮ ಸಾರ್ಥಕ ಎಂಬಂತೆ ಕೈ ಮಾಡಿ ಕರೆದು ಪ್ರೀತಿಯಿಂದ ಒತ್ತಾಯಿಸಿ ತಿನಿಸಿ ಉಣಿಸಿ ಕಳಿಸುವ ಲಂಗರ್ ಗಳು, ಸುದ್ದಿಮಾಧ್ಯಮಗಳು “ಬಾಬಾ ಬರ್ಫಾನಿ” (ಹಿಮಲಿಂಗ) ಪೂರಾ ಫಿಗಲ್ ಗಯಾ ಹೈ ಎಂದು ಪ್ರಸಾರ ಮಾಡಿದ್ದರೂ ಉತ್ಸಾಹ ಕಳೆದುಕೊಳ್ಳದೇ ಅಲ್ಲಿಯ ಸೃಷ್ಟಿಸೌಂದರ್ಯದಲ್ಲೇ ಶಿವನನ್ನು ಕಾಣಬಂದವರು ಕಟಾಂಜನದ ಸರಳುಗಳಲ್ಲಿ ಬೆರಳು ತೂರಿಸಿ ಜಿಗಿದು ನೋಡಿದರೆ ಒಂದೂವರೆ ಅಡಿಯಷ್ಟು ಹಿಮಲಿಂಗ ಇನ್ನೂ ಇದ್ದುದು ಕಂಡು ರೋಮಾಂಚಿತರಾದದ್ದು…..
ಜೈ ಭೋಲೆನಾಥ್…!!!
 

‍ಲೇಖಕರು avadhi

14 August, 2013

1 Comment

  1. CHANDRASHEKHAR VASTRAD

    ಭಾಳ ಚಂದದ ನಿರೂಪಣೆ ಅಶೋಕ, ಭೋಲೆನಾಥನೂ ಮೆಚ್ಚಿ ಹೌದುಹೌದು ಅನಬೇಕು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading