ನುಡಿ ನಮನ: ಡಾ.ಅಶೋಕ್ ಮಿತ್ರ
ಮ ಶ್ರೀ ಮುರಳಿ ಕೃಷ್ಣ
ಅಂತರರಾಷ್ಟ್ರೀಯ ಮೇ ದಿನದಂದು ಜಗತ್ತಿನ ದುಡಿಯುವ ಮಂದಿ, ಕಾರ್ಮಿಕ ಸಂಘಗಳು ಸಭೆ, ಮೆರವಣಿಗೆಗಳನ್ನು ನಡೆಸಿ ತಾವು ನಡೆಯುತ್ತ ಬಂದಿರುವ ಹಾದಿಯನ್ನು ಅವಲೋಕಿಸುತ್ತ, ಮುಂಬರುವ ದಿನಗಳಲ್ಲಿ ತಮ್ಮ ಮೇಲೆ ಆಗಬಹುದಾದ ಆಕ್ರಮಣಗಳನ್ನು ಎದುರಿಸುವ ಕಾರ್ಯತಂತ್ರಗಳ ಬಗೆಗೆ ಆಲೋಚಿಸುತ್ತಾರೆ.
ಈ ವರ್ಷದ ಮೇ ದಿನದಂದು ಪಶ್ಚಿಮ ಬಂಗಾಳದ ಒಬ್ಬ ದೈತ್ಯ ಪ್ರತಿಭೆಯ ಅರ್ಥಶಾಸ್ತ್ರಜ್ಞರೊಬ್ಬರು ಅಸುನೀಗಿದರು. ಅವರ ಮರಣ ಮಾಧ್ಯಮಗಳಲ್ಲಿ ಅಷ್ಟಾಗಿ ಸುದ್ದಿ ಮಾಡಲಿಲ್ಲ! ಅವರೇ ಡಾ. ಅಶೋಕ್ ಮಿತ್ರ.
ಅರ್ಥಶಾಸ್ತ್ರದಲ್ಲಿ ಪಾರಮ್ಯ ಗಳಿಸಿ, ಅವರು 1970ರಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದರು. ಎರಡು ವರ್ಷಗಳ ತರುವಾಯ ಸಕಾರಣಗಳಿಂದ ಆ ಹುದ್ದೆಯನ್ನು ತೊರೆದರು.
ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಎಡರಂಗದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಜ್ಯೋತಿ ಬಸು ಅದರ ಮುಖ್ಯಮಂತ್ರಿಯಾದರು. ಡಾ. ಅಶೋಕ್ ಮಿತ್ರ, ಅರ್ಥ, ಅಭಿವೃದ್ಧಿ ಮತ್ತು ಯೋಜನಾ ಸಚಿವರಾದರು. 1986ರಲ್ಲಿ ಅವರು ಎಡರಂಗದ ಸರ್ಕಾರದಿಂದ ಹೊರನಡೆದರು. ಜ್ಯೋತಿ ಬಸುರವರ ಜೊತೆ ಭಿನ್ನಾಭಿಪ್ರಾಯಗಳಿದ್ದುದರಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡರು. ಆದರೆ ತಮ್ಮಿಬ್ಬರ ನಡುವೆ ತಲೆದೋರಿದ ಅಭಿಪ್ರಾಯಭೇದಗಳ ಬಗೆಗೆ ಅವರು ಏನನ್ನೂ ಸಾರ್ವಜನಿಕವಾಗಿ ಮಾತನಾಡಲಿಲ್ಲ.
ಸುಮಾರು ಒಂದೂವರೆ-ಎರಡು ದಶಕಗಳ ಹಿಂದೆ ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಯಲ್ಲಿ ಅವರ ಕಾಲಂ ನಿಯಮಿತವಾಗಿ ಪ್ರಕಟವಾಗುತ್ತಿತ್ತು. ಅವರ ಲೇಖನಗಳಲ್ಲಿ ಬರೀ ಆರ್ಥಿಕ ವಿಷಯಗಳಷ್ಟೇ ಇರುತ್ತಿರಲಿಲ್ಲ. ಸಾಹಿತ್ಯ, ಸಂಸ್ಕೃತಿ ಇತ್ಯಾದಿ ವಿಚಾರಗಳೂ ಇರುತ್ತಿದ್ದವು.
ಅವರು ಫೆಡರಲಿಸಂ ಪರವಾಗಿ ಪಕ್ವ ದನಿಗಳನ್ನು ಎತ್ತುತ್ತಿದ್ದರು. ಹಾಗಾಗಿ ಅವರಿಗೆ ಗಿಂಖಿ, ಉಂಖಿಯಂತಹ ವಿಚಾರಗಳ ಬಗೆಗೆ ಆಳುವ ವರ್ಗದವರ ಅಭಿಮತಗಳ ಜೊತೆಗೆ ಸಹಮತವಿರಲಿಲ್ಲ. ಮೋದಿ ಸರ್ಕಾರ ಯೋಜನಾ ಆಯೋಗ ರದ್ದುಪಡಿಸಿದ್ದನ್ನು ಖಂಡಿಸಿದ್ದರು.
ಸೋವಿಯತ್ ಯೂನಿಯನ್ ಪತನಗೊಂಡಾಗ ಬೆಂಗಳೂರಿನ ಟಾಟಾ ಇನ್‍ಸ್ಟಿಟ್ಯೂಟ್‍ನಲ್ಲಿ ‘ಈಸ್ ಸೋಷಿಯಲಿಸಂ ಡೆಡ್’ ಎಂಬ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು. ಒಬ್ಬ ಪ್ರಧಾನ ಭಾಷಣಕಾರರಾಗಿದ್ದ ಡಾ. ಅಶೋಕ್ ಮಿತ್ರ ತಮ್ಮ ಎಂದಿನ ಉಡುಗೆಯಾದ ಪಂಚೆ ಮತ್ತು ಬಿಳಿ ಜುಬ್ಬಾ ಧರಿಸಿ, ಸೋಷಿಯಲಿಸಂ ಪರವಾಗಿ ಗಮನೀಯ, ಗಟ್ಟಿ ವಾದಗಳನ್ನು ಮಂಡಿಸಿದರು.
ಅವರಿಗೆ ಸಾಹಿತ್ಯದ ಬಗೆಗೆ ಅಪಾರ ಒಲವಿತ್ತು. ಬಂಗಾಳಿ ಸಾಹಿತ್ಯದ ಅವರ ಓದಿಗೆ ವ್ಯಾಪಕ ಹರಹು ಇತ್ತು. ರಬೀಂದ್ರನಾಥ್ ಟ್ಯಾಗೂರ್, ಜಿಬಾನಂದ ದಾಸ್ ಮತ್ತು ಇತರ ಬಂಗಾಳಿ ಸಾಹಿತಿಗಳ ಕಾವ್ಯಗಳ ಅಭಿಮಾನಿಗಳಾಗಿದ್ದರು.
ಅರ್ಥಶಾಸ್ತ್ರದ ಜೊತೆಗೆ ಇತರ ವಿಷಯಗಳ ಬಗೆಗೆ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿದ್ದರು.
ಅವರು ಆಂಗ್ಲ ಭಾಷೆಯಲ್ಲಿ ಬರೆದ ‘ ಂ Pಡಿಚಿಣಣಟeಡಿ’s ಖಿಚಿಟe: ಃeಟಿgಚಿಟ, ಒಚಿಡಿxism, ಉoveಡಿಟಿಚಿಟಿಛಿe’ (ಆತ್ಮಕಥನವುಳ್ಳ ಪುಸ್ತಕ) ಬಂಗಾಳಿ ಭಾಷೆಯಲ್ಲಿ ‘ಅಪಿಲಾ-ಚಪಿಲಾ’ ಎಂದು ಪ್ರಕಟವಾಯಿತು.
ಅದರ ಕೊನೆಯ ಸಾಲುಗಳಲ್ಲಿ, ಅವರು ಹೀಗೆಂದು ದಾಖಲಿಸಿದ್ದಾರೆ: “ಈ ನನ್ನ ಅಮುಖ್ಯ ಬಾಳಿನಲ್ಲಿ ಎರಡು ವಿಶಿಷ್ಟ ಸಂಗತಿಗಳು ನನಗೆ ಸಮಾಧಾನವನ್ನು ನೀಡಿವೆ. ಒಂದು, ನಾನು ರಬೀಂದ್ರನಾಥರ ಭಾಷೆ ಮತ್ತು ಸಂಸ್ಕೃತಿಯ ನಾಡಿನಲ್ಲಿ ಜನಿಸಿದ್ದು ಮತ್ತು ಎರಡನೆಯದಾಗಿ ಪ್ರಾರಂಭದಿಂದಲೂ ನನ್ನ ಮನಸ್ಸು ಹಾಗೂ ಪ್ರಜ್ಞೆ ಮಾರ್ಕ್ಸ್ ವಾದದ ಸಾಹಿತ್ಯದ ಪ್ರಭೆಯಿಂದ ತುಂಬಿದ್ದು……..”
ಧೀಮಂತ ಮಾರ್ಕ್ಸ್ ವಾದಿ, ಜೀವ-ಜನಪರ ಚಿಂತಕ, ಸಾರ್ವಜನಿಕ ವಲಯದ ಸಾಕ್ಷಿ ಪ್ರಜ್ಞೆಯಾಗಿದ್ದ ಡಾ. ಅಶೋಕ್ ಮಿತ್ರರವರಿಗೆ ನನ್ನ ನಮನ.






ಒಳ್ಳೆಯ ಬರಹ..ಥ್ಯಾಂಕ್ಯು
ಧನ್ಯವಾದ..
ಕ್ಲುಪ್ತ ಆತ್ಮೀಯ ಬರಹ ; ಅಂದಿನ ವಿಚಾರಸಂಕಿರಣದಲ್ಲಿ ಅಣ್ಣ ರಮೇಶ ಬಂದಗದ್ದೆಯವರೊಂದಿಗೆ ನಾನೂ ಭಾಗವಹಿಸಿದ್ದು ನೆನಪಾಯ್ತ.
ಧನ್ಯವಾದ ಶೈಲೇಂದ್ರ…