ಇದು ಆಹ್ವಾನಿತ ಲೇಖನ
ಪುಸ್ತಕ ಪ್ರೀತಿಯ ಬೆಳೆಸಿದ ಕಾಯಕ ಜೀವಿ ಪುವ್ಯಾಶ್ರೀಗೆ ನುಡಿನಮನ

ಜ್ಯೋತಿ ಅನಂತಸುಬ್ಬರಾವ್
ನಾವು ಆಗ ಪುಟ್ಟ ಮಕ್ಕಳಿದ್ದೆವು. ಮನೆ ಎಲ್ಲೋ ಒಂದು ಕಾಡಿನ ಮಧ್ಯೆ ಇದ್ದಂತಿತ್ತು. ಭಾನುವಾರ ಬೆಳ್ಳಂಬೆಳಿಗ್ಗೆ ಒಬ್ಬರು ಸುಮಾರು ಐವತ್ತು ವರ್ಷದ ‘ಯುವಕ’ ಹೆಗಲಲ್ಲಿ ಚೀಲ ಹಾಕಿಕೊಂಡು ಬರುತ್ತಿದ್ದರು. ನಗುಮುಖದಲ್ಲೇ ಆಗಮಿಸುತ್ತಿದ್ದ ಅವರು ನಮ್ಮನ್ನು ಕರೆದು ಕೂರಿಸಿಕೊಂಡು ಚೀಲದಲ್ಲಿ ಕೈಹಾಕಿ ಬಣ್ಣಬಣ್ಣದ ಪುಸ್ತಕಗಳನ್ನು ಕೊಡುತ್ತಿದ್ದರು. ಅಷ್ಟೇ ಅಲ್ಲ, ಪುಸ್ತಕಗಳ ಬಗ್ಗೆ ನಮಗೆ ಅರ್ಥವಾಗುವಂತೆ ಹೇಳುತ್ತಿದ್ದರೂ ಕೂಡ.
ಪುಸ್ತಕಗಳ ಜೊತೆ ಜೊತೆಗೆ ವಿಶೇಷವಾಗಿ ನಮಗೆ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಇತ್ಯಾದಿ ಕುರುಕು ತಿಂಡಿಗಳನ್ನು ಕೊಡುತ್ತಿದ್ದರು. ಅದೇನೇ ಇರಲಿ, ಅವರು ಕೊಟ್ಟಂತಹ ಪುಸ್ತಕಗಳು ಇಂದಿಗೂ ನಮ್ಮಿಂದ ದೂರವಾಗಿಲ್ಲ, ನಮ್ಮ ಬದುಕನ್ನೇ ರೂಪಿಸಿದವು. ಆ ಮಹಾನುಭಾವನ ಹೆಸರು ಯು.ಎಸ್. ಶ್ರೀನಿವಾಸ. ಅವರು ಅತ್ಯಂತ ಪ್ರೀತಿಯಿಂದ ಪುವ್ಯಾಶ್ರೀ (ಪುಸ್ತಕ ವ್ಯಾಪಾರಿ ಶ್ರೀನಿವಾಸ) ಎಂದೇ ಹೆಸರುವಾಸಿಯಾಗಿದ್ದರು.
ಪುವ್ಯಾಶ್ರೀ ಕೇವಲ ಪುಸ್ತಕಗಳನ್ನು ಮಾರಾಟ ಮಾಡಲಿಲ್ಲ, ಒಂದು ಪುಸ್ತಕ ಸಂಸ್ಕೃತಿಯನ್ನೇ ಬೆಳೆಸಿ ಪೋಷಿಸಿದರು. ಅದನ್ನು ಒಂದು ಕಾಯಕವನ್ನಾಗಿ ಅತ್ಯಂತ ನಿಷ್ಠೆಯಿಂದ ನಡೆಸಿದರು. ಸೋವಿಯೆತ್ ಪ್ರಕಟಣೆಗಳು ಹೊರಬರುತ್ತಿದ್ದ ಕಾಲವದು. 25 ಪೈಸೆಗೊಂದು ವರ್ಣಮಯ ವಿಜ್ಞಾನ ಪುಸ್ತಕ ದೊರೆಯುತ್ತಿತ್ತು. ಅವರು ನಮಗೆ ಪರಿಚಯಿಸದ ಪುಸ್ತಕಗಳೇ ಇಲ್ಲ ಎನ್ನಬಹುದು. ವಿಜ್ಞಾನ, ಚಿತ್ರಕಲೆ, ಮಕ್ಕಳ ಕಥೆ ಪುಸ್ತಕಗಳು, ಮಕ್ಕಳ ಮ್ಯಾಗಝಿನ್ ಗಳು, ಹೀಗೆ ವಿವಿಧ ಬಗೆಗಳ ಪುಸ್ತಕಗಳನ್ನು ಕೊಟ್ಟು ನಮ್ಮ ಓದುವ ದಾಹವನ್ನು ಹೆಚ್ಚಿಸಿದರು.
ಪುವ್ಯಾಶ್ರೀ ಮನೆಗೆ ಬಂದರೆಂದರೆ ಅವರು ಯಾವ ಪುಸ್ತಕ ಕೊಟ್ಟಾರೆಂದು ಅವರ ಕೈಗಳನ್ನೇ ನೋಡುವಂತಾಗುತ್ತಿತ್ತು. ನಮ್ಮಂತಹ ಮಕ್ಕಳಿಗೆ ಕಿಂದರ ಜೋಗಿಯಾಗಿದ್ದರು ಪುವ್ಯಾಶ್ರೀ. ಅವರು ತಂದುಕೊಟ್ಟಂತಹ ಅನೇಕ ಪುಸ್ತಕಗಳನ್ನು ಇನ್ನೂ ನಮ್ಮ ಮುಂದಿನ ಪೀಳಿಗೆಯವರಿಗಾಗಿ ನಮ್ಮ ಮನೆಯ ಗ್ರಂಥಾಲಯದಲ್ಲಿ ಉಳಿಸಿಕೊಂಡಿದ್ದೇವೆ.

ಪುವ್ಯಾಶ್ರೀ ನಮಗೆಂದು ಮಕ್ಕಳ ಪುಸ್ತಕಗಳನ್ನು ಆಯ್ದು ತಂದುಕೊಟ್ಟರೆ ನನ್ನ ತಂದೆಗಾಗಿ ವಿವಿಧ ಪ್ರಕಾಶಕರ ಗಂಭೀರ ಓದಿನ ಪುಸ್ತಕಗಳನ್ನು ತರುತ್ತಿದ್ದರು. ಅತ್ಯಂತ ವಿವಾದಾತ್ಮಕ ಕೃತಿಗಳೂ ನಮ್ಮ ಮನೆಯಲ್ಲಿರಲು ಕಾರಣ ಪುವ್ಯಾಶ್ರೀ. ಅವರೆಂದೂ ಹಣ ಕೇಳಿದವರಲ್ಲ. ನನ್ನ ತಂದೆಯೇ ತಿಂಗಳಿಗೊಮ್ಮೆ ದಿನಸಿ ಕೊಂಡಂತೆ ಅವರಿಂದ ಪಟ್ಟಿ ತರಿಸಿಕೊಂಡು ಚೆಕ್ ಕೊಟ್ಟುಬಿಡುತ್ತಿದ್ದರು. ಹಾಗಿತ್ತು ಪುವ್ಯಾಶ್ರೀ ಕೈಗೊಂಡ ಪುಸ್ತಕ ಸೇವೆ. ಅಷ್ಟೇ ಅಲ್ಲ, ಪ್ರತಿ ಸಲ ಬಂದಾಗಲೂ ಹಿಂದೆ ಕೊಟ್ಟಂತಹ ಪುಸ್ತಕ ಓದಿದೆಯಾ? ಹೇಗಿದೆ? ಎಂದು ನನ್ನನ್ನು ಪ್ರಶ್ನಿಸುತ್ತಿದ್ದರು. ಇದರಿಂದ ನನ್ನ ಮೇಲೆ ಒಂದು ರೀತಿ ಓದಲೇಬೇಕೆಂಬ ಒತ್ತಡವೂ ಬರುತ್ತಿತ್ತು. ಹಾಗಂತ ಎಲ್ಲ ಪುಸ್ತಕಗಳನ್ನೂ ನಾನು ಓದಿಲ್ಲ! ಅದು ಬೇರೆ ಮಾತು.
ಬರಬರುತ್ತ ನಾನು ಬೆಳೆದಂತೆ ಮತ್ತು ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದಂತೆ ಅವರು ನನಗೆ ವೈಯಕ್ತಿಕವಾಗಿ ಇನ್ನೂ ಹೆಚ್ಚು ಆತ್ಮೀಯರಾದರು. ಅವರ ಮನೆಗೆ ಹೋದಾಗ ಅವರ ಕುಟುಂಬ ಅದೆಷ್ಟು ತ್ಯಾಗಗಳನ್ನು ಮಾಡಿದೆ ಎಂದು ತಿಳಿಯಿತು. ನಾನು ಮತ್ತಷ್ಟು ಆಪ್ತಳಾದೆ. ಈಗ ಅನಂತಸುಬ್ಬರಾಯರ ಮಗಳ ಬದಲು ಜ್ಯೋತಿಯಾಗಿ ಅವರ ಆಪ್ತ ವಲಯಕ್ಕೆ ಸೇರಿಕೊಂಡೆ. ನನಗೆ (ಐಕ್ಯ) ಕಮ್ಯುನಿಸ್ಟ್ ಪಕ್ಷದ ವೀರೋಚಿತ ಕಥೆಗಳನ್ನು ಹೇಳುತ್ತಿದ್ದರು.
ಈಗ ಪುಸ್ತಕಗಳನ್ನು ನೀಡುವುದರ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಇತ್ಯಾದಿ ಕ್ಷೇತ್ರಗಳಲ್ಲಿ ಮುಖ್ಯವೆನಿಸಿದ, ಆಸಕ್ತಿದಾಯಕ ಪ್ರೆಸ್ ಕ್ಲಿಪಿಂಗ್ ಗಳನ್ನು ಕೊಡುತ್ತಿದ್ದರು. ಚರ್ಚೆ ಮಾಡುತ್ತಿದ್ದರು. ಅವರ ತಾಯಿಯಂತೂ ನನಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಭಾರತ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿದ ಕಾಮ್ರೇಡ್ ಡಾಂಗೆ, ಕಾ|| ರಣನವರೆ, ಮುಂತಾದ ಹಲವು ನೇತಾರರಿಗೆ ಅವರ ತಾಯಿ ಮತ್ತು ಇಡೀ ಕುಟುಂಬ ಸೇವೆ ಸಲ್ಲಿಸಿತ್ತು.
ಇಡೀ ಕುಟುಂಬವೇ ಹೆಣ್ಣುಮಕ್ಕಳ ಸಬಲೀಕರಣದ ಬಗ್ಗೆ ನೈಜ ಆಸಕ್ತಿ ಹೊಂದಿತ್ತು. ಮೈಸೂರಿನ ದಿವಾನ್ ನಂಜುಂಡಯ್ಯನವರ ವಂಶಸ್ಥರಾದ ಪುವ್ಯಾಶ್ರೀಯವರ ಕುಟುಂಬಸ್ಥರು ಮಲ್ಲೇಶ್ವರದ 10-11ನೇ ಕ್ರಾಸ್ ನಲ್ಲಿರುವ ಹೆಣ್ಣುಮಕ್ಕಳ ಶಾಲೆ ಮತ್ತು ಪದವಿಪೂರ್ವ ಕಾಲೇಜಿಗೆ ಸ್ಥಳವನ್ನು ದಾನ ಮಾಡಿದ್ದರು. ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದ ಪುವ್ಯಾಶ್ರೀಯವರು ಚುನಾವಣೆಗಳ ಸಮಯದಲ್ಲಿ ಸಿಪಿಐನ ಮಹಿಳಾ ಅಭ್ಯರ್ಥಿಗಳಿಗೆಂದೇ ವಿಶೇಷವಾಗಿ ದೇಣಿಗೆ ಮೀಸಲಿಡುತ್ತಿದ್ದರು. ಪಕ್ಷದ ಮಹಿಳಾ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಆಸ್ಥೆ ತೋರಿದ್ದನ್ನು ಮರೆಯಲು ಆಗದು.

ಪುವ್ಯಾಶ್ರೀಯವರಿಗೆ ಈಗ 88 ವರ್ಷಗಳಾಗಿದ್ದವು. ಆದರೆ ಅವರ ಪುಸ್ತಕ ಸೇವೆ ಮಾತ್ರ ನಿಂತಿರಲಿಲ್ಲ. ಪುಸ್ತಕ ಎಂದರೆ ಪುವ್ಯಾಶ್ರೀ, ಪುವ್ಯಾಶ್ರೀ ಎಂದರೆ ಪುಸ್ತಕ! ಅವರು ಅದನ್ನು ಹಣಕ್ಕಾಗಿ ನಡೆಸುತ್ತಿರಲಿಲ್ಲ, ಒಂದು ಪ್ರಚಾರ ಆಂದೋಲನವಾಗಿ ಕೈಗೊಂಡಿದ್ದರು. ನಾಲ್ಕೈದು ದಿನಗಳ ಹಿಂದೆ ನನಗೆ ಕರೆ ಮಾಡಿ ಪಕ್ಷದ ಕಛೇರಿಗೆ ಪುಸ್ತಕಗಳನ್ನು ಕಳಿಸುವುದಾಗಿ ಹೇಳಿದರು. ಆಗಾಗ್ಗೆ ಪುಸ್ತಕಗಳನ್ನು ಕೊಟ್ಟು ಅವುಗಳನ್ನು ನೀವು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಮಹಿಳಾ ಸಂಘಟನೆಗೆ ಬಳಸಿಕೊಳ್ಳಿರೆಂದು ಹೇಳಿ ತಮ್ಮ ಔದಾರ್ಯವನ್ನು ಮೆರೆಯುತ್ತಿದ್ದರು.
ಪುವ್ಯಾಶ್ರೀ ಕ್ರಿಕೆಟ್ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪೇಯಗಳ ಕಡುವಿರೋಧಿಯಾಗಿದ್ದರು. ತಾವೊಬ್ಬರೇ ಪೋಸ್ಟ್ ಕಾರ್ಡ್ ಅಭಿಯಾನ ಮಾಡುತ್ತಿದ್ದರು. ಕ್ರಿಕೆಟ್ ಒಂದು ಮಾಫಿಯಾ ಎನ್ನುವುದೇ ಅವರ ಘೋಷಣೆಯಾಗಿತ್ತು.
ಅಣ್ಣ ಯು.ಎಸ್.ವೆಂಕಟರಾಮ್ ಅವರೊಬ್ಬರನ್ನು ಹೊರತುಪಡಿಸಿ ಬ್ರಹ್ಮಚಾರಿಗಳಾಗಿಯೇ ಉಳಿದ ಪುವ್ಯಾಶ್ರೀ ಮತ್ತವರ ಒಡಹುಟ್ಟಿದವರು ಮಾನವಕುಲಕ್ಕೆ ಅತ್ಯಮೂಲ್ಯ ಸೇವೆ ಮಾಡಿದ್ದಾರೆ. ತಮ್ಮ ಪಾರ್ಥಿವ ಶರೀರಗಳನ್ನು ದಹಿಸಲು ಬಿಡದೆ ನಿಮ್ಹಾನ್ಸ್ ನ ಸಂಶೋಧನಾ ವಿಭಾಗಕ್ಕೆ ದಾನ ಮಾಡಿದ್ದಾರೆ. ತಾವು ಬದುಕಿರುವಾಗಷ್ಟೇ ಅಲ್ಲದೆ ತಮ್ಮ ಉಸಿರು ನಿಂತ ಮೇಲೂ ಮನುಜಕುಲಕ್ಕೆ ಸೇವೆಗೈದಿರುವ ಪುವ್ಯಾಶ್ರೀ ಅಜರಾಮರರಾಗಿದ್ದಾರೆ.
ನಮ್ಮ ಕುಟುಂಬದ ಸದಸ್ಯರಲ್ಲೊಬ್ಬರಾಗಿದ್ದ ದಿಟ್ಟ ಮತ್ತು ನೇರ ನುಡಿಯ ನಮ್ಮ ಪ್ರೀತಿಯ ಸಂಗಾತಿ ಪುವ್ಯಾಶ್ರೀ ವಯಸ್ಸಿನ ಕಾರಣದಿಂದ ಅಸು ನೀಗಿದ್ದಾರೆ, ದೈಹಿಕವಾಗಿ ಇಲ್ಲವಾಗಿದ್ದಾರೆ. ಆದರೆ ಅವರು ನಮ್ಮಲ್ಲಿ ಬೆಳೆಸಿದಂತಹ ಪುಸ್ತಕ ಪ್ರೀತಿ, ಮಾನವೀಯ ಕಾಳಜಿ ಮತ್ತು ಅವರು ಕೊಟ್ಟಂತಹ ಪುಸ್ತಕಗಳ ಮೂಲಕ ಪುವ್ಯಾಶ್ರೀ ನಮ್ಮ ಜೊತೆ ಇನ್ನೂ ಇದ್ದಾರೆ, ಮುಂದೆಯೂ ಇರುತ್ತಾರೆ. ಅವರ ಮೇಲಿನ ಒಲವು ಸದಾಕಾಲ ಹಚ್ಚಹಸಿರಾಗಿರುತ್ತದೆ.






ಓದಿ ಧನ್ಯತಾ ಭಾವ ಮೂಡುತ್ತಿದೆ