’ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಒಂದಾಗಬೇಕು ಏಕೆ?’ – ಎಂದು ರಂಜಾನ್ ದರ್ಗಾ ಬರೆದಿದ್ದಾರೆ. ಈ ವಿಷಯ ಜುಗಾರಿ ಕ್ರಾಸಿನಲ್ಲಿದೆ.
ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ. ಆದರೆ ದಯವಿಟ್ಟು ಕ್ಷಮಿಸಿ, ಇದು ಚರ್ಚಾ ವೇದಿಕೆ. ವೈಯಕ್ತಿಕ ನಿಂದನೆ ಸಲ್ಲ.
ರಂಜಾನ್ ದರ್ಗಾ
ಭಾರತವು ಹಿಂದೆಂದಿಗಿಂತಲೂ ಹೆಚ್ಚಿನ ಸಂಕಷ್ಟದ ಸ್ಥಿತಿಯನ್ನು ಇಂದು ಎದುರಿಸುತ್ತಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಎರಡು ನೂರು ವರ್ಷಗಳವರೆಗೆ ನೇರವಾಗಿ ಭಾರತವನ್ನು ಆಳುತ್ತಾ ಭಾರತದ ಸಂಪತ್ತನ್ನು ದೋಚಿ ಇಂಗ್ಲೆಂಡ್ಗೆ ಸಾಗಿಸಿದರು. ಈ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಎಲ್ಲ ಜಾತಿ, ಧರ್ಮ ಮತ್ತು ವರ್ಗಗಳ ಜನ ಒಂದಾಗಿ ಹೋರಾಡುತ್ತಾ ರಾಜಕೀಯ ಸ್ವಾತಂತ್ರ್ಯ ಗಳಿಸಿದರು. ಭಾರತದ ಜನ ಮೊದಲ ಬಾರಿಗೆ ಸಾಮೂಹಿಕವಾಗಿ ತಮ್ಮ ಜಾತಿ ಮತ್ತು ಧರ್ಮಗಳನ್ನು ಮೀರಿ ಒಂದು ಉದ್ದೇಶಕ್ಕಾಗಿ ಒಂದಾದದ್ದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಾತ್ರ. ಅದಕ್ಕೂ ಹಿಂದೆ ಈ ದೇಶದಲ್ಲಿ ಸಾಕಷ್ಟು ಜಾತ್ಯತೀತ ಆಂದೋಲನಗಳಾಗಿವೆ. ಲೋಕಾಯತರು, ಜೈನರು, ಬೌದ್ಧರು, ಶರಣರು, ಸಿಖ್ಖರು, ಸಂತರು, ಸೂಫಿ ಸಂತರು, ದಾಸರು ಮತ್ತು ತತ್ತ್ವಪದಕಾರರು ಜಾತ್ಯತೀತ ಸಮಾಜವನ್ನು ಸೃಷ್ಟಿಸಲು ಹೆಣಗಿದರು. ಜನ ಸಮುದಾಯದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದರು. ಆದರೆ ಔದ್ಯೋಗಿಕ ಕ್ರಾಂತಿ, ವಿಜ್ಞಾನ, ತಂತ್ರಜ್ಞಾನ, ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆ ಮತ್ತು ತೀವ್ರವಾದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಭಾರತೀಯರು ತಮ್ಮ ತಮ್ಮ ಜಾತಿ ಮತ್ತು ಧರ್ಮಗಳ ಲಕ್ಷ್ಮಣರೇಖೆಗಳನ್ನು ದಾಟಿ ಬೀದಿಯ ಮೇಲಾದರೂ ಒಂದಾಗುವುದನ್ನು ಕಲಿತರು. ದುಃಖದ ವಿಚಾರವೆಂದರೆ ಈ ಒಂದಾಗುವಿಕೆಯು ಭಾರತೀಯರ ವ್ಯಕ್ತಿತ್ವದ ಮೇಲೆ ಆಂತರಿಕ ಪ್ರಭಾವ ಬೀರುವಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲಿಲ್ಲ.
ಸದ್ಯ ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದುಹೋದರೂ ಭಾರತೀಯರು ಇದಕ್ಕಿಂತ ಹೆಚ್ಚಿನದನ್ನು ಕಲಿಯಲು ಸಾಧ್ಯವಾಗುವಂಥ ವಾತಾವರಣ ಸೃಷ್ಟಿಯಾಗಲಿಲ್ಲ. ಜಾತಿಗಳು ಹಾಗೇ ಉಳಿದುಕೊಂಡವು. ದೈಹಿಕವಾಗಿದ್ದ ಅಸ್ಪೃಶ್ಯತೆ ಒಂದಿಷ್ಟು ತೊಲಗಿತು. ಆದರೆ ಮಾನಸಿಕವಾಗಿ ಬೆಳೆಯುತ್ತಲೇ ಹೋಯಿತು. ಜಾತಿ ಜಾತಿಗಳ ಮತ್ತು ಧರ್ಮ ಧರ್ಮಗಳ ಮಧ್ಯೆ ಇರುವ ಅಪನಂಬಿಕೆ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕೋಮುವಾದಿ ಶಕ್ತಿಗಳು ಇದರ ಲಾಭವನ್ನು ಪಡೆದುಕೊಂಡು ಇಡೀ ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಹವಣಿಸುತ್ತಿವೆ. ಜಾತ್ಯತೀತ ಭಾರತದ ದುರಂತವೆಂದರೆ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಪರಿಶಿಷ್ಟರಲ್ಲಿನ ಅನೇಕರು ಬೆಳೆಯುತ್ತಿರುವ ಕೋಮುವಾದಿ ಶಕ್ತಿಗಳ ಜೊತೆ ಕೈಗೂಡಿಸುತ್ತಿದ್ದಾರೆ. ಸಾಮ್ರಾಜ್ಯಶಾಹಿಗಳು ಭಾರತವನ್ನು ಬಂಡವಾಳ ಹೂಡುವ ತಾಣ ಮತ್ತು ತಮ್ಮ ವಸ್ತುಗಳನ್ನು ಮಾರಾಟ ಮಾಡುವ ಮಾರುಕಟ್ಟೆ ಎಂದು ಪರಿಗಣಿಸಿದ್ದಾರೆ. ಅವರಿಗೆ ಭಾರತೀಯರೆಂದರೆ ತಮ್ಮ ಬಂಡವಾಳ ವೃದ್ಧಿಗಾಗಿ ಇರುವ ಕೂಲಿಗಳು ಮತ್ತು ತಮ್ಮ ವಸ್ತುಗಳನ್ನು ಕೊಳ್ಳುವ ಗ್ರಾಹಕರು ಮಾತ್ರ. ಈ ಸಾಮ್ರಾಜ್ಯಶಾಹಿಗಳು ತಮ್ಮ ಅಭಿವೃದ್ಧಿಗಾಗಿ ಸೃಷ್ಟಿಸಿದ ಉದಾರೀಕರಣ, ಖಾಸಗೀಕರಣ, ಜಾಗತೀಕರಣ, ಬಹುರಾಷ್ಟ್ರೀಯ ಕಂಪನಿಗಳ ವಿದೇಶಿ ಬಂಡವಾಳ, ಮುಕ್ತ ಮಾರುಕಟ್ಟೆ, ಮುಕ್ತ ಆಮದು ನೀತಿ ಮತ್ತು ಭಾರತದ ರಾಜ್ಯಶಕ್ತಿಯನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಹವಣಿಸುತ್ತಿರುವ ಕೋಮುವಾದಿಗಳ ಕುತಂತ್ರಗಳು ಜೊತೆಜೊತೆಯಾಗಿ ಹೋಗುತ್ತಿವೆ.
ದೇಶವನ್ನು ರಾಜಕೀಯವಾಗಿ ಬಹುಮತದಿಂದ ಆಳುವ ಹೆಬ್ಬಯಕೆ ಹೊಂದಿರುವ ಕೋಮುವಾದಿ ಶಕ್ತಿಗಳಿಗೆ ಸಾಮ್ರಾಜ್ಯಶಾಹಿಗಳು ಕುಮ್ಮಕ್ಕು ಕೊಡುತ್ತಿದ್ದಾರೆ. ಕೋಮುವಾದಿ ಶಕ್ತಿಗಳನ್ನು ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾ ಭಾರತವನ್ನು ಆರ್ಥಿಕವಾಗಿ ತಮ್ಮ ಅಂಕಿತದಲ್ಲಿಟ್ಟುಕೊಳ್ಳುವುದು ಸಾಮ್ರಾಜ್ಯಶಾಹಿಗಳ ಮುಖ್ಯ ಗುರಿಯಾಗಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ದೇಶವನ್ನು ಪ್ರತ್ಯಕ್ಷವಾಗಿ ಆಳಿದರೆ ಅಮೆರಿಕದ ಸಾಮ್ರಾಜ್ಯಶಾಹಿಗಳು ಪರೋಕ್ಷವಾಗಿ ಆಳಲು ಶತಪ್ರಯತ್ನ ನಡೆಸಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಸುಲಿಗೆ ಕಣ್ಣಿಗೆ ಹೊಡೆಯುವಂತಿತ್ತು. ಕಪ್ಪು ಬಿಳುಪಾಗಿತ್ತು. ಬಿಳಿಯರ ವಿರುದ್ಧದ ಹೋರಾಟಕ್ಕಾಗಿ ಜನಸಮುದಾಯವನ್ನು ಅಣಿಗೊಳಿಸುವುದು ಭಾರಿ ಕಷ್ಟಕರವೇನಾಗಿರಲಿಲ್ಲ. ಆದರೆ ಜಾಗತೀಕರಣದ ಮೂಲಕ ದೇಶವನ್ನು ಹೊರಗಿನಿಂದಲೇ ಆಳಲೆತ್ನಿಸುತ್ತಿರುವ ಅಮೆರಿಕದ ಸಾಮ್ರಾಜ್ಯಶಾಹಿಗಳ ಬಗ್ಗೆ ಮತ್ತು ವಿವಿಧ ದೇಶಗಳ ಬಹುರಾಷ್ಟ್ರೀಯ ಕಂಪೆನಿಗಳ ಬಗ್ಗೆ ಜನಸಮುದಾಯದಲ್ಲಿ ಅರಿವು ಮೂಡಿಸುವುದು ಅತ್ಯಂತ ಕಷ್ಟಕರವಾಗಿದೆ. ಮಹಾತ್ಮಾ ಗಾಂಧೀಜಿಯವರು ತಮ್ಮ ಅನುಯಾಯಿಗಳು ಮತ್ತು ಜನಶಕ್ತಿಯ ಸಹಾಯದಿಂದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳನ್ನು ಹೊರಹಾಕುವಲ್ಲಿ ಯಶಸ್ವಿಯಾದರು. ಆದರೆ ಇಂದಿನ ನಮ್ಮ ರಾಷ್ಟ್ರ ನಾಯಕರು ಮತ್ತು ಇತರೆ ಹಲವಾರು ರಾಜ್ಯ ನಾಯಕರು ಸೇರಿ, ಸಾಮ್ರಾಜ್ಯಶಾಹಿಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಾಗುವಂತಹ ವಾತಾವರಣವನ್ನು ಸೃಷ್ಟಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
ಸಾಮ್ರಾಜ್ಯಶಾಹಿಗಳಿಗೆ ಲಾಭವಾಗುವಂತಹ ಆರ್ಥಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ತೀವ್ರವಾಗುತ್ತಿವೆ. ಇಂತಹ ವಿಷಮ ವಾತಾವರಣದಲ್ಲಿ ನಾವು ಮೌಲ್ಯವಿಹೀನರಾಗುತ್ತಿದ್ದೇವೆ. ಮನುಷ್ಯ ಸಂಬಂಧಗಳಲ್ಲಿ ಕೂಡ ಹಣವೇ ಪ್ರಧಾನವಾಗುತ್ತಿದೆ. ಹಣವಿಲ್ಲದೆ ಮನುಷ್ಯ ಬದುಕಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ನಿರುದ್ಯೋಗ, ಹಿಂಸೆ, ಕ್ರೌರ್ಯ, ಅಸಹಾಯಕತೆ ಮತ್ತು ವಿಘ್ನಸಂತೋಷಗಳು ತಾಂಡವವಾಡುತ್ತಿವೆ. ಜನಸಮೂಹದಲ್ಲಿ ಮಾನವ ಒಂಟಿಯಾಗುತ್ತಿದ್ದಾನೆ. ರಸ್ತೆಯಲ್ಲಿ ಸಾವಿರಾರು ಜನರ ಮಧ್ಯೆ ಕೂಡ ಒಬ್ಬನೇ ಮಾತನಾಡುತ್ತಾ ಹೋಗುವಂತಹ ದುರಂತಕ್ಕೆ ಒಳಗಾಗಿದ್ದಾನೆ. ನಿರುದ್ಯೋಗ ಮತ್ತು ಹಸಿವು ಮುಂತಾದ ಸಮಸ್ಯೆಗಳಿಂದಾಗಿ ಬದುಕಿನಲ್ಲಿ ಸ್ವಾರ್ಥ ಮತ್ತು ಹಿಂಸೆ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದವರ ಕೈಗಳು ಕೋಮುಗಲಭೆಗಳಲ್ಲಿ ಕ್ರಿಯಾಶೀಲವಾಗುತ್ತಿವೆ. ಒಂಟಿಯಾಗಿರುವ ಅಬಲೆಯರ ಕೊರಳ ಸರಗಳನ್ನು ಎಳೆಯಲು ಮುಂದಾಗುತ್ತಿವೆ. ಹಣಕ್ಕಾಗಿ ಹಸುಗೂಸುಗಳನ್ನು ಕೊಲ್ಲುತ್ತಿವೆ. ಅಲ್ಪಸಂಖ್ಯಾತರು, ರೈತರು, ದಿನಸಿ ಅಂಗಡಿ ಮತ್ತು ಸಣ್ಣಕೈಗಾರಿಕೆಗಳನ್ನು ನಡೆಸುವವರು, ಕೆಳವರ್ಗ ಮತ್ತು ಕೆಳಜಾತಿಗಳ ಬಹುಪಾಲು ಬಡವರು ಹಾಗೂ ಮಧ್ಯಮವರ್ಗದವರು ಹೊಸ ಆರ್ಥಿಕ ನೀತಿಗೆ ಬಲಿಯಾಗುತ್ತಿದ್ದಾರೆ. ಇಂತಹ ವಿಷಮ ವಾತಾವರಣದಲ್ಲಿ ನವಭಾರತದ ನಿರ್ಮಾಣವಾಗಬೇಕಿದೆ. ಸುಲಿಗೆಯಿಲ್ಲದ ವ್ಯವಸ್ಥೆಗಾಗಿ ತುಳಿತಕ್ಕೊಳಗಾದವರೆಲ್ಲಾ ಒಂದಾಗಬೇಕಿದೆ. ಎಲ್ಲ ರೀತಿಯ ಶೋಷಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ.
ಎಲ್ಲಕ್ಕೂ ಮುಂಚೆ ಧಾರ್ಮಿಕ ಫ್ಯಾಸಿಸಂನ ಅಟ್ಟಹಾಸದ ಹುಟ್ಟಡಗಿಸಲು ಸಂಸದೀಯ ವ್ಯವಸ್ಥೆಯ ಪ್ರಜಾಪ್ರಭುತ್ವವನ್ನಾದರೂ ಉಳಿಸಿಕೊಳ್ಳಬೇಕಾಗಿದೆ. ಆದರೆ ಉಗ್ರಗಾಮಿ ಮತ್ತು ಕೋಮುವಾದಿ ಶಕ್ತಿಗಳು ಹಿಂಸೆಯನ್ನು ಪ್ರದರ್ಶಿಸುತ್ತ ವಿಕೃತ ಅಟ್ಟಹಾಸ ಮೆರೆಯುತ್ತಿರುವಾಗ ಸರ್ವಮಾನ್ಯವಾದ ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವುದು ಹೇಗೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಭಾರತೀಯ ಪ್ರಜಾಪ್ರಭುತ್ವದ ತಳಹದಿ: ಗೌತಮ ಬುದ್ಧ ಮಹಾಪರಿನಿರ್ವಾಣ ಹೊಂದುವುದಕ್ಕೆ ಮುನ್ನ ಆತನ ಪರಮ ಶಿಷ್ಯ ಆನಂದನು ಬೌದ್ಧ ಸಂಘಕ್ಕೆ ನಾಯಕನನ್ನು ಸೂಚಿಸುವ ಬಗ್ಗೆ ಮನವಿ ಮಾಡಿದ. ಸಂಘದ ಭಿಕ್ಕುಗಳೇ ತಮ್ಮ ನಾಯಕನ ಆಯ್ಕೆ ಮಾಡಿಕೊಳ್ಳುವರು ಎಂದು ಬುದ್ಧ ತಿಳಿಸಿದ. ಹೀಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಉದಯವಾಯಿತು. ಶರಣರ ಅನುಭವ ಮಂಟಪವೂ ಪ್ರಜಾಪ್ರಭುತ್ವಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಶರಣರು ದೇವರನ್ನು ವಿವಿಧ ಹೆಸರುಗಳಿಂದ ಕರೆದರೂ ನಿರಾಕಾರನಾದ ಆ ಒಬ್ಬನೇ ದೇವರನ್ನು ಅಂತಃಸಾಕ್ಷಿಯಾಗಿಟ್ಟುಕೊಂಡು ತಮ್ಮ ತಪ್ಪುಗಳನ್ನು ಎತ್ತಿ ತೋರಿಸುತ್ತಾ ತಿದ್ದಿಕೊಂಡರು. ನ್ಯಾಯನಿಷ್ಠುರಿಗಳಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸಮಾಜವನ್ನು ತಿದ್ದುತ್ತ ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದ ನವಸಮಾಜದ ನಿರ್ಮಾಣಕ್ಕೆ ಯತ್ನಿಸಿದರು. ಶರಣರಂತೆ ಸೂಫಿಗಳು, ಸಂತರು ಮತ್ತು ದಾಸರು ತಮ್ಮ ಕಾಲ ಘಟ್ಟದ ಸಮಾಜವ್ಯವಸ್ಥೆಯಲ್ಲಿ ಸಮಾನತೆ ಮತ್ತು ಮಾನವಘನತೆ ಎತ್ತಿ ಹಿಡಿಯುವ ಪ್ರಯತ್ನ ಮಾಡಿದರು.
ಗಾಂಧೀಜಿಯವರು ಇಂಥ ಭಕ್ತಿಪಂಥದ ಹಿನ್ನೆಲೆಯಲ್ಲಿ ಲಕ್ಷಾಂತರ ಜನರ ಮನದಲ್ಲಿ ಸತ್ಯಾಗ್ರಹದ ಪರಿಕಲ್ಪನೆ ಮೂಡಿಸಿದರು. ನ್ಯಾಯ ಮತ್ತು ಜೀವಕಾರುಣ್ಯದ ನೆಲೆಯಲ್ಲಿ ಬೃಹತ್ ಚಳವಳಿಗಳನ್ನು ರೂಪಿಸಿದರು. ಸ್ವಾತಂತ್ರ್ಯಾನಂತರ ನಮ್ಮಲ್ಲಿ ಸಮತೆಯನ್ನು ಸಾರುವ ಪ್ರಜಾಪ್ರಭುತ್ವ ರೂಪುಗೊಳ್ಳಲು ಇಂತಹ ಆದರ್ಶಗಳು ಬಳಕೆಯಾಗಲೇ ಇಲ್ಲ. ಆದರೆ ಭಾರತದಲ್ಲಿ ವಿವಿಧ ಜಾತಿ, ಮತ, ಪಂಥ, ಉದ್ಯೋಗ ಮತ್ತು ಧರ್ಮಗಳ ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ರೂಪುಗೊಂಡ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಸಾಂಪ್ರದಾಯಿಕ ಪ್ರಜಾಪ್ರಭುತ್ವ ಮತ್ತು ಹಣಬಲ, ಜಾತಿಬಲ ಹಾಗೂ ಕೋಮುಪ್ರಜ್ಞೆಯಿಂದ ಕೂಡಿದ ಮತದಾನದ ಮೂಲಕ ಸೃಷ್ಟಿಯಾಗುವ ರಾಜಕೀಯವನ್ನು ನಿಯಂತ್ರಿಸುವ ಸಂಸದೀಯ ಪ್ರಜಾಪ್ರಭುತ್ವ ಮಾತ್ರ ನಮ್ಮ ದೇಶದಲ್ಲಿ ರೂಢಿಯಲ್ಲಿದೆ. ಸಾಂಪ್ರದಾಯಿಕ ಪ್ರಜಾಪ್ರಭುತ್ವವೆಂಬುದು ಅನಿವಾರ್ಯ ಪರಿಕಲ್ಪನೆಯಾಗಿದೆ. ಕೆಳಜಾತಿಗಳ ಜನ ತಮ್ಮ ಜಾತಿಗಳಲ್ಲಿ ಗುರುತಿಸಿಕೊಂಡು ತಮ್ಮತನವನ್ನು ಉಳಿಸಿಕೊಳ್ಳುವುದು ಈ ಪರಿಕಲ್ಪನೆಯಿಂದ ಸಾಧ್ಯ. ‘ಹಿಂದೂ’ ಎಂದು ಕರೆಯಿಸಿಕೊಳ್ಳುವ ವೈದಿಕ ಧರ್ಮ ಸೃಷ್ಟಿಸಿದ ಶ್ರೇಣೀಕೃತ ಸಮಾಜದಲ್ಲಿನ ಎಲ್ಲ ಸ್ತರಗಳಲ್ಲಿನ ಕೆಳಜಾತಿಗಳ ಜನರ ಮೌನಸ್ವಾಭಿಮಾನ ಮತ್ತು ಅವರಲ್ಲಿನ ಅನೇಕರ ಜಾಗೃತ ಮನಸ್ಥಿತಿಯಿಂದಾಗಿ ಪ್ರತಿಗಾಮಿ ಮತ್ತು ಪುರೋಗಾಮಿ ಶಕ್ತಿಗಳ ರಣರಂಗದಂತಾಗಿದೆ. ಮನುಸ್ಮೃತಿಯನ್ನು ನಂಬುವ ಯತಾಸ್ಥಿತಿವಾದಿ ಮನಸ್ಸುಗಳು ಈ ಜಾತಿವಾದಿ ವ್ಯವಸ್ಥೆಯನ್ನು ಪೋಷಿಸುವುದರಲ್ಲೇ ತಲ್ಲೀನವಾಗಿವೆ.
ಹೀಗೆ ಮನುಸ್ಮೃತಿ ಹಿಂದೂ ಧರ್ಮದ ತಾಯಿಬೇರು ಆಗಿದೆ. ಜನ್ಮಜನ್ಮಾಂತರದ ಕೃತ್ಯಗಳಿಂದಾಗಿ ಒಟ್ಟುಗೂಡಿರುವ ಸಂಚಿತಕರ್ಮ, ಹಿಂದಿನ ಜನ್ಮದ ಕೃತ್ಯಗಳಿಂದಾಗಿ ಉಳಿದಿರುವ ಪ್ರಾರಬ್ಧಕರ್ಮ ಮತ್ತು ಈ ಜನ್ಮದಲ್ಲಿನ ಕೃತ್ಯದಿಂದಾಗಿ ಮುಂದಿನ ಜನ್ಮದಲ್ಲಿ ಕಾಣಿಸಿಕೊಳ್ಳುವ ಆಗಾಮಿಕರ್ಮ ಎಂಬ ಕರ್ಮಗಳ ಬಲೆಯನ್ನು ಬೀಸುತ್ತ ಮನಸ್ಮೃತಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿದೆ. ಮನುವಾದಿಗಳು ಮನುಸ್ಮೃತಿಯ ನೆರವಿನೊಂದಿಗೆ ಸಹಸ್ರಾರು ವರ್ಷಗಳಿಂದ ಜನರ ಮೆದುಳಿನಲ್ಲಿ ಮೂಢನಂಬಿಕೆಗಳನ್ನು ತುಂಬುತ್ತಲೇ ಬಂದಿದ್ದಾರೆ. ಜನರನ್ನು ಮೂರ್ಖರನ್ನಾಗಿಸಿದಾಗ ಅವರ ಶೋಷಣೆ ಮಾಡುವುದು ಸರಳವಾಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿದೆ. ಆ ಮೂಲಕ ಇಡೀ ಸಮಾಜದ ಮೇಲೆ ಹಿಡಿತ ಸಾಧಿಸುವ ಅವರ ಪ್ರಯತ್ನ ನಿರಂತರವಾಗಿರುತ್ತದೆ. ಮನುಸ್ಮೃತಿಯ ಆಧಾರದ ಮೇಲೆ ನಿಂತ ಹಿಂದೂ ಧರ್ಮದ ವೈರುದ್ಯಗಳಲ್ಲೇ ಸಾಂಪ್ರದಾಯಿಕ ಪ್ರಜಾಪ್ರಭುತ್ವ ಕೂಡ ಅಡಗಿರುವುದು ವಿಚಿತ್ರ ಆದರೂ ಸತ್ಯ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಹೋರಾಟಗಳಲ್ಲಿ ಎಲ್ಲ ಜನ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಈ ಕೆಳಜಾತಿಯವರ ಆತ್ಮಾಭಿಮಾನ ಸಹಾಯಕವಾಗುತ್ತದೆ. ಇದರ ಅರ್ಥ ಕೆಳಜಾತಿಗಳ ಜನ ತಮ್ಮ ಭವಿಷ್ಯದಲ್ಲಿ ಸಾಮಾಜಿಕ ನ್ಯಾಯದೊರೆತ ಮೇಲೂ ತಮ್ಮ ಜಾತಿಗಳನ್ನು ಉಳಿಸಿಕೊಂಡೇ ಹೋಗಬೇಕೆಂದಲ್ಲ. ಶೋಷಣೆಯ ವಾತಾವರಣದಲ್ಲಿ ಇಂತಹ ಆತ್ಮಗೌರವದ ಜಾತಿಪ್ರಜ್ಞೆ ಸಾಂಪ್ರದಾಯಿಕ ಪ್ರಜಾಪ್ರಭುತ್ವವನ್ನು ಸೃಷ್ಟಿ ಮಾಡುತ್ತದೆ.
ಅಮಾನುಷ ವ್ಯವಸ್ಥೆಯಲ್ಲಿ ಕೆಳಜಾತಿಯವರಿಗೆ ತಮ್ಮ ತಮ್ಮ ಜಾತಿಗಳ ಪ್ರಜ್ಞೆ ಇರದೇ ಹೋದರೆ ‘ಗರ್ವದಿಂದ ಹೇಳಿರಿ ನಾವೆಲ್ಲ ಹಿಂದೂಗಳು’ ಎಂಬ ಠಾಕ್ರೆಯ ವಾದ ವಿಜಯ ಸಾಧಿಸುತ್ತಿತ್ತು. ಹಿಂದುತ್ವವಾದಿ ಶಕ್ತಿಗಳು ವರ್ಣ ಮತ್ತು ಜಾತಿ ಭೇದದಿಂದ ಕೂಡಿದ ಮನುಸ್ಮೃತಿಯ ಆಧಾರದ ಮೇಲೆ ದೇಶದ ಸಂವಿಧಾನವನ್ನು ಪುನರ್ ರಚಿಸುವುದರ ಮೂಲಕ ಇಡೀ ಭಾರತವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಆಳುತ್ತಿದ್ದವು. ದಲಿತರು ಮತ್ತು ಹಿಂದುಳಿದವರ ಆತ್ಮಶಕ್ತಿಯಿಂದಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಒಂದುವೇಳೆ ಈ ಆತ್ಮಶಕ್ತಿ ಇಲ್ಲದೇ ಇದ್ದಿದ್ದರೆ ಈಗಾಗಲೇ ಧಾರ್ಮಿಕ ಫ್ಯಾಸಿಸಂ ಬಂದು ನಮ್ಮ ಸಾಂವಿಧಾನಿಕ ಜಾಗದಲ್ಲಿ ಮನುಸ್ಮೃತಿ ರಾರಾಜಿಸುತ್ತಿತ್ತು! ಆಗ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ತಮ್ಮ ದೇಶದಲ್ಲೇ ಎರಡನೇ ದರ್ಜೆ ಪ್ರಜೆಗಳಾಗಿರುತ್ತಿದ್ದರು. ಸಂವಿಧಾನದ ರಕ್ಷಣೆ ಮತ್ತು ಅದು ಕೊಡುವ ಹಕ್ಕುಗಳ ಈಡೇರಿಕೆಗಾಗಿ ಮಾಡುವ ಹೋರಾಟದಿಂದ ಮಾತ್ರ ಭಾರತದಲ್ಲಿ ಪ್ರಜಾಪ್ರಭುತ್ವ ಮುಂದುವರಿಯಲು ಸಾಧ್ಯ. ಇಲ್ಲದಿದ್ದರೆ ಉಗ್ರಗಾಮಿಗಳನ್ನು ತೋರಿಸುತ್ತ ಕೋಮುವಾದಿಗಳು ಬೆಳೆಯುತ್ತಾರೆ. ಅದೇ ರೀತಿಯಲ್ಲಿ ಕೋಮುವಾದಿಗಳನ್ನು ತೋರಿಸುತ್ತ ಉಗ್ರಗಾಮಿಗಳು ಬೆಳೆಯುತ್ತಾರೆ. ಕೊನೆಗೆ ಇಡೀ ದೇಶ ಅವರ ಕ್ರೌರ್ಯಕ್ಕೆ ಬಲಿಯಾಗಬೇಕಾಗುತ್ತದೆ.ಭಾರತೀಯ ಸಮಾಜದ ಹಿನ್ನೆಲೆ: ವಿರಾಟ್ ಪುರಷನ ಮುಖದಿಂದ ಬ್ರಾಹ್ಮಣ, ಭುಜದಿಂದ ಕ್ಷತ್ರಿಯ, ತೊಡೆಯಿಂದ ವೈಶ್ಯ ಮತ್ತು ಪಾದದಿಂದ ಶೂದ್ರ ಹುಟ್ಟಿದ ಎಂದು ಹೇಳುವ ಋಗ್ವೇದದ ಪುರುಷಸೂಕ್ತದ ಆಧಾರದ ಮೇಲೆ ನಮ್ಮ ಸಮಾಜವು ಸುಲಿಗೆ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಾ ಶ್ರೇಣೀಕೃತವಾಗಿ ಬೆಳೆಯಿತು.
ಈ ಸಮಾಜದ ವಿವಿಧ ಹಂತಗಳಲ್ಲಿ ತುಳಿತಕ್ಕೊಳಗಾದವರು ತಮ್ಮ ಸ್ಥಿತಿಗತಿಗೆ ಹಿಂದಿನ ಜನ್ಮದ ಪ್ರಾರಬ್ಧಕರ್ಮವೇ ಕಾರಣ ಎಂದು ಭಾವಿಸುವಂತೆ ಧಾರ್ಮಿಕ ಸಾಹಿತ್ಯದ ನಿರ್ಮಾಣವಾಯಿತು. ವೇದ, ಶಾಸ್ತ್ರ, ಪುರಾಣಗಳನ್ನು ಓದಲು ಅವಕಾಶವಿಲ್ಲದ ಶೂದ್ರರಿಗೆ ನಾಟಕಗಳ ಮೂಲಕ ಕರ್ಮಸಿದ್ಧಾಂತ ಮತ್ತು ವರ್ಣ-ಜಾತಿಗಳಿಂದ ಕೂಡಿದ ಶ್ರೇಣೀಕೃತ ಸಮಾಜದ ರಚನೆಯ ಕಲ್ಪನೆಯನ್ನು ಕೊಡಲಾಯಿತು. ಅಷ್ಟೇ ಅಲ್ಲದೆ ಈ ಸಮಾಜದಲ್ಲಿ ಎಲ್ಲ ಜಾತಿಗಳವರಿಗೂ ಒಂದು ವಿಶಿಷ್ಟವಾದ ಉದ್ಯೋಗ ಮತ್ತು ಸ್ಥಾನವಿದೆ ಎಂಬುದನ್ನು ಸಾಧಿಸಲಾಯಿತು. ಕೆಳಜಾತಿಗಳಲ್ಲಿ ಹುಟ್ಟಿ ಕಷ್ಟ ನಷ್ಟ ಅನುಭವಿಸುವವರ ಮತ್ತು ಅನ್ಯಾಯಕ್ಕೊಳಗಾಗುವವರ ನಿಕೃಷ್ಟ ಬದುಕಿಗೆ ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪವೇ ಕಾರಣ. ಅವರೆಲ್ಲಾ ಈ ಧಾರ್ಮಿಕ ವ್ಯವಸ್ಥೆಗೆ ಅಂದರೆ ಸುಲಿಗೆ ವ್ಯವಸ್ಥೆಗೆ ಗೌರವಕೊಟ್ಟು ಕಷ್ಟ ನಷ್ಟಗಳನ್ನು ಸಹಿಸುತ್ತಾ ಮತ್ತು ಫಲಾಪೇಕ್ಷೆಯಿಲ್ಲದೆ ದುಡಿಯುತ್ತಾ, ಶೋಷಣೆಯನ್ನು ಒಪ್ಪಿಕೊಳ್ಳುತ್ತಾ ಬದುಕಿದರೆ ಮುಂದಿನ ಜನ್ಮದಲ್ಲಿ ಕುಲೀನರಾಗಿ ಜನಿಸಿ ಸುಖಭೋಗಗಳನ್ನು ಪಡೆಯುವರು ಎಂಬ ಭ್ರಮೆಯನ್ನು ಸೃಷ್ಟಿಸಲಾಯಿತು. ಈ ಸನಾತನ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಣಗಳವರು ಸವರ್ಣೀಯರೆನಿಸಿ ಎಲ್ಲ ಸೌಲಭ್ಯಗಳನ್ನು ಪಡೆದರು. ಆದರೆ ಶೂದ್ರರು ಯಾವುದೇ ಹಕ್ಕುಗಳಿಲ್ಲದೆ ಬದುಕುವಂತಹ ಸ್ಥಿತಿಗೆ ಇಳಿದರು. ಇವರೆಲ್ಲಾ ಈ ದೇಶದ ಮೂಲನಿವಾಸಿಗಳೇ ಆಗಿದ್ದರು. ಮನುವಾದಿಗಳಿಂದ ಬೇಸತ್ತವರು ಕಾಡು ಸೇರಿ ಆದಿವಾಸಿಗಳಾದರು. ಆದರೆ ಇತರ ಅನೇಕರು ಈ ಕ್ರೂರ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾ ಅಲ್ಲೇ ಉಳಿದರು.
ಈ ಹೋರಾಟಗಾರರಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದರು. ಹೀಗೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಶೂದ್ರರೇ ಅಸ್ಪೃಶ್ಯರು. ಅವರು ಊರಿನ ಹೊರಗಡೆಯ ಕೇರಿಗಳಲ್ಲಿ ಬದುಕುವಂತಾಯಿತು. ಇದೊಂದು ಭಯಂಕರವಾದ ಅಪಾರ್ಥೈಡ್ ವ್ಯವಸ್ಥೆ. ಅಪಾರ್ಥೈಡ್ ಅಂದರೆ ಪ್ರತ್ಯೇಕವಾಗಿ ಬದುಕುವುದು. ಹೀಗೆ ಚಾತುರ್ವರ್ಣಭೇದ ಎಂಬ ಈ ಅಪಾರ್ಥೈಡ್ ವ್ಯವಸ್ಥೆ ಭಾರತದಲ್ಲೇ ಮೊದಲಬಾರಿಗೆ ಪ್ರಾರಂಭವಾಯಿತು. ದಕ್ಷಿಣ ಆಫ್ರಿಕಾದ ಅಪಾರ್ಥೈಡ್ (ವರ್ಣಭೇದ ನೀತಿ) ವ್ಯವಸ್ಥೆಗೆ ಕೇವಲ ನಾಲ್ಕು ಶತಮಾನಗಳ ಇತಿಹಾಸವಿದೆ. ಕಪ್ಪು ಜನರ ಹಕ್ಕುಗಳಿಗಾಗಿ ಹೋರಾಡುತ್ತ 1962ನೇ ನವೆಂಬರ್ 7ರಿಂದ 1990ನೇ ಫೆಬ್ರುವರಿ 11ರ ವರೆಗೆ ದಕ್ಷಿಣ ಆಫ್ರಿಕಾದ ಕುಪ್ರಸಿದ್ಧ ಜೈಲುಗಳಲ್ಲಿದ್ದು ಬಿಡುಗಡೆ ಹೊಂದಿದ ಕರಿಯರ ನಾಯಕ ನೆಲ್ಸನ್ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಮೇಲೆ ಈ ವ್ಯವಸ್ಥೆ ಕೊನೆಗೊಂಡಿತು. ಆದರೆ ಭಾರತದ ಅಪಾರ್ಥೈಡ್ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಂದರೆ ಸಹಸ್ರಾರು ವರ್ಷಗಳ ಹಿಂದೆ ಸಾಮಾಜಿಕ ವ್ಯವಸ್ಥೆಯನ್ನು ವಿರೋಧಿಸಿ ಬಹಿಷ್ಕೃತರಾದವರ ವಂಶಜರು ಇಂದಿಗೂ ಹೊಲಗೇರಿಗಳಲ್ಲಿ ಮತ್ತು ಮಾದರ ಓಣಿಗಳಲ್ಲಿ ಬದುಕುವ ಸ್ಥಿತಿ ಇದೆ! ನಿರೀಶ್ವರವಾದಿ ಚಾರ್ವಾಕರು (ಲೋಕಾಯತರು) ಸಾಮೂಹಿಕವಾಗಿ ಈ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸಿದವರಲ್ಲಿ ಮೊದಲಿಗರು. ‘ಚಾರು ವಾಕ್’ ಎಂದರೆ ಮನೋಹರವಾಗಿ ಮಾತನಾಡುವವನು.
‘ಲೋಕ ಆಯತ’ ಎಂದರೆ ಈ ಭೂಮಿಗೆ ಯೋಗ್ಯನಾಗಿರುವವನು. (ಈ ಬದುಕಿನ ವಾಸ್ತವತೆಯನ್ನು ಮಾತ್ರ ನಂಬಿ ಉಳಿದದ್ದೆಲ್ಲ ಸುಳ್ಳು ಎಂದು ಸಾರಿದ ಲೋಕಪ್ರಿಯನು) ಶೂದ್ರರಿಗೆ ಈ ವಿಚಾರ ತುಂಬಾ ಹಿಡಿಸಿತು. ಅವರಿಗೆ ಈ ಬದುಕಿನಲ್ಲೇ ಒಳ್ಳೆಯದನ್ನು ಕಾಣುವ ಕನಸುಗಳು ಬೀಳತೊಡಗಿದವು. ಆದರೆ ಪುರುಷಸೂಕ್ತದ ಚಾತುರ್ವರ್ಣ ಪದ್ಧತಿಯಿಂದ ಕುಲವಾದವನ್ನು ಸೃಷ್ಟಿಸಿದವರ ವಂಶದವರು ಎಂದು ಹೆಮ್ಮೆ ಪಡುತ್ತಿದ್ದ ಸನಾತನವಾದಿಗಳು ಚಾರ್ವಾಕರನ್ನು ಕೊಲ್ಲುತ್ತಾ ಅವರ ಸಾಹಿತ್ಯವನ್ನು ಸುಡುತ್ತಾ ಲೋಕಾಯತ ತತ್ತ್ವಜ್ಞಾನವನ್ನೇ ನಿರ್ನಾಮ ಮಾಡುವಲ್ಲಿ ಬಹುಪಾಲು ಯಶಸ್ವಿಯಾದರು. ಯಾವುದೇ ವರ್ಣದ ಮನುಷ್ಯ ಐಹಿಕ ಜಗತ್ತಿನ ಎಲ್ಲ ವ್ಯಾಮೋಹಗಳಿಂದ ಹೊರಬಂದು ತನ್ನ ಸದ್ಗುಣಗಳಿಂದ ಅತ್ಯುನ್ನತವಾದುದನ್ನು ಸಾಧಿಸಿದಾಗ ಆತನೇ ದೇವನಾಗುತ್ತಾನೆಂಬ ವಿಶಿಷ್ಟವಾದ ನಿರೀಶ್ವರವಾದವನ್ನೇ ನಂತರ ಬಂದ ಜೈನತತ್ತ್ವವೂ ಸಾರಿತು. ಆದರೆ ಐಹಿಕ ಜಗತ್ತಿಗೆ ಸಂಬಂಧಿಸಿದಂತೆ ಕಠಿಣ ಮಾರ್ಗದಿಂದಾಗಿ ಬಹುಪಾಲು ಶೂದ್ರರು ಈ ಧರ್ಮವನ್ನು ಸ್ವೀಕರಿಸಲಿಲ್ಲ. ಅಲ್ಲದೆ ಆ ಧರ್ಮ ಬುದ್ಧನ ಕಾಲದಲ್ಲೇ ಸನಾತನಿಗಳ ಹಿಡಿತಕ್ಕೆ ಬಂದಾಗಿತ್ತು. ಬುದ್ಧನ ಅಜ್ಞೇಯವಾದ ಕಾಠಿಣ್ಯವನ್ನು ಅಲ್ಲಗಳೆದ ಮಾಧ್ಯಮ ಮಾರ್ಗವಾಗಿ ಜನಸಾಮಾನ್ಯರನ್ನು ಆಕರ್ಷಿಸಿತು. ದೇವರ ಅಸ್ತಿತ್ವದ ಬಗ್ಗೆ ಬುದ್ಧ ಎಲ್ಲಿಯೂ ಮಾತನಾಡುವುದಿಲ್ಲ. ಆತ ಮಾತನಾಡುವುದು ಹಿತಕಾರಿಯಾದ ಬದುಕಿನ ಬಗ್ಗೆ. ಈ ಬದುಕನ್ನು ದುಃಖದಿಂದ ಬಿಡುಗಡೆಗೊಳಿಸುವುದರ ಬಗ್ಗೆ. ವಿವಿಧ ಜಾತಿ ಮತ್ತು ಕಾಯಕಗಳಲ್ಲಿ ಹಂಚಿಹೋಗಿದ್ದ ಶೂದ್ರರಿಗೆ ಬುದ್ಧ ಬಹಳ ಹಿಡಿಸಿದ.
ಬಹುಪಾಲು ಜನ ಸಮುದಾಯ ಬುದ್ಧನ ಮಾರ್ಗವನ್ನು ಅನುಸರಿಸತೊಡಗಿತು. ಅನೇಕ ರಾಜರು ಕೂಡ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸುವಂಥ ಪರಿಸ್ಥಿತಿಯುಂಟಾಯಿತು. ಆದರೆ ಸನಾತನಿಗಳು ಬೌದ್ಧಭಿಕ್ಕುಗಳ ಮೇಲೆ ಹಲ್ಲೆ ಮಾಡತೊಡಗಿದರು. ಅವರನ್ನು ಜೀವಂತ ಸುಡುವ ಕೃತ್ಯಗಳೂ ನಡೆದವು. ನಂತರ ವಿವಿಧ ದೇಶಗಳಿಗೆ ಹರಡಿದ ಬೌದ್ಧಧರ್ಮ ಭಾರತದಲ್ಲಿ ಅಲ್ಪಸಂಖ್ಯಾತ ಧರ್ಮವಾಗಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗಿತು. ತದನಂತರ ಬಂದ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಜಾತಿ ಮತ್ತು ವರ್ಣವ್ಯವಸ್ಥೆಯಿಂದ ಬೇಸತ್ತ ಜನರಿಗೆ ವರದಾನಗಳಾದವು. ತಮ್ಮ ಆತ್ಮಗೌರವಕ್ಕಾಗಿ ವಿವಿಧ ಕೆಳಜಾತಿಗಳವರು ಬಹುಸಂಖ್ಯೆಯಲ್ಲಿ ಆ ಧರ್ಮಗಳನ್ನು ಸ್ವೀಕರಿಸಿದರೆ, ಮೇಲ್ಜಾತಿಯವರಲ್ಲಿ ಅನೇಕರು ಮುಸ್ಲಿಂ ಮತ್ತು ಕ್ರೈಸ್ತ ಆಳುವ ವರ್ಗಗಳಿಂದ ಲಾಭಪಡೆಯುವುದಕ್ಕಾಗಿ ಇಲ್ಲವೆ ಆ ಧರ್ಮಗಳ ತತ್ತ್ವಕ್ಕೆ ಮಾರುಹೋಗಿ ಮತಾಂತರಗೊಂಡರು. ಸಂತರು ಮತ್ತು ಸೂಫಿಸಂತರು ಕೂಡ ಜನಸಮುದಾಯದ ಆಶೋತ್ತರಗಳನ್ನು ಎತ್ತಿ ಹಿಡಿಯುವಂತಹ ಆದರ್ಶಗಳ ಮೂಲಕ ಜನರಲ್ಲಿ ಹೊಸ ವಿಚಾರಗಳನ್ನು ಬಿತ್ತತೊಡಗಿದರು. ಕೆಳಜಾತಿಗಳವರು ಏಕೆ ಮುಸ್ಲಿಮರಾದರು ಎನ್ನುವುದಕ್ಕೆ ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದಾರೆ.
“The Mohammedan conquest of India came as a salvation to the downtrodden to the poor. That is why one fifth of our people have become Mohammedans. It was not the sword that did all. It would be the height of madness to think it was all the work of sword and fire. It was to gain their liberty from the zemindars and from the priest.”
ವೈದಿಕರ ಶಾಸ್ತ್ರ ಮತ್ತು ಜಮೀನುದಾರರ ಶಸ್ತ್ರಗಳು ಭಾರತದ ಬಡವರು ಮತ್ತು ಹಿಂದುಳಿದ ಜಾತಿಗಳ ಜನರನ್ನು ಸಹಸ್ರಾರು ವರ್ಷಗಳಿಂದ ಬಂಧನದಲ್ಲಿಟ್ಟಿದ್ದವು. ಅವರು ತಮ್ಮ ವಿಮೋಚನೆಗಾಗಿ ಮುಸ್ಲಿಂ ಮತ್ತು ಇತರ ಧರ್ಮಗಳಿಗೆ ಮತಾಂತರಗೊಂಡರು. ಈ ಪ್ರಕ್ರಿಯೆಯನ್ನು ಸ್ವಾಮಿ ವಿವೇಕಾನಂದರು ನೂರು ವರ್ಷಗಳಿಗಿಂತ ಹಿಂದೆಯೇ ಗುರುತಿಸಿದ್ದಾರೆ. ಬಸವಣ್ಣನವರ ಶರಣಸಂಕುಲ: ಕನ್ನಡ ನಾಡಿನಲ್ಲಿ 12ನೇ ಶತಮಾನದ ಶರಣರು ಬಸವಣ್ಣನವರ ಮಾರ್ಗದರ್ಶನದಲ್ಲಿ ವರ್ಣ ಮತ್ತು ಜಾತಿಗಳಿಲ್ಲದ ಸಮಾಜ ನಿರ್ಮಿಸಲು ತೀವ್ರ ಪ್ರಯತ್ನ ಮಾಡಿದರು. ಆಗ ಅಸ್ಪ್ರೃಶ್ಯರು ಮತ್ತು ಕೆಳಜಾತಿಗಳ ವಿವಿಧ ಕಾಯಕದವರು ಬೃಹತ್ ಪ್ರಮಾಣದಲ್ಲಿ ಶರಣರ ಏಕದೇವೋಪಾಸನೆಯ ವರ್ಣರಹಿತ ಮತ್ತು ಜಾತಿರಹಿತ ಧರ್ಮವನ್ನು ಸ್ವೀಕರಿಸಿದರು. ಬ್ರಾಹ್ಮಣ ಮಧುವರಸ ಮತ್ತು ಸಮಗಾರ ಹರಳಯ್ಯನಂತಹವರು ಈ ಹೊಸ ಧರ್ಮದಲ್ಲಿ ಇಷ್ಟಲಿಂಗಧಾರಿಗಳಾಗಿ ಒಂದೇ ಸ್ಥಾನವನ್ನು ಪಡೆದರು. ಮಧುವರಸರ ಮಗಳು ಮತ್ತು ಹರಳಯ್ಯನ ಮಗನ ಮದುವೆಯೇ ಒಂದು ನೆಪವಾಗಿ ಮೇಲ್ಜಾತಿಯವರು ಗುಲ್ಲೆಬ್ಬಿಸಿದರು. ಈ ವಿಲೋಮ ವಿವಾಹ ಮನುಧರ್ಮಕ್ಕೆ ಬಾಹಿರ ಎಂದು ವೈದಿಕರು ವಾದಿಸಿದರು. ಅವರ ಶಾಸ್ತ್ರಗಳು ಹೇಳಿದಂತೆ ಬಿಜ್ಜಳನ ಶಸ್ತ್ರಗಳು ಕೇಳಿದವು. ಆಗ ಕಲ್ಯಾಣದಲ್ಲಿ ಕ್ಷಿಪ್ರಕ್ರಾಂತಿ ನಡೆದು ಅನೇಕ ಶರಣರ ಕಗ್ಗೊಲೆಯಾಯಿತು. ಅವರ ವಚನಕಟ್ಟುಗಳನ್ನು ಸುಡಲಾಯಿತು.
ಅಳಿದುಳಿದ ಶರಣರು ತಮಗೆ ದಿಕ್ಕುತೋಚಿದ ಕಡೆಗಳಲ್ಲಿ ಹೊರಟು ಹೋಗಿ ಭಾರಿ ಕಷ್ಟನಷ್ಟಗಳನ್ನು ಅನುಭವಿಸಿದರು. ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದರಹಿತ ಸಮಾಜದ ಅವರ ಕನಸು ಕನಸಾಗಿಯೇ ಉಳಿಯಿತು. 12ನೇ ಶತಮಾನದ ವಚನಕಾರರಲ್ಲಿ 35 ವಚನಕಾರ್ತಿಯರೂ ಸೇರಿದಂತೆ ಒಟ್ಟು 221 ವಚನಕಾರರ 14739 ವಚನಗಳು ಸಿಕ್ಕಿವೆ. ಅವರಲ್ಲಿ 44 ಮಂದಿ ವಚನಕಾರರ ಹೆಸರು ಪತ್ತೆಯಾಗಿಲ್ಲ. 17 ಮಂದಿ ವಚನಕಾರರ ಅಂಕಿತಗಳು ಗೊತ್ತಾಗಿಲ್ಲ. ಈ ವಚನಕಾರರಲ್ಲಿ ಬಹುಪಾಲು ಮಂದಿ ಕೆಳಜಾತಿ ಮತ್ತು ಕೆಳವರ್ಗದವರಾಗಿದ್ದರು ಎಂಬುದು ಗಮನಾರ್ಹ. ಇವರೆಲ್ಲ ಜಾತಿವ್ಯವಸ್ಥೆಯ ಕ್ರೌರ್ಯವನ್ನು ವಿರೋಧಿಸಿ ಬಸವಣ್ಣನವರ ಜಾತಿರಹಿತ ಶರಣಸಂಕುಲದ ಸದಸ್ಯರಾಗಿದ್ದರು. ಹೀಗೆ ಶೂದ್ರರು ಮತ್ತು ಅಸ್ಪೃಶ್ಯರು ಆಯಾ ಕಾಲಘಟ್ಟದಲ್ಲಿ ಜೈನ, ಬೌದ್ಧ, ಕ್ರೈಸ್ತ, ಇಸ್ಲಾಂ, ಲಿಂಗಾಯತ ಮತ್ತು ಸಿಖ್ ಧರ್ಮಗಳಿಗೆ ಮತಾಂತರಗೊಂಡರು. ಉಳಿದವರು ಆದಿವಾಸಿಗಳಾಗಿ, ಅಸ್ಪೃಶ್ಯರಾಗಿ ಮತ್ತು ವಿವಿಧ ಜಾತಿಗಳ ಶೂದ್ರರಾಗಿ ಇದ್ದಲ್ಲೇ ಉಳಿದರು. ಈ ಹಿನ್ನೆಲೆಯಲ್ಲಿ ನೋಡಿದಾಗ ಬಹುಪಾಲು ಜೈನರು, ಬೌದ್ಧರು, ಕ್ರೈಸ್ತರು, ಮುಸ್ಲಿಮರು, ಲಿಂಗಾಯತರು ಮತ್ತು ಸಿಖ್ಖರು ಶೂದ್ರ ಮೂಲದವರೇ ಆಗಿದ್ದಾರೆ. ಅಸ್ಪೃಶ್ಯರು ಆದಿವಾಸಿಗಳು ಮತ್ತು ಎಲ್ಲ ಹಿಂದುಳಿದವರ್ಗದವರು ಕೂಡ ಶೂದ್ರ ಮೂಲದವರೇ ಆಗಿದ್ದಾರೆ ಎಂಬ ಸತ್ಯವನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ.
ಮಹಾಜನ ಸಮಾಜದ ವಿರುದ್ಧ ಬಹುಜನ ಸಮಾಜ: ಈ ಐತಿಹಾಸಿಕ ಪ್ರಜ್ಞೆಯ ಆಧಾರದ ಮೇಲೆ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಒಂದುಗೂಡಿ ಬಹುಜನರಾದರೆ ಭಾರತದ ಚರಿತ್ರೆ ಹೊಸ ತಿರುವು ಪಡೆದು ಭವಿಷ್ಯದಲ್ಲಿ ಬಹುಜನರ ಆಳ್ವಿಕೆ ಬಂದು ಸಾಂಪ್ರದಾಯಿಕ ಸುಲಿಗೆಕೋರ ‘ಮಹಾಜನರ’ ಆಳ್ವಿಕೆ ಕೊನೆಗೊಳ್ಳುವುದು. ಆದರೆ ಮಹಾಜನರು ಅಷ್ಟು ಸುಲಭವಾಗಿ ತಮ್ಮ ಹಕ್ಕನ್ನು ಬಿಟ್ಟುಕೊಡರು. ತಮ್ಮ ರಾಜಕೀಯ ಹಕ್ಕನ್ನು ಉಳಿಸಿಕೊಳ್ಳುವುದಕ್ಕಾಗಿ ಅವರೀಗ ‘ಗರ್ವಸೇ ಕಹೋ ಹಂ ಹಿಂದೂ ಹೈ’, ‘ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು’ ಮುಂತಾದ ಘೋಷಣೆಗಳನ್ನು ಕೂಗತೊಡಗಿದ್ದಾರೆ. ಜನಗಣತಿಯಲ್ಲಿ ಜಾತಿಗಳ ಹೆಸರುಗಳಿರಬಾರದು; ಕೇವಲ ಹಿಂದೂ ಇದ್ದರೆ ಸಾಕು ಎಂದು ಹಿಂದುಳಿದವರನ್ನು ಮತ್ತು ಅಸ್ಪ್ರೃಶ್ಯರನ್ನು ಹಿಂದೂ ಶಬ್ದಕ್ಕೆ ಕಟ್ಟಿ ಆಳಲು ಬಯಸಿದ್ದಾರೆ. ಶೂದ್ರರನ್ನು ಒಡೆದು ಆಳಿದ ಇವರಿಗೆ, ಇಂದು ಅವರೆಲ್ಲರೂ ತಮ್ಮವರೆಂದು ಬಾಯಿಮಾತಿನಲ್ಲಿ ಹೇಳುವ ತವಕ ಹೆಚ್ಚಾಗಿದೆ. ಆ ಮೂಲಕ ಹೊಸರೀತಿಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರನ್ನು ಆಳುವ ತೀವ್ರ ಯತ್ನದಲ್ಲಿದ್ದಾರೆ. ಎಲ್ಲಿಯವರೆಗೆ ತುಳಿತಕ್ಕೊಳಗಾದ ಹಿಂದುಳಿದವರು ಮತ್ತು ಅಸ್ಪೃಶ್ಯರು ತಮ್ಮ ಮೂಲ ಒಂದೇ ಎಂಬುದನ್ನು ಅರಿತು ಒಂದಾಗುವುದಿಲ್ಲವೋ; ಎಲ್ಲಿಯವರೆಗೆ ಇವರಿಬ್ಬರೂ ಸೇರಿ, ಬಹುಪಾಲು ಕ್ರೈಸ್ತರು, ಮುಸ್ಲಿಮರು, ಲಿಂಗಾಯತರು, ಸಿಖ್ಖರು ಮೊದಲಾದವರ ಪೂರ್ವಜರು ತಮ್ಮ ಪೂರ್ವಜರ ರಕ್ತ ಸಂಬಂಧಿಗಳಾಗಿದ್ದವರು ಎಂಬ ಸತ್ಯವನ್ನು ಅರಿತು, ಇವರೆಲ್ಲರ ಜೊತೆ ಒಂದಾಗಿ ರಾಜ್ಯಶಕ್ತಿಯನ್ನು ಪಡೆಯಲು ಹೋರಾಡುವುದಿಲ್ಲವೋ ಅಲ್ಲಿಯವರೆಗೆ ಶೋಷಕ ಮಹಾಜನರ ಅಡಿಯಾಳುಗಳಾಗಿಯೇ ಇರಬೇಕಾಗುತ್ತದೆ. ದಲಿತರು ಕೈ ಮುಂದೆ ಮಾಡಿದಾಗ ಉಳಿದವರು ಅವರ ಕೈಹಿಡಿಯುವುದೊಂದೇ ವಿಮೋಚನೆಯ ಮಾರ್ಗವಾಗಿದೆ.







ಇದು ಒಂದು ಪೂರ್ವಗ್ರಹ ಪೀಡಿತ, ಕೋಮು ಪ್ರಚೋದಿತ ಲೇಖನ.
ಅವರು “ಕೋಮುವಾದಿಗಳು” ಅಂದು ಹೇಳುತ್ತಾ ನೀವು “ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಒಂದಾಗಬೇಕು..” ಹೋರಾಟ ಮಾಡಬೇಕು ಎಂಬಿತ್ಯಾದಿಯಾಗಿ ಬರೆದಿದ್ದೀರ ಅಂದ ಮೇಲೆ ನಿಮ್ಮದೂ ಕೋಮುವಾದ ಅಲ್ಲವೇ. ನಮ್ಮದು ಪ್ರಜಾಪ್ರಭುತ್ವ, ಮೊದಲಿನ ರಾಜಪ್ರಭುತ್ವವಾಗಲೀ, ಪಾಳೇಗಾರಿಕೆಯಾಗಲೀ ಎಲ್ಲೂ ಉಳಿದಿಲ್ಲ. ಹಾಗಾಗಿ ಎಲ್ಲರಿಗೂ ಮುನ್ನಡೆಯಲು ಸಮಾನವಾದ ಅವಕಾಶಗಳಿವೆ. ಆದರೆ ಕೆಲವರಿಗೆ ಮುನ್ನಡೆಯುವ ತುಡಿತವೇ ಇದ್ದಂತಿಲ್ಲ. ತಲತಲಾಂತರಗಳಿಂದ ತುಳಿತಕ್ಕೊಳಗಾಗಿರುವ ಹಿಂದುಳಿದ ವರ್ಗಗಳ ಮೇಲಿನ ಅನ್ಯಾಯವನ್ನು ಸರಿಪಡಿಸಲು ಮೀಸಲಾತಿ ಇದೆ, ಸರಕಾರದ ಎಷ್ಟೋ ಯೋಜನೆಗಳಿವೆ. ಆದರೆ ಅವು ಎಷ್ಟು ಪ್ರಾಮಾಣಿಕವಾಗಿ ಅನುಷ್ಠಾನವಾಗುತ್ತಿವೆ, ಯಾರಿಗೆಲ್ಲ ಅವುಗಳ ಉಪಯೋಗವಾಗುತ್ತಿದೆ, ಬಹುತೇಕ ಅರ್ಹರನ್ನು ಅದು ಏಕೆ ತಲುಪುತ್ತಿಲ್ಲ, ಹಿಂದುಳಿದವರು ಎಂಬ ಹಣೆಪಟ್ಟಿ ಏಕೆ ಹೋಗಲಾಡಿಸಲಾಗಿಲ್ಲ ಅನ್ನುವುದರ ಬಗ್ಗೆ ತಿಳಿದುಕೊಂಡು ಜನಜಾಗೃತಿ ಮೂಡಿಸುವ ಪ್ರಯತ್ನಗಳಾಗಬೇಕು ಎನ್ನುವ ಕಳಕಳಿ ಲೇಖನದಲ್ಲಿ ಕಂಡುಬರಲಿಲ್ಲ.
ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಶೋಷಿತರಿಗೆ ವರದಾನಗಳಾಗಿ ಬಂದವು ಎಂದು ಹೇಳಿದಿರಿ. ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಲು ಜನ ಆ ಧರ್ಮಗಳಿಗೆ ಮತಾಂತರಗೊಂಡರು ಎಂದೂ ಹೇಳಿದಿರಿ. ಮತಾಂತರಗೊಂಡ ಮೇಲೆ ಅವರ ಜೀವನ ಮಟ್ಟ ಸುಧಾರಿಸಿರಬೇಕಲ್ಲವೇ? ಹೌದು ಎಂದಾದಲ್ಲಿ, ಅವರನ್ನು ಇನ್ನೂ ಶೋಷಿತರು ಎಂದು ಗುರುತಿಸುವುದು ಸರಿಯಾ? ಇಲ್ಲ ಎಂದಾದಲ್ಲಿ ಧರ್ಮಗಳದ್ದೇನು ಹೆಗ್ಗಳಿಕೆ? ಅನ್ಯ ಧರ್ಮಗಳನ್ನು ಸ್ವಾಗತಿಸಿ
“ಸನಾತನಿಗಳು ಬೌದ್ಧಭಿಕ್ಕುಗಳ ಮೇಲೆ ಹಲ್ಲೆ ಮಾಡತೊಡಗಿದರು. ಅವರನ್ನು ಜೀವಂತ ಸುಡುವ ಕೃತ್ಯಗಳೂ ನಡೆದವು. ನಂತರ ವಿವಿಧ ದೇಶಗಳಿಗೆ ಹರಡಿದ ಬೌದ್ಧಧರ್ಮ ಭಾರತದಲ್ಲಿ ಅಲ್ಪಸಂಖ್ಯಾತ ಧರ್ಮವಾಗಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗಿತು.” ಎಂದು ಹೇಳುವಿರಿ. ಬೌದ್ಧ ಧರ್ಮ ದೇಶದಲ್ಲಿ ಹರಡಿಕೊಳ್ಳುವ ಮುಂಚೆ ಹಿಂದೂ ಧರ್ಮವೇ ಭಾರತದಲ್ಲಿ ಸರ್ವವ್ಯಾಪಿಯಾಗಿದ್ದಿತು. ಹಿಂದೂಗಳು ಸ್ವಇಚ್ಛೆಯಿಂದ ಬೌದ್ಧರಾಗುವಾಗ, ಬೌದ್ಧರು ಸ್ವಇಚ್ಛೆಯಿಂದ ಮರಳಿ ಹಿಂದೂವಾಗಿ ಮತಾಂತರಗೊಂಡಿರಬಹುದಲ್ಲವೇ. ಹಿಂಸೆಯಿಂದಲೇ ಅದನ್ನು ಸಾಧಿಸಲಾಯಿತು ಅನ್ನುವುದು ಎಷ್ಟು ಸರಿ.
ಲಿಂಗಾಯತರು “ತುಳಿತಕ್ಕೊಳಗಾದವರು” ಹೇಗೆ ಎಂದು ಅರ್ಥವಾಗಲಿಲ್ಲ. ಲೇಖನದ ಕೊನೆಯಲ್ಲಿ ‘ಹಿಂದುಳಿದವರು, ಕ್ರೈಸ್ತರು, ಮುಸ್ಲಿಮರು, ಲಿಂಗಾಯತರು, ಸಿಖ್ಖರು ಎಲ್ಲರೂ ಒಂದಾಗಬೇಕು’ ಎನ್ನುತ ಬ್ರಾಹ್ಮಣರನ್ನು ಮಾತ್ರ ಪ್ರತ್ಯೇಕಿಸಿ ಗುರಿಯಾಗಿಸಿದ್ದೀರಿ. ನನಗೆ ನೀವು ಆಗರ್ಭ ಶ್ರೀಮಂತ, ಜಮೀನುದಾರ ಬ್ರಾಹ್ಮಣರನ್ನ ಪಟ್ಟಿಯನ್ನು ತೋರಿಸಿಬಿಡಿ ನೋಡುವ. ಎಲ್ಲೋ ಒಂದೆರಡು ಹೊರತುಪಡಿಸಿದರೆ ಅಂತಹ ಉದಾಹರಣೆಗಳು ಹೆಚ್ಚಿಗೆ ಸಿಗುವುದಿಲ್ಲ. ಜಮೀನು ಹೊಂದಿದ್ದರೂ ಅದು ಇನ್ನ್ಯಾರೋ ದಾನರೂಪವಾಗಿ ಕೊಟ್ಟ ಆಸ್ತಿ ಅಷ್ಟೆ. ಅದನ್ನಿಟ್ಟುಕೊಂಡು ಅನ್ನ್ಯಾಯ ಮಾಡುತ್ತಿದ್ದಾರೆ ಎಂದು ಸಾರುವುದು ಸಾರ್ವತ್ರೀಕರಣವಲ್ಲವೇ. ಹಿಂದಿನ ಕಾಲದಲ್ಲಿ ಶಿಕ್ಷಣ ಕೆಲವೇ ಜನರಿಗೆ ಮಾತ್ರ ಸೀಮಿತವಾಗಿತ್ತು, ಅದರಲ್ಲಿ ಬ್ರಾಹ್ಮಣರೇ ಜಾಸ್ತಿಯಾಗಿದ್ದರು. ಹಾಗಾಗಿ ತಾವು ಜ್ಞಾನಿಗಳು ಎಂಬ ಅಹಂನಿಂದ ಕೆಲವರು ಜಾತಿವಾದವನ್ನು ಅನುಸರಿಸುತ್ತಿದ್ದರು ಎಂದೇ ಇಟ್ಟುಕೊಳ್ಳೋಣ, ಆದರೆ ಈಗ ತಮ್ಮ ಪಾಡಿಗೆ ತಾವಿದ್ದುಕೊಂಡು, ಕಡು ಬಡತನವಿದ್ದೂ ಯಾವುದೇ ವಿಧವಾದ ಮೀಸಲಾತಿಯನ್ನು ಅಪೇಕ್ಷಿಸದೇ, ತಮ್ಮ ಕಾರ್ಯ, ಕರ್ಮಗಳಲ್ಲಿ ತೊಡಗಿಕೊಂಡಿರುವ ಬ್ರಾಹ್ಮಣರ ಮೇಲೆ ಈ ರೀತಿ ಕತ್ತಿ ಮಸೆಯುವುದು ಸರಿಯಾ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಬ್ರಾಹ್ಮಣ ಎಷ್ಟು ಮುಖ್ಯವೋ, ಇತರರೂ ಅಷ್ಟೇ ಮುಖ್ಯ.
ಈ ಲೇಖನ ದಲಿತರನ್ನು, ಹಿಂದುಳಿದವರನ್ನೂ ಹೆದರಿಸಿ, ದಾರಿ ತಪ್ಪಿಸುವ ಹುನ್ನಾರ. ೬೦ ವರ್ಷಗಳ ಹಿಂದೆ ಈ ಲೇಖನ ಸ್ವಲ್ಪ ಮಟ್ಟಿಗೆ ಪ್ರಸ್ತುತವಿದ್ದೀತು. ಈಗ ಬದಲಾಗಿದೆ ಮತ್ತೂ ಬದಲಾಗುವ ಆಸೆಯಿದೆ. ಆದರೆ, ಈ ಲೇಖನದ ದಾರಿಯಲ್ಲಿ ನಿಜಕ್ಕೂ ಅಲ್ಲ.
ಇದು ಆಧಾರ ರಹಿತ ಮತ್ತು ಸ್ವಕಪೊಲ ಕಲ್ಪಿತ ಲೇಖನವಾಗಿದೆ.ತಮ್ಮ ಅಜೆಂಡಾಗೆ ಸರಿಹೊಂದುವಂತೆ ವಿವೇಕಾನಂದರನ್ನು QUOTE ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ.
ಈ ಜಗತ್ತು ಕಂಡ ಶ್ರೇಷ್ಠ ಚರಿತ್ರಕಾರ ವಿಲ್ ದುರಾಂತ್ ಹೇಳಿರುವುದು ಹೀಗಿದೆ :
“The Mohammedan Conquest of India is probably the bloodiest story in history. It is a discouraging tale, for its evident moral is that civilization is a precarious thing, whose delicate complex of order and liberty, culture and peace may at any time be overthrown by barbarians invading from without or multiplying within.”
(From Chapter 6 of “The Story of Civilization” – Vol.1 By Will & Ariel Durant)
“The Mohammedans destroyed nearly all the monasteries, Buddhist or Brahman, in northern India. Nalanda was burned to the ground in 1197 and all its monks were slaughtered; we can never estimate the abundant life of ancient India from what these fanatics spared.”
(source: Story of Civilization: Our Oriental Heritage – By Will Durant).
Will Durant is a representative of British imperialism and they tried divide Hindus and Muslims by creating false history and to achieve their final goal of dividing India. They did it earlier in Bengal by dividing it on religious grounds.
ಸತ್ಯಾಂಶ ತಿಳಿದು ಬರೆಯಿರಿ… ವಿಲ್ ದುರಾಂತ್ ಅಮೇರಿಕಾ ದೇಶದ ಪ್ರಜೆ, ಬ್ರಿಟಿಷ್ ಅಲ್ಲ. ಮೇಲಾಗಿ ಅಮೇರಿಕಾದವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಹೋರಾಡಿ ಸ್ವಾತಂತ್ರ್ಯ ಗಳಿಸಿಕೊಂಡವರು. ಈ ಲೇಖನದಲ್ಲಿ ದರ್ಗರವರು ಬಹುಪಾಲು ಸಮಾಜದವರು ಬೌದ್ಧರ ಮೇಲೆ ದಾಳಿ ಮಾಡಿದರು ಎಂಬ ಅಸತ್ಯವನ್ನು ಆದಾರರಹಿತವಾಗಿ ಬರೆದ್ದಿದ್ದರಿಂದ ಈ ಪ್ರತಿಕ್ರಿಯೆ ಬರೆದು ಸರಿಯಾದ ಚರಿತ್ರೆಯನ್ನು ತಿಳಿಸಿ ಹೇಳಬೇಕಾಯಿತು ಅಷ್ಟೇ.
Try to understand the meaning of the sentence properly. I said REPRESENTATIVE not citizen. In your hurry to praise the Americans you are unnecessarily glorifying them. Pl try to know the facts and history
ರಂಜಾನ್ ದರ್ಗಾ ಅವರಿಗೆ– ಮನುವಾದ/ಮನುಸ್ಮೃತಿ ಈಗಲೂ ಅಸ್ತಿತ್ವದಲ್ಲಿದೆ ಎಂಬ ಪಾತಳಿಯ ಮೇಲೆ ತಾವು ಈ ಲೇಖನ ಬರೆದ ಹಾಗಿದೆ. ಇಡೀ ಭಾರತದ ಜನ ಸಂಖ್ಯೆಗೆ ಹೋಲಿಸಿದಾಗ ಬ್ರಾಹ್ಮಣರ ಸಂಖ್ಯೆ ಶೇಕಡಾ ಐದನ್ನೂ ಮೀರುವುದುದಿಲ್ಲ. ಇನ್ನು ನಮ್ಮ ಕರ್ನಾಟಕದ ಜನಸಂಖ್ಯೆಗೆ ಹೋಲಿಸಿದರೆ ಪ್ರತಿ ಶತ ಎಷ್ಟಿರಬಹುದು? ಒಂದು, ಎರಡು,ಅಥವಾ ಮೂರು. ಇಷ್ಟು ಕಡಿಮೆ ಸಂಖ್ಯೆಯವರು ಮನುವಾದದ ಮೂಲಕ ಇತರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದರೆ ಅದು ನಂಬುವ ಮಾತೇ? ಹಿಂದೂ ಧರ್ಮ=ಬ್ರಾಹ್ಮಣ ಧರ್ಮ ಎಂಬ ಸರಳ ಸಮೀಕರಣವನ್ನು ಪ್ರಜ್ಞಾವಂತರಾದ ತಾವೂ ನಂಬುತ್ತೀರಾ? ಸಾಂಪ್ರದಾಯಿಕ ಬ್ರಾಹ್ಮಣರಿಗಿಂತ ಮಿಗಿಲಾಗಿ ಇಂದು ಇತರೆ ಜಾತಿಯವರು ತಮ್ಮ ನಡೆ, ನುಡಿ,ಆಚಾರ, ಪೂಜೆ, ವ್ರತ ಇತ್ಯಾದಿಗಳಿಂದ ಹೆಚ್ಹು ಹೆಚ್ಹು ನವ ಬ್ರಾಹ್ಮಣರಾಗುತ್ತಿದ್ದಾರೆ.
”ಹೀಗೆ ಮನುಸ್ಮೃತಿ ಹಿಂದೂ ಧರ್ಮದ ತಾಯಿಬೇರು ಆಗಿದೆ.” – ಇದಕ್ಕಿಂತ ದೊಡ್ಡ ಕಾಮಿಡಿ ಇನ್ನೊಂದಿಲ್ಲ. ಈ ಜೋಕ್ ಕೇಳಿ ಕೇಳಿ ಸಾಕಾಗಿ ಹೋಗಿದೆ. ಆದರೂ ಪ್ರತೀ ಬಾರಿ ಕೇಳಿದಾಗಲೂ ನಗು ಬರುತ್ತದೆ. ಅದನ್ನು ಬರೆದವರ ಮೇಲೆ ಅನುಕಂಪ ಮೂಡುತ್ತದೆ.
ನಿಖರವಾದ ಆಧಾರಗಳನ್ನು ಇಟ್ಟುಕೊಂಡು ವಸ್ತುನಿಷ್ಠವಾಗಿ ಯಾರ ಪರ-ವಿರೋಧ ಗಳಿಲ್ಲದೆ ಏನಾದರೂ ಬರೆದರೆ ಚರ್ಚೆ ಮಾಡಬಹುದು. ಕೇವಲ ನಿಂದನೆಯ ಉದ್ದೇಶದಿಂದಲೇ ವಿಷ ತುಂಬಿ ಬರೆದ ಕಾಲ್ಪನಿಕ ತಥ್ಯಗಳ ಬಗ್ಗೆ ಚರ್ಚೆ ಮಾಡುವುದು ಹೇಗೆ ಸಾಧ್ಯ?
There is no need to provide any proof Mr.Dattaraj. It is everybody’s experience in society and whatever Ramjan Darga sir has written is really enlightening.