ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಬೆಳಕಿನ ಬೆನ್ನತ್ತಿ ಹೋದರು…

ಇಂದು ಬೆಳಕಿನ ಬೆನ್ನತ್ತಿದ್ದ ಕವಿ ಜಿ ಎಸ್ ಶಿವರುದ್ರಪ್ಪನವರ ಹುಟ್ಟು ಹಬ್ಬ.

ಅವರ ಬೆಳಕಿನ ಹಂಬಲದ ಬಗ್ಗೆ ಒಂದು ನೋಟ ಇಲ್ಲಿದೆ   

GNM light version

ಜಿ ಎನ್ ಮೋಹನ್ 

ಈ ಬರಹ ಈಗಾಗಲೇ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. 

ಇದೆ ಲೇಖಕರ ಕಾಫಿ ಕಪ್ಪಿನೊಳಗೆ ಕೊಲಂಬಸ್ ಕೃತಿಯಲ್ಲೂ ಜಾಗ ಮಾಡಿ ಕುಳಿತಿದೆ.

lamp 

’ಬರುವಾಗ ಜೊತೆಯಲ್ಲಿ ಒಂದು ಹಣತೆ ತನ್ನಿ’ ಎಂದೆ.  ಫೋನಿನ ಆ ತುದಿಯಲ್ಲಿ ಇದ್ದವರಿಗೆ ಆಶ್ಚರ್ಯ. ’ಅಲ್ಲ, ಕವಿ ಗೋಷ್ಠಿಗೆ ಹಣತೆ ಯಾಕೆ?’ ಎಂದು ಪ್ರಶ್ನಿಸಿದರು.  ಕವಿಗೋಷ್ಠಿಗೆ ಕವಿತೆ ತರಲು ಹೇಳಿದ್ದವರನ್ನು ಮಾತ್ರ ಕಂಡಿದ್ದ ಅವರಿಗೆ ತೀರಾ ಅಚ್ಚರಿ.  ಕವಿತೆ ಜೊತೆಗೆ ಹಣತೆ? ನಾನು ಹೇಳಿದೆ, ’ನಾವು ಹಮ್ಮಿಕೊಂಡಿರುವುದು ಕಾವ್ಯ ದೀಪಾವಳಿ.  ಕತ್ತಲನ್ನು ಓಡಿಸುವ ಬೆಳಕಿನಹಬ್ಬ.  ಹಾಗಾಗಿ ಕವಿತೆಯ ಜೊತೆ ಹಣತೆಯಿಂದಲೂ ಬೆಳಕು ಹರಡೋಣ..’.

moon over the houseಇದು ಎರಡು ದಶಕಗಳ ಹಿಂದಿನ ಮಾತು.  ಪ್ರತಿಯೊಬ್ಬರೂ ಒಂದು ಹಣತೆ ಹೊತ್ತಿಸಿ ಒಂದು ಕವಿತೆ ಓದುವಂತೆ ಪ್ರೇರೇಪಿಸಿದ್ದು ಜಿ ಎಸ್ ಶಿವರುದ್ರಪ್ಪನವರ ’ಹಣತೆ’ ಎನ್ನುವ ಕವಿತೆ.  ’ಹಣತೆ ಹಚ್ಚುತ್ತೇನೆ ನಾನು / ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆನ್ನುವ ಜಿದ್ದಿನಿಂದಲ್ಲ / ಲೆಕ್ಕವೆ ಇರದ ದೀಪಾವಳಿಯ ಹಡಗುಗಳೆ / ಇದರಲ್ಲಿ ಮುಳುಗಿ ಕರಗಿರುವಾಗ / ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ…’ ಎಂದ ಜಿ ಎಸ್ ಎಸ್ ಅವರಿಗೆ ಖಂಡಿತಾ ಗೊತ್ತಿತ್ತು, ’ಶತಮಾನದಿಂದಲೂ ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ’ ಎಂದು.  ಆದರೂ ನಡುನಡುವೆ ಒಂದಿಷ್ಟು ಬೆಳಕು ಬೇಕೆಂದು ಹಂಬಲಿಸಿದವರುಅವರು.

’ನನಗೂ ಗೊತ್ತು, ಈ ಕತ್ತಲೆಗೆ / ಕೊನೆಯಿರದ ಬಾಯಾರಿಕೆ / ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ / ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು / ಇನ್ನೂ ಬೇಕು’ ಎನ್ನುವ ಇಷ್ಟೆಲ್ಲಾ ಕಟುವಾಸ್ತವದ ಮಧ್ಯೆಯೂ ಜಿ ಎಸ್ ಎಸ್ ನನಗೆ ಇಷ್ಟವಾಗುವುದು ಏಕೆಂದರೆ ಅವರಾಡುವ ಪಿಸುಮಾತಿಗೆ. ಆದರೂ ಹಣತೆ ಹಚ್ಚುತ್ತೇನೆ ನಾನು / ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ / ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು / ನೋಡಬಹುದೆಂಬ ಒಂದೇ ಒಂದು ಆಸೆಯಿಂದ / ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ / ನಾನು ಯಾರೋ.

ಆ ಭಯ ನನಗೂ ಇತ್ತು.  ಹಣತೆ ಉರಿಯುತ್ತಿರುವವರೆಗೆ ಮಾತ್ರ ನಮ್ಮ ನಮ್ಮ ಮುಖಗಳು ಕಾಣುತ್ತವೆ ಎಂದು.  ಒಮ್ಮೆ ಬೆಳಕು ನಂದಿದ ಮೇಲೆ…. ಎನ್ನುವ ಭಯವೇ ಹಣತೆ ಆರದೆ ಉಳಿಯುವಂತೆ ನೋಡಿಕೊಳ್ಳಲು ಪ್ರೇರೇಪಿಸಿತ್ತು.  ಅದು ನಾವು ಹಲ ಗೆಳೆಯರು ಸೇರಿ ರೂಪಿಸಿಕೊಂಡಿದ್ದ ಗುಂಪು.  ಪಿ ಮಹಮದ್, ಶಿವರಾಂ ಪೈಲೂರು, ಗೋಪಾಡ್ಕರ್, ಎಂ ಜಿ ಕಜೆ, ಕೆ ಕೆ ಪೇಜಾವರ್, ಸತ್ಯಾ, ಖತೀಜಾ, ನಳಿನಿ ಕಜೆ, ವಾಮನ ನಂದಾವರ, ಚಂದ್ರಕಲಾ ನಂದಾವರ …. ಹೀಗೆ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದ ನಾವು ಬಹುಷಃ ಒಂದು ಬೆಳಕಿನ ಆಸೆಯಿಂದಲೇ ಒಂದಾಗಿದ್ದೆವೇನೋ ಎನಿಸುತ್ತದೆ.  ಸಮಾಜದ ಒಳಗಿನ ಕತ್ತಲನ್ನು ಒಂದಿಷ್ಟಾದರೂ ಸರಿಸುವ ಬಯಕೆ ಇದ್ದದ್ದರಿಂದಲೇ ಇರಬೇಕು ಜಿ ಎಸ್ ಎಸ್ ರವರ ಹಣತೆ ನಮ್ಮನ್ನು ಕಾಡಿಬಿಟ್ಟಿತ್ತು.

ಕಾವ್ಯ ದೀಪಾವಳಿಗೆ ಬಂದವರು ಒಂದು ಹಣತೆ ಹೊತ್ತೇ ಬಂದರು.  ’ದೀಪದಿಂದ ದೀಪವ ಹಚ್ಚಬೇಕು ಮಾನವ’ ಎಂದವರು ಯಾರೋ ಏನೋ, ನಾವು ಖಂಡಿತಾ ದೀಪದಿಂದ ದೀಪ ಹಚ್ಚುತ್ತಾ ಹೋದೆವು.  ಕವಿತೆಯ ಬೆಳಕು ಏನಾಗಿತ್ತೋ ತಿಳಿಯದು, ಕವಿತೆ ಓದಿ ಮುಗಿದ ನಂತರ ನೋಡಿದರೆ ಹಣತೆಯ ಬೆಳಕು ಎಲ್ಲೆಡೆ ಚೆಲ್ಲಿತ್ತು.  ಇದೇ ಜಿ ಎಸ್ ಎಸ್ ಬರೆದಿದ್ದರು ಇನ್ನೊಂದು ಕವಿತೆಯಲ್ಲಿ, ’ತಣ್ಣಗೆ ಉರಿವ / ಒಂದು ಹಣತೆಯ ಪುಟ್ಟ ಬೆಳಕಿನ ಕುಡಿಯಲ್ಲಿ / ಜಗತ್ತಿನ ತೇಜಸ್ಸೆಲ್ಲವೂ ತುಂಬಿಕೊಂಡಿದೆ / ಒಂದೇ ಒಂದು ಹಣತೆಯ ಕುಡಿಯಲ್ಲಿ…’.  ಹಾಗೆ, ಥೇಟ್ ಹಾಗೇ ಆ ದಿನ ಆ ಪುಟ್ಟ ಹಣತೆಯ ಕುಡಿಯಲ್ಲಿ ಜಗತ್ತಿನ ತೇಜಸ್ಸೆಲ್ಲವೂ ತುಂಬಿಕೊಂಡಿತ್ತು.

G S S rare’ಜಿ ಎಸ್ ಎಸ್ ಎಂದರೆ ನಿಮ್ಮ ಪ್ರಕಾರ ಏನು?’, ಎಂಬ ಪ್ರಶ್ನೆಯನ್ನು ಜಿ ಎಸ್ ಎಸ್ ಇಲ್ಲವಾದ ತಕ್ಷಣ ಟಿವಿ ಚಾನಲ್ ಒಂದು ಕೇಳಿತು.  ನನಗೆ ತಡಕಾಡುವ ಪ್ರಮೇಯವೇ ಇರಲಿಲ್ಲ. ’ಜಿ ಎಸ್ ಎಸ್ ಬೆಳಕಿನ ಕವಿ’ ಎಂದೆ.  ಜಿ ಎಸ್ ಎಸ್ ನಮ್ಮೊಳಗಿನ ಬೆಳಕೂ ಆಗಿದ್ದರು.  ಕತ್ತಲು ಮತ್ತು ಬೆಳಕು ಜಿ ಎಸ್ ಎಸ್ ಅವರ ಕವಿತೆಗಳಲ್ಲಿ ಚದುರಂಗವಾಡಿಕೊಂಡೇ ಬಂದಿವೆ.  ಬಹುಷಃ ಜಿ ಎಸ್ ಎಸ್ ರವರಷ್ಟು ಬೆಳಕಿಗಾಗಿ ಹಂಬಲಿಸಿದ ಕವಿಯನ್ನು ನಾನು ನೋಡೇ ಇಲ್ಲ.  ಅವರಿಗೆ ಬೆಳಕು ಎಂಬುದು ಮೊಳಕೆಗಳಂತೆ ಕಂಡಿತ್ತು.  ಹಾಗಾಗಿಯೇ ಅವರು ಸ್ಪಷ್ಟವಾಗಿ ಹೇಳುತ್ತಾರೆ – ’ನಾನು ಬರೆಯುತ್ತೇನೆ / ಶತಮಾನಗಳ ಕತ್ತಲನ್ನೊಡೆದು / ಮೆತ್ತಗೆ ತಲೆಯೆತ್ತುವ / ಮೊಳಕೆಗಳ ಕುರಿತು…’.

ಜಿ ಎಸ್ ಎಸ್ ನನಗೆ ಒಬ್ಬ ’ಆಟಿ ಕಳೆಂಜ’ರಂತೆ ಕಂಡಿದ್ದಾರೆ. ಆಟಿ ಎಂದರೆ ಆಷಾಡ.  ಪಶ್ಚಿಮ ಘಟ್ಟದಲ್ಲಿ ಆಷಾಡ ಬಂದರೆ ಸಾಕುಬೆಳಕಿನ ಕೋಲುಗಳು ನೆಲ ತಲುಪುವುದೇ ಕಷ್ಟ.  ಹೇಳಿ ಕೇಳಿ ದಟ್ಟ ಕಾನನದ ಮಧ್ಯ ಮನೆ ಮಾಡಿರುವ ಹಲವರಿಗೆ ಆಷಾಡ ಬಂತೆಂದರೆ ಸಾಕು ಕಾಯಿಲೆಗಳ ಸರಮಾಲೆ.  ಕತ್ತಲೆಯಲ್ಲಿಯೇ ತಾನೆ ಕ್ರಿಮಿಗಳ ಸಂಖ್ಯೆ ಹೆಚ್ಚುತ್ತಾ ಹೋಗುವುದು…? ಆಗ ಬರುತ್ತಾನೆ ಆಟಿ ಕಳೆಂಜ.  ಮನೆ ಮನೆ ಬಾಗಿಲಿಗೆ ಬಂದು, ಕಾಯಿಲೆಯನ್ನು ಕಳೆದು, ಮದ್ದು ನೀಡಿ ಹೋಗುತ್ತಾನೆ.  ರೋಗಗಳ ತವರಿಗೆ ಆಟಿ ಕಳೆಂಜನೇ ಮದ್ದು.  ನನಗೆ ಅಂದೂ ಇಂದೂ ಜಿ ಎಸ್ ಎಸ್ ಇಂತಹ ಆಟಿ ಕಳೆಂಜನಾಗಿಯೇ ಕಂಡಿದ್ದಾರೆ, ಸಮಾಜದ ರೋಗಕ್ಕೆ ಮದ್ದು ನೀಡುವ ’ಆಟಿ ಕಳೆಂಜ’ನಾಗಿ.    ಪಶ್ಚಿಮ ಘಟ್ಟದಲ್ಲಿ ಆಟಿ ಬಂದಾಗ ಮಾತ್ರ ಕತ್ತಲಾದರೆ,  ಸಮಾಜದ ಒಳಗೆ ಸದಾ ಇರುವ ಕತ್ತಲೆಗೆ ಜಿ ಎಸ್ ಎಸ್ ಕವಿತೆಯ ಮೂಲಕ ಮದ್ದು ನೀಡುತ್ತಿದ್ದರು, ಬೆಳಕು ನೀಡುತ್ತಿದ್ದರು, ಥೇಟ್ ಪುಟ್ಟ ಹಣತೆಯ ಹಾಗೆ… ’ಹೆಸರಿಲ್ಲದ / ಪುಟ್ಟ ಕವಿಯೊಬ್ಬನ ಕವನದೊಂದು ಪಂಕ್ತಿಯಲ್ಲಿ / ನಿನ್ನೆಯ ಆಸೆಗಳು, ನಾಳೆಯ ಕನಸುಗಳು ಕಾಯುತ್ತಿವೆ / ಒಂದೇ ಒಂದು ಕವಿತೆಯ ಪಂಕ್ತಿಯಲ್ಲಿ…’

ಮನಮೋಹನ್ ಸಿಂಗ್ ಅರ್ಥ ಸಚಿವರಾಗಿದ್ದಾಗ ಡಂಕೆಲ್ ಪ್ರಸ್ತಾವನೆಗೆ ಸಹಿ ಹಾಕಿ ಜಾಗತೀಕರಣದ ಅನಾಹುತಗಳಿಗೆ ಬಾಗಿಲು ತೆರೆದೇ ಬಿಟ್ಟಿದರು.  ಆಗ ನಾನು ಈ ಡಂಕೆಲ್ ಪ್ರಸ್ತಾವನೆ ಮಾಧ್ಯಮ ರಂಗದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಪುಸ್ತಕಗಳನ್ನು ಬರೆದಿದ್ದೆ.  ಅದನ್ನು ಹಾ ಮಾ ನಾಯಕರಿಗೆ ಕಳಿಸಿಕೊಟ್ಟಾಗ ಅವರು ರವೀಂದ್ರನಾಥ್ ಟ್ಯಾಗೂರರ ಕವಿತೆಯೊಂದನ್ನು ನನಗೆ ನೆನಪಿಸಿದ್ದರು.  ’ಇಡೀ ಜಗತ್ತು ಕತ್ತಲಿನಿಂದ ತುಂಬಿದೆ.  ಎಲ್ಲರೂ ’ಅಯ್ಯೋ’ ಎಂದು ಅಳುತ್ತಿದ್ದಾರೆ.  ಎಲ್ಲೂ ಬೆಳಕಿಲ್ಲ, ಆಗ ಪುಟ್ಟ ಹಣತೆಯೊದು ಹೇಳುತ್ತದೆ, ’ಹೆದರಬೇಡ, ನಾನಿದ್ದೇನೆ.  ನನ್ನ ಕೈಲಾಗಿದ್ದು ಮಾಡುತ್ತೇನೆ’.  ಯಾಕೋ ಜಿ ಎಸ್ ಎಸ್ ಇಲ್ಲ ಎಂದಾಗ ನನಗೆ ಇದು ಮತ್ತೆ ಮತ್ತೆ ನೆನಪಿಗೆ ಬಂತು.  ಜಿ ಎಸ್ ಎಸ್ ಸದ್ದಿಲ್ಲದೆ ಹಣತೆಯ ಕೆಲಸ ನಿರ್ವಹಿಸಿದ್ದರು.  ಬೆಳಕಿಲ್ಲ ಎಂದು ಜಗತ್ತು ನಿಟ್ಟುಸಿರಾದಾಗ ಒಂದು ಪುಟ್ಟ ಹಣತೆ ಅಷ್ಟೂ ಕತ್ತಲನ್ನೂ ನುಂಗಿ ನೊಣೆಯುವ ಹಾಗೆ ಹಣತೆಯಾಗಿ ನಿಂತರು.

G S S nameplateಅವರಿಗೊಂದು ಕನಸಿತ್ತು, ’ಮನೆ ಮನೆಯೂ ಹಣತೆಯ ಹಡಗಾಗಬೇಕು’ ಎಂದು.  ಹಾಗಾಗಿಯೇ ಅವರು ಹೀಗೆ ಬರೆದರೇನೋ… ಹಣತೆಯ ಹಡಗಾಗಿವೆ ಮನೆ ಮನೆಯೂ / ಕತ್ತಲ ಕಡಲೊಳಗೆ / ಆ ಎಡೆ ಈ ಎಡೆ ಬೆಳಕಿನ ನನೆಕೊನೆ / ದಾಂಗುಡಿಯಿಟ್ಟರೆ ಗೆಲುವಿನೆದೆ… ದೀಪಾವಳಿ ಎನ್ನುವುದು ಜಿ ಎಸ್ ಎಸ್ ರವರಿಗೆ ಬೆಳಕು, ಬೆಳಕು ಮತ್ತೂ ಬೆಳಕಿನಹಬ್ಬವಾಗಿತ್ತು.  ಹಾಗಾಗಿಯೇ ಅವರ ಕವನಗಳಲ್ಲಿ ಎಷ್ಟು ದೀಪಾವಳಿಯ ಬೆಳಕು.  ಅವರು ಕೇಳುತ್ತಾರೆ – ’ಇಳಿದು ಬಾ ಓ ಬೆಳಕೆ / ನನ್ನ ಎದೆಗೆ / ಎದೆಯ ಕತ್ತಲನೆಲ್ಲ / ತೊಳೆಯಬಲ್ಲುದೆ ಹೇಳು / ಮರ್ತ್ಯ ದೀವಳಿಗೆ…’.  ಜಿ ಎಸ್ ಎಸ್ ಗೆ ಹೊರಗೆ ಹಣತೆ ಉರಿಸುವ ಮೊದಲು ನಮ್ಮೊಳಗಿನ ಕತ್ತಲನ್ನು ಕಳೆದುಕೊಳ್ಳಬೇಕು ಎಂಬುದು ಸ್ಪಷ್ಟವಾಗಿ ಗೊತ್ತಿತ್ತು.

ನನಗೆ ಅವರ ’ಎರಡು ಕತ್ತಲ ನಡುವೆ’ ಎನ್ನುವ ಪುಟ್ಟ ಕವಿತೆ ಸದಾ ಪ್ರಿಯ.  ದೀಪ ಮುಡಿಸುವ ಮೊದಲು ಕವಿದ ಕತ್ತಲೆಯಲ್ಲಿ ಒಂದೇ ಕೊರಗು / ಕತ್ತಲಾಗಿದೆ, ಇನ್ನು ಬೆಳಕು ಬೇಕು / ದೀಪವಾರಿಸಿದಾಗ ಕವಿದ ಕತ್ತಲೆಯಲ್ಲಿ ಒಂದೇ ಬೆರಗು / ಇಷ್ಟೊಂದು ದೀಪದ ಬೆಳಕು ಎಲ್ಲಿ ಹೋಯ್ತು…!’  ಹೌದಲ್ಲ, ಜಿ ಎಸ್ ಎಸ್ ಎಂಬ ಇಷ್ಟೊಂದು ಬೆಳಕು ಎಲ್ಲಿ ಹೋಯ್ತು…! ಅವರ ಕವಿತೆ ಕಾಣದ ಕಡಲಿಗೆ ಹಂಬಲಿದಂತೆಯೇ ಕಾಣದ ಬೆಳಕಿಗೂ ಹಂಬಲಿಸಿದೆ.

ಆದರೆ ಯಾಕೋ ಅಷ್ಟು ಉತ್ಸಾಹದಿಂದ ಬೆಳಕಿನ ಬಗ್ಗೆ ಬರೆದ ಅವರು ’ಬೆಳಗಾಗದಿರಲಿ’ ಎನ್ನುವ ಕವಿತೆಯನ್ನೂ ಬರೆದುಬಿಟ್ಟರು. ’ಬೆಳಗಾಗದಿರಲಯ್ಯ ಭಗವಂತ ಬೆಳಗಾಗದಿರಲಿ / ಹೋರಾಡಿ ಸಾಕಾಗಿ ಹೋಗಿದೆ ನನಗೆ. ಇರುಳಿರಲಿ / ಅಥವಾ ಎಂದೆಂದೂ ಬೆಳಕೆ ಬರದ ಕುರುಡಿರಲಿ / ಬೆಳಗಾಗದಿರಲಯ್ಯ ಭಗವಂತ : ಒಂದೇ ಒಂದು ದಿನ / ರಜಾ ಕೊಡು ನಿನ್ನ ಸೂರ್ಯನಿಗೆ.  ಇರಲಿ ಕತ್ತಲು ಹೀಗೆ ….’ ಹೌದಲ್ಲಾ!  ಅವರು ಏಕೆ ಬರೆದರು  ಹೀಗೆ? ಕೇಳಬೇಕು ಜಿ ಎಸ್ ಎಸ್ ಗೆ.

‍ಲೇಖಕರು Admin

7 February, 2016

1 Comment

  1. ಟಿ.ಕೆ.ಗಂಗಾಧರ ಪತ್ತಾರ

    ಜಿ.ಎಸ್.ಶಿವರುದ್ರಪ್ಪನವರ ಹುಟ್ಟುಹಬ್ಬವೆಂದು ತಿಳಿದಾಗ ಅವರು ವಿಧಿವಶರಾದ ಸಂದರ್ಭದಲ್ಲಿ ರಚಿಸಿದ ಕವಿತೆ ನೆನಪಾಯ್ತು.
    ಅವಧಿ ಓದುಗರಿಗಾಗಿ ಅದನ್ನಿಲ್ಲಿ ಮಿಂಚಂಚಿಸುತ್ತಿದ್ದೇನೆ
    ****************************
    “ರಾಷ್ಟ್ರಕವಿ”,“ನಾಡೋಜ” ಜಿ.ಎಸ್.ಶಿವರುದ್ರಪ್ಪ
    ****************************
    “ರಾಷ್ಟ್ರಕವಿ” ಶಿಷ್ಯನೂ “ರಾಷ್ಟ್ರಕವಿ” ತಾನಾದ
    ವಿಸ್ಮಯಾದ್ಭುತ ಕಥನ ಬಲು ದಿವ್ಯ ಭವ್ಯ
    ಕನ್ನಡಾಂಬೆಯ ಪುತ್ತ “ಜಿ.ಎಸ್.ಶಿವರುದ್ರಪ್ಪ”
    “ಕರ್ಮಯೋಗಿ”ಯ ಬದುಕೆ ಸುಶ್ರಾವ್ಯ ಕಾವ್ಯ-1

    ಜಾತಿ “ಗೋಡೆ”ಯ ಹಾರಿ, ಮತದ ಹೊಟ್ಟನು ತೂರಿ
    ಮನುಜಮತ, ವಿಶ್ವಪಥದಲಿ ಬದುಕು ಶ್ರೇಯ
    ಬೋಧನೆಯೆ ನಿಜಧರ್ಮ ಅಧ್ಯಯನ ಸತ್ಕರ್ಮ
    ನುಡಿಸೇವೆ-ಶಿಷ್ಯರೇಳಿಗೆ ಪರಮ ಧ್ಯೇಯ-2

    ಸಾಹಿತ್ಯ-ಸಂಸ್ಕೃತಿಯ ಅಮೃತವಾಹಿನಿಯಿಂದ
    ತೊಲಗಿಸಲು ಶ್ರಮಿಸಿದರು ಮೌಢ್ಯತೆಯ ಜಡತೆ
    ಸತ್ಯ-ಶಿವ-ಸುಂದರದ ಅಮರ ಚೇತನದಿಂದ
    ಕೊರಡಿನಲಿ ನಗಿಸಿದರು ಮಾನವತೆ ಮಮತೆ-3

    “ಹೊನ್ನಲ್ಲ ಇದು ಮಣ್ಣು” ವೇದಾಂತಿಗಳ ವಾದ
    “ಮಣ್ಣೆಲ್ಲವೂ ಹೊನ್ನು” ಕವಿದೃಷ್ಟಿಯಲ್ಲಿ
    “ಕಲ್ಲು ಮಣ್ಣಿನ ಗುಡಿಯೊಳಿಲ್ಲದಿಹ ದೇವ”ರನು
    ತೋರಿದರು ಪ್ರೀತಿ-ಸ್ನೇಹದ ಎದೆಗಳಲ್ಲಿ-4

    “ಹಚ್ಚ ಹಸುರೊಳು ಬಿರಿದ ಅಚ್ಚ ಬಿಳಿ ಮಲ್ಲಿಗೆ”ಯ “ಚೆಲುವು-ಒಲವು”ಗಳಿಂದ ವಾಙ್ಮಯಕೆ ಮೆರುಗು
    “ಸಾಮಗಾನ”ದ ಬೆರಗು “ತೀರ್ಥವಾಣಿ”ಯ ಬೆಡಗು
    ತಮದ “ಅನಾವರಣ”ದಲಿ “ಕಾರ್ತಿಕ”ದ ಬೆಳಗು-5

    “ಹಳೆಯ ಹಾಡಿಗೆ ನವ-ನವೀನ ಭಾವ”ದ ಸೊಬಗು
    ದಿವ್ಯ “ದೀಪದ ಹೆಜ್ಜೆ”ಯಲಿ ಹೊಳೆವ ಕವಿತೆ
    “ಹಾಡುವುದು ಅನಿವಾರ್ಯ ಕರ್ಮ ನನಗೆಂ”ದೆನುತ
    “ಎದೆ ತುಂಬಿ ಹಾಡಿದರು” ಮನ ಮಿಡಿವ ಗೀತೆ-6

    “ಕತ್ತಲೆಯ ದೀರ್ಘ ಬಾಯಾರಿಕೆಯ ಹಿಂಗಿಸಲು”
    “ಕಾಡಿನ ಕತ್ತಲಲಿ” ಹಚ್ಚಿದರು “ಹಣತೆ”
    “ಚಕ್ರಗತಿ”ಯೊಲು ಪ್ರಗತಿ “ಗತಿಬಿಂಬ” ಅನುರಣನ “ದೇವಶಿಲ್ಪ”ದಿ ಬಂತು ಸಂಸ್ಕೃತಿಗೆ ಘನತೆ-7

    “ಕಾವ್ಯಾರ್ಥ ಚಿಂತನ”ದಿ ವಾಗರ್ಥ ಮಂಥನದಿ
    “ಕಾವ್ಯ ಸಂವಾದ”ದಲಿ ಪ್ರೌಢಿಮೆಯ ಬಂಧ
    ಆ “ವಿಮರ್ಶೆಯ ಪೂರ್ವ-ಪಶ್ಚಿಮ”ದ ಜಿಜ್ಞಾಸೆ
    ವಿವಿಧ ಕೃತಿ ಕುಸುಮಿಸಿವೆ ಸುಜ್ಞಾನ ಗಂಧ -8

    “ನವ್ಯ”-“ನವೋದಯ”-“ದಲಿತ” ಎಲ್ಲ ಪಂಥಕೂ ಸೈ!
    ನುಡಿ “ಸಮನ್ವಯ ಕವಿ”ಯ ನಡೆ “ತೆರೆದ ದಾರಿ”
    ಮೋಡಿ ಮಾಡಿದ “ಹಾಡು ಹಕ್ಕಿ” ಹಾರಿತು ನಭಕೆ
    “ಅಗ್ನಿಪರ್ವ”ದ “ವ್ಯಕ್ತಮಧ್ಯ”ದಲಿ ತೂರಿ-9

    ಪರಮಹಂಸ-ವಿವೇಕ-ಶ್ರೀಮಾತೆ-ಅರವಿಂದ-
    ಗುರು ಕುವೆಂಪು ಪ್ರಣೀತ ಆಧ್ಯಾತ್ಮ ಬೆಳಕು
    ಭಾರತಿಯ ಮುಕುಟದಲಿ ಹೊಳೆವ ಕನ್ನಡ ರತ್ನ
    “ವಿಶ್ವಮಾನವ” ಕೀರ್ತಿ ಸಾರ್ಥಕದ ಬದುಕು-10
    -ಟಿ.ಕೆ.ಗಂಗಾಧರ ಪತ್ತಾರ
    ******************************************************
    23-12-2013ರಂದು ನಿಧನರಾದ ಸಂದರ್ಭದಲ್ಲಿ ವಿವಿಧ ವಾಹಿನಿಗಳಲ್ಲಿ ಜಿ.ಎಸ್.ಎಸ್. ಜೀವನ ದೃಶ್ಶಾವಳಿಗಳ ನೇರಪ್ರಸಾರ ವೀಕ್ಷಿಸುತ್ತಾ ಮೊಬೈಲಿನಲ್ಲಿಯೇ ಕ್ಲಿಕ್ಕಿಸಿದ ಆಶು ಕವಿತೆ.
    ******************************************************

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading