ಆ ಮೂರು ದಿನದ ಚಿಂತಿ

ಡಾ ಎಚ್ ಎಸ್ ಅನುಪಮಾ
ಮನುಷ್ಯ ಸೃಷ್ಟಿ, ಹೆಣ್ತನದ ಸಕಲ ಆಗುಹೋಗುಗಳ ಮೂಲವಾದ ಕ್ರಿಯೆ ಋತುಸ್ರಾವ.
ಆದರೆ ಆ ಮೂರು ದಿನಗಳ ಕುರಿತು ಮಾನವ ಸಮಾಜಕ್ಕಿರುವ ಅಜ್ಞಾನ, ಅಸಡ್ಡೆ ಹೇಳಲಸಾಧ್ಯ.
ಆ ಕುರಿತು ಹೆಣ್ಮಕ್ಕಳೂ ಮನಬಿಚ್ಚಿ ಮಾತಾಡುವುದಿಲ್ಲ. ಮುಟ್ಟು ಎಂದು ಹೇಳುವುದೇ ಮರ್ಯಾದೆಯ ಪ್ರಶ್ನೆ, ಅದೂ ಗಂಡಸರ ಎದುರಿಗಂತೂ ಆ ಮಾತು ಎತ್ತುವುದೇ ನಿರ್ಲಜ್ಜತನ ಎಂಬ ಭಾವನೆ ಎಷ್ಟುಮಟ್ಟಿಗೆ ಬೇರೂರಿದೆಯೆಂದರೆ ಸ್ವತಃ ಮುಟ್ಟಿನ ದಿನಗಳಲ್ಲಿ ನೋಯುವ, ಬೇಯುವ, ಆ ಕಾರಣಕ್ಕಾಗೆ ನಿರ್ಲಕ್ಷ್ಯಕ್ಕೆ ಗುರಿಯಾಗಿ `ಹೊರಗಿರುವ’ ಹೆಣ್ಮಕ್ಕಳು ಅದನ್ನೊಂದು ಅತ್ಯಂತ ಖಾಸಗಿ ವಿಷಯವಾಗಿಸಿಕೊಂಡಿದ್ದಾರೆ. ಸಮಸ್ಯೆಗಳನ್ನು ವೈದ್ಯರ ಬಳಿಯೂ ಹೇಳುವುದಿಲ್ಲ.
ಹೀಗೆ ಮುಟ್ಟು `ಹುಶ್ ಹುಶ್’ ಸಂಗತಿಯಾದ ಕಾರಣಕ್ಕೇ ಮುಟ್ಟಾದ ಮೂರು ದಿನ ಅವರಿಗೇನಾಗುತ್ತದೆ, ರಕ್ತ ಹರಿವನ್ನು ಹೇಗೆ ಮ್ಯಾನೇಜ್ ಮಾಡುತ್ತಾರೆ, ಅವರ ಸಮಸ್ಯೆಗಳೇನು ಎಂಬ ಬಗೆಗೆ ಸಮಾಜ ಇದುವರೆಗೂ ಯೋಚಿಸಿರಲಿಲ್ಲ.
ಈಗ ಅಂತಹ ಕಾಲ ಬಂದಿದೆ. ಸಮಾಜ ಮುಟ್ಟಿನ ಬಗೆಗಷ್ಟೆ ಅಲ್ಲ, `ಮುಟ್ಟಿನ ಸ್ಯಾಲೆ’ ಕುರಿತೂ ಚಿಂತಿಸುತ್ತಿದೆ. ಏಕೆಂದರೆ 2000ನೇ ಇಸವಿಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಮುಟ್ಟಿನ ಟ್ಯಾಂಪೂನುಗಳಿಗೆ 12% ಜಿಎಸ್ಟಿ ವಿಧಿಸಿದಾಗ; ಬ್ರಿಟನಿನಲ್ಲಿ 2014ರಲ್ಲಿ ಪ್ಯಾಡು-ಟ್ಯಾಂಪೂನುಗಳ ಮೇಲೆ ವ್ಯಾಟ್ ವಿಧಿಸಿದಾಗ ಮಹಿಳೆಯರಿಂದ `ಏಕ್ಸ್ ದಿ ಟ್ಯಾಂಪೂನ್ ಟ್ಯಾಕ್ಸ್’, `ಸ್ಟಾಪ್ ಟ್ಯಾಕ್ಸಿಂಗ್ ಪಿರಿಯಡ್ಸ್’ ಮುಂತಾದ ಅಭಿಯಾನಗಳು ನಡೆದವು. ಸರ್ಕಾರ, ಸಮಾಜಗಳು ಮೈ ಕೊಡವಿ ಎಚ್ಚೆತ್ತವು. ಈಗ ಭಾರತದಲ್ಲು ಸ್ಯಾನಿಟರಿ ನ್ಯಾಪ್ಕಿನ್ಗಳು 12.5% ಜಿಎಸ್ಟಿಗೆ ಒಳಗಾಗಿ ಇನ್ನಷ್ಟು ತುಟ್ಟಿಯಾಗಿ ವಿಸ್ತೃತ ಚರ್ಚೆ-ಹೋರಾಟ-ಅಭಿಯಾನಕ್ಕೆ ದಾರಿಯಾಗಿವೆ.
ಏನಾದರಿರಲಿ, ಅಧಿಕ ತೆರಿಗೆ ವಿಧಿಸುವ ಮೂಲಕ ಇಂಥದೊಂದು ಮುಕ್ತ ಚರ್ಚೆ ಏರ್ಪಡಲು ಸಹಾಯ ಮಾಡಿದವರಿಗೆ ಧನ್ಯವಾದಗಳು.
ಈ ಮೊದಲು ಆ ಮೂರು ದಿನ ಹೇಗೆ ನಿಭಾಯಿಸುತ್ತಿದ್ದರು?
ಹೊರಗೆ ಉಳಿದು ಏಕಾಂಗಿಯಾಗಿ ಆರಾಮವಾಗಿ ಮೂರು ದಿನ ಕಳೆಯುತ್ತಿದ್ದರೋ, ಅಥವಾ ಹೊರಗೆ ಗೇಯಬೇಕಾದ ಕಷ್ಟಕುಲದ ಶ್ರಮಿಕ ಹೆಣ್ಮಕ್ಕಳು ಅದೊಂದು ಅನಿವಾರ್ಯ ಕರ್ಮವೆಂದು ಹೊರೆ ಹೊತ್ತು ತಿರುಗುತ್ತಿದ್ದರೋ? ಯಾರಿಗೂ ಗೊತ್ತಿಲ್ಲ, ಯಾಕೆಂದರೆ ಯಾವ ಅಜ್ಜಿ ಮುತ್ತಜ್ಜಿಯೂ ವಿವರವಾಗಿ ಇವನ್ನೆಲ್ಲ ಹೇಳಲೇ ಇಲ್ಲ. ಒಂದಾನೊಂದು ಕಾಲದಿಂದ ಮುಟ್ಟಿನ ಅವಧಿಯಲ್ಲಿ ಸಾಮಾನ್ಯ ಹೆಣ್ಮಕ್ಕಳ ಪರಿಸ್ಥಿತಿ ಏನಾಗಿತ್ತು ಎಂದು ಯಾವ ಸಾಹಿತ್ಯವೂ ಉಲ್ಲೇಖಿಸಿಲ್ಲ. ವರ್ಷಗಟ್ಟಲೆ ಕಾಡಿನಲ್ಲುಳಿದ, ತಿಂಗಳುಗಟ್ಟಲೆ ರಾವಣ ನಗರದಲ್ಲಿದ್ದ ಸೀತೆ ಮುಟ್ಟಾದಾಗ ಏನು ಮಾಡಿದಳೋ ರಾಮಾಯಣ ತಿಳಿಸುವುದಿಲ್ಲ.
ಅಮ್ಮ ಪರ್ರನೆ ತನ್ನ ಮೆತ್ತನ್ನ ಹಳೆ ಸೀರೆಯನ್ನು ಚೌಕುಳಿ ಆಕಾರಕ್ಕೆ ಹರಿದು, ಮಡಚಿ ತೊಡೆ ಸಂದಿ ಬೀಳದಂತೆ ಇಟ್ಟುಕೋ ಎಂದದ್ದು ಬಹುಶಃ ಮುಟ್ಟಿನ ಸ್ರಾವವನ್ನು ಹೇಗೆ ನಿಭಾಯಿಸುವುದು ಎನ್ನುವ ಕುರಿತು ಹೇಳಿಕೊಡುವ ಮೊದಲ ಮತ್ತು ಕೊನೆಯ ಪಾಠ.
ಮೊದಮೊದಲ ದಿನಗಳಲ್ಲಿ ಅಮ್ಮನ ಮೇಲ್ವಿಚಾರಣೆ ಕೊಂಚ ಮಟ್ಟಿಗೆ ಇರುತ್ತದಾದರೂ ಬರಬರುತ್ತ ಅದು ಪ್ರತಿ ತಿಂಗಳ ಮಾಮೂಲಿ ರೇಜಿಗೆ, ರಗಳೆಯೆನಿಸಿಬಿಡುತ್ತದೆ. ಮೂರು ಪ್ಲಸ್ ಎರಡು ದಿನಗಳಲ್ಲಿ ತಾನು ಮೈಲಿಗೆಯವಳು ಎಂದು ಅವಳನ್ನು ನಂಬಿಸಿ ಮತ್ತಷ್ಟು ಕೀಳರಿಮೆ ಹುಟ್ಟಿಸಲಾಗುತ್ತದೆ. ಅಕಸ್ಮಾತ್ ಉಟ್ಟ ಬಟ್ಟೆ ರಕ್ತಕಲೆಯಾದರೆ ಅವಮಾನ. ಕನಿಷ್ಟ ಶುಚಿ, ಕಾಮನ್ಸೆನ್ಸ್ ಇಲ್ಲದ ಹೆಣ್ಣೆಂಬ ತಿರಸ್ಕಾರ. ಖಾಸಗಿ ಸ್ಥಳವಿರದ ಕಡೆ ಎಲ್ಲೆಲ್ಲೋ ಯಾವ್ಯಾವಾಗಲೋ ಮುಟ್ಟಾಗಿಬಿಟ್ಟರೆ ಕಂಗಾಲು. ಕರ್ಚೀಫು, ಕೈಗೆ ಸಿಕ್ಕ ಬಟ್ಟೆ, ಕಾಗದ, ಹತ್ತಿ ಏನೇನನ್ನೆಲ್ಲ `ಪ್ಯಾಡು’ಗಳಾಗಿಸಬೇಕಾದ ಅನಿವಾರ್ಯತೆ.
ಮಳೆಗಾಲದಲ್ಲಿ ಬಟ್ಟೆ ಒಣಗದೇ ಕಮಟು ನಾತ ಸೂಸುವಾಗ ಎಲ್ಲರೆದುರಿಗೆ ಅದನ್ನುಟ್ಟು ಹೋಗುವುದು ಹೇಗೆಂದು, ಅಕಸ್ಮಾತ್ ಬಿಸಿಲು ಮುಖ ಕಂಡಾಗ ಹೊರಗೆ ಒಣಗಿಸುವುದು ಹೇಗೆಂದು ಮುಜುಗರ. ಕುಡಿಯಲೇ ನೀರು ಸಿಗದ ಊರುಗಳಲ್ಲಿ ಮುಟ್ಟಿನ ಬಟ್ಟೆ ತೊಳೆಯಲು ಅನುಭವಿಸಬಹುದಾದ ಕಷ್ಟ ಊಹಾತೀತ. ಹೊರಗೆ ತಿರುಗಾಡಲು ಹೋಗುವಾಗ, ಶಾಲೆ ಕಾಲೇಜು ಕಚೇರಿಗೆ ಹೋಗುವಾಗ ಬಟ್ಟೆ ಬದಲಿಸಲು ಆಗದೇ, ಬದಲಿಸಿದರೆ ತೊಳೆಯಲಾಗದೇ, ಬಳಸಿದ್ದು ಬ್ಯಾಗಿನೊಳಗೆ ಇಟ್ಟುಕೊಳ್ಳಲಾಗದೆ, ಬಿಸಾಡಲಾಗದೇ .. ಅಯ್ಯಯ್ಯಯ್ಯೋ, .. ಯಾಕಾದರೂ ಈ ಕಾಲದಲ್ಲಿ ಹೊರಬಿದ್ದೆನೋ, ಯಾಕಾದರೂ ಹುಡುಗಿಯಾದೆನೋ ಅನಿಸುವಂತ ಮೂರು ದಿನದ ಅಪರಂಪಾರ ಕಷ್ಟ ಪರಂಪರೆ! ಇದು ಅನಾದಿಯಿಂದ ಹೆಣ್ಣು ಎದುರಿಸಿಕೊಂಡುಬಂದ ಒಳಸಂಕಟಗಳ ಸರಮಾಲೆ.
ಹೀಗಿರುತ್ತ ಬೇಕಾದಾಗ ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪ್ಕಿನ್ ಬಳಕೆಗೆ ಬಂದಾಗ ಸ್ವರ್ಗದಿಂದಿಳಿದು ಬಂದ ಒಂದು ವರದಂತೆ ಅದು ಹೆಣ್ಮಕ್ಕಳಿಗೆ ಕಂಡಿದ್ದರೆ ಅಚ್ಚರಿಯಿಲ್ಲ.
ಹೆಣ್ಣು ಕಲಿಕೆ-ದುಡಿಮೆಗೆ ಮನೆಯಿಂದ ಹೊರಬೀಳುವುದು ಹೆಚ್ಚಾಗುತ್ತ ಹೋದಂತೆ ಯಾವ ಕಾನೂನೂ ಇಲ್ಲದೆ, ಯಾವ ಜಾಹೀರಾತೂ ಇಲ್ಲದೆ, ಹಳ್ಳಿ ದಿಲ್ಲಿಯೆನದೆ ಸರಸರ ಸ್ಯಾನಿಟರಿ ಪ್ಯಾಡಿನ ಜನಪ್ರಿಯತೆ ಏರಿಬಿಟ್ಟಿತು. ಅದರ ಇರವು-ಬಳಕೆ ಕುರಿತು ಎಲ್ಲ ವರ್ಗ-ವಯೋಮಾನದ ಹೆಣ್ಮಕ್ಕಳೂ ಅರಿತರು. ಎಲಎಲಾ! ಎಷ್ಟು ಸುಲಭ, ಎಷ್ಟು ನಿರಾಳ! ಶಿಕ್ಷಣ-ಉದ್ಯೋಗವೆಂದು ಹೊರಗೆ ಓಡಾಡುವವರಿಗೆ, ನೀರಿರುವವರಿಗೆ, ಇಲ್ಲದವರಿಗೆ, ತಿರುಗಾಟ ಅನಿವಾರ್ಯವಾದವರಿಗೆ ಬಳಸಿ ಬಿಸಾಡುವ, ಸುಲಭದಲ್ಲಿ ಹೊತ್ತೊಯ್ಯಬಲ್ಲ ನ್ಯಾಪ್ಕಿನ್ ತುಂಬ ಆಪ್ತವೆನಿಸಿ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿತು. ಅಪಾಯವೋ, ನಿರಪಾಯವೋ, ಹಿಂದೆಮುಂದೆ ಯೋಚಿಸದೇ ಅದರ ಸುಲಭ ಬಳಕೆಗೆ ಎಲ್ಲರೂ ಮಾರುಹೋದರು.
ಅದು ಹೆಣ್ಮಕ್ಕಳನ್ನು ಬಾಧಿಸುತ್ತಿದ್ದ ಪ್ರಜನನ ಅಂಗಗಳ ಸೋಂಕುರೋಗದ ಪ್ರಮಾಣವನ್ನು ಗಮನಾರ್ಹವಾಗಿ ಕುಗ್ಗಿಸಿತು. ಆ ಮೂರು ದಿನಗಳಲ್ಲೂ ಧೈರ್ಯವಾಗಿ ಹೊರಹೋಗಲು, ಮಾಮೂಲಿಯಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಆತ್ಮವಿಶ್ವಾಸ ತುಂಬಿತು. 2011ರ ಸರ್ವೇ ಪ್ರಕಾರ ಈಗ ಭಾರತದ 12% ಹೆಣ್ಮಕ್ಕಳು ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದಾರೆ. ಈ ಆರು ವರ್ಷಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಾಗಿರಬಹುದು. ಈಗ ಒಂದಷ್ಟು ಮಹಿಳೆಯರಿಗೆ ಅದು ಅನಿವಾರ್ಯ ಅನಿಸಿರಲೂಬಹುದು.
ಆದರೆ ನಡುನಡುವೆ ಸ್ಯಾನಿಟರಿ ನ್ಯಾಪ್ಕಿನ್ ಬಳಕೆಯ ಮಿತಿಗಳು, ಅದರಿಂದಾಗಬಹುದಾದ ತೊಂದರೆಗಳ ಬಗೆಗೆ ದೀರ್ಘ ಚರ್ಚೆ, ವಾದವಿವಾದವೂ ನಡೆಯಿತು. ಅದು ಈಗಲೂ ನಡೆಯುತ್ತಿದ್ದು ಅದನ್ನು ಗಮನಿಸಬಹುದು.
ಸ್ಯಾನಿಟರಿ ಪ್ಯಾಡಿನ ಕುರಿತು ಇರುವ ಮುಖ್ಯ ತಕರಾರುಗಳು ಹೀಗಿವೆ:
ಅದು ತುಟ್ಟಿ. ನಮ್ಮಲ್ಲಿ ಲಭ್ಯವಿರುವ ಉತ್ತಮ ನ್ಯಾಪ್ಕಿನ್ಗಳು ಎಷ್ಟು ತುಟ್ಟಿಯೆಂದರೆ ಮುಕ್ಕಾಲುಪಾಲು ಜನ `ಬಡತನ ರೇಖೆ’ ಹತ್ತತ್ತಿರ ಬದುಕುವ ಭಾರತೀಯರಿಗೆ ಅದು ಕೈಗೆಟುಕದಂತಾಗಿದೆ. ಈಗ ಭಾರತದ 35.5 ಕೋಟಿ ಮುಟ್ಟಾಗುವ ಮಹಿಳೆಯರಲ್ಲಿ 70% ಮಹಿಳೆಯರು ಅಷ್ಟು ದುಡ್ಡು ಕೊಟ್ಟು ಪ್ಯಾಡ್ ಕೊಳ್ಳಲು ತಾವು ಸಮರ್ಥರಲ್ಲ ಎಂದೇ ಹೇಳಿದ್ದಾರೆ.
ಮತ್ತೊಂದು ಸಮಸ್ಯೆ ಬಳಸಿದ ಪ್ಯಾಡಿನ ವಿಲೇವಾರಿಯದು. ಪ್ರತಿತಿಂಗಳು ಭಾರತ ಒಂದು ಬಿಲಿಯನ್ (100 ಕೋಟಿ) ಕರಗದ ನ್ಯಾಪ್ಕಿನ್ ಪ್ಯಾಡುಗಳನ್ನು, 9000 ಟನ್ ಕರಗದ ನ್ಯಾಪ್ಕಿನ್ ಕಸವನ್ನು ತನ್ನ ಪರಿಸರಕ್ಕೆ ಸೇರಿಸುತ್ತಿದೆ! ಮೊದಲೇ ನಮ್ಮ ಕಸ ವಿಲೇವಾರಿ ಅಭ್ಯಾಸಗಳು ಆರೋಗ್ಯಕರವಾಗಿಲ್ಲ. ಬಳಸಿ ಬಿಸಾಡುವ ವಸ್ತುವನ್ನು ಎಲ್ಲಿ ಬಿಸಾಡಿದೆ, ಏನಾಯಿತು ಎಂಬ ಬಗೆಗೆ ಯೋಚಿಸುವುದಿಲ್ಲ. ಎಲ್ಲೆಂದರಲ್ಲಿ ನ್ಯಾಪ್ಕಿನ್ ಬಿಸಾಡಿ, ಹಾದಿಬೀದಿಗಳಲ್ಲಿ ನಾಯಿಗಳು ಎಳೆದಾಡಿ, ಚಿಂದಿ ಆಯುವವರ ಕೈಗಳ ಗಲೀಜು ಮಾಡಿ, ಸಾರ್ವಜನಿಕ ಟಾಯ್ಲೆಟ್ಟಿನಲ್ಲಿ ತುಂಬಿ ಅವು ಕಟ್ಟಿಕೊಳ್ಳುವಂತಾಗಿ – ನ್ಯಾಪ್ಕಿನ್ ಸೃಷ್ಟಿಸುವ ಅಪಾಯ, ಅಧ್ವಾನಗಳೇನು ಕಡಿಮೆಯಿಲ್ಲ.
ನಗರಗಳಲ್ಲಿ ಹೆಸರಿಗಾದರೂ ಕಸ ವಿಲೇವಾರಿಗೊಂದು ವ್ಯವಸ್ಥೆಯಿದೆ. ಅದು ಇಲ್ಲದ ಹಳ್ಳಿಗಳ ದೇಶ ಭಾರತದಲ್ಲಿ ಗ್ರಾಮೀಣ ಕಸ ಹೇಗೆ, ಎಲ್ಲಿ ವಿಲೇವಾರಿಯಾಗುತ್ತದೆಂದು ಯಾವ ಸ್ವಚ್ಛ ಭಾರತ ಮಿಷನಿನವರೂ ತಲೆ ಕೆಡಿಸಿಕೊಂಡಿಲ್ಲ. ಹಳ್ಳಿಗಳಲ್ಲಿ ಊರ ಹೊರಗಿನ ರಸ್ತೆ, ಮೈದಾನ, ತಿಪ್ಪೆ, ಕಾಡು, ಗುಡ್ಡಗಳಲ್ಲಿ ಪ್ಲಾಸ್ಟಿಕ್ಕೂ, ಅದರೊಳಗೆ ತುಂಬಿ ಚೆಲ್ಲಾಡಲ್ಪಟ್ಟ ನ್ಯಾಪ್ಕಿನ್ನುಗಳೂ ಕಾಣುತ್ತವೆ.
ನ್ಯಾಪ್ಕಿನ್ನುಗಳು ಮಣ್ಣಲ್ಲಿ ಕರಗಲಾರವು. ಏಕೆಂದರೆ ಅವು ಲೀಕ್ ಪ್ರೂಫ್ ಆಗಲು ಪ್ಲಾಸ್ಟಿಕ್ ಹೊರಕವಚ ಹೊಂದಿವೆ. ಎಂದೇ ವರ್ಷಾನುಗಟ್ಟಲೆ ಹಳೆಯ ಮುಟ್ಟಿನ ಪಳೆಯುಳಿಕೆಗಳನ್ನು ನ್ಯಾಪ್ಕಿನ್ನುಗಳ ರೂಪದಲ್ಲಿ ಕಾಣುವಂತಾಗಿದೆ. ಅವನ್ನು ಸುಡುವುದೂ ಅಪಾಯ, ಯಾಕೆಂದರೆ ರೇಯಾನ್ ಡಯಾಕ್ಸಿನ್ ಎಂಬ ವಿಷಕಾರಕವನ್ನು ಹೊಂದಿರುತ್ತದೆ. ಪ್ಯಾಡನ್ನು ಸುಟ್ಟಾಗ ಹೊರಸೂಸುವ ಡಯಾಕ್ಸಿನ್ ಪರಿಸರಕ್ಕೆ ಹಾನಿಕಾರಕವಾಗಿದೆ. ಅಕಸ್ಮಾತ್ ಸೋಂಕಿರುವ ರಕ್ತದ ಪ್ಯಾಡನ್ನು ತಿನ್ನುವುದು ಪಶುಪಕ್ಷಿ ಕ್ರಿಮಿಕೀಟಗಳಿಗೂ ಅಪಾಯಕಾರಿಯಾಗಿದೆ.
ನ್ಯಾಪ್ಕಿನ್ ತಯಾರಿಯ ಬಗೆಗೆ ಬಹುಪಾಲು ಜನರಿಗೆ ತಿಳಿದಿರುವುದಿಲ್ಲ. ಅದನ್ನು ಕಂಪನಿಗಳು ತಿಳಿಸುವುದೂ ಇಲ್ಲ. ಅದರಲ್ಲಿ ಬಳಸುವ ಹಲವು ಕಚ್ಛಾ ವಸ್ತುಗಳು ಪೆಟ್ರೋಲಿಯಂ ಹಾಗೂ ಅರಣ್ಯ ಉಪ ಉತ್ಪನ್ನಗಳು. ಹತ್ತಿ, ಪ್ಲಾಸ್ಟಿಕ್ ಮತ್ತು ಮರದ ಹೊಟ್ಟು-ತಿರುಳಿನಿಂದ ತಯಾರಾಗುವ ಸಿಂಥೆಟಿಕ್ ರೆಯಾನ್ ಬಳಸಿ ಅವನ್ನು ತಯಾರಿಸಲಾಗುತ್ತದೆ. ನ್ಯಾಪ್ಕಿನ್ ಬಳಕೆಯಿಂದ ಯೋನಿ ಸೋಂಕು, ತುರಿಕೆ, ಬಿಳಿ ಮುಟ್ಟು, ಫಂಗಸ್ ಸೋಂಕು ಉಂಟಾಗುವುದು ಈ ಕಚ್ಛಾವಸ್ತುಗಳಿಂದ. ಅದರಲ್ಲು ರಕ್ತ ಹೀರಿಕೊಳ್ಳುವುದು ವೇಗವಾಗಲೆಂದು ಬಳಸುವ ಪಾಲಿಆಕ್ರಿಲೇಟ್ ಜೆಲ್ ಮತ್ತಿತರ ರಾಸಾಯನಿಕಗಳು, ಲೀಕ್ ಪ್ರೂಫ್ ಆಗಲು ಬಳಸುವ ಪಾಲಿ ಇಥಿಲೀನ್, ಪರಿಮಳಕ್ಕೆಂದು ಬಳಸುವ ರಾಸಾಯನಿಕಗಳು ಈ ದುಷ್ಪರಿಣಾಮಗಳಿಗೆ ಕಾರಣವಾಗಿವೆ. ಅಲ್ಲದೆ ಒಬ್ಬ ಮಹಿಳೆ ಜೀವಿತಾವಧಿಯ 30-40 ವರ್ಷ ನಿರಂತರ ಡಯಾಕ್ಸಿನ್ ಸಂಪರ್ಕಕ್ಕೆ ಬರುವುದರಿಂದ, ಅದು ಯೋನಿಯ ಒಳ ಲೋಳ್ಪೊರೆಯ ಸಂಪರ್ಕಕ್ಕೆ ಬರುವುದರಿಂದ ಕ್ಯಾನ್ಸರ್ ರೋಗಕಾರಕವಾಗಬಹುದು ಎಂಬ ಶಂಕೆಯಿದೆ.
ಈ ವಾದಗಳಲ್ಲಿ ಹುರುಳಿರಬಹುದು, ಇಲ್ಲದಿರಬಹುದು ಆದರೆ ಹೆಣ್ಮಕ್ಕಳು ತುಟ್ಟಿಯಾದರೂ ನ್ಯಾಪ್ಕಿನ್ ಕೊಂಡು, ಬಳಸಿ, ಹೇಗೋ ವಿಲೇವಾರಿ ಮಾಡಿ ಎಷ್ಟು ಒಗ್ಗಿದ್ದಾರೆಂದರೆ ಅವರು ಮರಳಿ `ಬಟ್ಟೆಯ ದಿನ’ಗಳಿಗೆ ಹೋಗಲಾರದವರಾಗಿದ್ದಾರೆ. ನಾವು ದಿನೇದಿನೇ `ಬಳಸಿ ಬಿಸಾಡುವ’ ವಸ್ತುಗಳ ದಾಸರಾಗುತ್ತಿದ್ದೇವೆ. ಅಪಾರ ಪ್ರಮಾಣದ ಮರುಬಳಸಲಾಗದ, ಪರಿಸರಕ್ಕೆ ಅಪಾಯಕಾರಿಯಾದ ಕಸ ಉತ್ಪತ್ತಿ ಮಾಡುತ್ತಿದ್ದೇವೆ. ಅದರ ಒಳಿತು ಕೆಡುಕುಗಳ ಬಗೆಗೆ ಕಿಂಚಿತ್ ಯೋಚಿಸದೆ ಈಗ ಬಟ್ಟೆಯಿಂದ ಪ್ಯಾಡಿಗೆ ಬಂದಿದ್ದೇವೆ. ಆದರೂ ಮರುಚಿಂತಿಸಬೇಕಾದ ಹೊತ್ತು ಬಂದಿದೆ.
ಹಾಗಾದರೆ ಪರಿಸರಸ್ನೇಹಿಯಾಗಿ ಹೇಗೆ `ಮುಟ್ಟ’ನ್ನು ನಿಭಾಯಿಸುವುದು?
ಯಾರಿಗೆ ಸಮಯ, ನೀರು, ಸಹನೆ ಲಭ್ಯವೋ ಮತ್ತು ಸಾಧ್ಯವೋ ಅವರು ಹಳೆಯ ವಿಧಾನಕ್ಕೆ ಮರಳಬಹುದು. ಶುದ್ಧ, ಒಣ, ಹತ್ತಿಯ ಬಟ್ಟೆಗಳನ್ನು ಬಳಸಬಹುದು.
ಸರ್ಕಾರ ಸಹಾಯ ಧನ ನೀಡಿ ಪರಿಸರ ಸ್ನೇಹಿ ನ್ಯಾಪ್ಕಿನ್ಗಳನ್ನು ಅತಿ ಕಡಿಮೆ ದರದಲ್ಲಿ ತಯಾರಿಸಲು ಉತ್ತೇಜಿಸಬೇಕು. ಅವಶ್ಯವಾಗಿ ನ್ಯಾಪ್ಕಿನ್ಗಳಿಗೆ ಸೂಕ್ತ ವಿಲೇವಾರಿ ವಿಧಾನ ತಿಳಿಸಿ ಹೇಳಬೇಕು. ತಮಿಳುನಾಡಿನ ಕೊಯಮತ್ತೂರಿನ ಅರುಣಾಚಲಂ ಮುರುಗನಾಥನ್, ಗೋವಾದ ಪಿಳ್ಗಾಂವ್ ಹಳ್ಳಿಯ ಸ್ವಸಹಾಯ ಸಂಘ ಸಹೇಲಿ ಮತ್ತಿತರರು ಕಡಿಮೆ ಬೆಲೆಯ ಪರಿಸರ ಸ್ನೇಹಿ, ಮಣ್ಣಿನಲ್ಲಿ ಕರಗುವ ನ್ಯಾಪ್ಕಿನ್ನುಗಳನ್ನು ತಯಾರಿಸುತ್ತಿದ್ದಾರೆ. ಗೋವಾ ಹಳ್ಳಿಯ ಮಹಿಳೆಯರು 8 ದಿನದಲ್ಲಿ ಮಣ್ಣಿನಲ್ಲಿ ಕರಗುವ ನ್ಯಾಪ್ಕಿನ್ ತಯಾರಿಸಿರುವುದಾಗಿ ಹೇಳಿದ್ದಾರೆ. ಈ ಕುರಿತ ಸತ್ಯಾಸತ್ಯತೆಯನ್ನು ಸಂಶೋಧನೆಗೊಳಪಡಿಸಿ ಸರ್ಕಾರ ಸಹಾಯ ಧನ ಒದಗಿಸಿ ಉತ್ತೇಜಿಸಬೇಕು.
ಯೋನಿಯೊಳಗಿಟ್ಟುಕೊಳ್ಳುವ ಸಣ್ಣ ಕೊಳವೆಯಂತಹ ಟ್ಯಾಂಪೂನುಗಳು ಬಳಕೆಯಲ್ಲಿವೆ. ಆದರೆ ಅದಕ್ಕೆ ಬಳಸುವ ಕಚ್ಛಾವಸ್ತುಗಳು ಸ್ಯಾನಿಟರಿ ಪ್ಯಾಡಿನವೇ ಆಗಿದ್ದು ವಿಲೇವಾರಿ ಸವಾಲಿನದಾಗಿದೆ.
ಇದರ ಜೊತೆಗೆ ಒಂದು ಪರ್ಯಾಯವಿದೆ. ಆ ಕುರಿತು ಬರೆಯಲೇಬೇಕು. ಅದು `ಮುಟ್ಟಿನ ಬಟ್ಟಲು’ ಅಥವಾ `ಮೆನ್ಸ್ಟ್ರುವಲ್ ಕಪ್’. ಅಥವಾ ಶಿ ಕಪ್, ಸಿಲ್ಕಿ ಕಪ್, ಗ್ರೀನ್ ಕಪ್, ದಿವಾ ಕಪ್ (ಕೆನಡ), ಮೂನ್ ಕಪ್ (ಯುಕೆ)..
ಇವೆಲ್ಲ `ಮುಟ್ಟಿನ ಬಟ್ಟಲು’ಗಳು. ಅಥವಾ ಮೆನ್ಸ್ಟ್ರುವಲ್ ಕಪ್ಸ್. ಮಕ್ಕಳಿಗೆ ಬಾಟಲಿ ಹಾಲು ಕುಡಿಸುವಾಗ ಬಳಸುವ ಸಿಲಿಕಾನ್ ನಿಪ್ಪಲ್ ನೋಡಿರುತ್ತೀರಿ. ಅಂಥದೇ ಮೆತ್ತನ್ನ ಆದರೆ ಧೃಢವಾದ ಮುಟ್ಟಿನ ಬಟ್ಟಲುಗಳು ಬಂದಿವೆ. ತಿರುಗಿಸಿಟ್ಟ ಗಂಟೆಯಾಕಾರದ ಇವುಗಳ ಬುಡದಲ್ಲಿ ಒಂದು ಚೊಟ್ಟು ಇರುತ್ತದೆ. ಒಂದು ಕಾಲನ್ನು ಕುರ್ಚಿ ಅಥವಾ ಕಮೋಡಿನ ಮೇಲಿಟ್ಟು ಇನ್ನೊಂದು ಕಾಲಿನ ಮೇಲೆ ನಿಂತು ಅದನ್ನು ಹಾಕಿಕೊಳ್ಳಬಹುದು. ತುದಿ ಮಡಚಿ ಯೋನಿಯೊಳಗೆ ತುಂಬಿ ಒಮ್ಮೆ ತಿರುಪಿದಂತೆ ಸರಿಸಿದರೆ ಮುಗಿಯಿತು, ಒಳಹೋಗಿ ಸರಿಯಾಗಿ ಹಿಡಿದು ಕೂರುತ್ತದೆ. ಅವರವರ ರಕ್ತಸ್ರಾವಕ್ಕೆ ತಕ್ಕಂತೆ 4 ರಿಂದ 12 ತಾಸಿಗೊಮ್ಮೆ ಅದನ್ನು ಬದಲಿಸಬೇಕಾಗುತ್ತದೆ. ಅದರ ಬುಡದ ನಿಪ್ಪಲಿನಂತಹ ಚೊಟ್ಟು ಎಳೆದರೆ ಹೊರಬರುತ್ತದೆ. ಹೊರತೆಗೆದು, ತೊಳೆದು ಮತ್ತೆ ಬಳಸಬೇಕು. ತಿಂಗಳ ಸ್ರಾವ ಮುಗಿದ ಕೂಡಲೇ ನೀರಲ್ಲಿ ಕುದಿಸಿ, ಒಣಗಿಸಿ, ಇಟ್ಟುಕೊಂಡರೆ 10 ವರ್ಷದ ತನಕ ಬಳಸಬಹುದು.
ಅವರವರ ಎತ್ತರ, ಗಾತ್ರ, ಸ್ರಾವದ ಪ್ರಮಾಣದ ಮೇಲೆ ಭಿನ್ನ ಅಳತೆಯ ಕಪ್ಗಳು ಲಭ್ಯವಿವೆ. ಶಿ ಕಪ್ 28 ಎಂಎಲ್ ಹಿಡಿಯುತ್ತದೆ. ದಿವಾ ಕಪ್ 30 ಎಂಎಲ್. ಸಾಧಾರಣವಾಗಿ ತಿಂಗಳ ಸ್ರಾವ 35 ಎಂಎಲ್ ಇರುತ್ತದೆ. ಅದು 10-80 ಎಂಎಲ್ ತನಕವೂ ಇರಬಹುದು. ಏನಾದರೂ ಸ್ರಾವದ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ ಒಮ್ಮೆ, ರಾತ್ರಿ ಒಮ್ಮೆ ಕಪ್ ಬರಿದುಮಾಡಿ ತೊಟ್ಟುಕೊಂಡರೆ ಸಾಕಾಗುತ್ತದೆ.
ಒಬ್ಬ ಮಹಿಳೆ ಸರಾಸರಿ 30-40 ವರ್ಷ ಮುಟ್ಟಿನ ಸ್ರಾವಕ್ಕೊಳಗಾಗುತ್ತಾಳೆ. ಇಡಿಯ ಜೀವಮಾನಕ್ಕೆ 4 ಕಪ್ ಸಾಕು. ಒಂದರ ಬೆಲೆ 500 ರೂಪಾಯಿ. 10 ವರ್ಷಕ್ಕೆ 500 ರೂಪಾಯಿ, ಒಂದು ವರ್ಷಕ್ಕೆ 50 ರೂಪಾಯಿ, ತಿಂಗಳಿಗೆ 4 ರೂಪಾಯಿ ಖರ್ಚು!
ಇದು ಐದಾರು ದಶಕಗಳಿಂದ ಅಮೆರಿಕ, ಕೆನಡ, ಯುಕೆ ಮತ್ತಿತರ ಕಡೆ ಬಳಕೆಯಲ್ಲಿದೆ. ಭಾರತದಲ್ಲೂ ಬಳಸಲ್ಪಡುತ್ತಿದೆ. ಆದರೆ ವೈದ್ಯಕೀಯವಾಗಿ ಸುರಕ್ಷಿತವೆಂದು ಸೂಚಿಸಲ್ಪಟ್ಟರೂ ಕನ್ಯತ್ವ ಹೋದೀತು ಎಂದು ಹೆದರಿ, ಮತ್ತಿನ್ನೇನೇನೋ ಆದೀತು ಎಂದು ಹೆದರಿ, ತನ್ನ ಅಂಗದೊಳಗೆ ತಾನೇ ಏನನ್ನೋ ತೂರಿಸಿ ಇಟ್ಟುಕೊಳ್ಳಲು ಹೆದರಿ ಮಹಿಳೆಯರು ಪ್ಯಾಡಿನಷ್ಟು ಸುಲಭವಾಗಿ ಅದಕ್ಕೆ ಒಗ್ಗಿಕೊಂಡಿಲ್ಲ. ಜೊತೆಗೆ ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್ ಮಾರಿದರೆ ಬರುವಷ್ಟು ಲಾಭ 10 ವರ್ಷ ಬಾಳಿಕೆ ಬರುವ ಕಪ್ ಮಾರಿದರೆ ಬರುವುದಿಲ್ಲವಾದ್ದರಿಂದ ಕಂಪನಿಗಳು ತಯಾರಿಗೆ ಮುಂದೆ ಬರುತ್ತಿಲ್ಲ.
ಆದರೆ ಇದು ನಮ್ಮ ಭವಿಷ್ಯದ ಪರಿಣಾಮಕಾರಿ, ಸುರಕ್ಷಿತ, ಪರಿಸರ ಸ್ನೇಹಿ, ಕಾಸ್ಟ್ ಎಫೆಕ್ಟಿವ್ ಪರ್ಯಾಯ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಎಂದೇ ಸರ್ಕಾರ ಈ ಮುಂಚೆ ನಿರೋಧ್ ತಯಾರಿಸಿ ಪುಕ್ಕಟೆ ವಿತರಿಸಿದಂತೆ ಈ ಕಪ್ಗಳನ್ನೂ ತಯಾರಿಸಿ ಬಳಸಲು ಕೊಡುವುದು ಅವಶ್ಯವಾಗಿದೆ.
ಮುಟ್ಟು ಎನಲು ಹಿಂಜರಿಕೆ. ಮುಟ್ಟಿನ ಬಟ್ಟೆ ತೊಳೆದು ಬಿಸಿಲಿಗೆ ಒಣಗಿಸಲು ಹಿಂಜರಿಕೆ. ನಮ್ಮ ಅಂಗಾಂಗಗಳ ಮುಟ್ಟಿಕೊಳಲೂ ಹಿಂಜರಿಕೆ. ಅದರ ಬಗೆಗೆ ಮಾತನಾಡಲೂ ಹಿಂಜರಿಕೆ. ಏನು ಮಾಡುವುದೆಂದು ಕೇಳಲೂ ಹಿಂಜರಿಕೆ. ಹೇಳಿದ್ದನ್ನು ಕೇಳಿಸಿಕೊಳ್ಳಲೂ ಹಿಂಜರಿಕೆ. ಅನುಸರಿಸಲೂ ಅನುಮಾನ ಭರಿತ ಹಿಂಜರಿಕೆ.
ಅವನ್ನೆಲ್ಲ ದಾಟಿ ಅಂಥ ಒಂದು ದಿನ ಬಂದೀತು, ಆಗ ಹೆಣ್ಮಕ್ಕಳೆಲ್ಲ ತಮ್ಮ ದೇಹವನ್ನು ಸ್ನೇಹಭಾವದಿಂದ ನೋಡಿಯಾರು. ಪ್ಯಾಡು, ಟ್ಯಾಂಪೂನ್, ಕಪ್ಪುಗಳು ಅವರಿಗೆ ಮಾತ್ರ ಅಲ್ಲ, ಅವರನ್ನು ಹೆತ್ತ ಭೂಮಿಗೂ ಸ್ನೇಹಿಯಾಗುವಂತಾದೀತು.






ಗೂಗಲ್‍ನಲ್ಲಿ ಹುಡುಕಿದಾಗ ನೀವು ಬರೆದಿರುವ ಉಪಯುಕ್ತ ಹೆಚ್ಚಿನ ಮಾಹಿತಿ ದೊರೆಯಿತು. ಆದರಿದು ಹಣವಂತರ ಕೈಗೆಟುಕುವ ಮೌಲ್ಯದ್ದು. ಒಂದು ಸಲಕ್ಕೆ 400-800 ರೂ.ಗಳನ್ನು ಹೂಡಿಕೆ ಮಾಡುವಷ್ಟು ಸುಮಾರು 75-90 ಪ್ರತಿ ಶತ ಜನರಿಗೆ ಸಾಧ್ಯವಿರಲಿಕ್ಕಿಲ್ಲ. ಸರಕಾರ ಈ ವಿಷಯದತ್ತ ತೀವ್ರ ಗಮನ ಹರಿಸಿ ಇದರ ಬೆಲೆಯು ಸಾಮಾನ್ಯರ ಕೈಗೆಟುಕುವಂತೆ ಮಾಡಿ ಇದರ ಬಗ್ಗೆ ಜನರಲ್ಲಿ ವ್ಯಾಪಕ ಪ್ರಚಾರ ಮಾಡಿ ಉತ್ತಮ ತಿಳಿವಳಿಕೆ ಮೂಡುವಂತೆ ಪ್ರಯತ್ನಿಸಬೇಕು. ಹಾಗಾದಲ್ಲಿ ಮಾತ್ರ ಸಾಧ್ಯವಿರುತ್ತದೆ. ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಲೇಬೇಕು.
ಇದು ನಿಸ್ಸಂಶಯವಾಗಿ ಮುಖ್ಯವೂ ಮತ್ತು ತುರ್ತೂ ಆದ ವಿಷಯ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂತಹ ಅನೇಕ ಹೆಣ್ಣುಮಕ್ಕಳು ಈ ಲೇಖನದಲ್ಲಿ ವಿವರಿಸಿರುವ ಹಿಂಸೆಗೆ ಒಳಗಾಗಿಯೇ ಇರುತ್ತಾರೆ. ಸದ್ಯ, ಈಗ ಹಳ್ಳಿಯಲ್ಲಿ ಕೂಡ ನ್ಯಾಪ್ಕಿನ್ ಬಳಕೆ ಬಂದಿದೆ. ಆದರೆ ಅವು ತರುವ ಕೋಟಲೆ ನೋಡಿದರೆ ತುರ್ತಾಗಿ ಅವನ್ನೀಗ ತೊರೆಯುವುದೇ ಸರಿ ಅನ್ನಿಸುತ್ತದೆ. ಶಿ ಕಪ್ ಬಳಕೆ ಇದ್ದುದ್ದರಲ್ಲಿ ಒಳ್ಳೆಯದು. ಅವುಗಳ ದುಬಾರಿಯೇ ಈಗ ದೊಡ್ಡ ಅಡ್ಡಿ. ಖಾಸಗಿ ಸಂಸ್ಥೆಗಳು ಬೆಲೆ ಇಳಿಸಿ ಕೈ ಸುಟ್ಟುಕೊಳ್ಳುವ ಆದರ್ಶ ಪಾಲನೆ ಮಾಡುತ್ತವೆಂಬುದು ಕನಸಿನ ಮಾತು. ನಾನು ಈ ಮೂಲಕ ನಮ್ಮ ಅಭಿಮಾನದ ಮಂತ್ರಿ ಉಮಕ್ಕ ಅವರನ್ನು ದಯವಿಟ್ಟು ಈ ಕಡೆಗೊಮ್ಮೆ ನೋಡಿ ಎಂದು ಕೋರುತ್ತೇನೆ . ಅವರು ಅಂತಃಕರಣದವರು, ಹಳ್ಳಿ ಹೆಣ್ಣುಹುಡುಗಿಯರ ಈ ಸಮಸ್ಯೆ ಅರ್ಥ ಮಾಡಿಕೊಳ್ಳ ಬಲ್ಲವರು. ಮೇಡಮ್ ಒಮ್ಮೆ ಇತ್ತ ನೋಡಿ, ಇದು ನಿಜವಾಗಿಯೂ ತುರ್ತು. ಈಗಿನ ಅಹಾರ ಇತ್ಯಾದಿ ಕಾರಣ ದಿಂದ ಎಂಟು ಒಂಭತ್ತು ವರ್ಷಕ್ಕೆಲ್ಲ ನಮ್ಮ ಪುಟ್ಟ ಪುಟ್ಟ ಹೆಣ್ಣುಮಕ್ಕಳು ರುತುಸ್ರಾವಕ್ಕೆ ಈಡಾಗಿಬಿಡುತ್ತಿದ್ದಾರೆ. ಅವರ ದೇಹಲಕ್ಷಣವೆ ಅವರನ್ನು ಹಿಂಡುವುದು ಬೇಡ. ಸರ್ಕಾರ ಬಡವರ್ಗದ ಹೆಮ್ಮಕ್ಕಳಿಗೆ ಪೂರಾ ಉಚಿತವಾಗಿಯೆ ಈ ಶಿ ಕಪ್ ಒದಗಿಸಿದರೆ ಬಹಳ ಉಪಕಾರವಾಗುತ್ತದೆ. ಮಧ್ಯಮ ವರ್ಗದವರಿಗೆ ಬೆಲೆ ರಿಯಾಯಿತಿ ಕೊಟ್ಟರೆ ಅವರಿಗೂ ಮಹದುಪಕಾರ ಇದು. ನಮ್ಮ ಎಲ್ಲ ಮಹಿಳಾ ಸಂಘಟನೆಗಳೂ ಇತ್ತ ನೋಡುತ್ತವೆಂದುಕೊಂಡಿರುವೆ.
ಬಹಳ ಇಷ್ಟವಾಯ್ತು ಈ ಬರಹ
ಇಡೀ ಈ ನಾಪ್ಕಿನ್ ನಾಟಕದಲ್ಲಿ ಸೆನ್ಸಿಬಲ್ ಆದ ಒಂದು ಬರವಣಿಗೆ ಎಂದರೆ ಇದು..
ಈಗೀಗ ಸಾರ್ವಜನಿಕ ಅಭಿಪ್ರಾಯಗಳೂ, ಮತ್ತು ಅವುಗಳನ್ನು ವ್ಯಕ್ತಪಡಿಸುವ ಜಾಗಗಳೂ ಎಷ್ಟು ಪೂರ್ವಗ್ರಹಪೀಡಿತವಾಗಿಬಿಟ್ಟಿವೆ ಎಂದರೆ ಪ್ರತಿಯೊಬ್ಬರೂ ಬರೆಯಲು ಹೊರಡುವ ಮಾಡಲೇ ತಮ್ಮ ತಮ್ಮ ಪಕ್ಷಕ್ಕೆ ಬದ್ಧರಾಗಿಬಿಟ್ಟಿರುತ್ತಾರೆ, ಅವರಿಗೆ ವಿಷಯಕ್ಕಿಂತಲೂ ತಮ್ಮ ಪಕ್ಷಗಳನ್ನು ಸಮರ್ಥಿಸಿಕೊಳ್ಳುವುದೇ ಪರಮ ಮುಖ್ಯವಾದ ಗುರಿ!
ಅದರಲ್ಲೂ ಯಾರಾದರೂ “ಭಕ್ತ” ಎಂಬ ಪದವನ್ನು ಉಪಯೋಗಿಸಿದ ಕೂಡಲೇ ಅವರು ಪೆದ್ದಗುಂಡನ ಪಕ್ಷದವರು ಎಂಬುದು ಪಕ್ಕ ಮತ್ತು ಅವರು ಏನು ಬರೆದಿರಬಹುದು ಎಂಬುದು ಕೂಡಲೇ ತಿಳಿದು ಹೋಗಿ ಅದೇ spoiler ತರಹ ಕೆಲಸ ಮಾಡಿ ಮುಂದೆ ಓದುವುದೆಲ್ಲಾ ಬರೀ ಮನರಂಜನೆಗೆ ಮಾತ್ರ ಎಂದು ಗ್ಯಾರಂಟಿ ಆಗುತ್ತದೆ!