ಅಹಲ್ಯಾ ಬಲ್ಲಾಳ್

ಅವಳು ಬಾಯಿ ಬಿಡಲೇ ಇಲ್ಲ..
ವೇದಿಕೆ ಸಿಕ್ಕ ತಕ್ಷಣವೋ ವೇದಿಕೆಯನ್ನು ನಿರ್ಮಿಸಿಕೊಂಡೋ ತಮಗೆ ಅಥವಾ ಬೇರೆಯವರಿಗೆ ಆಗಿರುವ ಅನ್ಯಾಯವನ್ನು ವರ್ಣಿಸುವವರು, ಅವರನ್ನು ಕಂಡು ಗೇಲಿ ಮಾಡುವವರು ಈ ಕಡೆ. ಏನು ಹೇಳಲಿ ಹೇಗೆ ಹೇಳಲಿ ಸಾಕ್ಷ್ಯಕ್ಕೆಲ್ಲಿ ಹೋಗಲಿ ಎಂದುಕೊಂಡೋ ಪರಿಣಾಮಗಳಿಗಂಜಿಯೋ ತುಟಿ ಪಿಟಕ್ಕೆನ್ನದವರು ಆ ಕಡೆ. ನಡುವೆ ಸುಳಿವ ಪ್ರೇಕ್ಷಕ ಅನಾತ್ಮರ ಪಾಡೇನು ರಂಗನಾಥ ಎಂದೆಲ್ಲಾ ಅಂದುಕೊಳ್ಳುತ್ತಿರುವಾಗ….
ಇಲ್ಲೊಬ್ಬಳು ವೇದಿಕೆಗೆ ಬಂದೂ ಬಾಯಿ ಬಿಡದೇ ಇದ್ದ ಪ್ರಸಂಗವಿದು. ಒಪ್ಪಿಸಿಕೊಳ್ಳಿ.
ಇತ್ತೀಚೆಗೆ ಮುಂಬಯಿಯಲ್ಲಿ ‘ಟಾಟಾ ಲಿಟ್ ಲೈವ್ ಹಬ್ಬ’ ನಡೆಯಿತು. ನಾರಿಮನ್ ಪಾಯಿಂಟಿನ ನ್ಯಾಶನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಜುಹೂವಿನ ಪ್ರಿಥ್ವಿ ಥಿಯೇಟರ್ ಮತ್ತು ಬಾಂದ್ರಾದ ಸೈಂಟ್ ಪಾಲ್ಸ್ ಹೀಗೆ ಮೂರು ತಾಣಗಳಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಹೋಗುವ ಅನುಕೂಲ ಇರದ ಕಾರಣ ಕೆಲವಕ್ಕಾದರೂ ಹೋಗಿಯೇ ಸಿದ್ಧ ಎಂದು ತೀರ್ಮಾನಿಸಿಯಾಗಿತ್ತು. ಅದರಲ್ಲಿ ಒಂದು, Foreign Body ಎಂಬ ರಂಗಪ್ರಯೋಗ. ನಾಟಕದ ನಂತರ ಸಂವಾದ ಇದೆ, ಆಸಕ್ತರು ಅದರಲ್ಲೂ ಭಾಗವಹಿಸಬಹುದು ಎಂದು ತಿಳಿಯಿತು.
ಟಾಟಾ ಎಕ್ಸ್ಪೆರಿಮೆಂಟಲ್ ಥಿಯೇಟರಿನಲ್ಲಿ ಕರಪತ್ರದಲ್ಲಿರುವ ವಿವರಗಳನ್ನು ನೋಡದೇ ಅದನ್ನು ಪರ್ಸಿನೊಳಗೆ ತುರುಕಿಸಿ ಮೊಬೈಲನ್ನು ಆರಿಸುತ್ತಿದ್ದಂತೆ ಬೆಳಕು ನಿಧನಿಧಾನಕ್ಕೆ ಕಡಿಮೆಯಾಗತೊಡಗಿತು. ರಂಗದ ಮೇಲೆ ಹೆಚ್ಚು ಕಡಿಮೆ ಆಳೆತ್ತರದ ಏಳು ಕನ್ನಡಿಗಳನ್ನು ಅರೆ ವರ್ತುಲಾಕಾರದಲ್ಲಿ ಜೋಡಿಸಿಡಲಾಗಿತ್ತು. ಕೆಲವು ಕನ್ನಡಿಗಳಿಗೆ ಕಪ್ಪು ಚೌಕಟ್ಟಾದರೆ ಇನ್ನುಳಿದವುಗಳಿಗೆ ಬಿಳಿಯದು. ರಂಗದ ನಡುವೆ ತೀರ ಸಾಧಾರಣ ಎನಿಸುವ ಒಂದು ಕುರ್ಚಿ, ಅಷ್ಟೇ.

ಸ್ವಲ್ಪ ಸಮಯದಲ್ಲೇ ನಟಿ ಇಮೋಜೆನ್ ಬಟ್ಲರ್- ಕೋಲ್ ಪ್ರವೇಶಿಸಿದಳು. ಸರಳ ಉಡುಗೆ, ಮೇಕಪ್ ಅಂತೂ ಇಲ್ಲವೇ ಇಲ್ಲ. ಮಾತಿಲ್ಲದೆ, ಕೇವಲ ಶಾರೀರಿಕ ಚಲನವಲನಗಳೊಂದಿಗೆ ರಂಗಕ್ಕೆ ಜೀವ ತುಂಬತೊಡಗಿದಳು. ಹಿನ್ನೆಲೆಯಲ್ಲಿ ಇದ್ದೂ ಇಲ್ಲದಂತೆ ಸರಳವಾದ ವಾದ್ಯ ಸಂಗೀತ. ಇದು ಇತ್ತೀಚಿನ ನಾಟಕಗಳಲ್ಲಿ ಹೆಚ್ಚು ಹೆಚ್ಚು ಕಾಣಿಸತೊಡಗಿರುವ ಫಿಸಿಕಲ್ ಥಿಯೇಟರ್ ಮಾದರಿಗೆ ಸೇರಿದ ಪ್ರಯೋಗ. ಅರ್ಥಾತ್, ದೇಹಭಾಷೆಯನ್ನು ವಿಶಿಷ್ಟ ರೀತಿಯಲ್ಲಿ ಬಳಸಿಕೊಂಡು, ಅದರ ಮೂಲಕ ಸಂಕೀರ್ಣ ಅನುಭವಗಳನ್ನು ದಾಟಿಸಲು ಉದ್ದೇಶಿಸುವ ಪರಿ.
ನಟಿ ಕುರ್ಚಿಯನ್ನು ಎತ್ತಿ ಅದೂ ತನ್ನ ದೇಹದ ಭಾಗವೇನೋ ಎಂಬಂತೆ ಅದನ್ನೂ ಚಲನವಲನಗಳಲ್ಲಿ ಬಳಸಿಕೊಂಡು ರಂಗದ ಮೇಲೆ ಸಂಚರಿಸುತ್ತಿರುವಂತೆಯೇ ಅವಳ ಧ್ವನಿಮುದ್ರಿತ ಮಾತು ಕೇಳಿಸುತ್ತದೆ.. I am fine, I had a normal childhood ಎನ್ನುತ್ತಲೇ ಬಾಲ್ಯ ಮತ್ತು ಜೀವನದ ಸರಳ ನಿರೂಪಣೆ. ಮುಂದುವರೆದು ಅವಳ ಮೇಲಾದ ಅತಿಕ್ರಮಣದ ಬಗ್ಗೆ ಮಾತು ಬರುತ್ತದೆ. ಎಲ್ಲಿಯೂ ಧ್ವನಿಯ ‘ನಾಟಕೀಯ’ ಏರಿಳಿತವಾಗಲೀ ಸಾಂಪ್ರದಾಯಿಕವಾಗಿ ನೋವನ್ನು ತೋರಿಸಲು ಬಳಸುವ ಮುಖಭಾವಗಳಾಗಲೀ ಕಾಣಿಸದು. ಆದರೂ ಬರಿಯ ಆ ಕುರ್ಚಿಯೊಂದಿಗಿನ ಮೂವ್ಮೆಂಟ್, ಹಿನ್ನೆಲೆಯಲ್ಲಿ ಕೇಳಿಬರುವ ಅವಳ ಧ್ವನಿಯಿಂದಲೇ ರಂಗಮಂದಿರದಲ್ಲಿ ಕತ್ತಲೆಯಲ್ಲಿ ಕುಳಿತ ಪ್ರೇಕ್ಷಕರಿಗೆ ಸಮ್ಮತಿ- ಅಸಮ್ಮತಿ, ಬೇಕು-ಬೇಡ, ಅತಿಕ್ರಮಣ, ಆ ಅನುಭವದ ವೇದನೆ-ಗೊಂದಲ-ಪಾಪಪ್ರಜೆಟಿ-ವಿರೋಧ-ಕೋಪ-ಸಂಕೋಚ-ಅಸಹಾಯಕತೆ-ಅಪಮಾನ ಎಲ್ಲವೂ ತಂತಾನೆ ಅರಿವಿಗೆ ಬರುವುದು ಈ ಪ್ರಯೋಗದ ವೈಶಿಷ್ಟ್ಯ.
ಇವಳೊಬ್ಬಳೇ ಹೀಗೆ ರಂಗದ ತುಂಬ ಆವರಿಸಿಕೊಳ್ಳುತ್ತಿರುವಾಗ ಹಿನ್ನೆಲೆಯಲ್ಲಿ ನಮಗೆ ಇನ್ನಷ್ಟು ಮಹಿಳಾ ದನಿಗಳ ಮೂಲಕ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಸ್ತ್ರೀಯರಿಗಾದ ಅನುಭವಗಳೂ ಕೇಳಿಬರುತ್ತವೆ. ಚಿಕ್ಕ ಪೋರಿಯೂ ಸೇರಿದಂತೆ ಎಲ್ಲ ವಯಸ್ಸಿನವರೂ ಇದ್ದಾರಲ್ಲಿ. ಕೆಲವಂತೂ ಊಹಿಸಲೂ ಕಷ್ಟವಾಗುವಂತಹ ಆಕ್ರಮಣ ಹಾಗೂ ಬಲಾತ್ಕಾರದ ಘಟನೆಗಳು-ನೆನಪುಗಳು. ಎಲ್ಲವೂ ಸಮ್ಮತಿ ನೀಡದಿದ್ದರೂ ನಡೆದ ದೌರ್ಜನ್ಯಗಳು. ಆ ಧ್ವನಿಮುದ್ರಿತ ಸ್ವರಗಳನ್ನು ಕೇಳಿಯೇ ಅವು ನಟಿಯರ ಸ್ವರಗಳಲ್ಲ, ದಿಟದಲ್ಲಿ ಇಂತಹ ಅತ್ಯಾಚಾರಗಳಿಗೆ ತುತ್ತಾದ ಮಹಿಳೆಯರ ದನಿಗಳು ಎಂಬುದು ಎಂತಹ ಸಿನಿಕರಿಗೂ ಗೋಚರವಾಗುತ್ತದೆ. ಇನ್ನೂ ಸಾಕ್ಷ್ಯ ಬೇಕೇ?! ರಂಗಭೂಮಿಯ ಪ್ರಯೋಗವೊಂದು ಪ್ರೇಕ್ಷಕರೆಲ್ಲರ ಹೃದಯಬಡಿತವನ್ನು ಒಂದೇ ಲಯಕ್ಕೆ ತಂದು, ಅವರ ವಿಚಾರಗಳನ್ನೂ ಒಂದೇ ಕಡೆ ಕೇಂದ್ರೀಕರಿಸುವ ಶುದ್ಧ ಅಪರಂಜಿ ಗಳಿಗೆ ಅದು. ಇಂತಹ ಕ್ಷಣಗಳಲ್ಲೇ ಅಲ್ಲವೆ ನಟ/ನಟಿ- ಪ್ರೇಕ್ಷಕ ಒಂದಾಗಿಬಿಡುವುದು, ಸಹೃದಯತೆಯೇ ರಾಜ್ಯವಾಳುವುದು!

ಈಗ ನಟಿಯ ಚಲನವಲನಗಳು ವೇಗ ಪಡೆಯುತ್ತವೆ, ಜೊತೆಗೆ ಪ್ರೇಕ್ಷಕರಿಗೆ ಕೇಳಿಸುವ ಮಹಿಳಾ ದನಿಗಳೂ ಒಂದರ ಬೆನ್ನಿಗೇ ಇನ್ನೊಂದು ಎಂಬಂತೆ ವೇಗದಿಂದ ಮೇಲೆ ಮೇಲೆ ಬರತೊಡಗಿ, ಆ ರಭಸ ಪರಾಕಾಷ್ಠೆ ತಲುಪಿದ ನಂತರ ನಟಿ ತನ್ನ ಕೈಲಿದ್ದ ಕುರ್ಚಿಯನ್ನು ಮತ್ತೆ ರಂಗದ ನಡುವಿನಲ್ಲಿಡುತ್ತಾಳೆ. ಎಲ್ಲಕ್ಕಿಂತ ಅನಿರೀಕ್ಷಿತವಾದ ತಿರುವು ಬರುವುದು ಈಗ. ನಟಿ ಆ ಕುರ್ಚಿಯ ಸುತ್ತ ಸುತ್ತು ಹಾಕುತ್ತಿರುವಂತೆ ನಮಗೆ ಈಗ ಪುರುಷ ದನಿಯೊಂದು ಕೇಳುತ್ತದೆ. ಹೌದು, ಅತ್ಯಾಚಾರ ಎಸಗಿದವನ ದನಿ ಅದು! ಮತ್ತು ಆ ದನಿ ಖಳನಾಯಕನ ದನಿಯಂತಿರದೆ ಸಾಮಾನ್ಯರ ದನಿಯಂತೇ ಇದೆ.
ಆ ಪುರುಷನ ದನಿ ಏನು ಹೇಳುತ್ತದೆ, ಮುಂದೇನು ನಡೆಯುತ್ತದೆ ಇದನ್ನೆಲ್ಲ ರಂಗದ ಮೇಲೆಯೇ ನೋಡಬೇಕು, ಅನುಭವಿಸಬೇಕು. ಆಗ ನಮ್ಮ ಬೊಗಸೆಗೆ ಇಂತಹ ಸನ್ನಿವೇಶಗಳ ಇನ್ನಷ್ಟು ಆಯಾಮಗಳು ಸಿಗುತ್ತವೆ ಎಂದಷ್ಟೇ ಈ ಲೇಖನದ ಮಿತಿಯೊಳಗೆ ಹೇಳಬಹುದೇನೋ.
Foreign Bodyಯ ಅನನ್ಯತೆ ಎಂದರೆ ಅದು ಅತ್ಯಾಚಾರದ ಕಥೆಯನ್ನು ಕಲಾತ್ಮಕವಾಗಿ ಹೇಳಿ, ನಾನು ಸತ್ಯವನ್ನೇ ಹೇಳಿದ್ದೇನೆ, ಪ್ರೇಕ್ಷಕರಿಗೆ ಇದರ ವಾಸ್ತವವನ್ನು ಮನದಟ್ಟು ಮಾಡಿದ್ದೇನೆ, ನನ್ನ ಕೆಲಸವಾಯಿತು, ಎಲ್ಲರೂ ಚಪ್ಪಾಳೆ ತಟ್ಟಿ ಎನ್ನುತ್ತ ಸುಮ್ಮನಾಗುವುದಿಲ್ಲ. ಅದು ಇನ್ನೂ ಮುಂದೆ ಹೋಗಿ ಮಾಯುವಿಕೆಯ ಪ್ರಕ್ರಿಯೆಗೂ (healing process) ಅಷ್ಟೇ ಪ್ರಾಶಸ್ತ್ಯ ಕೊಡುತ್ತದೆ. ಇಲ್ಲಿ ಬರುವ ಬೇರೆ ಬೇರೆ ಮಹಿಳೆಯರ ದನಿಗಳಲ್ಲಿ ನಮಗೆ ಬೇರೆ ಬೇರೆ ಮಾರ್ಗಗಳು ಕಾಣಿಸುವುದು ಸಹಜವೇ ಆಗಿದೆ. ಯಾವುದೇ ಪುರುಷ ದ್ವೇಷವಿಲ್ಲದೆ, ಗಂಡಸರೆಲ್ಲ ಕೆಟ್ಟವರೆಂಬ ಸುಲಭ ದೂಷಣೆ ಇಲ್ಲದೆ, ಅಮಾನವೀಯ ವಿಕಾರದ ಸಮ್ಮುಖದಲ್ಲೂ ಜೀವಪರ ಅನುಭವವೊಂದನ್ನು ಅದರ ಅನೇಕ ಪದರಗಳಲ್ಲಿ ಸಶಕ್ತವಾಗಿ ಕಟ್ಟಿಕೊಡುವ ಈ ಪ್ರಯೋಗ ಅತ್ಯಂತ ಶ್ಲಾಘನೀಯವಾಗಿದೆ.
ಅತ್ಯಂತ ಹೀನಾಯವಾದ ಅನುಭವವನ್ನು ಪಡೆದು (ಅನೇಕ ವರ್ಷಗಳ ನಂತರ) ಅದರಿಂದ ಹೊರಬರಲು ಎಲ್ಲ ಯತ್ನಗಳನ್ನು ಮಾಡಿ, ಈ ನಾಟಕ ಬರೆದು ನಟಿಸಿದ ಇಮೋಜೆನ್ ಬಟ್ಲರ್-ಕೋಲ್, ಪೂರಕವಾದ ಧ್ವನಿ ವಿನ್ಯಾಸ-ಸಂಗೀತ ನೀಡಿದ ತಾರಾ ಫ್ರಾಂಕ್ಸ್, ಫಿಲಿಪಿ ಸೌಸಾ, ನಿರ್ದೇಶಕಿ ಫ್ರಾನ್ ಮೌಲ್ಡ್ಸ್ ಇವರೆಲ್ಲರ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಅಮೂಲ್ಯ ಪ್ರಯೋಗ ಧೈರ್ಯವನ್ನೂ ಭರವಸೆಯನ್ನೂ ನೀಡುತ್ತದೆ. ಇದು ಮಾರ್ಚ್ 2017ರಿಂದ ತಿರುಗಾಟ ಆರಂಭಿಸಿ, ಅಂತಾರಾಷ್ಟೀಯ ಮಟ್ಟದಲ್ಲಿ ಸಾಕಷ್ಟು ಮನ್ನಣೆ ಗಳಿಸಿದೆ.

ನಾಟಕದ ನಂತರ ನಡೆದ ಸಂವಾದದಲ್ಲಿ ಕೇಳಿಬಂದ ಒಂದು ಘಟನೆ. ಸುಮಾರು 28-30ರ ಆಸುಪಾಸಿನ ಪುರುಷನೊಬ್ಬ ತನ್ನ ಸ್ನೇಹಿತನ ಅನುಭವವನ್ನು ಹಂಚಿಕೊಂಡ. ಎಷ್ಟೋ ವರ್ಷಗಳ ಹಿಂದೆ ಆ ಸ್ನೇಹಿತ ಇವನಿಗೆ ಪರಿಚಯವಿದ್ದ ಹುಡುಗಿಯ ಮೇಲೆ ಅತಿಕ್ರಮಣ ನಡೆಸಿದ್ದ. ಅವಳು ಬೇಡ ಎಂದಿದ್ದರೂ ಅವನು ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಬ್ಬರಿಗೂ ಆಗ ಹದಿಹರೆಯ, ಸಮ್ಮತಿ-ಅಸಮ್ಮತಿ ಇವುಗಳ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ. ಎಷ್ಟೋ ವರ್ಷಗಳ ನಂತರ ಅವನಿಗೆ ತನ್ನ ತಪ್ಪಿನ ಅರಿವಾಗಿ ಅವನು ಎಲ್ಲೋ ಇದ್ದ ಆ ಹುಡುಗಿಯನ್ನು ಸಂಪರ್ಕಿಸಿ ಕ್ಷಮೆ ಕೇಳಿದನಂತೆ. ಸಂವಾದದಲ್ಲಿ ಭಾಗವಹಿಸಿದ ವ್ಯಕ್ತಿ ಹೇಳಿದ್ದು: ಈ ಪ್ರಯೋಗ ನೋಡಿ ಅದೆಷ್ಟು ಜನರಿಗೆ ಸಮ್ಮತಿ ಅಂದರೇನು ಅಸಮ್ಮತಿ ಅಂದರೇನು ತಿಳಿಯುತ್ತದೆಯಲ್ವೆ, ನನ್ನ ಗೆಳೆಯನಂತಹವರು ಇದನ್ನು ಆಗ ನೋಡಿದ್ದಿದ್ದರೆ ಎಷ್ಟೊಂದು ಅನಾಹುತಗಳನ್ನು ತಪ್ಪಿಸಬಹುದಲ್ವೆ?
ನಿಜಕ್ಕೂ, ರಂಗಭೂಮಿ ಎಂದರೆ ಕಲೆಯೇ ಮನರಂಜನೆಯೇ ಅಥವಾ ಸಾಮುದಾಯಿಕ ಕ್ರಿಯೆಯೇ?








ನೀವು ದನಿಯಾದಿರಿ
ಜೈ ಹೋ, ಅವಧಿ. Thank you!