
ಕಾಡಿನ ರುದ್ರಗಂಭೀರ ಸ್ವರೂಪ, ಅಲ್ಲಿಯ ಆದಿಮವೆನ್ನಿಸುವ ಮೌನ, ಅದರ ಹಸಿರು-ಸಮೃದ್ಧಿಗಳೆಲ್ಲ ನನಗೆ ಇಷ್ಟ. ಧಾರವಾಡದಿಂದ ಹತ್ತಾರು ಕಿಲೋಮೀಟರು ದೂರ ಪಯಣಿಸಿದರೆ ನಾನು ಕಾಡಿನಲ್ಲಿರುತ್ತೇನೆ. ಹತ್ತು ಹನ್ನೆರಡು ವರ್ಷಗಳ ಹಿಂದೆ ಧಾರವಾಡಕ್ಕೆ ಸಮೀಪದ ಕಲಕೇರಿಯೆಂಬ ಅರಣ್ಯಕ್ಕೆ ಅಂಟಿಕೊಂಡಂತಿರುವ ಊರಿನ ಬಳಿ ಗೆಳೆಯನೊಬ್ಬ ಕಾಡಿನ ನಡುವೆಯೇ ಐದೆಕರೆ ಜಮೀನು ಕೊಂಡಿದ್ದ. ಆ ಜಮೀನಿನ ಒಂದು ಅಂಚಿನಲ್ಲಿ ಒಂದು ಮನೆಯೂ ಇತ್ತು. ನನ್ನ ಬಳಿ ಆಗ ಇದ್ದ ಹೀರೋಪುಕ್ ಎಂಬ ಪುಟ್ಟ ದ್ವಿಚಕ್ರ ವಾಹನ ಏರಿಕೊಂಡು ಆಗಾಗ ನಾನು ಗೋವಾ ರಸ್ತೆಯಲ್ಲಿ ಸಾಗಿ ಮುಕ್ಕಾಲು ಗಂಟೆ ದಾರಿ ಕ್ರಮಿಸಿ ಅವನಲ್ಲಿಗೆ ಹೋಗಿ ಕಾಡಿನ ಮಧ್ಯೆ ಇರುತ್ತಿದ್ದೆ. ಆ ಮನೆಗೆ ಸಮೀಪದಲ್ಲೇ ಇದ್ದ ಚಿಕ್ಕ ಕೆರೆಯೊಂದರ ದಂಡೆಯಲ್ಲಿ ಕುಳಿತು ಸಂಜೆ ಕಳೆಯುತ್ತಿದ್ದೆವು. ರಾತ್ರಿ ಮನೆಯಂಗಳದಲ್ಲಿ ಬೆಂಕಿ ಉರಿಸಿಕೊಂಡು ಅದರ ಬೆಚ್ಚನೆಯ ಶಾಖದ ಸುಖ ಅನುಭವಿಸುತ್ತ ಚಂದ್ರಶೇಖರ ಕಂಬಾರರ “ಹೇಳತೇನ ಕೇಳ” ಎಂಬ ಕ್ಯಾಸೆಟ್ ನ ಕೆಲ ಮಾದಕ ಹಾಡುಗಳನ್ನು ಕೇಳುತ್ತ ಹರಟುತ್ತಿದ್ದೆವು.
ಬೆಳಿಗ್ಗೆ ಸಾವಿರಾರು ಹಕ್ಕಿ-ಪಕ್ಷಿಗಳ ವಿವಿಧ ಬಗೆಯ ಚಿಲಿಪಿಲಿಗಳಿಗೆ ಕಿವಿಯಾಗುತ್ತಿದ್ದೆವು. ಆ ನನ್ನ ಗೆಳೆಯ ಆ ಊರಿನಿಂದಲೂ ನನ್ನ ಭಾವಲೋಕದಿಂದಲೂ ನಿರ್ಗಮಿಸಿಯಾದ ಮೇಲೂ ನಾನು ಅದೇ ನನ್ನ ಹೀರೋಪುಕ್ ಗಾಡಿಯನ್ನು ಹಳಿಯಾಳಕ್ಕೆ ಹೋಗುವ ರಸ್ತೆಯಲ್ಲಿ ಓಡಿಸಿಕೊಂಡು ಹೋಗಿ ಮಾವಿನಕೊಪ್ಪ ಎಂಬ ಊರಿನ ಸಮೀಪ ಬಲಕ್ಕೆ ತಿರುಗಿದರೆ ಸಿಗುವ ಮಣ್ಣರಸ್ತೆಗುಂಟ ಸಾಗಿ ಕಲಕೇರಿ ಅರಣ್ಯದೊಳಗೆ ಹೊಕ್ಕು ಹೊರಬಿದ್ದು ಮುಗದ ಎಂಬ ಗ್ರಾಮಕ್ಕೆ ಬಂದು ಅಲ್ಲಿಂದ ಗೋವಾ ರಸ್ತೆಯನ್ನು ಕೂಡಿ ಮತ್ತೆ ಮಬ್ಬುಗತ್ತಲು ಆವರಿಸಿಕೊಳ್ಳುವ ಹೊತ್ತಿಗೆ ಧಾರವಾಡಕ್ಕೆ ಬರುವ ಅಭ್ಯಾಸವನ್ನು ಸ್ವಲ್ಪ ಕಾಲ ಇಟ್ಟುಕೊಂಡಿದ್ದೆ.
ಈಗ ನನಗೆ ಕಾಡಿಗೆ ಹೋಗಬೇಕೆನ್ನಿಸಿದರೆ ನನ್ನ ಕಾರು ಸಾಗುವದು ಹಳಿಯಾಳ ರಸ್ತೆಯಲ್ಲಿ. ಅಲ್ಲಿಂದ ಮುಂದೆ ದಾಂಡೇಲಿ-ಹಣಸಿ ರಕ್ಷಿತಾರಣ್ಯದಲಿ ಓಡಾಡಿ ಮುಂದೆ ಉಳವಿಗೆ ಹೋಗಿ ಹಿಂದಿರುಗುವದು. ನಾನು ಕಾಡು ಅಂತ ಬಾಲ್ಯದಲ್ಲಿ ಮೊದಲು ನೋಡಿದ್ದೇ ಉಳವಿ ಜಾತ್ರೆಗೆ ಹೋದಾಗ. ನಾನು ಪ್ರಾಥಮಿಕ ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಬೈಲಹೊಂಗಲದಲ್ಲಿ ಜನ ದೊಡ್ಡ ಪ್ರಮಾಣದಲ್ಲಿ ಹೋಗುತ್ತಿದ್ದುದು ಎರಡು ಜಾತ್ರೆಗಳಿಗೆ: ಒಂದು ಹೊಸ್ತಿಲ ಹುಣ್ಣಿಮೆಯಲ್ಲಿ ನಡೆಯುವ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೊಡಚಿಯಲ್ಲಿರುವ ವೀರಭದ್ರ ದೇವರ ಜಾತ್ರೆ, ಇನ್ನೊಂದು ಮಾಘ ಮಾಸದಲ್ಲಿ ಭಾರತ ಹುಣ್ಣಿಮೆಯಂದು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಉಳವಿಯಲ್ಲಿ ನಡೆಯುವ ಚೆನ್ನಬಸವೇಶ್ವರ ದೇವಸ್ಥಾನದ ಜಾತ್ರೆ.
ಈ ಎರಡು ಜಾತ್ರೆಗಳ ಸಂದರ್ಭದಲ್ಲಿ ಬೈಲಹೊಂಗಲ ಬಸ್ ಸ್ಟ್ಯಾಂಡ್ ನ ಸೀನ್ ನೋಡುವಂತಿರುತ್ತಿತ್ತು. ಮಕ್ಕಳು ಮರಿ ಗಂಟು ಗದಡಿ ಕಟ್ಟಿಕೊಂಡು ಕೂಗಾಡುವ ಚೀರಾಡುವ ಜನರು ಆಗಿನ್ನೂ ಒಂದು ಶಾಶ್ವತ ಕಟ್ಟಡವೂ ಇಲ್ಲದ ಬಸ್ ಸ್ಟ್ಯಾಂಡ್ ಎಂಬ ಹೆಸರಿನ ಬಯಲಲ್ಲಿ ಎಲ್ಲೆಂದರಲ್ಲಿ ನೆರೆದು ಅಲ್ಲಿ ಯಾರ್ಯಾರೋ ಅವರ ಮುಂದಾಳತ್ವ ವಹಿಸಿಕೊಂಡು ಜಾತ್ರೆಗೆ ಹೋಗ ಬಯಸುವವರ ಹೆಸರು ಬರೆದುಕೊಂಡು ಸುಮಾರು ಅರವತ್ತು ಜನರ ಯಾದಿ ಸಿದ್ಧವಾದ ಮೇಲೆ ಅದನ್ನು ಆ ಬಸ್ ಡಿಪೋದ ಕಂಟ್ರೊಲರ್ ಸಾಹೇಬನಿಗೆ ಸಲ್ಲಿಸುತ್ತಿದ್ದರು.
ಹೀಗೆ ಸಲ್ಲಿಕೆಯಾದ ಇಂಥ ಹಲವಾರು ಯಾದಿಗಳನ್ನು ಹಿಡಿದುಕೊಂಡು ಕಂಟ್ರೊಲರ್ ಸಾಹೇಬನು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತ ಪರಿಸ್ಥಿತಿಯನ್ನು ನಿಭಾಯಿಸುತ್ತ ಯಾವ್ಯಾವುದೋ ರೂಟಗಳಲ್ಲಿ ಓಡುವ ಬಸ್ ಗಳನ್ನು ರದ್ದು ಪಡಿಸಿ ಅಥವಾ ಬೇರೆಡೆಯಿಂದ ಬಸ್ ಗಳನ್ನು ತರಿಸಿಕೊಂಡು ಆಯಾಯ ಜಾತ್ರೆಗಳಿಗೆ ಓಡಿಸಿ ಜಾತ್ರಾರ್ಥಿಗಳ ಸಂದಣಿಯನ್ನು ಕರಗಿಸಲು ನೋಡುತ್ತಿದ್ದನು. ರಾತ್ರಿ ಮೈಕೊರೆಯುವ ಚಳಿಯಲ್ಲಿ ಕಾಯುತ್ತ ಕುಳಿತ ಕುಳಿತ ಜನರ ನಿರೀಕ್ಷೆ ಕೊನೆಗೂ ಕೊನೆಗೊಂಡು ಆಮೇಲೆ ಬಸ್ ಬಂದು ಅವರನ್ನು ಹೊತ್ತೊಯ್ಯುತ್ತಿದ್ದವು.

ಹೀಗೆ ಬೆಳದಿಂಗಳು ಹರಡಿದ ಒಂದು ರಾತ್ರಿ ಅದು ವರೆಗೆ ನೋಡಿರದಿದ್ದ ಸೀಮೆಯೊಂದರಲ್ಲಿ ಸಾಗುತ್ತ ನಾನು ಸುದೀರ್ಘವೆನಿಸಿದ ಪಯಣವೊಂದರಲ್ಲಿ ಉಳವಿಗೆ ಹೋದದ್ದು ನನ್ನ ಬಾಲ್ಯಕಾಲದ ಅಸ್ಪಷ್ಟ ನೆನಪುಗಳಲ್ಲೊಂದು. ಇನ್ನುಳಿದಂತೆ ನಾನು ಒಂದು ದಿಕ್ಕಿನಲ್ಲಿ ನನ್ನ ತಾಯಿಯ ತವರಾದ ಸವದತ್ತಿ ತಾಲೂಕಿನ ಸತ್ತಿಗೇರಿಗೋ ಇನ್ನೊಂದು ದಿಕ್ಕಿನಲ್ಲಿ ನಮ್ಮ ಜಿಲ್ಲಾ ಮುಖ್ಯ ಸ್ಥಳವಾದ ಬೆಳಗಾವಿಗೋ ಹೋಗುವಾಗ ಬಯಲ ಸೀಮೆಯ ಆ ಊರುಗಳ ದಾರಿಯುದ್ದಕ್ಕೂ ಅಲ್ಲಲ್ಲಿ ವಾಹನಗಳು, ಊರುಗಳು, ಜನ-ಜಾನುವಾರುಗಳು ಇತ್ಯಾದಿಗಳನ್ನು ನೋಡುತ್ತಿದ್ದೆನಲ್ಲ ಅದೆಲ್ಲ ಏನೂ ಇಲ್ಲದೇ ಗವ್ ಎನ್ನುವ ಕಾಡು, ಅದರ ನಡುವೆ ಅಂಕುಡೊಂಕಿನ ದಾರಿ, ಕಡಿದಾದ ತಿರುವುಗಳು, ಘಟ್ಟಗಳ ಕೆಳಗೆ ಆಳವಾದ ಪ್ರಪಾತಗಳು ಇವೆಲ್ಲ ಭಯಾನಕವೆನಿಸಿದ್ದವು.
ಆಮೇಲೆ ಉಳವಿ ವಿವಿಧ ರೀತಿಯಲ್ಲಿ ನನ್ನ ಯೋಚನೆಗಳಲ್ಲಿ ರೂಪುಗೊಳ್ಳುತ್ತ ಹೋಯಿತು. ಮೊದಲು ಸೂಪಾ ಎಂದು ಕರೆಯಲ್ಪಡುತ್ತಿದ್ದ ಈಗಿನ ಜೊಯಿಡಾ ತಾಲೂಕಿನಲ್ಲಿರುವ ಉಳವಿಗೆ ಪ್ರತಿ ಸಲ ಹೋಗುವಾಗಲೂ ನನ್ನ ಮನಸು ಇಪ್ಪತ್ತೊಂದನೇ ಶತಮಾನದಲ್ಲಿರಲು ನಿರಾಕರಿಸಿದಂತೆ ಹನ್ನೆರಡನೇ ಶತಮಾನಕ್ಕೆ ಜಾರುತ್ತದೆ. ಕಲ್ಯಾಣ ಕ್ರಾಂತಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಾಮಾಜಿಕ ಅಲ್ಲೋಲ ಕಲ್ಲೋಲ, ಸಮಾನ ಆದರ್ಶಗಳನ್ನು ಹೊಂದಿದ ಸಮುದಾಯವೊಂದರ ಕನಸುಗಳು ಹಳವಂಡಗಳಾಗಿ ಮಾರ್ಪಟ್ಟ ತಬ್ಬಲಿತನ, ಸ್ವಸ್ಥ ಸಾಮಾಜಿಕ ಇರುವಿಕೆ, ಸಮಾನತೆಯಂಥ ಆದರ್ಶಗಳ ಹಂಚಿಕೊಂಡವರನ್ನು ಇರಿಯಲು ಸೈನ್ಯ ಬೆನ್ನಟ್ಟಿ ಬಂದ ಕ್ರೌರ್ಯ ಇವೆಲ್ಲ ಮನಸಿನಲ್ಲಿ ಸುತ್ತತೊಡಗುತ್ತವೆ. ಎಲ್ಲಿಯ ಕರ್ನಾಟಕದ ಉತ್ತರದ ತುದಿಯಲ್ಲಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ, ಎಲ್ಲಿಯ ಪಶ್ಚಿಮ ಘಟ್ಟದ ಉಡಿಯಲ್ಲಿ ಆನೆ, ಹುಲಿ, ಚಿರತೆ, ಸಾರಂಗ, ನಾಗಸರ್ಪಗಳಂಥ ಹಿಂಸ್ರ ವನ್ಯಪ್ರಾಣಿಗಳ ಬೀಡಾಗಿ ದುರ್ಗಮ ಭೂಭಾಗದಲ್ಲಿರುವ ಉಳವಿ ಎಂಬ ಗೊಂಡಾರಣ್ಯ…, ಈಗಲೇ ಇಷ್ಟು ದುರ್ಗಮವಾಗಿರುವ ಈ ನೆಲಕ್ಕೆ ಆಗ ಶಿವಶರಣರು ಅಲ್ಲಿಂದ ಅದು ಹೇಗೆ ಬಂದರು, ಇಲ್ಲಿಗೇ ಏಕೆ ಬಂದರು…ಏನಾದರು…
ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣ ಮಧುವರಸರ ಮಕ್ಕಳ ಮದುವೆಯೇ ನೆಪವಾಗಿ ಯಥಾಸ್ಥಿತಿವಾದಿಗಳೂ ಸ್ಥಾಪಿತ ಹಿತಾಸಕ್ತಿಗಳೂ ಉರಿದು ಬಿದ್ದು ಕಲಚೂರಿ ದೊರೆ ಬಿಜ್ಜಳನ ಕಲ್ಯಾಣ ಪ್ರಕ್ಷುಬ್ಧವಾಗಿ ಶರಣ ಸಂಕುಲ ಸನಾತನಿಗಳ ಮತ್ತು ರಾಜಸತ್ತೆಯ ಕೆಂಗಣ್ಣಿಗೆ ಗುರಿಯಾಯಿತು. ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆ ವಿಧಿಸಲ್ಪಟ್ಟು ಅವರನ್ನು ಆನೆಯ ಕಾಲಿಗೆ ಕಟ್ಟಿ ತುಳಿಸಿ ಕೊಂದ ಘಟನೆ ಅವರ ಸಂಗಾತಿಗಳಾಗಿದ್ದ ಶಿವಶರಣರ ಮನಸನ್ನು ಎಷ್ಟು ಘಾಸಿಗೊಳಿಸಿತೋ.
ಬಾಗೋಡಿ ಬಸವಣ್ಣ ಸಾಗುತಲಿ ಕಲ್ಯಾಣ
ಕೂಡಿಡಲು ಭೂಮಿ ಲಿಂಗಗಳ- ವೈಭವವ
ತೂಗುತಲಿ ಧರ್ಮ ತೊಟ್ಟಿಲವು
ಬಸವ ಬೋಧೆಯು ಬೆಳೆದು ವಸುಧೆಯೊಳು ಹಬ್ಬುತಲಿ
ಹಸುಗೂಸು ಕೇಳಿ ಕಿವಿಗೊಟ್ಟು – ಚಣದೊಳಗೆ
ಹೊಸ ಮತವು ಉದಿಸಿ ಭೂಜನಕೆ –
ಎಂಬ ಸನ್ನಿವೇಶ ಬದಲಾಗಿ “ಈರಾಡಿ ವೇದಗಳು ಹಾರಾಡಿ ವಾದಗಳು/ಜೋರಾಗಿ ನಡೆದು ನಿಲ್ಲುತಲಿ/ ಸಾಗರವ ಏರಿ ಕಡೆದಂತೆ ರಕ್ಕಸರು” ಎಂಬಂತಾಯಿತು.ಶರಣರ ಅನುಭವ-ಅನುಭಾವಗಳ ಅಭಿವ್ಯಕ್ತಿಗಳಾಗಿದ್ದ-
“ಸುರರು ಕಡೆದಂತೆಲ್ಲ ವರಮಣಿಗಳುದಿಸಿದವು
ಚಿರಕಾಲ ಉಳಿದ ಭೂಮಿಯೊಳು – ವಚನಗಳು
ಶರಣಗಣ ಕಡೆದ ಮಣಿಯೇನೊ”
ಎಂಬಂತಿದ್ದ
ಶರಣರ ವಚನಗಳ ಕಟ್ಟುಗಳನ್ನು ನಾಶಮಾಡಿ, ಶರಣರ ಮೇಲೆ ಹಲ್ಲೆ ಕೊಲೆಗಳೂ ಶುರುವಾಗಿ ಬಸವಣ್ಣನವರು ಕೂಡಲ ಸಂಗಮದತ್ತ ಮುಖ ಮಾಡಿ ನಡೆದರೆ ಉಳಿದ ಶರಣರು ಬಹುಶ:
ಬಸವಣ್ಣನವರ ಸೂಚನೆಯ ಮೇರೆಗೆ ವಿವಿಧ ದಿಕ್ಕುಗಳಲ್ಲಿ ಚೆದುರಿ ಹೋದರು. ಹಾಗೆ ಬಿಜ್ಜಳನ ಮರಣಾನಂತರ ಶರಣರನ್ನು ಕೊಲ್ಲಲು ಕಳಚೂರಿ ರಾಜಸತ್ತೆ ನಿರ್ಧರಿಸಿ ನಿಂತಾಗ ಚನ್ನಬಸವಣ್ಣನವರ ನೇತೃತ್ವದಲ್ಲಿ ಸುಮಾರು ೧೧೬೭ರಲ್ಲಿ ಕಲ್ಯಾಣವನ್ನು ಬಿಟ್ಟು ಉಳವಿಯತ್ತ ಹೊರಟವರು ಅತನ ತಾಯಿ (ಹಾಗೂ ಬಸವಣ್ಣನವರ ಅಕ್ಕನಾಗಿದ್ದ) ಅಕ್ಕ ನಾಗಮ್ಮ, ಮಡಿವಾಳ ಮಾಚಿದೇವ , ಡೋಹರ ಕಕ್ಕಯ್ಯ, ಕೂಗಿನ ಮಾರಿತಂದೆ, ನುಲಿಯ ಚಂದಯ್ಯ, ಕಿನ್ನರಿ ಬ್ರಹ್ಮಯ್ಯ ಮುಂತಾದ ಶರಣರು.ಇವರಲ್ಲಿ ಮಾಚಿದೇವ, ಕಕ್ಕಯ್ಯ,ಮಾರಿತಂದೆ ಮಾರ್ಗ ಮಧ್ಯೆದಲ್ಲೇ ಲಿಂಗೈಕ್ಯರಾದರೆ ಅಕ್ಕನಾಗಮ್ಮ, ಚೆನ್ನಬಸವಣ್ಣ, ಚಂದಯ್ಯ, ಕಿನ್ನರಿ ಬೊಮ್ಮಯ್ಯ ಮುಂತಾದವರು ಉಳವಿಯಲ್ಲೇ ಕೊನೆಯುಸಿರೆಳೆದರು. ಇಲ್ಲಿನ ಗವಿಮಠ ಎಂಬಲ್ಲಿ ಇರುವ ಗುಹೆಗಳಿಗೆ ಚನ್ನಬಸವಣ್ಣನ ತಾಯಿಯಾದ ಅಕ್ಕ ನಾಗಮ್ಮನ ಹೆಸರನ್ನು ಇಡಲಾಗಿದೆ. ಚನ್ನಬಸವಣ್ಣನ ಸಮಾಧಿ ಇಲ್ಲಿನ ಪ್ರಮುಖ ಆಕರ್ಷಣೆ. ಅದರ ಮೇಲೆಯೇ ಈಗ ಭವ್ಯವಾದ ದೇವಾಲಯವೊಂದು ನಿರ್ಮಾಣವಾಗಿದೆ.
ರಮಜಾನ್ ದರ್ಗಾ ಅವರು ಶರಣರನ್ನು ಕೊಲ್ಲುವದಕಿಂತ ಅವರ ವಚನಗಳನ್ನು ನಾಶಮಾಡುವದು ಸನಾತನಿಗಳ ಮುಖ್ಯ ಉದ್ದೇಶವಾಗಿತ್ತೆನ್ನುತ್ತಾರೆ.ಆದ್ದರಿಂದ ಶರಣರು ಉಳವಿಗೆ ಹೊರಟದ್ದು ವಚನಗಳ ರಕ್ಷಣೆಗಾಗಿ. ಅವರ ಪ್ರಕಾರ ಚನ್ನಬಸವಣ್ಣ, ಮಡಿವಾಳ, ಮಾಚಿದೇವ, ಅಂಬಿಗರ ಚೌಡಯ್ಯ, ಸೊಡ್ಡಳ ಬಾಚರಸ, ಕಿನ್ನರಿ ಬೊಮ್ಮಯ್ಯ, ಕೂಗಿನ ಮಾರಿತಂದೆ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ ಮೊದಲಾದ ಶರಣರು ಮತ್ತು ಅಕ್ಕ ನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಲಿಂಗಮ್ಮ, ಕಲ್ಯಾಣಮ್ಮ, ಕಾಳವ್ವೆ, ಬಿಷ್ಟಾದೇವಿ ಮೊದಲಾದ ಶರಣೆಯರು, ಸಾವಿರಾರು ಶರಣ ಶರಣೆಯರು ಬೇರೆ ಬೇರೆ ಮಾರ್ಗಗಳ ಮೂಲಕ ಸೊಲ್ಲಾಪುರವನ್ನು ಸೇರಿದರು.
ಅಲ್ಲಿಂದ ಹಲಸಂಗಿ, ನಿಂಬಾಳ, ವಿಜಾಪುರ, ಬಬಲೇಶ್ವರ, ಗುಂಡಾಳ, ಮಂಟೂರು ಮತ್ತು ಮುಧೋಳ ಮೂಲಕ ಯಾದವಾಡ ತಲುಪಿದರು. ವಚನಕಟ್ಟುಗಳನ್ನು ಬೇರೆ ಕಡೆಯಿಂದ ಕದಂಬರಾಜ್ಯಕ್ಕೆ ಸಾಗಿಸುವ ಏರ್ಪಾಟನ್ನು ಮಾಡಿ ತಾವು ನೇರವಾಗಿ ಸತ್ತಿಗೇರಿಗೆ ಹೋಗಿ, ಬಂದುದನ್ನು ಎದುರಿಸಬೇಕೆಂದು ನಿರ್ಧರಿಸಿದರು. ಪಕ್ಕದ ಕಡಕೋಳದಲ್ಲಿ ಬಿಜ್ಜಳನ ಸೈನ್ಯ ಬೀಡುಬಿಟ್ಟಿತ್ತು. ಶರಣರು ಸತ್ತಿಗೇರಿಯನ್ನು ತಲುಪಿದರು. ಕಡಕೊಳದಿಂದ ಬಂದ ಸೈನ್ಯ ಈಗ ಮುರುಗೋಡದಲ್ಲಿ ಬೀಡು ಬಿಟ್ಟಿತ್ತು. ಶರಣರು ಸತ್ತಿಗೇರಿಯಿಂದ ಮುರುಗೋಡಿಗೆ ಬಂದರು. ನಂತರ ಶರಣರು ಬೈಲಹೊಂಗಲ, ಸಂಪಗಾಂವ, ತಿಗಡಿ, ಕಾದರವಳ್ಳಿ ಮತ್ತು ನಂದಿಹಳ್ಳಿ ದಾಟಿ ಕಿತ್ತೂರು ತಲುಪಿದರು.
“ಅಂದು ಸಂಜೆಗೆ ಸಿವನೆ ಹೊಂದಿ ಮಂಟಪ ಕೂಡಿ
ಬಂಡ ಬವಣೆಯನು ಗಳೆಯುದಕೆ -ದಂಡೇಶ
ಸಂದಣಿಗೆ ಉಳವಿ ಸೇರೆಂದ” ಪರಿಣಾಮವಾಗಿ ಹೊರಟ ಶರಣರ ಪಯಣದ ಮಾರ್ಗ ಹಲಕೆಲವು ಜಾನಪದ ತ್ರಿಪದಿಗಳಲ್ಲಿ ಅನುರಣಿಸಿದೆ.
“ಕಾದರೊಳ್ಳಿಯ ಮುಂದೆ ಕಾದಿದರು ಜಂಗಮರು
ಕಾದಿ ಹಿಮ್ಮೆಟ್ಟಿ ಜೈನರನು -ಮುರಗೋಡ
ಹಾದಿಯೊಳು ಮುರಿದ ಮಾಚಯ್ಯ” ಇತ್ಯಾದಿಗಳಲ್ಲಿ ಇದನ್ನು ನೋಡಬಹುದು.
ಶರಣರು ಕಿತ್ತೂರಿನಿಂದ ಎರಡು ತಂಡಗಳಲ್ಲಿ ಉಳವಿಯ ಕಡೆಗೆ ತೆರಳಿದರು. ಚನ್ನಬಸವಣ್ಣನವರ ತಂಡ ಧಾರವಾಡಕ್ಕೆ ಬಂದಿತು. (ಧಾರವಾಡದಲ್ಲಿ ಚೆನ್ನಬಸವಣ್ಣ ತಂಗಿದ್ದ ಸ್ಥಳದಲ್ಲೇ ಈಗ ಭವ್ಯವಾದ ದೇವಾಲಯವಿದೆ. ಅದನ್ನು ಸ್ಥಳೀಯವಾಗಿ ಉಳವಿ ಬಸಪ್ಪನ ಗುಡಿ ಎಂದು ಕರೆಯಲಾಗುತ್ತದೆಯಾದರೂ ಅದು ವಾಸ್ತವವಾಗಿ ಚೆನ್ನಬಸವೇಶ್ವರ ದೇವಸ್ಥಾನ) ಆಮೇಲೆ ಈ ತಂಡ ಕಲಘಟಗಿ ಮೂಲಕ ಸಾಂಬ್ರಾಣಿ ತಲುಪಿತು. ಇನ್ನೊಂದು ತಂಡ ಕಿತ್ತೂರಿನಿಂದ ಅಳ್ನಾವರ, ಲಿಂಗನಮಠ, ಹಳಿಯಾಳ ಮಾರ್ಗವಾಗಿ ಸಾಂಬ್ರಾಣಿಗೆ ಬಂದು ಕಾಯುತ್ತಿತ್ತು. ಕಿತ್ತೂರಿನಿಂದ ಸಾಂಬ್ರಾಣಿಗೆ ಬರುವಾಗ ಮಾರ್ಗ ಮಧ್ಯೆ ಕಕ್ಕೇರಿಯಲ್ಲಿ ಶರಣ ಕಕ್ಕಯ್ಯ ಲಿಂಗೈಕ್ಯರಾದರು. ಅವರ ಪತ್ನಿ ಬಿಷ್ಟಾದೇವಿಯ ಕೂಡ ಅಂದೇ ರಾತ್ರಿ ಲಿಂಗೈಕ್ಯರಾದರು. ಅವರ ಸಮಾಧಿ ಅಲ್ಲೇ ಇದೆ.
ನಂತರ ಶರಣರೆಲ್ಲ ಒಂದುಗೂಡಿ ಸಾಂಬ್ರಾಣಿಯಿಂದ ಕುಂಬಾರವಾಡಾಕ್ಕೆ ಬಂದರು. ಅಲ್ಲಿಂದ ಉಳವಿ ತಲುಪಿದರು. ಕಲ್ಯಾಣದಿಂದ ಉಳವಿ ತಲಪುವವರೆಗೆ ಅದೆಷ್ಟೋ ಶರಣ ಶರಣೆಯರು ಲಿಂಗೈಕ್ಯರಾದರು. ಕಲ್ಲೂರಿನಲ್ಲಿ ಕಲ್ಯಾಣಮ್ಮ ಲಿಂಗೈಕ್ಯರಾದರು. ಸಮೀಪದ ತಿಗಡಿಯಲ್ಲಿ ಅವರ ಸಮಾಧಿ ಇದೆ. ತ್ರಿಗುಡಿಯ ಬಳಿಯ ಮಲಪ್ರಭೆಯ ನದಿ ಸಮೀಪ ಗಂಗಾಂಬಿಕೆ ಲಿಂಗೈಕ್ಯರಾದರು. ಮುರುಗೋಡದಲ್ಲಿ ಕೂಗಿನ ಮಾರಿತಂದೆ ಹುತಾತ್ಮರಾದರು. ಮುರುಗೋಡ ಸಮೀಪದ ಕಾರಿಮನಿಯಲ್ಲಿ ಮಡಿವಾಳ ಮಾಚಿದೇವರ ಸಮಾಧಿ ಇದೆ ಎಂದು ಹೇಳಲಾಗುತ್ತಿದೆ.
ಶರಣರು ಈ ಭಾಗಕ್ಕೇ ಬಂದದ್ದೇಕೆ? ಅದಕ್ಕೆ ಉತ್ತರ ಇಷ್ಟೇ. ಈ ಭಾಗಗಳು ಗೋವೆಯ ಕದಂಬರ ಆಳ್ವಿಕೆಯ ವ್ಯಾಪ್ತಿಗೆ ಒಳಪಟ್ಟಿದ್ದವು. ಕಲ್ಯಾಣ ಚಾಲುಕ್ಯ ದೊರೆ ಆರನೆಯ ವಿಕ್ರಮಾದಿತ್ಯ ತರ್ದವಾಡಿಯಲ್ಲಿ ತನ್ನ ಸಾಮಂತನಾಗಿದ್ದ ಕಲಚೂರಿ ಪೆರ್ಮಾಡಿಗೆ ತನ್ನ ಒಬ್ಬ ಮಗಳನ್ನು ಕೊಟ್ಟು ಮದುವೆ ಮಾಡಿದ್ದರೆ ಗೋವೆಯ ಸಾಮಂತ ಕದಂಬ ಮನೆತನದ ೨ನೇ ಜಯಕೇಶಿಗೆ ಇನ್ನೊಬ್ಬ ಮಗಳು ಮೈಳಲದೇವಿಯನ್ನು ಕೊಟ್ಟು ಮದುವೆ ಮಾಡಿದ್ದ. ಕಲಚೂರಿ ಪೆರ್ಮಾಡಿಯ ಮಗ ಬಿಜ್ಜಳ ಹಾಗೂ ಗೋವೆಯ ಕದಂಬ ಮನೆತನದ ೨ನೇ ಜಯಕೇಶಿಯ ಮಗ ಪೆರ್ಮಾಡಿದೇವ ಸಮಕಾಲೀನರಾಗಿ ಆಳ್ವಿಕೆ ಮಾಡುತ್ತಿದ್ದರು.
ಇಬ್ಬರೂ ಆರನೇ ವಿಕ್ರಮಾದಿತ್ಯನ ಮೊಮ್ಮಕ್ಕಳೇ. ಆದರೆ ಬಿಜ್ಜಳ ಚಾಳುಕ್ಯರಿಂದ ಅಧಿಕಾರ ಕಸಿದುಕೊಂಡು ಕಲ್ಯಾಣದ ಚಕ್ರವರ್ತಿಯಾದಮೇಲೆ ಅದನ್ನು ಪ್ರತಿಭಟಿಸಿದ ಪೆರ್ಮಾಡಿದೇವ ಸಾಮಂತನಾಗಿರಲು ಒಪ್ಪದೆ ಸ್ವತಂತ್ರನಾಗಿದ್ದ. ಗೋವೆಯ ಕದಂಬರ ಅರಸು ಪೆರ್ಮಾಡಿದೇವ ಮತ್ತು ಆತನ ತಮ್ಮ ವಿಜಯಾದಿತ್ಯ ಬಿಜ್ಜಳನ ಸೈನ್ಯದ ಕೆಂಗಣ್ಣಿಗೆ ಗುರಿಯಾಗಿದ್ದ ಶರಣರನ್ನು ತಮ್ಮ ಆಳ್ವಿಕೆಗೊಳಪಟ್ಟ ಪ್ರದೇಶಕ್ಕೆ ಆಹ್ವಾನಿಸಿರಲೂ ಸಾಕು. ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಗ್ರಾಮಗಳಲ್ಲಿ ಗೋವೆಯ ಕದಂಬರ ಶಾಸನಗಳು ಹೇರಳವಾಗಿವೆ.
ಪ್ರತಿಸಲ ಉಳವಿಗೆ ಹೋಗುವಾಗ ಮನಸು ಬಸವಣ್ಣನ ಸೋದರಳಿಯನಾಗಿದ್ದ ಚೆನ್ನಬಸವಣ್ಣನ ವ್ಯಕ್ತಿತ್ವವನ್ನು ಕಲ್ಪಿಸತೊಡಗುತ್ತದೆ. ಹನ್ನೆರಡರ ಎಳೆಹರೆಯದಲ್ಲೇ ಅನುಭವ ಮಂಟಪದ ಚರ್ಚೆಗಳಲ್ಲಿ ಪ್ರೌಢವಾದ ರೀತಿಯಲ್ಲಿ ಭಾಗವಹಿಸುತ್ತಿದ್ದನೆಂದು ಹೇಳಲಾಗುವ ಆತ ಮರಣಿಸಿದಾಗ ಬಹುಶ: ಇಪ್ಪತ್ನಾಲ್ಕೋ ಇಪ್ಪತ್ತೈದೋ ವರ್ಷ ವಯಸಿನವನಿದ್ದಾನು. ಅಷ್ಟೊತ್ತಿಗಾಗಲೇ ಷಟ್ ಸ್ಥಲ ಸಿದ್ಧಾಂತಕ್ಕೂ ಆತ ಒಂದು ರೂಪ ಕೊಟ್ಟಿದ್ದನೆನ್ನಲಾಗುತ್ತದೆ.
ಅದೇನೋ ಗೊತ್ತಿಲ್ಲ. ಉಳವಿಯ ಮಣ್ಣಿನಲ್ಲಿ ಆ ಮಹಾಚೇತನಗಳ ಭೌತಿಕಗಳು ಬೆರೆತು ಹೋಗಿ ಚರಿತ್ರೆಯ ಒಂದು ವಿದ್ಯಮಾನದ ಭಾಗವಾಗಿರುವ ಆ ನೆಲ ನನಗಿಷ್ಟ, ಅಷ್ಟೇ.
(ಇಲ್ಲಿ ಪ್ರಸ್ತಾಪಿಸಲಾದ ಕೆಲವು ಜಾನಪದ ತ್ರಿಪದಿಗಳನ್ನು ನಾನು http://madivaala.blogspot.in ಎಂಬ ಬ್ಲಾಗ್ ನಲ್ಲಿ “ಜನಪದ ತ್ರಿಪದಿಗಳಲ್ಲಿ ಮೂಡಿ ಬಂದ ಮಡಿವಾಳ ಮಾಚಿದೇವರು” ಎಂಬ ಎ.ಕೆ.ರಾಮೇಶ್ವರ ಅವರು ಸಂಪಾದಿಸಿದ ೧೦೧ ತ್ರಿಪದಿಗಳು ಎಂಬುದರಿಂದ ಬಳಸಿಕೊಂಡಿದ್ದೇನೆ)
ಅಶೋಕ ಶೆಟ್ಟರ್ ಕಾಲಂ : ಉಳವೀಯ ದಾರೀಲಿ ಶರಣsರ ನೆನೆಯುತ…
ನಿಮಗೆ ಇವೂ ಇಷ್ಟವಾಗಬಹುದು…




ಶೆಟ್ಟರ್ ಸರ್, ಎಳೆಹೂಟೆ ಶಿಕ್ಷೆ ಅಂದರೆ ಏನು ಅಂತ ಕೊಂಚ ಮಾಹಿತಿ ನೀಡುವಿರಾ?
“ರಮಜಾನ್ ದರ್ಗಾ ಅವರು ಶರಣರನ್ನು ಕೊಲ್ಲುವದಕಿಂತ ಅವರ ವಚನಗಳನ್ನು ನಾಶಮಾಡುವದು ಸನಾತನಿಗಳ ಮುಖ್ಯ ಉದ್ದೇಶವಾಗಿತ್ತೆನ್ನುತ್ತಾರೆ.” ದರ್ಗಾ ಅವರಂತಹ ವಿದ್ವಾಂಸರು ಹೇಳಿದ ಮೇಲೆ ಮುಗಿಯಿತು. ಎಷ್ಟಾದರೂ ಅವರು ನಮ್ಮ ನಡುವಿನ ಹಿರಿಯ ಶರಣ. ಆದರೆ ಈ ಹೇಳಿಕೆಗೆ ಪೂರಕವಾಗಿ ಸಾಕ್ಷ್ಯಾಧಾರಗಳಿವೆಯೇ?
Sir, very fascinating account! But how much of this is history and how much is story? You are a history teacher and hence I hope my question is not inappropriate.
It is not inappropriate at all. But I don’t know which aspect of the narrative are you talking about. If you are talking about the historicity of the dispersal of the sharanas in different directions in the wake of the Raya Murari deva’s army pursuing them, much of it is history as there are very strong and long standinglocal traditions about them. Even when you make allowance for exaggeration, religious prejudice and flights of fancy in literature,the oral traditions and the monuments in commemoration of the sharanas’ temporary halt enroute Ulavi can’t be disregarded, there is scope for accurate research of the aftermaths of Kalyan rebellion though…
ತುಂಬ ಒಳ್ಳೆ ಮಾಹಿತಿ ಕೊಡುವ ಲೇಖನ, ಧನ್ಯವಾದಗಳು, ಶೆಟ್ಟರ್ ಅವರಿಗೆ.
Really nice info.