ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ್ ಶೆಟ್ಟರ್ ಕಾಲಂ : ಅದು ರಮ್ಯ ಬಾಲ್ಯಕಾಲ


ನನ್ನ ಐಶ್ವರ್ಯ ತೆಗೆದುಕೊಳ್ಳಿ ನನ್ನ ಖ್ಯಾತಿಯನ್ನೂ ತೆಗೆದುಕೊಳ್ಳಿ. ಬೇಕೆಂದರೆ ನನ್ನ ಯೌವ್ವನವನ್ನೂ ನನ್ನಿಂದ ಕಸಿದುಕೊಳ್ಳಿ ಆದರೆ ದಯವಿಟ್ಟು ಶ್ರಾವಣದ ಆ ಮಳೆನೀರು ಆ ಕಾಗದದ ದೋಣಿಗಳ ನನ್ನ ಬಾಲ್ಯವನ್ನು ನನಗೆ ಮರಳಿ ಕೊಡಿ ಎಂಬರ್ಥದ ಹಾಡೊಂದನ್ನು ನೀವು ಜಗಜೀತ್ ಸಿಂಗ್ ಅವರ ಮಧುರ ಕಂಠದಲ್ಲಿ ಕೇಳಿರಬಹುದು.
ಮಕ್ಕಳಾಗಿದ್ದಾಗ ದೊಡ್ಡವರಾಗುವ ಹಂಬಲ, ದೊಡ್ಡವನಾದ ಮೇಲೆ ಹಾಗೆ ಮಾಡಬೇಕು, ಹೀಗಿರಬೇಕು ಎಂದೆಲ್ಲ ಕನಸು.., ಅದೆಲ್ಲಾ ಆಗಿಹೋಗಿ ದೊಡ್ಡವರ ಲೋಕದೊಳಹೊಕ್ಕು ಹೊರಬೀಳಲಾಗದಂತೆ ಸಿಕ್ಕಿ ಹಾಕಿಕೊಂಡ ಮನುಷ್ಯ ಮತ್ತೊಂದಾವರ್ತಿ ಬಾಲ್ಯವೆಂಬ ಸುಂದರ ಅನುಭೂತಿಗಳ ಲೋಕಕ್ಕೆ ಹಂಬಲಿಸುವ ನವಿರು ಗೀತೆ ಅದು.
ನಾನು ಕಥೆ ಕಾದಂಬರಿಗಳನ್ನು, ಆತ್ಮಕಥೆಗಳನ್ನು ಓದುವಾಗ ಬಾಲ್ಯದ ಅನುಭವಗಳೋ ಅದರ ನೆನಪುಗಳೋ ಚಿತ್ರಿತಗೊಳ್ಳುವ ಸಂದರ್ಭದಲ್ಲಿಯ ಸಮೃದ್ಧ ವಿವರಗಳನ್ನು ಗಮನಿಸುತ್ತಿರುತ್ತೇನೆ. ಉದಾಹರಣೆಗೆ ಕುವೆಂಪು ಅವರ ಕಾದಂಬರಿಗಳು ಅಥವಾ ಕೃಷ್ಣ ಆಲನಹಳ್ಳಿ ಬರೆದ “ಕಾಡು”. ಒಂದೆರಡು ತಿಂಗಳು ಅಥವಾ ವರ್ಷಗಳ ಹಿಂದಿನ ಘಟನೆಗಳ, ಅಷ್ಟೇಕೆ ಕಳೆದೊಂದು ವಾರದ ಘಟನಾವಳಿಗಳ ಅನುಕ್ರಮದ ಬಗೆಗೇ ಒಮ್ಮೊಮ್ಮೆ ಗಲಿಬಿಲಿ ಮಾಡಿಕೊಳ್ಳುವ ನಮ್ಮ ಮನಸಿನಲ್ಲಿ ಬಾಲ್ಯದ ನೆನಪುಗಳು ತಮ್ಮೆಲ್ಲ ಸೂಕ್ಷ್ಮವಿವರಗಳೊಂದಿಗೆ ಜೀವ ತಳೆಯುವ ವಿಸ್ಮಯ ನೋಡಿದಾಗ ಬಾಲ್ಯವೆಂಬುದು ಮನುಷ್ಯನು ಜೀವನ ಪೂರ್ತಿ ತಾನು ಬಯಸಿದಾಗೆಲ್ಲ ತನ್ನ ಮನೋಭಿತ್ತಿಯ ಮೇಲೆ ಮೂಡಿಸಿಕೊಳ್ಳಬಲ್ಲ ಚಿತ್ರಗಳ ಸರಣಿ ಎನ್ನಿಸುತ್ತದೆ.
ನಿಜ, ಎಲ್ಲರ ಬದುಕು ಒಂದೇ ತೆರನಲ್ಲ. ಬಾಲ್ಯದ ಕುರಿತ ಎಲ್ಲರ ಅನುಭವಗಳೂ ಒಂದೇ ತೆರನಾಗಿರುವದಿಲ್ಲ. ಸಿಹಿಸಿಹಿ ನೆನಪುಗಳನ್ನು ಮೊಗೆಮೊಗೆದು ಕೊಡುವ ಬಾಲ್ಯ ಕೆಲವರದಾದರೆ, ನೆನಪಿಸಿಕೊಳ್ಳುವದೇ ಬೇಡ ಎನ್ನಿಸುವ ಕಹಿ ಅನುಭವಗಳು ತುಂಬಿದ ಬಾಲ್ಯ ಇನ್ನು ಕೆಲವರದು. ಅಪಘಾತದ ಸುದ್ದಿಗಳನ್ನೋ ಪ್ರಾಕೃತಿಕವಾದ ಯಾವುದೋ ಒಂದು ವಿಕೋಪದ ಸುದ್ದಿಗಳನ್ನೋ ಓದಿದಾಗ ಒಂದು ವೇಳೆ ತಂದೆ ತಾಯಿ ಮರಣಿಸಿ ಮಗು ಬದುಕುಳಿದಿದೆ ಎಂದು ಓದಿದಾಗ, ಮಗು ಶೈಶವಾವಸ್ಥೆಯಲ್ಲಿದ್ದಾಗ ಹೆತ್ತವರು ಒಬ್ಬರಾದ ಮೇಲೊಬ್ಬರು ಮರಣಿಸಿದಾಗ ಆ ಮಗುವಿನ ದುರ್ದೆಸೆಯ ಬಗ್ಗೆ ನನ್ನ ಮನಸು ಮರಗುತ್ತದೆ. ನಂತರದ ಬದುಕಿನ ಹಂತಗಳಲ್ಲಿ ಆಕೆ ಅಥವಾ ಆತ ತನ್ನ ಬದುಕನ್ನು ಹಿಂದಿರುಗಿ ನೋಡಿಕೊಂಡಾಗ ತಂದೆ ತಾಯಿ ಎಂಬ ಜೀವಗಳ ಒಡನಾಟದ, ಪ್ರೀತಿವಾತ್ಸಲ್ಯಗಳ, ಕಾಳಜಿ ಕಳಕಳಿಗಳ ನೆನಪಿನ ಇಡೀ ಅನುಭವವೇ ಶೂನ್ಯವೆಂಬಂತಿರುವ ಅವರ ಭಾವಲೋಕ ಎಂಥದಿದ್ದೀತು? ಎನ್ನಿಸಿ ಬೇಸರವಾಗುತ್ತದೆ.
ನನ್ನ ಬಾಲ್ಯದ ಅನುಭವಗಳನ್ನು ನೋಡಿಕೊಂಡಾಗ ಆಗಿನ ಮತ್ತು ಈಗಿನ ಪೀಳಿಗೆಯ ಬಾಲ್ಯಲೋಕದ ವ್ಯತ್ಯಾಸಗಳು ನನಗೆ ಸ್ಫುಟವಾಗಿ ಗೋಚರಿಸುತ್ತವೆ. ಈಗ ನಗರ ಪ್ರದೇಶಗಳಲ್ಲಿ ನಾಲ್ಕು ಹೆಜ್ಜೆ ಹಾಕುವಷ್ಟು ದೊಡ್ಡವರಾದೊಡನೆ ಟ್ರೈಸಿಕಲ್ ನಂತರ ಬೈಸಿಕಲ್, ಆಟೋ ಅಥವಾ ಸ್ಕೂಲ್ ಬಸ್ ಎಲ್ಲಾ ಮುಗಿದು ಹದಿಹರೆಯದಲ್ಲೇ ಬೈಕ್ ಏರಿ ಓಡಾಡತೊಡಗುವ ಮಕ್ಕಳು ಕಾಲ್ನಡಿಗೆಯಲ್ಲಿ ಓಡಾಡುವದೇ ವಿರಳ ಎಂಬಂತಾಗಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಸಣ್ಣ ಪುಟ್ಟ ಊರುಗಳಲ್ಲಿ ಮಕ್ಕಳು ಬಯಲಿನಲ್ಲಿ ಆಡುವ ಆಟಗಳನ್ನೂ ಆಡದೇ ಬೆಳೆಯುವ ನಗರ ಪ್ರದೇಶಗಳ ಮಕ್ಕಳ ಆಟ ಕಂಪ್ಯೂಟರ್ ನ ತೆರೆಯ ಮೇಲೆ ಆರಂಭವಾಗಿ ಅಲ್ಲೇ ಮುಗಿಯುತ್ತದೆ. ಅವರಿಗಾಗಿ ನೂರಾರು ತೆರನಾದ ವಿಡಿಯೋ ಗೇಮ್ ಗಳ ತಯಾರಿಕೆಯ ವಾಣಿಜ್ಯಲೋಕಗಳೇ ಇವೆ.
ಹಳ್ಳಿಗಳ ಸಾಮಾಜಿಕ ರಚನೆಯೂ ಈಗ ಬದಲಾಗಿ ಮೊಬೈಲ್,ಸೀಡೀ, ಡಿವಿಡಿ, ಎಂಪೀ ಥ್ರೀ ಎನ್ನುತ್ತ ಒಂದು ಬಗೆಯ ಬರಡು ಕ್ರಿಯಾಶೀಲತೆಯ ಭ್ರಮಾಲೋಕದಲ್ಲಿ ಹಳ್ಳಿ ಹಿರಿಯೂರುಗಳ ಹದಿಹರೆಯಗಳೂ ಕಳೆದುಹೋಗುತ್ತಿರುವಂತಿದೆ. ಈಗಿನ ಮಕ್ಕಳಿಗೆ ಹೇಳುವದೂ ಕಷ್ಟ ಹೇಳದಿರುವದು ಇನ್ನೂ ಕಷ್ಟ ಎಂಬ ಒದ್ದಾಟದಲ್ಲಿ ತಂದೆ ತಾಯಿ ಇರುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಉಡುಗೆ ತೊಡುಗೆ ತಿಂಡಿ ತಿನಿಸು ಮನರಂಜನೆ ಆಧುನಿಕ ಡಿಜಿಟಲ್ ಉಪಕರಣಗಳ ತಾಂತ್ರಿಕತೆ ಇತ್ಯಾದಿಗಳಲ್ಲಿ ಇಂದು ಹದಿಹರೆಯದ ಮಕ್ಕಳಿಗೆ ತರುಣ-ತರುಣಿಯರಿಗೆ ಇರುವ ಆಯ್ಕೆಗಳ ಅಪಾರ ವೈವಿಧ್ಯ ನೋಡಿದಾಗ ಅನಿವಾರ್ಯವಾಗಿಯೇ ನಮ್ಮ ಬಾಲ್ಯಕಾಲದಲ್ಲಿ ಬೇಸಿಕ್ ಮಿನಿಮಮ್ ಎಂಬಂತಿದ್ದ ನಮ್ಮ “ಸೌಕರ್ಯ”ಗಳ ನೆನಪಾಗುತ್ತದೆ. ಅದರ ಬಗ್ಗೆ ಹೆಚ್ಚುಗಾರಿಕೆಯೂ ಇಲ್ಲ, ಆತ್ಮಮರುಕವೂ ಇಲ್ಲ. ಬದುಕಿನ ವಾಸ್ತವಗಳು, ಆ ದಿನಮಾನಗಳ ಕೌಟುಂಬಿಕ ಮೌಲ್ಯಗಳ ವ್ಯವಸ್ಥೆಯೇ ಹಾಗಿತ್ತು, ಅಷ್ಟೇ.
ನಾನು ಒಂದು, ಎರಡನೇ ತರಗತಿಗಳಲ್ಲಿ ಇದ್ದಾಗ ನನ್ನಕ್ಕ ನನ್ನನ್ನು ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ, ಬಟ್ಟೆ ಕೊಂಡು ಅಲ್ಲೇ ಜವಳಿ ಕೂಟ್ ಎಂದು ಕರೆಯಲ್ಪಡುವ ಸ್ಥಳದ ಪಾರ್ಶ್ವದಲ್ಲಿದ್ದ ಚಾವಡಿ ಕಟ್ಟೆಯ ಮೇಲೆ ಟರ್ ಎಂದು ಸದ್ದು ಮಾಡುವ ಮೆಶಿನ್ ಇಟ್ಟುಕೊಂಡು ಅದನ್ನು ಕಾಲಲ್ಲಿ ತುಳಿಯುತ್ತ್ತ ಬಲಗೈಯಲ್ಲಿ ಅದರ ಚಕ್ರವೊಂದನ್ನು ಕೈಯ್ಯಾಡಿಸುತ್ತ ಬಟ್ಟೆಯ ತುಂಡುಗಳನ್ನು ಒಮ್ಮೆ ಹಾಗೆ ಒಮ್ಮೆ ಹೀಗೆ ಮೂವ್ ಮಾಡುತ್ತ ಕುಳಿತಿರುತ್ತಿದ್ದ ಟೇಲರಪ್ಪನ ಕೈಗೆ ಆ ಬಟ್ಟೆಯನ್ನಿತ್ತು ನನ್ನನ್ನು ಅವನ ಮುಂದೆ ಪ್ರಸ್ತುತ ಪಡಿಸುತ್ತಿದ್ದಳು. ಅವನು ಟೇಪಿನಿಂದ ನನ್ನ ಭುಜ ಕೈಇತ್ಯಾದಿ ಅಳೆಯುವ ಗೋಜಿಗೂ ಹೋಗದೇ ಕಣ್ಣಂದಾಜಿನಲ್ಲೇ ನನ್ನನ್ನು ಅಳೆದು ಅಲ್ಲೇ ಆ ಬಟ್ಟೆಯನ್ನು ಕಚಕಚನೆ ಕತ್ತರಿಯಾಡಿಸಿ ತುಂಡಾಗಿಸಿ ಮಡಿಸಿ ಜೋಡಿಸಿ ಹೊಲಿದು.., ಆಹಾ, ನನ್ನ ಕಣ್ಣ ಮುಂದೆಯೇ ತಾಸೊಪ್ಪತ್ತಿನಲ್ಲಿ ನನ್ನ ಅಂಗಿ ರೆಡಿಯಾಗಿ ಅಲ್ಲೇ ಅದರ ಪ್ರಥಮ ಧರಿಸುವಿಕೆಯೂ ಆಗಿ ಆ ಅಂಗಿಯ ತೋಳುಗಳು ನನ್ನ ಮೊಳಕೈ ದಾಟುವಷ್ಟು ಉದ್ದವಾಗಿ ಸಡಿಲಾಗಿ ಜೋತಾಡುತ್ತಿದ್ದುದು ನನ್ನ ನಿರಾಶೆಗೆ ಕಾರಣವಾಗಿ “ಗೌರಕ್ಕಾ, ಆ ಚಿಂಪಿಗ್ಯಾ ಸೂಳೀಮಗಾ ನನ್ ಅಂಗೀ ಚೊಲೊ ಹೊಲೀಲಿಲ್ಲsವಾ ” ಎಂದು ಗೊಣಗುತ್ತಿದ್ದ ನನ್ನನ್ನು ನನ್ನಕ್ಕ ಹೇಗೋ ಸಮಾಧಾನಿಸುತ್ತ ಮನೆ ಸೇರುತ್ತಿದ್ದಳು. ನಾನು ನನ್ನ ಮಗ ಸಣ್ಣವನಿದ್ದಾಗ ಬೆಂಗಳೂರಿನ ವೇರ್ ಹೌಸ್ ನಲ್ಲಿ ಅವನಿಗೆ ಟೀ ಶರ್ಟ್ ಇತ್ಯಾದಿ ಕೊಳ್ಳುವಾಗ ನನಗೆ ಅದು ನೆನಪಾಗುತ್ತಿತ್ತು.

ನಾನು ಮೊದಲು ಚಪ್ಪಲಿ ಮೆಟ್ಟಿದ್ದು ಬೈಲಹೊಂಗಲದ ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ,೧ ರಲ್ಲಿ ಅಖಂಡ ಏಳು ವರ್ಷ ಓದಿ ಇಂಗ್ಲಿಷ್ ಶಾಲೆ ಎಂದೂ ಕರೆಸಿಕೊಳ್ಳುತ್ತಿದ್ದ ಮ್ಯುನಿಸಿಪಲ್ ಜಾಕ್ಸನ್ ಹೈಸ್ಕೂಲಿಗೆ ಎಂಟನೇ ತರಗತಿಗೆ ಸೇರಿಕೊಂಡಾದ ಮೇಲೇ. ನಾನೊಬ್ಬನೇ ಅಲ್ಲ, ನಮ್ಮ ಶಾಲೆಯ ಸಮಸ್ತ ವಿದ್ಯಾರ್ಥಿಗಳೆಲ್ಲರ ಕತೆಯೂ ಅದೇ. ಬರಿಗಾಲಲ್ಲಿ ಪ್ರತಿನಿತ್ಯ ಹತ್ತು ಕಿಲೋಮೀಟರಿನಷ್ಟು ದೂರವನ್ನು ನಾವು ಕ್ರಮಿಸುತ್ತಿದ್ದೆವು. ಮಳೆಗಾಲದಲ್ಲೂ ಸರಿ ಬೇಸಿಗೆಯಲ್ಲೂ ಸರಿ. ಬರಿಗಾಲಲ್ಲಿ ಹೊಲಗದ್ದೆಗಳಲ್ಲಿ, ಗೋಮಾಳಗಳಲ್ಲಿ ಅಡ್ಡಾಡುವಾಗ ನೆಗ್ಗಲು ಮುಳ್ಳು, ಜಾಲಿ ಮುಳ್ಳು, ಹಾದರಗಿತ್ತೀ ಮುಳ್ಳು (ಅದೆಂಥದೋ ಗೊತ್ತಿಲ್ಲ) ಮೊದಲಾದ ಥರಾವರಿ ಮುಳ್ಳು ತುಳಿದ ಅಂಗಾಲನ್ನು ನಾಜೂಕಾಗಿ ಊರುತ್ತ ಮನೆ ಸೇರಿದ ಮೇಲೆ ಅಕ್ಕ ಪ್ರೀತಿಯಿಂದ ಬೈಯ್ಯುತ್ತಲೇ ಸೂಜಿಯಿಂದ ಚರ್ಮವನ್ನು ಇಷ್ಟೇ ಇಷ್ಟು ಅಗಲಗೊಳಿಸಿ ನಾಜೂಕಾಗಿ ಒಂದು ಬದಿಯಿಂದ ಮುಳ್ಳಿನ ಚೂರನ್ನು ಮೀಟಿ ಹೊರಗೆಡವಿದಾಗ ಹಾಯ್, ಮರುದಿನದ ಅಲೆದಾಟಗಳಿಗೆ ಕಾಲುಗಾಡಿ ಮತ್ತೆ ರೆಡಿ.
ನಾನು ಮೊದಲ ಪ್ಯಾಂಟ್ ತೊಟ್ಟದ್ದು ಪಿಯೂಸಿ ಗೆ ಬಂದ ಮೇಲೆ. ಮೊದಲ ಸಲ ವಾಚ್ ಕಟ್ಟಿದ್ದು ಎರಡನೆಯ ಪಿಯುಸಿಯಲ್ಲಿದ್ದಾಗ .ಅದು ನಾನು ಮೊದಲ ಪಿಯುಸಿ ಪರೀಕ್ಷೆಯಲ್ಲಿ ಸೆಕಂಡ್ ಕ್ಲಾಸ್ ನಲ್ಲಿ ಪಾಸಾದದ್ದಕ್ಕೆ ಪುರಸ್ಕಾರವಾಗಿ ನನ್ನಣ್ಣ ಕೊಡಿಸಿದ್ದು. ಆಗ ನಮಗೆ ಗೊತ್ತಿದ್ದ ವಾಚುಗಳು ಎರಡೇ. ಒಂದು ಹೆನ್ರಿ ಸ್ಯಾಂಡೋಜ್ ಇನ್ನೊಂದು ಕ್ಯಾಮಿ. ಬೈಸಿಕಲ್ ಅಂತೂ ಜೀವನದಲ್ಲಿ ನನಗಾಗಿ ಎಂದೂ ಕೊಳ್ಳಲಿಲ್ಲ. ಅದೇ ಮನಸ್ಥಿತಿಯಲ್ಲಿ ಬಹುಕಾಲ ಮುಂದುವರಿದ ನಾನು ಟೂ ವೀಲರ್ ಕೊಂಡದ್ದು ಕೂಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನೆಂದು ನಿಯುಕ್ತನಾಗಿ ಏಳು ವರ್ಷಗಳಾದ ನಂತರ.., ಅದೂ ಹೀರೋಪುಕ್ ಎಂಬ ಒಂದು ಚೋಟೂ ಗಾಡಿ ಅದು.
ಬಾಲ್ಯದಲ್ಲಿ ಬೈಲಹೊಂಗಲದಂಥ ಊರಲ್ಲಿ ನಮಗೆ ಆಯ್ಕೆಗಳೇ ಹೆಚ್ಚಿರಲಿಲ್ಲ. ಲಿಂಬಿ ಹುಳಿ ಎಂದು ಕರೆಯಲಾಗುತ್ತಿದ ಬಣ್ಣ ಬಣ್ಣದ ಪೆಪ್ಪರ್ ಮೆಂಟ್ ಗಳು, ಪಾರ್ಲೆ ಗ್ಲೂಕೋ ಬಿಸ್ಕಿಟ್ ಬಿಟ್ಟರೆ ಉಡುಪಿ ಹೊಟೆಲಿನ ಕೆಲ ಬಗೆಯ ತಿಂಡಿ ತಿನಿಸುಗಳು. ಇನ್ನುಳಿದಂತೆ ನಾವು ಪುಗ್ಗೆ ಎಂದು ಕರೆಯುತ್ತಿದ್ದ ಪಕೋಡೆ. ಸ್ಥಿತಿವಂತರಾಗಿದ್ದವರಿಗೆ ಅಷ್ಟಿಷ್ಟು ಹೆಚ್ಚು ಇದ್ದಾವು. ಆದರೆ ಅವೂ ಅಷ್ಟಕ್ಕಷ್ಟೇ. ಬೈಲಹೊಂಗಲದ ಬಸ್ ಸ್ಟ್ಯಾಂಡ್ ಬಳಿ ಗಾಜಿನ ತಳ್ಳುಗಾಡಿಯಲ್ಲಿಟ್ಟುಕೊಂಡು ಬೆಳ್ಳನೆಯ ಇಷ್ಟಿಷ್ಟೇ ಹೋಂ ಮೇಡ್ ಪೇಡೆಗಳನ್ನು ಒಬ್ಬ ಅಜ್ಜಯ್ಯ ಮಾರುತ್ತಿದ್ದ. ಐದು ಪೈಸೆಗೊಂದು! ನನ್ನ ತಂದೆ ತಮ್ಮ ಕೆಲಸದ ಮೇಲೆ ಗೋಕಾಕ, ನಿಪ್ಪಾಣಿ, ಬೆಳಗಾವಿ, ಗಢ್ ಹಿಂಗ್ಲಜ್ ಗಳಿಗೆ ಹೋದಾಗ ತರುತ್ತಿದ್ದ ಪೇಡೇ, ಕುಂದಾ, ಲಾಡೂ, ಅಂಟಿನ ಕರದಂಟು ಬಿಟ್ಟರೆ ಆ ಐದು ಪೈಸೆ ಬೆಲೆಯ ಪೇಡೇನೇ ನಾನು ತಿನ್ನುತ್ತಿದ್ದ “ಸ್ವೀಟ್ “. ಯಾವುದಾದರೂ ನಾಟಕ ಕಂಪನಿ ಬಂದು ಊರಲ್ಲಿ ಕ್ಯಾಂಪ್ ಹಾಕಿದರೆ ನಮಗೆ ಹಬ್ಬ. ಆಗಾಗ ಸರ್ಕಸ್ ಕಂಪನಿಗಳೂ ಬಂದು ಬೀಡು ಬಿಡುತ್ತಿದ್ದುದಿತ್ತು. ಆ ಮೇಲೆ ನಾನು ಹೈಸ್ಕೂಲು ಮುಗಿಸುವ ಹೊತ್ತಿಗೆ ನಮ್ಮವ್ವ ಒಂದು ರೇಡಿಯೋ ತಂದಳು. ಅದರಲ್ಲಿ ಮಧ್ಯಾಹ್ನ ಒಂದೂ ನಲವತ್ತರಿಂದ ಎರಡು ಗಂಟೆಯ ವರೆಗೆ ಎಣಿಸಿ ನಾಲ್ಕು ಕನ್ನಡ ಚಿತ್ರಗೀತೆಗಳು ಬರುತ್ತಿದ್ದವು..”ಚೆಂಗು ಚೆಂಗೆಂದು ಹಾರುವಾ ರಂಗುರಂಗಿನ ಈ ಜಿಂಕೆ” ಅಥವಾ “ಗಿಲ್ ಗಿಲ್ ಗಿಲಿ ಗಿಲ್ಲಕ್ಕ್ ಕಾಲು ಗೆಜ್ಜೆ ಝಣಕ್ಕ್ ಕಯ್ಯ ಬಳೆ ಠಣಕ್ಕ್ ರಂಗೆದ್ದಿತೋ ನಿನ್ನ ಕಂಡು ಹಾಡಿ ಕುಣಿಯೋ ಗುಂಗೆದ್ದಿತೋ” ಟೈಪ್ ಹಾಡುಗಳು.
ಅಷ್ಟರಲ್ಲೇ ಹೆಂಗೆಂಗೋ ಕನಸುಗಳನ್ನು ಹೆಣೆಯುತ್ತ, ಮಾಧುರ್ಯ ಕಂಡುಕೊಳ್ಳುತ್ತ, ಸಹಪಾಠಿಗಳ ಪೈಕಿ ಇದ್ದ ಮೂವರು ಸುಂದರಿಯರಲ್ಲೇ ಭಾರತಿ, ಜಯಂತಿ, ಕಲ್ಪನಾ ಮೊದಲಾದವರನ್ನು ಕಂಡುಕೊಂಡು ಸುಖಿಸುತ್ತ, ಅಭಿರುಚಿ ಬೆಳೆಸಿಕೊಳ್ಳುತ್ತ ಸಾಗುತ್ತಿದ್ದ ನಮಗೆ ಹಿರಿಯರ ಲೋಕದೊಂದಿಗೆ ನಂಟು ಇತ್ತು ಎಂದರೆ ಇತ್ತು, ಇಲ್ಲ ಎಂದರೆ ಇಲ್ಲ. ಅವರೂ ಮಕ್ಕಳನ್ನು ಸಾಕಿ ಸಲಹುವ ಬೆಳೆಸುವ ಪಡಿಪಾಟಲುಗಳಲ್ಲಿ ಸದಾ ನಿರತರಾಗಿರುತ್ತಿದ್ದರು. ಹೆಚ್ಚಿನದಕ್ಕೆ ಹಂಬಲಿಸದೇ, ಅದಿಲ್ಲ ಇದಿಲ್ಲ ಎಂದು ಕೊರಗದೇ, ಬಡತವೆನ್ನುವದು ಅವಮಾನವೆಂದುಕೊಳ್ಳದೇ, ಅದರಿಂದ ಸ್ವಾಭಿಮಾನದ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುತ್ತ ಹೋದ ನಾನು ಇಂದು ಆ ಬಾಲ್ಯ, ಅದರ ಕಷ್ಟಗಳು, ತೊಂದರೆ ತಾಪತ್ರಯಗಳು ನನಗೆ ಏನು ಕಲಿಸಿದವು ಎಂದು ಯೋಚಿಸಿದರೆ ಸಮಾಧಾನದ ಉತ್ತರಗಳೇ ದೊರೆಯುತ್ತವೆ.
ನನ್ನ ಬಾಲ್ಯ ನನಗೆ ಕಷ್ಟಗಳನ್ನು ಎದುರಿಸುವ ಸಹನೆಯನ್ನೂ, ಸಹನೆಯೇ ಎಲ್ಲಕ್ಕಿಂತ ಮಿಗಿಲಾದ ಪ್ರಾರ್ಥನೆ ಎಂಬುದನ್ನೂ ಕಲಿಸಿತು, ಅಲ್ಲದ್ದಕ್ಕೆ ಆಶೆ ಪಡಬೇಡ ಎಂಬ ನೈತಿಕತೆಯನ್ನು ಕಲಿಸಿತು, ಸ್ವಾಭಿಮಾನಕ್ಕಿಂತ ಮಿಗಿಲಾದ ಸಾರ್ಥಕ್ಯವಿಲ್ಲವೆಂಬುದನ್ನು ಕಲಿಸಿತು. ಪರೀಕ್ಷೆಯಲ್ಲಿ ಫೇಲಾದರೆ ಆತ್ಮಹತ್ಯೆ ಮಾಡಿಕೊಳ್ಳಬಹುದೆಂಬ ಯೋಚನೆಯನ್ನು ಕಲಿಸಲಿಲ್ಲ, ಹೆರವರನ್ನು ವಂಚಿಸಿ ಉದ್ಧಾರವಾಗಬೇಕೆಂಬ ದುರ್ಬುದ್ಧಿಯನ್ನು ಕಲಿಸಲಿಲ್ಲ.
ನನ್ನ ಬಾಲ್ಯಕ್ಕೆ ನಾನು, ಅದರೆಲ್ಲ ಓರೆಕೋರೆಗಳ ಹೊರತಾಗಿಯೂ, ಋಣಿ.

‍ಲೇಖಕರು avadhi

2 October, 2013

5 Comments

  1. D. B. Gavani

    Childhood memories are always sweeter (happy or unhappy) because those are formative moments of LIFE!!

  2. Vidyashankar Harapanahalli

    when I grow up I want to child again.
    Growing up was such a waste of time!
    ಎಂಬ ನನ್ನ ಮೆಚ್ಚಿನ ಸಾಲುಗಳು ನೆನಪಿಸಿದಿರಿ, ಸಾರ್, ಬಾಲ್ಯದ ಆ ಪುಟ್ಟ ಜಗತ್ತೇ ಚೆನ್ನಾಗಿತ್ತು. ನಾವು ಬೆಳದಿದ್ದು, ಜಗತ್ತಿನ ವಿಶಾಲತೆ ಅರಿತಿದ್ದು ನಮ್ಮನ್ನು ಹೆಚ್ಚು ದುಃಖಗಳನ್ನಾಗಿ ಮಾಡಿದೆ.

  3. CHANDRASHEKHAR VASTRAD

    ಛಂದ ಬರದಿ ಅಶೋಕ ,ನಾ ನನ್ನ ಬಾಲ್ತಕ್ಕ ಮುಗುಚಿಕೊಂಡ್ಹಂಗ ಆಯ್ತು, ಬಾಲ್ಯ ಎಂಬುದು ಒಂದು ಬಾಳಸಂಪಟದಲ್ಲಿ ಮರೆಯಲಾಗದ ಮಧುರ ಭಾವಗೀತೆ ಎಂಬ ಮಾತು ನಿತ್ಯ ಸತ್ಯ.

  4. D.Ravivarma

    ನನ್ನ ಬಾಲ್ಯ ನನಗೆ ಕಷ್ಟಗಳನ್ನು ಎದುರಿಸುವ ಸಹನೆಯನ್ನೂ, ಸಹನೆಯೇ ಎಲ್ಲಕ್ಕಿಂತ ಮಿಗಿಲಾದ ಪ್ರಾರ್ಥನೆ ಎಂಬುದನ್ನೂ ಕಲಿಸಿತು, ಅಲ್ಲದ್ದಕ್ಕೆ ಆಶೆ ಪಡಬೇಡ ಎಂಬ ನೈತಿಕತೆಯನ್ನು ಕಲಿಸಿತು, ಸ್ವಾಭಿಮಾನಕ್ಕಿಂತ ಮಿಗಿಲಾದ ಸಾರ್ಥಕ್ಯವಿಲ್ಲವೆಂಬುದನ್ನು ಕಲಿಸಿತು. ಪರೀಕ್ಷೆಯಲ್ಲಿ ಫೇಲಾದರೆ ಆತ್ಮಹತ್ಯೆ ಮಾಡಿಕೊಳ್ಳಬಹುದೆಂಬ ಯೋಚನೆಯನ್ನು ಕಲಿಸಲಿಲ್ಲ, ಹೆರವರನ್ನು ವಂಚಿಸಿ ಉದ್ಧಾರವಾಗಬೇಕೆಂಬ ದುರ್ಬುದ್ಧಿಯನ್ನು ಕಲಿಸಲಿಲ್ಲ.
    ನನ್ನ ಬಾಲ್ಯಕ್ಕೆ ನಾನು, ಅದರೆಲ್ಲ ಓರೆಕೋರೆಗಳ ಹೊರತಾಗಿಯೂ, ಋಣಿ…very nice and also heart touching…

  5. ಶಮ, ನಂದಿಬೆಟ್ಟ

    ಬಾಲ್ಯ ನನಗೆ ಕಷ್ಟಗಳನ್ನು ಎದುರಿಸುವ ಸಹನೆಯನ್ನೂ, ಸಹನೆಯೇ ಎಲ್ಲಕ್ಕಿಂತ ಮಿಗಿಲಾದ ಪ್ರಾರ್ಥನೆ ಎಂಬುದನ್ನೂ ಕಲಿಸಿತು, ಅಲ್ಲದ್ದಕ್ಕೆ ಆಶೆ ಪಡಬೇಡ ಎಂಬ ನೈತಿಕತೆಯನ್ನು ಕಲಿಸಿತು, ಸ್ವಾಭಿಮಾನಕ್ಕಿಂತ ಮಿಗಿಲಾದ ಸಾರ್ಥಕ್ಯವಿಲ್ಲವೆಂಬುದನ್ನು ಕಲಿಸಿತು.
    ಮುತ್ತಿನಂಥ ಸಾಲುಗಳು ಸರ್..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading