ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ‘ನಾನೇ ಸರಿ ಇಲ್ಲವೇನೇ’ ಅಂದಳು..

ಭಾರತಿ ಬಿ ವಿ

‘ಈ ಬದುಕಿನಲ್ಲಿ ಏನಿದೆ? ಸತ್ತು ಹೋಗೋದು ವಾಸಿ’ ಆ ಕಡೆ ಫೋನಿನಲ್ಲಿ ಮಾತಾಡುತ್ತಿದ್ದ ಅವಳ ದನಿ ದುಃಖದಿಂದ ನಡುಗುತ್ತಿತ್ತು.
ಇವಳು ಎಂದಿನಂತೆ ಕಿವಿಗೊಟ್ಟು ಕೂತಳು.
‘ಎಲ್ಲ ಸಾಕಾಗಿಹೋಗಿದೆ. ಎಷ್ಟು ವರ್ಷ ಬದುಕಿದರೂ ಇಷ್ಟೇನೇ….’ ಅವಳು ಅಳಲು ಶುರು ಮಾಡಿದಳು.
‘ಈಗ ಮಲಗಿಬಿಡು, ನಾಳೆ ಯೋಚಿಸೋಣ’ ಇವಳ ತಣ್ಣನೆಯ ಸಾಂತ್ವನ, ಮರುದಿನಕ್ಕೆ ಎಲ್ಲ ಸರಿ ಹೋಗುತ್ತದೆ ಅನ್ನೋ ಆಶಾವಾದ ಎಂದಿನಂತೆ ….
***

ಮರುದಿನ ಬೆಳಿಗ್ಗೆ ಏಳುವುದರಲ್ಲೇ ಅವಳ ಫೋನ್ ‘ನಾನು ಡಿಪ್ರೆಷನ್ ಗೆ ಹೋಗ್ತಿದೀನಿ ಅನ್ನಿಸ್ತಿದೆ. ನಿನ್ಜೊತೆ ಮಾತಾಡಬೇಕು. ಅಲ್ಲಿಗೂ ಸರಿ ಹೋಗದಿದ್ರೆ ಸೈಕಿಯಾಟ್ರಿಸ್ಟ್ ಸಹಾಯ ಬೇಕು. ಇಲ್ಲಾಂದ್ರೆ ಇದು ಸರಿ ಹೋಗಲ್ಲ. ನಿನ್ನ ಒಂದೆರಡು ಘಂಟೆ ನನಗೆ ಕೊಡ್ತೀಯಾ?’
ನೂರೆಂಟು ಕೆಲಸ ಹರಡಿಕೊಂಡು ಕೂತಿದ್ದ ಇವಳಿಗೆ ಅವಳು ಬಂದ ನಂತರ ಇಡೀ ದಿನವೇ ಅವಳಿಗೆ ಕೊಡಬೇಕಾಗುತ್ತದೆ ಅನ್ನುವುದು ತಿಳಿಯದ್ದೇನಲ್ಲ. ಹಾಗಿದ್ದಾಗಲೂ ‘ಬಾ ಯಾವಾಗ ಬೇಕಾದರೂ…’ ಲ್ಯಾಪ್ ಟಾಪ್  ಮುಚ್ಚಿಡುತ್ತ ಹೇಳಿದಳು.
‘ನಾನು ಸೈಕಿಯಾಟ್ರಿಸ್ಟ್ ಎದುರು ಕೂಡ ನಿನ್ನೆದುರು ಇರೋ ಹಾಗೆ ಎಲ್ಲ ಹೇಳ್ಕೊಳಕ್ಕಾಗಲ್ಲ. ಅದಕ್ಕೇ….’ ಬಿಜ಼ಿ ಇದ್ದಾಳೆ  ಅನ್ನುವುದು ತಿಳಿದೂ ಇವಳ ಸಮಯ ಬೇಡಿದ ಪಾಪಪ್ರಜ್ಞೆ ದನಿಯಲ್ಲಿ…
‘ಇರಲಿ ಬಾ, ಅಡ್ಡಿಯಿಲ್ಲ….’
***

ಬಾಗಿಲು ತಟ್ಟಿದ ಸದ್ದು
ಎದುರಿಗೆ ಸಪ್ಪೆ ಮುಖದ ಇವಳು…
ಸೀದಾ ಅಡಿಗೆಮನೆಗೆ ಹೋಗಿ ಅವರೆಕಾಳು ಸಾರು, ಅನ್ನ ಹಾಕಿಕೊಂಡು ಬಂದಳು.
ಗುಂಡುಕಲ್ಲಿನ ಹಾಗೆ ತಿನ್ನುವ ಅವಳು ‘ಸ್ವಲ್ಪ ಸಾಕು’ ಅಂದಳು.
ಇವಳು ಮಾತಿಲ್ಲದೇ ಅರ್ಧ ಅನ್ನ ತೆಗೆದು ತಟ್ಟೆ ಎದುರಿಗಿಟ್ಟಳು.
ಅವಳು ಕೆದಕುತ್ತಾ ಅರ್ಧ ಅನ್ನ ಅವರೆಕಾಳು ಸಾರಿನಲ್ಲಿ ಕಲೆಸಿ, ಉಳಿದ ಒಂದು ಸ್ಪೂನ್ ಅನ್ನಕ್ಕೆ ಮೊಸರು ಹಾಕಿ ಊಟ ಮುಗಿಸಿದಳು.
ಇವಳು ಮಾತು ಶುರುವಾಗುವ ಘಳಿಗೆಗೆ ಕಾದಳು.
ಅವಳು ಎಂದಿನಂತೆ ದುಃಖದಲ್ಲಿ ಮಾತು ಶುರು ಮಾಡಿದಳು … ಮಧ್ಯೆ ಎಲ್ಲೋ ಆತ್ಮಾವಲೋಕನಕ್ಕೆ ಮೊದಲಿಟ್ಟಳು … ಇಡೀ ಜಗತ್ತಿನ ಮೇಲೆ ಸಿಟ್ಟಾದಳು … ಮರುಕ್ಷಣ ಆತ್ಮಮರುಕದಲ್ಲಿ ಮಿಂದಳು … ಕಣ್ಣೀರಾದಳು….
ಇವಳು ಕೂತು ಕೇಳುತ್ತಲೇ ಇದ್ದಳು.
ಅವಳು ‘ನಾನೇ ಸರಿ ಇಲ್ಲವೇನೇ’ ಅಂದಳು.
ಅಭಿಪ್ರಾಯ ಕೇಳುವವರೆಗೆ ಎಂದೂ ಮಾತಾಡದ ಇವಳು ನಿಧಾನಕ್ಕೆ ‘ನೀನು ಇಲ್ಲಿ ಸರಿ ಇದ್ದೀಯ, ಇಲ್ಲಿ ತಪ್ಪಿದ್ದೀಯ’ ಅಂತ ಹೇಳುತ್ತ ಹೋದಳು.
ಅವಳು ಎಲ್ಲಕ್ಕೂ ಕಿವಿಗೊಡುತ್ತ ತನ್ನನ್ನು ಇದು ನೋಯಿಸುತ್ತದೆ, ಅದು ದುಃಖಕ್ಕೀಡು ಮಾಡುತ್ತದೆ ಅಂತ ಕಡತ ತೆಗೆದು ಕೂತಳು…
ಮಾತಾಡುತ್ತ,  ಆಡುತ್ತ ಹಗುರಾಗುತ್ತ ಹೋದಳು….
ಇಡೀ ರೂಮಿನ ತುಂಬ ಭಾವನೆಗಳ ಸಾಗರ ….
ಒಂದೂವರೆ ಘಂಟೆಗಳ ನಂತರ ಮಾತಾಡಿ, ಆಡಿ ಹಗುರಾಗುತ್ತ ಹೋದವಳು, ಇದ್ದಕ್ಕಿದ್ದಂತೆ ಎದುರಿಗಿದ್ದ ಸಂಕ್ರಾಂತಿಯ ಎಳ್ಳಿನ ಸಾಮಾನು ನೋಡುತ್ತ ‘ಮನೆಗೆ ಹೋದ ಕೂಡಲೇ ಮಿಕ್ಸ್ ಮಾಡಿ ಒಂದು ಹಿಡಿ ತಿಂದು ಬಿಡಬೇಕು. ಹಬ್ಬಕ್ಕೋಸ್ಕರ ಕಾಯಕ್ಕಾಗಲ್ಲ’ ಎನ್ನುತ್ತ ಇವಳ ಕಡೆ ತಿರುಗಿದಾಗ ಇವಳು ನಗುತ್ತಾ ‘ಸಾಯೋ ಮಕಾನಾ ನಿಂದು!’ ಎನ್ನುತ್ತ ಟೀ ಮಾಡಲು ಎದ್ದು ನಡೆದಳು …

‍ಲೇಖಕರು Admin

13 January, 2016

4 Comments

  1. prathibha nandakumar

    ಭಾರತೀ…. ನಾನು ಯಾವಾಗಲೂ ಆರತಿಗೆ ಫ಼ೋನ್ ಮಾಡಿ ಹೀಗೇ ಕೇಳೋದು…. ಅವಳೂ ಹಾಗೇ ಹೇಳೋದು….

    • ಭಾರತಿ ಬಿ ವಿ

      ನೀವೂ ಇಂಥದ್ದೇ ಜೀವನಪ್ರೀತಿ ಹೆಣ್ಣು ಪ್ರತಿಭಾ… ಹೀಗೇ ಇರಿ

  2. deepthi

    very nice Bharathiji……deepthi bhadravathi

    • Bharathi b v

      ಥ್ಯಾಂಕ್ಸ್ ದೀಪ್ತಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading