
ಈ ಫೇಸ್ ಬುಕ್ ಎಂಬ ಜಾಲತಾಣದೊಳಗೆ ನಾನು ಯಾವಾಗ ಪ್ರವೇಶಿಸಿದೆನೋ ಗೊತ್ತಿಲ್ಲ. ನನ್ನ ಗೆಳೆಯರೊಬ್ಬರು “ಫ್ರೆಂಡ್ಸ್, ಚೆಕ್ ಮೈ ಲೇಟೇಸ್ಟ್ ಫೋಟೋಸ್ ಇನ್ ಮೈ ಫೇಸ್ ಬುಕ್ ಪ್ರೊಫೈಲ್” ಎಂದೇನೋ ಒಮ್ಮೆ ಇಮೇಲ್ ಕಳಿಸಿದ್ದರು. ಅದನ್ನು ನೋಡಲು ಗೂಗಲ್ ಗೆ ಹೋಗಿ ಫೇಸ್ ಬುಕ್ ಎಂದು ಕುಕ್ಕಿದರೆ ಎಂಥದೋ ಒಂದು ವಿನ್ಯಾಸ ತೆರೆದುಕೊಂಡು ಸೈನ್ ಅಪ್ ಅಂತು. ನನ್ನ ಮೊದಲ ಹೆಸರು, ಕೊನೆಯ ಹೆಸರು, ಈಮೇಲ್ ಐಡಿ,ಪಾಸ್ ವರ್ಡ್ ಇತ್ಯಾದಿ ಅದು ಕೇಳಿದ್ದೆಲ್ಲವನ್ನು ಕೇಳಿದ ಸ್ಥಳಗಳಲ್ಲಿ ಕಟಕಟಿಸಿ ಅದು “ಗೋ ಟೂ ಯುವರ್ ಇಮೇಲ್” ಅಂದಾಗ ಅಲ್ಲಿ ಹೋಗಿ ನೋಡಿದರೆ ಫೇಸ್ ಬುಕ್ ಸಾಹೇಬರಿಂದ ಅಲ್ಲಿ ಒಂದು ಮೇಲ್ ರಾರಾಜಿಸುತ್ತಿತ್ತು. ಅದರಲ್ಲಿರುವ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡು ಎಂದು ಅದು ಹೇಳಿದಂತೆ ಮಾಡಿದ ಮೇಲೆ ಆ ಇ-ಮೇಲ್ ಐಡಿ ನಂದೇ ಅಂತ ಕನ್ ಫರ್ಮ್ ಮಾಡಿಕೊಂಡು, ಮತ್ತೆ ಫೇಸ್ ಬುಕ್ ಗೆ ಹೋದರೆ, ಅಗೋ, ತಾಜ್ ಮಹಲ್ ಎದುರು ಹಿಂಗೆ ನಿಮ್ಮ ಫೋಟೋ ತೆಗೆದು ಹಂಗೆ ಅದರ ಪ್ರಿಂಟ್ ಔಟ್ ರೆಡಿ ಮಾಡಿ ಕೊಡುವ ಫೋಟೋಗ್ರಾಫರ್ ನ ಹಾಗೆ, ನನ್ನದೊಂದು ಪ್ರೊಫೈಲ್ ಸಿದ್ಧಮಾಡಿ ನನ್ನ ಕಣ್ಮುಂದೆ ಬಿಸಾಕಿಯೇ ಬಿಟ್ಟಿತು. ಎಲ ಎಲಾ ನಾನು ಫೇಸ್ ಬುಕ್ ನಲ್ಲಿ ದಾಖಲಾಗಿ ಹೋದೆ.
ಆಮೇಲೆ ಫ್ರೆಂಡ್ಸ್ ಸಜೆಶನ್ ಎಂದು ಯಾರ್ಯಾರದೋ ಹೆಸರುಗಳನ್ನು ಕಳಿಸತೊಡಗಿತು. ಮತ್ತೆ ಯಾರ್ಯಾರಿಂದಲೋ ಫ್ರೆಂಡ್ ರಿಕ್ವೆಸ್ಟ್ ಗಳು ಬರತೊಡಗಿದವು. ನಾನು ತೀರಾ ಸೆಲೆಕ್ಟಿವ್ ಆಗಿ ಕನ್ ಫರ್ಮ್ ಮಾಡುತ್ತ ಹೋದೆ.”ಯುವರ್ ಪ್ರೊಗ್ರೆಸ್ಸ್ ಇಸ್”…ಅಂತ ಒಂದು ರೇಖೆಯಲ್ಲಿ ಸ್ವಲ್ಪ ಭಾಗ ಶೇಡೆಡ್ ಆಗಿರುವ ಗ್ರಾಫಿಕ್ ನೊಂದಿಗೆ ನನ್ನ ಪ್ರಗತಿಯನ್ನು ಅಳೆಯತೊಡಗಿತು. ನನ್ನ ಪ್ರೊಗ್ರೆಸ್ ತುಂಬಾ ನಿಧಾನ ಇತ್ತು. ನನಗೆ ಇದು ಹುಚ್ಚಾಟ ಅಂತ ಅನ್ನಿಸತೊಡಗಿತ್ತು.
ಖೂನಿಲ್ಲ, ಗುರ್ತಿಲ್ಲ, ಮುಖಾ ಮುಸುಡಿ ನೋಡಿಲ್ಲ, “ಯೂ ಅಂಡ್ ಭಾರತಿ ಬಿ.ವಿ ಆರ್ ಫ್ರೆಂಡ್ಸ್, ಯೂ ಅಂಡ್ ಪ್ರಸಾದ್ ಹಾಸನ್ ಆರ್ ಫ್ರೆಂಡ್ಸ್” ಎನ್ನತೊಡಗಿತು. ಆಮೇಲೆ ನನ್ನ ಆಸಕ್ತಿ ಅಭಿರುಚಿಗಳಿಗೆ ಹೊಂದುವವರು, ಕನ್ನಡದ ಕೆಲ ಕವಿಗಳು, ಲೇಖಕರು, ಮಾಧ್ಯಮಗಳ ಮಿತ್ರರು, ಹಲವಾರು ವರ್ಷಗಳಿಂದ ನನಗೆ ವೈಯಕ್ತಿಕವಾಗಿ ಪರಿಚಿತವಿದ್ದು ಹೊಸದಾಗಿ ಫೇಸ್ ಬುಕ್ ಪ್ರವೇಶಿಸಿದವರು ಹೀಗೆ ಪಟ್ಟಿ ಬೆಳೆಯುತ್ತ ಹೋಯಿತು. ವರ್ಷೊಪ್ಪತ್ತಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ನನ್ನ “ಫ್ರೆಂಡ್ಸ್” ಆಗಿಹೋದ ಸಾವಿರಾರು ಜನರನ್ನು ನೋಡಿ ನಾನು ಗಾಭರಿ ಆಗಿ “ವಾಟ್ ಡೂ ಐ ಡೂ ವಿಥ್ ಸೋ ಮೆನಿ ಫ್ರೆಂಡ್ಸ್ ಮ್ಯಾನ್” ಎಂದು ಒಂದು ಸ್ಟೇಟಸ್ ಅಪ್ ಡೇಟ್ ಹಾಕುವಂತಾಯಿತು.ಆಮೇಲೆ ಗೆಳೆಯ ರವಿ ಬೆಳಗೆರೆ ಫೇಸ್ ಬುಕ್ ಗೆ ಬಂದ “ಯೂ ಆರ್ ನೌ ಫ್ರೆಂಡ್ಸ್ ವಿಥ್ ರವಿ ಬೆಳಗೆರೆ” ಅಂತು “ಎಲಾ ಫೇಸ್ ಬುಕ್ ನನ್ಮಗನೇ, ನಾನೂ ಅವನೂ ಇಪ್ಪತ್ತೆಂಟು ವರ್ಷದಿಂದ ಫ್ರೆಂಡ್ಸ್ ಕಣಲೇ” ಎಂದೆ ಮನಸಿನಲ್ಲೇ..
ಆ ಮೇಲೆ ನೋಡುತ್ತ ಹೋದರೆ ಈ ಫೇಸ್ ಬುಕ್ ಎಂಬುದು ತುಂಬಾನೇ ಮಜಾ ಲೋಕವಾಗಿ ತೋರತೊಡಗಿತು. ಇಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಮಾಸಿದ ಸೀರೆಯುಟ್ಟು ಮಂಗನನ್ನಾಡಿಸುವವಳಂತೆಯೂ, ಪ್ರಧಾನಿ ಮನಮೋಹನ ಸಿಂಗ್ ರನ್ನು ಅವಳಾಡಿದಂತೆ ಆಡಿಸುವ ಮಂಗನಂತೆಯೂ ಬಿಂಬಿಸುವ ಫೋಟೋ ಮಾರ್ಫಿಂಗ್ ವಿದ್ಯಾ ಚತುರರ ಕೈಚಳಕದ ಸೃಷ್ಟಿಗಳು ಮುಖತೋರತೊಡಗಿದವು. ಆಮೇಲೆ ಶ್ರೀಯುತ ನರೇಂದ್ರ ಮೋದಿ ಎಂಬುವರಿಗೆ ರಕ್ಷಣೆ ನೀಡುವ ಕಮಾಂಡೋಗಳಾಗಿ ಮನಮೋಹನಸಿಂಗ್ ಮತ್ತು ರಾಹುಲ್ ಗಾಂಧಿಯವರನ್ನು ಎಕೆ ಫಾರ್ಟಿ ಸೆವನ್ ಹಿಡಿದು ನಿಂತಿರುವಂತೆ ಚಿತ್ರಿಸಿ ಪುಳಕ ಅನುಭವಿಸ ಬಯಸುವವರು ಸಿದ್ಧಪಡಿಸಿದ ಮಾರ್ಫ್ಡ್ ಫೋಟೋಗಳು ಬಂದು ಬೀಳತೊಡಗಿದವು. ಯುಪಿಎ ಸಮರ್ಥಕರನ್ನು ಎನ್.ಡಿ.ಎ ಸಮರ್ಥಕರು, ಇವರನ್ನು ಅವರು ಟೀಕಿಸುವ ಪೋಸ್ಟ್ ಗಳು, ಎಡ ಬಲ, ಕಮ್ಯುನಲಿಜಂ-ಕಮ್ಯುನಿಜಂ, ಮನಮೋಹನ್ -ಮೋದಿ, ಹಿಂದು ಕೋಮುವಾದಿ- ಸೂಡೋ ಸೆಕ್ಯುಲರ್ ಮೊದಲಾದ ಹಳಸಲು ಮಾತುಗಳ ತೌಡು ಕುಟ್ಟಾಟವಂತೂ ದಿನನಿತ್ಯದ ನೋಟವಾಗಿ ಇದು ಸೋಶಿಯಲ್ ನೆಟ್ ವರ್ಕ್ ತಾಣವೋ ರಾಜಕೀಯ ಸಮರತಾಣವೋ ಎನ್ನುವಂತಾಗತೊಡಗಿತು.
ಆಮೇಲೆ ಗಿರಿಶಿಖರಗಳ, ಸರೋವರಗಳ, ಜಲಪಾತಗಳ ರಮಣೀಯ ಚಿತ್ರಗಳು ಬಂದು ಬೀಳತೊಡಗಿದವು. ಅವುಗಳನ್ನು ಹಾಕುವವರು ನನ್ನ ಹೆಸರನ್ನು ಅವುಗಳೊಂದಿಗೆ ಟ್ಯಾಗ್ ಮಾಡಿ ಹಾಕತೊಡಗಿದರು. ನನ್ನ ಹೆಸರನ್ನು ಟ್ಯಾಗ್ ಮಾಡುವವರ ಕುರಿತು ಭಯವಾಗತೊಡಗಿತು. ಉದಾ: ಎರಡು ಬಣ್ಣಬಣ್ಣದ ಗುಬ್ಬಿಗಳು, ಒಂದು ಟೊಂಗೆಯ ಮೇಲೆ ಕುಳಿತಿವೆ. ನನಗೆ ಆ ಚಿತ್ರ ಇಷ್ಟವೇ? ಅದ್ಯಾರಿಗೆ ಬೇಕು? ಅದನ್ನು ಪೋಸ್ಟ್ ಮಾಡುವವರಿಗೆ ಅವು ಇಷ್ಟವಾಗಿವೆ ಮತ್ತು ನಾನು ಅವನ/ಅವಳ ಫ್ರೆಂಡ್ ಅಷ್ಟೇ ಹೀಗಾಗಿ ಆ ಚಿತ್ರಕ್ಕೆ ನಾನು ಟ್ಯಾಗ್ಡ್. ಹಾಗೆಯೇ ಕವಿ ಕವಯಿತ್ರಿಯರು ತಮ್ಮ ಕವಿತೆಗಳಿಗೆ ಚುಟುಕುಗಳಿಗೆ ನನ್ನ ಹೆಸರನ್ನು ಟ್ಯಾಗ್ ಮಾಡತೊಡಗಿದರು. ಆಮೇಲೆ ಯಾರ್ಯಾರು ಅದಕ್ಕೆ ಎಕ್ಸಲಂಟ್ ಅಂದರು, ಬ್ಯೂಟೀಫುಲ್ ಅಂದರು ಎಂಬ ಒಂದು ಮಂಗ್ಯಾನ ಬಾಲದಂಥ ಸುದೀರ್ಘ ಯಾದಿ ನೋಟಿಫಿಕೇಶನ್ ಗಳ ವಿಭಾಗದಲ್ಲಿ…

ಆಮೇಲೆ ಹಲವಾರು ಗ್ರುಪ್ ಗಳ ಸೃಷ್ಟಿಕರ್ತರು ಬಂದರು. ನನ್ನನ್ನು ನೂರಾರು ಗ್ರುಪ್ ಗಳಿಗೆ ಸೇರಿಸಿಕೊಂಡರು, ಅಥವ ತಮಗೆ ಇಷ್ಟವಾದ ಗ್ರುಪ್ ಗಳಿಗೆ ಕರೆದೊಯ್ದರು. ಒಬ್ಬ ಮಹಿಳೆ ನನ್ನನ್ನು ಕಳೆದ ಹದಿನೈದು ದಿನಗಳಲ್ಲಿ ಸುಮಾರು ಒಂದು ಡಝನ್ ಗ್ರುಪ್ ಗಳಿಗೆ ಸೇರಿಸಿ ಸಂತುಷ್ಟಳಾಗಿದ್ದಾಳೆ. ಆ ಗ್ರುಪ್ ಗಳಲ್ಲಿ ನಾನು ಆಸಕ್ತನಾ? ಒಂದು ಮಾತು ಕೇಳುತ್ತಾರಾ? ಕೇಳಬೇಡಿ. ನಾನು ಅವರ “ಫ್ರೆಂಡ್”. ಅಷ್ಟೇ.. ಮತ್ತೆ ಇನ್ನೊಂದು ಕೆಟಗರಿ ಇದೆ, ಅವರು ಆ ಈ ಆಟಗಳನ್ನು ಆಡಲು ನನ್ನನ್ನು ಆಹ್ವಾನಿಸುವವರು. ಮುಂಬೈನ ಒಬ್ಬ ಮಹಿಳೆ ನನ್ನನ್ನು ಆ ವಿಷಯದಲ್ಲಿ ಬಿಟ್ಟು ಇನ್ನುಳಿದಂತೆ ಯಾವುದಕ್ಕೂ ನೆನಪಿಸಿಕೊಳ್ಳುವದೇ ಇಲ್ಲ. ಫಾರ್ಮ್ ವಿಲೆ ಟೂ, ಫ್ಯಾಮಿಲಿ ಫಾರ್ಮ್, ಕ್ಯಾಂಡಿ ಕ್ರಷ್ ಸಾಗಾ ಮುಂತಾದ ಯಾವ್ಯಾವೋ ಹಾಳು ಮೂಳು ಆಟಗಳನ್ನು ಆಡಲು ನನ್ನನ್ನು ಆಹ್ವಾನಿಸುವವರು ನನಗೆ ಮಿತ್ರರೆಂದು ಅನ್ನಿಸುವದೇ ಇಲ್ಲ. ಅಥವಾ “ಏನಾರ ಆಟಾ ಆಡೂಣು ಬಾರಲೇ” ಎಂದು ಬಾಲ್ಯದಲ್ಲಿ ಸುಡು ಸುಡು ಮಧ್ಯಾಹ್ನದ ಬಿರುಬಿಸಿಲಲ್ಲಿ ಮನೆಯಂಗಳಕ್ಕೆ ಬಂದು ಅಂಗಲಾಚುತ್ತಿದ್ದ ಬಾಲಮಿತ್ರರನ್ನು ನೆನಪಿಸುತ್ತಾರೆ.
ಈ ಮಧ್ಯೆ ತಾವೇ ಕ್ರಿಯೇಟ್ ಮಾಡಿಕೊಂಡ ತಮ್ಮ ಪೇಜ್ ಗಳಿಗೆ ಲೈಕ್ ಒತ್ತಿ ಎಂದು ಕೇಳುವವರು, ತಮಗೆ ಮಹತ್ವಪೂರ್ಣವೆನ್ನಿಸುವ ಯಾವುದೋ ವಿಷಯದ ಕುರಿತ ಪಿಟಿಷನ್ ಗೆ ಸಹಿ ಮಾಡುವಂತೆ ಕೇಳುವವರು, ತಮ್ಮ ಬ್ಲಾಗ್ ನಲ್ಲಿ ತಾವು ಇತ್ತೀಚೆಗೆ ಹಾಕಿದ ತಮ್ಮ ಕವನವನ್ನು ಓದಿ ಕಮೆಂಟ್ ಅನ್ನು ಅಲ್ಲೇ ಹಾಕುವಂತೆ ವಿನಂತಿಸಿಕೊಳ್ಳುವವರು ಹೀಗೆ ಥರಾವರಿ ನೋಟಿಫಿಕೇಶನ್ ಗಳ ನಡುವೆ ನನಗೆ ಬಹಳ ಇಷ್ಟವಾದ ಒಂದು ನಿರುಪದ್ರವಿ ವರ್ಗದ ಬಗ್ಗೆ ಹೇಳಬೇಕು. ಇವರು ಮುಂಜಾನೆ ಎದ್ದೊಡನೆ ಒಂದು “ಗುಡ್ ಮಾರ್ನಿಂಗ್ ಫ್ರೆಂಡ್ಸ್” ಹೇಳಿ ಮಧ್ಯಾಹ್ನವಾಗುವವರೆಗೆ ಕಾಯ್ದು ಒಂದು “ಗುಡ್ ಆಫ್ಟರ್ ನೂನ್” ಹೇಳಿ ಮತ್ತೆ ಸಂಜೆ “ಗುಡ್ ಈವ್ನಿಂಗ್ ಫ್ರೆಂಡ್ಸ್” ಎಂದು ಹಾರೈಸಿ ಕೊನೆಗೆ ಅಂತಿಮವಾಗಿ ರಾತ್ರಿ ಒಮ್ಮೆ “ಗುಡ್ ನೈಟ್ ಫ್ರೆಂಡ್ಸ್” ಎಂದು ತಮ್ಮ ದಿನದ ವಹಿವಾಟು ಮುಗಿಸುವವರು..! ಅವರು ಸುಖವಾಗಿರಲಿ.
ಕಾಲ ಕಳೆದಂತೆಲ್ಲ ನನ್ನ ಮಿತ್ರ ಬಳಗದಲ್ಲಿ ಹುಡುಗಿಯರ, ಗೃಹಿಣಿಯರ, ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತ ಬಂತು. ಇದರಲ್ಲಿ ಕೆಲ ಹುಡುಗಿಯರು ಹಾಳು ಹರಟೆಗೆ ನಂಬರ್ ಒನ್. ಕೆಲವರು “ಸೇವಂತಿಯೇ ಸೇವಂತಿಯೇ ಎಲ್ಲಿ ಹೊಂಟೀಯೇ, ಎಂಟಾಣೆ ಸೆಂಟ್ ಹಾಕ್ಕೊಂಡ್ ಘಂ ಅಂತೀಯೇ” ಎಂಬ ಲಘು ಮಹಾಕಾವ್ಯಗಳನ್ನು ಬರೆದು “ಎಂಗೆ” ಎಂದು ಬೀಗುವ ಪ್ರತಿಭಾವಂತೆಯರು. ನನಗಿವರ ಹಾಳು ಹರಟೆಯ ಗ್ರುಪ್ ಇಷ್ಟವಾದರೂ ನನ್ನ ಕೆಲಸ ಕಾರ್ಯಗಳ ಮಧ್ಯೆ ಸಮಯ ಪೋಲಾಗುವದು ಬೇಡ ಎಂಬ ಕಾರಣಕ್ಕೆ ಸುಮ್ಮನಿರುತ್ತೇನೆ. ಅದೊಂಥರ ರಿಲ್ಯಾಕ್ಸೇಶನ್ ಝೋನ್ ಇದ್ದಂಗೆ. ಇನ್ನು ಕೆಲ ಮಹಿಳೆಯರದು ಹೊಟ್ಟೆ ಉರಿಸುವ ಕೆಲಸ. ಅವರು ಬಾಳೆಲೆಯ ಮೇಲೆ ಶುಚಿರುಚಿಯಾದ ಇಡ್ಲಿ ಸಾಂಬಾರ್ ಚಟ್ನಿ, ಅಥವಾ ಸುತ್ತಿಟ್ಟ ಗರಿಗರಿ ಕಂದು ದೋಸೆ, ಹೊಳೆಹೊಳೆವ ಬಟ್ಟಲಲ್ಲಿ ಸ್ವಲ್ಪ ಪಲ್ಯ ಮತ್ತು ಚಟ್ನಿ ಇಟ್ಟು ಫೋಟೋ ತೆಗೆದು ಅದನ್ನು “ಬನ್ನಿ,ನೀವೂ ಸ್ವಲ್ಪ ಟೇಸ್ಟ್ ನೋಡಿ” ಥರದ ಉಪಚಾರದ ಶಬ್ದಗಳೊಂದಿಗೆ ಫೇಸ್ ಬುಕ್ ನಲ್ಲಿ ಹಾಕಿ ನಮ್ಮ ಹೊಟ್ಟೆ ತುಂಬಿಸುವ ದಯಾಮಯಿಗಳು.
ಈ ಮಧ್ಯೆ ಮನೆ ಮದ್ದು ಹೇಳುವವರು, ಆಯಾಯ ದಿನ ನಡೆದ ಪ್ರಮುಖ ರಾಜಕೀಯ ಘಟಣೆಗಳಿಗೆ ತಮ್ಮ ಭಾಷ್ಯ ಬರೆಯುವವರು, ದೇಶದ ಮತ್ತು ಕರ್ನಾಟಕದ ರಾಜಕೀಯ ನಾಯಕಮಣಿಗಳಿಗೆ ಆಡಳಿತ ಸೂತ್ರದ ಕುರಿತು ಅನ್ ಸಾಲಿಸಿಟೇಟೇಡ್ ಸಲಹೆ ಸೂಚನೆ ನೀಡುವವರು, ಮಳೆ ಬಂದರೆ ಅಬ್ಬಾ ಮಳೆ ಎಂದೂ ಚಳಿ ಹೆಚ್ಚಾಗಿದ್ದರೆ ಅಹಾಹಾ ಚಳಿ ಎಂದು ಹವಾಮಾನ ವರದಿ ನೀಡುವವರು, ತಪ್ಪು ತಪ್ಪು ಇಂಗ್ಲೀಷ್ ನಲ್ಲಿ ಘನಗಂಭೀರ ವಿಚಾರಗಳನ್ನು ಹೇಳಲೆತ್ನಿಸಿ ಕೊನೆಗೆ ಏನು ಹೇಳಿದರು ಎಂಬುದೇ ಗೊಂದಲವಾಗುವಂತೆ ಹೇಳಿ ಮುಗಿಸುವ ಮಹಾನುಭಾವರು, ಯುರೋಪ್ ಅಮೇರಿಕಾ ಮೊದಲಾದ ದೇಶಗಳಲ್ಲಿ ತಾವು ಸುತ್ತಾಡಿದ ಫೋಟೋಗಳನ್ನು ಹಾಕಿ ಹೊಟ್ಟೆ ಉರಿಸುವವರು, ಇನ್ ಬಾಕ್ಸ್ ನಲ್ಲಿ ಗಾಸಿಪ್ ಮಾಡುವ ಆತ್ಮೀಯರು, ಜಗತ್ತಿನ ಮತ್ತು ಭಾರತದ ಸ್ಥಿತಿಗತಿಗಳನ್ನು ಬೇರೆಯದೇ ನಿಟ್ಟಿನಿಂದ ನೋಡುವ ವಿಚಾರಪ್ರಚೋದಕ ಬರಹಗಳ ಲಿಂಕ್ ಒದಗಿಸಿ ಉಪಕರಿಸುವವರು, ತಮ್ಮ ಇಷ್ಟದ ಗಝಲ್ ಅಥವಾ ಹಳೆಯ ಹಿಂದಿ ಸಿನಿಮಾ ಅಥವಾ ಇಂಗ್ಲೀಷ್ ಪಾಪ್ ಅಲ್ಬಮ್ ನಿಂದ ಹಾಡೊಂದನ್ನು ಶೇರ್ ಮಾಡಿ ನೀರಸ ಸಂಜೆಗಳಲ್ಲಿ ಇದ್ದಕ್ಕಿದ್ದಂತೆ ಜೀವಸಂಚಲನ ಉಂಟು ಮಾಡುವವರು…, ಒಂದೇ ಎರಡೇ…
ಹೀಗಾಗಿ ಫೇಸ್ ಬುಕ್ ಕುರಿತಾಗಿಯೇ ಜೋಕ್ ಗಳಿವೆ. ಥರಾವರಿ ಅಭಿಪ್ರಾಯಗಳಿವೆ, ವಿಶ್ಲೇಷಣೆಗಳಿವೆ, ಮನಶ್ಯಾಸ್ತ್ರೀಯ ಅಧ್ಯಯನಗಳಿವೆ. ಹಿಂದೊಮ್ಮೆ ಫೇಸ್ ಬುಕ್ ನಲ್ಲಿ ಇರುವ ಜನ ತಮ್ಮ ಕುರಿತು ಲೋ ಸೆಲ್ಫ್ ಎಸ್ಟೀಮ್ ಹೊಂದಿರುವಂಥವರು ಎಂದು ಅಮೇರಿಕದ ಒಬ್ಬ ಸಂಶೋದಕಿ ತನ್ನ ಸಂಶೋಧನೆಯ ಫಲಶೃತಿಯನ್ನು ಪ್ರಕಟಿಸಿದಾಗ ಫೇಸ್ ಬುಕ್ ಪ್ರಿಯರು ಮ್ಲಾನರಾಗಿದ್ದರು. ಒಮ್ಮೆ ದೀಪಕ್ ತಿಮ್ಮಯ್ಯ ಫೇಸ್ ಬುಕ್ ನ ಪ್ರವೃತ್ತಿಗಳನ್ನು voyeuristicಹಾಗೂ exhibitionist ಎಂದು ವ್ಯಾಖ್ಯಾನಿಸಿದ್ದರು. ಮೊನ್ನೆ ಟಿ.ಎನ್. ಸೀತಾರಾಂ ಅವರು ಈ ಫೇಸ್ ಬುಕ್ ಎನ್ನುವುದು ಸ್ನೇಹವೇ ?ಜ್ಞಾನವೇ ?ಅಥವಾ ಆತ್ಮರತಿಯೇ ? ಎಂದು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಅದರ ಸಾಧಕ ಬಾಧಕ ಅಂಶಗಳೆಲ್ಲದರ ಕುರಿತು ಹೇಳುವ ಥರಾವರಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಮೊನ್ನೆ ನಾನೇ ತಮಾಷೆಯಾಗಿ ಈ ಫೇಸ್ ಬುಕ್ ಎಂಬುದು “ಒಂಥರಾ” ಹೆಂಡತಿಯ ಹಾಗೆ…, ಒಪ್ಪಿದರೆ ಒಪ್ಪಿ ಒಪ್ಪದಿದ್ದರೆ ಬಿಡಿ ಎಂದಿದ್ದೆ. ಅದಕ್ಕೆ ಸ್ವಾತಿ ಗೌಡ ಎಂಬ ಯುವತಿ “ಕೆಲವೇ ಕೆಲವು ಅದೃಷ್ಟವಂತರು ಎರಡೆರಡು ಅಕೌಂಟ್ ಹೊಂದಿರುತ್ತಾರೆ” ಎಂದು ಕಿಚಾಯಿಸಿದರೆ ಇನ್ನೊಬ್ಬರು ತಮ್ಮ ಹೆಂಡತಿ ಅದನ್ನು ಸವತಿ ಅಂತಾಳೆ ಅಂದರು. ಅಂಜಲಿ ರಾಮಣ್ಣ ಅವರು ಹೆಣ್ಣು ಮಕ್ಕಳಿಗೆಲ್ಲಾ ಬಾಯ್ ಫ್ರೆಂಡ್ ಇದ್ದ ಹಾಗೆ ಎಂದರು. ಪ್ರಭುಲಿಂಗ್ ಭುಯ್ಯಾರ್ ಎಂಬ ಯುವಕ ತಮಗೆಲ್ಲಾ ಗರ್ಲ್ ಫ್ರೆಂಡ್ ಇದ್ದಹಾಗೆ ಎಂದರು.
ಕೆಲವರು ತಾತ್ಕಾಲಿಕವಾಗಿ ಫೇಸ್ ಬುಕ್ ನಿಂದ ಸನ್ಯಾಸ ತೆಗೆದುಕೊಂಡು ಹೋಗುತ್ತಾರೆ, ಮತ್ತೆ ಬರುತ್ತಾರೆ. ಕೆಲವರು ಸದಾ ಅದರಲ್ಲೇ ಇರುವಂತೆ ತೋರುತ್ತಾರೆ. ಕೆಲವರು ಆಗೊಮ್ಮೆ ಈಗೊಮ್ಮೆ ತಮ್ಮ ಯಾವುದೋ ಒಂದು ಕಮೆಂಟ್ ನಿಂದ ಗಮನ ಸೆಳೆದಿರುತ್ತಾರೆ. ಕೆಲವರು ವಸ್ತು ವಿಷಯ ವಿದ್ಯಮಾನಗಳ ಕುರಿತ ತಮ್ಮ ಗ್ರಹಿಕೆಗಳ ಆಳ ಅಗಲಗಳ ಕುರಿತು ನಿಜವಾಗಿಯೂ ಮೆಚ್ಚುಗೆ ಮೂಡುವಂತೆ ವಿಶ್ಲೇಷಿಸಿದರೆ ಕೆಲವರು ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಎಂಬಂತೆ ಪದೇ ಪದೇ ಹೇಳಿದ್ದನ್ನೇ ಬೇರೆ ಬೇರೆ ಶಬ್ದ ವಾಕ್ಯಗಳಲ್ಲಿ ಹೇಳಿ ರೇಜಿಗೆ ಮೂಡಿಸುತ್ತಾರೆ.
“ಈ ಫೇಸ್ ಬುಕ್ ಎಂಬುದು “ಒಂಥರಾ” ಹೆಂಡತಿಯ ಹಾಗೆ…” ಎಂಬ ನನ್ನ ಮೊನ್ನೆಯ ಸ್ಟೇಟಸ್ ಅಪ್ ಡೇಟ್ ಗೆ ಕಮೆಂಟ್ ಹಾಕುತ್ತ ನನ್ನ ಮಾಜಿ ವಿದ್ಯಾರ್ಥಿನಿ ಭಾಗ್ಯಶ್ರೀ “ಹೆಂಡ್ತಿ ಏನು ಬಿಟ್ಟೀನಾ, ಎಲ್ಲವನ್ನೂ ಹೆಂಡತಿಗೆ ಹೋಲಿಸೋ ಗಂಡಂದಿರು…, ಇದು ಪ್ರೀತೀನಾ ಅಥವಾ ಅಸಡ್ಡೆನಾ ಸರ್” ಎಂದು ಕೇಳಿದ್ದಳು. ಅವಳು ಕೇಳಿದ್ದು ಹೆಂಡತಿಯ ಕುರಿತಾಗಿ ಇರಬಹುದು ಎಂದುಕೊಂಡು “ಒಂಥರಾ” ಪ್ರೀತೀನೇ ಭಾಗ್ಯಶ್ರೀ ಎಂದಿದ್ದೆ.
ಅದು ಈಗಿನ ಮಟ್ಟಿಗೆ ಫೇಸ್ ಬುಕ್ ಕುರಿತೂ ನನ್ನ ಫೈನಲ್ ಅಭಿಪ್ರಾಯ ಎಂದು ಭಾವಿಸಬಹುದು. ಏಕೆಂದರೆ ಇಲ್ಲಿ ಹಲವಾರು ಪ್ರಬುದ್ಧ ಮನಸಿನ ಜನರ ವಿಚಾರಗಳು ಓದಲು ಸಿಗುತ್ತವೆ, ಹುಟ್ಟಾ ಅಲೆಮಾರಿಗಳಾದವರ ಬದುಕಿನ ಅನುಭವಗಳು, ಅರ್ಥಪೂರ್ಣ ಶೀರ್ಷಿಕೆಗಳೊಂದಿಗೆ ಅವರು ಹಾಕುವ ಚೆಂದದ ಚಿತ್ರಗಳು, ಬದುಕಿನ ಸಣ್ಣ ಪುಟ್ಟ ಸುಖ ಸಂತೋಷವನ್ನು ಹಂಚಿಕೊಳ್ಳುವವರ ಅನುಭೂತಿಗಳು ಮನಸಿಗೆ ಹಿಡಿಸುತ್ತವೆ. ಆಪ್ತತೆಯಿಂದ ಕೂಡಿದ ಒಡನಾಟಗಳಿರುತ್ತವೆ, ಚೆಂದದ ಪದ್ಯಗಳಿರುತ್ತವೆ, ನಿರ್ಭಿಡೆಯ ವಿಮರ್ಷೆಗಳಿರುತ್ತವೆ, ಭಾವಕೋಶಗಳ ಆಳಕ್ಕಿಳಿದು ಅಲುಗಾಡಿಸುವ ಸಂವರ್ಥ್ ನಂಥ ಕವಿಗಳ ಗಝಲ್ ಗಳಿರುತ್ತವೆ. ಚಿಂತನೆ ಇರುತ್ತದೆ, ಸಮಾಜಕ್ಕೆ ಕಂಟಕಪ್ರಾಯವಾಗಿರುವ ಪ್ರವೃತ್ತಿಗಳ ಕುರಿತ ಎಚ್ಚರ ಇರುತ್ತದೆ. ಬೇಡವಾದವುಗಳೂ ಇರುತ್ತವೆ, ಏನು ಮಾಡುವದು? “ಗಿವ್ಹ್ ದಿ ಡೆವಿಲ್ ಇಟ್ಸ್ ಡ್ಯೂ” ಎನ್ನುವದು, ಮುಂದೆ ಸಾಗುವದು…!
ಅಶೋಕ ಶೆಟ್ಟರ್ ಕಾಲಂ : ಈ ಫೇಸ್ ಬುಕ್ ಎಂಬ…
ನಿಮಗೆ ಇವೂ ಇಷ್ಟವಾಗಬಹುದು…




ಶೆಟ್ಟರ್, ಈ ಹಾಳಾದ್ದು ಫೇಸ್ ಬುಕ್ ನಮ್ಮ ಪಾಲಿಗೆ ಗುಟ್ಕಾ ಚೀಟಿ ಆಗಿಬಿಟ್ಟಿದೆ. ಇದನ್ನು ಬಿಡಬೇಕು ಅಂತಾ ಯೋಚಿಸುತ್ತಿದ್ದೆ. ಅಷ್ಟರಲ್ಲಿ ನೀವೆ ಸೊಗಸಾಗಿ ವ್ಯಾಖ್ಯಾನಿಸಿದ್ದೀರಿ. ಬೆತ್ತಲಾಗದೆ ಬದುಕು ಸಿಕ್ಕದು ಇಲ್ಲಿ ಎಂಬಂತಾಗಿದೆ. ಹಿಂದೊಮ್ಮೆ ಅನಿಲ್ ಅಂಬಾನಿ ರಿಲೆಯನ್ಸ್ ಮೊಬೈಲ್ ಕಂಪನಿ ಸ್ಥಾಪಿಸುವಾಗ, ” ಮಾತಾಡು ಇಂಡಿಯಾ” ಎಂಬ ಸ್ಲೋಗನ್ ಅನ್ನು ಜಾಹಿರಾತು ಮೂಲಕ ಜಾರಿಗೆ ತಂದಿದ್ದ. ನಾವೀಗ ” ಇಣಕಿ ನೋಡು ಮಂಗ್ಯಾ” ಎಂಬ ಸ್ಲೋಗನ್ ಅನ್ನು ಫೇಸ್ ಬುಕ್ ಪರವಾಗಿ ಜಾರಿಗೆ ತರಬೇಕಿದೆ. ಏನಂತಿರಾ?
ನಿಜಕ್ಕೂ ಇದು ಪೇಸ್ಬುಕ್ಕಾಯಣ…ನಾನು ಪೇಸ್ ಬುಕ್ ನಲ್ಲಿ ಹುಟ್ಟುವ ಫೋಕ್ ಬಗ್ಗೆ ಪಾಯಿಂಟ್ ಮಾಡ್ತಾ ಇದ್ದೆ. ಅದರ ಒಂದಷ್ಟು ಪಾಯಿಂಟ್ ನಿಮ್ಮ ಬರಹದಲ್ಲಿ ನುಗ್ಗಿಬಿಟ್ಟಿವೆ ಸಾರ್..ಬರಹ ಆಪ್ತವೆನ್ನಿಸಿತು.
🙂 true!!
malathi S
ಯುವ ಜನಾ೦ಗಕ್ಕೆ ಇನ್ನೊಬ್ಬ ವಿವೇಕಾನ೦ದ ಬ೦ದು “ಏಳಿ ಎದ್ದೇಳಿ.. ಫೇಸ್ಬುಕ್ ನಿ೦ದ ಹೊರ ಬನ್ನಿ..” ಹೇಳುವಷ್ಟರವರೆಗೆ ಪರಿಸ್ಥಿತಿ ಹದಗೆಟ್ಟಿದೆ.
ಬಹುಶಃ ದಿನಕ್ಕೆ ಸರಿ ಸುಮಾರು 2 ಗ೦ಟೆ ಲೆಕ್ಕದಲ್ಲಿ, ವಾರಕ್ಕೆ ಹದಿನೈದು(ರಜಾದಿನಗಳಲ್ಲಿ ಜಾಸ್ತಿ!), ತಿ೦ಗಳಿಗೆ 450 ಗ೦ಟೆಗಳಷ್ಟು ಕಾಲ ಜುಜುಬಿ ಫೇಸ್ಬುಕ್ ಮೇಲೆ ಇನ್ವೆಸ್ಟ್ ಮಾಡಿ ಅರ್ಧ ಜೀವನ ಅಲ್ಲೇ ಕಳೆಯುತ್ತಾರೆ. ಲೈಫ್ ಲೋಸ್ಟ್ ಇನ್ ಫೇಸ್ಬುಕ್..
2010 ralli Facebook friend aada nimmannu mukataha bhetti maaDalu aagiddu 2013 ralli! modala bhetigoo munna adeshtu aaptaraagi hodevu… sadhyavaadaddu ee FB indale!!
ತುಂಬಾ ಚೆನ್ನಾಗಿ ಬರೆದಿದೀರಿ ಸರ್ ಫೇಸ್ ಬುಕ್ಕಿನ ಮಹಿಮೆ ಬಗ್ಗೆ… .ನಂಗಂತೂ ಜೀವಮಾನದಲ್ಲಿ ಬಹುಶಃ ಪರಿಚಯವೇ ಆಗಲು ಸಾಧ್ಯವಿಲ್ಲದಂತಹ ಸ್ನೇಹಿತರನ್ನು ಇದು ನೀಡಿದೆ.. ನಾನು ಫೇಸ್ ಬುಕ್ ಅಕೌಂಟ್ ತೆರೆದಿದ್ದೇ ಕಳೆದುಹೋಗಿದ್ದ ನನ್ನ ಹೈಸ್ಕೂಲ್ ಆಪ್ತ ಗೆಳೆಯರನ್ನು ಹುಡುಕೋಕೆ..ಕೊನೆಗೆ ಅವರು ಸಿಕ್ಕಿದರು ಕೂಡ…ಫೇಸ್ ಬುಕ್ ಬಗ್ಗೆ ಯಾವಾಗದರೂ ಸಿಟ್ಟು ಬಂದು ನಾವು ಅದನ್ನು ಬಿಟ್ವಿ ಅಂದುಕೊಳ್ಳಿ….ಅದು ಮಾತ್ರ ನಮ್ಮನ್ನ ಬಿಟ್ಟಿರೋಲ್ಲ…..
ಚನ್ನಾಗಿದೆ, ಫೇಸ್ ಬುಕ್ಕಾಯಣ..
ಥೇಟ್ ನಿಮ್ಮದೇ ಅನುಭವ ನನ್ನದೂ ಕೂಡ. ಅಮೆರಿಕಾದ ಒಂಟಿತನಕ್ಕೆ ನಿಜವಾದ ಸಂಗಾತಿ ಯಾಗಿ ಫೇಸ್ಬುಕ್ ಸಿಕ್ಕಿದ್ದು ನಿಜ. ಆಮೇಲೆ ನಿಮ್ಮದೇ ಅನುಭವ ಶುರುವಾಯ್ತು. ಯಾರ್ಯಾರದೋ ಹೆಸರು ಕಳಿಸಿದರು. ಫ್ರೆಂಡ್ಸ್ ಕನ್ಫರ್ಮ್ ಅಂತ ಬಂದಾಗ ಎಸ್ ಅಂತ ಒತ್ತಿದ್ದೇ ಬಂತು. ಗ್ರಹಚಾರ ಶುರುವಾಯ್ತು. ನನ್ನ ಮುಗ್ಧತೆ ಅಸಲೀ ಮೂರ್ಖತನವಾಗಿತ್ತು. ನಿಮಗೆ ಗೊತ್ತಿಲ್ಲದೋರನ್ನೆಲ್ಲ ಫ್ರೆಂಡ್ಸ್ ಅಂತ ಒದರುತ್ತಿದ್ದೀರಿ, ನಿಮ್ಮ ಅಕೌಂಟ್ನ್ನೆ ಬರ್ಕಾಸ್ತ್ ಮಾಡ್ತೀವಿ ಅಂತ ಎರಡುಬಾರಿ ವಾರ್ನಿಂಗ್ ಬಂತು. ಇನ್ನೂ ಸೆಪ್ಟೆಂಬರ್ 20ರ ವರೆಗೆ ಈ ನಿಷೇಧ ಇದೆ. ಮುಖಕ್ಕೆ ರಾಚಿದ ಅವಮಾನ ಅನುಭವಿಸುತ್ತಾ, ತೆಪ್ಪಗಿದ್ದೇನೆ.
abba Fb account open madodrinda hididu adara anukoolu anaanukoolagala varegoo ellavannu savistaravagi heliddeera gurugale… houdu face book nalli kettaddu ide olleyadoo ide. naavu hamsapakshigalaagbeku ashte..
ಸಾರ್… ಚೆನ್ನಾಗಿದೆ. ನಿಮ್ಮ ಈ ಲೇಖನ.. ನಾನು ಈ ಫೇಸ್ ಬುಕ್ಕಿಂದ ಕಲಿತದ್ದು ತಿಳಿದದ್ದು ಹಲವಿದೆ.. ನನ್ನ ಭವಿಷ್ಯದ ದಾರಿಯನ್ನೇ ಬದಲಿಸಲೂ ಇದೂ ಒಂದು ರೀತಿ ಕಾರಣವೆನ್ನುವುದನ್ನು ನಾನು ಅಲ್ಲಗೆಳೆಯುವುದಿಲ್ಲ..
🙂
ಅದ್ಭುತವಾದ ಬರಹ. ಫೇಸ್ಬುಕ್ ನಲ್ಲಿ ಏನೇನು ನಡೆಯುತ್ತೆ ಅಂತ ಎಳೆ ಎಳೆಯಾಗಿ ಬರ್ದಿದೀರಾ. ತುಂಬಾ ಇಷ್ಟವಾಯ್ತು.
ಎಳೆ ಎಳೆಯಾಗಿ ವಿಶ್ಲೇಷಿಸಿತ್ತಾ ಬರೆದಿದ್ದೀರಿ. ತುಂಬಾ ಆಪ್ತವೆನಿಸಿತು ನಿಮ್ಮ ಬರಹ. ಫ಼ೇಸ್ಬುಕ್ಕಾಯಣಕ್ಕೆ ಕಲ್ಯಾಣವಾಗಲಿ.
Sari naavu eegaara friendso alvo heli matte 🙂
Too much., Two hundred percent..:)
Oye,It’s not anonymous,. It’s me
ಸುಲಲಿತ ಫೇಸ್ ಪ್ರಬ೦ಧ, ಅನುಭವಗಳು ಅನುಭಾವೀ ನೆಲೆಯಲ್ಲಿ ಮೂಡಿವೆ ಸರ್.
Hotteg haalu huydangaaythu 🙂
good one sir….!!! ಫೇಸ್ ಬುಕ್ ನನಗೆ ತುಂಬಾ ಒಳ್ಳೆ frnds ನೀಡಿದೆ….ನನ್ನ ಮೆಚ್ಚಿನ ಸಾಹಿತಿಗಳು ಹಾಗೂ ಲೇಖಕರೊಂದಿಗೆ ನೇರವಾಗಿ ಮಾತನಾಡಲು ಅವಕಾಶ ನೀಡಿದೆ…i love facebook
ಎಳೆ ಎಳೆಯಾಗಿ ವಿಶ್ಲೇಷಿಸಿತ್ತಾ ಬರೆದಿದ್ದೀರಿ. ತುಂಬಾ ಆಪ್ತವೆನಿಸಿತು ನಿಮ್ಮ ಬರಹ ಪೇಸ್ಬುಕ್ಕಾಯಣ ಚೆನ್ನಾಗಿದೆ….:)
tumba majavagide.. Sir