8/11 ನಡೆದು, ಡಿಸೆಂಬರ್ 28ಕ್ಕೆ 50 ದಿನಗಳ ಗಡು ತೀರುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಕೊಟ್ಟ ಗಡು ಅದು. ಗಡುವಿನ ವ್ಯಾಖ್ಯಾನ ಈ ನಡುವೆ ಅವರೇ ಬದಲಾಯಿಸಿಕೊಂಡಿದ್ದಾರೆ. ಮೂರ್ನಾಲಕ್ಕು ದಿನ, ವಾರ, ಕೊನೆಗೆ 50 ದಿನಗಳಲ್ಲಿ ಎಲ್ಲ ಸರಿಯಾಗುತ್ತದೆ ಹಾಗಾಗದಿದ್ದರೆ ನಾನು ಯಾವುದೇ ಶಿಕ್ಷೆಗೆ ಸಿದ್ಧ ಎಂದಿದ್ದ ಮೋದಿಯವರು ಕಳೆದವಾರ ಉತ್ತರ ಪ್ರದೇಶದ ಜನಸಭೆಯೊಂದರಲ್ಲಿ ಮಾತನಾಡುತ್ತಾ, “ 50 ದಿನಗಳ ತನಕ ಕಷ್ಟ ಇರುತ್ತದೆ,
ಆಮೇಲೆ ನಿಧಾನಕ್ಕೆ ಎಲ್ಲ ಸರಿಯಾಗುತ್ತಾ ಬರಲಿದೆ” ಎಂದು ತಾನಂದದ್ದೆಂದ್ದು ಹೇಳಿದ್ದಾರೆ. ಇರಲಿ.
ನವೆಂಬರ್ 8ರಿಂದಲೂ ಗಮನಿಸಿಕೊಂಡು ಬಂದವರಿಗೆ ವಿಶಿಷ್ಟ ವಿದ್ಯಮಾನವೊಂದು ಅಚ್ಚರಿ ತಂದಿದೆ. ನೋಟು ರದ್ಧತಿಗೆ ಈ ದೇಶದ ಜನ ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ನಾನು ಹೇಳುತ್ತಿದ್ದೇನೆ. ಒಟ್ಟು 5 ವಿಧದ ಪ್ರತಿಕ್ರಿಯೆಗಳನ್ನು ಸ್ಥೂಲವಾಗಿ ಗುರುತಿಸಬಹುದು.
1. ಯಾವುದೇ ಯೋಚನೆಗಳಿಲ್ಲದೆ ನೋಟುರದ್ಧತಿಯನ್ನು ಬಲವಾಗಿ ಸಮರ್ಥಿಸಿದವರು. (ಆಳುವ ಪಕ್ಷದ ಕಾರ್ಯಕರ್ತರು ಮತ್ತು ಮೋದಿ ಭಕ್ತರು.)
2. ಸೈದ್ಧಾಂತಿಕ ಕಾರಣಗಳಿಗಾಗಿ ನೋಟು ರದ್ಧತಿಯನ್ನು ಮತ್ತು ಮೋದಿಯವರನ್ನು ವಿರೋಧಿಸುತ್ತಾ ಬಂದವರು. (ಎಡ ಪಕ್ಷಗಳು, ವಿರೋಧ ಪಕ್ಷಗಳ ಕಾರ್ಯಕರ್ತರು.)
3. ನೋಟು ರದ್ಧತಿಯ ಪರಿಣಾಮ ಎದುರಿಸಬೇಕಾಗಿ ಬಂದ, ಕಪ್ಪು ಹಣ ಶೇಖರಿಸಿಟ್ಟ ಒಂದು ಸಣ್ಣ ವರ್ಗ, ತಮ್ಮ ಹಣವನ್ನು ಹೊಸನೋಟುಗಳಿಗೆ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲೇ ವ್ಯಸ್ತರಾಗಿದ್ದರು. (ಹಾಗೆಂದು ಈಗೀಗ ಬಹಿರಂಗಗೊಳ್ಳುತ್ತಿದೆ.)
4. ನೋಟು ರದ್ಧತಿಯ ಪರಿಣಾಮವಾಗಿ ಬದುಕೇ ದುಸ್ತರವಾಗಿ, ಧ್ವನಿ ಕಳೆದುಕೊಂಡಿರುವ ಒಂದು ಬಲುದೊಡ್ಡ ಗಾತ್ರದ ಜನಸಮುದಾಯ. ಇದು ಸಂಪೂರ್ಣವಾಗಿ ತನ್ನ ದ್ವನಿ ಕಳೆದುಕೊಂಡು ವಿನಾಶದ ಅಂಚಿಗೆ ಬಂದು ನಿಂತಿದೆ. ಅವರಿಗೂ, ಈ ಭಾರತಕ್ಕೂ ಸಂಬಂಧವೇ ಇಲ್ಲ ಎಂಬ ಸ್ಥಿತಿ ಮೂಡುತ್ತಿದೆ.
5. ಹೊರನೋಟಕ್ಕೆ ನೋಟು ರದ್ಧತಿಯ ಫಲಾನುಭವಿಗಳು ತಾವೆಂದುಕೊಂಡಿರುವ, ಗಮನಾರ್ಹ ಗಾತ್ರದ ಮಧ್ಯಮ ವರ್ಗವೊಂದು ತಮ್ಮ ಎಲ್ಲ ನೋವುಗಳನ್ನು ನುಂಗಿಕೊಂಡು, ಸಹನೆಯಿಂದ “ಕಾದು ನೋಡಿ, ಮುಂದಿನ ದಿನಗಳು ಒಳ್ಳೆಯದಾಗಲಿವೆ” ಎಂದು ಬ್ಯಾಂಕುಗಳೆದುರು ತಮ್ಮ ದುಡ್ಡು ಹೊರತೆಗೆಯಲು ಸರತಿ ಸಾಲು ನಿಂತಿದ್ದಾರೆ.
ಸ್ವತಃ ದೇಶದ ಸುಪ್ರೀಂ ಕೋರ್ಟು ಕಳವಳಗೊಂಡು, ಈ ನೋಟುರದ್ಧತಿ ಕಾನೂನು ವ್ಯಾಪ್ತಿಯೊಳಗೇ ನಡೆದಿದೆಯೇ ಎಂದು ಪರಿಶೀಲಿಸುವುದಕ್ಕಾಗಿ ಸಂವಿಧಾನ ಪೀಠವನ್ನು ಕೋರಿರುವ ಸಮಯದಲ್ಲಿ ಈ ದೇಶದ ಜನ ಮಾತ್ರ ನೋಟು ರದ್ಧತಿಗೆ ಹೀಗೆ ಚೈತನ್ಯರಹಿತರಾಗಿ ಪ್ರತಿಕ್ರಿಯಿಸುತ್ತಿರುವುದು ಯಾಕೆ?
ಹಾಗೆ ಹುಡುಕಹೊರಟರೆ, ನಾವು ಬಂದು ನಿಲ್ಲುವುದು ಈ ದೇಶವನ್ನು ಕಾಡುತ್ತಿರುವ ‘ಮಹಾಭೂತ’ ಎಂದು ನಾವಂದುಕೊಂಡಿರುವ ಭ್ರಷ್ಟಾಚಾರದ ಮನೆ ಬಾಗಿಲಿಗೆ!
ಭ್ರಷ್ಟಾಚಾರ ಎಂಬ ಮಹಾಭೂತ
ಕಳೆದ 50 ವರ್ಷಗಳಲ್ಲಿ, ದೇಶದ ಬಹುಸಂಖ್ಯಾತ ಮಧ್ಯಮವರ್ಗಕ್ಕೆ ದೈನಂದಿನ ಬದುಕಿನಲ್ಲಿ ಅತ್ಯಂತ ಹೆಚ್ಚು ಕಾಡುತ್ತಿರುವ ಒಂದು ಸಂಗತಿ ಎಂದರೆ, ಅದು ಸರ್ಕಾರಿ ವ್ಯವಸ್ಥೆಯೊಳಗಿರುವ ಭ್ರಷ್ಟಾಚಾರ.
ಗ್ರಾಮ ಪಂಚಾಯತಿನಿಂದ ಹಿಡಿದು, ತಾಲೂಕು ಕಚೇರಿ, ಪೊಲೀಸ್ ಠಾಣೆ, ನ್ಯಾಯಾಲಯ… ಹೀಗೆ ಜನಸಾಮಾನ್ಯ ತನ್ನ ದೈನಂದಿನ ಬದುಕಿಗಾಗಿ ಎಡತಾಕಲೇ ಬೇಕಾದ ಪ್ರತಿಯೊಂದು ಕಡೆಯೂ ಲಂಚಗುಳಿತನ, ಪಕ್ಷಪಾತ ಬಹುದೊಡ್ಡ ಅಡ್ಡಿಯಾಗಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಜನ ತಮ್ಮ ಕೆಲಸ ಮಾಡಿಸಿಕೊಡಿ ಎಂದು ಜನಪ್ರತಿನಿಧಿಗಳ ಬಳಿ ಹೋದರೆ, ಜನಪ್ರತಿನಿಧಿಯೇ ಸ್ವತಃ “ಅಯ್ಯೋ ಅವರೂ ಬದುಕಬೇಕಲ್ಲಾ” ಎಂದು ಹೇಳಿ ತಾವೇ ಕೈಯಾರೆ ಸಾವಿರವೋ ಎರಡು ಸಾವಿರವೋ ಕೊಟ್ಟು, “ಹೋಗಿ ಆ ಅಧಿಕಾರಿಗೆ ಕೊಟ್ಟು ನಿಮ್ಮ ಕೆಲಸ ಮಾಡಿಕೊಳ್ಳಿ” ಎಂದು ಹೇಳುವ ಉದಾಹರಣೆಗಳು ನಮ್ಮೆದುರಿವೆ.
ಜನಜೀವನವನ್ನು ನಿಸ್ಸಹಾಯಕಗೊಳಿಸಿರುವ ಇದೊಂದು ಸಮಸ್ಯೆ ಪರಿಹಾರವಾದರೆ ನಮ್ಮ ಬದುಕು ಸುಗಮವಾಗುತ್ತದೆ ಎಂಬ ಒಂದು ಆಶಾವಾದ ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಯ ಮನಸ್ಸಿನಲ್ಲಿ ಢಾಳಾಗಿ ಕುಳಿತಿದೆ. ಈ ಆಶಾವಾದ ಎಷ್ಟು ಗಟ್ಟಿಯಾಗಿದೆ ಎಂದರೆ, ಅದರೆದುರು ಆನೆಗಾತ್ರದ ಬೇರೆಲ್ಲ ಹುಳುಕುಗಳೂ ಕಾಣಿಸದಾಗಿಬಿಟ್ಟಿವೆ.
ಈಗ ‘ಭ್ರಷ್ಟಾಚಾರದ ವಿರುದ್ಧ ಹೋರಾಟ’ ಎನ್ನುತ್ತಿರುವವರು ಹೇಗೆ ಗೆದ್ದುಬಂದರು ಎಂಬಂತಹ ಸರಳ ಸತ್ಯಗಳನ್ನೂ ಅರಗಿಸಿಕೊಳ್ಳದಂತಹ ಒಂದು ಸಮ್ಮೋಹನಕ್ಕೆ ಸಿಲುಕಿರುವ ಈ ಬಹುಸಂಖ್ಯಾತ ಮಧ್ಯಮ ವರ್ಗ, ತಾವೇ ಈ ಭ್ರಷ್ಟಾಚಾರದ ತಾಯಿಬೇರು ಎಂಬುದನ್ನೂ ಮರೆತುಬಿಟ್ಟಿದೆ. ಪ್ರತಿಯೊಬ್ಬರೂ ತಮ್ಮ ಬಟ್ಟಲಿನಲ್ಲಿರುವ ಹೆಗ್ಗಣವನ್ನು ಮರೆತು ಇನ್ನೊಬ್ಬರ ಬಟ್ಟಲಿನ ಹೆಗ್ಗಣವನ್ನು ತೋರಿಸಿ ಆಡಿಕೊಳ್ಳುತ್ತಿದ್ದಾರೆ.
ತಾವು ಸರಿಯಾಗದೇ ದೇಶ ಸರಿಮಾಡಹೊರಟವರ ಈ ಕಥೆ ನಿಜಕ್ಕೂ ಕರುಣಾಜನಕ.
ಈ ಇಡಿಯ ಪ್ರಕರಣದಲ್ಲಿ ಎದ್ದುಕಾಣುವ ಸಂಗತಿ ಎಂದರೆ, ತಮ್ಮ ವೈಯಕ್ತಿಕ ಬದುಕಿನ ಮೇಲೇ ಹಸ್ತಕ್ಷೇಪ ಮಾಡಿರುವ, ತಮ್ಮದೆಂದುಕೊಂಡಿದ್ದ ಸಂವಿಧಾನದತ್ತ ಹಕ್ಕುಗಳನ್ನು ಸಾರಾಸಗಟಾಗಿ ನಿರಾಕರಿಸಿ, ಅದನ್ನು ಸಮರ್ಥಿಸಿಕೊಳ್ಳುವ, ದೇಶದ ಭವಿಷ್ಯವನ್ನು ಕರಾಳ ಪ್ರಪಾತದಂಚಿಗೆ ತಂದು ನಿಲ್ಲಿಸಿರುವ ನಿರ್ಧಾರವೊಂದನ್ನು ಕೂಡ ಗಟ್ಟಿದನಿಯಲ್ಲಿ “ಅದು ತಪ್ಪು” ಎಂದು ಹೇಳುವ ಚೈತನ್ಯವನ್ನು ಜನ ಕಳೆದುಕೊಳ್ಳುತ್ತಿರುವುದು. ಇದು ಪ್ರಜಾತಂತ್ರಕ್ಕೆ ಒಳ್ಳೆಯ ಸುದ್ದಿ ಖಂಡಿತಾ ಅಲ್ಲ.





Well written
Super sir.. thank you..
rightly said!