“ಆತ್ಮೀಯ ಅಶೋಕ್ ಶೆಟ್ಟರ್ ಅವರಿಗೆ, ನಿಮ್ಮ ‘ಶಾಲ್ಮಲಾ’ದಲ್ಲಿ ಸ್ವಂತದ ಬದುಕಿನ ಬಿಡಿ ಚಿತ್ರಗಳು ಓದಿದೆ. ಈ ಸರಣಿಯನ್ನು ಅವಧಿಗೆ ಮುಂದುವರಿಸಬಹುದೇ? ನಿಮ್ಮ ಬದುಕಿನ ಅನುಭವಗಳನ್ನು ‘ಅವಧಿ’ಯ ಓದುಗರೂ ಸವಿಯಲಿ ಎಂಬ ಆಸೆ”ಎಂದು ಗೆಳೆಯ ಜಿ ಎನ್ ಮೋಹನ್ ಅವರು ಫೆಬ್ರುವರಿಯ ಆರಂಭದಲ್ಲಿ ಮೆಸೇಜ್ ಕಳಿಸಿದಾಗ ತಕ್ಷಣಕ್ಕೆ ನಿರ್ದಿಷ್ಟವಾಗಿ ಏನು ಹೇಳಬೇಕೆಂದು ತೋಚದೇ “ಆಗಬಹುದು, ಸ್ವಲ್ಪ ಯೋಚಿಸಿ ಹೇಳುವೆ” ಎಂದಿದ್ದೆ.
ಆತ್ಮಕಥೆ ಅಥವಾ ಆತ್ಮಕಥನವೆಂಬ ಪ್ರಕಾರಕ್ಕೆ ಸೇರಿದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹಲವಾರು ಕೃತಿಗಳನ್ನು ಓದಿದ್ದೇನೆ. ಅವುಗಳ ಓದು ನನಗೆ ಇಷ್ಟ. ಸದ್ಯ ನನ್ನ ಕೈಯ್ಯಲ್ಲಿರುವದು ಆ ಪ್ರಕಾರದ ಇತ್ತೀಚಿನ ಕೃತಿಯಾದ ಡಾ. ಯು ಆರ್ ಅನಂತಮೂರ್ತಿಯವರ “ಸುರಗಿ”. ಇಂಥ ಅಟೋಬಯಾಗ್ರಾಫಿಕಲ್ ಕೃತಿಗಳ ಕುರಿತ ನನ್ನ ಆಸಕ್ತಿ ಓದಿಗೇ ಸೀಮಿತ. ಸ್ವತ: ಅಂಥದೊಂದನ್ನು ಬರೆಯಬೇಕು ಎನ್ನುವದು ನನ್ನ ಕಾರ್ಯ ಪ್ರಣಾಲಿಯಲ್ಲಿ ಇಲ್ಲ. ಅದಕ್ಕೆ ಕಾರಣ ಹಾಗೆ ಆತ್ಮಕಥೆಯೊಂದನ್ನು ಬರೆಯಲು ಸಾಧನೆಗಳ ಒಂದು ಮಟ್ಟವನ್ನು ತಲುಪಿರಬೇಕೆಂಬುದಾಗಲೀ, ಖ್ಯಾತಿಯ ಒಂದು ಹಂತವನ್ನೇರಿರಬೇಕೆಂಬುದಾಗಲೀ, ಆ ಅನುಕೂಲಗಳು ಈ ಹಂತದಲ್ಲಿ ನನಗಿನ್ನೂ ಇಲ್ಲವೆಂಬುದಾಗಲೀ…, ಇದ್ಯಾವುದೂ ಅಲ್ಲ.
ಸಾರ್ವಜನಿಕ ಬದುಕಿನ ಆಯಾಮವೊಂದನ್ನು ಹೊಂದಿದ ಮತ್ತು ತನ್ನ ವೈಯಕ್ತಿಕ ಜೀವನಾನುಭವಗಳನ್ನು ಸಾಮಾಜಿಕವಾಗಿ ಗ್ರಹಿಸುವ ಮತ್ತು ಕಥನಿಸುವ ಕಲೆಯುಳ್ಳ ಯಾರೇ ಆದರೂ ಅದನ್ನು ಬರೆಯಬಹುದು. ಹಾಗಾದಾಗ ಒಬ್ಬ ವ್ಯಕ್ತಿಯ ಜೀವನಾನುಭವ ಒಂದು ಸಾಮಾಜಿಕ ಸಂದರ್ಭದ, ಒಂದು ಕಾಲಘಟ್ಟದ ಮೌಲ್ಯವ್ಯವಸ್ಥೆಯ, ಜೀವನಕ್ರಮ-ಕೌಟುಂಬಿಕ ಸಂಬಂಧಗಳೇ ಮೊದಲಾದ ಎಲ್ಲವುಗಳ ಕಥನವೂ ಆಗುತ್ತದೆ. ಅಂಥ ಬರಹಗಳು ಹಿಂದಿಯಲ್ಲಿ ನಾಲ್ಕು ಸಂಪುಟಗಳಲ್ಲಿ ವಿಸ್ತಾರವಾಗಿದ್ದು ನಂತರ ಪೆಂಗ್ವಿನ್ ನವರು ಅವುಗಳನ್ನು ಸಂಗ್ರಹವಾಗಿ ಒಂದು ಸಂಪುಟದಲ್ಲಿ ಪ್ರಕಟಿಸಿದ In The Afternoon Of Time ಎಂಬ ಹರಿವಂಶರಾಯ್ ಬಚ್ಚನ್ ರ ಆತ್ಮಕತೆಯಂಥ ಉತ್ಕೃಷ್ಟ ಮಾದರಿಗಳಾಗಲಿಕ್ಕಿಲ್ಲ. ಆದರೆ ಯಾವುದು ಮುಖ್ಯ ಯಾವುದು ಅಮುಖ್ಯ ಎಂದು ಹೇಗೆ ಹೇಳುವದು?
ಏನಿದ್ದರೂ,ಆತ್ಮಕಥೆಯಂಥದನ್ನು ಸಾದ್ಯಂತವಾಗಿ ಬರೆಯುವ ಉದ್ದೇಶ-ವಿಚಾರ ನನಗಿಲ್ಲ ಎಂಬುದಕ್ಕೆ ನಿಜವಾದ ಕಾರಣವೆಂದರೆ ಆತ್ಮಕಥೆಯನ್ನು ಬರೆಯುವದು ನಿಜಕ್ಕೂ ತುಂಬ ಕಷ್ಟದ ಕೆಲಸ ಎಂಬುದು…ಅತ್ಯುತ್ತಮ ಲೇಖಕರು ಕೆಟ್ಟ ಆತ್ಮಕಥೆಗಳನ್ನು ಬರೆದಿದ್ದಾರೆ ಎಂಬುದು ಇದನ್ನೇ ತೋರುತ್ತದೆ. ಸಾಂದರ್ಭಿಕವಾಗಿ ನನ್ನ ವೈಯಕ್ತಿಕ ಬದುಕಿನ ಬಿಡಿ ಬಿಡಿಯಾದ ಕೆಲ ಚಿತ್ರಗಳನ್ನು ಅಲ್ಲಲ್ಲಿ ಬರೆದಿರುವ ನಾನು ಈಗ ಮಾಡಲಿಚ್ಛಿಸುವದೂ ಅದನ್ನೇ. ಹೀಗಾಗೇ ಮೋಹನ್ ಅವರಿಗೆ ಫೋನ್ ಮಾಡಿ ಮಾತಾಡಿ ನಾನು ಹೇಳಿದೆ: “ನನ್ನ ಬದುಕಿನ ಅದರ ವಿವಿಧ ಸಂದರ್ಭಗಳ, ಅನುಭವದ, ನಲಿವಿನ, ನೋವಿನ, ನೆನಪುಗಳ, ಆಶೆ-ನಿರಾಶೆಗಳ, ಚೇಷ್ಟೆ ತಮಾಷೆಗಳ ಬಿಡಿಬಿಡಿಯಾದ ನುಡಿಚಿತ್ರಗಳ ಗುಚ್ಛವೊಂದನ್ನು ನನ್ನ ಮನಸಿನಲ್ಲಿ ಅವು ಹೇಗೆ ಮೂಡುತ್ತವೆಯೋ ಹಾಗೆ ಹಾಗೇ ಬಿಡಿಸಿ ನಿಮ್ಮ ಕೈಯ್ಯಲ್ಲಿಡುತ್ತೇನೆ.”
ಅಂಥ ಕೆಲ ಚೆದುರಿದ ಚಿತ್ರಗಳು ಇಲ್ಲಿವೆ.
***** ***** *****
ನಾದದ ನದಿ ನನ್ನೊಳಗೇ ಹರಿದಂತೆ
ಮೊನ್ನೆ ಮೊನ್ನೆ ಧಾರವಾಡದಲ್ಲಿ ಜರುಗಿದ ಸಾಹಿತ್ಯ ಸಮಾವೇಶವೊಂದರ ರೂಪುರೇಷೆಗಳ ಕುರಿತ ಸಮಾಲೋಚನಾ ಸಭೆಯೊಂದಕ್ಕೆ ಹೋಗಿ ಗೆಳೆಯನ ಬೈಕ್ ನಲ್ಲಿ ಹಿಂದೆ ಕುಳಿತು ರಾತ್ರಿ ಮನೆಗೆ ಮರಳುವಾಗ ಕರ್ನಾಟಕ ಕಾಲೇಜು ಬಳಿ ಶಾಮಿಯಾನ, ವೇದಿಕೆ, ಬಣ್ಣ, ಬೆಳಕು. ಕಾಲೇಜಿನ ಮುಖ್ಯಕಟ್ಟಡಕ್ಕೆ ವಿದ್ಯುದ್ದೀಪಾಲಂಕಾರ. ಅದನ್ನೆಲ್ಲ ನೋಡಿ “ಓ ಸುಗಮ ಸಂಗೀತೋತ್ಸವ” ಎಂದುಕೊಂಡೆ. ಆ ಕುರಿತು ಪತ್ರಿಕೆಯಲ್ಲಿ ಓದಿದ್ದೆಷ್ಟೋ ಅಷ್ಟೇ. ಈ ಮಧ್ಯೆ ಉತ್ಸವಗಳೆಂದರೆ ಉತ್ಸಾಹವೇ ಸಾಧ್ಯವಾಗುವದಿಲ್ಲ. ಮತ್ತೆ ನಿನ್ನೆ ಯಾಕೋ ಪೇಟೆಗೆ ಹೋದವನು ಮರಳಿ ಬರುವಾಗ ಕೊಂಚ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕೆಂದು ನಿರ್ಧರಿಸಿಕೊಂಡು ಒಂದು ಕಿಲೋಮೀಟರ್ ದೂರ ನಡೆದು ರಾತ್ರಿ ಒಂಬತ್ತರ ಹೊತ್ತಿಗೆ ಕರ್ನಾಟಕ ಕಾಲೇಜ್ ಸರ್ಕಲ್ ಬಳಿ ಬಂದಾಗ ಮತ್ತೆ ಜನ, ಬೆಳಕು, ಬಣ್ಣ, ನಾದ..ಓ ಈ ಉತ್ಸವ ಇನ್ನೂ ಮುಗಿದಿಲ್ಲ ಹಾಗಾದರೆ ಎಂದುಕೊಂಡು ದಾಟಿ ಮನೆಯತ್ತ ನಡೆದುಬಿಡುತ್ತಿದ್ದೆನೇನೋ.ಆದರೆ “ಕೊನೆಯದಾಗಿ ಬೇಂದ್ರೆಯವರ ಎರಡು ಕವಿತೆಗಳು ಶ್ರೀಮತಿ ಸಂಗೀತಾ ಕಟ್ಟಿ ಅವರಿಂದ” ಎಂದು ಘೋಷಿಸಿದ್ದು ಕೇಳಿಸಿತು. ಧಾರವಾಡ, ಕರ್ನಾಟಕ ಕಾಲೇಜ್ ಮೈದಾನ, ಬೇಂದ್ರೆ ಪದ್ಯ, ಸಂಗೀತಾ ಕಟ್ಟಿಯ ಧ್ವನಿ…, ಡೆಡ್ಲಿ ಕಾಂಬಿನೇಶನ್..! ದಿಕ್ಕು ಬದಲಿಸಿ ಕರ್ನಾಟಕ ಕಾಲೇಜಿನ ಪ್ರವೇಶದ್ವಾರದ ಒಳಗೆ ಹೊಕ್ಕರೆ ಮುಕ್ಕಾಲು ಪಾಲು ಖುರ್ಚಿಗಳು ಖಾಲಿ…!
ಸಂಗೀತಾ ಕಟ್ಟಿ ಮೃದುಮಧುರವಾಗಿ ಶುರು ಮಾಡಿದ್ದಳು
“ಆವು ಈವಿನ ನಾವು ನೀನಿಗೆ
ಆನು ತಾನಾದ ತನ….. ನನಾ
ನಾನು ನೀನಿನ ಈ ನೀನಾನಿಗೆ… ….
ಧಾರವಾಡದ ಹುಡುಗಿ ಈ ಸಂಗೀತಾ ಕಟ್ಟಿ. ಅವಳ ತಂದೆ ಪ್ರೊ.ಎಚ್.ಎ.ಕಟ್ಟಿ ಕರ್ನಾಟಕ ಕಾಲೇಜಿನಲ್ಲೇ ಅಧ್ಯಾಪಕರಾಗಿದ್ದವರು. ನನ್ನ ಮಾವ (ನನ್ನ ಪತ್ನಿಯ ತಂದೆ) ಸಿತಾರ್ ವಾದಕ ಶಿವಾನಂದ ತರ್ಲಗಟ್ಟಿಯವರ ಸಹೋದ್ಯೋಗಿಯಾಗಿದ್ದವರು. ಕರ್ನಾಟಕ ಕಾಲೇಜಿನ ಸಮೀಪದಲ್ಲಿಯೇ ಕಾಲೇಜಿನ ಬೋಧಕ ಸಿಬ್ಬಂದಿಗಾಗಿ ಇದ್ದ ವಸತಿ ಸಾಲಿನ ಒಂದು ಮನೆಯಲ್ಲಿದ್ದ ಅವರನ್ನು ಹಿಂದೊಮ್ಮೆ ಯಾವುದೋ ಸಂದರ್ಭದಲ್ಲಿ ಭೇಟಿಯಾಗಲು ಹೋದಾಗ ಸಂಗೀತಾ ಬಹುಶ: ಪಿಯು ಓದುತ್ತಿದ್ದ ಹುಡುಗಿ. ಕಟ್ಟಿಯವರಿಗೆ ತಮ್ಮ ಮಗಳ ಪ್ರತಿಭೆಯ ಕುರಿತು ಮಾತನಾಡುವದೆಂದರೆ ಹುಗ್ಗಿ. ನೌಷಾದ್ ಮೊದಲಾದವರೊಂದಿಗೆ ಅವಳು ಚಿಕ್ಕ ಹುಡುಗಿಯಾಗಿದ್ದಾಗಿನ ಫೋಟೋ ತೋರಿಸುತ್ತಿದ್ದರು. ಧಾರವಾಡ-ಹುಬ್ಬಳ್ಳಿಯ ಕೆಲ ಪತ್ರಕರ್ತರು ಕಟ್ಟಿಯವರ ಈ ಉತ್ಸಾಹವನ್ನು ತಮಾಷೆ ಮಾಡುತ್ತಿದ್ದುದೂ ಉಂಟು.
ಸಂಗೀತಳ ಕಂಠದಲ್ಲಿ ಕಳೆಗಟ್ಟುತ್ತಿದ್ದ ಬೇಂದ್ರೆ ಕವಿತೆಯನ್ನು ಕಿವಿಯಲ್ಲೂ, “ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ” ಎಂಬಂತೆ ನನ್ನ ಭಾವಕೋಶಗಳನ್ನು ಆವರಿಸಿಕೊಂಡು ಎದುರಿಗೆ ಬಣ್ಣಬಣ್ಣದ ವಿದ್ಯುದ್ದೀಪಗಳಿಂದಲಂಕೃತವಾಗಿ ಮೋಹಕವಾಗಿ ಕಾಣುತ್ತಿದ್ದ, ೧೯೭೫ ರಿಂದ ೭೮ರ ವರೆಗಿನ ಮೂರು ವರ್ಷ ನಾನು ಓದಿದ, ನನ್ನ ಕಾಲೇಜನ್ನು ಕಣ್ಣಲ್ಲೂ ತುಂಬಿಕೊಳ್ಳುತ್ತ ಕುಳಿತೆ.

“ಚಿತ್ತಿ ಮಳಿ ತತ್ತಿ ಹಾಕತಿತ್ತು
ಸ್ವಾತಿ ಮುತ್ತಿನೊಳಗ…..
ಸತ್ಯೋ ಮಗನ ಅಂತ ಕೂಗಿದರು
ಸಾವೀ ಮಗಳು ಭಾವಿ ಮಗಳು
ಕೂಡಿ……
ಇದೇ ಮೈದಾನದಲ್ಲಿ ನಿತ್ಯ ಸಂಜೆ ಕ್ರೀಡಾಳುಗಳು ವಿವಿಧ ಕ್ರೀಡೆಗಳನ್ನು ಪ್ರ್ಯಾಕ್ಟೀಸ್ ಮಾಡುವುದನ್ನು ನೋಡುತ್ತಿದ್ದೆವು. ಆ ದಿನಗಳಲ್ಲಿ ಸುಚಿತ್ರಾ ಎಂಬ ತೆಳ್ಳಗಿನ ದೇಹದ, ಗೌರವರ್ಣದ ಅಯ್ಯಂಗಾರಿ ಹುಡುಗಿಯೊಬ್ಬಳು ಜಿಂಕೆ ಮರಿಯಂತೆ ಓಡುವದನ್ನು ನೋಡಲು ನಾವು ಕಾಯುತ್ತ ನಿಲ್ಲುತ್ತಿದ್ದೆವು. ಆ ಸ್ಪ್ರಿಂಟ್ ಕ್ವೀನ್ ನೂರೋ ಇನ್ನೂರೋ ಮೀಟರ್ ಓಟದ ಸ್ಟಾರ್ಟ್ ಗೆರೆಯನ್ನು ಬಿಟ್ಟಳು ಎಂದು ನಾವು ಅಂದುಕೊಳ್ಳುತ್ತಿರುವಷ್ಟರಲ್ಲೇ ಆಕೆ ಈ ತುದಿ ತಲುಪಿ ಓಟದ ಗತಿಯನ್ನು ನಿಧಾನಗೊಳಿಸಿಕೊಳ್ಳುತ್ತಿರುತ್ತಿದ್ದಳು. ಆ ವರ್ಷದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್-ಕಾಲೇಜು ಕ್ರೀಡಾಕೂಟದಲ್ಲಿ ಸುಚಿತ್ರಾ ಅಯ್ಯಂಗಾರ್ ಎಂಬ ಆ ಚೆಲುವೆ ಆ ಮುಂಚಿನ ಎಲ್ಲ ದಾಖಲೆಗಳ ಮಗ್ಗಲು ಮುರಿದಿದ್ದಳು. ರಾಮು ಕಾಳೆ ಎಂಬ, ಈಗ ಎಲ್ಲೋ ಒಂದೆಡೆ ಪೋಲಿಸ್ ಇನ್ಸ್ಪೆಕ್ಟರ್ ಆಗಿರುವ, ನನ್ನೊಬ್ಬ ಗೆಳೆಯ ಕಬಡ್ಡೀ ಕಬಡ್ಡೀ ಎನ್ನುತ್ತ ಎದುರಾಳಿಗಳ ಮೇಲೇರಿ ತನ್ನನ್ನ ಸುತ್ತುವರಿದು ಹಿಡಿದು ಹಾಕಿದ ಅವರೆಲ್ಲರ ನಡುವಿನಿಂದಲೇ ಅದ್ಯಾವ ಮಾಯದಿಂದಲೋ ಪುಟೆದೆದ್ದು ಅವರ ಸಮೇತ ಕೊಸರಾಡಿಕೊಂಡು ಉಸಿರು ಬಿಡದೇ ಕಬ್ಬಡ್ಡೀ ಎನ್ನುತ್ತ ಚಿರತೆಯಂತೆ ಮೈ ಹಿಗ್ಗಿಸಿ ಮಧ್ಯದ ಬಿಳಿ ಸುಣ್ಣದ ಗೆರೆಯನ್ನು ಮುಟ್ಟಿ ಅವರೆಲ್ಲ ಅಂಕಣದ ಹೊರಗೆ ನಡೆಯುವಂತೆ ಮಾಡುವದನ್ನು ನೋಡಲು ಹುಡುಗಿಯರೂ ಬರುತ್ತಿದ್ದರು. (ಅಂಥವರಲ್ಲಿ ದಾವಣಗೆರೆ ಕಡೆಯ ಹುಡುಗಿಯೊಬ್ಬಳು ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಇವನು ಭಾವಿಸಿದ್ದ. ಆಕೆ ತನಗೆ “ಅಂಥ ಭಾವವೇನೂ ಇಲ್ಲವಲ್ಲಾ” ಎಂದಾಗ ಬೇಸರ-ಕೋಪ ಪಟ್ಟುಕೊಂಡು ಅವಳೊಂದಿಗೆ ಜಗಳ ಮಾಡಿದ್ದ). ಇನ್ನೆಲ್ಲೋ ಪೋಲ್ವಾಲ್ಟ್ ನೆಗೆಯುತ್ತಿದ್ದವರು ಮತ್ತೆಲ್ಲೋ ಲಾಂಗ್ಜಂಪ್ ಜಿಗಿಯುತ್ತಿದ್ದವರು. ಹೀಗೆ ಈ ದೇಹದಂಡನೆ ಮಾಡಿಕೊಳ್ಳುವವರ ದಂಡು ಕರಗಿದ ಮೇಲೆ ಇನ್ನೇನು ಮಬ್ಬುಗತ್ತಲು ಆವರಿಸಿಕೊಳ್ಳಲಿದೆ ಎನ್ನುವಾಗ ನಮ್ಮ ಪ್ರೀತಿಪಾತ್ರ ಲಂಗಾಬ್ಲೌಸಿನ ದೇಹಗಳನ್ನು ಧ್ಯಾನಿಸುತ್ತ ದೇಹಿ ಎಂದು ಲೇಡೀಸ್ ಹಾಸ್ಟೆಲ್ ಮುಂದೆ ನಿಂತು ನಮ್ಮ ಪುಟ್ಟ ಪ್ರೇಮಸಾಮ್ರಾಜ್ಯದ ಗಡಿಗಳನ್ನು ಈ ದಿಕ್ಕಿನಲ್ಲಿ ವಿಸ್ತರಿಸಿಕೊಂಡು ಈ ಆಟದ ಮೈದಾನದತ್ತ ಬಂದು ಅದೋ ಆ ಮೆಟ್ಟಿಲುಗಳ ಮೇಲೆ ಕೂತು ನಾವು ಲಲ್ಲೆಗರೆಯುತ್ತಿದ್ದೆವು.
“ಈ ಜಗ ಅಪ್ಪಾ ಅಮ್ಮನ ಮೊಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ಮೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ”
ಸಂಗೀತಾಳ ಹಾಡು ಇನ್ನೊಂದು ಮಜಲು ಮುಟ್ಟಿತ್ತು
ಆಹಾಹಾ, ನಾನಿನ್ನು ಭರಿಸಲಾರೆ ಎಂಬಂಥ ಆನಂದ.
ವಿದ್ಯೆ,ಸಾಹಿತ್ಯ,ಸಂಗೀತ,ಚರ್ಚೆ,ಅಲೆದಾಟ, ತಂಗಾಳಿ, ಸೊಕ್ಕಿ ಬೆಳೆದ ದೊಡ್ಡ ದೊಡ್ಡ ಆಲದ ಮರಗಳ ನೆರಳು ಮತ್ತು ಸದ್ದು. ಹೊಸ ಹೊಸ ಗೆಳೆಯರು,ಒಬ್ಬಿಬ್ಬರು ಗೆಳತಿಯರು, ಅವರ ಸಖಿಯರು (ನನ್ನ ಮುಹ್ಬೋಲಿ ಸಿಸ್ಟರ್ಸ್!)…, ನನ್ನಲ್ಲಿ ಹೊಸ ಪುಳಕ, ಹೊಸ ಸಂವೇದನೆಗಳು ಹುಟ್ಟಿಕೊಳ್ಳತೊಡಗಿದ್ದವು. ಬೈಲಹೊಂಗಲದಿಂದ ಬಿ.ಎ ಓದಲು ಇಲ್ಲಿಗೆ ಬಂದ ಹೊಸದರಲ್ಲಿ ಗುರುತು ಪರಿಚಯವಿಲ್ಲದ, ಪರಿಚಿತರಿಲ್ಲದ ಈ ದೊಡ್ಡ ಊರಲ್ಲಿ ಇರುವದು ಹೇಗಪ್ಪಾ? ಎಂದು ಮಂಕು ಕವಿದವರಂತೆ ಇರುತ್ತಿದ್ದ ನನ್ನ ವಿಷಣ್ಣತೆಗೆ ಅರ್ಥವೇ ಇಲ್ಲ ಎನ್ನುವಂತೆ ನಾನು ಹೊಂದಿಕೊಳ್ಳತೊಡಗಿದೆ. ವರ್ಷೊಪ್ಪತ್ತಿನಲ್ಲಿ ವಿವಿಧ ಕಾರಣಗಳಿಗಾಗಿ “ಅಶೋಕ ಶೆಟ್ಟರ?.., ಯಾರು, ಆ ಖಾದಿ ಜುಬ್ಬಾ,ಚಸ್ಮಾ, ಬಗಲಾಗ ಚೀಲಾ,ಗಡ್ಡಾ, ತಂಬಾಕು..?, ಎಂದು ನನ್ನ ಚೆಹರಾಪಟ್ಟಿಯನ್ನ್ನುಯಾರಾದರೂ ಹೇಳತೊಡಗಿದರೆ “ಹಾಂ, ಅವರs ಅವರs” ಎಂದು ಹೇಳುವಷ್ಟು ನಾನು ಪರಿಚಿತನಾಗಿದ್ದೆ. ಮುಂದಿನೆರಡು ವರ್ಷಗಳಲ್ಲಿ ಸ್ವಲ್ಪ ಸೊಗಸುಗಾರನಾದೆ. ಬೈಲಹೊಂಗಲದಲ್ಲಿ ಪದವಿಪೂರ್ವ ಹಂತದಲ್ಲೇ ನಾನು ಜಾಲಾಡಿ ಮುಗಿಸಿದ್ದ ಎನ್.ನರಸಿಂಹಯ್ಯ, ಮಾ.ಭಿ.ಶೇಷಗಿರಿರಾವ್, ಎಂ.ಕೆ.ಇಂದಿರಾ, ತ್ರಿವೇಣಿ, ತರಾಸು. ಅನಕೃ, ಭೈರಪ್ಪಾದಿಗಳೆಲ್ಲ ಮತ್ತು “ವಯಸ್ಕರಿಗೆ ಮಾತ್ರ,ವಯಸ್ಕರಲ್ಲದವರು ಖಂಡಿತ ಓದಬಾರದು” ಎಂಬ ಆರಂಭಿಕ ಒಕ್ಕಣೆಯ ಪುಸ್ತಕಗಳು ಹಿನ್ನೆಲೆಗೆ ಸರಿದು ಹೊಸೆಲ್ಲಾಪುರದ ನೀಲಗಾರ ಓಣಿಯಲ್ಲಿ ಅಟ್ಟದ ಮೇಲೆ ಒಂದು ಕೋಣೆ ಬಾಡಿಗೆಗೆ ಹಿಡಿದು ಇರುತ್ತಿದ್ದ ಮಹಾಬಳೇಶ್ವರ ಕಾಟ್ರಹಳ್ಳಿ, ರುದ್ರಪ್ಪ ಕಾಯಿ ಮೊದಲಾದ ಗೆಳೆಯರ ಜೊತೆಗೂಡಿ ಲಂಕೇಶ್, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ,ದೇವನೂರು ಮಹಾದೇವ, ಕೃಷ್ಣ ಆಲನಹಳ್ಳಿ ಇಂಥವರ ಕತೆ ಕಾದಂಬರಿಗಳಿಗೂ, ಅದು ವರೆಗೆ ನನಗೆ ಅಪರಿಚಿತವಾಗಿದ್ದ ಮಾರ್ಕ್ಸ್,ಲೋಹಿಯಾ ಮುಂತಾದ ಚಿಂತಕರ ರಾಜಕೀಯ ಸಾಮಾಜಿಕ ಸಿದ್ದಾಂತಗಳ ಲೋಕಕ್ಕೂ ಪ್ರವೇಶಿಸಿ ತುರ್ತು ಪರಿಸ್ಥಿಯ ಆ ದಿನಗಳಲ್ಲಿ ಅಷ್ಟಿಷ್ಟು ಮಾರ್ಕ್ಸ್ವಾದಿಗಳ ಪ್ರಭಾವವಲಯದಲ್ಲಿ ಬಂದಿದ್ದೆ.

ಕಮ್ಯುನಿಜಂ, ಸೋಷಲಿಜಂ ಮೊದಲಾದ ಸಿದ್ಧಾಂತಗಳ ಕುರಿತು ಇನ್ನಿಲ್ಲದಂತೆ ವಾದಿಸುತ್ತಿದ್ದ ವಿಜಯ ಪಾಟೀಲ್, ಶ್ರೀಧರ್ ಕಲಿವೀರ, ಗುಡಿಹಳ್ಳಿ ನಾಗರಾಜ, ವಿ.ಎನ್.ಹಳಕಟ್ಟಿ, ಮೋಹನಕುಮಾರ್ ಕೊಂಡಜ್ಜಿ. ಮೋಹನ್ ಹಿಪ್ಪರಗಿ,ಶಿವಯೋಗಿ ಪ್ಯಾಟಿಶೆಟ್ಟರ್, ಮೋಹನ್ ಉತ್ತಂಗಿ, ಅಪ್ಪಾಸಾಹೇಬ ಯರನಾಳ್,ರಮಜಾನ್ ದರ್ಗಾ, ಯಡೂರ್ ಮಹಾಬಲ,ಜಿ.ಸಿ.ಜೋಗೂರ್, ಸನತ್ ಕುಮಾರ ಬೆಳಗಲಿ,ರುದ್ರಪ್ಪಾ ಕಾಯಿ,ಶರಣ್ ಮಾಲಿಪಾಟೀಲ್,ಸಿದ್ದಲಿಂಗ ದೇಸಾಯಿ,ಸರಜೂ ಕಾಟಕರ್,ಸತೀಶ್ ಕುಲಕರ್ಣಿ, ಮಹಾಬಲೇಶ್ವರ ಕಾಟ್ರಹಳ್ಳಿ,ಜಗದೀಶ್ ಮಂಗಳೂರ, ಅಲ್ಲಮಪ್ರಭು ಬೆಟ್ಟದೂರ್,ಹೇಮಾ ಹೊನ್ನಾಪೂರಮಠ್,ಜಯಲಕ್ಷ್ಮಿ ಆದ್ಯ, ಮೀರಾ ದೇಶಪಾಂಡೆ,ತಾರಾ ಹೆಗಡೆ ಹೀಗೆ ಹೊಸ ಬಗೆಯ ಚಿಂತನೆಯತ್ತ ಒಲವು ಹೊಂದಿದ್ದ ಯುವಕ ಯುವತಿಯರ ಒಂದು ದೊಡ್ಡ ಪಡೆಯೇ ಆಗ ಧಾರವಾಡ-ಹುಬ್ಬಳ್ಳಿಗಳಲ್ಲಿತ್ತು. ಬಸ್ ಸ್ಟಾಂಡಿನ ಪಕ್ಕದಲ್ಲಿ ಪ್ರಮುಖ ಸ್ಥಳದಲ್ಲಿ ಇದ್ದ, ಸ್ವತ: ಸೋಶಲಿಸ್ಟ್ ಚಳುವಳಿಯ ಕುರಿತು ಆಸಕ್ತಿ ಇಟ್ಟುಕೊಂಡಿದ್ದ ಹಡಪದ ರಾಚಪ್ಪನ ಕ್ಷೌರದಂಗಡಿಯಲ್ಲೋ, ಸಿಟಿ ಪೋಲಿಸ್ ಠಾಣೆಯ ಬಳಿ ಇದ್ದ ಒಂದು ಹೊಟೆಲ್ ನಲ್ಲೋ ಇವರಲ್ಲಿ ಕೆಲವರು ಸೇರುತ್ತಿದ್ದುದಿತ್ತು. ಒಮ್ಮೊಮ್ಮೆ ಸಂಯುಕ್ತ ಕಾರ್ಯಾಚರಣೆಯ ಸಂದರ್ಭಗಳಲ್ಲಿ ಕಮ್ಯುನಿಸ್ಟರು ಸೋಷಲಿಸ್ಟರೊಂದಿಗೆ ಹೊಂದಿಕೊಳ್ಳುತ್ತಿದ್ದರು. ಆದರೆ ಪರಸ್ಪರ ತಮ್ಮೊಳಗೇ ಈ ಕಮ್ಯುನಿಸ್ಟರು ಅಂದರೆ ಸಿ.ಪಿ.ಐ ಮತ್ತು ಸಿ.ಪಿ.ಐ(ಎಂ) ನ ಗೆಳೆಯರು ತುಂಬ ಸೆಕ್ಟೇರಿಯನ್ ಆಗಿ ದಾಯಾದಿಗಳಂತೆ ಇರುತ್ತಿದ್ದರು. ಹೊರಗೆ ಇಂಥ ಒಡನಾಟಗಳ ನಡುವೆ ನಾವಿದ್ದ ದಿನಗಳಲ್ಲಿ ಕ್ಲಾಸಿನೊಳಗೆ ಒಮ್ಮೆ ಯಥಾಪ್ರಕಾರದ ತಮ್ಮ ಕರೀ ಕೋಟು, ಕರೀ ಪ್ಯಾಂಟು, ದುಂಡಾಕಾರದ ಕರೀ ಟೋಪಿ, ಹಣೆಗೆ ನಾಮ ಇಷ್ಟು ವೇಷಭೂಷಣಧಾರಿಗಳಾದ, ನಮಗೆ ಬೇಸಿಕ್ ಇಂಗ್ಲೀಷ್ ಪಾಠ ಮಾಡುತ್ತಿದ್ದ ಪ್ರೊ.ಕೆ.ಎಸ್.ನಾರಾಯಣಾಚಾರ್ಯರು ಟೇಬಲ್ ಮೇಲೆ ಕುಳಿತು,ಕಾಲುಗಳನ್ನು ಕೆಳಗೆ ಇಳಿಬಿಟ್ಟುಕೊಂಡು, ಕೈಯ್ಯಲ್ಲಿ ಪುಸ್ತಕ ಹಿಡಿದು ಕನ್ನಡಕದ ಸಂದಿಯಿಂದ ನೋಡುತ್ತ “ಒಬ್ಬೊಬ್ಬರಿಗೆ ಒಂದೊಂದು ನಮೂನೆಯ ಹುಚ್ಚು, ಕೆಲವರಿಗೆ ಜಗತ್ತಿನಲ್ಲಿ ಸಮಾನತೆ ತರಬೇಕು ಎನ್ನುವ ಹುಚ್ಚು” ಎಂದರು! ಪಕ್ಕದ ಸಾಲಿನ ಡೆಸ್ಕ್ನಲ್ಲಿ ಕುಳಿತ ರುದ್ರಪ್ಪ ಕಾಯಿಗೆ ನಾನು ಒಂದು ನೋಟ್ ಬುಕ್ನಲ್ಲಿ ಹೀಗೆ ಬರೆದು ತಳ್ಳಿದೆ: “ನಾನು ಮತ್ತು ನೀನು ಆ ಕೆಟಗರಿಯಲ್ಲಿ ಬರುತ್ತೇವೆ”. ಅದಕ್ಕೆ ಅವನು ಹೀಗೆ ಬರೆದು ನನ್ನತ್ತ ತಳ್ಳಿದ: “ಚಿಂತೆ ಇಲ್ಲ, ಅದೊಂದು ಅರ್ಥಪೂರ್ಣವಾದ ಹುಚ್ಚು”.
ಸಾದನಕೇರಿಯ ಒಂದನೇ ಕ್ರಾಸಿನಿಂದ ಬೆಳಗಿನ ಒಂಬತ್ತೂವರೆಗೆ ಹೊರಟು ದಾಸನಕೊಪ್ಪ ಕೂಡುರಸ್ತೆಗಳ ಒಂದು ಬದಿಗೆ ಅರಣ್ಯದ ಒಂದು ತುಂಡನ್ನು ಬೇರ್ಪಡಿಸಿಕೊಂಡು ತಂದು ನೆಟ್ಟಂತಿದ್ದ ಹಸಿರು ವಿಸ್ತಾರದ ನಡುವೆ ಹುದುಗಿ ಹೋಗಿದ್ದ ರೇಲ್ವೇ ಪ್ರಶಿಕ್ಷಣ್ ಸ್ಕೂಲ್ ಎಂಬ ಕಟ್ಟಡವೊಂದರ ಪರಿಸರದ ಕಾಲು ದಾರಿಯಲ್ಲಿ ನಡೆದು ನಾನು ಕಾಲೇಜು ತಲುಪಿ ಕ್ಲಾಸು ಪ್ರವೇಶಿಸಿದರೆ ತಮ್ಮ ವಿಭಿನ್ನ ಕತೆಗಳಿಂದಾಗಿ ನವ್ಯ ಸಾಹಿತ್ಯದ ಆ ದಿನಮಾನಗಳಲ್ಲಿ ಕೊಂಚ ಹೆಸರು ಮಾಡಿದ್ದ ವೀಣಾ ಯಲಬುರ್ಗಿ ಮಧ್ಯೆ ಒಂದೊಂದು ಅಕ್ಷರಗಳನ್ನು ತೊದಲುವ ಮಕ್ಕಳಂತೆ ಉಚ್ಛರಿಸುತ್ತ, ಗೌಜು ಗದ್ದಲ ಮಾಡುತ್ತಿದ್ದ ವಿದ್ಯಾರ್ಥಿಗಳ ವರ್ತನೆಗೆ ಬೇಸರಿಸಿಕೊಳ್ಳುತ್ತ ನಮಗೆ ಇಂಗ್ಲಿಷ್ ನ ಯಾವುದೋ ಒಂದು ಪಠ್ಯವನ್ನು ಬೋಧಿಸುತ್ತಿದ್ದರು, ಅವರ ಕ್ಲಾಸು ಇನ್ನೂ ಪರವಾಗಿರಲಿಲ್ಲ. ನಾಡಿಗೇರ್ ಅಂತ ಇನ್ನೊಬ್ಬ ಸಾಧು ಸ್ವಭಾವದ ಇಂಗ್ಲಿಷ್ ಲೆಕ್ಚರರ್ ಕ್ಲಾಸ್ ಅಂತೂ ಅರಣ್ಯರೋದನ. ಮಾತು,ಗುಸುಗುಸು,ಆಗಮನ,ನಿರ್ಗಮನಗಳು,ಬೆಟ್ ಕಟ್ಟಿ ಕೊನೆಯ ಸಾಲಿನಲ್ಲಿ ಕುಳಿತ ಹುಡುಗಿಯರು ಮುಡಿದ ಹೂ ಕಿತ್ತುಕೊಂಡು ಬರುವ ಧೀರರ ಬೀಗುವಿಕೆಗಳ ನಡುವೆಯೇ ಪಾಠ.ಮುಗಿಸಿ ಹೋಗುತ್ತಿದ್ದರವರು. ಇದರ ನಡುವೆ ಶ್ರದ್ಧೆಯಿಂದ ಓದುವವರು ಓದುತ್ತಿದ್ದರು. ಪ್ರತಿವರ್ಷ ಕರ್ನಾಟಕ ಕಾಲೇಜಿಗೆ ವಿವಿಧ ಪರೀಕ್ಷೆಗಳಲ್ಲಿ ರಾಂಕ್ ಬರುತ್ತಲೇ ಇದ್ದವು.
ಸಂಗೀತಾ ಕಟ್ಟಿ ಯ ಹಾಡು ಹರಿಬಿಟ್ಟ ನಾದದ ನದಿ ನನ್ನೊಳಗೇ ಜುಳು ಜುಳು ಹರಿಯುತ್ತಿದೆ ಎನ್ನಿಸಿತು
“ಷಡ್ಜ ಕೊಡ್ರಿ” ಎಂದು ತಮ್ಮ ವಾದ್ಯಗಾರರಿಗೆ ಮೈಕಿನಲ್ಲಿ ಎಲ್ಲರಿಗೂ ಕೇಳುವಂತೆಯೇ ಹೇಳುತ್ತಿದ್ದ ಸಂಗೀತಾ ಕಟ್ಟಿ ಬೇಂದ್ರೆಯವರ ನಾಕು ತಂತಿಯ ಕವಿತೆಯನ್ನು ನಾದದ ತಾರಕಕ್ಕೆ ಒಯ್ಯುತ್ತಿದ್ದಂತಿತ್ತು
ನಾನು
ನೀನು
ಆನು
ತಾನು
ನಾಕು ನಾಕೇ……..
ತಂತಿ…………
ಜೊತೆಗೆ ನನ್ನ ಬದುಕಿನ ಮೂರು ಅತ್ಯಂತ ಸುಖಕರ ವರ್ಷಗಳನ್ನು ನಾನು ಕಳೆದ ಕರ್ನಾಟಕ ಕಾಲೇಜಿನ ನೆನಪುಗಳದೊಂದು ನದಿಯೂ ಅದರ ಜೊತೆ ಮೇಳೈಸಿತ್ತು. ಆ ಮೂರು ವರ್ಷಗಳ ನೆನಪುಗಳಿಗೆ ಬಹಳ ಮುಖಗಳಿವೆ, ಅವಕಾಶ ಸಿಕ್ಕರೆ ಹೊರಹೊಮ್ಮಲು ಸದಾ ಸಿದ್ಧವಿರುವ ನೆನಪುಗಳವು…!







ಶೆಟ್ಟರ್, ಶೆಟ್ರ ಅಂಗಡಿಯಲ್ಲಿ ಇಂತಹ ಸರಕುಗಳಿವೆ ಅಂತಾ ಗೊತ್ತಿರಲಿಲ್ಲ. ನಿಜಕ್ಕೂ ಖುಷಿಯಾಯಿತು. ನೀವು, ರವಿಬೆಳೆಗೆರೆ ಜೊತೆಗೂಡಿ ಇತಿಹಾಸ ಓದಿದ್ದು ಬರಿಯಿರಿ ಕಾದಿದ್ದೇನೆ.
ಅಂತೂ ಇಂತೂ ನೆನೆಪಿನ ನದಿ ಹರಿಯೋಕೆ ಶುರುವಾಯ್ತಲ್ಲ. ಕಾಯುವವರಲ್ಲಿ ನಾನೂ ಒಬ್ಬಳು.
-ಔರಂಗಾಬಾದಿನಿಂದ ಪ್ರಜ್ಞಾ
ಮೊದಲ್ನೇ ಬಾಲಿಗೇ ಸಿಕ್ಸರ್… ಶಬಾಶ್ ಅಶೋಕ ಶೆಟ್ಟರ್… ಧಾರವಾಡದ ಚಿತ್ರ ಕಣ್ಣ ಮುಂದ ಬಂತು… ಕಾಯುತ್ತಿರುವೆ ಮುಂದಿನ ಕಂತು…
ಖುಷಿಯಾಗುತ್ತಿದೆ ಸರ್….ನಿಮ್ಮ ನೆನಪಿನ ನಾದವು ಶಾಲ್ಮಲಾ ನದಿಯಂತೆ ನಿತ್ಯ ನಿರಂತರವಾಗಿ ಪ್ರವಹಿಸಲಿ….ಶುಭಾಶಯಗಳೊಂದಿಗೆ….ಶುಭದಿನ….
saahEbrE,
bhaaree khuShi khuShi!
Anjali Ramanna
ಕರ್ನಾಟಕ ಕಾಲೇಜ್ ನ ನನ್ನ ದಿನಗಳು ನೆನೆದರೆ ಪ್ರಸಕ್ತದ ಮರುಭೂಮಿ ಬದುಕಲ್ಲಿ ಹಸಿರು,ತುಂತುರು ಮಳೆ ,ಸಂಪಿಗೆಯ ಪರಿಮಳ.ನೆನಪುಗಳ ಮಾತೇ ಮಧುರ
sir,
really happyyyy….
ನೋಡಲು ತುಂಬಾ ತುಂಬಾ ಗಂಭೀರವೆನ್ನಿಸುವ ನಮ್ಮ ಶೆಟ್ಟರ್ ಸರ್ ಅವರ ಕಿಲಾಡಿ ದಿನಗಳ ಕಥನವನ್ನು ಓದದೆ ಬಿಟ್ಟೋರುಂಟೇ? ಬಿಟ್ಟು ಕೆಟ್ಟೋರುಂಟೇ? ಆಹಾ ರುಚಿ! 🙂
ಸಿಕ್ಕ ಅವಕಾಶದಲ್ಲಿ ಹೊರಹೊಮ್ಮುವ ಸದಾ ಸಿದ್ಧವಿರುವ ನಿಮ್ಮ ನೆನಪುಗಳ ಹೊಳೆಗಾಗಿ ನನ್ನ ಸ್ಮೃತಿಪಟಲದ ಬರನಾಡು ಜಾತಕ ಪಕ್ಷಿಯಾಗಿದೆ… ನಿಮ್ಮ ಮುಂದಿನ ನೆನಪುಗಳ ಬುಗ್ಗೆಗಾಗಿ ಎದುರುನೋಡುತ್ತಿರುವೆ.
stream of consciousness…..tumba sogasagide sir baraha!
ಅಶೋಕ್ ಸರ್ ತುಂಬಾ ಚೆನ್ನಾಗಿ ಬರೆಯುತ್ತೀರಿ. ‘ಬರೆಯುವುದನ್ನು ಬದುಕುವುದಕ್ಕಿಂಥ, ಬದುಕಿದ್ದನ್ನು ಬರೆಯಬೇಕಂತೆ!’ ಆಗ ಬರಹ ಸತ್ವಯುತವಾಗಿದ್ದು, ಓದುಗರನ್ನೂ ಸುತ್ತಿ ತನ್ನಲ್ಲಿ ಸೆಳೆದುಕೊಳ್ಳುತ್ತದಂತೆ! ಅಂಥ ಸಾಲಿನಲ್ಲಿ ನಿಲ್ಲುತ್ತವೆ, ನೆನಪುಗಳಿಂದ ಪಡಿಮೂಡುವ ಬರಹಗಳು. ಬರಹದ ಜೊತೆಗೆ ಬೇಂದ್ರೆ ಅಜ್ಜನ ಸಾಲುಗಳ ಜೊತೆ ಸಿಕ್ಕದ್ದು ಬರಹವನ್ನು ಇನ್ನಷ್ಟು ರುಚಿಕಟ್ಟಿಸಿದೆ. ಅಭಿನಂದನೆಗಳು.
– ಪ್ರಸಾದ್.ಡಿ.ವಿ.
ಪ್ರೋ.ಅಶೋಕ ಶೆಟ್ಟರ್ ಸರ್,
ಧಾರವಾಡದ ಗಾಳಿ,ಮಣ್ಣು,ಹಸಿರು,ಮಳೆ,ಸಂಗೀತ,ಸಾಹಿತ್ಯ,ನಾಟ್ಯ,ನಾಟಕ,ತವಕ,ತಲ್ಲಣ,ಓಡಾಟ,ಹೋರಾಟ..ಎಲ್ಲವೂ ಮೈ ರೋಮಾಂಚನಗೊಳಿಸುವ ಘಳಿಗೆಗಳು…ಅದರ ನೆನಪುಗಳ ಬುತ್ತಿಯನ್ನು ತಮ್ಮ ಬದುಕಿನ ಬಂಡಿಯಲ್ಲಿ ಹೊತ್ತು ತಂದು ಉಣಬಡಿಸಲು ಸಜ್ಜಾದ ತಮಗೆ ಮತ್ತು ಇದಕ್ಕೆ ಕಾರಣರಾದ ಜಿ.ಎನ್.ಮೋಹನ ಅವರಿಗೆ ಅಭಿನಂದನೆಗಳು.-ಡಾ.ಪ್ರಕಾಶ ಗ.ಖಾಡೆ
ashok tumba chennagi barediruviri, shalmala nirantara pravahisali
kumvee
ಅಶೋಕ್ ಶೆಟ್ಟರ್ ಸರ್ ಗೆ ನಮಸ್ಕಾರಗಳು.
ಕರ್ನಾಟಕ ಕಾಲೇಜಿನಲ್ಲಿ ಕಳೆದ ನನ್ನ ದಿನಗಳನ್ನೂ ನೆನಪಿಸಿಗೊಳ್ಳುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್. ಪ್ರೊ.ತಿಮ್ಮನಗೌಡರ, ಮರಳಪ್ಪನವರ್, ಜಮಖಂಡಿ ಸರ್, ಕುಲಕರ್ಣಿ ಸರ್, ಜೋಶಿ ಸರ್ ಮುಂತಾದವರು ಕಲಿಸಿದ ಪಾಠಗಳನ್ನು ಇಂದಿಗೂ ಕೂಡ ಮರೆಯಲಾಗದು. ಧಾರವಾಡಕ್ಕೆ “ವಿದ್ಯಾಕಾಶಿ” ಎಂಬ ಹೆಸರು ಬರುವಲ್ಲಿ ಕರ್ನಾಟಕ ಕಾಲೇಜಿನ ಪಾತ್ರ ಬಹಳಷ್ಟಿದೆ.
“ಬರೆದಿರುವಿರಿ”?
ಅಣ್ಣಯ್ಯ ಕುಂ.ವೀ.., ನಿನ್ನಿಂದ ನನಗೆ ಬಹುವಚನ ಪ್ರಯೋಗ…! ಸಲ್ಲದು. ನೀನೇ ೧೯೯೪ರ ಆರಂಭದಲ್ಲಿ ಬರೆದ ಒಂದು ಓಲೆ, ನನ್ನ ಫೇಸ್ ಬುಕ್ ಅಲ್ಬಂ ಗಳಲ್ಲಿ “ಉತ್ಖನನ” ಎಂಬ ಹೆಸರಲ್ಲಿದೆ.ಅದು ಹೀಗಿದೆ:
ಮಿತ್ರ ಅ.ಶೆಟ್ಟರ್
ನಿನಗೆ ಕಾವ್ಯದ ಮೂಲಕ ದೊರಕಿರುವ ಪ್ರಶಸ್ತಿ ನಮಗೆಲ್ಲ ಸಂತೋಷ ತಂದಿದೆ, ನಾವೆಲ್ಲ ನಿನ್ನ ಪದ್ಯದ ಚಲಾಕಿತನದ ಬಗ್ಗೆ ಆಡಿಕೊಳ್ತಿದ್ವಿ, ಹೊಟ್ಟಿಕಿಚ್ಚು ಇತ್ತು ಒಳಗೊಳಗೆ. ಈಗ ಹೊಟ್ಟೆಕಿಚ್ಚು ಮತ್ತಷ್ಟು ಹೆಚ್ಚಿದೆ. ಶೆಟ್ಟರ್ ನಷ್ಟು ಪದ್ಯ ಚೆನ್ನಾಗಿ ಬರಿಲಿಕ್ಕಾಗ್ತಿಲ್ವಲ್ಲ ಅಂತ, ಅಭಿನಂದನೆಗಳು ಕಣಯ್ಯಾ, ನಿನ್ನಂಥ ಸೋಮಾರಿಗಳು ಇಂಥ ಪ್ರಶಸ್ತಿಯಿಂದ ಜಾಗೃತರಾಗಬಹುದು, ಒಮ್ಮೆ ಎಲ್ಲಾದರೂ ಸಿಗೋಣ…
ಅಣ್ಣಯ್ಯಾ, ಅಲ್ಲಿಯ ನಿನ್ನ ಪತ್ರದಲ್ಲಿರುವ ಏಕವಚನ ಪ್ರಯೋಗ ನನ್ನನ್ನು ಹೆಚ್ಚು ಆತ್ಮೀಯವಾಗಿ ಒಳಗೊಳ್ಳುತ್ತದೆ ಎಂಬ ನಮ್ರ ವಿನಂತಿಯೊಂದಿಗೆ
Ashok shettar aaraamakke neeve helthaa iddireno annisthittu oduttiruvashtu hottoo … tumba chennagide
ಗೆಳೆಯ ಅಶೋಕ ಶೆಟ್ಟರ,
ತುಂಬಾ ವರ್ಷಗಳಾಯಿತು… ನಿನ್ನ ಭೇಟಿ. ನಿನ್ನ `ವಿಶ್ವವಿದ್ಯಾಲಯದೊಳಗೆ’ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ನಂತರ ಕವಿಯಾದ ನೀನು ಎಲ್ಲಿ ಮಾಯವಾದೆ? ಅಂದುಕೊಂಡು ಅಲ್ಲೊಂದು ಇಲ್ಲೊಂದು ಕಣ್ಣಿಗೆ ಬಿದ್ದ ಬರಹ ಓದುತ್ತಿದ್ದೆ. ಗೆಳೆಯರಾದ ಸರಜೂ, ಸತೀಶ ಸಿಕ್ಕಾಗ ಒಮ್ಮೆ ಮಾತಲ್ಲಿ ನೀನೂ ಬಂದು ಹೋಗುತ್ತಿದ್ದೆ.FACE BOOKನಲ್ಲಿ ನಿನ್ನ ಕ್ರಿಯಾಶೀಲ ಚಟುವಟಿಕೆ ಗಮನಿಸಿದ್ದೆ.(ಆರೆಂಟು ತಿಂಗಳಿಂದ ಅದರಿಂದ ದೂರ ಉಳಿದಿದ್ದೇನೆ)…ಒಮ್ಮೆ ನೀನು ಪ್ರಪಂಚದ ‘ಪಾಪು’ ಅವರನ್ನು (ಕಂಬಾರರಿಗೆ ಜ್ಞಾನಪೀಠ ಬಂದದ್ದಕ್ಕೆ ಕಟಕಿಯಾಡಿದ ಸಂದಭರ್ದಲ್ಲಿ)ತರಾಟೆಗೆ ತೆಗೆದುಕೊಂಡ ಮಾತು ಓದಿದ್ದೆ. ‘ಅವಧಿ’ಯಲ್ಲಿ ವಾರಕ್ಕೊಮ್ಮೆ ನೀನು ಬರೆಯುವುದು ಒಳ್ಳೆಯದಾಯಿತು. ಬೆಂದ್ರೆ ಕಾವ್ಯದ ಗಾಯಕಿ ಸಂಗೀತಾಕಟ್ಟಿ ಮೂಲಕ ನಿನ್ನ ಧಾರವಾಡ ಕಾಲೇಜಿನ ಗತ ನೆನಪು,ಅಂದಿನ ಗೆಳೆಯರ ಒಡನಾಟದ ಪಟ್ಟಿ ನೀಡಿದ್ಷಿದ್ದು ಖುಷಿ ಕೊಟ್ಟಿತು. ಅವರೆಲ್ಲಾ (ನಾಲ್ಕಾರು ಗೆಳೆಯರ ಬಿಟ್ಟು)ಇವತ್ತೂ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಕ್ರಿಯಾಶೀಲರಾಗೇ ಇದ್ದಾರೆ. ಒಂದು ಕಾಲದಲ್ಲಿ ಧಾರವಾಡದ ಕಪ್ಪು ಮಣ್ಣಿಗೆ ಅಂಥ ಖದರು ಇತ್ತು.
ಅನಂತಮೂರ್ತಿ ಅವರ ‘ಸುರಗಿ’ಆತ್ಮಕತೆ ಹೇಳಿ ಬರೆಸಿದ್ದರಿಂದ ಅಷ್ಟೊಂದು ಆಳಕ್ಕೆ ಹೋಗುವುದಿಲ್ಲ. ಅವರದ್ದೇ ಕೈಯಿಂದ ಬರೆದ ಅನುಭವ ಆಗಿದ್ದರೆ `ಸಂಸ್ಕಾರ’ವನ್ನೋ,`ಅವಸ್ಥೆ’ಯನ್ನೋ ಓದಿಸಿಕೊಂಡಂತೆ ಓದಬಹುದಾಗಿತ್ತು.ಸರಗಿ ಒಂದಥ್ದಲ್ಲಿ ನನಗೆ ನಿರಾಶೆ ತಂದಿತು. ಅದೇ ಕಾರ್ನಾಡರ `ಆಡಾಡ್ತ ಆಯುಷ್ಯ’ ತುಂಬಾ ಮುಕ್ತೆವಾಗಿ ಬಿಚ್ಚಿಕೊಂಡ ನಿಜ ಆತ್ಮಕತೆ. ಅದರ ಮುಂದಿನ ಭಾಗ ವಾಸ್ತವಕ್ಕೆ ಹತ್ತಿರ ಇರುತ್ತೆ ಅಂತ ಭಾವಿಸೋಣ…
ಇರಲಿ ನೀನು ನಿನ್ನ ಆರಂಭದ ಮಾತುಗಳಲ್ಲಿ ಹೇಳಿದಂತೆ ನೆನಪೋ, ಘಟನೆಯೋ,ಅನುಭವವೋ, ಚೇಷ್ಟೆಯೋ…ಅವುಗಳನ್ನು ಸಾಧ್ಯವಾದರೆ ಧಾರವಾಡ ಶೈಲಿಯಲ್ಲೇ ದಾಖಲಿಸಿದರೆ ಚಲೋ ಆಗುತ್ತೆ. ಮುಂದಿನ ಬರಹಕ್ಕೆ ಕುತೂಹಲಿಯಾಗಿರುವೆ…
ಆರ್.ಜಿ. ಹಳ್ಳಿ ನಾಗರಾಜ, rghalli7@gmail.com
ನಾನು ಶಾಲ್ಮಲದ ಅಭಿಮಾನಿ.
ಇಲ್ಲಿನ ಚದುರಿದ ಚಿತ್ರಗಳಓಟೆ ಬರುವ ಎಲ್ಲವೂ ಮನಸ್ಸಿನಾಳಕ್ಕೆ ಇಳಿಯುತ್ತವೆ. ಧಾರವಾಡ, ಗಾಯಕಿ ಸಂಗೀತಾ ಕಟ್ಟಿ, ಆತ್ಮ ಚರಿತ್ರೆಗಳ ಉಲ್ಲೇಖ ಎಲ್ಲವೂ ಎಲ್ಲವೂ ನಿಮ್ಮ ಓದಿನ ಅಗಾಧತೆ ಮತ್ತು ಗ್ರಹಿಕೆಯ ಆಳವನ್ನೂ ತೋರುತ್ತದೆ.