
ನೀವು ಕವಿಯಾದದ್ದು ಹೇಗೆ? ನೀವು ಮೊದಲ ಕವಿತೆ ಬರೆದದ್ದು ಹೇಗೆ? ಎಂದೆಲ್ಲ ಕೇಳಿದರೆ ಹೇಗೆ ಉತ್ತರಿಸಬೇಕೆಂದು ಅರ್ಥವಾಗುವದಿಲ್ಲ. ನಮ್ಮ ಮನೆತನದಲ್ಲಿ ಅಂಥ ಮಹಾ ಕವಿ-ಸಾಹಿತಿಗಳೇನೂ ಇರಲಿಲ್ಲ. ಒಬ್ಬಿಬ್ಬರು ಸಾಹಿತ್ಯಾಸಕ್ತರಿದ್ದರು. ನನ್ನ ಸೋದರ ಮಾವಂದಿರ ಪೈಕಿ ಒಬ್ಬರು ತತ್ವಶಾಸ್ತ್ರದಲ್ಲಿ ಬಿ.ಎ ಮಾಡಿ ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದರು.ಅವರು “ಮೃಗಜಲ” ಎಂಬ ಕವನ ಸಂಕಲನವೊಂದನ್ನು ಪ್ರಕಟಿಸಿದ್ದರು. ನನ್ನಣ್ಣ ಆಗೀಗ “ಕರ್ಮವೀರ” ಪತ್ರಿಕೆಯ ಎಳೆಯರ ಬಳಗ ಪುಟಕ್ಕೆ ಪುಟ್ಟ ಪುಟ್ಟ ಲೇಖನಗಳನ್ನು ಬರೆಯುತ್ತಿದ್ದ. ಅಷ್ಟೇ. ಇದರಿಂದ ನನ್ನ ಮೇಲೆ ಆಳವಾಗಿ ಸಾಹಿತ್ಯದ ಪ್ರಭಾವ ಉಂಟಾದದ್ದೇನೂ ಇಲ್ಲ.
ಬಾಲ್ಯದ ದಿನಗಳಿಂದಲೂ ಓದಿನ ಆಸಕ್ತಿ ಮಾತ್ರ ಇತ್ತು. ಬೈಲಹೊಂಗಲದಂಥ ಪುಟ್ಟ ಪಟ್ಟಣದಲ್ಲಿಯ ನನ್ನ ಎಳೆ ಹರೆಯದ ದಿನಗಳ ಏಕತಾನತೆಯನ್ನು ನೀಗಿಕೊಳ್ಳಲು ನಾನು ಕಂಡುಕೊಂಡ ಮಾರ್ಗ ಓದುವದು. ಎಸ್.ಎಸ್.ಎಲ್.ಸಿ ಯಲ್ಲಿದ್ದಾಗ (ಅಥವಾ ಮೆಟ್ರಿಕ್ಯುಲೇಶನ್ ಎಂಬ ಆ ಪರೀಕ್ಷೆಯಲ್ಲಿ ಫೇಲ್ ಆಗಿ ಒಂದು ವರ್ಷ ಖಾಲಿ ಕುಳಿತಿರಬೇಕಾದ ಪರಿಸ್ಥಿತಿ ಬಂದೊದಗಿದಾಗ) ಬೈಲಹೊಂಗಲದ ಸಾರ್ವಜನಿಕ ಗ್ರಂಥಾಲಯದಲ್ಲಿ ನೂರಾರು ಕಾದಂಬರಿಗಳನ್ನು ಓದಿದ್ದೆ. ಅವು ಕಟ್ಟಿಕೊಡುವ ಲೋಕದ ಕುರಿತ ನನ್ನದೇ ಆದೊಂದು ಚಿತ್ರವನ್ನು ಮನದಲ್ಲಿ ಸೃಷ್ಟಿಸಿಕೊಂಡು ಅದರಲ್ಲಿ ಕಳೆದು ಹೋಗುವದು ಇಷ್ಟವಾಗುತ್ತಿತ್ತು. ಬರವಣಿಗೆಗೆ ಅಗತ್ಯವಾದ ಭಾಷೆಯನ್ನು ಬಳಸುವ ಕ್ರಮವೆಂಬುದೊಂದು ಆಗ ಸಿದ್ಧಿಸಿರಬಹುದು.
ನಾನು ಸ್ವತ: ಹುಡುಕಿ ಕವಿತೆಗಳನ್ನೋದುತ್ತಿರಲಿಲ್ಲ. ಪದವಿಪೂರ್ವ ಹಂತದವರೆಗೆ ನಾನು ಕವಿತೆಗಳನ್ನು ಓದಬೇಕು ಅಂದರೆ ಅವುಗಳಿಗೆ ಒಂದು ಅರ್ಹತೆ ಕಡ್ಡಾಯವಾಗಿತ್ತು. ಅವು ಪಠ್ಯಪುಸ್ತಕದ ಪಾಠಗಳಾಗಿರಬೇಕಿತ್ತು. ಹಾಗೆ ನೋಡಿದರೆ ಬೈಲಹೊಂಗಲದ ಕೆ.ಆರ್.ಸಿ.ಇ.ಎಸ್ ಕಾಲೇಜಿನಲ್ಲಿ ಇಂಗ್ಲೀಷಿನ ಪ್ರೊ. ಚಿನಗುಡಿ, ಹಿಂದಿಯ ಪ್ರೊ.ಶರ್ಮಾ ಹಾಗೂ ಕನ್ನಡದ ಪ್ರೊ. ಹತ್ತಿ ಹಾಗೂ ಪ್ರೊ. ಸಿದ್ದಣ್ಣವರ್ ಚೆನಾಗಿಯೇ ಕವಿತೆಗಳನ್ನು ಬೋಧಿಸುತ್ತಿದ್ದರು. ಆ ದಿನಗಳಲ್ಲಿ ನನ್ನ sceptical ಮನೋಧರ್ಮಕ್ಕೆ ಹೊರತಾಗಿಯೂ ಅಡಿಗರ “ಕಟ್ಟುವೆವು ನಾವು” ಕವಿತೆಯ ಅದರ್ಶ ನನಗಿಷ್ಟವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಅದರ ಲಯ ನನಗೆ ಹಿಡಿಸಿತ್ತು.
ಆಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿಎ ಓದುವಾಗ ನಮ್ಮ ನಮ್ಮ ಪ್ರಧಾನ ವಿಷಯಗಳಿಗೆ (ಮೇಜರ್) ಮತ್ತು ಎರಡು ಐಚ್ಛಿಕ (ಮೈನರ್) ವಿಷಯಗಳಿಗೆ ಆದ್ಯತೆ ಕೊಟ್ಟು ಓದಿ ಮುಗಿಸಿ ಇನ್ನುಳಿದಂತೆ ಬೇಸಿಕ್ ಇಂಗ್ಲಿಷ್ ಮತ್ತು ಕನ್ನಡಕ್ಕೆ ನಿಗದಿಯಾಗಿದ್ದ ಪಠ್ಯಪುಸ್ತಕಗಳಲ್ಲಿಯ ಕವಿತೆಗಳನ್ನು ನಾಳೆಯೋ ನಾಳಿದ್ದೋ ಅವುಗಳ ಪರೀಕ್ಷೆ ಇವೆ ಎನ್ನುವಾಗ ಹಗಲು ರಾತ್ರಿ ಓದಿ ಪೇಪರ್ ಬರೆಯುತ್ತಿದ್ದೆವು. ಓದುವದೆಂದರೇನು? ಯಾರೋ ಒಬ್ಬ ಗಟ್ಟಿಯಾಗಿ ಓದುತ್ತಿದ್ದ, ಉಳಿದವರು ಕೇಳುತ್ತಿದ್ದೆವು.
ನಡುನಡುವೆ “ಸಿಗರೇಟ ಏನ್ ನೀ ಒಬ್ನ ಸೇದತೀಯೋ ಏನ್ ನಮ್ ಕಡೇನೂ ಸ್ವಲ್ಪ ಸಾಗಸ್ತೀಯೋ ಮಗನೇ” ಇತ್ಯಾದಿ ಪಠ್ಯಪುಸ್ತಕ ವಾಚಕನನ್ನು ಬೈಯ್ಯುತ್ತ “ವರ್ಡ್ಸ್ವರ್ಥ್ ಈಜ್ ಎಗೇನ್ ಇನ್ ಸ್ಯಾಡ್ ಮೂಡ್” ಎಂದೆಲ್ಲ ನಗಾಡುತ್ತ ಹಂಗೂ ಹಿಂಗೂ ಮಾಡಿ ಅವುಗಳನ್ನು ಪಾಸಾಗಲು ಅಗತ್ಯವಾದ ಮೂವತ್ತೈದು ಅಂಕಗಳನ್ನು ಗಳಿಸುತ್ತಿದ್ದೆವು. ನನ್ನೆರಡು ಐಚ್ಛಿಕ ವಿಷಯಗಳಲ್ಲಿ ಕನ್ನಡವೂ ಒಂದಾಗಿತ್ತಾದ್ದರಿಂದ ಕನ್ನಡ ಸಾಹಿತ್ಯದ ಸಂಪರ್ಕ ಸ್ವಲ್ಪ ಹೆಚ್ಚಾಗಿ ಬರಲು ಅನುಕೂಲವಾಯಿತು. ಗುರುಲಿಂಗ ಕಾಪಸೆ, ಬುದ್ದಣ್ಣ ಹಿಂಗಮಿರೆ ಕನ್ನಡ ಸಾಹಿತ್ಯ ಪಠ್ಯಗಳನ್ನು ಬೋಧಿಸುತ್ತಿದ್ದರು. ಉತ್ತರ ಪತ್ರಿಕೆಯ ಮೌಲ್ಯಮಾಪನೆಯ ಸಂದರ್ಭದಲ್ಲಿ ಡಾ. ಗುರುಲಿಂಗ್ ಕಾಪಸೆಯವರು ನನ್ನ ಉತ್ತರಪತ್ರಿಕೆ ಹಿಡಿದು “ನಮ್ಮ ಸ್ಟುಡೆಂಟ್ ಹೆಂಗ್ ಬರ್ದಿದಾನ್ ನೋಡ್ರಿ” ಎಂದು ಇತರ ಮೌಲ್ಯಮಾಪಕರಿಗೆ ಅಭಿಮಾನದಿಂದ ತೋರಿಸಿದ್ದರಂತೆ.
ನಾನು ಮೊದಲ ಕವಿತೆ ಬರೆದದ್ದು ಧಾರವಾಡದ ಕರ್ನಾಟಕ ಕಾಲೇಜಿಗೆ ಬಂದ ವರ್ಷ (೧೯೭೫). ಕಾಲೇಜಿನ ಹಳೆಯ ಗ್ರಂಥಾಲಯದ ಪ್ರವೇಶದ್ವಾರದ ಒಂದು ಬದಿಗೆ ಇದ್ದ ನೋಟಿಸ್ ಬೋರ್ಡ್ ವಿದ್ಯಾರ್ಥಿಗಳು ತಮ್ಮಲ್ಲಿ ಸುಪ್ತವಾಗಿದ್ದ ಪ್ರತಿಭೆಯ ಅಭಿವ್ಯಕ್ತಿಗೆ ಅವಕಾಶವೀಯಲೆಂದೇ ಇದ್ದಂತಿತ್ತು. ಅಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಾವು ಬರೆದ ಕವಿತೆ, ಚಿತ್ರ, ಚುಟುಕು ಇತ್ಯಾದಿಗಳನ್ನು ಅಂಟಿಸಿ ಸಹಪಾಠಿಗಳ ಗಮನಕ್ಕೆ ಬರುತ್ತಿದ್ದರು. ನನ್ನ ಪ್ರಾರಂಭಿಕ ಕವಿತೆಗಳು ಕಂಗೊಳಿಸಿದ್ದೂ ಅಲ್ಲೇ. ಶೆಲ್ಲಿ, ಕೀಟ್ಸ್ ಬೈರನ್, ಮಿಲ್ಟನ್ ಮೊದಲಾದವರನ್ನಾಗಲೀ, ಏಟ್ಸ್, ಎಲಿಯಟ್ ರನ್ನಾಗಲೀ ಕನ್ನಡದ ಹಳಗನ್ನಡದ ಅಥವಾ ಹೊಸಗನ್ನಡದ ಕವಿ ಸಾಹಿತಿಗಳನ್ನಾಗಲೀ ನಾನು ಕ್ಲಾಸ್ ರೂಂಗಳಲ್ಲಿ ಕಲಿಯಲಿಲ್ಲ. ಏಕೆಂದರೆ ನನ್ನ ಪ್ರಧಾನ ವಿಷಯ ಚರಿತ್ರೆಯಾಗಿತ್ತು. ನನ್ನ ಸಾಹಿತ್ಯದ ಓದು ಏನಿದ್ದರೂ ಕ್ಲಾಸ್ ರೂಂ ಶಿಕ್ಷಣದ ಔಪಚಾರಿಕ ಚೌಕಟ್ಟಿನ ಹೊರಗೇ ಬೆಳೆದದ್ದು. ಆಮೇಲಾಮೇಲೆ ನಾನು ಇತಿಹಾಸಕ್ಕಿಂತ ಸಾಹಿತ್ಯವನ್ನೇ ಹೆಚ್ಚಾಗಿ ಓದುತ್ತಿದ್ದೆ.
ನಾನು ಕವಿತೆಗಳನ್ನು ಬರೆದದ್ದು, ಕವಿಯಾದದ್ದು ಆಕಸ್ಮಿಕ. ಕೆಲವರು ಎಷ್ಟೊಂದು ಕವಿತೆಗಳನ್ನು ದಿನಾಲೂ ಬರೆಯುತ್ತಾರೆ. ಡಜನ್ ಗಟ್ಟಲೇ ಕವನಸಂಕಲನಗಳನ್ನು ಪ್ರಕಟಿಸುತ್ತಾರೆ, ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಥರಾ. ನಾನು ಬರೆದದ್ದು ಕಡಿಮೆ. ಇದು ವರೆಗೆ ನಾನು ಪ್ರಕಟಿಸಿದ್ದು “ವಿಶ್ವವಿದ್ಯಾಲಯದ ವಾಚನಾಲಯದೊಳಗೆ”, (೧೯೯೨) ಮತ್ತು “ಕ್ಷಮಿಸು ತಂದೆ” (೨೦೦೭) ಎಂಬ ಎರಡು ಸಂಕಲನಗಳನ್ನು ಮಾತ್ರ. ಈ ಅರ್ಥದಲ್ಲಿ “ನಾನು ತೀರ ಅಷ್ಟು ಕಾವ್ಯೋದ್ಯಮಿ ಅಲ್ಲ” ಅಂತ ನನ್ನ ಮೊದಲ ಸಂಕಲನದಲ್ಲಿ ಹೇಳಿಕೊಂಡಿದ್ದೆ. ನನ್ನ ಸಂಕಲನಗಳಲ್ಲಿ ಮೊದಲಿನದು ಜಿ.ಎಸ್.ಆಮೂರ್ ಮತ್ತು ಎರಡನೆಯದು ಪ್ರತಿಭಾ ನಂದಕುಮಾರ್ ಅವರ ಮುನ್ನುಡಿಗಳೊಂದಿಗೆ ಪ್ರಕಟವಾದವು. ಮೊದಲಿನದು ಆ ವರ್ಷ ಕಾವ್ಯ ಪ್ರಕಾರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಯಿತು. ಅದರ ಕುರಿತು ಒಂದು ಬಳಗದಿಂದ ಅಪಸ್ವರ ಎದ್ದಿತು. ಹತ್ತಾರು ಜನ ಜಂಟಿ ಹೇಳಿಕೆಯೊಂದರಲ್ಲಿ ಆ ಆಯ್ಕೆ ಅನುಚಿತವೆಂದು ಪತ್ರಿಕೆಯಲ್ಲಿ ಬರೆದರು.
ಅದೆಲ್ಲಾ ಆದ ಕೆಲವು ವರ್ಷಗಳ ನಂತರ ಅದಕ್ಕೆ ಸಹಿ ಹಾಕಿದ್ದ ರಂಗಕರ್ಮಿ ಸಿಜಿಕೆ ಒಮ್ಮೆ ಧಾರವಾಡಕ್ಕೆ ಬಂದಿದ್ದರು. ವಿಶ್ವವಿದ್ಯಾಲಯದ ಗೆಸ್ಟ್ ಹೌಸ್ ನಲ್ಲಿ ಅವರು ನಾನು ಮತ್ತು ಸಿ. ಬಸವಲಿಂಗಯ್ಯ ಮಾತನಾಡುತ್ತಿರಬೇಕಾದರೆ ಅದರ ಕುರಿತ ಚರ್ಚೆ ಬಂದಾಗ “ಹೌದಾ, ಅದೇನೋ ಯಾರೋ ಒಂದು ಹೇಳಿಕೆ ರೆಡಿ ಮಾಡಿಕೊಂಡು ಬಂದಿದ್ದರಪ್ಪ, ಅವರ ನಿಲುವು ಸರಿ ಇರಬಹುದೆಂದುಕೊಂಡು ನಾನು ಸಹಿ ಮಾಡಿದ್ದೆ” ಎಂದರು. ಅದಕ್ಕೆ ಸಹಿ ಹಾಕಿದ ಇನ್ನೊಬ್ಬ ಮೊದಲು ಇಲ್ಲೇ ಹುಬ್ಬಳ್ಳಿಯಲ್ಲಿರುತ್ತಿದ್ದ, ನನ್ನ ಕವಿತೆಗಳನ್ನು ನನ್ನ ಮುಂದೆ ಮನಸಾರೆ ಹೊಗಳಿ ಮುಖಸ್ತುತಿ ಮಾಡುತ್ತಿದ್ದ. ಆ ಜಂಟಿ ಹೇಳಿಕೆಯ ಒಟ್ಟು ಧ್ವನಿ ಹೇಗಿತ್ತೆಂದರೆ ಆ ವರ್ಷದಲ್ಲಿ ಜಿ.ಎಸ್.ಶಿವರುದ್ರಪ್ಪ, ಅನಂತಮೂರ್ತಿ, ಜಿ.ಎನ್.ಮೋಹನ್, ಅಬ್ದುಲ್ ರಶೀದ್, ರವಿ ಉಪಾಧ್ಯೆ ಹೀಗೆ ಹಲವರ ಕವನ ಸಂಕಲನಗಳು ಪ್ರಕಟವಾಗಿವೆ. ಅವರಲ್ಲಿ ಯಾರಿಗೆ ಕೊಟ್ಟರೂ ಆಗಿತ್ತು, ಅಶೋಕ ಶೆಟ್ಟರ್ ಗೆ ಯಾಕೆ ಕೊಟ್ಟಿರಿ? ಎಂಬಂತಿತ್ತು. ಸ್ವತ: ಆ ವರ್ಷ ಅಂದರೆ ೧೯೯೨ರಲ್ಲಿ ಕವನ ಸಂಕಲನ ಪ್ರಕಟಿಸಿದ್ದ ಗೆಳೆಯರು, ಉದಾ: ಜಿ.ಎನ್.ಮೋಹನ್, ನನ್ನನ್ನು ಅಭಿನಂದಿಸಿ ಪತ್ರ ಬರೆದಿದ್ದರು ಆ ಮಾತು ಬೇರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೋದಾಗ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ “ಅದಕ್ಕ್ಯಾಕ್ ತೆಲಿ ಕೆಡಿಸಿಕೋತೀರಿ? ಪುಸ್ತಕ ಆಯ್ಕೆಗೆ ಒಂದ್ ವಿಧಾನ ಇರತೈತಿ, ಆ ಪ್ರಕಾರ ನಿಮ್ಮ ಸಂಕಲನಕ್ಕ ಪುರಸ್ಕಾರ ಬಂದೈತಿ.” ಎಂದರು. ಒಂದು ವೈಯಕ್ತಿಕ ಕಾರಣಕ್ಕಾಗಿ ಆ ವರ್ಷದ ಆಯ್ಕೆಯ ಕುರಿತು ಅಸಂತುಷ್ಟರಾಗಿದ್ದವರ ಹಿನ್ನೆಲೆ ನನಗೆ ಆಮೇಲೆ ಖ್ಯಾತ ವಿಮರ್ಶಕರೊಬ್ಬರಿಂದ ತಿಳಿದು ಬಂತು. ನನಗಾಗಿ ನಾನೇ ಲಾಬಿ ಮಾಡಿಕೊಳ್ಳುವದಾಗಲೀ ಇನ್ನೊಬ್ಬರಿಂದ ಮಾಡಿಸುವದಾಗಲೀ, ಪ್ರಶಸ್ತಿ ಪುರಸ್ಕಾರ ಬರುವಂತೆ ನೋಡಿಕೊಳ್ಳುವದಾಗಲೀ ಇಂಥ ನೈಪುಣ್ಯ ಮತ್ತು ಆಸಕ್ತಿಗಳು ನನಗೆ ಅಂದೂ ಇರಲಿಲ್ಲ, ಇಂದೂ ಇಲ್ಲ.
ಏನೇ ಇರಲಿ, ಕವಿತೆಯ ರಚನೆ ಏಕಾಗ್ರತೆಯನ್ನು ಬಯಸುತ್ತದೆ. ಒಮ್ಮೊಮ್ಮೆ ಕವಿತೆ ಬರೆಯುವ ಮುನ್ನ ನಿಮ್ಮ ತಯಾರಿ ಏನು ಎಂದು ಕೆಲವರು ಕೇಳುತ್ತಾರೆ. ಅಡಿಗರ ಮಾತೊಂದಿದೆ: “ಕವಿಯ ಮನಸಿನಲ್ಲಿ ಇರುವ ಭಾವವಾಗಲೀ ಅನುಭವವಾಗಲೀ ಭಾಷೆಯಲ್ಲಿ ಪ್ರತಿಮೆಗಳ ಮೂಲಕ ವ್ಯಕ್ತಗೊಂಡಾಗ ಅದು ಏನಾಗುತ್ತದೆಂಬುದು ಪೂರ್ವನಿಶ್ಚಿತವಲ್ಲ.” ಇದು ನಿಜ. ನನ್ನ ವಿಷಯದಲ್ಲಿ ಮೂರ್ತವಾಗಿ ಒಂದು ಕಾವ್ಯವಸ್ತು ಅಂತ ಮನಸಿನಲ್ಲಿದ್ದರೆ ವಾಸ್ತವವಾಗಿ ಕವಿತೆ ಅಕ್ಷರಗಳಾಗಿ ಹಾಳೆಗಳ ಮೇಲೆ ಮೂಡುವ ಬಹಳಷ್ಟು ಮೊದಲೇ ಸ್ಥೂಲವಾದ ಭಾವವಲಯಗಳನ್ನು ರೂಪಿಸುವ ಶಬ್ದಜಾಲವೊಂದು ಆಕಾರ ತಳೆಯುತ್ತದೆ. ಕವಿತೆ ಎಂಬುದು ಒಂದೇಟಿಗೆ ಕುಳಿತು ಕೆತ್ತಬಹುದಾದ ಹುಂಬ ಸೃಷ್ಟಿಯಲ್ಲ. ಒಮ್ಮೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಸಿದ್ಧ ಬಟ್ಟೆಗಳ ಅಂಗಡಿಗಳ ಮುಂದೆ ಹೊರಟಾಗ ಮನದಲ್ಲಿ ಮೂಡಿದ ಸಾಲುಗಳು (ಸಾಲು ಹೊಜೈರಿ ಅಂಗಡಿಗಾಜುಗಳಲ್ಲಿ ನೇತ ಮೊಲೆ ಇಲ್ಲದ ಮೊಲೆಕಟ್ಟುಗಳೂ ಉದ್ರೇಕಿಸುತ್ತವೆ) ಮನಸಿನ ಯಾವ ಮೂಲೆಯಲ್ಲಿ ಎಷ್ಟು ಕಾಲ ಬಿದ್ದುಕೊಂಡಿದ್ದವೋ, ಹಲವು ವರ್ಷಗಳ ನಂತರ “ಕೂಗಳತೆಯ ವಿಸ್ಮಯಗಳ ದಾಟದೇ” ಎಂಬ ಶೀರ್ಷಿಕೆಯಲ್ಲಿ “ಪ್ರಜಾವಾಣಿ” ಯಲ್ಲಿ ಪ್ರಕಟವಾದ ನನ್ನ ಕವಿತೆಯ ನೇಯ್ಗೆಯಲ್ಲಿ ಆ ಸಾಲುಗಳು ಕೆಲ ನೂಲುಗಳಾದಾಗ ನನಗೇ ವಿಸ್ಮಯವೆನಿಸಿತ್ತು.
ಇನ್ನೊಮ್ಮೆ ಧಾರವಾಡದ ನರ್ಸಿಂಗ್ ಹೋಂ ಒಂದರಲ್ಲಿ ನನ್ನ ತಂದೆಯನ್ನು ಅಡ್ಮಿಟ್ ಮಾಡಿದ್ದ ಸಂದರ್ಭದಲ್ಲಿ ಅವರು ಮಂಚದ ಮೇಲೆ ಮಲಗಿದ್ದು ನಾನು ನನ್ನ ಮಗನೊಂದಿಗೆ ಪಕ್ಕದ ಸ್ಟೂಲ್ ಮೇಲೆ ಕುಳಿತಾಗ ಇದ್ದಕ್ಕಿದ್ದಂತೆ ಒಂದು ಪದ್ಯ ಎಷ್ಟು ತೀವ್ರವಾಗಿ ಒದ್ದುಕೊಂಡು ಬಂದಿತೆಂದರೆ ನನಗೆ ತಕ್ಷಣಕ್ಕೆ ಒಂದೆರಡು ಹಾಳೆಗಳು ಬೇಕಾದವು. ಆ ಕವಿತೆಯೂ “ಕ್ಷಮಿಸು ತಂದೆ” ಎಂಬ ಶೀರ್ಷಿಕೆಯ ಪದ್ಯವಾಗಿ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿತು. ನಾವೇ ಸೃಷ್ಟಿಸಿದ ಒಂದು ಕವಿತೆ ತನ್ನ ಚೆಲುವಿನಿಂದ ಒಮ್ಮೊಮ್ಮೆ ನಮ್ಮನ್ನೇ ಮೆಚ್ಚಿಸಿ ಸಾರ್ಥಕ್ಯದ ಭಾವ ಮೂಡಿಸುತ್ತದೆ. ಕವಿತೆ ಹುಟ್ಟಿಯಾದ ತತ್ ಕ್ಷಣವನ್ನು ನಾನು ಬಣ್ಣಿಸುವದಾದರೆ, ಮೈಕ್ರೋಸ್ಕೋಪಿಕ್ ಅಣುವೊಂದು ಅಂಡದೊಂದಿಗೆ ಬೆರೆತ ಗರ್ಭಧಾರಣೆಯ ಕ್ಷಣದಿಂದ ಕ್ರಮೇಣ ಕಣ್ಣು,ಮೂಗು,ಕೈ,ಕಾಲು ಮುಂತಾದ ಅಂಗಗಳನ್ನು ಮೂಡಿಸಿಕೊಳ್ಳುತ್ತ ರೂಪುಗೊಂಡ ಮಗುವಾಗಿ ಅನಾವರಣಗೊಳ್ಳುವ ವರೆಗಿನ ಪ್ರೊಕ್ರಿಯೇಟಿವ್ ಪ್ರಕ್ರಿಯೆಯ ಸಂಕೀರ್ಣತೆಯನ್ನು ಕ್ರಿಯೇಟಿವ್ ಪಾತಳಿಗೆ ರೂಪಾಂತರಿಸಿದರೆ ಅದು ಕವಿತೆಯ ಹುಟ್ಟಿನ ಸಾದೃಶ್ಯವನ್ನು ವಿವರಿಸುತ್ತದೆ. ಇಡೀ ಕವಿತೆಯನ್ನೋದಿಕೊಂಡಾಗ, ಅದರಲ್ಲಿ ಸೃಷ್ಟಿಶೀಲ ಕ್ಷಣಗಳ ಅನಿರೀಕ್ಷಿತ ಅಂಶಗಳೂ ಬೆರೆತಿದ್ದರೆ ಅಚ್ಚರಿಯಿಂದ ಕೂಡಿದ ತೃಪ್ತಿ ಇರುತ್ತದೆ. ದುರಂತ ಸಾವಿಗೀಡಾದ ಗಗನಯಾತ್ರಿ ಕಲ್ಪನಾ ಚಾವ್ಲಾ ಕುರಿತು ಹಿಂದೊಮ್ಮೆ “ವಿಜಯ ಕರ್ನಾಟಕ” ದಲ್ಲಿ ಪ್ರಕಟಗೊಂಡಿದ್ದ ನನ್ನ ಪದ್ಯದಲ್ಲಿ ಅವಳ ಸಾವಿನ ಕುರಿತಾಗಿರುವ ಸಾಲುಗಳಲ್ಲಿ “ಕೊಲಂಬಿಯಾ ಕೊಲಂಬಿಯಾ..,/ ಎಲ್ಲಿ ಕೊಲಂಬಿಯಾ? /ಸಿಡಿದು ಹಾರಿದವದರ ಚೂರುಗಳು/ ಅದರೊಡನೆ ನಮ್ಮ ಮನೆಯಂಗಳದ ಸುಂದರ ಹೂವೊಂದರ/ ಪಕಳೆಗಳೂ ಹಾರಿದವು ದಿಗ್ದೆಸೆಗಳಲ್ಲಿ” ಎಂಬ ರೂಪಕ ಅನಿರೀಕ್ಷಿತವಾಗಿ ದಕ್ಕಿದ್ದು.
ನನ್ನ ಕಾವ್ಯ ನನಗೇನು ಕೊಟ್ಟಿದೆ? ಇದು ವ್ಯವಹಾರದ ಮಾತೇ ಅಲ್ಲ, ಕಳೆದ ಮೂವತ್ತು ವರ್ಷಗಳಲ್ಲಿ ಕವಿತೆ ನನಗೆ ಇಪ್ಪತ್ತೈದೋ ಮೂವತ್ತೋ ಸಾವಿರ ರೂಪಾಯಿ ಕೊಟ್ಟಿರಬಹುದು. ಆದರೆ ಕಾವ್ಯ ಕವಿಯ ವ್ಯಕ್ತಿತ್ವಕ್ಕೆ ಸೃಷ್ಟಿಶೀಲ ಹುಡುಕಾಟಗಳ ಆಯಾಮವೊಂದನ್ನು ಕೊಡುತ್ತದೆ. ನನ್ನ ಕವಿತೆ ಓದಿ ಪತ್ರ ಬರೆಯುವವರ, ಮುಖತ: ಅದರ ಕುರಿತು ಹೇಳುವವರ ಮೆಚ್ಚುಗೆ, ತೃಪ್ತಿ ನನ್ನ ತೃಪ್ತಿಯೂ ಹೌದು. ಹೀಗಾಗಿ ಕವಿತೆ ಬರೆಯುವದು ಬೇಡ ಅಂತ ಅನ್ನಿಸಿದ್ದಿಲ್ಲ. ವಾಸ್ತವವಾಗಿ ವರ್ಷಗಟ್ಟಲೇ ಕವಿತೆ ಬರೆಯದೇ ಹೋದರೆ ಚಿಂತೆ ಕವಿಯುತ್ತದೆ. ಬಹಳ ಬರೆಯಬೇಕು ಎಂದೇನೋ ಅನ್ನಿಸುತ್ತದೆ, ಆದರೆ ಆಡಿದ್ದೆಲ್ಲವನ್ನೂ ಹಾಡಾಗಿಸಬೇಕೆಂಬ, ಕಂಡದ್ದೆಲ್ಲವನ್ನೂ ಕವಿತೆಯಾಗಿಸಬೇಕೆಂಬ ಹಟ ನನಗಿಲ್ಲ.
ಬಂಡಾಯ ಕಾವ್ಯದ ಬಿಸುಪು ಈಗಿಲ್ಲ. ಬಹಳ ದಿನಗಳ ವರೆಗೆ ತುಂಬ ಏರುದನಿಯಲ್ಲಿ ಕೂಗಾಡಿ ಅದು ದಣಿದಿದೆ. ಈಗ ಹಲವು ಕಾವ್ಯ ಮಾರ್ಗಗಳಿವೆ. ಎಲ್ಲರೂ ಪ್ರತ್ಯೇಕ ಪ್ರತ್ಯೇಕವಾಗಿ ಏನೋ ತುಂಬ ವಿಭಿನ್ನವಾದುದೊಂದರ ಹುಡುಕಾಟದಲ್ಲಿರುವಂತೆ ತೋರುತ್ತಾರೆ. ವೈಯಕ್ತಿಕ ನೆಲೆಯ ಶೋಧಗಳತ್ತ ಮತ್ತೆ ಕವಿಮನಸುಗಳು ಹೊರಳುತ್ತಿವೆ ಅಂತ ನನಗನ್ನಿಸಿದ್ದಿದೆ. ಅಮೂರ್ ಅವರು ಕಳೆದ ದಶಕದ ಕಾವ್ಯಕೃತಿಗಳನ್ನು “ನವ್ಯೋತ್ತರದ ಒಂದು ಪ್ರಭೇದವಾದ ಸ್ವಾಭಿಮುಖ ಕೃತಿಗಳು” ಎಂದು ಒಂದು ಸಂದರ್ಭದಲ್ಲಿ ಗುರುತಿಸಿದ್ದರು. ವಿಮರ್ಶೆಯ ಮಾತು ಏನೇ ಇರಲಿ, ಒಬ್ಬ ಕವಿ-ಕವಯಿತ್ರಿ ಮತ್ತೊಬ್ಬರ ಕವಿತೆಯನ್ನು ಓದುವಾಗ ಒಂಥರದ ಕ್ರಿಯೇಟಿವ್ ಅಸೂಯೆಯಿಂದ ಓದಬಹುದಾದ ಗುಣವಿರುವ ಕಾವ್ಯ ಸೃಷ್ಟಿ ಅಷ್ಟಾಗಿಲ್ಲ ಅನ್ನಿಸುತ್ತದೆ.
ನನ್ನ ಇನ್ನೊಂದು ಕವನ ಸಂಕಲನ ಪ್ರಕಟಿಸಬೇಕೆಂದು ಅನ್ನಿಸುತ್ತಿದೆ. ಈಗೀಗ ಪುಟ್ಟ ಪುಟ್ಟ ಕವಿತೆಗಳ ರಚನೆ ನನಗೆ ಹೆಚ್ಚು ಮುದ ನೀಡುತ್ತಿದೆ.
(ಈ ಬರಹ ಬಾಕಿನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ “ಗಾಂಧಿ ಬಜಾರ್ ಪತ್ರಿಕೆ” ಎಂಬ ಸಾಹಿತ್ಯ ಮಾಸಿಕಕ್ಕಾಗಿ ಕವಿಮಿತ್ರ ವಿಜಯಕಾಂತ್ ಪಾಟೀಲ್ ಮಾಡಿದ್ದ ನನ್ನ ಸಂದರ್ಶನದ ಕೆಲ ಅಂಶಗಳನ್ನು ಒಳಗೊಂಡಿದೆ. ಆ ಮಾಸಿಕದಲ್ಲಿ ಇದು ಡಿಸೆಂಬರ್ ೨೦೦೩ರಲ್ಲಿ ಪ್ರಕಟವಾಗಿತ್ತು).






ಅಶೋಕ ಶೆಟ್ಟರ್ ಹೇಳಿದಂತೆ ಕವಿತಾ ಸೃಷ್ಟಿ ಒಂದು ಅಕಸ್ಮಿಕ. ಉದಾಹರಣೆಗೆ ಹೇಳುವುದಾದರೆ ನಾನು 1972ರಲ್ಲಿ ಎಂ ಏ. ವಿದ್ಯಾರ್ತಿಯಾಗಿದ್ದಾಗ ಯುನಿವರ್ಸಿಟಿ ತುಂಬಾ ದೂರವಿತ್ತು. ನನಗೆ ಅಷ್ಟೊಂದು ದೂರ ಎಪ್ರಿಲ್ಲಿನ ಕಡು ಬೇಸಿಗೆಯಲ್ಲಿ ನಡೆ ನಡೆದು ಇನ್ನೂ ಎಷ್ಟು ನಡೆಯಬೇಕಪ್ಪ ಎಂದು ಮರದ ಅಡಿಯಲ್ಲಿ ಕುಳಿತೆ. ಯಾಕೆಂದರೆ ಬಸ್ಸಿಗೆ ಹಣ ಕೊಡಲು ನನ್ನಲ್ಲಿ ಹಣವಿರಲಿಲ್ಲ. ಆಗ ನಾನೊಂದು ಕವಿತೆ ಬರೆದೆ. `ಮುಗಿಯದ ಹಾದಿ’ ಅದನ್ನು `ಅಡಿಗರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ `ಸಾಕ್ಷಿ’ ಗೆ ಕಳುಹಿಸಿದೆ. ಅದು ಪ್ರಕಟಗೊಂಡಿತು. ಕಾವ್ಯ ಸೃಷ್ಟಿ ಅನುಭವ ಮತ್ತು ಕಲ್ಪನೆಗಳ ಸಂಗಮ ಎನ್ನಬಹುದೇನೋ?