ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನು ಬೆಳೆಸಿದ ಗುಲಾಬಿಯ ತೋಟ

l-218061750.jpg

ನಸ್ಸಿನೆದುರು ಬಂದು ಮಾತಿಗೆ ಕೂಡುತ್ತದೆ. ಆಗೆಲ್ಲ ನೆನಪಿನಲ್ಲಿ ಬೃಹತ್ ರೂಪಿಯಾಗಿ ನಿಲ್ಲುತ್ತಾನೆ ಆತ. ಅವನ ಹೆಸರು ಅದೇಕೋ ಮರೆವಿನ ಪದರುಗಳಡಿ ಸಿಕ್ಕಿ ಹಾಕಿಕೊಂಡು ಕಳೆದುಹೋಗಿದೆ. ಆದರೆ ಅವನ ರೂಪವನ್ನು ಮಾತ್ರ ಮನಸ್ಸು ಸ್ವಲ್ಪವೂ ಮರೆತಿಲ್ಲ. ಮಹಾಮೌನಿಯಂತೆ ತೋರುತ್ತಿದ್ದವನ ಕಣ್ಣುಗಳಲ್ಲಿನ ಹೊಳಪು – ಏನನ್ನೋ ಹೇಳಲೆಂದೇ ಸದಾ ಚಲಿಸುತ್ತಿದ್ದಂತಹ ಹೊಳಪು ಇಂದಿಗೂ ಎದೆಯಾಳವನ್ನು ಕಲಕುತ್ತಲೇ ಇದೆ. ಇಲ್ಲದಿರುವುದು ಅವನೇ.

ನಾವಾದರೂ ಎಷ್ಟನೇ ಕ್ಲಾಸಿನಲ್ಲಿದ್ದೆವು ಆಗ. ಐದೋ, ಆರನೆಯ ತರಗತಿಯಲ್ಲಿ ಓದಿಕೊಳ್ಳುತ್ತಿದ್ದವರಿಗೆ ಗೆಳೆತನ, ಪ್ರೀತಿ, ಸಂಬಂಧಗಳು – ಇವಾವುದರ ಬಗ್ಗೆಯೂ ನಿಖರವಾದ ಅರಿವು ಖಂಡಿತ ಇದ್ದಿರಲಿಲ್ಲ. ಅದ್ಯಾವುದೋ ಒಂದು ದಿನ ಆತ ತನ್ನ ಮನೆಯಲ್ಲಿನ ಗುಲಾಬಿ ಗಿಡದಿಂದ ಕೆಂಪು ಗುಲಾಬಿ ತಂದು ನನ್ನ ಕೈಗೆ ಕೊಟ್ಟ. ಲಂಗ, ಕುಪ್ಪಸದ ಪುಟಾಣಿ ಚೆಲುವೆಯಾಗಿದ್ದ ನನಗೆ ಅದೆಂಥ ಖುಷಿಯಾಗಿತ್ತೆಂಬುದನ್ನು ಹೇಳಲು ಇವತ್ತು ಶಬ್ದಗಳು ನೆರವಾಗುತ್ತಿಲ್ಲ.

ಅಂದು ಹಾಗೆ ಕೆಂಪು ಗುಲಾಬಿ ತಂದು ಕೊಟ್ಟ ನನ್ನ ಕ್ಲಾಸಿನ ಆ ಹುಡುಗ ಮರುದಿನವೂ ಮತ್ತೊಂದು ಗುಲಾಬಿ ತಂದ. ಮಾರನೇ ದಿನವೂ, ಅದರ ಮಾರನೇ ದಿನವೂ ತಂದ. ತರುತ್ತಲೇ ಉಳಿದ. ಯಾವತ್ತಿನಿಂದ ಆರಂಭವಾಯಿತು ಎಂಬ ಲೆಕ್ಕಾಚಾರವನ್ನು ಮೀರಿ ಅದು ಅವನಿಗೆ ನಿತ್ಯದ ರೂಢಿಯಾಯಿತು. ನಾನು ನಿಜವಾಗಿಯೂ ಅವನು ತಂದು ಕೊಡುವ ಆ ಗುಲಾಬಿಗಾಗಿ ಕಾಯುತ್ತಿದ್ದೆ.

ನಿತ್ಯವೂ ಗುಲಾಬಿ ಹೂ ತಂದು ಕೊಡುತ್ತಿದ್ದ ಆತ ಅದೊಂದು ದಿನ ಬರಲೇ ಇಲ್ಲ. ಅವನು ತಂದು ಕೊಡುವ ಗುಲಾಬಿಗಾಗಿ ಕಾದಿದ್ದ ನನಗೆ ಚಡಪಡಿಕೆಯಾಗಿತ್ತೆಂಬುದು ಈಗಲೂ ನೆನಪಿದೆ. ಎಂದೂ ಕ್ಲಾಸು ತಪ್ಪಿಸದವನು ಅಂದು ಬರಲಿಲ್ಲ. ಹೂ ತಂದು ಕೊಡಲು ಆರಂಭಿಸಿದಂದಿನಿಂದ ಒಂದು ದಿನವೂ ಹೂವನ್ನು ತರಲು ಮರೆತಿರದವನು ಅಂದು ಬರಲೇ ಇಲ್ಲ. ಮಧ್ಯಾಹ್ನದ ಹೊತ್ತಿಗೆ ಆ ಸುದ್ದಿ ಶಾಲೆಯನ್ನು ತಲುಪಿತ್ತು. ಆತ ಇನ್ನೆಂದೂ ಬರುವುದೂ ಸಾಧ್ಯವಿರಲಿಲ್ಲ. ಸಾವು ಆತನನ್ನು ಕರೆದುಬಿಟ್ಟಿತ್ತು.

ಅಂದು ಅಸ್ಪಷ್ಟವಾಗಿ ಆವರಿಸಿದ ಶೂನ್ಯ ಭಾವ ಇಂದಿಗೂ ನನ್ನನ್ನು ಆವರಿಸಿಕೊಂಡೇ ಇದೆಯೇನೋ ಅನ್ನಿಸುತ್ತದೆ. ಅವನೇಕೆ ಶಾಲೆಯ ಇತರ ಹುಡುಗಿಯರನ್ನೆಲ್ಲ ಬಿಟ್ಟು ನನಗೇ ಗುಲಾಬಿ ಹೂ ತಂದುಕೊಡುತ್ತಿದ್ದ? ಅವನ ಕಣ್ಣ ಹೊಳಪಿನಲ್ಲಿ ಚಲಿಸುತ್ತಿದ್ದುದು ನನ್ನ ಬಗೆಗಿನ ಪ್ರೇಮವಾಗಿತ್ತೆ ಅಥವಾ ಅಂಥದಾವುದೂ ಅಲ್ಲದ ಸ್ನೇಹ ಮಾತ್ರದ ಭಾವವಾಗಿತ್ತೆ? ಇಂಥ ಹಲವು ಪ್ರಶ್ನೆಗಳು ಈಗಲೂ ಕಾಡುತ್ತಲೇ ಇವೆ.

ಅವನು ಬದುಕಿಯೇ ಉಳಿದಿದ್ದರೆ ನಮ್ಮಿಬ್ಬರ ನಡುವೆ ಇಂದು ಎಂಥ ಬಗೆಯ ಸಂಬಂಧವಿರುತ್ತಿತ್ತು ಎಂದೂ ಒಮ್ಮೊಮ್ಮೆ ಸುಮ್ಮನೆ ಯೋಚಿಸುತ್ತಿರುತ್ತೇನೆ.

ಆದರೆ, ಅವನ ಸಾವು ನಮ್ಮಿಬ್ಬರ ನಡುವಿನ ಸಂಬಂಧದ ಪಾವಿತ್ರ್ಯವನ್ನು ಅಂದಿನಿಂದ ಇಂದಿನವರೆಗೂ ಕಾಪಾಡಿಕೊಂಡು ಬಂದಿತಲ್ಲ ಎನ್ನಿಸುವಾಗ ಅವ್ಯಕ್ತ ಸಂಕಟ ಮನಸ್ಸಿನ ಸುತ್ತ ಸುಳಿಯುತ್ತದೆ.

ಆ ಗೆಳೆಯ ಬೆಳೆಸಿದ ಗುಲಾಬಿಯ ತೋಟ ನನ್ನ ಮನದಲ್ಲಿ ಈಗಲೂ ಪಲ್ಲವಿಸುತ್ತಲೇ ಇದೆ.

ನನ್ನ ಹೆಸರೇಕೆ, ಅಲ್ಲವೆ?

‍ಲೇಖಕರು avadhi

24 March, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading