ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಧಿ’ ಅಂಗಳದಲ್ಲಿ ಅನಲೆ : ’ರಾಮಪಕ್ಷಕಾ ತಂದೆ; ಸೀತೆಯ ಪಕ್ಷಕೀ ಮಗಳ್!’

(ಇಲ್ಲಿಯವರೆಗೆ…)

ಅನಲೆ!
ನಮಗೆ ಅನಲೆಯೆ ದಿಟಂ!
ರಾಮಪಕ್ಷಕಾ ತಂದೆ; ಸೀತೆಯ ಪಕ್ಷಕೀ ಮಗಳ್!
ಇರ್ವರುಂ ದ್ರೋಹಿಗಳ್! ಅಕ್ಕರೆಯೆ ನನಗಿಕ್ಕಿದುರಿಯಾಯ್ತು!
ಬೇಡವೆಂದೆನ್. ಬಿಡದೆ ಬೇಡಿದಳ್; ಕಾಡಿದಳ್
ನೋಡಿಬರುವಾಸೆಗೆ ಆಣತಿಯಿತ್ತೆನ್ ಒಪ್ಪಿದೆನ್;
ಮಾಡಿದಳ್ ಮನೆಯನ್ ಅಶೋಕವನದೊಳ್!
ಕಟ್ಟು ಕತೆಗಳನ್ ಕಟ್ಟಿ, ಕಣ್ಣಾರೆ ಕಂಡುದೆನುತ್ತೆ, ಮತಿಗೆಟ್ಟು ನಂಬುವಳ್;
ನಂಬಿಸುವಳ್ ಇತರರಂ; ಪೆಣ್ ಗಳೊಳ್ ಪ್ರಕಟಿಸುವಳ್ ಅಪಧೈರ್ಯಮಂ!
ಆ ಅಣುಗಿ ಬೆಪ್ಪಾಡಿದುದನೆಲ್ಲಮಂ ನೀನುಂ ಒಪ್ಪಿದೆಯಲಾ, ಅದೆ ಸೋಜಿಗಂ!
ನಿನ್ನೆ ಬದುಕಿದನಲಾ ಶತ್ರು; ಇಂದಿನ ರಣದಿ ಕಾಣ್ಬೆ
ನಿನ್ನ ತಲೆಗೆಟ್ಟ ಅನಲೆಯಾ ಕಟ್ಟಿರ್ಪ ಕತೆಯ ಪೊಳ್ಳಂ.
ರಾವಣನ ಈ ಮಾತುಗಳಲ್ಲಿ ಅನಲೆಯ ಬಗ್ಗೆ ಆತನಿಗಿದ್ದ ಪ್ರೀತಿ ಅತ್ಯಂತ ಸ್ಫುಟವಾಗಿ ವ್ಯಕ್ತವಾಗಿದೆ. ಅಂತಹ ಸುದ್ದಿಯನ್ನು ತಂದು ಮಂಡೋದರಿಗೆ ಹೇಳಿದ್ದಕ್ಕೆ ಅನಲೆಯ ಮೇಲೆ ಆತನಿಗೆ ಕೋಪ ಬರುವುದಿಲ್ಲ. ಅದೊಂದು ಹುಡುಗಾಟಿಕೆ ಅನ್ನಿಸಿದೆ ಎನ್ನುವಂತೆ ಆಕೆಯ ಬಗ್ಗೆ ಮಾತನಾಡುತ್ತಾನೆ. ‘ದ್ರೋಹಿಗಳ್’ ಎನ್ನುವಲ್ಲಿಯೂ ಕಾಠಿಣ್ಯದೊರತೆಯಿಲ್ಲ! ಅನಲೆ ಹೇಳಿದ್ದಕ್ಕಿಂತ, ಅದನ್ನು ನಂಬಿರುವ ಮಂಡೋದರಿಯ ಬಗ್ಗೆಯೇ ಆತನಿಗೆ ಹೆಚ್ಚು ಆಕ್ಷೇಪಣೆ ಇದ್ದಂತೆ ಕಾಣುತ್ತದೆ! ಆಕೆಯನ್ನು ‘ಅಣುಗಿ’ ಎಂದು ಕರೆದಿರುವುದರಲ್ಲೂ ರಾವಣನ ಮನಸ್ಸನ್ನು ಓದಿಕೊಳ್ಳಬಹುದು. ಆದರೆ, ರಾವಣ ರಾಜನೂ ಹೌದು; ಚತುರನೂ ಹೌದು. ಅದಕ್ಕೆ ಆತನ ಅಂತರಂಗ, ಕೇವಲ ಆಕೆಯ ಮಾತುಗಳನ್ನು ಕಟ್ಟುಕತೆಯೆಂದು ನಿರಾಕರಿಸುವುದಿಲ್ಲ, ಅದರ ಪರಿಣಾಮಗಳನ್ನು ಚಿಂತಿಸುತ್ತಾನೆ. ‘ನಮಗೆ ಅನಲೆಯೆ ದಿಟಂ’ ಎಂಬ ಮಾತಿನಲ್ಲಿ ಅದು ವ್ಯಕ್ತವಾಗಿದೆ. ಅನಲ ಎಂದರೆ ಅಗ್ನಿ, ಬೆಂಕಿ ಎಂದರ್ಥ. ಅಗ್ನಿ ಸೃಷ್ಟಿ-ನಾಶ ಎರಡಕ್ಕೂ ಸಂಬಂಧಿಸಿದ್ದಲ್ಲವೆ? ಇಲ್ಲಿ ರಾವಣನ ಮಾತನ್ನು ಎರಡೂ ಅರ್ಥದಲ್ಲಿಯೂ ಗಮನಿಸಬಹುದು. ತಮ್ಮೊಳಗಿನ ದುಷ್ಟತೆಯನ್ನು, ಅಳುಕನ್ನು, ಕೊಳಕನ್ನು ನಾಶಪಡಿಸುವುದರಿಂದಲೂ ಆಕೆ ಅಗ್ನಿ; ನಮ್ಮ ಆತ್ಮೋದ್ಧಾರಕ್ಕಾಗಿಯೇ ಆಕೆಯ ಪ್ರಯತ್ನವಿರುವುದರಿಂದಲೂ ಆಕೆ ಅಗ್ನಿ! ‘ಎನ್ನ ಮಗಳ್ ಇವಳ್’ ಎಂದು ಅಭಿಮಾನದಿಂದ ರಾವಣ ಹೇಳಿದ ಮಾತಿಗೆ ಸಾಕ್ಷಿಯೊದಗಿಸುವಂತೆ ಬಂದಿವೆ ಮೇಲಿನ ಮಾತುಗಳು. ಮುಂದೆ ಚಾರನೊಬ್ಬ ಬಂದು, ಅಂದಿನ ಯುದ್ಧದ ವಾರ್ತೆಯನ್ನು, ತಮಗೊದಗಿರುವ ಯಶಸ್ಸನ್ನು ತಿಳಿಸುತ್ತಾನೆ. ರಾವಣ, ಮಂಡೋದರಿಯನ್ನು ನೋಡಿ ವಿಜಯದ ನಗೆ ಬೀರುತ್ತಾನೆ. ತಾನು ಅಲ್ಲಿಂದ ಹೊರಡುವ ಮುಂಚೆ ಮಂಡೋದರಿಗೆ ಆತ ಹೇಳುವ ಮಾತುಗಳಿವು.
ಸೀತೆಯಂ ಸಾಯದವೊಲ್
ಎಂತಾದಡಂ ಪೊರೆಯವೇಳ್ಕುಂ
ಆ ಅನಲೆಗೆ ಎನ್ನಾಜ್ಞೆಯಂ ಪೇಳ್, ದೇವಿ.
ಇನ್ನೆನಗೆ ರಣದ ಮೋಹವೆ ಮೋಹಂ
ಆ ಜಾನಕಿಯ ಮೇಲೆ ಮುನ್ನಿರ್ದ ಮೋಹಮೆಲ್ಲಂ
ತಿರುಗಿಹುದು ರಣದ ಮಧುರತರ ಸಾಹಸಕೆ!
ರಾಮನ ಪಡೆಗೆ, ತನ್ಮೂಲಕ ರಾಮನಿಗೆ ಸೋಲಾದರೆ ಸೀತೆ ಬದುಕುವುದಿಲ್ಲ ಎಂಬ ಭಯ ಆತನಿಗಿದೆ. ಸೀತೆ ಸಾಯುವುದು ಆತನಿಗೆ ಬೇಕಿಲ್ಲ. ಏಕೆಂದರೆ, ಆತನ ಮುಂದಿನ ಬಟ್ಟೆ ಈಗಾಗಲೇ ನಿರ್ಧಾರವಾಗಿಬಿಟ್ಟಿದೆ. ರಾವಣ ಬದಲಾಗಿದ್ದಾನೆ ಎಂಬುದಕ್ಕೆ, ಹಾಗೂ ತನ್ನ ಕಾರ್ಯಸಿದ್ಧಿಗೆ ಅನಲೆಯನ್ನೇ ಆಶ್ರಯಿಸಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿವೆ, ಈ ಮಾತುಗಳು.
 

ರಾವಣ-ಅನಲೆಯರ ನಡುವಿನ ವಾತ್ಸಲ್ಯವನ್ನು ಮಮತೆಯನ್ನು ನೋಡಿದೆವು. ಅನಲೆ-ಕುಂಭಕರ್ಣರ ನಡುವಿನ ವಾತ್ಸಲ್ಯ ಹೇಗಿದ್ದಿತು? ಅನಲೆ-ಸೀತೆಯರ ನಡುವಣ ಬಾಂಧವ್ಯ ಹೇಗಿದ್ದಿತು? ಅವರಿಬ್ಬರ ನಡುವಣ ಅಂತಹುದೊಂದು ನಂಟಿಗೆ ಕಾರಣವೇನು? ಇಂತಹುದೊಂದು ಪ್ರಶ್ನೆಗೆ ಉತ್ತರ ಸಿಗುವುದು, ಕುಂಭಕರ್ಣನ ವಧೆಯಾದ ಮೇಲೆ! ತನ್ನ ಕಿರಿದೊಡ್ಡಯ್ಯನನ್ನು ನೆನೆದು ಅನಲೆ ದುಃಖಿಸುತ್ತಾ ಸೀತೆಗೆ ಆತನ ಬಗ್ಗೆ ಹೇಳಿದಾಗ. ಅಲ್ಲಿ ನಮಗೆ ಅನಲೆಯ ಬಾಲ್ಯದ ಜೀವನದ ಎಳೆಗಳೂ ಸಿಗುತ್ತವೆ. ಕೂಡುಕುಟುಂಬವೊಂದರಲ್ಲಿ ಬೆಳೆಯುವ ಮುದ್ದುಮಗುವಿನ ಚಿತ್ರಣವೂ ದೊರೆಯುತ್ತದೆ. ಹೌದು. ರಾವಣನ ಸೈನ್ಯಕ್ಕೆ ಹಿನ್ನೆಡೆಯಾಗಿ, ಆತನ ಪ್ರಮುಖ ದಳಪತಿಗಳೆಲ್ಲಾ ನಿರ್ನಾಮವಾದಾಗ ರಾವಣ ತನ್ನ ಸಹೋದರ ಕುಂಭಕರ್ಣನನ್ನು ಎಬ್ಬಿಸಿ, ಯುದ್ಧಕ್ಕೆ ಕಳುಹಿಸುತ್ತಾನೆ. ಗಮನಿಸಬೇಕು, ಕುಂಭಕರ್ಣನೂ ಸಹ ರಾವಣನ ಅಕೃತ್ಯವನ್ನು ಒಪ್ಪುವುದಿಲ್ಲ. ಆದರೆ, ತನ್ನ ಅಣ್ಣನಿಗೋಸ್ಕರ, ಲಂಕೆಗೋಸ್ಕರ ಯುದ್ಧ ಮಾಡಲು ಒಪ್ಪುತ್ತಾನೆ. ಯುದ್ಧದಲ್ಲಿ ಹೋರಾಡಿ ಮಡಿಯುತ್ತಾನೆ.
ಅಂದು ಉಂಟಾದ ಅಲ್ಲೋಲಕಲ್ಲೋಲದಿಂದ ರಣಭೂಮಿಯಲ್ಲಿ ಬೆಂಕಿಯೆದ್ದು ಹೊಗೆ ಭೂಮಿ ಆಕಾಶವನ್ನು ಒಂದು ಮಾಡಿರುತ್ತದೆ. ಇತ್ತ ಅಶೋಕವನದಲ್ಲಿದ್ದ ಸೀತೆ ಕಳವಳಿಸುತ್ತಿದ್ದಾಳೆ. ತಳುವಿಹಳ್ ಅನಲೆಯುಂ; ನಿಚ್ಚಮುಂ ಪೊಗಸು ಸೊಗಯಿಸುವ ಮುನ್ನಮೇ ಬರುತಿರ್ದವಳ್, ದಿನದಿನದ ರಣವಾರ್ತೆಯಂ ತರುತಿರ್ದವಳ್?ಎಂದು ಅನಲೆಯನ್ನು ನೆನಪು ಮಾಡಿಕೊಂಡು ಶೋಕಿಸುತ್ತಾಳೆ. ಸೀತೆಗೆ ಯುದ್ಧಭೂಮಿಯ ವರದಿ ತಲಪುತ್ತಿದ್ದುದೇ ಅನಲೆಯಿಂದ. ಅನಲೆ ಬಂದರೆ ಸೀತೆಗೆ ಸಮಾಧಾನ. ಇತ್ತ ಸೀತೆ ತ್ರಿಜಟೆಯೊಂದಿಗೆ ಅನಲೆ ಬರದಿರುವುದಕ್ಕೆಪರಿತಪಿಸುತ್ತಾ, ತ್ರಿಜಟೆಯ ಭಯವನ್ನು ಹೋಗಲಾಡಿಸಿತ್ತಾ ಇದ್ದರೆ, ಅತ್ತ ಅನಲೆ ಕುಂಭಕರ್ಣನ ಸಾವಿನಿಂದ, ‘ರೋದನದಲ್ಲಿ ಯುದ್ಧಭೂಮಿಯನ್ನೇ ಮೀರಿಸುತ್ತಿದ್ದ’ ರಾವಣನ ಅರಮನೆಯಲ್ಲಿದ್ದಾಳೆ. ಅಲ್ಲಿಂದ, ಮನಶ್ಯಾಂತಿಯನ್ನು ಆರಿಸಿ ಬರುವವಳಂತೆ, ‘ಶೋಕವನವಾಗಿದ್ದ ಅರಮನೆಯಿಂದ ಅಶೋಕವನಕ್ಕೆ’ ಬರುತ್ತಾಳೆ. ಬಂದವಳೇ ಸೀತೆಯ ಪಾದಗಳಿಗೆ ಅಡ್ಡಬೀಳುತ್ತಾಳೆ. ‘ಅಶ್ರುಮಯ ಲೋಚನೆಯ, ಗದ್ಗದಧ್ವನಿಯ, ಶೋಕಾಕುಲೆಯ ಸುಮಕೋಮಲಾಂಗಮಂ ಕನಿಕರದಿನೆತ್ತಿದ’ ಸೀತೆ ಆಕೆಗೆ ಸಮಾಧಾನ ಮಾಡುತ್ತಾಳೆ; ತಾಯಿ ಮಗಳನ್ನು ಸಂತೈಸುವಂತೆ.
ತಳ್ಕೈಸಿದಳು ಸೀತೆ,
ತಾಯ್ ಮಗಳನೆಂತಂತೆವೋಲ್.
ಕಂಬನಿಯೊರೆಸಿದಳು;
ಮೊಗವ ಮುಂಡಾಡಿದಳು;
ಕುವರಿಯೊಡಲಂ ತನ್ನ ಮೆಯ್ ಗೆ ತಳ್ತಪ್ಪುತ್ತೆ
ಕಣ್ಮುಚ್ಚಿ ಮೌನಿಯಾದಳ್.
ತನ್ನ ಹೃದಯದ ನಿಗೂಢತಮ ಶಾಂತಿಯಂ
ಯೌಗಿಕ ವಿಧಾನದಿಂ ಅನಲೆಯಾತ್ಮಕೆ
ದಾನಗೈವಂದದಿಂದಿರ್ದ,
ನುಡಿಸಿದಳು ತುಸುವೊಳ್ತನಂತರಂ:
ಎಂತು ನಾನ್ ಸಂತೈಪೆನೌ ನಿನ್ನನ್ ಅನಲೆ?
ಬಾಯ್ ಬರದು ಎನಗೆ
ನಿನ್ನನ್ ಅಳವೇಡ ಎನಲ್, ತಾಯಿ
ಭೂಮಿಜಾತೆ ಸೀತೆ ಇಲ್ಲಿ ನಿಜದ ತಾಯಿಯಾಗಿಬಿಟ್ಟಿದ್ದಾಳೆ. ಅವಳ ಸಂತೈಕೆಗೆ ಅನಲೆಯ ದುಃಖದ ಕಡಲು ಬತ್ತಲಾರಂಭಿಸಿದೆ. ತನ್ನ ತಲೆಗೂದಲನ್ನು ನೇವರಿಸುತ್ತಾ ಮಾತನಾಡುತ್ತಿದ್ದ ಸೀತೆಯನ್ನು, ಮಗು ತಾಯಿಯನ್ನು ನೋಡುವಂತೆಯೇ ನೋಡುತ್ತಾಳೆ. ಸೀತೆಯ ಕಣ್ಣಗಳೂ ಹನಿಯಿಂದ ಕೂಡಿವೆ. ತಕ್ಷಣ ಅನಲೆ ಎಚ್ಚೆತ್ತುಕೊಳ್ಳುತ್ತಾಳೆ. ತನ್ನ ಬೆರಳುಗಳಿಂದ ಸೀತೆಯ ಕಣ್ಣೀರನೊರೆಸಿ, ಸಮಾಧಾನಿಸುವ ನೆಪದಲ್ಲಿ, ಕುಂಭಕರ್ಣನ ಬಗ್ಗೆ ತನಗಿದ್ದ ಒಲವನ್ನು ತೆರೆದಿಡುತ್ತಾಳೆ. ಅದರ ಮೂಲಕ ಅವಳೂ ಸಮಾಧಾನ ಹೊಂದುತ್ತಾ ಸಾಗುತ್ತಾಳೆ. ಅನಲೆಯ ನುಡಿಗಳಿವು:
ನಿನ್ನಳಲನ್ ಅಳ್ತು ಮುಗಿಸಲ್
ನಿನಗೆ ಸಾಲದಾಗಿರೆ ನಿನ್ನ ಕಣ್ಣೀರ್,
ನನ್ನಳಲ್ಗೇಕೆ ತವಿಸುವೆ, ದೇವಿ,
ಬರಿದೆ ನಿನ್ನ ಈ ನೇತ್ರ ತೀರ್ಥಾಂಬುವಂ.
ನಿನ್ನ ನಯನದಿಂದ ಉರುಳುವ ಒಂದೊಂದು ಅಶ್ರುಬಿಂದುವುಂ
ಪೆರ್ಚೆಪುದು ನಮ್ಮ ಲಂಕೆಯ ಶೋಕಜೀವನದ ಸಿಂಧುವಂ.
ನೀನಳ್ತೆ: ಆ ಹನಿಗಳೊಂದೊಂದುವುಂ ಬಡಬಾಗ್ನಿ ಕಡಲಾಗಿ
ಕುಡಿದುವವ್ ಲಂಕೆಯ ಮಹಾಸುರ ಸಹಸ್ರಾಸು ವಾಹಿನಿಗಳಂ.
ಇದು ಅನಲೆ ಸೀತೆಗೆ ಹೇಳುವ ಸಮಾಧಾನದ ನುಡಿಗಳು. ಇಲ್ಲಿ ಯಾರು ಯಾರಿಗೆ ತಾಯಿ? ಸೀತೆಯ ದುಃಖ ದೊಡ್ಡದು,ಅದರಿಂದ ಆಕೆಯ ಕಣ್ಣಿರಿನ ಒಂದೊಂದು ಹನಿಗೂ, ಅದಕ್ಕೆ ಕಾರಣವಾಗಿರುವ ರಾವಣೇಶ್ವರನ ಲಂಕೆ ತೆರಬೇಕಾದ ಬೆಲೆ ದೊಡ್ಡದು, ಅದಕ್ಕಾದರೂ ಸೀತೆ ಕಣ್ಣೀರು ಹಾಕಬಾರದು, ಆಗುವುದು ಆಗಿಯೇ ತೀರುತ್ತದೆ ಎನ್ನುವಂತಿವೆ ಅವಳ ಮಾತು. ಮುಂದೆ ಆಕೆ ಕುಂಭಕರ್ಣನನ್ನು ನೆನೆಯುತ್ತಾಳೆ.
ಸರ್ವಲೋಕ ಭೀಕರನೆಂದು ಯುದ್ಧಭೈರವನೆಂದು
ಪೆಸರಾಂತ ಕಿರಿಯ ದೊಡ್ಡಯ್ಯನಂತಪ್ಪನಂ,
ನೇರ್ ನಡೆಯ ಸವಿನುಡಿಯ ಪೆರ್ಮಬಾಳ್ ಬಾಳ್ದನಂ,
ನಿನ್ನೆ ನುಂಗಿದುದಮ್ಮ ನಿನ್ನ ಕಣ್ ಪನಿಗಡಲ ಬಡಬವಾಯ್!
(ಸೀತೆಯ ದುಃಖದ, ಹನಿ ಕಣ್ಣೀರಿನ ಪರಿಣಾಮವನ್ನು ಅನಲೆ ಮನಗಂಡಿದ್ದಾಳೆ)
ಆ ಅಯ್ಯನೆಮ್ಮೊಡನೆ ಎನಿತೊ ಸೂಳ್
ಕುಳಿತು ಸರಸವನಾಡುತಿರ್ದನ್!
ಹಾಸ್ಯಮಂ ನುಡಿದು ಅಣಕಿಸುತ್ತ ಎಮ್ಮನ್
ಎಂತು ಅಳ್ಳೆ ಬಿರಿವಂತೆ ನಗಿಸುತಿರ್ದನ್!
ಕಳ್ಳರಾಟದಲ್ಲಿ ನಾವಟ್ಟಿ, ಅವನೋಡಿ,
ನಾನ್ ಪಿಡಿಯಲ್ ಆರದಿರೆ,
ಕೊನೆಕೊನೆಗೆ ನಗೆ ತಡೆಯಲಾರದೆಯೆ
ಸೋಲ್ತು ನಿಲುತಿರ್ದನಂ ನಾನ್ ಮುಟ್ಟೆ,
ನನ್ನನ್ ಅಂಬರಕೆತ್ತಿ ಮೇಲೆಸೆದು ಪಿಡಿದು
‘ನೀನೊಂದು ಪೂವಿನ ಚೆಂಡು’
ಎನುತೆನ್ನ ಮುದ್ದಾಡುತಿರ್ದನ್
‘ಚೆಂಡುವೂ! ಚೆಂಡುವೂ! ‘
ಎಂದು ಅಟ್ಟಾಹಸಂ ಮೊಳಗಲದ್ಭುತಂ ನಗುತೆ! –
ಅನಲೆಯ ಈ ಮಾತುಗಳು ಒಂದು ಸುಂದರ ಚಿತ್ರಣವನ್ನು ಓದುಗನ ಕಣ್ಣಮುಂದೆ ನಿಲ್ಲಿಸುತ್ತವೆ. ಕೂಡುಕುಟುಂಬವೊಂದರಲ್ಲಿ, ಮುದ್ದುಮಗುವನ್ನು ಮನೆಯ ದೊಡ್ಡವರು, ಚಿಕ್ಕವರು ಹೇಗೆ ಆಟವಾಡಿಸುತ್ತಾರೆ. ಅದರಲ್ಲೂ, ದೈತ್ಯದೇಹಿಯಾದರೂ. ದೈತ್ಯನಾದರೂ ಮಗುವಿನಂತಹ ಮನಸ್ಸುಳ್ಳ ಕುಂಭಕರ್ಣ, ಮನೆಗೊಬ್ಬಳೇ ಮಗಳಾದ ಅನಲೆಯನ್ನು ಆಟವಾಡಿಸುವ ರೀತಿ ಹೃದಯಂಗಮವಾಗಿದೆ. ಮುಂದೆ, ಇದನ್ನೆಲ್ಲವನ್ನು ನೆನೆದು ಅನಲೆ ದುಃಖಿಸುತ್ತಾಳೆ. ಕುಂಭಕರ್ಣನ ಅಂತ್ಯಸಂಸ್ಕಾರದ ಚಿತ್ರಣವನ್ನು, ಆಕೆಯ ದುಃಖಿತ ನುಡಿಗಳಲ್ಲೇ ಕವಿ ನಮಗೆ ನೀಡುತ್ತಾರೆ.
ಅಯ್ಯೊ ಆ ಅಯ್ಯನನ್,
ಇಂದು ಕಡಲೆಡೆ, ಮಳಲ ತೀರದಲಿ,
ಗಂಧಚಿತೆಯಲಿ ಬೇಳ್ದು, ಬೂದಿಯಂ
ತಂದನೂರಿಗೆ ನನ್ನ ಬದುಕಿರ್ಪ ದೊಡ್ಡಯ್ಯನ್, ಅಸುರೇಶ್ವರಂ!
ಅದನ್ ಇಟ್ಟ ರತ್ನಮಂಜೂಷೆಯಂ ಬಿಗಿದಪ್ಪಿ
‘ತಮ್ಮ ತಮ್ಮ’ ಎಂದೊರಲುತಿರ್ದನಂ ನೆನೆಯಲಮ್ಮೆನ್, ದೇವಿ.
ನಿನಗೆ ಅಹಿತನಾದಡೇನ್?
ನೀನುಮ್ ಮರುಗಿ ಕರಗುತಿರ್ದ ಆ ನೋಟಮನ್ ಕಂಡು!
ಅನಲೆಯ ಮಾತುಗಳು ನೂರಕ್ಕೆ ನೂರು ಸತ್ಯವಲ್ಲವೆ? ಸಾವು ಎಂತಹ ಕಠಿಣ ಹೃದಯಿಯನ್ನೂ ಕರಗಿಸಿಬಿಡುತ್ತದೆ. ರಾವಣನೇ ಕರಗಿಹೋಗಿದ್ದಾನೆ! ಇನ್ನು, ಮಾತೃಹೃದಯದ ರೂಪವನಾಂತಿರುವ ಸೀತೆಯನ್ನು ಅಲುಗಿಸುವುದಿಲ್ಲವೆ? ಕುಂಭಕರ್ಣನ ಬಗ್ಗೆ ರಾವಣನಿಟ್ಟಿದ್ದ ಪ್ರೀತಿ ಅನಲೆಯ ಮಾತುಗಳಲ್ಲಿ ಅಭಿವ್ಯಕ್ತಗೊಂಡಿದೆ. ಅನಲೆ ಬಸವಳಿದಿದ್ದಾಳೆ. ಅದನ್ನು ತಾಯಿಯಾದ ಸೀತೆ ಅರಿಯಳೆ?
ಗದ್ಗದೆಯಾಗಿ, ಜಾನಕಿಯೆದೆಗೆ ಮೊಗಮೊತ್ತಿ,
ಮಗಳವೋಲ್ ಅಳುತಿರ್ದಳಂ ಅನಲೆಯಂ ನೋಡಿ,
ಆವಿರ್ಭವಿಸಿದುದೊ ತನಗೆ ನಿಜಸ್ವರೂಪಮೆನೆ,
ಬೇರೆತನಮಂ ತೊರೆದು ಸೀತೆ,
ಲೋಕಕೆ ಮಾತೆ ತಾನಾದಳೆಂಬವೋಲ್,
ತನ್ನೆರಡು ತೋಳ್ ಗಳಿಂ ತಳ್ಕಯ್ಸುತ ಅನಲೆಯಂ,
ತ್ರಿಜಟೆಗೆಂದಳ್:
ಬಾಲೆ ಉಪವಾಸಮಿರ್ಪಳ್, ತ್ರಿಜಟೆ;
ಶೋಕಭಾರಮಂ ತಡೆಯಲಾರಳ್; ತತ್ತರಿಸುವಳ್:
ಇವಳ್ಗಂ ಈ ಅಳಲೆ ಈ ಎಳಹರಯದೊಳ್?
ಪೋಗು, ಪಣ್ ಗಳಂ ತಿಳಿನೀರ್ಗಳಂ ಬೇಗದಿಂ ತಾ
ಸೀತೆ ಲೋಕಕ್ಕೇ ತಾಯಿಯಾಗಿದ್ದು ಹೀಗೆ! ಅನಲೆಯ ದುಃಖ, ಅದಕ್ಕಿಂತ ಹೆಚ್ಚಾಗಿ, ಅವಳ ಮಾತುಗಳು ಸೀತೆಯನ್ನೇ ಬದಲಾಯಿಸಿಬಿಟ್ಟಿವೆ. ‘ಈ ಎಳಹರೆಯದೊಳ್ ಈ ಅಳಲೆ’ ಎಂದು ಸೀತೆಯೆ ಉದ್ಗರಿಸುತ್ತಾಳೆ, ಅನಲೆಯ ದುಃಖದ ತೀವ್ರತೆಗೆ. ತಾಯಿ ಮಗಳನ್ನು ಸಂತೈಸುವಂತೆ ಸಂತೈಸುತ್ತಾಳೆ, ಕೆಳಗಿನಂತೆ.
ಅನಲೆಯ ತಲೆಗೆ ತನ್ನ ತೊಡೆಯ ತಲೆದಿಂಬೆಸಗಿ
ತನ್ನುಡೆಯ ಮಲಿನ ವಸ್ತ್ರಾಂಚಲದಿ
ಕೃಶಗಾತ್ರೆ ಬೀಸಿದಳ್ ತಂಗಾಳಿಯಂ:
ಏನ್ ಬೇಸಗೆಯೊ? ಬೇಗೆ ಧಗಿಸುತಿದೆ ಲೋಕಮಂ!
ತನ್ನೊಳಗೆ ಎನುತೆ ಸುಯ್ದು ನೋಡಿದಳು
ಮುಂದೆ ಹಬ್ಬಿರ್ದ ಜಲಧಿಯ ನೀಲವಿಸ್ತಾರಮಂ,
ನೀಲಿಯಾಗಸದ ನಿಸ್ಸೀಮತಾ ವಿಸ್ತಾರಮಂ,
ಮುಗಿಲ್ ಮುಗಿಲಾಗಿ ಮೇಲೇರ್ದ ಸತ್ ಕ್ರಿಯಾನಲಧೂಮ ವಿಸ್ತಾರಮಂ.
ಕಣ್ಗೆ ಪನಿ ತುಳ್ಕಿ ಬಿಳ್ದುವು ಅನಲೆಯ ಮೆಯ್ಗೆ!
ಸುಂದರ ವರ್ಣಚಿತ್ರವನ್ನು ಕಟೆದು ಸಹೃದಯನ ಮುಂದೆ ನಿಲ್ಲಿಸುತ್ತದೆ ಈ ಭಾಗ! ಅನಲೆ ಯಾರೊ? ಸೀತೆ ಯಾರೊ? ಸೀತೆಯ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದವನ ಮನೆಯ ಮಗಳು ಅವಳು. ಅವಳಿಗೆ ಇವಳು ತಾಯಿ; ಇವಳಿಗೆ ಅವಳು ಮಗಳು! ತಾಯ್ತನಕೆ, ಮಾತೃಭಾವಕೆ ಕಾಲ, ದೇಶ, ಎಲ್ಲೆ, ಕುಲಗಳ ಮಿತಿಯುಂಟೆ? ಮುಂದೆ ತ್ರಿಜಟೆ ತಣ್ಣನೆಯ ನೀರನ್ನು ತರುತ್ತಾಳೆ. ಸ್ವತಃ ಸೀತೆ ಅನಲೆಯ ಮುಖವನ್ನು ತೊಳೆಯುತ್ತಾಳೆ. ಹಣ್ಣುಗಳನ್ನು ತಿನ್ನಿಸುತ್ತಾಳೆ. ನೀರು ಕುಡಿಸುತ್ತಾಳೆ. ಅಲ್ಲಿಯವರೆಗೂ ಮಾತನಾಡದೆ ಸುಮ್ಮನಿದ್ದ ‘ದಶಶಿರಾನುಜ ತನುಜೆ ಮುಂ ಪೇಳ್ದಳಿಂತು ಆ ಸ್ಥಿರಾತ್ಮಜೆಗೆ’. ಅಲ್ಲಿ ಅನಲೆಯ ಜಾಣ್ಮೆ, ವಿವೇಕ ಎಲ್ಲವೂ ವ್ಯಕ್ತವಾಗಿವೆ. ‘ಅಲ್ಲಿಯವರೆಗೆ ಆದದ್ದು ಆಯಿತು. ಮುಂದೊಳಿತಾಗಬೇಕು’ ಎಂಬ ಹಂಬಲಿವಿದೆ. ಮುಂದೆ ಇಂದ್ರಜಿತು ಯುದ್ಧಕ್ಕಿಳಿಯುವುದು, ಅದರ ಪರಿಣಾಮ, ಅದಕ್ಕೆ ಮಾಡಬೇಕಿರುವುದು, ತಾವು ಮಾಡಬಹುದಾದುದು ಎಲ್ಲವನ್ನೂ ವಿಷದಪಡಿಸುತ್ತಾಳೆ. ಕುಂಭಕರ್ಣನ ಸಾವಿನ ನಂತರ ರಾವಣನಿಗೆ ಸಮಾಧಾನ ಮಾಡುವ, ನಿಕುಂಬಿಲಾಯಾಗಪ್ರತಿಜ್ಞೆ ಮಾಡುವ ಇಂದ್ರಜಿತುವಿನ ಚಿತ್ರಣವನ್ನು ಸಹೃದಯ ಕೇಳುವುದು ನೇರವಾಗಿಯಲ್ಲ, ಅನಲೆಯ ಬಾಯಿಂದ, ಸೀತೆಯೊಟ್ಟಿಗೆ! ಅದೊಂದು ರೀತಿಯಲ್ಲಿ ದೀರ್ಘಭಾಷಣದಂತೆ; ರಣತಂತ್ರವನ್ನು ಸಹದ್ಯೋಗಿಗಳಿಗೆ ವಿವರಿಸುವ ಸೇನಾನಾಯಕಿಯಂತೆ ಅನಲೆ ಭಾಸವಾಗುತ್ತಾಳೆ. ವ್ಯತ್ಯಾಸವಿಷ್ಟೆ; ಅಲ್ಲಿ ಕೊಲೆಯ ಸಂಚಿರುತ್ತದೆ, ಇಲ್ಲಿ ಆತ್ಮೋದ್ಧಾರದ ಹಂಬಲವಿದೆ. ಇಲ್ಲಿ ಅನಲೆ ಕೇವಲ ಒಂದು ಪಾತ್ರವಾಗಿ ಮಾತ್ರವಲ್ಲ, ಕಾವ್ಯದ ಮುನ್ನೆಡೆಗೆ ಕಾರ್ಯಕಾರಣ ಸಂಬಂಧವನ್ನು ಬೆಸೆಯುವ ಕವಿಯ ಪ್ರತಿನಿಧಿಯಂತೆ ಭಾಸವಾಗುತ್ತಾಳೆ. ಆ ಭಾಗವನ್ನು ಇಡಿಯಾಗಿ ಓದಿಯೇ ಸವಿಯಬೇಕು.
(ಮುಂದುವರಿಯುವುದು…)

‍ಲೇಖಕರು avadhi

18 April, 2014

2 Comments

  1. Anil Talikoti

    ಅತ್ಯಂತ ಸುಂದರವಾಗಿದೆ ವಿಶ್ಲೇಷಣೆ -ಈ ನಿರೂಪಣೆಯಿಂದ ರಾಮಾಯಣ ದರ್ಶನಂನಲ್ಲಿನ ಅನೇಕ ಹೊಳಹುಗಳು ಮತ್ತೆ ಮತ್ತೆ ಮನಸ್ಸನ್ನಾವರಿಸುತ್ತಿವೆ.
    ~ಅನಿಲ

  2. Rajan

    This is beautiful, I too wanted to read this epic sometime ago but couldn’t.
    Ramayanadarshanam is no less an epic than any on this earth and the Nobel committee missed a golden chance by not honoring our Kuvempu with an award. This is what happens when people start using awards for political reasons.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading