ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಸಾವನ್ನೇ ಹೆದರಿಸಿದರು..

ಸಾವಿಗೆ ಸರಿಯಾದ ಉತ್ತರ ಕೊಟ್ಟವರು ವಿಜಯಾ ದಬ್ಬೆ

ಒಡಲ ಬೆಂಕಿಯ ಚಿಗುರು ವಿಜಯಾದಬ್ಬೆ

ಪ್ರಸನ್ನ ಚಲಂ

ಇನ್ನು ಒಂದು ವರ್ಷದಲ್ಲಿ ಒಂದು ಸಂಕಲನ ತಯಾರಾಗುತ್ತದೆ. ಮಾತಿನಲ್ಲಿ ಸಂಪೂರ್ಣ ಭರವಸೆಯಿತ್ತು. ಅವರ ನಗು ನಮ್ಮ ಎದೆಯ ಮೇಲೆಲ್ಲಾ ಚೆಲ್ಲಿತು. ಅವರ ಕವನಗಳನ್ನು ಓದಿರಲಿಲ್ಲ ಅವರ ನಗುವಿಗಿಂತ ಸುಂದರ ಕವನ ಮತ್ತೊಂದಿರಲು ಸಾಧ್ಯವೆ ಇಲ್ಲ ಎನ್ನುವ ನಿಲುವಿಗೆ ನಾನೇ ಅಲ್ಲದೇ ಯಾರಾದರೂ ಬರಬಹುದಿತ್ತು.

ಈಗ ತಾನೆ ಬರೆಯಲು ಆರಂಭಿಸಿದ ಯುವ ಕವಿಯಂತೆ ತನ್ನ ಸಂಕಲನದ ಬಗ್ಗೆ ಮಾತನಾಡಿದವರು ನಾಡು ಕಂಡ ಅತ್ಯುತ್ತಮ ಚಿಂತಕಿ, ಕವಯತ್ರಿ, ಸಂಘಟಕಿ, ಹೋರಾಟಗಾರ್ತಿ, ಡಾ|| ವಿಜಯಾದಬ್ಬೆ. ತೊಂಭತ್ತರ ದಶಕದಲ್ಲಿ ಕರ್ನಾಟಕದ ಲೇಖಕಿಯರ ಸಂಘದಿಂದ ಅತ್ಯಂತ ಕ್ರಿಯಾಶೀಲರಾಗಿದ್ದವರು ವಿಜಯಾದಬ್ಬೆ. ನಂತರದ ದಿನಗಳ ಲೇಖಕಿಯರಲ್ಲಿ ಅವರ ಪ್ರಭಾವವನ್ನು ಕಾಣಬಹುದು.

2000 ನೇ ಇಸವಿಯಲ್ಲಿ ಭೀಕರ ಅಪಘಾತವೊಂದಕ್ಕೆ ಈಡಾಗಿ ಸತತ ನಾಲ್ಕು ತಿಂಗಳು ಕೋಮಾ ಸ್ಥಿತಿಯಲ್ಲಿದ್ದವರು. ನಂತರದ ಅವರ ಚೇತರಿಕೆ ಅವರ ಸುಪ್ತ ಪ್ರಜ್ಞೆಯೊಳಗಿನ ದಿಟ್ಟತನಕ್ಕೆ ಸಾಕ್ಷಿ. ಇಲ್ಲಿಗೆ ಹದಿಮೂರು ವರ್ಷಗಳು ಶಕ್ತಿ ಶಾಲಿ ಲೇಖಕಿ, ಚಿಂತಕಿಯನ್ನು ಸಾವು ಕಬಳಿಸುವ ಯತ್ನ ಮಾಡಿತ್ತು. ಹದಿಮೂರು ವರ್ಷಗಳಲ್ಲಿ ಸಾವಿಗೆ ಸರಿಯಾದ ಉತ್ತರ ಕೊಟ್ಟವರು ಡಾ|| ವಿಜಯಾದಬ್ಬೆ. ಆ ಕಾಲಕ್ಕೆ ಹದಿನೆಂಟು ಉತ್ತಮ ಕೃತಿಗಳನ್ನು ನೀಡಿ ತಮ್ಮ ಸಮಕಾಲೀನ ಲೇಖಕಿಯರೊಂದಿಗೆ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದವರು. ಅಷ್ಟು ಕೃತಿಗಳನ್ನು ನೋಡಿದ ನಂತರ ಈ ಹದಿಮೂರು ವರ್ಷಗಳಲ್ಲಿ ನಾವು ಅದೆಷ್ಟು ಕಳೆದುಕೊಂಡೆವು ಎಂಬುದನ್ನು ನೆನಪಿಸಿಕೊಂಡರೆ ನೋವಾಗುತ್ತದೆ.

ತಿರುಗಾಡಬಹುದಾ…? ಅಂತ ಕೇಳಿದಕ್ಕೆ “ಓಹ್ ಆರಾಮಾಗಿ ಈ ಊರು (ದಬ್ಬೆ) ನನಗೆ ಅತ್ಯಂತ ಪ್ರಿಯ. ಇಲ್ಲಿನ ಮಲೆನಾಡಿನ ವಾತಾವರಣಕ್ಕೆ ಒಂದು ಸೊಬಗಿದೆ. ಮನೆಯ ಮುಂದಿರುವ ದೊಡ್ಡ ಕಾಂಪೌಡಿನ ಒಳಗೆ ತಿರುಗಾಡುತ್ತೇನೆ. ಡಾಕ್ಟರ್ ಹೇಳಿದ ಸಣ್ಣಪುಟ್ಟ ವ್ಯಾಯಮ ಮಾಡುತ್ತೇನೆ” ಎಂದು ಹೇಳುವಾಗ ಅಲ್ಲೇ ಇದ್ದ ಅವರ ತಮ್ಮ ನಾಗರಾಜುರವರು “ಇವರ ರಿಕವರಿ ನಮಗೆ,ಅಚ್ಚರಿಯನ್ನುಂಟು ಮಾಡಿದೆ. ಇವರಿಗೆ ಮೈಸೂರಿನಲ್ಲಿ ಟ್ರೀಟ್ ಮೆಂಟ್. ಅಲ್ಲಿನ ವೈದ್ಯರು ಕೆಲವು ರೋಗಿಗಳನ್ನು ಖಾಯಿಲೆಯನ್ನು ಹೇಗೆ ಎದುರಿಸಬೇಕು. ಎಂಬುದನ್ನು ನೋಡಲು ಇಲ್ಲಿಗೆ ಕಳುಹಿಸುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ ಇವರು ಖುಷಿಯೆಂದರೆ ಮತ್ತೆ ಬರೆಯುತ್ತಿರುವುದು ಸಂತೋಷವಾಗುತ್ತಿದೆ”ಎಂದರು.

ವಿಜಯಾ ಮೇಡಮ್ “ಕಥೆಗಳನ್ನು ಬರೆದಿದ್ದೇನೆ ಕವನಗಳು ಸಾಕಷ್ಟಿವೆ. ಬೆಂಗಳೂರಿನ ಪ್ರಕಾಶಕರೊಬ್ಬರು ಮಾತನಾಡಿದ್ದರೆ. ಸಮಗ್ರ ಸಾಹಿತ್ಯದ ಒಂದು ಪುಸ್ತಕವು ಬರಲಿದೆ” ಎಂದು ಉತ್ಸಾಹದಿಂದ ಹೇಳಿದರು. “ನಾನು ಹೇಳಿದೆನಲ್ಲ ನನ್ನ ಈ ಊರು ಬರೆಯಲು ಸರಿಯಾದ ಜಾಗ ಅಂತ ಎಂದು ನಕ್ಕರು. ಅವರನ್ನೂ ಓದಿ ಕವಿಯಾಗುವುದು ಬೇರೆ, ಅವರ ನಗುವಿನ ಬೆಡಗಿನಲ್ಲೇ ಅಸಂಖ್ಯಾತ ಕವನಗಳಿವೆ.

ನಾನು ಓದುವ ಕೊಠಡಿ ಮೇಲೆ ಇದೆ ಎಂದು ತೋರಿಸಲು ಹೊರಟರು. ಅವರೊಟ್ಟಿಗೆ ಮೇಲಿನ ಕೊಠಡಿಗೆ ಹೋದರೆ ಅಚ್ಚುಕಟ್ಟಾದ ಒಂದು ಗ್ರಂಥಾಲಯ. ಹಲವು ಅಪರೂಪದ ಪುಸ್ತಕಗಳು, ಒಂದು ಕಿಟಕಿ, ಕಿಟಕಿಯಾಚೆಗಿನ ಹಸಿರು, ಹಸಿರು ಕಿಟಕಿಯ ಪಕ್ಕ ಒಂದು ಟೇಬಲ್ ಕೂರಲಿಕ್ಕೆ ಒಂದು ಆರಾಮು ತಿರುಗುವ ಕುರ್ಚಿ. ಯಾವಾಗಲೂ ಆಗುವಂತೆ ನನಗೆ ಸಣ್ಣ ಅಸೂಯೆಯುಂಟಾಗಿ ಅವರ ಮುಖ ನೋಡಿದೆ. ಅವರು ನಕ್ಕರು ಅಸೂಯೆ ಕವನವಾಗುತ್ತಿತ್ತು.

ಅವರ “ಇತಿಗೀತಿಕೆ” ಎಂಬ ಕವನ ಸಂಕಲನವನ್ನು ಕೊಟ್ಟರು ಮೊದಲು ಕವನದ ಕೆಲವು ಸಾಲು ಅಲ್ಲಾಡಿಸಿ ಬಿಟ್ಟಿತು.

ಮೆದುಳೊಳಗಿನ ಮಬ್ಬಿನ ಗೋಡೆ

ಅರಿವ ಒಳಗೆ ಬಿಡದೆ ತಡೆದ ನಿಮಿಷ

ಜೀವ ಅಲುಗಿಸುತ್ತಿದ್ದ ಏನೋ ಹೆದರು

ಹುಂ ಉಹುಃಗಳ ನಡುವೆ ಸಿಕ್ಕಿ ಸೋತ ಹೃದಯ

ಇದುವರೆಗೆ ವಿಜಯಾದಬ್ಬೆಯವರನ್ನು ಓದದೇ ನಾನು ಅದ್ಯಾವ ಸೀಮೆಯ ಸಾಹಿತ್ತಾಸಕ್ತ ಅನ್ನಿಸಿತು. ಅವರೊಡನೆ ಸಾಹಿತ್ಯದ ಬಗ್ಗೆ ಹೆಚ್ಚು ಮಾತನಾಡಲು ಮನಸ್ಸು ಹಾತೊರೆಯುತ್ತಿತ್ತು. ಹಾ. ಮಾ ನಾಯಕರ ಬಗ್ಗೆ ಮಾತನಾಡಿದರು.ನಾಗಚಂದ್ರನ ಬಗ್ಗೆ ಸಂಶೋಧನೆ ಮಾಡಲು ಹೊರಟಾಗ ಗೈಡ್ ಆಗಿದ್ದವರು ಹಾ. ಮಾ. ನಾಯಕರು. ಮುಂದೆ ನನಗೆ ಕೆಲಸ ಸಿಗುವ ವಿಚಾರದಲ್ಲೂ ಅವರು ಸಾಕಷ್ಟು ಶ್ರಮಿಸಿದರು ಎಂದು ಪ್ರೀತಿಯಿಂದ ನೆನಪಿಸಿಕೊಂಡರು.

” ನೀವು ಇತ್ತೀಚೆಗೆ ಬರೆದದ್ದನ್ನು ನೋಡಬಹುದಾ” ಅಂದಾಗ ಖಂಡಿತ ಎಂದು ಬರೆದ ಕವನಗಳನ್ನು ತೋರಿಸಿದರು. ನಮ್ಮ ಪ್ರೀತಿಯ ಹೆಚ್. ಎಲ್.ಮಲ್ಲೇಶಗೌಡರು ಹೇಳಿದ ಮಾತು ನೆನಪಾಯಿತು. ಸರಿಯಾಗಿ ನಡೆಯಲು ಬರುವವನಿಗೆ ಪ್ರಯತ್ನ ಪಟ್ಟರೂ ಅಡ್ಡಾದಿಡ್ಡಿ ನಡೆಯಲು ಸಾಧ್ಯವಿಲ್ಲ”.

2000ದ ಆಚೆಗಿನ ವಿಜಯಾ ದಬ್ಬೆಯನ್ನು ಪುನರ್ ಪ್ರತಿಷ್ಠಾಪಿಸುವ ಕವನಗಳು ಅದರಲ್ಲೂ ವಿಷಾದದ ಬಗ್ಗೆ ಬರೆದಿದ್ದ ಒಂದು ಕವನ ತುಂಬ ಅತ್ಯುತ್ತಮವಾದುದು ಅವರಿಗೆ ಗ್ರಹಿಕೆಯಲ್ಲಿ ಸ್ವಲ್ಪ ಸಮಸ್ಯೆಯಿದ್ದರೂ ಅವರ ಸುಪ್ರ ಪ್ರಜ್ಞೆಯ ಸಾಮ್ರಾಜ್ಯದಲ್ಲಿ ಕಾವ್ಯ ಅಲುಗಾಡಲಿಲ್ಲ. ಇದನ್ನು ಪ್ರಕಟಿಸಲಾ….? ಅಂದೆ. ಸದ್ಯಕ್ಕೆ ಬೇಡ ಅಂದು ನಕ್ಕರು. ಅವರು ನಕ್ಕ ಮೇಲೆ ಯಾರು ಮಾತನಾಡುವುದು ಸಾಧ್ಯವಿರಲಿಲ್ಲ.

ಅವರ ಪುಸ್ತಕಗಳನ್ನು ಇಡದೇ ಇದ್ದರೆ ನನ್ನ ಹಾಡ್ಲಹಳ್ಳಿ ಪಬ್ಲಿಕೇಷನ್ ಗೆ ಬೆಲೆ ಇರುವುದಿಲ್ಲ ಅನ್ನಿಸಿ ಅವರ ಪುಸ್ತಕಗಳನ್ನು ಕೇಳಿದೆ, ಕೆಲವನ್ನು ಕೊಟ್ಟು ಉಳಿದವನ್ನು ಮೈಸೂರಿನಿಂದ ತರಿಸಿಕೊಡುವುದಾಗಿ ಹೇಳಿದರು. ಗೆಳೆಯ ಚಿನ್ನೇನಹಳ್ಳಿ ಸ್ವಾಮಿ ಹಾಗೂ ನಾನು ಹೊರಗೆ ಬಂದಾಗ ಕುಳಿತ್ತಿದ್ದ ಅವರ ತಂದೆ ತಾಯಿಯನ್ನೂ ಪರಿಚಯಿಸಿದರು. ತಂದೆಗೆ 94 ವರ್ಷ ಅಂದರು, ಮೂವತ್ತು ಚಿಲ್ಲರೆಯ ನಮಗೆ ನಾಚಿಕೆಯಾಗಲೇ ಬೇಕಿತ್ತು. ನಾವು ಹೊರಟ ನಂತರ ನೀವು ಬಂದಿದ್ದು ತುಂಬಾ ಖುಷಿಯಾಯಿತು. ಅಂದರು ನಾವು ಮತ್ತೆ ಮತ್ತೆ ತೊಂದರೆ ಕೊಡುವ ಬೆದರಿಕೆಯನ್ನು ಹಾಕಿ ಗೇಟಿನ ಬಳಿ ಬಂದು ತಿರುಗಿ ನೋಡಿದಾಗ ಟಾಟಾ ಎನ್ನುವಂತೆ ಕೈ ಬೀಸಿದರು. ದಬ್ಬೆಯಲ್ಲಿ ಸುಂದರ ನಗುವಿನ ಪ್ರಭುದ್ದ ಕವನಗಳಿದ್ದವು.

‍ಲೇಖಕರು admin

19 December, 2015

3 Comments

  1. ಸುಮಿತ್ರಾ ಎಲ್ ಸಿ

    ವಿಜಯಾ ದಬ್ಬೆ ಮೇಡಂ ಚೇತರಿಸಿಕೊಳ್ತಿದ್ದಾರೆ ಎಂದು ತಿಳಿದು ಸಮಾಧಾನ ವಾಯಿತು. ಅವರ ಪುಸ್ತಕಗಳು ಮತ್ತೆ ಮುದ್ರಣ ವಾಗಿರುವುದೂ ಸಂತೋಷ.

  2. Shanthi

    Great….

  3. umavallish

    ವಿಜಯಾ ಮೇಡಂ ಅವರು ನನ್ನ ಅಚ್ಚು ಮೆಚ್ಚಿನ ಪ್ರಾಧ್ಯಾಪಕಿ. ಅವರ ಆರೋಗ್ಯ ದಲ್ಲಿ ಚೇತರಿಕೆ ತುಂಬಾ ಸಂತೋಷದ ಸಂಗತಿ. ಅವರ ಬಗ್ಗೆ ಬರೆದಿರುವ ನಿಮಗೆ ವಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading