ಆಫ್ರಿಕಾವನ್ನು ವಿಶ್ವಕ್ಕೆ ಪರಿಚಯಿಸಿದ ಚಿನುವಾ ಅಚಿಬೆ
“The white man is very clever. He came quietly and peaceably with his religion. We were amused at his foolishness and allowed him to stay. Now he has won our brothers, and our clan can no longer act like one. He has put a knife on the things that held us together and we have fallen apart.”- Chinua Achebe, Things Fall Apart, Ch. 20
‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯ ನಾಯಕ ಒಕೋಂಕೊನ ಶೌರ್ಯ, ಅವನ ಮೂವರು ಹೆಂಡತಿಯಂದಿರು, ಅವನ ಸೋಮಾರಿ ಅಪ್ಪ, ಅವನು ಪ್ರತಿನಿಧಿಸುವ ಇಗ್ಬೋ ಜನಾಂಗದ ನಂಬಿಕೆಗಳು, ಆಚಾರ, ವಿಚಾರಗಳು ಇವನ್ನೆಲ್ಲಾ ಪ್ರೊಫೆಸರ್ ಮಾಧವ ಭಟ್ ಭಾವದುಂಬಿ ವಿವರಿಸುತ್ತಿದ್ದರೆ ವಿದ್ಯಾರ್ಥಿಗಳೆದುರು ಒಂದು ಹೊಸ ಲೋಕದ ಅನಾವರಣ. ಶತಮಾನಗಳಿಂದ ಬೆಳೆದುನಿಂತ ಜನಾಂಗ, ಅದರ ಕೂಸುಗಳು ಆಂಗ್ಲರ ವಸಾಹತುಶಾಹಿ ದುರಾಸೆಗೆ ಬಲಿಯಾಗಿ ತನ್ನತನವನ್ನು ಕಳೆದುಕೊಳ್ಳುವ ದುರಂತದ ಹಾದಿ, ಅದನ್ನು ಪ್ರತಿನಿಧಿಸುವ ದುರಂತ ನಾಯಕ ಒಕೊಂಕೋ – ಇವನ್ನೆಲ್ಲಾ ಮಾಧವ ಭಟ್ ತಮ್ಮ ಧ್ವನಿಯ ಏರಿಳಿತಗಳ ಮೂಲಕ ನಮ್ಮ ಮನದೊಳಗೆ ಇಳಿಸುತ್ತಿದ್ದರು. ವಿಜ್ಞಾನದ ವಿಧ್ಯಾರ್ಥಿಯಾಗಿದ್ದ ನಾನು ಆಂಗ್ಲ ಸಾಹಿತ್ಯದ ಹೊಸ್ತಿಲ ಹೊರಗೆ ನಿಂತದ್ದು ಹೀಗೆ – ಚಿನುವಾ ಅಚಿಬೆಯೆಂಬ ಹೆಬ್ಬಾಗಿಲ ಮೂಲಕ.
ಆ ನಂತರ ಚಿನುವಾ ಅಚಿಬೆಯ ಪುಸ್ತಕಗಳನ್ನು ಲೈಬ್ರೆರಿಗಳಲ್ಲಿ ಹುಡುಕಿ ಓದುವುದು ಅಭ್ಯಾಸವಾಯಿತು. ಅವರ ಮೊದಲ ಕಾದಂಬರಿಯ ಚಿತ್ರಣ ಮನದಲ್ಲಿ ಗಟ್ಟಿಯಾಗಿದ್ದುದರಿಂದ ಅದರ ಮುಂದಿನ ಭಾಗಗಳಾಗಿ ಬಂದ ‘No Longer At Ease’ ಮತ್ತು ‘Arrow of God’ಅರ್ಥ ಮಾಡಿಕೊಳ್ಳುವುದು ಸುಲಭವಾಯಿತು.
ಅಚಿಬೆಯ ಕಾದಂಬರಿಗಳು ಆಫ್ರಿಕಾದ ನೈಜ ಚಿತ್ರಣವನ್ನು ವಿಶ್ವದ ಓದುಗರಿಗೆ ಕಟ್ಟಿಕೊಟ್ಟವು. ತಮ್ಮ ಇಪ್ಪತ್ತೆಂತನೇ ವಯಸ್ಸಿನಲ್ಲಿ ಅವರ ಮೊದಲ ಕಾದಂಬರಿ ‘ಥಿಂಗ್ಸ್ ಫಾಲ್ ಅಪಾರ್ಟ್’ (1958) ಎಷ್ಟು ಜನಪ್ರಿಯವಾಯಿತೆಂದರೆ ಅದನ್ನು ವಿಶ್ವದಾದ್ಯಂತ ಅದರ 80 ಲಕ್ಷ ಪ್ರತಿಗಳು ಮಾರಾಟವಾಗಿವೆಯಂತೆ. ಇದು ವಿಶ್ವಸಾಹಿತ್ಯದಲ್ಲಿ ದಾಖಲಾದ ಆಫ್ರಿಕಾ ಬರಹಗಾರರ ಬಂಡಾಯದ ಮೊದಲ ಕಿಡಿ. ಈ ಕಾದಂಬರಿಯ ಪ್ರಖರತೆಯಲ್ಲಿ ಉಳಿದ ಕಾದಂಬರಿಗಳು ಮರೆಯಾದವು ಎಂಬ ವಾದವೂ ಇದೆ.
ಅಂಗ್ಲ ಭಾಷೆಯಲ್ಲಿ ಬರವಣಿಗೆ ಪ್ರಾರಂಭಿಸಿ ನಂತರ ಮಾತೃ ಭಾಷೆಯಲ್ಲಿ ಬರವಣಿಗೆ ಮುಂದುವರೆಸಿದ ಗೂಗಿ ವಾ ಥಿಯಾಂಗೋ ಶಿಕ್ಷಣವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಳೀಯ ಭಾಷೆಯನ್ನು ಬಳಸಬೇಕಾದ ಅಗತ್ಯ, ಅದರ ಉಪಯೋಗಗಳ ಕುರಿತು ಪ್ರಬಂಧಗಳನ್ನು ರಚಿಸಿದ್ದಾರೆ. ನಮ್ಮ ಭಾಷೆಯನ್ನು ನಾವು ಶ್ರೀಮಂತಗೊಳಿಸಬೇಕು, ಆ ಮೂಲಕ ನಾವೂ ಶ್ರೀಮಂತರಾಗಬೇಕು, ನಮ್ಮನ್ನು ತುಳಿದವರ ಭಾಷೆಯಲ್ಲಿ ಬರೆಯುವುದರ ಮೂಲಕ ಭಾಷೆ ಹಾಗೊ ಸಂಸ್ಕೃತಿಯ ವಸಾಹತುಗಳಾಗುತ್ತೇವೆ ಎನ್ನುತ್ತಾರೆ. ಚಿನುವಾ ಅಚಿಬೆಯ ಬರಹಗಳ ಆಶಯವನ್ನು ಮೆಚ್ಚಿಕೊಂಡರೂ, ಅವರು ಬಳಸುವ ಭಾಷೆಯ ಕುರಿತು ಆಕ್ಷೇಪ ಎತ್ತುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಅಚಿಬೆ, ತನ್ನ ಜನಾಂಗ ಇಗ್ಬೋದ ಭಾಷೆ ತನ್ನ ತನವನ್ನು ಕಳೆದುಕೊಂಡಿದೆ. ಹತ್ತಾರು ಆಡುಭಾಷೆಗಳ ಶ್ರೀಮಂತಿಕೆಯಿದ್ದ ಈ ಪ್ರದೇಶದ ಭಾಷೆಯನ್ನು ತಮ್ಮ ಅನುಕೂಲಕ್ಕಾಗಿ ಏಕರೂಪ ನೀಡುವ ಮೂಲಕ ಅದನ್ನು ಆಂಗ್ಲರು ವಿರೂಪಗೊಳಿಸಿದ್ದಾರೆ. ಅದರಲ್ಲಿ ತನ್ನ ಭಾವನೆಗಳನ್ನು ಪರಿಣಾಮಕಾರಿಯಾಗಿ ಹೇಳಲಾರೆ ಎನ್ನುತ್ತಾ ಸಮಸ್ಯೆಯ ಇನ್ನೊಂದು ಮುಖವನ್ನು ಪರಿಚಯಿಸುತ್ತಾರೆ.
ಆಂಗ್ಲಸಾಹಿತ್ಯದಲ್ಲಿ ಪ್ರಚಲಿತವಾಗಿದ್ದ ಆಫ್ರಿಕಾದ ಪೊಳ್ಳು ಅಥವಾ ಜಾಳುಜಾಳಾದ ಚಿತ್ರಣವನ್ನು ಸಂಪೂರ್ಣವಾಗಿ ಅಳಿಸಿ ಹಾಕಿದ ಚಿನುವಾ ತನ್ನ ದೇಶದಲ್ಲಿ ತನ್ನಂತಹ ಸ್ವತಂತ್ರ ಮನೋಭಾವದ ಬರಹಗಾರರು ಬೆಳೆಯಲು ಕಾರಣರಾದರು. ಆಂಗ್ಲಭಾಷೆಯಲ್ಲಿ ಬರೆದರೂ ಅದಕ್ಕೆ ದೇಸೀ ಸೊಗಡನ್ನು ತುಂಬಿ ಮೂಲ ಆಶಯವನ್ನು ಸತ್ವಯುತವಾಗಿ ಬಿಂಬಿಸಿದವರು. ಚಿನುವಾ ಅಚಿಬೆ ತಮ್ಮ ಭಾಷಣ, ಕಲಿಸುವಿಕೆಯಿಂದಲೂ ಜನರನ್ನು ಪ್ರಭಾವಿಸಿದವರು. ಆಂಗ್ಲ ಭಾಷೆಯನ್ನು ಪ್ರಾದೇಶಿಕತೆಗೆ ಒಗ್ಗಿಸಿದ ಹಿರಿಮೆ ಅವರದು. ಜೊಸೆಫ್ ಕೊನ್ರಾಡ್ ನ ‘ಹಾರ್ಟ್ ಆಫ್ ಡಾಕ್ಟರ್ ನೆಸ್’ ಕಾದಂಬರಿಗೆ ಪ್ರತಿಕ್ರಿಯಿಸುತ್ತಾ ಆಂಗ್ಲರ ಜನಾಂಗೀಯ ಮನಸ್ಸು ಆಫ್ರಿಕಾದ ವಸಾಹತುಗಳನ್ನು ಅರಿಯುವ ಪ್ರಯತ್ನ ಮಾಡದೆ ಇನ್ನೂ ಕತ್ತಲೆಯಲ್ಲೇ ಇದೆ ಎಂಬುದನ್ನು ಪ್ರಭಾವಿಯಾಗಿ ವಿವರಿಸಿದ್ದಾರೆ. ನೆಲ್ಸನ್ ಮಂಡೇಲಾ ಹೇಳುವಂತೆ ‘ಆಫ್ರಿಕಾವನ್ನು ಜಗತ್ತಿನ ಇತರ ಭಾಗಗಳ ಹತ್ತಿರ ಒಯ್ದವರು ಅಚಿಬೆ’. ಸಾಹಿತ್ಯದಲ್ಲಿ ತಮ್ಮ ಸಾಧನೆಗಾಗಿ 2007 ರಲ್ಲಿ ಬೂಕರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಅಚಿಬೆಯ ಕಾದಂಬರಿಗಳಲ್ಲಿ ನನಗೆ ಬಹಳ ಇಷ್ಟವಾದದ್ದು ‘Anthills of Savannah’. ಎಂಭತ್ತರ ದಶಕದಲ್ಲಿ ಪ್ರಕಟಗೊಂಡ ಇದು ಬೂಕರ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿತ್ತು. ಹಲವು ಸ್ತರಗಳಲ್ಲಿ ಅರ್ಥಮಾಡಿಕೊಳ್ಳಬಹುದಾದ ಈ ಕಾದಂಬರಿ ಕಂಗನ್ ಎಂಬ ಕಾಲ್ಪನಿಕ ಪ್ರದೇಶದ ರಾಜಕೀಯ ತಲ್ಲಣಗಳನ್ನು ಕಟ್ಟಿಕೊಡುತ್ತದೆ. ನೈಜೀರಿಯಾದ ಪರಿಸ್ಥಿತಿಗೆ ಹತ್ತಿರದ ಹೋಲಿಕೆಯಿರುವ ಈ ಕಥೆ ದೇಶದ ಏಳಿಗಾಗಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮಹಿಳೆಯರು ಪ್ರಧಾನ ಪಾತ್ರ ವಹಿಸುವ ಅನಿವಾರ್ಯತೆಯನ್ನು ಎತ್ತಿಹಿಡಿಯುತ್ತದೆ. ಕಾದಂಬರಿಯ ನಾಯಕಿ ಬೀಟ್ರೈಸ್ ಪಾತ್ರವನ್ನು ಅತ್ಯಂತ ಸತ್ವಯುತವಾಗಿ ಕಟ್ಟಿಕೊಘಲಾಗಿದೆ. ಶೀರ್ಷಿಕೆಯಲ್ಲೇ ಹಲವು ಅರ್ಥಗಳ ಹುತ್ತವನ್ನು ಕಟ್ಟುವ ಈ ಕಾದಂಬರಿ ಮಹಿಳೆಯರ ಕುರಿತು ಚಿನುವಾ ಅಚಿಬೆಯ ದೃಷ್ಟಿಕೋನದ ಕುರಿತು ನನಗಿದ್ದ ಅಲ್ಪ ಅನುಮಾನವನೂ ನಿವಾರಿಸಿತು.
ವಸಾಹತುಶಾಹಿಯನ್ನು ವಿರೋಧಿಸಿದಂತೆಯೇ ಸ್ವತಂತ್ರ ದೇಶದಲ್ಲಿ ಉತ್ತಮ ಆಡಳಿತ ನೀಡಲಾಗದ ಸ್ಥಳೀಯ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಾರೆ. ಈ ಹಿನ್ನೆಲೆಯಲ್ಲಿ ನೈಜೀರಿಯಾ ಸರಕಾರದ ಅತ್ಯುನ್ನತ ಗೌರವಗಳನ್ನು ನಿರಾಕರಿಸಿದ್ದೂ ಇದೆ.
ನಮ್ಮ ಮಗ ಚಿನುವಾ:
ಸ್ವಲ್ಪ ಸಮಯ ಮನದ ಮೂಲೆಯಲ್ಲಿ ಕದಹಾಕಿ ಕೂತಿದ್ದ ಚಿನುವಾ ಮತ್ತೆ ಹೊರಬಂದದ್ದು ಮಗನ ಜನನದೊಂದಿಗೆ. ಪತಿ ಶಿವರಾಂ ಕೂಡಾ ಚಿನುವಾ ಅಚಿಬೆಯ ಬರಹಗಳನ್ನು ಇಷ್ಟಪಟ್ಟವರೇ. ಹಾಗಾಗಿ ಚಿನುವಾನನ್ನು ಬಿಟ್ಟುಕೊಡಲಾಗಲಿಲ್ಲ. ಮಗನ ಹೆಸರಲ್ಲಿ ಅವರನ್ನು ಕಂಡೆವು. ನಾಮಕರಣದ ನೆಪದಲ್ಲಿ ಚಿನುವಾ ಅಚಿಬೆ, ಅವರ ಬರವಣಿಗೆಯನ್ನು ಮತ್ತೊಂದಷ್ಟು ಜನರಿಗೆ ದಾಟಿಸಿದ್ದೂ ಆಯಿತು. ಹೀಗೆ ಅವನ ಹೆಸರು ಕೇಳಿದವರು ಮತ್ತೊಮ್ಮೆ ಸ್ಪಷ್ಟಪಡಿಸಿಕೊಳ್ಳುವುದು ಇದ್ದೇ ಇದೆ. ನಮಗೆಲ್ಲ ಅಭ್ಯಾಸವೂ ಆಗಿದೆ. ಆದರೆ ಅಂತಹ ಒಬ್ಬರು ಆ ಹೆಸರಿನ ಅರ್ಥವೇನು ಎಂದು ಕೇಳಿದಾಗ ನಮ್ಮ ಮಾಮೂಲು ವಿವರಣೆ ಸಾಕಾಗಲಿಲ್ಲ. ಅದುವರೆಗೂ ಅಚಿಬೆಯ ಬರವಣಿಗೆಯಲ್ಲೇ ಹೆಸರಿನ ಅರ್ಥವನ್ನು ಕಂಡು ಉಳಿದವರಿಗೂ ಕನ್ವಿನ್ಸ್ ಮಾಡುತ್ತಿದ್ದ ನಾವು ಯೋಚಿಸಲಾರಂಭಿಸಿದೆವು. ಅಂತರ್ಜಾಲದ ಮೂಲಕ ಮಾಡಿದ ಹಲವು ಪ್ರಯತ್ನಗಳು ಫಲಕಾರಿಯಾಗದಿದ್ದರೂ, ಕೊನೆಗೆ ನೈಜಿರಿಯಾದ ಪತ್ರಕರ್ತ ವಿದ್ಯಾರ್ಥಿಯೊಬ್ಬರು ಇನ್ನೊಂದು ಭಾಗದ ‘ಚಿನುವಾ’ ಶಬ್ದದ ಅರ್ಥ ಹುಡುಕಿ ನಮಗೆ ತಲುಪಿಸಿದರು. ಅದು ‘God is listening’
ನಾನು ಇಷ್ಟೆಲ್ಲ ನೆನಪು ಮಾಡಿಕೊಂಡದ್ದು ಮಾರ್ಚ್ 22ರಂದು “Chinua Achebe, ‘father of modern African literature,’ dies at 82” ಎಂಬ ಮಾಹಿತಿ ಬಂದಾಗ. ಅವರು ತನ್ನ ವಿಚಾರಗಳು, ಪುಸ್ತಕಗಳ ಮೂಲಕ ನಮ್ಮ ಮನದಲ್ಲಿ ಯಾವತ್ತೂ ಇರುತ್ತಾರೆ.
Quotes of Achebe
Art is man’s constant effort to create for himself a different order of reality from that which is given to him.”
– Chinua Achebe
“One of the truest tests of integrity is its blunt refusal to be compromised.”
– Chinua Achebe
“While we do our good works let us not forget that the real solution lies in a world in which charity will have become unnecessary.”
― Chinua Achebe, Anthills of the Savannah
“While we do our good works let us not forget that the real solution lies in a world in which charity will have become unnecessary.”
― Chinua Achebe, Anthills of the Savannah
“Charity . . . is the opium of the privileged.”
― Chinua Achebe, Anthills of the Savannah
“The sun will shine on those who stand before it shines on those who kneel under them.” (Things Fall Apart, 1958, Chinua Achebe)









ಚಿನುವಾ ಅಚಿಬೆಗಿನ ನಿಮ್ಮ ಒಲವು ನಿಮ್ಮ ಮಗನ ಹೆಸರಿನಲ್ಲೂ ವ್ಯಕ್ತವಾಗಿರುವದು ವಿಶೇಷ. ಚಿನುವಾ ಅಚಿಬೆ ಆಂಗ್ಲ ಸಾಹಿತ್ಯದ ಒಂದು ದೈತ್ಯ ಪ್ರತಿಭೆ. ಅವರ ಒಂದೊಂದು ಕೃತಿಯು ನಾವು ಕೇಳಿರಿದ, ಕಂಡಿರಿದ ಆಫ್ರಿಕಾ ಜನರ ಬದುಕಿನ ಸತ್ಯಗಳನ್ನು ಅನಾವರಣಗೊಳಿಸುತ್ತವೆ. ನಾನು M.A. ವಿದ್ಯಾರ್ಥಿಯಗಿದ್ದಾಗ ಅವರ Things Fall Apart ನ್ನು ಬಹು ಇಷ್ಟಪಟ್ಟು ಓದಿ ಅದರಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದೆ. ಒಬ್ಬ ಉಪನ್ಯಾಸಕನಾಗಿ ಅವರ The Dead Men’s Path ಮತ್ತು Marriage is a Private Affair ನ್ನು ವಿದ್ಯಾರ್ಥಿಗಳಿಗೆ ಬೋಧಿಸುವಾಗ ಮತ್ತೆ ಮತ್ತೆ ಹೊಸ ಹೊಸ ಹೊಳಹುಗಳನ್ನು ಕಂಡುಕೊಂಡಿದ್ದೇನೆ. Thanks for the article.
ಪುಟ್ಟ ಪ್ರಬಂಧದಲ್ಲಿ ಚಿನುವಾ ಸಾಹಿತ್ಯದ ಬಗ್ಗೆ ಉತ್ತಮ ಪರಿಚಯ. ಚಿನುವಾನ ಚೆರ್ರಿ ಮರ ಏನಾಗಿದೆ ?