
ಸಾವಿರಾರು ವರ್ಷಗಳಿಂದ ಕನ್ನಡ ಭಾಷೆ ಇದೆ. ವ್ಯಾಪಕ ಭೂಪ್ರದೇಶದಲ್ಲಿ ಆ ಭಾಷೆಯನ್ನು ಕೇಂದ್ರವಾಗಿಟ್ಟುಕೊಂಡು ಅದರ ಸುತ್ತ ಕರ್ನಾಟಕದ ಸಂಸ್ಕೃತಿಯೂ ಕಾಲದಿಂದ ಕಾಲಕ್ಕೆ ಸಮೃದ್ಧವಾಗಿ ಬೆಳೆದುಕೊಂಡು ಬಂದಿದೆ. ಚಿತ್ರರಂಗ ಎಷ್ಟು ವರ್ಷಗಳಿಂದ ಇದೆ? ಬಾಲಿವುಡ್ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಕನ್ನಡ ಚಿತ್ರರಂಗದ ಅಸ್ತಿತ್ವದ ಅವಧಿ ಅದಕ್ಕಿಂತ ಕಡಿಮೆ ಇದ್ದೀತು. ಅಂದರೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಎಂಬ ಸಾವಿರಾರು ವರ್ಷಗಳ ಪ್ರಾಚೀನತೆಯ ಸಂಗತಿಗಳು ಕೆಲವಾರು ದಶಕಗಳ ಬದುಕು ಉಳ್ಳ ಕನ್ನಡ ಸಿನಿಮಾ ಎಂಬ ಉದ್ಯಮಕ್ಕೆ ಹೊರತಾಗಿ ಬಾಳಿವೆ, ಬೆಳೆದಿವೆ. ಕಾವ್ಯ, ಸಾಹಿತ್ಯ, ನೃತ್ಯ, ಸಂಗೀತ, ನಾಟಕ, ವಾಸ್ತು, ಶಿಲ್ಪ, ಚಿತ್ರ ಮುಂತಾದ ಕಲೆಗಳು ಅವುಗಳನ್ನು ಪೊರೆದಿವೆ. ಹೆಚ್ಚು ಹೆಚ್ಚಾಗಿ ಉದ್ಯಮವಿಶಿಷ್ಟ ಗುಣಗಳನ್ನು ಮತ್ತು ವಾಣಿಜ್ಯೀಕೃತ ಪರಿಗಣನೆಗಳನ್ನು ಅಳವಡಿಸಿಕೊಳ್ಳುತ್ತ ಹೋದ ಕನ್ನಡ ಚಲನಚಿತ್ರಗಳು ಸಂಸ್ಕೃತಿಯ ಈ ಅಂಗಾಂಶಗಳನ್ನು ಉದ್ಧರಿಸಿವೆಯೋ ಕುಲಗೆಡಿಸಿವೆಯೋ ಎಂಬುದು ಅನಿವಾರ್ಯವಾಗಿಯೇ ಇಂದು ಚರ್ಚೆಗೊಳಪಡುತ್ತಿದೆ.
ಇನ್ನುಳಿದಂತೆ ಹಲವು ರಾಜ್ಯಗಳ ಚಿತ್ರರಂಗದ ಸಾಮಾನ್ಯ ಚಟುವಟಿಕೆಯಾದ ಡಬ್ಬಿಂಗ್ ಎಂಬುದನ್ನು ಕನ್ನಡ ಚಿತ್ರಗಳ ಲೋಕ ತನ್ನ ಒಳಗೆ ಬಿಟ್ಟುಕೊಳ್ಳಬಾರದು ಎಂಬುದಕ್ಕೆ ಕೆಲವರು ಒಂದಷ್ಟು ವಾದಗಳನ್ನು ಹೂಡುತ್ತಿದ್ದಾರೆ. ಉಳಿದ ಅಂಶಗಳು ಹೇಗೋ ಕಾಣೆ, ಆದರೆ ಡಬ್ಬಿಂಗ್ ಸಂಸ್ಕೃತಿಯಿಂದ ಕನ್ನಡ ಭಾಷೆ ಕನ್ನಡ ಸಂಸ್ಕೃತಿಗೆ ಧಕ್ಕೆಯಾಗುತ್ತದೆ ಎಂಬ ವಾದವನ್ನು ಖರೀದಿಸಲು ಬಹಳ ಜನ ಪ್ರಾಜ್ಞರು ಸಿದ್ಧರಿಲ್ಲ. ಈಗ ಬರುತ್ತಿರುವ ಕನ್ನಡ ಚಲನಚಿತ್ರಗಳಿಂದ ಕನ್ನಡಿಗರ ಮನರಂಜನೆಯ ಅಗತ್ಯ ಒಂದು ಪ್ರಬುದ್ಧ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ ಎಂಬುದೇ ನಿಜವಾಗಿದ್ದರೆ ಕನ್ನಡ ಸಿನಿಮಗಳನ್ನು ನೋಡುವಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಿಂದಿ, ತೆಲುಗು, ತಮಿಳು ಚಿತ್ರಗಳನ್ನು ಕನ್ನಡಿಗರು ಮುಗಿಬಿದ್ದು ನೋಡುವ ವಾತಾವರಣವೇ ಇರುತ್ತಿರಲಿಲ್ಲ.
ಮೊನ್ನೆ ಈ ಕುರಿತು ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯಲ್ಲಿ ಸುಪ್ರಸಿದ್ಧ ನಿರ್ದೇಶಕರೊಬ್ಬರು ಹೇಳುತ್ತಿದ್ದರು. “ಈಗ ಶೇಕಡಾ ಐದಾದರೂ ಒಳ್ಳೆಯ ಚಿತ್ರಗಳು ಕನ್ನಡದಲ್ಲಿ ಬರುತ್ತಿವೆ. ಡಬ್ಬಿಂಗ್ ಬಂದರೆ ಅಷ್ಟೂ ಬರುವದಿಲ್ಲ”…! ಈಗ ಬರುತ್ತಿರುವ ಚಿತ್ರಗಳ ಗುಣಮಟ್ಟದ ಕುರಿತ ತಮ್ಮ ಪ್ರಾಂಜಲ ಅನಿಸಿಕೆಯನ್ನು ಹೇಳಿದ ಅವರ ಪ್ರಾಮಾಣಿಕತೆಯನ್ನು ಒಪ್ಪಿಕೊಳ್ಳಬೇಕಾದದ್ದೇ. ಆದರೆ ವರ್ಷಕ್ಕೆ ಐದೋ ಆರೋ ಒಳ್ಳೆಯ ಚಿತ್ರಗಳನ್ನು ನೀಡುವವರು ಕನ್ನಡಿಗರಿಗೆ ಕನ್ನಡ ಚಿತ್ರಗಳನ್ನು ನೋಡಿ, ಪ್ರೋತ್ಸಾಹಿಸಿ ಎಂದು ಗೋಗರೆಯುವ, ಅನ್ಯಭಾಷಾ ಚಿತ್ರಗಳನ್ನು ನೋಡುವ ಕನ್ನಡಿಗರ ’ಕನ್ನಡಾಭಿಮಾನರಾಹಿತ್ಯ’ದ ಕುರಿತು ಬೇಸರಿಸಿಕೊಳ್ಳುವ ಮುನ್ನ ತಮ್ಮ ಪ್ರತಿಭೆ ಬತ್ತಿದ ಕಾರಣಗಳ, ಕನ್ನಡ ಕಲಾವಿದ ತಂತ್ರಜ್ಞರ ಕುರಿತ ತಮ್ಮ ಕಳಕಳಿಯ ಪ್ರಾಮಾಣಿಕತೆಯ ಕುರಿತು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳುವದು ಅಗತ್ಯವಿದೆ. ವರ್ಷದಲ್ಲಿ ಇವರು ತೆಗೆಯುವ ಚಿತ್ರಗಳ ಮೂರು ಪಟ್ಟು ಸಂಖ್ಯೆಯಲ್ಲಿ ಇವರ ಕಲಹಗಳಿರುತ್ತವೆ. ಮತ್ತು ಅವೆಲ್ಲವೂ ಕೊಳಕು ಬಟ್ಟೆಯನ್ನು ಸಾರ್ವಜನಿಕವಾಗಿ ತೊಳೆದಂತೆ ಮಾಧ್ಯಮಗಳಲ್ಲೇ ಚರ್ಚೆಯಾಗುವಂಥವು ! ಡಬ್ಬಿಂಗ್ ಬಂದರೆ ಕನ್ನಡ ಕಲಾವಿದರು ಕೆಲಸ ಕಳೆದುಕೊಳ್ಳುವ ಕುರಿತ ಕಾಳಜಿ ಮತ್ತು ಕಳಕಳಿ ಪರಭಾಷಾ ತಾರೆಯರನ್ನು ಕೆಂಪು ರತ್ನಗಂಬಳಿ ಹಾಸಿ ಕರೆತಂದು ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಕೆಲಸ ಕೊಟ್ಟಾಗ, ಸ್ಥಳೀಯವಾಗಿ ಕನ್ನಡ ಭಾವಗೀತೆಗಳ ಗಾಯನದ ಮೋಹಕ ಲೋಕವನ್ನೇ ನಿರ್ಮಿಸಿ ಕನ್ನಡಿಗರ ಭಾವಕೋಶಗಳಲ್ಲಿ ನೆಲೆಗೊಂಡ ಗಾಯಕ ಗಾಯಕಿಯರನ್ನು ನಿರ್ಲಕ್ಷಿಸಿ ಕೈಲಾಶ್ ಖೇರ್, ಸೋನೂ ನಿಗಮ್, ಶ್ರೇಯಾ ಘೋಷಾಲ್ ಮುಂತಾದವರಿಂದ ಚಿತ್ರಗೀತೆ ಹಾಡಿಸುವ ಕೆಲಸ ಕೊಟ್ಟಾಗ ಎಲ್ಲಿ ಹೋಗಿತ್ತೆಂದು ಜನ ಸಕಾರಣವಾಗೇ ಪ್ರಶ್ನಿಸುತ್ತಾರೆ.

ಕನ್ನಡ ಚಲನಚಿತ್ರರಂಗ ಇರುವದೇ ಕನ್ನಡ ಭಾಷೆ ಸಂಸ್ಕೃತಿಗಳ ಉದ್ಧಾರಕ್ಕೆ ಎಂಬಂತೆಯೋ, ಡಬ್ಬಿಂಗ್ ಬಂದರೆ ಅದು ಕನ್ನಡದ
ಭಾಷೆ ಸಂಸ್ಕೃತಿಗಳಿಗೆ ಮಾರಕವಾಗುತ್ತದೆ ಎಂಬಂತೆಯೋ ವಾದಿಸುವವರು ಇದಕ್ಕೆ ವ್ಯತಿರಿಕ್ತವಾಗಿ ಡಬ್ಬಿಂಗ್ ಇದ್ದಿದ್ದರೆ ಅದು ವಾಸ್ತವವಾಗಿ ಕನ್ನಡ ಭಾಷೆ ಅಬಾಲವೃದ್ಧರಾಗಿ ಹೆಚ್ಚು ಹೆಚ್ಚು ಜನರ ಕಿವಿ ಮೇಲೆ ಬಿದ್ದು ಅದರ ಬಳಕೆ ಹೆಚ್ಚಲು ಪೂರಕವಾಗುತ್ತಿತ್ತು ಎಂಬುವವರ ವಾದಗಳನ್ನು ಅರ್ಥಮಾಡಿಕೊಳ್ಳುತ್ತಲೇ ಇಲ್ಲ. ಮತ್ತು ಹೀಗೆ ಹೇಳುತ್ತಿರುವವರು ಉಪೇಕ್ಷಿಸಬಹುದಾದ ಯಾರೋ ಅಲ್ಲ. ಕನ್ನಡದ ಬಗ್ಗೆ, ಅದರ ಬಳಕೆಯ ಬಗ್ಗೆ, ಅದರ ಭವಿಷ್ಯದ ಬಗ್ಗೆ, ಕನ್ನಡಿಗರ, ಕರ್ನಾಟಕದ ಸಮಸ್ಯೆಗಳ ಬಗ್ಗೆ ತಮ್ಮದೇ ಆದ ವಸ್ತುನಿಷ್ಠ ಗ್ರಹಿಕೆ, ಹಾಗೂ ಅದಕ್ಕೆ ಪೂರಕವಾದ ಅಧ್ಯಯನದ ಹಿನ್ನೆಲೆಯಿಂದ ಮಾತಾಡುತ್ತಿರುವವರು. ಸರಳವಾಗಿ ಇಂದು ಚಿತ್ರ ಪ್ರೇಕ್ಷಕ ದುಡ್ಡು ಕೊಟ್ಟು ಮನರಂಜನೆ ಕೊಳ್ಳಲು ಚಿತ್ರಮಂದಿರಕ್ಕೆ ಬರುವ ಗ್ರಾಹಕ, ಅಷ್ಟೇ. ಡಬ್ಬಿಂಗ್ ವಿರುದ್ಧ ಗಟ್ಟಿಯಾಗಿ ದನಿ ಎತ್ತುವವರಲ್ಲೊಬ್ಬರಾದ ಗೆಳೆಯ ಬಿ.ಸುರೇಶ್ ಅವರು ಆ ಗ್ರಾಹಕನನ್ನು ನಂದಿಕೇಶ್ವರನ “ಅಭಿನಯ ದರ್ಪಣ”ದಲ್ಲಿ ಬರುವ ರಸನಿಷ್ಪತ್ತಿ ಮತ್ತು ರಸಿಕಜನ ಎಂಬ ವಿವರಣೆ ಕೊಟ್ಟು ’ರಸಿಕ’ನನ್ನಾಗಿ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ, ಮನರಂಜನೆಯನ್ನು ದುಡ್ಡು ಕೊಟ್ಟು ಪಡೆಯುತ್ತಾ ಇದ್ದಾನೆ ಎಂಬ ಕಾರಣಕ್ಕೆ ಆತನನ್ನು ಗ್ರಾಹಕನ ಮಟ್ಟಕ್ಕೆ ಇಳಿಸುವುದು ಸರಿಯಲ್ಲವೆಂದು ವಾದಿಸಿದರೂ ಪ್ರೇಕ್ಷಕ ಇಂದು ಹೆಚ್ಚೆಂದರೆ ಕಲೆಗಳ ಗುಣಾವಗುಣಗಳ ಕುರಿತ ತನ್ನದೇ ಪ್ರೌಢ ಗ್ರಹಿಕೆಗಳಿರುವ ಒಬ್ಬ ಅಭಿರುಚಿವಂತ connoisseur consumer. ಇತರ ಹಲವು ಲಕ್ಷಣಗ್ರಂಥಪಠ್ಯಗಳು ಕಲೆ ಎಂದರೇನೆಂದೂ ಹೇಳಿವೆ. ಅದನ್ನೆಲ್ಲ ಕನ್ನಡ ಚಿತ್ರಗಳು ಒದಗಿಸುವ ಸರಕಿಗೆ ಅನ್ವಯಿಸಿ ನೋಡಿದರೆ ಅದು ಎಷ್ಟು ತಾಳೆಯಾಗುತ್ತದೆಂಬುದು ಬೇರೆಯದೇ ಪ್ರಶ್ನೆ.

“ಡಬ್ಬಿಂಗ್ ಸಂಸ್ಕೃತಿಯೇ ಸರಿಯಾದುದಲ್ಲ. ಚಿತ್ರವೊಂದನ್ನು ಅದರ ಮೂಲ ಆವೃತ್ತಿಯಲ್ಲಿ ನೋಡುವುದೇ ಸರಿಯಾದ ಕ್ರಮ” ಎನ್ನುತ್ತಾರೆ ಡಬ್ಬಿಂಗ್ ಮೇಲಿರುವ ನಿಷೇಧದ ಪರವಾಗಿರುವವರು. ಕಲೆ ಸಾಹಿತ್ಯಗಳು ದೇಶ ಕಾಲಗಳನ್ನು ಮೀರಿ ರೂಪಾಂತರಗೊಳ್ಳುತ್ತ, ಭಾಷಾಂತರಗೊಳ್ಳುತ್ತ ಬದುಕಿ ಬಂದಿರುವ ಸುದೀರ್ಘ ಚರಿತ್ರೆಯೇ ಇದೆ. ಡಬ್ಬಿಂಗ್ ಎನ್ನುವದು ಅದರ ಒಂದು ತಾಂತ್ರಿಕ ಆಯಾಮವಷ್ಟೇ. ಯಾವುದೋ ಬೇರೆ ಭಾಷೆಯ ಒಂದು ಜಾಹೀರಾತಿನ ಕನ್ನಡ ಡಬ್ಬಿಂಗ್ ನ ಕೆಟ್ಟ ಭಾಷಾ ಪ್ರಯೋಗದ ಉದಾಹರಣೆ ಕೊಟ್ಟು ಡಬ್ಬಿಂಗ್ ಮೇಲಿರುವ ನಿಷೇಧವನ್ನು ಸಮರ್ಥಿಸಿಕೊಳ್ಳಲು ನೋಡುವ ಪ್ರಾಮಾಣಿಕತೆ ಪ್ರಶ್ನಾರ್ಹ. ಭಾಷಾಂತರ ಹಾಗೂ ಉಚ್ಛಾರದ ಗುಣಮಟ್ಟವನ್ನು ನಿರ್ವಹಿಸುವವರು ಮನುಷ್ಯರೇ ಆದ್ದರಿಂದ ಅವರು ಆ ಗುಣಮಟ್ಟವನ್ನು ಕಾಯ್ದುಕೊಳ್ಳುವ ಎಚ್ಚರ ತೋರಿದರೆ ಸಾಕು. ಇಂದು ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಅರಿಯದ ಬೆಂಗಳೂರಿಗರು ಮಾಡಿದ ಸಿನಿಮಾಗಳಲ್ಲಿನ ಭಾಷಾ ಪ್ರಯೋಗದಲ್ಲಿ, ಉಚ್ಛಾರದಲ್ಲಿ ಎಷ್ಟು ಮಟ್ಟಿಗಿನ ಸಹಜತೆ ಇರುತ್ತದೆಂಬುದು ಗೊತ್ತಿರುವ ವಿಚಾರವೇ. ಉತ್ತರ ಕರ್ನಾಟಕದ ಅಥವಾ ಕರಾವಳಿಯ ಭಾಷೆ ಬಿಡಿ, ಇಂದಿನ ಕನ್ನಡ ಸಿನಿಮಗಳ ಒಟ್ಟಾರೆ ಭಾಷೆ, ಅಭಿರುಚಿ, ಕಥೆ, ಅಭಿನಯ, ಹಾಡುಗಳು ಕನ್ನಡ ನಾಡಿನ ಸುಶೀಲ, ಶ್ರೀಮಂತ ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಪ್ರತಿಫಲಿಸುತ್ತದೆಂಬುದೂ ಎಲ್ಲರೂ ಬಲ್ಲ ವಿಚಾರವೇ. ಅಂಥ ಅಭಿರುಚಿವಂತ ಚಲನಚಿತ್ರಗಳ ಅಧ್ಯಾಯ ಬಹುಮಟ್ಟಿಗೆ ಮುಗಿದುಹೋಗಿದೆ. ಇಂದು ಬಸ್ ಅಥವಾ ರೈಲುಗಳಂಥ ಸಾರ್ವಜನಿಕ ಸ್ಥಳಗಳಲ್ಲಿ ಹತ್ತಾರು ಪಡ್ಡೆ ಅಥವಾ ಪೊರ್ಕಿ ಥರದ ಹುಡುಗರ ಒಂದು ಗುಂಪು ಪ್ರವೇಶಿಸಿದರೆ ಅಲ್ಲಿರುವ ಜನರಿಗೆ ಇರುಸು ಮುರುಸು ಉಂಟುಮಾಡುವ ಅವರ ವರ್ತನೆ, ಚಿಂತನೆ, ಮತ್ತು ಸ್ಲ್ಯಾಂಗ್ ಭಾಷಾಪ್ರಯೋಗಗಳ ಮೂಲ ಯಾವುದೆಂದು ನೋಡಿದರೆ ಅದು ಅವರು ನೋಡುವ ಕನ್ನಡ ಸಿನಿಮಾಗಳು ಎಂಬುದು ಸುಲಭವಾಗೇ ಅರ್ಥವಾಗುತ್ತದೆ.
ನಿಜ, ಮೂಲ ಭಾಷೆಯಲ್ಲಿರುವ ಚಿತ್ರ ಡಬ್ಬಿಂಗ್ ಗೆ ಒಳಗಾದಾಗ ತುಟಿ ಚಲನೆ ಮತ್ತು ಧ್ವನಿಯಲ್ಲಿ ಅಲ್ಪ ವ್ಯತ್ಯಾಸ ಉಂಟಾಗುತ್ತದೆ. ಇದನ್ನು ಉತ್ಪ್ರೇಕ್ಷಿಸುವ ಮುನ್ನ. ಹಿಂದಿ ಭಾಷೆ ಗೊತ್ತಿಲ್ಲದ ಆದರೆ ಆ ಭಾಷೆಯಲ್ಲಿ ತಯಾರಾಗಿ ಬಿತ್ತರಗೊಳ್ಳುವ ಐತಿಹಾಸಿಕ ಅಥವಾ ಪೌರಾಣಿಕ ಧಾರಾವಾಹಿಗಳನ್ನು ನೋಡಬಯಸುವ ಅಪಾರ ಬಯಕೆ ಇರುವ ಆದರೆ ಆ ಕಂಟೆಂಟ್ ತಮಗೆ ಸುಲಭಗ್ರಾಹ್ಯವಾಗುವ ತಮ್ಮ ಭಾಷೆಯಲ್ಲಿ ಲಭ್ಯವಿಲ್ಲದ ಕುರಿತು ಜನರ ಬೇಸರವನ್ನು ಕಲ್ಪಿಸಿಕೊಳ್ಳಿ. ತಮ್ಮ ಭಾಷೆಯಲ್ಲಿ ಅದು ಡಬ್ ಆದಾಗ ಅವರಿಗೆ ಕಥಾಂಶ ಮತ್ತು ಆಭಿನಯ ಮುಖ್ಯವಾಗುತದೆಯೇ ವಿನ: ಅವರು ಪಾತ್ರಧಾರಿಗಳ ತುಟಿಚಲನೆ ಮತ್ತು ಶಬ್ದಗಳ ಮಧ್ಯದ ಅಲ್ಪಸ್ವಲ್ಪ ವ್ಯತ್ಯಾಸವನ್ನು ಗಮನಿಸುತ್ತ ಕೂಡ್ರುವದಿಲ್ಲ. ಹಾಗೇ ಮನೆಯಲ್ಲಿ ತಮ್ಮ ಕಿವಿ ಮೇಲೆ ಬೀಳುವ ತಾಯ್ನುಡಿಯಲ್ಲೇ ತಮಗೆ ಅತೀವವಾಗಿ ಪ್ರಿಯವಾದ ಯಾವುದೋ ಕಾರ್ಟೂನ್ ಚಿತ್ರವನ್ನು ನೋಡುವ ಮಕ್ಕಳನ್ನು ಕಲ್ಪಿಸಿಕೊಳ್ಳಿ. ಅವು ಅವುಗಳಿಗೆ ಎಷ್ಟೊಂದು ಕಚ್ಚಿಕೊಂಡಿರುತ್ತವೆಂದರೆ ತಮ್ಮ ಭಾಷೆಯಲ್ಲಿ ಆ ಕಥಾನಕದ ವಿವರಗಳು ಬೀಳುತ್ತ ಹೋದಾಗ ಅವುಗಳಿಗೆ ಸನ್ನಿವೇಶ ಬರೀ ನೋಟವಾಗದೇ ಭಾಷೆಯ ಚಮತ್ಕಾರವೂ ಆಗಿ ಅವು ತಮ್ಮ ಭಾಷೆಯನ್ನೂ ಪ್ರೀತಿಸತೊಡಗುತ್ತವೆ. ಕನ್ನಡಪ್ರೇಮಿಗಳು ಹೇಳುತ್ತಿರುವದು ಇದನ್ನೇ.
ಕೆಟ್ಟ ಕನ್ನಡ ಸಿನಿಮಾಗಳ ಮಧ್ಯೆ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪರಭಾಷೆಯ ಚಿತ್ರಗಳನ್ನು ನೋಡುತ್ತ ನೋಡುತ್ತ ಕನ್ನಡಿಗರು ತಮಿಳು ತೆಲುಗು ಕಲಿಯುತ್ತಿದ್ದಾರೆಯೇ ವಿನ: ಡಬ್ಬಿಂಗ್ ಮೇಲೆ ನಿಷೇಧ ಇರುವ ಕಾರಣಕ್ಕೆ ಕನ್ನಡ ಭಾಷೆಯೇನೂ ಉದ್ಧಾರವಾಗಿಲ್ಲ. ಅದರ ಬದಲು ಅನ್ಯಭಾಷೆಯಿಂದ ಚಿತ್ರಗಳು, ಧಾರಾವಾಹಿಗಳು, ಶೈಕ್ಷಣಿಕ ಕಾರ್ಯಕ್ರಮಗಳ ಧ್ವನಿಸುರುಳಿ ಅಥವಾ ಚಿತ್ರಿಕೆಗಳು, ವೈಜ್ಞಾನಿಕ ಕಾರ್ಯಕ್ರಮಗಳು ಕನ್ನಡ ಭಾಷೆಯಲ್ಲೇ ನೋಡಲು ಸಾಧ್ಯವಾದರೆ ಯಾರಿಗೆ ಏನಡ್ಡಿ ಮತ್ತು ಯಾತಕ್ಕಾಗಿ ಎಂಬುದು ಡಬ್ಬಿಂಗ್ ಪರವಾಗಿರುವವರ ಪ್ರಶ್ನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾವು ಯಾವ ಕಂಟೆಂಟನ್ನು ಯಾವ ಭಾಷೆಯಲ್ಲಿ ನೋಡುತ್ತೇವೆನ್ನುವದನ್ನು ಆಯ್ಕೆ ಮಾಡಿಕೊಳ್ಳುವದು ತಮ್ಮ ಹಕ್ಕು ಎಂಬುದು ಅವರ ವಾದ. ಆ ವಾದದಲ್ಲಿ ಹುರುಳಿಲ್ಲ ಎನ್ನಲಾಗದು. ಯಾವ ಅಧಿಕೃತ ಮಾನ್ಯತೆಯೂ ಇಲ್ಲದ ಈ ನಿಷೇಧದ ನೀತಿ ಉಪೇಕ್ಷಿಸುವಂಥದೂ ಅಲ್ಲ ಎಂಬುದು ಅವರಿಗೆ ಖಚಿತವಾಗಿದೆ.
ಈ ಹಿಂದೆ ಸುವರ್ಣ ವಾಹಿನಿ ಆಮೀರ್ ಖಾನ್ ಸಿದ್ಧಪಡಿಸಿದ್ದ ’ಸತ್ಯಮೇವ ಜಯತೆ’ ಕಾರ್ಯಕ್ರಮದ ಹದಿಮೂರು ಕಂತುಗಳ ಡಬ್ಡ್ ಆವೃತ್ತಿಯನ್ನು ಪ್ರಸಾರ ಮಾಡಲು ಅನುಮತಿ ಪಡೆದಾಗ ಅದನ್ನು ರದ್ದುಗೊಳಿಸಿ ಅದನ್ನು ಹಿಂದಿಯಲ್ಲೇ ಪ್ರಸಾರವಾಗುವಂತೆ ಮಾಡಿದ ಕಾಣದ ಕೈಗಳಾವವು? ಮತ್ತು ಆ ವಾಹಿನಿ ಸ್ವತ: ತಾನೇ ನಡೆಸಿದ ಸಮೀಕ್ಷೆಯಲ್ಲಿ ಬಹುಪಾಲು ಅಭಿಪ್ರಾಯಗಳು ಡಬ್ಬಿಂಗ್ ನ ಪರವಾಗಿದ್ದಾಗ್ಯೂ ಆ ಒತ್ತಡಕ್ಕೆ ತಲೆ ಬಾಗಿದ್ದೇಕೆ?
ಇಷ್ಟಕ್ಕೂ ಡಬ್ಬಿಂಗ್ ವಿರೋಧದ ಮಧ್ಯೆ ಹುಲುಸಾಗಿ ಬೆಳೆಯುತ್ತಿರುವದಾದರೂ ಏನು? ರಿಮೇಕ್ ಸಂಸ್ಕೃತಿ. ಅದರ ವಿರುದ್ಧ ಚಿತ್ರರಂಗ ಗಟ್ಟಿಯಾಗಿ ಧ್ವನಿ ಎತ್ತಿದೆಯಾ ಎಂದು ನೋಡಿದರೆ ಕಾಣುವದೇನು? ಎಲ್ಲೋ ಕೆಲ ಪ್ರತಿಭಾವಂತ ಯುವ ನಿರ್ದೇಶಕರ ಸ್ವಂತದ ಚಿತ್ರಗಳನ್ನು ಬಿಟ್ಟರೆ ತಯಾರಾಗುವ ಮುಕ್ಕಾಲು ಪಾಲು ಕನ್ನಡ ಚಿತ್ರಗಳು ಪುನರವತರಣಿಕೆ ಅಥವಾ ರಿಮೇಕ್ ಗಳು. ಹಾಲಿವುಡ್, ಬಾಲಿವುಡ್, ಹಿಂದಿ, ತೆಲುಗು, ತಮಿಳುಗಳ ಈ ರಿಮೇಕ್ ಗಳಲ್ಲಿ ಮೂಲ ಚಿತ್ರದ ಕತೆ ಸನ್ನಿವೇಶಕ್ಕೂ ಕನ್ನಡಕ್ಕೇ ವಿಶಿಷ್ಟವಾದ ರೂಪಗಳಿಗೂ ಮಧ್ಯೆ ಸಾಂಗತ್ಯ ಇದೆಯಾ ಹಾಗಾದರೆ ? ಹಿಂದಿ ಮೂಲದಲ್ಲಿ ಅಷ್ಟೊಂದು ಲವಲವಿಕೆಯಿಂದ ತಯಾರಾದ ಅದ್ಭುತ ಕಾಮಿಡಿ ಚಿತ್ರಗಳು ಉದಾ ಹಂಗಾಮಾ, ಮುನ್ನಾಭಾಯಿ ಎಂ.ಬಿ.ಬಿ.ಎಸ್, ಇತ್ಯಾದಿಗಳು ಕರುಣಾಜನಕವೆನ್ನಿಸುವಷ್ಟು ಸಾಮಾನ್ಯವಾಗಿ ಕನ್ನಡದಲ್ಲಿ ಬಂದದ್ದೇಕೆ?
ಡಬ್ಬಿಂಗ್ ಬೇಕು ಬೇಡಗಳ ಕುರಿತ ಚರ್ಚೆ ನಡೆಯಲಿ. ಆದರೆ ಕನ್ನಡ ಸಿನಿಮಾ ಎಂಬ ಇಂಡಸ್ಟ್ರಿಯ ಲಾಭ ಹಾನಿಯ ಪ್ರಶ್ನೆಗಳನ್ನು, ವ್ಯಾಪಾರ ವಹಿವಾಟಿನ ಅಂಶಗಳಿರುವ ಗೋಜಲುಗಳನ್ನು ಕನ್ನಡ ಭಾಷೆ ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆಯಾಗಿ ಮಾರ್ಪಡಿಸಿ ಅದನ್ನು ಒಂದು ಭಾವನಾತ್ಮಕ ವಿಷಯವಾಗಿಸುವ ಪ್ರಯತ್ನ ಬೇಡ. ಏಕೆಂದರೆ ಅದರಲ್ಲಿ ತಥ್ಯ ಕಾಣುತ್ತಿಲ್ಲ. ಮೇಲಾಗಿ ಇಂದು ಡಬ್ಬಿಂಗ್ ಮೇಲಿರುವ ನಿಷೇಧ ಕಾನೂನುಬಾಹಿರ. ಸಂವಿಧಾನದ ಆಶಯಗಳಿಗೂ ವಿರುದ್ಧವಾದದ್ದು. ಅದು ನಾಲ್ಕು ದಶಕಗಳ ಹಿಂದೆ ಕನ್ನಡ ಚಿತ್ರ ರಂಗ ಕಿಶೋರಾವಸ್ಥೆಯಲ್ಲಿದ್ದಾಗ ಪರಭಾಷೆಯ ಚಿತ್ರಗಳ ನಡುವೆ ಬೇರೂರಿ ಸ್ವಂತಿಕೆಯೊಂದಿಗೆ ನಿಲ್ಲಬೇಕಿದ್ದ ಜರೂರಿನ ಕಾಲದಲ್ಲಿ ಕನ್ನಡ ಚಿತ್ರರಂಗದ ಹಿರಿಯರು ಕೈಗೊಂಡ ತೀರ್ಮಾನ. ಇಂದು ಪರಿಸ್ಥಿತಿ ಬದಲಾಗಿದೆ. ಸ್ಪರ್ಧೆ ಇದೆ. “ಡಬ್ಬಿಂಗ್ ಬಂದ್ರೆ ಬೇರೆ ಚಿತ್ರಗಳನ್ನ ಕನ್ನಡದಲ್ಲೇ ನೋಡಿದ್ರೆ ಕನ್ನಡ ಸಿನಿಮಾ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಸಹಾಯ ಆಗಲ್ವಾ? ಮತ್ತು ಸ್ಪರ್ಧಾತ್ಮಕ ಚಿತ್ರಗಳು ಬರೋದಕ್ಕೆ ಸಹಕಾರಿಯಾಗಲ್ವಾ?” ಎಂಬ ಡಬ್ಬಿಂಗ್ ಪರವಾಗಿರುವ ಮನು ಗೊರೂರು ಎಂಬುವರ ಪ್ರಶ್ನೆಯೊಂದಕ್ಕೆ ಬಿ.ಸುರೇಶ್ ಉತ್ತರಿಸುತ್ತ – ಆ ಉತ್ತರ ಕೇವಲ ತಮ್ಮ ವೈಯಕ್ತಿಕ ನೆಲೆಯದು. ಇದನ್ನು ಸಾರ್ವತ್ರಿಕ ನೆಲೆಯಲ್ಲಿ ಗಮನಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತ – ಹೇಳುವದು:. “ಯಾವುದೋ ಭಾಷೆಯ ಸಿನಿಮಾ ಕನ್ನಡಕ್ಕೆ ಡಬ್ ಆಗುವುದರಿಂದ ಕನ್ನಡದ ಮಾರುಕಟ್ಟೆ ವಿಸ್ತರಣೆ ಆಗುವುದು ಮಹಾ ಸುಳ್ಳು. ಕನ್ನಡದ ಮಾರುಕಟ್ಟೆಯ ವಿಸ್ತರಣೆಗೆ ಮಾಡಬೇಕಾದ ಕೆಲಸಗಳೇ ಬೇರೆಯ ಬಗೆಯದು. ನಮ್ಮ ಮಾರುಕಟ್ಟೆಯ ವಿಸ್ತರಣೆಯನ್ನು ಪರಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವುದಕ್ಕೆ ತಳುಕು ಹಾಕುತ್ತಾ ಇರುವುದೇ ತಪ್ಪು. ಡಬ್ ಆಗಿ ಯಾವುದೇ ಬಾಷೆಗೆ ಯಾವುದೇ ಸಿನಿಮಾ ಬಂದರೂ ಅದು ಯಾರಿಗೂ ಯಾವತ್ತಿಗೂ ಸ್ಪರ್ಧೆಯಾಗುವುದಿಲ್ಲ. ಯಾಕೆಂದರೆ. ಡಬ್ಬಿಂಗ್ ಎನ್ನುವುದು ಕೃತ್ರಿಮ, ಕೃತಕ. ಅಂತಹುದನ್ನು ಯಾವುದೇ ರಸಿಕ ನೋಡುಗ ಮೆಚ್ಚಿಕೊಳ್ಳಲಾರ ಎಂಬುದು ಅದಾಗಲೇ ನಾಡಿನಾದ್ಯಂತ ಸಾಕ್ಷಿ ಸಮೇತ ತಿಳುವಳಿಕೆ ಮೂಡಿಸಿದೆ” ಎನ್ನುತ್ತಾರೆ. ಮತ್ತೆ ಯಾಕೆ ಆತಂಕ? ಯಾಕೀ ನಿಷೇಧದ ಮಾತು? ಯಾಕೆ ಈ ಡಬ್ಬಿಂಗ್ ವಿರೋಧಿ ಬಂದ್ ಗೆ ಕರೆ? ಇದೆಲ್ಲ ಬಿಟ್ಟು ಕನ್ನಡದ ಮಾರುಕಟ್ಟೆಯ ವಿಸ್ತರಣೆಗೆ ಮಾಡಬೇಕಾದ ಬೇರೆಯದೇ ಬಗೆಯ ಕೆಲಸಗಳನ್ನು ಮಾಡಿದರಾಗದೇ? ವಸ್ತುಸ್ಥಿತಿ ಏನೆಂದರೆ ಈ ವಿಷಯದ ಕುರಿತು ಚಿತ್ರರಂಗದೊಳಗೇ ಭಿನ್ನ ಅಭಿಪ್ರಾಯಗಳಿರುವಂತಿವೆ. ಹೊರಗಂತೂ ಭಿನ್ನಾಭಿಪ್ರಾಯ ಇದ್ದೇ ಇದೆ. ಅಂಥ ಚಿಂತನೆಗಳ ಜೊತೆ ಒಂದು ಮುಖಾಮುಖಿ ಏರ್ಪಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೊಂದನ್ನು ಹೊರತು ಪಡಿಸಿ ಉಳಿದೆಲ್ಲದರ ಬಗ್ಗೆ ಚಿತ್ರರಂಗ ಯೋಚಿಸುತ್ತಿರುವಂತಿದೆ.. ಅದರಲ್ಲಿ ಬಂದ್ ಗೆ ಕರೆ ಕೊಡುವದೂ ಒಂದು.
ತೆಲುಗು ತಮಿಳು ಚಿತ್ರರಂಗದಲ್ಲಿ, ಕಿರುತೆರೆಯಲ್ಲಿ ಅನ್ಯ ಭಾಷೆಗಳ ಉತ್ಕೃಷ್ಟ ಚಲನಚಿತ್ರಗಳು ಧಾರಾವಾಹಿಗಳು ಡಬ್ ಆಗಿ ಪ್ರಸಾರವಾಗುವ, ಪ್ರದರ್ಶಿತಗೊಳ್ಳುವ ಮುಕ್ತ ವಾತಾವರಣ ಇರುವಾಗ ನಮ್ಮಲ್ಲೇಕೆ ಅದಿಲ್ಲ? ಎಂಬ ಪ್ರಶ್ನೆ ವ್ಯಾಪಕವಾಗುತ್ತಿರುವಾಗ ಕನ್ನಡ ಚಿತ್ರರಂಗ ಡಬ್ಬಿಂಗ್ ನಿಷೇಧಕ್ಕಾಗಿ ಬಂದ್ ಕರೆ ಕೊಡುವದು ಕಾನೂನಿನ ಮಾನ್ಯತೆ ಇಲ್ಲದ ಪರಿಪಾಠವೊಂದರ ರಕ್ಷಣೆಯ ಹತಾಶ ಪ್ರಯತ್ನವಾಗುವದರ ಜೊತೆಗೇ ತನ್ನದೇ ಜನರ- ಕನ್ನಡಪ್ರೇಮಿಗಳ, ಜನರ ಆಯ್ಕೆಯ ಹಕ್ಕಿನಂಥ ಪ್ರಜಾಪ್ರಭುತ್ವವಾದಿ ತತ್ವಗಳ ಸಮರ್ಥಕರ- ಒಲವಿಗೆ ಎರವಾಗಬಾರದಷ್ಟೆ.





you are right sir….
Agree with you Sir. Tamils are ardent and fanatic about their language, with dubbing also they have grown and survived. why not kannada?
– ಡಬ್ಬಿಂಗ್ ವಿವಾದ ಮತ್ತೆ ತಲೆ ಎತ್ತಿದೆ, ಬೇಡ ಎನ್ನುವುದು ಒಂದು ರೀತಿಯ ಭಾಷಾಭಿಮಾನದ ಅತಿರೇಕ ಎನ್ನಿಸಿದರೂ ಈಗ ಬರುವ ಶೇಕಡಾ 95 ರಷ್ಟು ಕನ್ನಡ ಚಿತ್ರಗಳು ಬಹುತೇಕ ತೆಲುಗು ತಮಿಳು ಮತ್ತು ಕ್ವಚಿತ್ತಾಗಿ ಮಲೆಯಾಳಂ ಹೊರತು ಪಡಿಸಿದರೆ ಹಿಂದಿ ರೀಮೇಕ್ ಚಿತ್ರಗಳು. ಪ್ರತಿಯೊಂದು ಸಂಭಾಷಣೆ, ವೇಷ ಬೂಷಣ, ಸಂಗೀತ ಜೊತೆಗೆ ಹಾವ ಭಾವಗಳು ಸಹ ಪರಭಾಷಾ ರೀಮೇಕ್, ವಸ್ತು ಸ್ಥಿತಿ ಹೀಗಿರು +ವಾಗ ರೀಮೇಕ್ ಚಿತ್ರ ನೋಡುವುದಕ್ಕಿಂತ ಡಬ್ಬಿಂಗ್ ಚಿತ್ರತ ನೋಡುವುದು ಎಷ್ಟೋ ವಾಸಿ, ಇನ್ನು ಸಿನೆ ಕಾರ್ಮಿಕರ ಉದ್ಯೋಗದ ಕುರಿತು ಅವರು ಮಾತನಾಡುವುದು ಶುದ್ಧ ಬೊಗಳೆ ಎನಿಸುತ್ತದೆ.
I think this write-up is as one sided as the shout for ‘no-dubbing please’. ಡಬ್ಬಿಂಗ್ ಇದ್ದಿದ್ದರೆ ಅದು ವಾಸ್ತವವಾಗಿ ಕನ್ನಡ ಭಾಷೆ ಅಬಾಲವೃದ್ಧರಾಗಿ ಹೆಚ್ಚು ಹೆಚ್ಚು ಜನರ ಕಿವಿ ಮೇಲೆ ಬಿದ್ದು ಅದರ ಬಳಕೆ ಹೆಚ್ಚಲು ಪೂರಕವಾಗುತ್ತಿತ್ತು …. this is quite funny.
Can somebody write some more insightful things as to who are really benefited by rejecting the dubbing if the statement ‘ಸಿನೆ ಕಾರ್ಮಿಕರ ಉದ್ಯೋಗದ ಕುರಿತು ಅವರು ಮಾತನಾಡುವುದು ಶುದ್ಧ ಬೊಗಳೆ…’ is true.
As per Industry People:
1. When a Kannada Actor goes and acts in Hindi, Tamil and Telagu the Kannada Industry grows and Artists earning doubles. At that you never thought of Kannada. Ex: Sudeep, Upendra etc…..
My View:
It is only Dr Rajkumar who never acted any other languages. Because he thought there still much to do it this industry for the our own people and State.
2. Kannada film industry requests people to come and see Kannada movies in Theater.
My View:
Where as other industries they never requested us to come and see their movies. Why because your acting is so bad that our own people are
not able to digest it.Also I see most of the artists not aware proper Kannada pronunciations. Ex: For Kannada they will say Khannada, Bharata Mate will be Baarata Mathe, Khadga as Kadga etc….. First learn Kannada properly….Dr Rajkumar is legend in Kannada because his language was so powerful and correct.
Did any of you from the industry tries to stop Black Tickets in Any theaters??? No come and see most of the theaters in Bangalore it self. The Box office people only come and sell the tickets in Black. But you always fought for piracy because you were facing the loss. In black ticket it is Kannada people who were in loss, but you ignored it.
ಡಬ್ಬಿಂಗ್ ಬೇಕು ಎನ್ನುವುದು ಭಾಷೆಯನ್ನು ಪ್ರೀತಿಸಲು ಅಥವಾ ವಿರೋದಿಸಲು ಅಲ್ಲ. ಕೆಲವಾದರೂ ರಾಷ್ಟೀಯ ಅಂತರಾಷ್ರೀಯ ಪ್ರಶಸ್ಥಿಪ್ರಧಾನ ಚಿತ್ರಗಳನ್ನು ರಸಾನುಭವಿಯಾಗಿ ನೋಡಿ ಆನಂದಿಸಲು. ಮಾತ್ರ್ ಭಾಷೆಯಲ್ಲದೆ ಬೇರಾವುದೇ ಭಾಷೆಯಲ್ಲಿ ಚಿತ್ರವನ್ನು ಪೂರ್ತಿಯಾಗಿ ಗ್ರಹಿಸಲಾಗದು. ಶೀರ್ಷಿಕೆಗಳನ್ನು ಹಾಕಿದರೂ ಅವುಗಳನ್ನು ಓದುತ್ತಿರುವಾಗ ಪಾತ್ರಧಾರಿಗಳ ಮೇಲೆ ಗಮನ ಹರಿಸಲಾಗದೆ ಚಿತ್ರವು ರಸಭಂಗವಾಗುತ್ತದೆ