ಆರ್ ಟಿ ವಿಠ್ಠಲಮೂರ್ತಿ
ಇಪ್ಪತ್ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ನಾನು ಮೈಸೂರಿನ ಆಂದೋಲನ ಪತ್ರಿಕೆಯ ವರದಿಗಾರ. ಇತ್ತೀಚೆಗಷ್ಟೇ ಪತ್ರಿಕೆಯ ಸಂಪಾದಕರಾದ, ನಾಡಿನ ಶೋಷಿತರ ಪಾಲಿನ ಧ್ವನಿಯಾಗಿದ್ದ ಶ್ರೀ ರಾಜಶೇಖರ ಕೋಟಿ ಅವರಿಗೆ ಎಪ್ಪತ್ತು ವರ್ಷ ತುಂಬಿದಾಗ ಶುಭಾಶಯ ಕೋರಿ ಈ ಲೇಖನ ಬರೆದಿದ್ದೆ. ಆದರೆ ಇವತ್ತು ಅವರು ತೀರಿಕೊಂಡಿದ್ದಾರೆ.ಮನಸ್ಸು ತಲ್ಲಣಗೊಂಡಿದೆ.ತಬ್ಬಲಿತನ ಕಾಡುತ್ತಿದೆ.
ಕಾರಿನಲ್ಲಿ ಒಟ್ಟಿಗೆ ಹೋಗುತ್ತಿದ್ದೀರಿ.ಅವರು ಡ್ರೈವ್ ಮಾಡುತ್ತಿರುತ್ತಾರೆ.ನೀವು ಮಾತನಾಡುತ್ತಾ ಕೂರಿ.ಏನು ಮರೆತರೂ ಮಾತನಾಡುವುದನ್ನು ಮರೆಯಬೇಡಿ ಅಂತ ಅವರು ಹೇಳಿದರು.
ನಾನು ಬೆರಗಿನಿಂದ, ಯಾಕೆ ಅಮ್ಮಾ?ಅಂತ ಕೇಳಿದೆ.ಅದಕ್ಕವರು,ಅಲ್ಲ,ಮಾತಿಗೆ ಅಂತ ಹೇಳಿದೆ.ಡ್ರೈವ್ ಮಾಡುವಾಗ ಅವರು ಒಮ್ಮೊಮ್ಮೆ ನಿದ್ದೆಗೆ ಜಾರಿ ಬಿಡಬಹುದು.ಹಾಗಾಗದಂತೆ ನೋಡಿಕೊಳ್ಳಿ ಎಂದರು.ಅವರು ಶ್ರೀಮತಿ ನಿರ್ಮಲಾ ಕೋಟಿ.
ತಕ್ಷಣ ನಾನು ಫುಲ್ ಅಲರ್ಟ್ ಆದೆ.ಮರು ದಿನ ನಕ್ಕೀರನ್ ಗೋಪಾಲ್ ಅವರು ನಡೆಸುವ ಪತ್ರಿಕಾ ಗೋಷ್ಟಿಗಾಗಿ ಹಿಂದಿನ ದಿನ ರಾತ್ರಿ ನಾವು ಮದ್ರಾಸ್ ಗೆ ಹೊರಟಿದ್ದೆವು.ಹೀಗೆ ಮದ್ರಾಸ್ ಗೆ ಹೊರಟ ಕಾರನ್ನು ಅವರು ಡ್ರೈವ್ ಮಾಡುತ್ತಿದ್ದ ರೀತಿ ನೋಡಿ ನಾನು ಬೆಕ್ಕಸ ಬೆರಗು,ಕೇವಲ ಮೂರೇ ಗಂಟೆಯಲ್ಲಿ ಬೆಂಗಳೂರು ಟು ಮದ್ರಾಸ್ ಜರ್ನಿ ಕ್ಲೋಸು.
ಮದ್ಯ ರಾತ್ರಿ ಮದ್ರಾಸ್ ನ ದಾಸ್ ಪ್ರಕಾಶ್ ಹೋಟೆಲ್ಲಿಗೆ ತಲುಪಿದಾಗ ನಾನು ತಣ್ಣಗೆ ಅವರನ್ನೇ ನೋಡಿದೆ.ಇವತ್ತೂ ನೋಡುತ್ತಿದ್ದೇನೆ.ಅವತ್ತಿನ ಮಾನವೀಯತೆಯ ಯುಗದಿಂದ ಇವತ್ತಿನ ಜಾಗತೀಕರಣದ ಯುಗಕ್ಕೆ ಕಾಲಿಟ್ಟಿರುವ ಈ ಹೊತ್ತಿನಲ್ಲೂ ಅವರು ಬದಲಾಗಿಲ್ಲ.ಅವರ ಹೆಸರು ಶ್ರೀರಾಜಶೇಖರ ಕೋಟಿ.
ಅವರಿಗೆ ಈಗ ಎಪ್ಪತ್ತು ವರ್ಷದ ಸಂಭ್ರಮ.(06-07-2017)ನನ್ನಂತಹ ನೂರಾರು ಮಂದಿ ಪತ್ರಕರ್ತರನ್ನು ಹುಟ್ಟು ಹಾಕಿದ ರಾಜಶೇಖರ ಕೋಟಿ ಅವರಂತಹ ಸಂಪಾದಕರು ಇನ್ನು ಮುಂದೆ ಸಿಗುತ್ತಾರೆ ಎಂಬುದನ್ನು ಕಲ್ಪಿಸಿಕೊಳ್ಳುವುದು ಕೂಡಾ ನನ್ನಂತವರಿಗೆ ಕಷ್ಟ.
ಹಾಗೆ ನೋಡಿದರೆ ಪತ್ರಿಕೋದ್ಯಮದಲ್ಲಿ ನನಗೆ ಬ್ರೇಕ್ ಕೊಟ್ಟಿದ್ದೇ ರಾಜಶೇಖರ ಕೋಟಿ ಅವರ ಸಂಪಾದಕತ್ವದ ಆಂದೋಲನ ದಿನ ಪತ್ರಿಕೆ.ಎಂಭತ್ತೊಂಭತ್ತರಲ್ಲಿ ಬೆಂಗಳೂರಿಗೆ ಬಂದು ಪತ್ರಿಕೋದ್ಯಮಕ್ಕೆ ಕಾಲಿಟ್ಟ ನನಗೆ ಆಂದೋಲನ ಪತ್ರಿಕೆಯ ವರದಿಗಾರನಾಗುವ ಅವಕಾಶ ಕಲ್ಪಿಸಿದವರು ಮುಂಬೈನ ಕರ್ನಾಟಕ ಮಲ್ಲ ಪತ್ರಿಕೆಯ ಮಾಲೀಕರಾಗಿದ್ದ ಮಲ್ಲಿಕಾರ್ಜುನಯ್ಯ.
ಒಂದು ದಿನ ಇದ್ದಕ್ಕಿದ್ದಂತೆ ಅವರು ನನ್ನನ್ನು ಕರೆದು,ವಿಠ್ಠಲಮೂರ್ತಿ.ಪತ್ರಿಕೆಯನ್ನು ಬೇರೆಯವರಿಗೆ ಮಾರುತ್ತಿದ್ದೇನೆ.ಅದಕ್ಕೆ ಸೋಮಸುಂದರರೆಡ್ಡಿ ಕರೆಸ್ಪಾಂಡೆಂಟ್ ಆಗಿರಲಿ.ನೀವು ಆಂದೋಲನ ಪತ್ರಿಕೆಗೆ ಸೇರಿಕೊಳ್ಳಿ.ಅದರ ಸಂಪಾದಕರಾದ ರಾಜಶೇಖರ ಕೋಟಿ ಅವರ ಜತೆ ನಾನು ಮಾತನಾಡಿದ್ದೇನೆ.ವೇತನ ಎರಡು ಸಾವಿರ ಬೇಕು ಅಂತ ಕೇಳಿ.ಅವರು ಒಂದೂವರೆ ಸಾವಿರ ಫಿಕ್ಸು ಮಾಡುತ್ತಾರೆ ಎಂದರು.
ನಾನು ಹೆಗಲಿಗೆ ಒಂದು ಚೀಲ ನೇತು ಹಾಕಿಕೊಂಡು ಸೀದಾ ಮೈಸೂರಿನ ರಾಮಾನುಜ ರಸ್ತೆಯಲ್ಲಿದ್ದ ಪತ್ರಿಕೆಯ ಕಚೇರಿಗೆ ಹೋದೆ.ಹೋದವನೇ, ಸಂಪಾದಕರಾದ ರಾಜಶೇಖರ ಕೋಟಿಯವರನ್ನು ಭೇಟಿ ಮಾಡಿದೆ.ಆ ದಿನ ನನಗಿನ್ನೂ ಚನ್ನಾಗಿ ನೆನಪಿದೆ.ಅವತ್ತು 1994 ರ ಆಗಸ್ಟ್ 28.ಅವರನ್ನು ಭೇಟಿ ಮಾಡಿದಾಗ ನಿರೀಕ್ಷಿಸಿದಂತೆಯೇ ಆಯಿತು.ನಾನು ಎರಡು ಸಾವಿರ ರೂಪಾಯಿ ಸಂಬಳ ಬೇಕು ಎಂದೆ.ಅವರು ಒಂದೂವರೆ ಸಾವಿರ ರೂ ಫಿಕ್ಸು ಮಾಡಿದರು.
ಆಗ ಪತ್ರಿಕೆಯಲ್ಲಿ ಎಂತೆಂತಹ ಘಟಾನುಘಟಿಗಳಿದ್ದರೆಂದರೆ ಹರೀಶ್,ಆಂಶಿ ಪ್ರಸನ್ನ ಕುಮಾರ್,ಹಾಡು-ಪಾಡು ರಾಮು ಸೇರಿದಂತೆ ಹಲವರು.ಹೀಗೆ ಕೋಟಿ ಲಿಂಗಗಳಲ್ಲಿ ನನ್ನದೂ ಒಂದು ಬೋಡು ಲಿಂಗ ಎಂಬಂತೆ ನಾನು ಬೆಂಗಳೂರಿನಿಂದ ಆಂದೋಲನ ಪತ್ರಿಕೆಯ ವರದಿಗಾರನಾದೆ.
ಸೇರಿಕೊಂಡ ಕೆಲವೇ ದಿನಗಳಲ್ಲಿ ಒಮ್ಮೆ ರಾಜಶೇಖರ ಕೋಟಿ ಅವರು ಫೋನು ಮಾಡಿದರು.(ಫೆಬ್ರವರಿ 1995)ಇನ್ನು ಮುಂದೆ ರಾಜಧಾನಿಯ ರಾಜಕೀಯ ವಿವರಗಳನ್ನುಳ್ಳ ಅಂಕಣವೊಂದನ್ನು ಬರೆಯಿರಿ ಎಂದರು.
ನಾನು ಬೆಚ್ಚಿ ಬಿದ್ದು,ಸಾರ್,ನನಗಿನ್ನೂ ಅಷ್ಟು ಅನುಭವವಿಲ್ಲ ಎಂದೆ.ಅಯ್ಯೋ,ಹಾಡುತ್ತಾ,ಹಾಡುತ್ತಾ ರಾಗ.ನೀವು ಸುಮ್ಮನೆ ಬರೆಯಿರಿ.ತಪ್ಪು ಒಪ್ಪುಗಳನ್ನು ನಾನು ನೋಡಿಕೊಳ್ಳುತ್ತೇನೆ ಎಂದರು.ಸರಿ.ಅಂಕಣ ಶುರುವಾಯಿತು.ಅಷ್ಟೇ ಅಲ್ಲ,ಸಾವಿರಾರು ಮಂದಿಯ ಪ್ರೀತಿ ದಕ್ಕುವಂತೆ ಮಾಡಿತು.
ಇವತ್ತಿನ ತನಕವೂ ಈ ಅಂಕಣ ಮುಂದುವರಿದೇ ಇದೆ.ಇಪ್ಪತ್ತೆರಡು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಒಂದು ಪತ್ರಿಕೆಗೆ ಅಂಕಣ ಬರೆದವರು ಎಷ್ಟು ಪತ್ರಕರ್ತರಿದ್ದಾರೋ?ನನಗೆ ಗೊತ್ತಿಲ್ಲ.ಆದರೆ ನನಗೆ ಆ ವಿಷಯದಲ್ಲಿ ತುಂಬು ತೃಪ್ತಿ.
ಮೊನ್ನೆ ಮೈಸೂರು ವಿಶ್ವವಿದ್ಯಾನಿಲಯದ ಉಪನ್ಯಾಸಕರೊಬ್ಬರು ಫೋನು ಮಾಡಿ,ಸಾರ್.ಆಂದೋಲನ ಪತ್ರಿಕೆಯಲ್ಲಿ ನಿಮ್ಮ ಬೆಂಗಳೂರು ಡೈರಿ ಅಂಕಣವನ್ನು ನೋಡಿ ಓದುವ ಪ್ರೀತಿಯನ್ನು ಬೆಳೆಸಿಕೊಂಡ ಅಸಂಖ್ಯಾತರಲ್ಲಿ ನಾನೂ ಒಬ್ಬ ಎಂದರು ಜೀವಕ್ಕೆ ಹಾಯೆನ್ನಿಸಿತು.ಒಬ್ಬ ಪತ್ರಕರ್ತನಿಗೆ ಇದಕ್ಕಿಂತ ದೊಡ್ಡ ಸರ್ಟಿಫಿಕೇಟು ಬೇಕೇ?ಅಂತಹ ಅಪೂರ್ವ ಅವಕಾಶವನ್ನು ಒದಗಿಸಿದವರು ರಾಜಶೇಖರ ಕೋಟಿ.
ಯಾವತ್ತೂ ಅವರು ನನಗೆ, ಹೀಗೇ ಬರೆಯಬೇಕು.ಇಂತವರ ಪರವಾಗಿಯೇ ಬರೆಯಬೇಕು ಎಂದು ಹೇಳಿದವರಲ್ಲ.ಹೀಗಾಗಿ ನಾನು ಸದಾ ಕಾಲ ಮುಕ್ತವಾಗಿ ಬರೆಯಲು,ಪತ್ರಕರ್ತನಾಗಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಯಿತು.ಇದು ನನ್ನೊಬ್ಬನ ಅನುಭವವಲ್ಲ.ಅಲ್ಲಿ ಕೆಲಸ ಮಾಡಿದ ಎಲ್ಲರ ಅನುಭವ ಕೂಡಾ.ಸ್ವರೂಪ ವಿಭಿನ್ನವಾಗಿರಬಹುದು.ಆದರೆ ನಿಜವಾದ ಕೆಲಸಗಾರ ಯಾವತ್ತೂ ರಾಜಶೇಖರ ಕೋಟಿ ಅವರ ಪ್ರೀತಿಯಿಂದ ವಂಚಿತನಾಗಿಲ್ಲ ಅಂತ ಮಾತ್ರ ನಿಸ್ಸಂಶಯವಾಗಿ ಹೇಳಬಲ್ಲೆ.
99 ರಲ್ಲಿ ಭಾರತ-ಪಾಕಿಸ್ತಾನದ ನಡುವೆ ಯುದ್ದವಾದಾಗ ನಾನು ಕಾರ್ಗಿಲ್ ಗೆ,ಅದಾದ ನಂತರ ಭೂಕಂಪ ಪೀಡಿತ ಗುಜರಾತ್ ಗೆ ವರದಿ ಮಾಡಲು ಹೋಗಿದ್ದೆ.ಆಗೆಲ್ಲ ಅವರು ನೀಡಿದ ಬೆಂಬಲ,ಪ್ರೋತ್ಸಾಹ ತುಂಬ ದೊಡ್ಡದು.
ಹೀಗೆ ಅವರಿಂದಾಗಿ ನನಗೆ ಪತ್ರಿಕೋದ್ಯಮದ ಪಾಠವಷ್ಟೇ ಅಲ್ಲ,ಅತ್ಯುತ್ತಮ ಸಹಪಾಠಿಗಳೂ ದೊರೆತರು.ಓಂಕಾರ್,ಪ್ರಕಾಶ್,ಉಮೇಶ್ ಭಟ್,ಚಿನ್ನಸ್ವಾಮಿ ವಡ್ಡಗೆರೆ,ಕೋದಂಡರಾಮ್,ಪ್ರಭುಶಂಕರ್,ಮೃತ್ಯುಂಜಯ್,ಬನಶಂಕರ ಆರಾಧ್ಯ,ಪ್ರದೀಪ್,ಶಿವಕುಮಾರ್,ವಿನೋದ್,ಉ.ಮ.ಮಹೇಶ್,ವಿಕ್ರಂ ಕಾಂತಿಕೆರೆ,ರಫಿಕ್,ಶಶಿ,ಜಾನ್,ಮಂಜುನಾಥ ವಡ್ಡಿನ ಕೊಪ್ಪ ಹೀಗೆ ಗೆಳೆಯರದೊಂದು ದೊಡ್ಡ ದಂಡೇ ಸಿಕ್ಕಿತು.ಕಾಲ-ಕಾಲಕ್ಕೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಯಿತು.
ಇವತ್ತಿನ ಜಾಗತೀಕರಣದ ಯುಗದಲ್ಲಿ ದುಡ್ಡೇ ದೊಡ್ಡಪ್ಪನಂತಾಗಿರುವಾಗ ಮಾಧ್ಯಮದ ಕರ್ತವ್ಯವನ್ನು ಬಲ್ಲ,ಅದೇ ಕಾಲಕ್ಕೆ ವರದಿಗಾರರಲ್ಲಿ ಕರ್ತವ್ಯ ಪ್ರಜ್ಞೆಯನ್ನು ಗಟ್ಟಿಗೊಳಿಸಬಲ್ಲ ರಾಜಶೇಖರ ಕೋಟಿ ಅವರಂತಹ ಸಂಪಾದಕರು ಮತ್ತೆ ಬರುತ್ತಾರಾ?ನನಗೆ ಅನುಮಾನ.
ಈಗ ವರದಿಗಾರಿಕೆ ಎಂಬುದು ಫ್ಯಾಷನ್ ಆಗುವಷ್ಟರ ಮಟ್ಟಿಗೆ ಕ್ರೇಜಿ ಥಿಂಗ್ ಅಲ್ಲ.ಯಾಕೆಂದರೆ ಬಹುತೇಕ ಮಾಧ್ಯಮಗಳಲ್ಲಿ ವರದಿಗಾರ ಈಗ ಡೆಮ್ಮಿ ಮಾತ್ರ.ಜನಪರ ಕಾಳಜಿಯಿಂದ ಆತ ಬರೆದದ್ದು ಮಾಧ್ಯಮದಲ್ಲಿ ಪ್ರಕಟವಾಗುತ್ತದೆ ಎಂದು ಹೇಳುವುದು ಕಷ್ಟ.
ಬದಲಿಗೆ ಹಾಕಿದ ಅಸೈನ್ ಮೆಂಟುಗಳನ್ನು ಮಾಡುವುದಷ್ಟೇ ಅವರ ಕೆಲಸ.ಅಸೈನ್ ಮೆಂಟುಗಳ ಹಿಂದೆ ಕೆಲಸ ಮಾಡಿರುವ ಧನದಾಹಿ ಶಕ್ತಿಗಳ ಬಗ್ಗೆ ಅವರು ಚಕಾರ ಎತ್ತುವಂತಿಲ್ಲ.ಚಕಾರ ಎತ್ತಿದರೆ ಅವರು ಅಲ್ಲಿರಲು ಸಾಧ್ಯವಿಲ್ಲ.ಹೀಗಾಗಿ ಮಾಧ್ಯಮ ಕೂಡಾ ಇವತ್ತಿನ ಮಟ್ಟಿಗೆ ಉದ್ಯಮ.
ಹೀಗಾಗಿ ತಾವು ನಡೆಸುವ ಧಂದೆಗಳಲ್ಲಿ ಜನರನ್ನು ಲಮ್ ಸಮ್ಮಾಗಿ ಸುಲಿಗೆ ಮಾಡುವವರೂ ಜಗತ್ತಿಗೆ ನೀತಿ ಹೇಳುತ್ತಾರೆ.ಬದುಕಿನ ಯಶಸ್ಸಿಗೆ ಇರುವ ಮಾರ್ಗಗಳ ಕುರಿತು ಕಣಿ ಹೇಳುತ್ತಾರೆ.ಪೆನ್ನು ಹಿಡಿದರೆ ಒಂದಕ್ಷರ ಬರೆಯಲಾಗದ,ಕಂಪ್ಯೂಟರ್ ಮುಂದೆ ಕೂತರೆ ಒಂದಕ್ಷರ ಟೈಪು ಮಾಡಲಾಗದ ಬಹುತೇಕರು ಸಂಪಾದಕರಾಗಿದ್ದಾರೆ.ಮಾಲೀಕರಾಗಿದ್ದಾರೆ.ದುಡ್ಡು ಕೊಟ್ಟು ಬೇರೆಯವರ ಕೈಲಿ ಬರೆಯಿಸಿ ಅಂಕಣಕೋರರಾದವರ ಪಡೆಯೇ ಚಾಲ್ತಿಯಲ್ಲಿದೆ.
ಇದನ್ನೆಲ್ಲ ನೋಡಿದಾಗ ನಿಜವಾದ ಪತ್ರಕರ್ತರೇ ಮಾಲೀಕರಾದ ಮಾಧ್ಯಮಗಳಲ್ಲಿ ದುಡಿದ ನೆಮ್ಮದಿ ನನ್ನದು.ಹೇಳಲು ಹೊರಟರೆ ಇನ್ನೂ ನೂರಾರು ನೆನಪುಗಳಿವೆ.ಅದನ್ನೆಲ್ಲ ಮತ್ತೊಂದು ಸಲ ಬರೆಯುತ್ತೇನೆ.ಈಗೇನಿದ್ದರೂ ಸಂಭ್ರಮದ ಘಳಿಗೆ.
ಬದುಕು ಕಂಡುಕೊಳ್ಳಲು ರಾಜಶೇಖರ ಕೋಟಿ ಅವರು ಹಗಲು ರಾತ್ರಿ ನಡೆಸಿದ ಪರದಾಟ,ಪೈಸೆ ಪೈಸೆಗೂ ಒದ್ದಾಡಿದ ದಿನಗಳು,ಒಂದು ವರದಿಗಾಗಿ ನೂರಾರು ಕಿಲೋಮೀಟರ್ ಗಳಷ್ಟು ದೂರ ಅನ್ನ,ನೀರು ಬಿಟ್ಟು ಗಣ-ಗಣ ತಿರುಗಾಡಿದ ರೀತಿ,ಪತ್ರಿಕೋದ್ಯಮವನ್ನೇ ಉಸಿರನ್ನಾಗಿಸಿಕೊಂಡ ಪ್ರೀತಿ.ಇವೆಲ್ಲದರ ಫಲವಾಗಿ ಆಂದೋಲನದಂತಹ ಪತ್ರಿಕೆಯನ್ನು ಕಟ್ಟಿದ ಬಗೆ ಇವೆಲ್ಲ ಕರ್ನಾಟಕ ಮಾತ್ರವಲ್ಲ,ಭಾರತೀಯ ಪತ್ರಿಕೋದ್ಯಮ ಕಂಡ ಅಪೂರ್ವ ಚರಿತ್ರೆಯ ಭಾಗಗಳು ಅಂತ ನಿಸ್ಸಂಶಯವಾಗಿ ಹೇಳಬಲ್ಲೆ.
ಇವೆಲ್ಲದರ ನಡುವೆ ಎಪ್ಪತ್ತರ ಗಡಿ ತಲುಪಿರುವ ರಾಜಶೇಖರ ಕೋಟಿಯವರು ನೂರ್ಕಾಲ ನೆಮ್ಮದಿಯಾಗಿರಲಿ ಅಂತ ಮನ:ಪೂರ್ವಕವಾಗಿ ಬಯಸುತ್ತೇನೆ.ಹ್ಯಾಪ್ಪಿ ಬರ್ತ್ ಡೇ ಸಾರ್.






I knew Koti during my Mysore days. It was the beginning days of his daily. I had lost touch with him over the years, after I moved to Bangalore. About 3-4 years back, I saw him again when he came to give a lecture that Late Jayasheela Rao use to arrange almost every month. I am sad both of them are not there now. Koti was friendly, a role model for journalism profession. H S Eswara