-ಜಿ ಎನ್ ಮೋಹನ್
ನಮ್ಮ ಸಾಕ್ಷಿಪ್ರಜ್ಞೆಯಾಗಿದ್ದ ಎಂ ಎಂ ಕಲಬುರ್ಗಿ ಅವರು ನಮ್ಮ ಜೊತೆ ಇಲ್ಲ.
ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ಮೊದಲ ಸೃಜನಶೀಲ ಪ್ರತಿಕ್ರಿಯೆ ಬಂದದ್ದು ಕರ್ನಾಟಕದಿಂದಲ್ಲ, ಕೇರಳದಿಂದ. ಮಲಯಾಳಂ ಸಾಹಿತ್ಯದ ‘ಮಹಾರಾಜ’ ಎಂದೇ ಹೆಸರಾದ ಕೆ ಆರ್ ಮೀರಾ ‘ಭಗವಾಂಡೆ ಮರಣಂ’ ಹೆಸರಿನಲ್ಲಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ ನೀಳ್ಗತೆಯೊಂದನ್ನು ಬರೆದರು. ಅದನ್ನು ಬಹುರೂಪಿ ‘ಭಗವಂತನ ಸಾವು’ ಎನ್ನುವ ಹೆಸರಿನಲ್ಲಿ ಹೊರತಂದಿದೆ.
ಮೀರಾ ಅವರು ಕಲಬುರ್ಗಿ ಅವರ ಮಹತ್ವವನ್ನು, ಅವರ ಹತ್ಯೆಯಿಂದ ಉಂಟಾದ ನಿರ್ವಾತವನ್ನು ಎಷ್ಟು ಚೆನ್ನಾಗಿ ಗ್ರಹಿಸಿದ್ದಾರೆ ಎನ್ನುವುದು ಕಥೆ ಓದಿದರೆ ಮನದಟ್ಟಾಗುತ್ತದೆ. ಈ ಕೃತಿಗಾಗಿ ಸಾವಿರಾರು ವಚನಗಳನ್ನು ಓದಿ ಅದನ್ನು ಕಥೆಯಲ್ಲಿ ಮನಕ್ಕೆ ತಾಕುವಂತೆ ಪೋಣಿಸಿದ್ದಾರೆ. ಮಲಯಾಳದಲ್ಲಿ ಈ ಕೃತಿ ಪ್ರಕಟವಾದ ಮೂರು ತಿಂಗಳಲ್ಲಿ 15 ಸಾವಿರ ಪ್ರತಿ ಖರ್ಚಾಗಿತ್ತು.
ಈ ಕೃತಿಯನ್ನು ಕನ್ನಡಕ್ಕೆ ತಂದಾಗ ಮೀರಾ ಕೇಳಿದ್ದು ಇಷ್ಟೇ- ನಾನು ಎಂ ಎಂ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಕುಟುಂಬವನ್ನು ಭೇಟಿ ಮಾಡಬೇಕು ಎಂದು. ಗೆಳೆಯ ಸಿದ್ದನಗೌಡ ಪಾಟೀಲರ ಸಹಾಯದಿಂದ ಕಲಬುರ್ಗಿ ಅವರ ಮಗ, ಎಂ ಎಂ ಕಲಬುರ್ಗಿ ಟ್ರಸ್ಟ್ ನ ಸದಸ್ಯರೂ ಆದ ವಿಜಯ ಅವರನ್ನೇ ಪುಸ್ತಕ ಬಿಡುಗಡೆಗೆ ಅತಿಥಿಗಳನ್ನಾಗಿ ಆಹ್ವಾನಿಸಿದೆವು. ಇಂದಿರಾ ಲಂಕೇಶ್ ಅವರನ್ನು ನೋಡಿ ಒಮ್ಮೆ ಮಾತಾಡಬೇಕು ಎನ್ನುವ ಮೀರಾ ಅವರ ತಹತಹ ಎಷ್ಟಿತ್ತೆಂದರೆ ಕಾರ್ಯಕ್ರಮದ ಬೆಳ್ಳಂಬೆಳಗ್ಗೆ ಅವರ ಮನೆಗೆ ಕರೆದುಕೊಂಡು ಹೋದೆವು.
ಅಲ್ಲಿ ಎಂತಹ ಭಾವುಕ ವಾತಾವರಣ ಉಂಟಾಗಿತ್ತೆಂದರೆ ಅಲ್ಲಿ ಗೌರಿಯೂ, ಕಲಬುರ್ಗಿಯವರೂ ಇದ್ದರು ಎನ್ನುವಷ್ಟು. ಇಂದಿರಾ ಅವರನ್ನು ಅಪ್ಪಿ ಭಗವಂತನ ಸಾವನ್ನು ಅವರ ಕೈಗಿತ್ತಾಗ ಮೀರಾ ಅವರ ಕಣ್ಣಲ್ಲಿ ದೊಡ್ಡದೊಂದು ತೃಪ್ತಿಯ ಭಾವ ಮನೆ ಮಾಡಿತ್ತು.






0 Comments