ಉಕ್ಕಿನ ಮಹಿಳೆಯ ಮನೆಯಲ್ಲಿ
ಹೆಕ್ಕಿದ ಸಿಹಿ ಮಾವಿನ ಹಣ್ಣು..!!
ಗಿರಿಧರ ಕಾರ್ಕಳ
ಭಾರತದ ರಾಜಕೀಯ ಪರ್ವದಲ್ಲಿ ದಿ.ಇಂದಿರಾ ಗಾಂಧಿ ಯವರದೇ ಒಂದು ವಿಶಿಷ್ಟ ಅಧ್ಯಾಯ. ಸುದೀರ್ಘ ಕಾಲ ಈ ದೇಶದ ಪ್ರಧಾನಿಯಾಗಿ ಅನೇಕ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದವರು. ಜೊತೆಗೇ ಅಭಿವ್ಯಕ್ತಿ ಸ್ವಾತಂತ್ರ್ಯ ದಮನಿಸುವ ತುರ್ತು ಸ್ಥಿತಿಗೂ ಕಾರಣರಾದವರು.
ನಾನೇನೂ ಇಂದಿರಾ ಭಕ್ತನಲ್ಲ. ತುರ್ತು ಸ್ಥಿತಿ ವಿರೋಧೀ ಹೋರಾಟದಲ್ಲಿ ಕಾಲೇಜು ಹುಡುಗರ ಜತೆ ಸಕ್ರಿಯವಾಗಿ ಪಾಲ್ಗೊಂಡವನೇ. ತುರ್ತು ಸ್ಥಿತಿಯ ನಂತರ ಮಂಗಳೂರಿಗೆ ಬಂದ ಇಂದಿರಾ ನಮ್ಮ ಕಾಲೇಜಿನ ಮುಂದೆ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಒಬ್ಬನೇ ಕಾಂಪೌಂಡ್ ಗೋಡೆ ಹತ್ತಿ ” ಇಂದಿರಾ ಗೋ ಬ್ಯಾಕ್ ” ಅಂತ ಜೋರಾಗಿ ಕಿರುಚಿ ಪೋಲೀಸರು ಅಟ್ಟಿಸಿಕೊಂಡು ಬರುವಷ್ಟರಲ್ಲಿ ಕಾಂಪೌಂಡ್ ಜಿಗಿದು ಓಡಿ ತಪ್ಪಿಸಿಕೊಂಡ ಸಾಹಸಿ ನಾನು..!!
ಕಳೆದ ತಿಂಗಳು ದೆಹಲಿಯ ಇಂದಿರಾ ಗಾಂಧಿಯವರ ಮನೆಯೊಳಗೆ ಸುತ್ತಾಡುತ್ತಿದ್ದಾಗ – ಆಕೆಯ ಬದುಕಿನ ವಿವಿಧ ಮಜಲಿನ ನೆನಪುಗಳನ್ನು ಕಂಡಾಗ, ತುರ್ತು ಸ್ಥಿತಿಯ ಹೊರತಾಗಿಯೂ ಆಕೆಯ ಬಗ್ಗೆ ಅತೀವ ಗೌರವ ಮೂಡಿದ್ದು ಸುಳ್ಳಲ್ಲ…!!
ಅದರಲ್ಲೂ – ಕಾವಲು ಭಟರ ಗುಂಡೇಟಿಗೆ ಬಲಿಯಾಗಿ ಕುಸಿದು ಬಿದ್ದ ಜಾಗದಲ್ಲಿ ನಿಂತಾಗ ನನಗರಿವಿಲ್ಲದಂತೆ ಕಣ್ಣೀರು ಜಿನುಗಿತು.
ನಾನಲ್ಲಿ ನಿಂತಾಗಲೇ ಅಲ್ಲೇ ಇಂದಿರಾ ರಕ್ತ ಚಿಮ್ಮಿದ ಜಾಗದಲ್ಲಿದ್ದ ಮಾವಿನ ಮರದಿಂದ ಹಣ್ಣೊಂದು ಉದುರಿತು. ತಕ್ಷಣವೇ ನನ್ನಾಕೆ ಓಡಿ ಆ ಹಣ್ಣನ್ನು ಹೆಕ್ಕಿ ಜೋಪಾನವಾಗಿ ಚೀಲದಲ್ಲಿಟ್ಟು ಮನೆಗೂ ತಂದಳು. ತಂದ ಮರುದಿನವೇ ಅದನ್ನು ಕೊಯ್ದು ರುಚಿ ಸವಿದೆವು. ನಿಜಕ್ಕೂ ಅದು ತುಂಬ ಸಿಹಿಯಾಗಿತ್ತು. ವಿಶಿಷ್ಟ ಒಗರಿನ ಸ್ವಾದದಿಂದ ತುಂಬಿತ್ತು.
ಆ ಹಣ್ಣಿನ ಬೀಜವನ್ನು ಮನೆಯ ಹೂಕುಂಡದಲ್ಲಿ ಹಾಕಿಟ್ಟಿದ್ದೇವೆ.ಮನೆಯ ಆವರಣದಲ್ಲೇ ಅದು ಗಿಡವಾಗಿ ಮರವಾಗಿ ಬೆಳೆಯುವುದನ್ನು ನೋಡುವ ಕನಸು ನಮ್ಮದು…!!!





0 Comments