ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ್ ಶೆಟ್ಟರ್ ಕಾಲಂ : ಪ್ರೇಮವೆಂಬ ಮಧುರ ನೋವು…

ಬರಹಗಾರನೊಬ್ಬನಿಗೆ ತನ್ನ ಹಳೆಯ ಪ್ರೇಮಸಂಬಂಧಗಳ ಕುರಿತು, ತನ್ನ ಬದುಕಿನಲ್ಲಿ ಪ್ರವೇಶಿಸಿದ ಹೆಣ್ಣುಗಳ ಕುರಿತು ಬರೆಯುವದು ಕಷ್ಟ. ಬರೆಯದಿರುವದೂ ಕಷ್ಟ. ಅದೊಂದು ಬಗೆಯಲ್ಲಿ ಹಗ್ಗದ ಮೇಲಿನ ನಡಿಗೆಯಂತಹದು. ಏನು ಮಾಡುವದು? ಹರೆಯದ ಒಂದು ಹಂತದಲ್ಲಿ ಹೂಡಿಟ್ಟ ಸುಖಕರ ಯಾತನೆಗಳ ಡೆಪಾಜಿಟ್ ಗೆ ಮಧುರಾನುಭೂತಿಗಳ, ನೋವುಗಳ, ನಲಿವುಗಳ,ನೆನಪುಗಳ ರೂಪದ ಬಡ್ಡಿ ಜೀವನಪೂರ್ತಿ ಸಂದಾಯವಾಗುತ್ತಲೇ ಇರುತ್ತದೆ. ಅದರಲ್ಲಿ ಹಂಚಿಕೊಳ್ಳಬಹುದಾದದ್ದನ್ನು ಓದುಗರೆಂಬ ಆಪ್ತೇಷ್ಟರೊಂದಿಗೆ ಹಂಚಿಕೊಂಡು ಬಿಡಬಹುದು.
ಆ ಹುಡುಗಿಗೆ ತಾನು ನನಗೇನಾಗಬೇಕು ಎಂಬುದು ಸ್ಪಷ್ಟವಿತ್ತು, ಪ್ರಿಯತಮೆ.! ಅದಕ್ಕೆ ಕಾರಣನಾದವನು ನಾನೇ. ಕಾಲೇಜಿನ ನಮ್ಮ ಅಧ್ಯಾಪಕರೊಬ್ಬರೊಂದಿಗೆ ನಾವಿಷ್ಟು ಜನ ಹುಡುಗ-ಹುಡುಗಿಯರು ಹೊಸಪೇಟೆ ಬಳಿಯ ಮುನಿರಾಬಾದ್ ನ ತುಂಗಭದ್ರಾ ನದಿ ಆಣೆಕಟ್ಟು ಮತ್ತು ಅಲ್ಲಿಯ ಉದ್ಯಾನಕ್ಕೆ ಪ್ರವಾಸ ಹೋದಾಗ ಬೆಳದಿಂಗಳ ರಾತ್ರಿ ಎಲ್ಲರೂ ವರ್ತುಲಾಕಾರವಾಗಿ ಕುಳಿತು ಹಾಡು ನೃತ್ಯ ಮಾಡುತ್ತಿರಬೇಕಾದರೆ ಅವಳ ಹೆಸರಿರುವ ಸಾಲು ಇದ್ದ ಕನ್ನಡ ಚಲನಚಿತ್ರ ಪ್ರೇಮಗೀತೆಯೊಂದನ್ನು ನಾನು ಹಾಡಿ ಎಲ್ಲರ ಅಚ್ಚರಿ ಗುಸು ಗುಸು ಪಿಸಿಪಿಸಿಗೆ ಕಾರಣನಾಗಿದ್ದೆ. ಅಲ್ಲಿಯ ವರೆಗೆ ಎಲ್ಲರಲ್ಲೊಬ್ಬಳಾಗಿದ್ದ ಅವಳು ಆ ಮೇಲೆ ಎಲ್ಲರಿಗಿಂತ ಬೇರೆಯಾದಳು. ಹೈಲೀ ಡಿಸ್ಟರ್ಬ್ಡ್. ಮರುದಿನದ ಸುತ್ತಾಟದಲ್ಲಿ ಪದೇ ಪದೇ ಅವಳ ಕಣ್ಣು ನನ್ನತ್ತ ನೋಡುತ್ತಿದ್ದವು. ನಾನು ಕಣ್ಣು ತಪ್ಪಿಸತೊಡಗಿದ್ದೆ. ಮುಂದೆ ಹೊರಟಿದ್ದ ನನ್ನನ್ನು ನಮ್ಮ ಇನ್ನು ಒಬ್ಬಿಬ್ಬರು ಸಹಪಾಠಿಗಳೊಂದಿಗೆ ಆಕೆ ಸಮೀಪಿಸಿದಳು.
ಅದರಲ್ಲೊಬ್ಬಳು ಕಿಚಾಯಿಸುವ ಧ್ವನಿಯಲ್ಲಿ “ಯಾವ್ದಾದರೂ ಒಂದ್ ಸಾಂಗ್ ಹಾಡ್ರೀ” ಎಂದು ಕೇಳಿದಳು. “ನನಗೆಲ್ಲಿ ಹಾಡಲು ಬರುತ್ತದೆ?” ಎಂದೆ. ಅವಕಾಶ ಸಿಕ್ಕಿತು ಎಂಬಂತೆ ಅವಳು (ಗೌರಿ ಎನ್ನೋಣ) “ನಿನ್ನೆ ಹಾಡಿದ್ರೆಲ್ಲ., ಭಾರೀ ಹಾಡು” ಎಂದು ಕೊಂಚ ಕೊಂಕು ಕೊಂಚ ಆಕ್ಷೇಪದ ಧ್ವನಿಯಲ್ಲಿ ಅಂದಳು. ಆಕ್ಷೇಪ ದುರ್ಬಲವಾಗಿತ್ತು, ಅದು ಆಕ್ಷೇಪವೋ ಮೆಚ್ಚುಗೆಯೋ ಎಂಬುದೂ ಗೊತ್ತಾಗದಂತಿತ್ತು. ಧ್ವನಿ ಮಾತ್ರ ಬಲು ಮೆದುವಾಗಿತ್ತು. ಇಬ್ಬರು ಸಹಪಾಠಿ ಹುಡುಗಿಯರು ಸ್ವಲ್ಪ ಹಿಂದುಳಿದು ತಾನು ನನ್ನ ಸಮಸಮ ಹೆಜ್ಜೆ ಹಾಕುತ್ತಿದ್ದ ಒಂದೆರಡು ಗಳಿಗೆಗಳಷ್ಟು ಸಮಯಾವಕಾಶದಲ್ಲೇ “ನಿನ್ನೆ ಇಡೀ ರಾತ್ರಿ ನಿದ್ದೀ ಮಾಡಿಲ್ಲ ನಾ, ಗೊತ್ತೈತಿ?” ಎಂದಳು. ಧ್ವನಿಯಲ್ಲಿ ಬಳಲಿಕೆ ಇತ್ತು. ಅವಳು ಪ್ರೇಮಜ್ವರ ಪೀಡಿತಳಾಗಿದ್ದಳು.
ಧಾರವಾಡಕ್ಕೆ ಮರಳಿದ ನಂತರ ನಾನು ತನಗೇನಾಗಬೇಕು ಎಂಬ ಬಗ್ಗೆ ಗೌರಿಗೆ ಕ್ಲ್ಯಾರಿಟಿ ಬೇಕಿತ್ತು., ಪ್ರೇಮಿ..! ನಾನು ದೊಡ್ಡ ದೊಡ್ಡದಾಗಿ ಮಾತನಾಡುತ್ತ “ಸಂಬಂಧಗಳಿಗೆ ಒಂದು ಹೆಸರಿರಲೇ ಬೇಕೆಂದೆಲ್ಲಿದೆ? ರತ್ನಾ, ವೀಣಾ, ಶೈಲಜಾ, ಉಷಾ, ಕಲಾವತಿ ಇವರೆಲ್ಲರಂತೆ ನೀನೂ ಓರ್ವ ಸಹಪಾಠಿ, ಸ್ನೇಹಿತೆ..”ಎಂದೆ. ಮರುದಿನದ ಎಲ್ಲ ವಿಷಯಗಳ ಕ್ಲಾಸುಗಳಿಗೆ ಅವಳು ನಾಪತ್ತೆಯಾಗಿದ್ದಳು. ಅದರ ಮರುದಿನವೂ ಗಾಯಬ್. ನಾಲ್ಕನೇ ದಿನಕ್ಕೆ ಅವಳೂರಿನಿಂದ ಪತ್ರ ಬಂತು. ತಮ್ಮ ಹೊಲದಲ್ಲಿ ಈಗ ಹತ್ತಿ ಬಿಡಿಸುತ್ತಿದ್ದಾರೆ ಎಂದು ಬರೆದಿದ್ದಳು. ತಾನು ಆರಾಮವಾಗಿ ಊಟ ನಿದ್ದೆ ಮಾಡುತ್ತ ಇರುವದಾಗಿ ಬರೆದಿದ್ದಳು, ತನ್ನ ಸಣ್ಣ ತಂಗಿಯ ಆಟಪಾಠಗಳನ್ನು ನೋಡುತ್ತ ಇರುವದು ತನಗೆ ಬಹಳ ಚೊಲೊ ಅನ್ನಿಸುತ್ತಿದೆ ಎಂದು ಬರೆಯುವದಲ್ಲದೇ ಉಳಿದವರಂತೆ “ನೀನೂ ಸಹಪಾಠಿ ನೀನೂ ಸ್ನೇಹಿತೆ” ಅನ್ನುವದೇ ನನ್ನ ನಿಲುವಾದರೆ ಇನ್ನು ತನಗೆ ಮತ್ತೆ ಧಾರವಾಡಕ್ಕೆ ಮರಳಿ ಬಂದು ಕಾಲೇಜಿನ ಮೆಟ್ಟಿಲನ್ನು ಹತ್ತುವ ಇಳಿದು ಮಾಡಿ ದಣಿದುಕೊಳ್ಳುವ ಅಗತ್ಯವೇ ಇಲ್ಲವೆಂದು ಬರೆದು ಹೆದರಿಸಿದ್ದಳು. ಕಾಲೇಜಿಗೆ ಮರಳಿ ಬಾ ಎಂದು ಒಂದು ಪತ್ರ ಬರೆದು ಹಾಕಿದೆ. ಬಂದಳು.
ಬಹಳ ದಿನ ಕಣ್ಣು ಮೂಗು ಮೂಡಿರದೇ ಅಮೂರ್ತವಾಗಿದ್ದ ಸಂಬಂಧವೊಂದರ ಅಸ್ಪಷ್ಟತೆಯ ಮಂಜು ಕ್ರಮೇಣ ಕರಗಿ ಒಂದು ರೂಪ-ಆಕಾರ ಮೂಡತೊಡಗಿತ್ತು. ಆ ಗಿಡ್ಡ ನಿಲುವಿನ, ಮಾಟವಾದ ಅಂಗಾಂಗಗಳ, ಸ್ವಲ್ಪ ತುಂಟತನ ಸ್ವಲ್ಪ ಜಗಳಗಂಟತನ ಮೈಗೂಡಿಸಿಕೊಂಡಿದ್ದ ಹುಡುಗಿಗೆ ನಾನು ಮನಸೋಲತೊಡಗಿದ್ದೆ. ಎಸ್, ಐ ವಾಸ್ ಇನ್ ಲವ್…! ಸಂಜೆ ನಾಲ್ಕಕ್ಕೆ ಅವಳ ಹಾಸ್ಟೆಲ್ನಿಂದ ಅವಳನ್ನು ಕರೆದುಕೊಂಡು ಡಿಸಿ ಬಂಗಲೆಯ ಮುಂದಿನ ಬಯಲಿನಲ್ಲಿ ಕಾಂಕ್ರೀಟ್ ಬೆಂಚಿನ ಮೇಲೆ ತಾಸು ಕುಳಿತು ಹಾಗೇ ಸ್ವಿಮ್ಮಿಂಗ್ ಪೂಲ್ ಬದಿಯ ಇಳಿಕೆಗುಂಟ ಇಳಿದು ಕೋರ್ಟ್ ಸರ್ಕಲ್ ನ ಕೃಷ್ಣ ಭವನಕ್ಕೆ ಹೋಗಿ ಏನಾದರೂ ಮೆದ್ದು ಟೀ ಕುಡಿದು ಕತ್ತಲಾಗುವ ವರೆಗೆ ಗಿಡಮರಗಳ ಮಧ್ಯೆ ಸುತ್ತಿ ಸುಳಿದು ಅವಳ ಹಾಸ್ಟೆಲ್ ಗೆ ಬಿಟ್ಟು ಮನೆಗೆ ಮರಳುವದು ಪರಿಪಾಠವಾಯಿತು. ಜಗತ್ತು ಈ ಮುಂಚೆ ಇದ್ದುದಕ್ಕಿಂತ ಸುಂದರವಾಗಿ ಕಾಣತೊಡಗಿತು. ನನ್ನ ದು:ಖಗಳು ಅಷ್ಟೇನೂ ದೊಡ್ಡವಲ್ಲ ಎನ್ನಿಸತೊಡಗಿತು. ಪಾದರಕ್ಷೆಗಳು ಪಾಲಿಶ್ ಹಾಕಿಸಿಕೊಂಡು ಮಿಂಚತೊಡಗಿದವು. ಮತ್ತೊಂದೆರಡು ಬೆಲ್ ಬಾಟಮ್ ಪ್ಯಾಂಟ್ ಹೊಲಿದು ಸಿದ್ಧವಾಗಿ ಬಂದವು. ಮುಂದಿನ ಎರಡು ವರ್ಷಗಳು ಆ ಲಂಗಾಬ್ಲೌಸಿನ ಹುಡುಗಿಯ ತಾಬಾ ಆಗಿಹೋದವು. ವಾಸ್ತವವಾಗಿ ನನ್ನ ಆಸಕ್ತಿ ಅಭಿರುಚಿಗಳಿಗೆ ಅವಳವಕ್ಕೆ ಸಂಬಂಧವೇ ಇರಲಿಲ್ಲ. ನನ್ನ ಸಾಹಿತ್ಯ, ಸಂಘಟನೆ, ಹೋರಾಟ ಇವುಗಳ ಕುರಿತು ತಪ್ಪಿಯೂ ಅವಳು ಮಾತಾಡುತ್ತಿರಲಿಲ್ಲ. ಸಿದ್ದಾರ್ಥ ಪಿಕ್ಚರ್ಫ಼್ ನ್ಯಾಗ ನೋಡ್ ನೀ ಅವ್ನಿಗೆ ಕಿಸ್ ಹೆಂಗ್ ಮಾಡಬೇಕ್ ಆನ್ನೂದೂ ಗೊತ್ತಿರೂದಿಲ್ಲ ಎಂಬ ಘನ ವಿಷಯಗಳನ್ನು ಅವಳು ಇನ್ ಲ್ಯಾಂಡ್ ಲೆಟರ್ ಗಳಲ್ಲಿ ಬರೆದು ನಮ್ಮ ಕಾಲೇಜ್ ಬಳಿ ಗಿಡಕ್ಕೆ ಕಟ್ಟಿದ್ದ ಕೆಂಪು ಡಬ್ಬಕ್ಕೆ ಹಾಕುತ್ತಿದ್ದಳು.
ಅವು ಮರುದಿನ ನನ್ನ ಸಾಧನಕೇರಿಯ ವಿಳಾಸಕ್ಕೆ ನಮ್ಮ ಅಕ್ಕನ ಮನೆಗೆ ಬಟವಾಡೆಯಾಗುತ್ತಿದ್ದವು.

ಅಂದಿನ ನಮ್ಮ ಎಲ್ಲ ಪ್ರೇಮ ಸಲ್ಲಾಪಗಳಿಗೆ, ಸ್ವೀಟ್ ನಥಿಂಗ್ಸ್ ಎಂಬಂಥ ಮಾತುಗಳಿಗೆ ಮಹಾತ್ಮಾ ಗಾಂಧಿ ಸಾಕ್ಷಿಯಾಗಿದ್ದರು. ಕರ್ನಾಟಕ ಕಾಲೇಜಿನ ಸೈನ್ಸ್ ಬ್ಲಾಕಿನ ಕಟ್ಟಡದ ಹಿಂದಿದ್ದ ಒಂದು ಸಣ್ಣ ಉದ್ಯಾನವನದ ಅಂಚಿಗೆ, ನೇರಾನೇರ ಕಾಲೇಜು ಪ್ರಿನ್ಸಿಪಾಲರ ಬಂಗಲೆ ಎದುರಿಗೇ, ಇದ್ದ ಗಾಂಧಿಯವರ ಪುತ್ಥಳಿಯ ಕಟ್ಟೆಯ ಮೇಲೆ ಕುಳಿತೇ ನಾವು ಸಂಜೆ ಲೇಡಿಸ್ ಹಾಸ್ಟೆಲಿನ ಹುಡುಗಿಯರು ವಿಹರಿಸುವ ಅವಧಿ ಮುಗಿದು ಬೆಲ್ ಆಗುವ ವರೆಗೆ ಬಿಸ್ಕೀಟ್ ತಿನ್ನುತ್ತ, ಒಂದು ಟ್ರಾನ್ಸಿಸ್ಟರ್ ರೇಡಿಯೋ ಇಟ್ಟುಕೊಂಡು ವಿವಿಧ-ಬಾರತಿಯಲ್ಲಿ “ಜಯ್ ಮಾಲಾ” ಕಾರ್ಯಕ್ರಮದ ಮಧುರ ಹಾಡುಗಳನ್ನು ಕೇಳುತ್ತ ಕನಸುಗಳನ್ನು ಹೆಣೆಯುತ್ತಿದ್ದುದು.
ನಾನು ನನ್ನ ಅಭ್ಯಾಸ, ಪ್ರಗತಿಪರ ವೇದಿಕೆಗಳ ಸಂಘಟಣೆಯ ಕೆಲಸಗಳು, ಸಾಹಿತ್ಯಾಭಿರುಚಿ, ಕೌಟುಂಬಿಕ ಜವಾಬ್ದಾರಿಗಳು ಇವೆಲ್ಲವುಗಳನ್ನು ಬ್ಯಾಲನ್ಸ್ ಮಾಡುತ್ತ ಸಂಜೆಗಳನ್ನು ಮಾತ್ರ ನಿಯಮಿತವಾಗಿ ನಮ್ಮಿಬ್ಬರ ಸುತ್ತಾಟಗಳಿಗೆ ಸಮರ್ಪಿಸಿದೆ. ಕೆಲ ಕಾಲ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾನೂನು ಸಲಹೆಗಾರನಾಗಿದ್ದ ವಕೀಲ ಮತ್ತು ಈಗ ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯನಾಗಿರುವ ದಿವಾಕರ ಆಗ ನಮ್ಮ ಸಹಪಾಠಿಯಾಗಿದ್ದ. ಕಾಂಗ್ರೆಸ್ಸಿನ ಎನ್.ಎಸ್.ಯು.ಐ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಅವನ ವಿರುದ್ಧ ನಾನು ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದೆ. ಅವನು ಬಲು ಉತ್ಸಾಹದಿಂದ ಪ್ರಚಾರ ಮಾಡುತ್ತಿದ್ದ. ಒಮ್ಮೆ ಯಾವುದೋ ಸ್ಲಮ್ಮಿನ ಹತ್ತಿಪ್ಪತ್ತು ಚಿಳ್ಳೆಪಿಳ್ಳೆ ಬಾಲಕರದೊಂದು ತಂಡ ದಿನಪತ್ರಿಕೆಗಳನ್ನು ಶಂಖಾಕಾರದಲ್ಲಿ ಸುತ್ತಿ ತಲೆ ಮೇಲೆ ಟೋಪಿಯಂತೆ ಧರಿಸಿಕೊಂಡು “ವೋಟ್ ಫಾರ್ ದಿವಾಕರ್” ಎಂದು ಕೈ ಮೇಲೆತ್ತಿ ಕೂಗುತ್ತ ಹೋದದ್ದು ನೋಡಿದೆ. ನನ್ನ ಬಳಿ ಹಣವೂ ಇರಲಿಲ್ಲ. ಇಲೆಕ್ಷನ್ ಕುರಿತ ಉತ್ಸಾಹವೂ ಉಳಿಯಲಿಲ್ಲ. ಈ ಹುಡುಗಿ ಬೇಡವೆಂದರೂ ಕೇಳದೇ ಹಾಸ್ಟೆಲ್ ನಲ್ಲಿ ಬೇರೆ ಬೇರೆ ವಿಭಾಗಗಳ ತನ್ನ ಪರಿಚಿತರಲ್ಲಿ ನನ್ನ ಪರವಾಗಿ ಪ್ರಚಾರ ಮಾಡಿ, ಕರಪತ್ರ ಹಂಚಿ ನೂರಿನ್ನೂರು ಓಟುಗಳು ನನಗೆ ಬೀಳಲು ಕಾರಣಳಾದಳು. ನಾನು ಸೋತೆ.
ದಿವಾಕರ್ ಒಮ್ಮೆ ಪಿ.ಲಂಕೇಶ್ ಅವರನ್ನು ಅತಿಥಿಯಾಗಿ ಆಮಂತ್ರಿಸಿದ. ಲಂಕೇಶ್ ಅವರು ಹೊಟೆಲ್ ಧಾರವಾಡ್ ನಿಂದ ಪಂಚೆ ಉಟ್ಟುಕೊಂಡೇ ಕಾಲೇಜಿಗೆ ಬಂದು ಫ್ಯಾರನ್ ಹಾಲ್ ನಲ್ಲಿ ಭಾಷಣ ಮಾಡಿದರು. ಅವರ ಭಾಷಣ ನಡೆದಿರುವಂತೆಯೇ ಗೌರಿ ಹೊರಗೆ ಹೋಗೋಣ ನಡಿ ಎಂಬಂತೆ ಸನ್ನೆ ಮಾಡಿದಳು. ಹೊರಗೆ ಹೋದೆ. “ಲಂಕೇಶ್ ಭಾಷಣಾ ಏನ್ ಕೇಳ್ತೀ? ಅಂವಾ ಒಂದ್ ಸಿನಿಮಾ ಮಾಡಿದ್ನಲಾ ಪಲ್ಲವಿನೋ ಅನುರೂಪನೋ, ಅದರ ಹೀರೋ-ಹಿರೋಯಿನ್ ಥರಾ ಸುತ್ತಾಡೂಣು ನಡೀ” ಎಂದಳು ನಗುತ್ತ. ಒಮ್ಮೊಮ್ಮೆ ಹಾಸ್ಟೆಲ್ ನ ಅವಳ ಗೆಳತಿಯರ ಬಳಗದಲ್ಲಿಯ ಕಲಹ- ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸುವ ಕೆಲಸಗಳು ನನ್ನ ಕೊರಳಿಗೆ ಬೀಳುತ್ತಿದ್ದವು. ಒಮ್ಮೆ ಇವಳು ಹಾಸ್ಟೆಲ್ ನ ಕಾಮನ್ ಹಾಲ್ ನಲ್ಲಿ ಯಾರೋ ಮರಾಠಿ ಹುಡುಗಿ ರೇಡಿಯೋದಲ್ಲಿ ವಿವಿಧ ಭಾರತಿ ಕೇಳುತ್ತಿರಬೇಕಾದರೆ ಅಲ್ಲಿ ನುಗ್ಗಿ ಅದನ್ನು ಧಾರವಾಡ ಆಕಾಶವಾಣಿಗೆ ತಿರುಗಿಸಿ ಕನ್ನಡ ಸಿನಿಮಾ ಹಾಡುಗಳನ್ನು ಕೇಳತೊಡಗಿ ಆ ಮರಾಠಿ ಹುಡುಗಿ ಅದನ್ನು ಮತ್ತೆ ವಿವಿಧ ಭಾರತಿಗೆ ಇವಳು ಧಾರವಾಡಕ್ಕೆ ನಾಲ್ಕಾರು ಸಲ ತಿರುವಿ ಆ ಮೇಲೆ ಇವಳು ದಬದಬ ಅವಳ ಬೆನ್ನಿಗೆ ಗುದ್ದಿ ಹಾಲ್ ನ ಲೈಟ್ ಆಫ್ ಮಾಡಿ ಹೊರಗೋಡಿ ಹೋದಳು ಎಂಬ ಕಂಪ್ಲೇಂಟ್ ಕೂಡ ಒಮ್ಮೆ ನನಗೆ ಬಂದಿತ್ತು.
ಒಟ್ಟಾರೆ ಆ ಎರಡುವರ್ಷ ಆ ದಿಕ್ಕಿನಲ್ಲಿ ವಿದ್ಯಾಗಿರಿಯ ವರೆಗೆ ಈ ದಿಕ್ಕಿನಲ್ಲಿ ಕೆಲಗೇರಿಯ ವರೆಗೆ ಇನ್ನೊಂದು ದಿಕ್ಕಿನಲ್ಲಿ ಇನ್ನಾವುದೋ ಗುಡ್ಡದ ವರೆಗೆ ಎಂಬಂತೆ ನಮ್ಮ ಪ್ರೇಮ ಸಾಮ್ರಾಜ್ಯ ವಿಸ್ತರಿಸತೊಡಗಿ ನನ್ನ ಸಭ್ಯತೆಯ ಎಲ್ಲೆಗಳೂ ಅಲ್ಲಿಲ್ಲಿ ಆಗಾಗ ಸ್ವಲ್ಪ ಹಿಗ್ಗತೊಡಗಿ ಒಟ್ಟಿನಲ್ಲಿ ಎಲ್ಲವೂ ಹಿತಕರವಾಗಿತ್ತು ಎನ್ನುವಾಗಲೇ All good things must come to an end ಎಂಬಂತೆ ನಮ್ಮ ನಿರಾಳತೆ ಕೊನೆಗೊಳ್ಳುತ್ತ ಅನಿಶ್ಚಿತತೆ ಢಾಳಾಗಿ ಗೋಚರಿಸುತ್ತ ಹೊರಟಿತು. ಆ ಎರಡು ವರ್ಷಗಳಲ್ಲಿ ನಾನು ಅವಡುಗಚ್ಚಿ ಓದಿ ನನ್ನ ಪಸ್ಟ್ ಕ್ಲಾಸ್ ರಿಸಲ್ಟನ್ನು ಕಾಯ್ದುಕೊಂಡೆ ಎಂಬುದೇ ಸಮಾಧಾನ. ನನಗೆ ಎಂ.ಎ.ಮಾಡಬೇಕಿತ್ತು. ಬರೀ ಗ್ರಾಜುಯೇಟ್ ಡಿಗ್ರಿ ಪ್ರಮಾಣ ಪತ್ರ ಇಟ್ಟುಕೊಂಡು ನಾನು ಒಂದು ಬದುಕು ಕಟ್ಟಿಕೊಳ್ಳುವದು ಸಾಧ್ಯವಿರಲಿಲ್ಲ.ತಾನೂ ಎಂ.ಎ ಮಾಡುತ್ತೇನೆಂದು ಅವಳೆಂದಳು. ಅವಳ ಮನೆಯವರ ನಿರ್ಧಾರ ಬೇರೆಯೇ ಇತ್ತು. ಅದು ಅವಳಿಗೆ ಗೊತ್ತಿರಲಿಲ್ಲ.
ಕನಸುಗಳು ನನಸಾಗಲಿಲ್ಲ. ದಾರಿ ಕವಲೊಡೆದವು. ತಪ್ಪು ನನ್ನದೂ ಇತ್ತು, ಅತ್ತಲಿಂದಲೂ ಇತ್ತು. ಅದೆಲ್ಲದರ ಮೌಲ್ಯಮಾಪನೆ, ಸರಿ ತಪ್ಪುಗಳ ವಿಶ್ಲೇಷಣೆಗೆ ಇನ್ನು ಅರ್ಥವಿಲ್ಲ ಎಂದು ಮನದಟ್ಟಾದಾಗ ನನ್ನ ಬದುಕಿನ ಹಾದಿ ನನ್ನದು, ನಡೆ ಮನವೇ ಎಂದು ಅದರ ಮನವೊಲಿಸಿ ಸ್ನಾತಕೋತ್ತರ ವಿದ್ಯಾಭ್ಯಾಸ ಪೂರೈಸಿದೆ. ಒಬ್ಬಂಟಿತನದ ತೊತ್ತಳದುಳಿತಕ್ಕೆ ಸಿಕ್ಕು ಸೊರಗಿದೆ. ದೆಹಲಿಗೆ ಹೋದ ಮೇಲೆ ಅಲ್ಲಿ ಸಾಂಸ್ಕೃತಿಕ ಪರಕೀಯತೆಯ ಭಾವವೂ ಸೇರಿ ಈ ಭಾವನಾತ್ಮಕ ತೊಳಲಾಟಗಳ ಮತ್ತು ಅನಿಶ್ಚಿತ ಭವಿಷ್ಯದ ಆತಂಕಗಳ ಒತ್ತಡಗಳೆಲ್ಲ ಆರೋಗ್ಯದ ಮೇಲೆ ಪ್ರಭಾವ ಬೀರಿದವು.
ಅಲ್ಲಿಂದ ಇಲ್ಲಿಗೆ ಎಲ್ಲ ನದಿಗಳಲ್ಲೂ ಅಪಾರ ಪ್ರಮಾಣದ ನೀರು ಹರಿದಿದೆ. ಬದುಕಿನ ನಾವೆ ಅಲ್ಲಿಲ್ಲಿ ಡಿಕ್ಕಿ ಹೊಡೆದು ಒಂದು ದಡ ಸೇರಿದೆ. ಅವಳು ಕೆಲ ಸಲ ಫೋನಿಗೆ ಸಿಕ್ಕಿದ್ದಾಳೆ, ಒಮ್ಮೆ ಮನೆಗೆ ಬಂದಿದ್ದಾಳೆ. ಅಂದು ಅಂದಿಗೆ ಇಂದು ಇಂದಿದೆ ಇರಲಿ ನಾಳೆಯು ನಾಳೆಗೆ ಎಂಬಂತೆ ನಡೆದಿದೆ. ಬದುಕಿನ ಯಾನ. ಎಲ್ಲ ಅಳೆದೂ ಸುರಿದೂ ಯೋಚಿಸಿಯಾದ ಮೇಲೆ ಕೊನೆಗೆ ಕವಿ ಟೆನಿಸನ್ ಹೇಳಿದಂತೆ It is better to have loved and lost than never to have loved at all ಎಂಬುದು ಸರಿ ಎನ್ನಿಸುತ್ತದೆ….
 

‍ಲೇಖಕರು avadhi

16 October, 2013

13 Comments

  1. Anonymous

    Nice mix of humor and reality. Enjoyed reading.
    -Sumathi

  2. Aravind

    ಅಂದಿನ ನಮ್ಮ ಎಲ್ಲ ಪ್ರೇಮ ಸಲ್ಲಾಪಗಳಿಗೆ, ಸ್ವೀಟ್ ನಥಿಂಗ್ಸ್ ಎಂಬಂಥ ಮಾತುಗಳಿಗೆ ಮಹಾತ್ಮಾ ಗಾಂಧಿ ಸಾಕ್ಷಿಯಾಗಿದ್ದರು. !!! Ashok Shettar Jindabad

  3. Rukmini Nagannavar

    “ಅಂದು ಅಂದಿಗೆ ಇಂದು ಇಂದಿದೆ ಇರಲಿ ನಾಳೆಯು ನಾಳೆಗೆ”
    eenuva saalugalu eshtu naijya allave…
    thank you very much…
    Rukmini Nagannavar

  4. swathigowda

    Good one sir….!!!

  5. nagraj.harapanahalli

    ಪ್ರೇಮ ಯಾವತ್ತಗೂ ಸೊಗಸು. ನೆನಪಿನ ಪರಿಮಳ ನೆನೆದಾಗಲೆಲ್ಲಾ ದೊರಕುತ್ತೆ ಸಾರ್. ಚೆಂದ್ ಬರಹ.

  6. bharathi b v

    entha chanda bardidira ashok … adyako yaardoo first love saphalavaada kathene kivige beelalvalla ….

    • Ashok Shettar

      ಭಾರತಿಯವರೇ, ಮೊದಲ ಪ್ರೇಮ ಸಾಮಾನ್ಯವಾಗಿ ಭಗ್ನವಾಗುತ್ತದೆ,ಪ್ರೇಮಿಗಳು ಭಗ್ನಪ್ರೇಮಿಗಳಾಗುತ್ತಾರೆ. ಎಲ್ಲರ ಅದೃಷ್ಟ ಅಷ್ಟು ಚೆನಾಗಿರುವದಿಲ್ಲ,ಅದರಲ್ಲಿ ಕೆಲವರ ಮದುವೆಯಾಗಿ ಅವರು ದಂಪತಿಗಳಾಗುತ್ತಾರೆ…:)

  7. Sharadhi

    This is a good one for sure! (I don’t compliment often though!)

  8. Ramesh Aroli

    Sir, these are my experiences too…I too studied in same college where WE used to roam around the campus( Kaveri hostel, Physics dept, library etc). Thanks for refreshing memories Ashok sir.

  9. ಟಿ.ಎಸ್.ಗೊರವರ

    sir, estu chandagi, naviragi, ede kalakuva haage bardidiri mattu oduganolagu aa yaatane dhatisiddiri.

  10. H.Krishnamoorthy

    Dear Sir,
    I read your article and enjoyed it very much. Hope the the following lines suit the gist of it suitably:
    Woes!Woes! Is there a way
    One can forget one’s teeny love or one’s first crush.
    ‘Nay! Nay!’ unto thee I say,
    ‘It haunts one’s woody mind like the song of a thrush’.
    With Regards,
    H.Krishnamoorthy

  11. Appanna

    ಸರ್………….
    ಆಹಾ…………

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading