ಅಲ್ಲಿ ಶರಾಬಿನ ಅಮಲಿದೆ, ಮಾವಿನ ಮದವಿದೆ, ಪ್ರೇಮದ ನಶೆಯಿದೆ..

ಗಾಲಿಬ್ @ 150

ಪ್ರೊ. ಚಂದ್ರಶೇಖರ ಹೆಗಡೆ

ಇಂದು ಪ್ರಾತಃಕಾಲ ೫ ಗಂಟೆಯ ಸಮಯ. ಶುಭೋದಯದ ಹೊಸ್ತಿಲಲ್ಲಿ ನಿಂತ ಪ್ರಕೃತಿಯು ವಸಂತಾಗಮನದಿಂದ ಉಲ್ಲಾಸಗೊಂಡಿತ್ತು. ಚೈತ್ರದ ಚಿಗುರಿನ ಸವಿಯನ್ನುಣಲು ಕಾದು ಕುಳಿತ ಗಿಳಿ, ಕೋಗಿಲೆ ,ರತುನಗಳು  ತಾ ಮುಂದು ನಾ ಮುಂದು ಎಂದು ಸ್ಪರ್ಧೆಗಿಳಿದು ಮೈಮುರಿಯುತ್ತಿದ್ದವು. ಮನೆಯ ಮುಂದಿನ ಮಲ್ಲಿಗೆ ದಾಸವಾಳ ಜಾಜಿ ಗಳು ತಂಗಾಳಿಗೆ ಮೈಯ್ಯೊಡ್ಡಿ ಮೊಗ್ಗುಗಳನ್ನರಳಿಸುತ್ತಿದ್ದ ಸುಸಮಯ. ಅದಾಗಲೇ ಅಂಗಳದ ತಲೆಯ ಮೇಲೆಲ್ಲಾ ಚಾಚಿ ಮುಗಿಲು ಚುಂಬಿಸುವ ಕೊಂಬೆಗಳಿಂದ ನೃತ್ಯಗೈಯ್ಯುತ್ತಿದ್ದ ಬೇವು, ಹೆಂಗಳೆಯರ ಬೆಂಡೋಲೆಯಂತಹ  ಚಿತ್ತಾರದ ಹಳದಿ ಹೂಗಳಿಂದಲಂಕರಿಸಿಕೊಳ್ಳುತ್ತಿದ್ದ ಶುಭಘಳಿಗೆ. ಕಣ್ಣ ಮುಂದಿನ ಪುಟ್ಟ ಮಗುವಿನಂತಿದ್ದ ಮಾವಿನ ಸಸಿಯೂ ಚಿಗುರೆಲೆಗಳಿಂದ ಸಿಂಗರಿಸಿಕೊಂಡು ಬರುವ ನವಯುಗಾದಿಯ ಹಬ್ಬಕ್ಕೆ ಹೊಸದಿರಿಸನ್ನುಡಲು ತಯಾರಿ ನಡೆಸುತ್ತಿತ್ತು.

ಪಕ್ಕದಲ್ಲಿದ್ದ ಬ್ರಹ್ಮಕಮಲದ ಎಳೆಯ ಸಸ್ಯವೂ ತಾನೇನು ಕಮ್ಮಿ ಎಂದು ಉದ್ದನೆಯ ಚಾಮರದಂತಹ ಎಳೆಯ ಎಲೆಗಳನ್ನುಟ್ಟುಕೊಂಡು ಬರಲಿರುವ ಉತ್ಸವಕ್ಕಾಗಿ ಚಿಗಿಯುತ್ತಿರುವಂತಿತ್ತು. ನವ ವಸಂತದಲ್ಲಿ ರಾಗವೈಭವದಿಂದ ಹಾಡಿ ನಲಿಯಲು ದನಿಯನ್ನು ಚಿಲಿಪಿಲಿಗುಟ್ಟಿ ತಿದ್ದಿ ತೀಡಲು ಸಿದ್ಧವಾದಂತಿದ್ದವು ಕೋಗಿಲೆ, ಗುಬ್ಬಿ, ಗೀಜಗ, ಭ್ರಮರಗಳು. ಮುನ್ಸೂಚನೆಯಾಗಿ  ಗುಂಯ್ ಎನ್ನುವ ದುಂಬಿಗಳು ಏಕತಾರಿಯನ್ನು ಹಿಡಿದು ಕುಸುಮಗಳನ್ನು ಹುಡುಕಿ ಹೊರಟಂತಿದ್ದವು. ಹೀಗೆ ಪ್ರಕೃತಿಯ ಅಣುರೇಣು ತೃಣಕಾಷ್ಠವೂ ಆಗಮಿಸಿರುವ ಯುಗಾದಿಯ ಮನ್ವಂತರಕೆ ಹಾತೊರೆಯುತ್ತಿದ್ದವು. ಈ ಶುಭಘಳಿಗೆಯನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಿದ ಪ್ರಕೃತಿ ಮಾತೆಗೆ‌ ಹೃದಯದಲ್ಲಿಯೇ ಶಿರಸಾಷ್ಟಾಂಗ ಶರಣು ಶರಣಾರ್ಥಿಗಳನ್ನು ಸಲ್ಲಿಸಿ ಬಾಗಿದೆ.

ಇಂತಹ ತಂಗಾಳಿಯ ಮಬ್ಬು ನಸುಕಿನ ಅಮೃತಘಳಿಗೆಗೆ ಯಾವುದಾದರೊಂದು ಕಾವ್ಯಾರಾಧನೆಯ ಘಮಲು ಸೇರಿದರೆ ಅದೆಷ್ಟು ಚೆನ್ನ ! ಸ್ವರ್ಗಕ್ಕೆ ಕಿಚ್ಚು ಹಚ್ಚುವುದೊಂದೇ ಬಾಕಿ. ಹಾಗೆಂದುಕೊಂಡು‌ ದೀಪ ಬೆಳಗಿಸಿ ಗ್ರಂಥಾಲಯದಲ್ಲೊಮ್ಮೆ ಇಣುಕಿ ಹುಡುಕಿದೆ. ಮಿರ್ಜಾ ಗಾಲಿಬನ ಕುರಿತಾದ ಪುಸ್ತಕವೊಂದು ಕೈಗೆ ದಕ್ಕಿತು. ಇನ್ನೇನು ಬೇಕು ? ನವ ಯುಗಾದಿಯ ಶುಭೋದಯವನ್ನಾಚರಿಸಲು. ಬೆಳಗಿನ ತಂಗಾಳಿಗೆ ಸುಗಂಧವಾಗಿ ಸುಳಿದ ಮಿರ್ಜಾ ಗಾಲಿಬ್ ನನ್ನು ಆಸ್ವಾದಿಸುವುದೆಂದರೆ, ಜಗದ ಕಾವ್ಯನಶೆಯನ್ನೆಲ್ಲಾ  ಎದೆಯೊಳಗಿಳಿಸಿಕೊಂಡಂತೆ! ಹೌದು. ಆತ ಕೇಳುತ್ತಾನೆ

“ಗಾಲಿಬ್ ಶರಾಬ್ ಪೀನೆ ದೇ ಮಸಜಿದ್ ಮೆ ಬೈಠಕರ್
ಯ ವೋ ಜಗಾ ಬಥಾ ಜಹಾ ಖುದಾ ನಹೀ”
( ಮಸೀದಿಯಲ್ಲಿ ಕುಳಿತು ಮದಿರೆ ಕುಡಿಯಲು ಬಿಡು
ಇಲ್ಲಾ ದೇವನಿಲ್ಲದ ಸ್ಥಳವನ್ನಾದರೂ ತೋರು)

ಎಂದು.‌ ಸ್ಥಾಪಿಸಿಕೊಂಡ ಸಾಂಸ್ಥಿಕ ವ್ಯವಸ್ಥೆ, ಧರ್ಮ, ಸಂಪ್ರದಾಯ, ನಂಬಿಕೆಗಳು ಅವನೆತ್ತುವ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಸೋಲುವುದನ್ನು ಕಾಣುತ್ತೇವೆ. ಇದನ್ನೇ ಅಲ್ಲವೇ ಕನದಕದಾಸರ ಬಾಳೆಹಣ್ಣಿನ ರೂಪಕವೂ ಮತ್ತೊಂದು ಬಗೆಯಲ್ಲಿ ಜಗತ್ತನ್ನು ಪ್ರಶ್ನಿಸುತ್ತಿರುವುದು.

ಶಬ್ದ ರೂಪಕಗಳಷ್ಟೇ ವಿಭಿನ್ನ, ಪ್ರತಿಪಾದಿಸುತ್ತಿರುವ ಇಬ್ಬರ ತಾತ್ವಿಕತೆಯ ದರ್ಶನವೂ ಒಂದೇ. ಕವಿಯೊಬ್ಬ ಹಾಡುತ್ತಾನೆ- “ದೇವನ ಮನೆಯಿದು ಈ ಜಗವೆಲ್ಲಾ ಬಾಡಿಗೆದಾರರು ನಾವುಗಳೆಲ್ಲಾ” ಈ ಸತ್ಯಶೋಧನೆಯಿಂದ ಸಮಾಜವನ್ನು ಜಾಗೃತಗೊಳಿಸುವುದು ಗಾಲಿಬ್ ನ ಕವಿತೆಯ ಗುರಿಗಳಲ್ಲೊಂದಾಗಿತ್ತು.

ಗಾಲಿಬನ ಕವಿತೆಗಳೆಂದರೆ ನಿಶಾಂತವಾಗಿ ಹರಿಯುವ ನದಿಯ  ಮಂಜುಳಗಾನ ; ಏಕಾಂತದ ತಪದಲಿದ್ದು ಆಚರಿಸುವ ಮೃದು ಮಧುರ ಧ್ಯಾನ; ಶಾಂತವಾಗಿ ದಡಕಪ್ಪಳಿಸಿ ಚುಂಬಿಸುವ ಕಡಲಲೆಗಳ ಮೊರೆವ ಯಾನ; ಹಸಿರೆಲೆಗಳ‌ ಮರೆಯಿಂದ ಇಣುಕಿ ಹರಿಸುವ ಗಿಳಿ ಕೋಗಿಲೆಗಳ ರಸಗಾನ. ಒಡಲೊಳಗಿಳಿಸಿಕೊಂಡ ಮದಿರೆಯ ನಿಶಾಗಾನ. ಈ  ಮಾಧುರ್ಯದ ಬನಿಯ ಜೊತೆ ಜೊತೆಗೆ ಮಿರ್ಜಾ ಅಸಾದುಲ್ಲಾಬೇಗ್ ಖಾನ್ ಗಾಲಿಬ್ ನ ಕಾವ್ಯದ ಇರಿಯುವಿಕೆಯೂ ಅದೆಷ್ಟು ಆಳವಾಗಿತ್ತೆಂದರೆ ಸ್ವತಃ ಮಹಾಕವಿಗಳಲ್ಲದೆ, ಆಳುವ ಅರಸರೇ ಕೇಳಿ ಬೆಚ್ಚಿಬೀಳುತ್ತಿದ್ದರು.

ಆ ಪ್ರಸಂಗವೊಂದು ಹೀಗಿದೆ –  ಮೊಗಲರ ದೊರೆಯ ಮಗ ಜಾಫರ್ ನ ಕಾವ್ಯಗುರುವಾಗಿದ್ದ ಮಹಾಕವಿ ಜೈಕ್. ಅರಮನೆಗೆ ಹೋಗುವ ಬೀದಿಯಲ್ಲೊಮ್ಮೆ ಆಕಸ್ಮಾತಾಗಿ ಸಿಕ್ಕ  ಜೈಕ್ ಕವಿಯ ಪಲ್ಲಕ್ಕಿಯಲ್ಲಿನ ಮೆರವಣಿಗೆಯನ್ನು ಕಂಡ ಗಾಲಿಬ್ “ಮಹಾರಾಜರ ಕೃಪೆಯೆಂದು ಈ ಬೀಗುವಿಕೆಯೇ’ ಎಂದು ಹಾಡಿದ. ದೂರು ದರ್ಬಾರಿಗೆ ಹೋಯಿತು. ಆಹ್ವಾನಿಸಿದ ಕವಿಗೋಷ್ಠಿಗೆ ಮುನ್ನ ಇದರ ಬಗ್ಗೆ ಸ್ಪಷ್ಟನೆ ಕೇಳಿದಾಗ ಗಾಲೀಬನೆಂದ ‘ಜೈಕ್‌‌ ಕವಿಗೆ ನಾನು ಅಪಮಾನಿಸಿಲ್ಲ.’ ಹಾಗಾದರೆ ಆ ಕವಿತೆಯ ಸಾಲನ್ನೊಮ್ಮೆ ಪೂರ್ಣವಾಗಿ ಹೇಳು ಎಂದು ಒತ್ತಾಯಿಸಲಾಗಿ -ತಡಮಾಡದೇ ಗಾಲಿಬ್ ಆ ಆಶುಕವಿತೆಯನ್ನು ಮುಂದುವರೆಸಿ – “ಮಹಾರಾಜರ ಕೃಪೆಯೆಂದು ಈ ಬೀಗುವಿಕೆಯೇ ಗಾಲಿಬ್ ನಿನಗಿದನ್ನು ಹೊರತುಪಡಿಸಿ ಬೇರೇನಿದೆ ಬದುಕಲು” ಎಂದು ಹಾಡಿಬಿಟ್ಟ. ಅಲ್ಲಿದ್ದ ಚಕ್ರವರ್ತಿಯಾದಿಯಾಗಿ ಸಭಾಸದರೆಲ್ಲರೂ ಹೋ ಎಂದು ಮೆಚ್ಚುಗೆಯ ಸುರಿಮಳೆಗೈದರು.

ಯೋಧನ ಕುಟುಂಬದಲ್ಲಿ ಜನಿಸಿ ಖಡ್ಗ ಹಿಡಿಯಬೇಕಾಗಿದ್ದವನು ಕತ್ತಿಯಂತೆ ಬಳಸಬಹುದಾದ ಲೇಖನಿಯನ್ನು ಹಿಡಿದೆ ಎಂದು ಬರೆದುಕೊಳ್ಳುತ್ತಾನೆ. ಗಾಲಿಬ್ ಐದು ವರ್ಷದವನಿರುವಾಗಲೇ  ತನ್ನ ತಂದೆ ಮಿರ್ಜಾ ಅಬ್ದುಲ್ಲಾ ಬೇಗ್ ರವರನ್ನು ಕಳೆದುಕೊಂಡ. ಆಶ್ರಯದಾತನಾದ ಚಿಕ್ಕಪ್ಪ ನಸರುಲ್ಲಾ ಬೇಗ್ ಖಾನ್ ರು ‌ಗಾಲೀಬನ  ೯ ವರ್ಷದಲ್ಲಿಯೇ ತೀರಿಹೋದರು. ಇಂತಹ ವಿಧಿಯನ್ನು ಕುರಿತೇ ಗಾಲಿಬ್ ಹಾಡಿದ ಹಾಡನ್ನು ಕೇಳಿ –

“ದೈತ್ಯ ಅಲೆಗಳ ಕದನದಲ್ಲಿ
ಸುಳಿಗೆ ಸಿಕ್ಕಿದೆ ನಾವೆ
ನಾವಿಕ ನಿದ್ದೆ ಹೋಗಿದ್ದಾನೆ
ವಿಧಿಯನ್ನೇಕೆ ಜರಿಯುವೆ ಗಾಲಿಬ್?”

೧೨ ಸಾವಿರ ದ್ವಿಪದಿಗಳನ್ನು ರಚಿಸಿದ ಗಾಲಿಬನನ್ನು ದೆಹಲಿ ಸಹಿಸಿಕೊಂಡಿದ್ದು ಅಪರೂಪ. ಕಸೀದ್, ರೇಖ್ತಾ, ಗಜಲ್, ರುಬಾಯಿ, ದ್ವಿಪದಿ ಗಳಂತಹ ಕಾವ್ಯಾಕ್ಷಿಯರನ್ನೆಲ್ಲಾ ಮದಿರೆಯಂತೆ ಪ್ರೀತಿಸಿ ಅವರ ನಶೆಯನ್ನೇರಿಸಿಕೊಂಡ ಗಾಲಿಬನ ಬದುಕೇ ಹೋರಾಟದ ಮಹಾಕಾವ್ಯವಾಗಿತ್ತು. ಪರಿಶ್ರಮದಿಂದ ತೋಡಿದ ಬಾವಿಯ ಒರತೆಯಂತೆ ನಿತ್ಯವೂ ಕೂಲಿಗಾಗಿ ಕಾಯುವಂತಹ ದುಸ್ಥಿತಿಯನ್ನು ಅನುಭವಿಸಿ ಮಾಗಿದ. ದೆಹಲಿಯ ಸಿಂಹಾಸನದ ಪಕ್ಕದಲ್ಲಿದ್ದರೂ ಬಹುಪಾಲು ಅನಾಮಿಕನಾಗಿಯೇ ಬದುಕಿದ.

ಚಿಕ್ಕಪ್ಪನ ರೂ. ೭೫೦  ಪಿಂಚಣಿಯಲ್ಲಿಯೇ ತನ್ನ ಬಾಳನ್ನು ಹಾಸಿಕೊಂಡು, ಬರೆದ ಕಾವ್ಯದ ಹಾಳೆಗಳನ್ನೇ ಹೊದ್ದು ಮಲಗಿದ‌ ಮಹಾ ಫಕೀರ. ಹೊತ್ತಲ್ಲದ ಹೊತ್ತಿನಲ್ಲಿ ಮದುವೆಯಾಗಿ ಬಾಲ್ಯದ ಗೆಳತಿಯನ್ನೇ ಸತಿಯನ್ನಾಗಿ ಕಟ್ಟಿಕೊಂಡು ತಿರುಗಿದವನ ಬಾಳಿಗೆ ಕಾವ್ಯಗಳೇ‌ ಬೆಳಕನ್ನು ನೀಡಿದವು. ದೆಹಲಿಯಲ್ಲಿನ ಮಸೀದಿಯ ಕತ್ತಲೆಯ ದಾರಿಯಲ್ಲಿ ನಡೆಯುವವನ ಕೈಹಿಡಿದು ಮುನ್ನಡೆಸಿದ್ದು ಗಜಲ್ ಗಳೇ. ತನ್ನ ಕಾವ್ಯಕ್ಕೊಂದು ಜನಮೆಚ್ಚುಗೆ ದೊರೆತು ದೊರೆಯ ಪುರಸ್ಕಾರ ದಕ್ಕಿಸಿಕೊಂಡರೆ ಸಾಕು. ಅಂದಿನ ಅವನ ಗುಲಾಬು, ಶರಾಬಿ, ರೊಟ್ಟಿಗೆ  ತಾಪತ್ರಯವಿರಲಿಲ್ಲ. ಇದಷ್ಟೇ ಅವನ ಬದುಕಿನ ಚಿಂತೆಯಾಗಿತ್ತು.

‘ಬಾರದು ಬಪ್ಪುದು, ಬಪ್ಪುದು ತಪ್ಪದು’ ಎಂಬಂತೆಯೇ ಬದುಕಿದ ಮಿರ್ಜಾ ಗಾಲಿಬ್ ದೆಹಲಿಯ ಸಂದಿಗೊಂದಿಗಳನ್ನು ತಿರುಗಿದ.‌ ಬೀದಿ ಬದಿಯ ಸಾಮಾನ್ಯರ ಸಂತೆಯಲ್ಲಿದ್ದೂ ಸಂತನಾದ. ಲೌಕಿಕ ಬದುಕಿನ ರಥ‌ ಮುನ್ನಡೆಸಲು ತನಗೆ ಬರಬೇಕಾದ ಪಿಂಚಣಿ ಹಣಕ್ಕಾಗಿ ಫಕೀರನಂತೆ ಪರದಾಡಿದ್ದರ ಮಧ್ಯೆಯೂ ಅಲೌಕಿಕ ದರ್ಶನದ ಕಾವ್ಯನಿಧಿಯನ್ನು ಭವಿತವ್ಯದ ಭಾರತಕ್ಕಾಗಿ ಸಂಪಾದಿಸಿದ ಹಿರಿಮೆ ಗಾಲೀಬನದು. ದೆಹಲಿಯ ದರ್ಬಾರಿನಲ್ಲಿ ರಾಜಕವಿಯಾಗುವ ಅವಕಾಶಕ್ಕಾಗಿ ಕಾದು ಕಾದು ಪ್ರಯತ್ನದಲ್ಲಿ ಸಫಲನಾದ. ಕಾವ್ಯವನ್ನೇ ಉಸಿರಾಗಿಸಿಕೊಂಡು  ಕಾವ್ಯದೊಂದಿಗೆ ಬಾಳುತ್ತಿದ್ದವನನ್ನು ಕಾವ್ಯಕನ್ನಿಕೆ ಕೈ ಬಿಡಲಿಲ್ಲ. ಆಸ್ಥಾನದ ದಾರಿ ತೋರಿ ಒಳಬಿಟ್ಟಳು.

ಕಾವ್ಯಸಮ್ಮೇಳನ, ಕವಿಗೋಷ್ಠಿಗಳಲ್ಲಿ ಗಾಲೀಬನದೇ ಮೇಲುಗೈ. ಆಶ್ರಯವಿತ್ತ ಅರಸನ ಮೇಲೆ ಕಸೀದನ್ನು ಬರೆದು ಕುಣಿಸಿದ. ತನ್ನ ಮುಂದೆಯೇ ಪಲ್ಲಕ್ಕಿಯ ಮೇಲೆ ಮೆರೆದವರನ್ನು ಕಾವ್ಯಕುಂಚದಿಂದಲೇ ಕುಟುಕಿದ. ಒಳಗೊಳಗೆ ಪಿತೂರಿ ನಡೆಸುತ್ತಿದ್ದವರನ್ನು ವಿಡಂಬಿಸಿ ಹೆಡೆಮುರಿ ಕಟ್ಟಿದ. ತನ್ನ ಪಿಂಚಣಿ ಹಣಕ್ಕಾಗಿ ಕಾಡಿಸಿದವರನ್ನು ಕಸೀದ್ ಗಳಲ್ಲಿಯೇ ಬಂಧಿಸಿ ಮೆರೆಸಿ ಒಲಿಸಿಕೊಂಡ. ಮೌಢ್ಯತೆ, ಧಾರ್ಮಿಕ ಮೂಢನಂಬಿಕೆ, ಬೂಟಾಟಿಕೆಗಳನ್ನು ಖಂಡಾತುಂಡವಾಗಿ ವಿರೋಧಿಸಿ ಭಾವೈಕ್ಯತೆ, ವೈಚಾರಿಕತೆ ಮೂಲಕ ಜನ ಕಲ್ಯಾಣದ ಪಣ ತೊಟ್ಟುಕೊಂಡ.‌ ಈತನ  ಕಾವ್ಯದಲ್ಲಿ ದೋಷಗಳಿವೆ ಎಂದು ಆರೋಪಿಸಿದವರಿಗೆ ಗಜಲ್ ಗಳ  ಮೂಲಕವೇ ತಿರುಗೇಟು ಕೊಟ್ಟ.

ಕನ್ನಡದ ಕವಿವರೇಣ್ಯರು ಪಂಡಿತರ ಭಾಷೆಯಾದ ಹಳಗನ್ನಡವನ್ನು ತ್ಯಜಿಸಿ ಸಾಮಾನ್ಯರ ಸವಿಗನ್ನಡಕ್ಕೆ ಒತ್ತುನೀಡಿದಂತೆ, ಗಾಲೀಬನೂ ಕೂಡ ಪಂಡಿತರ ಪರ್ಷಿಯನ್ ಬಿಟ್ಟು ಸಾಮಾನ್ಯರ ಉರ್ದುವಿನಲ್ಲಿ ಕಾವ್ಯಝರಿ ಹರಿಸಿ‌ ಉಭಯಭಾಷಾವಿಶಾರದನಾದ.‌ಜಾತಿ, ಮತ, ಪಂಥಗಳಾಚೆಯೂ ಬಹು ಜನರಿಗೆ ಹತ್ತಿರವಾದ. ಕಟ್ಟಿಕೊಂಡ ಸತಿ ಉಮ್ರಾವ್ ಬೇಗಂ ನಿತ್ಯ ಕರೆಗೊಡುವ ಐದೂ ಆಜಾನ್ ಗಳಿಗೆ  ತಪ್ಪದೇ ಪ್ರಾರ್ಥನೆ ಸಲ್ಲಿಸುವ ಪರಮ ದೈವ ಭಕ್ತೆ. ಆದರೆ ಗಾಲಿಬ್ ಮಸೀದಿಯ ಕಡೆಗೇ ಮುಖ ಮಾಡದ ಅಪ್ಪಟ ಕಾವ್ಯಧರ್ಮಿ. ಸಂಸಾರದ ಅಂತರಂಗದಲ್ಲಿ ದಾರಿ ಹೀಗೆ ಕವಲೊಡೆದಾಗ ಆಸರೆಯಾಗಿದ್ದು ಆತ ನಂಬಿದ ಕಾವ್ಯರಾಣಿಯೇ.  ಜನಿಸಿದ ಏಳು ಮಕ್ಕಳೂ ನಕ್ಷತ್ರಗಳಂತೆ ಕಣ್ಣೆದುರೇ ಉದುರಿಬಿದ್ದಾಗ ವಿಹ್ವಲನಾದ. ಕಣ್ಣೆದುರಿನ ಮಗುವಿನ ಕೆನ್ನೆ ಸವರಿದಾಗ ಸಿಗುವ ಸ್ವರ್ಗಾನಂದ ಯಾವ ಕಾವ್ಯಾನಂದಕ್ಕಿಂತ ಕಡಿಮೆ ಹೇಳಿ ?  ಈ ಭಾಗ್ಯ ಗಾಲೀಬನಿಗೆ ದಕ್ಕದಿದ್ದಾಗ ತನ್ನದೇ ಅಂತರಂಗದ ಕುಡಿಗಳಂತಿದ್ದ ಕಾವ್ಯಗಳನ್ನೇ ತಿರಸ್ಕರಿಸಲಾರಂಭಿಸಿದ.‌

ಆದರೆ ಕಾವ್ಯವನ್ನು ಬಿಟ್ಟ ಗಾಲಿಬ್ ನನ್ನು  ಕಲ್ಪಿಸಿಕೊಳ್ಳುವುದಾದರೂ ಹೇಗೆ? ಮೊಮ್ಮಕ್ಕಳ‌ ಮುಖ ನೋಡಿ ಮತ್ತೆ ಲಯಕ್ಕೆ ಹಿಂತಿರುಗಿದ. ಇದು ಅವನಲ್ಲಿದ್ದ ಜೀವನಪ್ರೀತಿಯ ವಿರಾಟ ರೂಪದ ವಿಲಾಸದ ಕೈಲಾಸ.‌ ಅರಮನೆಯ ಪಲ್ಲಕ್ಕಿಯ ಮೇಲೆ ಕುಳಿತುಕೊಂಡು ರಾಜಾಶ್ರಯ ಪಡೆದು ಆಸ್ಥಾನಕವಿಯಾಗಬೇಕೆಂಬ ಅವನ ಹಂಬಲ ಎಲ್ಲ ಕವಿಗಳಲ್ಲಿದ್ದಂತೆ ಈತನಲ್ಲಿಯೂ ಸಹಜವಾಗಿದ್ದುದರಲ್ಲಿ ಆಶ್ವರ್ಯವೇನಿಲ್ಲ .‌ಕಂಡ ಕನಸನ್ನು ನನಸಾಗಿಸಿಕೊಳ್ಳಲು ಇನ್ನಿಲ್ಲದಂತೆ ಹೆಣಗಾಡಿದ. ದೆಹಲಿಯ ಸಾಮ್ರಾಜ್ಯಶಾಹಿ ಸಂಘರ್ಷದ ಚರಿತ್ರೆ ಹಾಗೂ ತನ್ನದೇ ಡೋಲಾಯಮಾನ ಬದುಕಿನ ರೂಪಕದಂತಿರುವ   ಕವಿತೆಯೊಂದನ್ನು ಗಾಲಿಬ್ ಹಾಡಿದ್ದು ಹೀಗೆ-

ಓಡುತಿದೆ ಆಯುಷ್ಯದ ಅಶ್ವ: ಎಲ್ಲಿ ಹೋಗಿ ನಿಲ್ವುದೋ
ಕಡಿವಾಣ ಕೈಯೊಳಿಲ್ಲ, ಅಂಕವಣೆಯೊಳಿಲ್ಲ ಕಾಲು!’

ಪೊಟ್ಟಣ ಕಟ್ಟುವ ಕಾಲಡಿಯ ಹಾಳೆಯಲ್ಲಿ ಸಿಕ್ಕ ಕಾವ್ಯದ ಸಾಲುಗಳನ್ನು ಆಕಸ್ಮಾತಾಗಿ ಗುಣುಗುಣಿಸಿ ಹಾಡಿದವಳ ದನಿಯನ್ನು ಕೇಳಿದ ಗಾಲಿಬನಿಗೆ ಹಾರಿ ಹೋಗುತ್ತಿದ್ದ ಹೃದಯದ ಹಕ್ಕಿ ಮರಳಿ ಎದೆಗೂಡಿಗೆ ಇಳಿದಂತಾಯಿತು; ದೆಹಲಿಗೆ ಬೇಡವಾದ ತನ್ನ ಕಾವ್ಯದಿಂದ ವಿಚಲಿತನಾಗಿದ್ದವನಿಗೆ ಮರಭೂಮಿಯಲ್ಲಿ ಓಯಸಿಸ್ ದೊರಕಿದ ಸಂಭ್ರಮ; ಬತ್ತಿ ಹೋಗುತ್ತಿದ್ದ ಅವನೆದೆಯ ಚೈತನ್ಯದ ಚಿಲುಮೆ ಮತ್ತೆ ಪುಟಿದಂತಾಯಿತು; ಮೋಡಗಳ‌ ಹಿಂದೆ ಮರೆಯಾಗಿ ಕತ್ತಲೆಯಲ್ಲಿ ಬೆಳದಿಂಗಳನ್ನು  ಕಳೆದುಕೊಂಡ ಚಂದಿರ ಮತ್ತೆ ತೆರೆ ಸರಿಸಿಕೊಂಡು ಬೆಳಗಿದಂತಾಯಿತು; ಬಾಡಿ ಹೋಗುತ್ತಿದ್ದ ಬಳ್ಳಿಗೆ  ಜೀವಜಲದ ಹನಿಗಳೆರೆದಂತಾಯಿತು; ಬರಗಾಲದಿಂದ ಬಿರುಕೊಡೆದು ದೆಸೆ ದೆಸೆಗೆ ಬಾಯಿಬಿಡುತ್ತಿದ್ದ ಇಳೆಗೆ ಇಬ್ಬನಿಯ ಸವಿಜೇನು ದಕ್ಕಿದಂತಾಗಿತ್ತು. ಕಾವ್ಯಾಲಾಪದಂತೆ ಗಾಲಿಬ್ ನ ಹೃದಯದೊಂದಿಗೆ ಹೀಗೆ ಹಾಡುತ್ತಲೇ ಜೊತೆಯಾದವಳು ದೆಹಲಿಯ ನರ್ತಕಿ ನವಾಬ್ ಜಾನ್. ಗಾಲಿಬ್ ನ ಕಾವ್ಯದೆಡೆಗಿನ ಅವಳ ವ್ಯಾಮೋಹ ಎಂತಹುದೆಂದರೆ, ಆಕೆ ತನ್ನ ಮನ- ಮನೆಗಳನ್ನೆಲ್ಲವನ್ನೂ ಅಲಂಕರಿಸಿಕೊಂಡಿದ್ದು ಗಾಲಿಬ್ ನ ಕಾಡುವ ಶೇರ್( ದ್ವಿಪದಿ) ಮಣಿಗಳಿಂದಲೇ. ಆಕೆ ತನ್ನ ಹೆಸರಿಗೆ ತಕ್ಕಂತೆ ಗಾಲೀಬನ ಕಾವ್ಯಾತ್ಮವೇ ಆಗಿಬಿಟ್ಟಳು ಎನ್ನುವುದಕ್ಕೆ ಕೆಳಗಿನ ಸಾಲುಗಳನ್ನು ಗಮನಿಸಿ –

ಜಾನ್ ತುಮ್ ಪರ್ ನಿಸಾರ್ ಕರ್ ತಾ ಹೂ
ಮೈ ನಹಿ ಜಾನ್ ತಾ ದುವಾ ಕ್ಯಾ ಹೈ ?
( ನೀನೆಂದರೆ ಜೀವ ಬಿಡುತ್ತೇನೆ, ಅದರ ಹೊರತಾಗಿ ಇನ್ಯಾವ ಪ್ರಾರ್ಥನೆಯೂ ನನಗೆ ಗೊತ್ತಿಲ್ಲ).

ಗಾಲೀಬನ ಸ್ನೇಹದಿಂದಾಗಿಯೇ ಸಮಾಧಿಯಾದ ನವಾಬ್ ಜಾನ್ ಳ ಗೋರಿಯ ಮೇಲೆ ಬರೆದ ಗಾಲೀಬನ ಸಾಲುಗಳಿವು-

ಯೆ ನ ಥಿ ಹಮಾರಿ ಕಿಸ್ಮತ್ ಕೆ ಮಿಸಾಲ್ ಎ ಯಾರ್ ಹೋತಾ
ಅಗರ್ ಔರ್ ಜೀತೆ ರೆಹ್ತೆ ಯಹಿ ಇಂತಜಾರ್ ಹೋತಾ
( ಪ್ರೇಮಿಯನ್ನು ಸಂಧಿಸುವುದು ನನ್ನ ಹಣೆಯಲ್ಲಿ ಬರೆದಿಲ್ಲ
ಇನ್ನು ಬದುಕಿದ್ದರೂ ಇದೇ ನಿರೀಕ್ಷೆಯಲ್ಲೇ ಬದುಕಬೇಕಿತ್ತು)

ಇದಲ್ಲವೇ ಎರಡು ದೇಹ ಒಂದೇ ಆತ್ಮದಂತಿದ್ದವರ ನಿರ್ಮಲ ಕಾವ್ಯಾನುರಾಗದ ಹೊಳೆಯ ಹರಿವು. ೧೭೯೭ ರಿಂದ ೧೮೬೯ ರವರೆಗೆ ೭೨ ವರ್ಷಗಳ ತುಂಬುಜೀವನವನ್ನೇ ಸವೆಸಿದ ಗಾಲಿಬ್ ಸಮಾಧಿಯಾಗಿ ೧೫೦ ವರ್ಷಗಳಾದ ಈ ಹೊತ್ತಿನಲ್ಲಿ ವರ್ತಮಾನದ ಲೇಖಕರನ್ನು ಆತ ಕಾಡಿದ ಬಗೆಯನ್ನೊಮ್ಮೆ ಕೇಳಿಬಿಡಿ- “ಗಾಲಿಬ್ ನನ್ನು ಮತ್ತೆ ಓದುವುದು, ಅವನೊಡನೆ ಗಲೀ ಖಾಸಿಮ್ ಉದ್ದಕ್ಕೂ ಹೆಜ್ಜೆ ಹಾಕುವುದು, ದೆಹಲಿಯ ಕಡುಚಳಿ, ರಣಬಿಸಿಲುಗಳ ತೀವ್ರತೆಯಲ್ಲಿ ಅರಳಿದ ಅವನ ಕಾವ್ಯಕ್ಕೆ ಎದೆಯೊಡ್ಡುವುದು ನನ್ನ ಸಂಭ್ರಮಕ್ಕೆ ಕಾರಣವಾಗುತ್ತದೆ. ಗಾಲಿಬ್ ಒಂದು ಹರಿಯುವ ನದಿಯಂಥವನು. ಅವನನ್ನು ನಾನು ಪದಗಳಲ್ಲಿ ಹೇಗೆ ಬಂಧಿಸಿಡಲಿ? ಅವನ ಬದುಕು ಮತ್ತು ಕಾವ್ಯ ಎರಡರ ಹರವೂ ವಿಸ್ತಾರವಾದದ್ದು. ಇಷ್ಟೆಲ್ಲಾ ಬರೆದ ಮೇಲೂ ಕಾಡುತ್ತಿರುವ ಗಾಲಿಬನ ಸಾಲುಗಳಿವು-

ಹೂಂಗರೆ ಎ ನಿಶಾತ್ ಎ ತಸವ್ವರ್ ಸೆ ನಗಮಾ ಜ್ವಾನ್
ಮೈಂ ಅಂದಲೀಬ್ ಎ ಗುಲ್ಶನ್ ನ ಆಫ್ರಿದಾ ಹೂಂ”

ಎಂದು ಗಾಲಿಬನ ಕಾವ್ಯಾರಾಧನೆ ಮಾಡುತ್ತಾರೆ ಖ್ಯಾತ ರಂಗಕರ್ಮಿ ಹಾಗೂ ಲೇಖಕಿಯರಾದ ಸಂಧ್ಯಾರಾಣಿಯವರು. ಗಾಲೀಬನ ಕುರಿತು ತಮ್ಮ ಪ್ರಪ್ರಥಮ ಅನುವಾದ ಕೃತಿಯನ್ನು ಹೊರತಂದ ಇಮಾಮ್ ಸಾಹೇಬ ಹಡಗಲಿಯವರು

” ಗಾಲಿಬ ಜೀವನದುದ್ದಕ್ಕೂ ಕನ್ನಡಿ ಒರೆಸುತ್ತಿದ್ದ
ಈಗ ನಾನು ಅವನ ಮುಖ ಒರೆಸುತ್ತಿದ್ದೇನೆ
ಅವನ ಸಮಾಧಿಯ ಮೇಲಿನ ಧೂಳನ್ನೂ ಕೂಡ
ಇನ್ನು ನೀವುಂಟು, ಗಾಲೀಬನುಂಟು”

ಎಂದು ಗಾಲೀಬನನ್ನು  ಕಾವ್ಯಪ್ರೇಮಿಗಳ ಹೃದಯದೊಳಗಿಳಿಸುತ್ತಾರೆ.

“ಕವಿತಾವಿಲಾಸದ ಕಾವಿನಿಂದ ಹಾಡುತ್ತಲಿದ್ದೇನೆ;
ನಾನಿಹೆನು ಬರಲಿರುವ ಬನದ ಬುಲ್‌ಬುಲ್!’

ಯುಗಾದಿಯ ಕೆಂದಳಿರನ್ನುಂಡ ಕೋಗಿಲೆಯೊಂದು  ಹರ್ಷೋಲ್ಲಾಸದಲ್ಲಿ ಹಾಡಿದ ಗೀತೆಯಂತಿದೆ ಗಾಲೀಬನ ಮೇಲಿನ ಕವಿತೆ.  ಧರ್ಮ, ಭಕ್ತಿ, ಆಚರಣೆಗಳೆಂದರೆ ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತಿದ್ದ ಗಾಲಿಬ್ ಭಕ್ತಿಯ ವ್ಯಾಖ್ಯಾನ‌ ವಿಭಿನ್ನ ನೆಲೆಯದ್ದು.

ಆಸೆ ಅಮಿಷ ಬಯಕೆಗಳಿಂದ ತುಂಬಿದ ಸ್ವಾರ್ಥ ಭಕ್ತಿಯನ್ನು ಗಾಲೀಬ್ ವಿಡಂಬಿಸುವುದು ಹೀಗೆ

‘ಭಕ್ತಿಯೊಳಗಿರದಿರಲಿ ಮಧು ಸುಧೆಯ ಆಸೆಯು-
ನರಕದೊಳಗೊಗೆಯಿರಿ ಸ್ವರ್ಗವನ್ನಾರಾದರೂ!’

ಈ ದ್ವಿಪದಿಯನ್ನು ಕೇಳುತ್ತಿದ್ದರೆ ವಚನಕಾರರು ಶರಣ, ಭಕ್ತ, ಭಕ್ತಿಯನ್ನು ಕುರಿತು ಹಾಡಿದ ವಚನಗಳು ನೆನಪಾಗುತ್ತವೆ. ಜಹಗೀರದಾರರ ಕುಟುಂಬದಲ್ಲಿ ಜನಿಸಿದ್ದ ಗಾಲಿಬ್ ಅದೆಷ್ಟು ಸ್ವಾಭಿಮಾನಿಯಾಗಿದ್ದ ಎಂಬುದಕ್ಕೆ ಕೆಳಗಿನ ಪ್ರಸಂಗವನ್ನು ಕೇಳಿ – ಬ್ರಿಟೀಷರು ದೆಹಲಿಯಲ್ಲೊಂದು ಕಾಲೇಜನ್ನು ತೆರೆದಿದ್ದರು. ಅಲ್ಲಿ ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕಾದಾಗ ಸಚಿವ ಥಾಮ್ಸನ್ ಅದಾಗಲೇ ಪರಿಚಯವಿದ್ದ ಗಾಲಿಬ್ ನಿಗೆ ಹೇಳಿಕಳುಹಿಸುತ್ತಾನೆ. ಪಲ್ಲಕ್ಕಿಯ‌ಲ್ಲಿ ಬಂದ ಗಾಲಿಬ್ ಕಚೇರಿಯ ಹೊರಗೆ ನಿಂತು ಸ್ವಾಗತಿಸಲು ಬರುವರೆಂದು ಕಾಯುತ್ತಾನೆ. ಈ ಸಂಗತಿ ಥಾಮ್ಸನ್ನನಿಗೆ ತಿಳಿದು ಆತ ಜಹಗೀರದಾರನಾಗಿ ಬಂದಿದ್ದರೆ ಸಂಪ್ರದಾಯದಂತೆ ಸ್ವಾಗತಿಸಬಹುದಿತ್ತು ಆದರೀಗ ಆತ ಅಧ್ಯಾಪಕ ಹುದ್ದೆಗೆ ಅಭ್ಯರ್ಥಿಯಾಗಿ ಬಂದಿರುವುದರಿಂದ ಖುದ್ದಾಗಿ ಬಂದು ಸ್ವಾಗತಿಸಲು ಸಾಧ್ಯವಿಲ್ಲ ಎಂದು ಹೇಳಿಕಳುಹಿಸುತ್ತಾನೆ. ಸಹಾಯಕನಿಂದ ಈ ವಿಷಯ ಅರಿತುಕೊಂಡ ಗಾಲಿಬ್ ಇಲ್ಲಿ ಅಧ್ಯಾಪಕ ವೃತ್ತಿ ಮಾಡುವುದರಿಂದ ನನ್ನ ಹಾಗೂ ಪರಿವಾರದ ಗೌರವ ಹೆಚ್ಚಾಗುತ್ತದೆಂದು ಬಂದೆ. ಆದರೆ ಬದಲಾಗಿ ಇಲ್ಲಿ ಇದ್ದ ಮರ್ಯಾದೆಯೂ ಹರಾಜಾಗುತ್ತಿದೆ ಎಂದ ಮೇಲೆ ಈ ಕೆಲಸ ತನಗೆ  ಬೇಡವೆಂದು ನಿರ್ಧರಿಸಿ ಅದೇ ಪಲ್ಲಕ್ಕಿಯಲ್ಲಿ ಮರಳಿ ಹೋದ. ಇವನ ಸ್ವಾಭಿಮಾನದ ಮುಂದೆ‌ ಬ್ರಿಟಿಷ್ ಸರಕಾರಿ ನೌಕರಿಯೂ ಯಕಃಶ್ಚಿತವಾಗಿಬಿಟ್ಟಿತು.

‘ಕೇಳದಿರು ಕೆಡುಕು ನುಡಿದರೆ ಯಾರಾದರೂ
ಹೇಳದಿರು ಕೆಡಕುಗೈದರೆ ಯಾರಾದರೂ
ತಡೆ, ತಪ್ಪು ದಾರಿ ತುಳಿದರೆ ಯಾರಾದರೂ
ಕ್ಷಮಿಸಿ ಬಿಡು ತಪ್ಪು ಮಾಡಿದರೆ ಯಾರಾದರೂ
ಅಪೇಕ್ಷೆಯೇ ಇಲ್ಲವಾದಾಗ ಗಾಲೀಬ್,
ಯಾರನೇತಕೆ ದೂರುವುದು ಯಾರಾದರೂ

ಎಂಬ ಆತ್ಮಾವಲೋಕನದ ಆಧ್ಯಾತ್ಮ ಗಾಲೀಬನದು. ಈತ ವಚನಕಾರರಂತೆಯೇ ವ್ಯಕ್ತಿ ಸಾಧನೆಯ ಸೂತ್ರಗಳನ್ನು  ಕಟ್ಟಿಕೊಡುತ್ತಾನೆ.

ಗಾಲಿಬ್ ನನ್ನು ಕೆಲವೇ ಪದಗಳಲ್ಲಿ ವ್ಯಾಖ್ಯಾನಿಸುವುದಾದರೆ, ಆತ್ಮದ ನಶೆಯೇರಿಸುವ ಕವಿತೆ, ರಸಾನುಭವಕ್ಕೊಂದಿಷ್ಟು ಗುಲಾಬು, ರಾತ್ರಿಯ ಅಮಲಿಗೊಂದಿಷ್ಟು ಶರಾಬು, ಹಸಿವಿಗೆರಡು ರೊಟ್ಟಿ. ಸ್ವಾದಕ್ಕೊಂದಿಷ್ಟು ಮಾವು. ಇವೆಲ್ಲವುಗಳ ಅದ್ಭುತ ರಸ ಸಂಯೋಜನೆಯೇ ನಾವೆಂದುಕೊಂಡ ಗಾಲಿಬ್. ಮೊಗಲ್ ಸಾಮ್ರಾಜ್ಯ ಪತನವಾಗಿ ಬ್ರಿಟಿಷ್ ಅಧಿಪತ್ಯ ಸ್ಥಾಪನೆಯಾಗುವ ವಿಷಮ ಸಂಕ್ರಮಣ ಕಾಲದಲ್ಲಿ ಚರಿತ್ರೆಯ ಸಾಕ್ಷಿಪ್ರಜ್ಞೆಯಾಗಿದ್ದವನು ಗಾಲಿಬ್. ಹಿಂಸೆ, ಕೊಲೆ, ರಕ್ತಪಾತ, ಕಾಳಗ, ಯುದ್ಧಗಳೇ ತುಂಬಿದ ಜಗತ್ತಿನಲ್ಲಿ ಆತನೇ ಹೇಳುವ ಹಾಗೆ ಹೃದಯದ  ದುಃಖಗಳಿಗೆ ಮದ್ದಾಗಬಲ್ಲ ಸೋಮರಸ ಹಾಗೂ ಕವಿತೆಗಳಿಂದ ನಶೆಯೇರಿಸಿಕೊಂಡು ಬದುಕುತ್ತಲೇ ಮಹಾಸಂತನಾಗಿ ಗುರ್ತಿಸಿಕೊಂಡ.‌ ತನ್ನದೇ ವಿಶಿಷ್ಟ ತಾತ್ವಿಕತೆ, ಚಿಂತನೆ, ಎಲ್ಲರನ್ನೊಳಗೊಂಡ ಕಾವ್ಯಗಳಿಂದ  ಸಾಂಸ್ಕೃತಿಕ ಲೋಕದ ಪ್ರಖರ ಸೂರ್ಯನಾಗಿ ಇಂದಿಗೂ ಕಂಗೊಳಿಸುತ್ತಿದ್ದಾನೆ.

ಮಿರ್ ಮೆಹದಿಯು ಒಮ್ಮೆ “ಧರ್ಮಶಾಸ್ತ್ರವನ್ನೋದಿದರೆ ಏನಾದರೂ ಲಾಭವಾಗುತ್ತದೆಯೇ ? ಎಂದು ಕೇಳಿದ್ದಕ್ಕೆ ಗಾಲೀಬನೆಂದ- “ಧರ್ಮಶಾಸ್ತ್ರ ಓದಿ ಏನು ಮಾಡುವೆ ? ಚಿಕಿತ್ಸಾಶಾಸ್ತ್ರ, ಜ್ಯೋತಿಷ್ಯ, ತರ್ಕಶಾಸ್ತ್ರ, ದರ್ಶನಗಳನ್ನಾದರೂ ಓದು, ಕೊನೆಯ ಪಕ್ಷ ಮನುಷ್ಯನಾದರೂ ಆಗಬಹುದು.” ಗಾಲೀಬನ ಈ ಮಾತೊಂದೇ ಸಾಕು ವರ್ತಮಾನದ ಸಾಮಾಜಿಕ, ಧಾರ್ಮಿಕ, ರಾಜಕಾರಣದ ತಲ್ಲಣಗಳಿಗೆ ಅವನು ಹೇಗೆ ಉತ್ತರವಾಗಬಲ್ಲನೆಂಬುದಕ್ಕೆ.‌

ಬದುಕಿನಲ್ಲಿ ಆತ ಪಡೆದ ಸುಖಕ್ಕಿಂತ ಉಂಡ ನೋವುಗಳ ಲೆಕ್ಕವೇ ಅಪರಿಮಿತ. ಗಾಯಗಳ‌‌ ಮೇಲೆ ಗಾಯ, ಸಂಕಟಗಳ‌ ಮೇಲೆ ಸಂಕಟ, ಬಾಡಿಗೆ ಮನೆಯೊಳಗೆ ಸಂಸಾರ, ಪಿಂಚಣಿಗಾಗಿ ಹೋರಾಟ, ಕೆಲವು ಬ್ರಿಟಿಷ್ ಅಧಿಕಾರಿಗಳು ಹಾಗೂ‌ ನಂಬಿದ ನವಾಬರಿಂದ ದ್ರೋಹ  ಹೀಗೆ ಬದುಕೆಲ್ಲವೂ ನಿತ್ಯಚಿಂತೆಗಳ ಸಂತೆಯಾಯಿತೇ ವಿನಃ ಆತ ಆಚರಿಸಬಹುದಾದ ಸಂಭ್ರಮದ ಹಬ್ಬವಾಗಲೇ ಇಲ್ಲ. ಹಾಸಿಗೆಯಿಂದ ಏಳಲಾಗದ ಕೊನೆಗಾಲದಲ್ಲಿಯೂ ಮಲಗಿಕೊಂಡೇ, ಬರಹವನ್ನು ನಿಲ್ಲಿಸಲಾಗದ ತಪವನ್ನಾಚರಿಸಿದ ಫಕೀರನೆಂದರೆ ಗಾಲಿಬ್. ಧರ್ಮಕ್ಕಿಂತಲೂ ಬದುಕಿನ ತತ್ವಜ್ಞಾನವೇ ಮಿಗಿಲಾದದ್ದು ಎಂದು ನಂಬಿ ಬದುಕಿದ ಧರ್ಮಾತೀತ ಸಂತ ಕೊನೆಯುಸಿರೆಳೆದಾಗ, ಧರ್ಮಪರೀಕ್ಷೆಯನ್ನೆದುರಿಸಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸವೇ ಸರಿ. ಹೀಗೆ ಬರೆಯುತ್ತಿರುವಾಗಲೇ ನನ್ನಲ್ಲಿ ಹುಟ್ಟಿದ ಸಾಲುಗಳಿವು –

“ನಾನೂ ಗಾಲೀಬನ ಕವಿತೆಗಳನ್ನು ಪ್ರೀತಿಸುತ್ತೇನೆ
ಏಕೆಂದರೆ ಅಲ್ಲಿ ಶರಾಬಿನ ಅಮಲಿದೆ. ಮಾವಿನ ಮದವಿದೆ. ಪ್ರೇಮದ ನಶೆಯಿದೆ. ಅನುಭಾವದ ನದಿಯಿದೆ.”

‍ಲೇಖಕರು avadhi

March 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Sudha HegdeCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: