ಚೇತನಾ ತೀರ್ಥಹಳ್ಳಿ
ಮಗು.
ಅರೆ! ನನ್ನದೇ ಜೀವ. ನನ್ನ ನಿರಂತರತೆ.
ಆದರೆ, ಅದು ನಾನಲ್ಲ.
ಅದು ನಾನು ಮಾತ್ರ ಅಲ್ಲ.
ಅಂವ ಕೂಡ ಅಂದ್ಕೊಳ್ತಾನೇನೋ, ” ನನ್ನ ಮಗು, ನನ್ನದೇ ನಿರಂತರತೆ!”
ಮಗು…
ಈಗ ತಾನೇ ಕಡೆದು ತೆಗೆದ ಮೆದು ಬೆಣ್ಣೆ.
ಕಾದು ಕಾದು ಹೊನ್ನುಗಟ್ಟಿದ ಹಾಲು ಕೆನೆ.
ಮಗು,
ಹುಲ್ಲಿನೆಳೆಯ ಮೇಲಿನ ಇಬ್ಬನಿ ಮುತ್ತು!
ಅಯ್ಯೋ!
ಅದೇನು ಮಗ್ಗುಲ ಮುಳ್ಳು?
ಮಗು-
ವಲ್ಲಿ ಅವನ ನಗು!!
ಅವನ ಕಣ್ಣು, ಮೂಗು, ಬಾಯಿ… ಅವನದೇ ಪಡಿಯಚ್ಚು.
ಇತಿಹಾಸ ಕೆದಕುವ ವಾಸ್ತವ.
ಮತ್ತೆ ಮಗು.
“ಅದು ನಾನಲ್ಲ. ಅವನೂ ಅಲ್ಲ.
ಅದರ ಹುಟ್ಟಿಗೆ ನಾವೊಂದು ಪಿಳ್ಳೆ ನೆವ ಮಾತ್ರ.
ನಾವು ಕೊಟ್ಟಿದ್ದು ಬರಿ ಜೀವಕೋಶಗಳನ್ನ, ಜೀವವನ್ನಲ್ಲ!”
– ಹಾಗಂದುಕೊಳ್ಳುತ್ತೇನೆ.
ಇವನ ಮುಖದಲ್ಲಿ ಅವನ ನಗು ಕಾಣದಂತೆ ತೇಪೆ ಹಾಕುತ್ತೇನೆ.
ಆದರೂ,
ಅಂವ ಹಣಕುತ್ತಾನೆ.
ಅವನ ಧಗಾ, ಧೋಕಾ, ಮೈತುರಿಕೆಗಳೆಲ್ಲ ನೆನಪಾಗಿ ಉಮ್ಮಳಿಕೆ ಬರುತ್ತದೆ.
ಗೋರಿ ಸ್ವಾತಂತ್ರ್ಯದ ಕವನ ಕಟ್ಟಿ, ಕಣ್ಣೀರಲ್ಲಿ ಕೈತೊಳೆದು, ಬೇಲಿಗಳಲ್ಲಿ ಉಸಿರು ಬಿಗಿದು….
‘ದೌರ್ಜನ್ಯ!’ ಚೀರುತ್ತೇನೆ.
ಹೆಣ್ತನದ ವಕೀಲಿಗಿಳಿಯುತ್ತೇನೆ.
ಅದನ್ನ ಉಳಿಸಿಕೊಳ್ಳಲಿಕ್ಕೆಂದೇ ಹೊಸಿಲು ದಾಟಿ ಹೊರಡುತ್ತೇನೆ.
ಅವನ ನಗು ಹೊತ್ತ ಮಗು,
ಬಾಗಿಲಾಚೆಯೇ ಉಳಿಯುತ್ತದೆ.
ಸತ್ಯಕಾಮರ ಸಾಲು: ” ಒಬ್ಬಳು, ಹೆಣ್ತನವನ್ನ ಮೀರಿದಾಗ ಮಾತ್ರ ತಾಯಿಯಾಗುತ್ತಾಳೆ.”


Nice poem
ಕವನ ತುಂಬಾ ಚೆನ್ನಾಗಿದೆ..
NANNA MAGANA NENAPAYITU, NAANU HORATE TIRTHAHALLIGE