
। ಕಳೆದ ವಾರದಿಂದ ।
ಮುಕ್ತಿ ಶಾಲೆ (೧೮೯೭)
ರಮಾಬಾಯಿಯವರು ಮದ್ರಾಸ್ ಪ್ರಾಂತ್ಯದಲ್ಲಿದ್ದಾಗ ೧೮೭೬ ರಲ್ಲಿ ಭಾರತದಲ್ಲೆದ್ದ ಭಯಂಕರ ಬರಗಾಲವನ್ನು ಕಂಡಿದ್ದರು. ಅಂತಹುದೇ ಬರಗಾಲವು ೧೮೯೬ ರ ಸೆಪ್ಟಂಬರ್ ತಿಂಗಳಿನಲ್ಲಿ ಮತ್ತೆ ಸಂಭವಿಸಿದಾಗ ತಮ್ಮ ಶಾರದಾ ಸದನದ ಆರ್ಥಿಕ ಬಿಕ್ಕಟ್ಟುಗಳನ್ನೂ ಲೆಕ್ಕಿಸದೇ ಮಧ್ಯ ಪ್ರಾಂತ್ಯ (Central Province) ದಲ್ಲೆದ್ದ ಬರಗಾಲ ಪೀಡಿತ ಪ್ರದೇಶಕ್ಕೆ ಧಾವಿಸಿದರು. ಅಲ್ಲಿ ಕಂಡ ದಾರುಣ ದೃಶ್ಯವು ಅವರ ಮನಕರಗಿಸಿತು.
ಬಡ ಕುಟೀರಗಳು (ಪೂರ್ ಹೋಮ್ಸ್) ಹಾಗೂ ನಿರಾಶ್ರಿತರ ಶಿಬಿರಗಳನ್ನು ಶೋಧಿಸುತ್ತಾ ನಡೆದ ಅವರು ಕಂಡಿದ್ದು, ಮಾನವೀಯ ಭಾವನೆಗಳನ್ನು ಕಳೆದುಕೊಂಡ ತಾಯಿ ತಂದೆಯರು ತಮ್ಮ ಸ್ವಂತ ಹೆಣ್ಣು ಮಕ್ಕಳನ್ನೇ ರೂಪಾಯಿ, ಎಂಟಾಣೆಗಳಿಗೆಲ್ಲಾ ಮಾರುತ್ತಿದ್ದ, ತಮ್ಮ ಮಕ್ಕಳ ಕೈಯಿಂದಲೇ ರೊಟ್ಟಿಗಳನ್ನು ಕಸಿದು ತಿನ್ನುತ್ತಿದ್ದ, ಮೂಳೆ ಚಕ್ಕಳದ ಮಕ್ಕಳು ಒಣ ಹಿಟ್ಟುಗಳನ್ನೇ ಮುಕ್ಕುತ್ತಿದ್ದ ಹೃದಯವಿದ್ರಾವಕ ನೋಟಗಳನ್ನು.
ಬಾಲ ವಿಧವೆಯರ ಸ್ಥಿತಿಯಂತೂ ಇನ್ನೂ ಚಿಂತಾಜನಕವಾಗಿತ್ತೆಂದು ಅವರು ಹೇಳುತ್ತಾರೆ. ಪೂರ್ ಹೋಮ್ ಗಳಾಗಲೀ, ನಿರಾಶ್ರಿತರ ಶಿಬಿರಗಳಾಗಲೀ, ಮುಖ್ಯ ರಸ್ತೆಗಳಾಗಲೀ ಅವರನ್ನು ಕೊಂಡೊಯ್ಯುತ್ತಿದ್ದುದು ವಿನಾಶದ ಅಂಚಿಗೇ ಆಗಿತ್ತೆಂದು ಅವರು ಅರಿತಿದ್ದರು. ಅಂತಹ ಶಿಬಿರಗಳಲ್ಲಿ ಅವರನ್ನು ಬಿಡುವುದೇ ಅಪಾಯಕಾರಿಯಾಗಿದ್ದಿತು.
ರಮಾಬಾಯಿಯವರು ಕಂಡ ಹಾಗೆಯೇ ಅವರು “ಪುರುಷರ ಸ್ವಾರ್ಥಕ್ಕೆ ಸಿಕ್ಕಿ ತಮ್ಮ ಬದುಕನ್ನು ನಾಶಗೊಳಿಸಿಕೊಂಡಿದ್ದರು. ಇನ್ನೂ ಕೆಲವರು ದಾರುಣವಾದ ಸಾವನ್ನು ಕಾಣುವುದಕ್ಕೆಂದೇ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು. ಕೆಲವರಂತೂ ಅಪಮಾನದ ದಳ್ಳುರಿಯಲ್ಲಿ ಬೆಂದು ಹೋಗಿದ್ದರು…. ತಾಯಿಯ ಮಮತೆ ಹಾಗೂ ಸಹೋದರಿಯರ ಪ್ರೇಮದಿಂದ ಕೂಡಿದ ಯಾರಾದರೂ ಅಂತಹ ಹುಡುಗಿಯರನ್ನು ರಕ್ಷಿಸಬಹುದಿತ್ತು” (G. Robbertson, Pandita Ramabai: the widows friend) ಆದ್ದರಿಂದಲೇ ಅಳಿದುಳಿದ ಹೆಣ್ಣುಮಕ್ಕಳನ್ನಾದರೂ ಪಾರುಮಾಡಲೆಂದು ತಾವು ಹೊರಟುದಾಗಿ ಅವರು ಹೇಳಿಕೊಳ್ಳುತ್ತಾರೆ.

ಕ್ರಿಶ್ಚಿಯನ್ ಪಾದ್ರಿಯೊಬ್ಬರು ಅಂತಹ ಅರವತ್ತು ಮಂದಿ ವಿಧವೆಯರನ್ನು ಇವರ ಪಾಲಿಗೆ ಒಪ್ಪಿಸಿದಾಗ, ಒರಟು ಪ್ರಾಣಿಗಳಂತಿದ್ದ ಅವರನ್ನು ನಾಗರಿಕರನ್ನಾಗಿಸುವುದು ಬಹಳ ಕಠಿಣವಾದ ಕೆಲಸವಾಗಿತ್ತೆಂದು ಅವರು ಹೇಳುತ್ತಾರೆ. ಬರಪೀಡಿತ ಸಂದರ್ಭದಲ್ಲಿ ಅನೇಕ ಕೊಳಕು ರೂಡಿಗಳಿಗೆ ದಾಸರಾಗಿದ್ದ ಅವರಿಗೆ ಮೂಲಭೂತ ಸೌಕರ್ಯವನ್ನು ಪೂರೈಸುವುದೂ ಬಹಳ ದುಬಾರಿಯಾಗಿತ್ತೆಂದು ಅಭಿಪ್ರಾಯ ಪಡುತ್ತಾರೆ.
ಹೀಗೆ ಬರಪೀಡಿತ ಪ್ರದೇಶದಿಂದ ರಕ್ಷಿಸಿದ ಸುಮಾರು ಮುನ್ನೂರು ಹುಡುಗಿಯರನ್ನು ಸೇರಿಸಿ ‘ಮುಕ್ತಿಶಾಲೆ’ ಎಂಬ ಒಂದು ಮಿಷನರಿ ಸಂಸ್ಥೆಯನ್ನು ೧೮೯೭ರಲ್ಲಿ ಪ್ರಾರಂಭಿಸಿದರು. ಇಲ್ಲಿನ ಹುಡುಗಿಯರಿಗೆ ಜಾತ್ಯಾತೀತವಾದ ಶಿಕ್ಷಣದ ಜೊತೆಗೆ ಕ್ರಿಶ್ಚಿಯನ್ ಬೋಧನೆಯನ್ನೂ ನೀಡಲಾಗುತ್ತಿತ್ತು. ರಮಾಬಾಯಿಯವರ ಪ್ರಯತ್ನದಿಂದಾಗಿ ಕೆಲವೇ ವರುಷಗಳಲ್ಲಿ ಅನೇಕ ಹುಡುಗಿಯರು ಸ್ವಾವಲಂಬಿಗಳಾದರು. ಈ ಎಲ್ಲ ಹೆಣ್ಣುಮಕ್ಕಳ ಭವಿಷ್ಯದ ಬಗೆಗೆ ಮೊದಲಿಗೆ ತಮಗೆ ಬಹಳ ಭಯವಾಗಿತ್ತೆಂದು ಹೇಳಿಕೊಂಡಿದ್ದಾರೆ. ಆದರೆ ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದೂ ಅಂತಹ ದುಸ್ಸಾಧ್ಯವೇನಾಗಿರಲಿಲ್ಲವೆಂದು ಅವರೇ ಸಮಾಧಾನ ಪಟ್ಟುಕೊಳ್ಳುತ್ತಾರೆ.
ಕಾರಣ ಹಲವಾರು ಮಿಷನರಿ ಶಾಲೆಗಳಿಗೆ ಶಿಕ್ಷಕಿಯರ ಬೇಡಿಕೆಯಿದ್ದಂತೆ, ವಿದ್ಯಾವಂತ ಯುವಕರಿಗೆ ವಿದ್ಯಾವತಿಯರಾದ ಪತ್ನಿಯರ ಅಗತ್ಯವೂ ಇದ್ದುದರಿಂದ ರಮಾಬಾಯಿಯವರ ಭಯವು ಹೆಚ್ಚು ತೀವ್ರವಾದುದೇನೂ ಆಗಿರಲಿಲ್ಲ. ಶಾಲೆಯ ಸದಸ್ಯೆಯರನ್ನು ಸಮಾಜ ಸೇವೆಗೋ, ಇಲ್ಲ ಇನ್ನಾವುದೇ ಕ್ರಿಯಾತ್ಮಕ ಕೆಲಸಗಳಿಗೋ ತರಬೇತುಗೊಳಿಸುವುದು ಈ ಶಾಲೆಯ ಮುಖ್ಯ ಉದ್ದೇಶವಾಗಿದ್ದಿತು. ಈ ಶಾಲೆಯ ಹುಡುಗಿಯರು ದಾದಿಯರಾಗಿ, ಉಣ್ಣೆ ಉತ್ಪಾದನೆಯಲ್ಲಿ ಕುಶಲೆಯರಾಗಿ, ಧೋಬಿಯ ಕಸುಬಿನಲ್ಲಿ ಹಾಗೂ ಕೃಷಿ ಮತ್ತು ಹಾಲು ಉತ್ಪಾದನೆ ಮುಂತಾದ ಕೆಲಸಗಳಲ್ಲಿ ಪರಿಣಿತರಾಗಿ ಸ್ವಾವಲಂಬಿಗಳಾದುದ್ದನ್ನು ಮುಕ್ತಿಶಾಲೆಯು ದಾಖಲಿಸುತ್ತದೆ. ಇವುಗಳನ್ನೆಲ್ಲಾ ಗಮನಿಸುವಾಗ ರಮಾಬಾಯಿಯವರು ಹಮ್ಮಿಕೊಂಡ ಬೃಹತ್ ಕಾರ್ಯ ಚಟುವಟಿಕೆಗಳ ಬಗ್ಗೆ, ಅದರ ಹಿಂದಿನ ಅವರ ದೈತ್ಯಶಕ್ತಿಯ ಬಗ್ಗೆ, ಅವರ ಸೋಲರಿಯದ ಸಾಹಸೀ ವ್ಯಕ್ತಿತ್ವದ ಬಗ್ಗೆ ವಿಸ್ಮಯವಾಗುತ್ತದೆ.
ಕೃಪಾಸದನ (೧೮೯೯)
ಭಾರತೀಯ ಜಾತಿ ವ್ಯವಸ್ಥೆ, ಹಿಂದೂ ಶಾಸ್ತ್ರಗಳು ಮತ್ತು ಪದ್ಧತಿಗಳು, ಕೆಟ್ಟಪುರುಷರಿಂದ ಮೋಸಹೋದ ಮಹಿಳೆಯರನ್ನು ಜಾರಿಣಿಯರೆಂದು ಇತರ ಮರ್ಯಾದಸ್ಥ ಮಹಿಳೆಯರಿಂದ ಹೊರತುಪಡಿಸಿ ಇಟ್ಟಿರುವುದು ಇಡೀ ಸ್ತ್ರೀ ಕುಲಕ್ಕೆ ಅನ್ಯಾಯವೆಸಗಿದಂತೆ ಎಂದು ರಮಾಬಾಯಿಯವರು ಅಭಿಪ್ರಾಯ ಪಡುತ್ತಾರೆ. ಒಂದು ಕಡೆ ವಿಧವೆಯರನ್ನು ಮದುವೆಯಾಗಲು ಮುಂದೆ ಬರುವ ಯುವಕರನ್ನು ಸಾಮಾಜಿಕ ಹಾಗೂ ಧಾರ್ಮಿಕ ನಿಯಮಗಳು ಖಂಡಿಸುತ್ತಿದ್ದರೆ, ಇನ್ನೊಂದು ಕಡೆ ಅದೇ ನಿಯಮಗಳು ಪುರುಷರು ಇತರ ಜಾತಿಯ ಸ್ತ್ರೀಯರೊಂದಿಗೆ ಅನೈತಿಕ ಸಂಬಂಧ ಹೊಂದಲು ಮತ್ತು ಅಂತಹ ಪುರುಷರ ಸೇವೆಯೇ ಮಹಾಭಾಗ್ಯವೆಂಬ ನಂಬಿಕೆಯನ್ನು ಆ ಮಹಿಳೆಯರ ಮೇಲೆ ಹೇರುತ್ತದೆ. ಒಬ್ಬ ಪುರುಷನು ಏಕಕಾಲಕ್ಕೆ ಅನೇಕ ಸ್ತ್ರೀಯರನ್ನು ಮದುವೆ ಮಾಡಿಕೊಳ್ಳುವ ಪರವಾನಗಿ ಇದೆಯಾದರೂ ವಿವಾಹ ವಿಚ್ಛೇದನವಾಗಲೀ, ವಿಧವಾ ವಿವಾಹವಾಗಲೀ ಅವರಿಗೆ ಅಧರ್ಮವಾಗುತ್ತದೆ.

ಅದೇ ಒಬ್ಬ ಹೆಂಗಸು ತನ್ನ ಪತಿಯು ಬದುಕಿರುವವರೆಗೆ ಇರಲಿ, ಅವನು ಸತ್ತನಂತರವೂ ಇನ್ನೊಬ್ಬನೊಡನೆ ವಿವಾಹವಾಗುವುದು ಅಸಾಧ್ಯವಾಗಿದೆ. ಬಾಲ್ಯ ವಿವಾಹ, ಬಹುಪತ್ನಿತ್ವ ಹಾಗೂ ವೈಧವ್ಯದ ಮೇಲೆ ಹೇರಿದ ಒತ್ತಾಯಗಳು ಪುಟ್ಟಹುಡುಗಿಯರನ್ನು ಆತ್ಮಹತ್ಯೆಗೆ ಇಲ್ಲವೇ ಸಾಮಾಜಿಕ ಘನತೆಯನ್ನು ಕಳೆದುಕೊಂಡು ನಿರ್ಲಜ್ಜ ಬದುಕನ್ನು ಬದುಕುವ ಅನಿವಾರ್ಯತೆಗೆ ದೂಡಿದ ಪಿತೃಪ್ರಧಾನ ವ್ಯವಸ್ಥೆಯ ಪೂರ್ವಗ್ರಹಪೀಡಿತ ನಿಲುವನ್ನು ರಮಾಬಾಯಿಯವರು ಆಗಾಗ ಹೇಳುತ್ತಿದ್ದರು. “ಒಬ್ಬ ಹಿಂದೂ ಮಹಿಳೆಯಾಗಿ ನಾನೂ ಸಹ ನನ್ನ ದೇಶದ ಜಾರಿದ ಮಹಿಳೆಯರೆಂದು ಕರೆಯುವ ಈ ಮಹಿಳೆಯರ ಬಗ್ಗೆ ಅಜ್ಞಾನಿಯೇ ಇದ್ದೆ” ಎನ್ನುತ್ತಾ ತಮ್ಮ ಮೊದಲ ಅಜ್ಞಾನಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ.
ಇಂತಹ ವಿಚಾರಗಳನ್ನು ಮೈಮನಗಳ ತುಂಬಾ ತುಂಬಿಕೊಂಡ ರಮಾಬಾಯಿಯವರು ೧೮೮೩ರಲ್ಲಿ ಲಂಡನ್ನಿಗೆ ಭೇಟಿಯಿತ್ತಾಗ ಅಲ್ಲಿ ವ್ಯಾಂಟೇಜ್ ಎಂಬಲ್ಲಿ ಸೇಂಟ್ ಮೇರೀಸ್ ಹೋಮ್ ನ ಸಿಸ್ಟರುಗಳು ಅದೃಷ್ಟಹೀನ ಹೆಣ್ಣುಮಕ್ಕಳಿಗಾಗಿ ನಡೆಸುವ ಅನೇಕ ರಕ್ಷಣಾ ಸದನ (ರೆಸ್ಕ್ಯೂ ಹೋಮ್ಸ್) ಗಳನ್ನು ಕಾಣುತ್ತಾರೆ. ಆಗ ಅವರಿಗೆ ಕ್ರಿಶ್ಚಿಯನ್ನರ ಉದಾರತೆಯ ಪರಿಚಯವಾಗುತ್ತದೆ. ಇದರಿಂದ ಪ್ರೇರಣೆಗೊಂಡ ರಮಾಬಾಯಿಯವರು ಭಾರತದಲ್ಲಿ ತಮ್ಮ ಹಿಂದೂ ಭಗಿನಿಯರಿಗಾಗಿ ಇಂತಹ ಕೆಲಸವೊಂದನ್ನು ತಾವೂ ಕೈಗೊಳ್ಳಬೇಕೆಂದು ಸಂಕಲ್ಪವನ್ನು ಮಾಡುತ್ತಾರೆ.
“ಹಿಂದೂ ಶಾಸ್ತ್ರಗಳು ಇಂತಹ ಮಹಿಳೆಯರನ್ನು ಸಹಾನುಭೂತಿಯಿಂದ ನೋಡಲಾರವು. ಬದಲಾಗಿ ಅವು, ರಾಜನೊಬ್ಬ ಅಂತಹ ಸ್ತ್ರೀಯರನ್ನು ಊರ ಹೊರಗೆ ನಾಯಿಗಳಿಗೆ ಆಹಾರವಾಗಿ ಎಸೆಯಬೇಕೆಂಬ ಆದೇಶವನ್ನು ಹೊರಡಿಸಬೇಕೆಂದು ಅದು ಬಯಸುತ್ತದೆ…ಇಂತಹ ಪಾಪಿಗಳು ದಯೆಗೆ ಯೋಗ್ಯರಲ್ಲವೆಂಬುದನ್ನು ಅದು ಅನುಮೋದಿಸುತ್ತದೆ” ಎಂದು ಹೇಳುತ್ತಾರೆ.
ಹಿಂದೂ ಮಹಿಳೆಯರು ಇಂತಹ ದಯನೀಯ ಸಂಕಟದಲ್ಲಿ ಸಿಲುಕಿದಾಗ ಬ್ರಿಟಿಷ್ ಹಾಗೂ ಹಿಂದೂ ಮಹಿಳೆಯರ ನಡುವೆ ಅಗಾಧವಾಗಿ ಇರುವ ಅಂತರವನ್ನು ಇದು ಬಯಲಾಗಿಸುತ್ತದೆ. ೧೮೯೪ರಲ್ಲಿ ಭಾರತಕ್ಕೆ ಬಂದ ರಮಾಬಾಯಿಯವರು ಉತ್ತರ ಪ್ರದೇಶದ ಬೃಂದಾವನಕ್ಕೆ ಭೇಟಿ ನೀಡಿ, ಅಲ್ಲಿ ಮಹಿಳೆಯರ ಮೇಲೆ ಪುರೋಹಿತರು ನಡೆಸುತ್ತಿದ್ದ ಅತ್ಯಾಚಾರಗಳನ್ನು ಬಯಲಿಗೆಳೆಯುತ್ತಾರೆ. ಯಾತ್ರಾರ್ಥಿಗಳಾಗಿ ಬರುತ್ತಿದ್ದ ಹಿಂದೂ ವಿಧವೆಯರನ್ನು ಮಾರಾಟಮಾಡಿ ಧನಸಂಗ್ರಹ ಮಾಡುತ್ತಿದ್ದ ಸತ್ಯವನ್ನು ಬಯಲಿಗೆಳೆಯುತ್ತಾರೆ. “ಹಿಂದೂ ಧರ್ಮಕ್ಕೆ, ಇಂತಹ ಧನದಾಹಿ ಪೂಜಾರಿಗಳೇ ಉಪದೇಶಿಸಿದ ಹಾಗೆ, ಬ್ರಾಹ್ಮಣರ ದೈಹಿಕ ಬಯಕೆಗಳನ್ನು ಇಂತಹ ಪವಿತ್ರ ಸ್ಥಳಗಳಲ್ಲಿ ತಣಿಸುವ ಹೆಣ್ಣುಮಕ್ಕಳ ಕೃತ್ಯವು ಎಂದೆಂದಿಗೂ ಪಾಪದ್ದಲ್ಲ” ಎನ್ನುವ ಪೂಜಾರಿಗಳ ಸಮಯಸಾಧಕತೆಯನ್ನು ಬಯಲಿಗೆಳೆಯುತ್ತಾರೆ. ಪೂಜಾರಿಗಳು ಹಾಗೂ ಯಾತ್ರಾರ್ಥಿಗಳನ್ನು ತಣಿಸುವ ಮಹಿಳೆಯರೆಲ್ಲರೂ ಪಾಪದ ಕೂಪದಲ್ಲಿಯೇ ಕೊಳೆತರೂ, ಅದು ಶ್ರೇಷ್ಠವಾದ ಸೇವೆಯಾದುದರ ಕುರಿತಾದ ವ್ಯಂಗ್ಯವನ್ನು ವ್ಯಕ್ತಪಡಿಸುತ್ತಾರೆ.
ಅವರು ಪುಣೆಯಲ್ಲಿ ಶಾರದ ಸದನವನ್ನು ಆಂಭಿಸಿದಾಗಲೇ ಅವರಿಗೆ ವೇಶ್ಯೆಯರ ಸಮಸ್ಯೆಗಳ ಪರಿವೆ ಇದ್ದಿತು. ಬೃಂದಾವನದ ಘಟನೆಯಿಂದಾಗಿ ರಮಾಬಾಯಿಯವರ ಕಣ್ಣು ತೆರೆಯಿತು. ಅದೇ ಹೊತ್ತಿಗೆ ಅಮೇರಿಕೆಯ ವಿಶ್ವಸನೀಯ ಮಿಷನರಿಗಳಾದ ಮಿಸ್ ಎಡ್ಮಂಡ್, ಮಿಸೆಸ್ ಬೇಕರ್ ಮುಂತದವರ ಸಹಾಯದಿಂದ ೧೮೯೯ ನೆ ಇಸವಿ ಮಾರ್ಚ್ ೨೦ ರಂದು ಶಾರದಾ ಸದನದ ಬಳಿಯೇ ವೇಶ್ಯೆಯರ ಸುಧಾರಣೆಗೆಂದು ಸ್ಥಾಪನೆಗೊಂಡ ಸಂಸ್ಥೆಗೆ ‘ಕೃಪಾಸದನ’ ‘ಹೋಂ ಆಫ್ ಮರ್ಸಿ’ಎಂದು ನಾಮಕರಣ ಮಾಡಲಾಯಿತು. ಇಲ್ಲಿನ ಸದಸ್ಯೆಯರಿಗೆ ಅನೇಕ ಕೈಗಾರಿಕಾ ಕೆಲಸಗಳನ್ನು ಕಲಿಸಲಾಗುತ್ತಿತ್ತು.
೧೯೦೦ರಲ್ಲಿ ಮತ್ತೆ ಭೀಕರ ಬರಗಾಲಕ್ಕೆ ಭಾರತವು ತುತ್ತಾದಾಗ ಹಲವಾರು ಮಹಿಳೆಯರನ್ನು ಕೃಪಾಸದನಕ್ಕೆ ಕರೆತರಲಾಯಿತು. ಅದರಲ್ಲಿ ಆನೇಕ ಹುಡುಗಿಯರು ಗುಣವಾಗದ ಖಾಯಿಲೆಯಿಂದಾಗಿ ಮರಣ ಹೊಂದಿದರೆಂದು ರಮಾಬಾಯಿಯವರು ವಿಷಾದ ವ್ಯಕ್ತಪಡಿಸುತ್ತಾರೆ. ಅವರ ಇಂತಹ ಸುಧಾರಣಾ ಕಾರ್ಯಗಳಿಂದ ರೊಚ್ಚಿಗೆದ್ದ ‘ಬ್ರಾಹ್ಮಣ ಸೋದರರು’ ತಮ್ಮ ಸದನವನ್ನು ಒಡೆಯಲೆಂದೇ ಉದ್ದೇಶಿಸಿ ಚಳವಳಿಗಳನ್ನೇ ಹೂಡಿದುದನ್ನು ಅವರು ಹೇಳಿಕೊಳ್ಳುತ್ತಾರೆ. ತಮ್ಮ ಪಾಶ್ಚಾತ್ಯ ಸಹೋದರಿಯರಿಗೆ “ರಂಜಕವಾದ ಪ್ರವಚನಗಳಿಂದ ಮಾರುಹೋಗಬೇಡಿ” ಎಂದು ಬೇಡಿಕೊಳ್ಳುತ್ತಾರೆ.

ರಮಾಬಾಯಿಯವರ ಎಚ್ಚೆತ್ತ ಆತ್ಮಶಕ್ತಿಯ ಎದುರು ಬ್ರಾಹ್ಮಣ್ಯದ ಹುಸಿತನಗಳು ಮತ್ತೂ ಪೊಳ್ಳಾಗಿ ಕಾಣಿಸತೊಡಗಿದವು. ಇಂತಹ ಪೊಳ್ಳುತನವನ್ನು ತೋರಿಸಿಕೊಡುವ ಧೈರ್ಯ ರಮಾಬಾಯಿಯವರಿಗೆ ಪ್ರಾಪ್ತವಾದುದರಿಂದಲೇ, ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಗೌರವವಿರಲಿ, ಅನೇಕ ಸುಳ್ಳು ಆರೋಪಗಳಿಗೆ ಅವರನ್ನು ಗುರಿಯಾಗಿಸುತ್ತಾ, ಮಹಿಳಾ ಇತಿಹಾಸದಿಂದಲೇ ಅವರನ್ನು ತೆಗೆದು ಹಾಕುವ ಪ್ರಯತ್ನದಲ್ಲಿ ಪುರುಷ ಸಮಾಜವು ತೊಡಗಿಕೊಂಡಿತು.
ರಮಾಬಾಯಿಯವರು ಈ ಎಲ್ಲಾ ಪಿತೂರಿಗಳಿಂದ ಭ್ರಮನಿರಸನಗೊಂಡು ” I realized, after reading the fourth chapter of St John’s Gospel, that Christ was truly the Divine survivor. He claimed to be, and no one but He could transform and uplift the downtrodden womanhood of India and every land” ಎಂದು ತಮ್ಮ ಜೀವನ ಚರಿತ್ರೆಯಾದ “A Testimony of our Inexhaustible Treasure” ಎಂಬ ಪುಸ್ತಕದಲ್ಲಿ ತಾವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಇದ್ದ ಕಾರಣವನ್ನು ಬಹಳ ವಿನಯದಿಂದ ಹೇಳಿಕೊಳ್ಳುತ್ತಾರೆ.
ಮತಾಂತರವೆಂಬುದು ಅವರಿಗೆ ವೈಯಕ್ತಿಕ ವಿಷಯವಾಗಿದ್ದಿತು. ಕೊನೆ ಕೊನೆಗೆ ಅದು ಅವರ ಆನುಭಾವಿಕ ಹುಡುಕಾಟಗಳ ಸಾಧನವೂ ಆಯಿತೆಂಬುದು ಅವರ ಜೀವನ ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ. ಆದುದರಿಂದಲೇ ಅವರಿಗೆ ಹಿಂದೂ ಧರ್ಮದ ಬಗೆಗಾಗಲೀ, ಕ್ರಿಶ್ಚಿಯನ್ ಧರ್ಮದ ಬಗೆಗಾಗಲೀ ಕುರುಡು ಮೋಹವಿರಲಿಲ್ಲ.
ಹೀಗೆ ರಮಾಬಾಯಿಯವರು ಒಳಗಿನವರಾಗಿ (ಹಿಂದುವಾಗಿ) ಹೊರಗಿನದನ್ನು, ಹೊರಗಿನವರಾಗಿ (ಕ್ರಿಶ್ಚಿಯನ್) ಒಳಗನ್ನು ಕಂಡುಕೊಂಡ ಕಾರಣದಿಂದಲೇ ಅವರ ವಿಚಾರಗಳಿಗೊಂದು ವಸ್ತುನಿಷ್ಠತೆ ಪ್ರಾಪ್ತವಾಗಿದೆ.






0 Comments