ಶಾರದಾ ಸದನ (೧೮೮೯)
ಗಿರಿಜಾ ಶಾಸ್ತ್ರಿ
“೧೮೮೯ರ ಮಾರ್ಚ್ ತಿಂಗಳ ೧೧ರ ಒಂದು ಸುಂದರವಾದ ಮಧ್ಯಾಹ್ನ ಮುಂಬಯಿಯ ವಿಲ್ಸನ್ ಕಾಲೇಜಿನ ಹಿಂದಿದ್ದ ರಸ್ತೆಯು ಜನರಿಂದ, ಗಾಡಿಗಳಿಂದ ತುಂಬಿ ಹೋಗಿತ್ತು. ಎಲ್ಲವೂ ‘ಶಾರದಾ ಸದನ’ದ ನಾಮಫಲಕದ ಕಡೆಗೆ ಮುಖಮಾಡಿ ಹೊರಟ್ಟಿದ್ದವು” ಎಂದು ಪಂಡಿತಾ ರಮಾಬಾಯಿಯವರ ಮಗಳು ಮನೋರಮ (sequel : Ramabai through her own words). ಹೇಳುತ್ತಾರೆ. ಶಾರದಾ ಸದನ ಪಂಡಿತ ರಮಾಬಾಯಿಯವರು ಬಾಲವಿಧವೆಯರಿಗಾಗಿ ತೆರೆದ ಒಂದು ಆಶ್ರಯಧಾಮ. ಅಮೇರಿಕಾದ ತಮ್ಮ ಸ್ನೇಹಿತರ ಸಹಾಯದಿಂದ ಈ ಸಂಸ್ಥೆಯನ್ನು ತೆರೆಯಲಾಯಿತು.
WHN (women’s History Network) ಎಂಬ ಮಹಿಳೆಯರ ಅಭಿವೃದ್ಧಿಗಾಗಿ ಇರುವ ಬ್ಲಾಗ್ ಒಂದು ಮಾರ್ಚ್ ತಿಂಗಳನ್ನು Women’s History Month ಎಂದು ಕರೆಯುತ್ತದೆ. ಮಾರ್ಚ್ ತಿಂಗಳು ಮಹಿಳೆಯರ ತಿಂಗಳಾದುದರಿಂದ, ಮಹಿಳೆಯರ ಅನಂತ ಶಕ್ತಿ ಸಾಧ್ಯತೆಗಳನ್ನು ತೆರೆದು ತೋರಿಸಿದ ಪಂಡಿತಾ ರಮಾಬಾಯಿಯವರು ಸ್ಥಾಪಿಸಿದ ‘ಶಾರದಾ ಸದನ, ಕೃಪಾ ಸದನ ಮತ್ತು ಮುಕ್ತಿ ಮಿಷನ್’ ಗಳನ್ನು ಪರಿಚಯಿಸುವುದು ಈ ಬರಹದ ಉದ್ದೇಶವಾಗಿದೆ (ಈ ಎಲ್ಲಾ ಸಂಸ್ಥೆಗಳು ಇಂದು ‘ಪಂಡಿತಾ ರಮಾಬಾಯಿ ಮುಕ್ತಿ ಮಿಷನ್’ ಎಂಬ ಹೆಸರಿನಲ್ಲಿ ಕಾರ್ಯ ಪ್ರವೃತ್ತವಾಗಿವೆ). ಶಾರದಾ ಸದನದ ಉದ್ಘಾಟನಾ ಸಮಾರಂಭಕ್ಕೆ ಮರಾಠಿಯ ಮೊತ್ತ ಮೊದಲ ಕಾದಂಬರಿಕಾರ್ತಿಯಾದ ಕಾಶೀಬಾಯಿ ಕಾನಿಟ್ಕರ್ ಅವರು ಅಧ್ಯಕ್ಷ ಪದವಿಯನ್ನು ವಹಿಸಿದ್ದರು. ಅದು ಅಂದಿನ ದಿನಪತ್ರಿಕೆಗಳ ಬಿಸಿ ಬಿಸಿ ಸುದ್ದಿಯಾಯಿತು. “ಇಂತಹ ಒಂದು ಪ್ರಮುಖವಾದ ಸಂದರ್ಭದಲ್ಲಿ ಭಾರತೀಯ ಮಹಿಳೆಯೊಬ್ಬಳು ಅಧ್ಯಕ್ಷ ಪದವಿಯನ್ನು ವಹಿಸಿದುದು ಇದೇ ಪ್ರಥಮ ಅಲ್ಲದೇ ಇದು ಅತ್ಯಂತ ಸೂಕ್ತವೂ ಆಗಿದೆ” ಎಂದು ಅನೇಕ ಪತ್ರಿಕೆಗಳು ಅಭಿಪ್ರಾಯ ಪಟ್ಟವು.
ಆ ಸಂದರ್ಭದಲ್ಲಿ ಪಂಡಿತಾ ರಮಾಬಾಯಿಯವರು ಮಾಡಿದ ಭಾಷಣದ ಸಾರ ಹೀಗಿದೆ-
“ಪತ್ರಿಕೆಗಳಾಗಲೀ, ಸಾರ್ವಜನಿಕರಾಗಲೀ ನಮ್ಮ ಮಹಿಳೆಯರ ಬಗೆಗೆ ಏನಾದರೂ ಹೇಳಿಕೊಳ್ಳಲಿ, ನಮ್ಮ ಮಹಿಳೆಯರ ಸ್ಥಿತಿ ಮಾತ್ರ ಚಿಂತಾಜನಕವಾದುದು. ನಮಗೆ ಮಾತ್ರ ನಮ್ಮ ಜನರ ಯೋಗಕ್ಷೇಮದ ಕುರಿತಾಗಿ ಸರಿಯಾದ ಮಾಹಿತಿಗಳಿವೆಯೇ ಹೊರತು ಪರದೇಶೀಯರಿಗಲ್ಲ. ಪಾರ್ಲಿಮೆಂಟಿನಲ್ಲಿ ನಮ್ಮ ಪ್ರತಿನಿಧಿಗಳು ಇಲ್ಲದೇ ಇರುವುದರಿಂದಲೇ ನಮ್ಮ ಈ ದುರವಸ್ಥೆಯ ಬಗ್ಗೆ ಅವರಿಗೆ ಅರಿವಿಲ್ಲವಾಗಿದೆ. ಆದುದರಿಂದಲೇ ನಮ್ಮ ಈ ದುರದೃಷ್ಟ ಸ್ಥಿತಿಯನ್ನು ನಿರ್ಲಕ್ಷಿಸಲಾಗಿದೆ. ನಮ್ಮ ಭಾರತೀಯ ಮಹಿಳೆಯರ ಸ್ಥಿತಿಯು ಮಾತ್ರ ಎಂದಿನಂತೆಯೇ ಇದೆ. ನಮ್ಮ ಈ ಅಳಲನ್ನು ಹೇಳಿಕೊಳ್ಳಲು ನಮ್ಮ ಸಹೋದರಿಯರಲ್ಲಿ ಯಾರೊಬ್ಬರ ಪ್ರವೇಶವೂ ಪಾರ್ಲಿಮೆಂಟಿನಲ್ಲಿ ಸಾಧ್ಯವಿಲ್ಲವಾಗಿದೆ. “ಸಭ್ಯ ಪುರುಷರೇ, ಹಿಂದೂ ಹೆಣ್ಣುಗಳು ಅನುಭವಿಸುತ್ತಿರುವ ಕಷ್ಟಗಳ ಬಗೆಗೆ, ಹಿಂದೂ ಧರ್ಮದ ದುರದೃಷ್ಟದ ಬಗ್ಗೆ ಬ್ರಿಟಿಷ್ ಪಾರ್ಲಿಮೆಂಟಿಗೆ ಇರುವಷ್ಟು ಅರಿವು ನಿಮಗಾರಿಗೂ ಇಲ್ಲವಾಗಿದೆ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಈ ನೆಲೆಯಲ್ಲಿ ಭಾರತೀಯ ಸಹೋದರರ ಸಹಾಯವನ್ನು ಅಪೇಕ್ಷಿಸುತ್ತಾರೆ.

ಗಂಗಾಧರ ಪಂತ್ ಗದ್ರೆಯವರ ಮಗಳು ಶಾರದಾ ಎನ್ನುವ ಹುಡುಗಿ ಈ ಶಾಲೆಯ ಮೊದಲ ವಿದ್ಯಾರ್ಥಿ. ಆದುದರಿಂದಲೇ ಈ ಶಾಲೆಗೆ ಅವಳ ಹೆಸರನ್ನೇ ಇಡಲಾಯಿತು. ಎರಡನೆಯ ವಿದ್ಯಾರ್ಥಿ ಗೋದೂಬಾಯಿ, ಒಬ್ಬ ಬಾಲವಿಧವೆ. ಮುಂದೆ ಇವಳನ್ನು ಮಹಿಳಾ ಶಿಕ್ಷಣದ ನೇತಾರರೆಂದೇ ಪ್ರಸಿದ್ಧವಾಗಿರುವ ಸಮಾಜ ಸುಧಾರಕರಾದ ಮಹರ್ಷಿ ಧೋಂಡೋ ಕೇಶವ ಕರ್ವೆಯವರು ಸಂಪ್ರದಾಯವಾದಿಗಳ ಕಡು ವಿರೋಧವನ್ನೂ ಲೆಕ್ಕಿಸದೇ ಮದುವೆಯಾದದ್ದು, ಮಹಿಳಾ ಹೋರಾಟದ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು.
ಮಹಿಳೆಯರಿಗಾಗಿ ಒಂದು ನಿವಾಸಿ ಶಾಲೆಯನ್ನು (boarding school) ಭಾರತದಲ್ಲಿ ಪ್ರಪ್ರಥಮವಾಗಿ ಪ್ರಾರಂಬಿಸಿದ ಶ್ರೇಯಸ್ಸು ರಮಾಬಾಯಿಯವರಿಗೆ ಸಲ್ಲುತ್ತದೆ. ೧೮೯೧ ರಲ್ಲಿ ಆ ಶಾಲೆಯಲ್ಲಿ ೨೬ ಮಂದಿ ವಿಧವೆಯರೂ, ೧೩ ಅವಿವಾಹಿತ ಹುಡುಗಿಯರೂ ಕಲಿಯುತ್ತಿದ್ದರೆಂದೂ ೧೮೯೬ ರ ಹೊತ್ತಿಗೆ ಇವರ ಸಂಖ್ಯೆ ಗಣನೀಯ ಪ್ರಮಾಣಕ್ಕೆ ಏರಿತ್ತೆಂದೂ ದಾಖಲೆಗಳು ತಿಳಿಸುತ್ತವೆ. ರಮಾಬಾಯಿಯವರು ಜಡ್ಡುಗಟ್ಟಿದ ಹಿಂದೂ ಧರ್ಮದ ಆಚರಣೆ, ನಂಬಿಕೆಗಳಿಂದ ರೋಸಿಹೋಗಿ ಕ್ರೈಸ್ತ ಮತಕ್ಕೆ ಮತಾಂತರಗೊಂಡವರು. ಆದರೂ ತಮ್ಮ ಶಾಲೆಯಲ್ಲಿ ಶಿಕ್ಷಣದ ಜೊತೆಗೆ, ಯಾವುದೇ ಧಾರ್ಮಿಕ ವಿಚಾರಗಳನ್ನು ಭೋಧಿಸದೇ ಕೇವಲ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಮೂಢ ನಂಬಿಕೆಗಳ ವಿರುದ್ಧವಾಗಿ ಹುಡುಗಿಯರನ್ನು ಎಚ್ಚರಿಸುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಶಿಶುವಿಹಾರ ಶಿಕ್ಷಣ ಅವರ ಕಲ್ಪನೆಯ ಕೂಸು ನನಸಾಗಿದ್ದೂ ಇಲ್ಲಿಯೇ.
ಬಹಳ ಉತ್ಸಾಹದಿಂದ ಅಷ್ಟೇ ಪರಿಶ್ರಮದಿಂದ ಮುಂಬಯಿಯಲ್ಲಿ ಪ್ರಾರಂಭಿಸಿದ ಅವರ ಮಹತ್ವಾಕಾಂಕ್ಷೆಯ ಈ ಕೂಸನ್ನು ಅಲ್ಪ ಕಾಲದಲ್ಲಿಯೇ ಪುಣೆಗೆ ವರ್ಗಾಯಿಸಿಕೊಳ್ಳಬೇಕಾಯಿತು. ಬಾಲ ವಿಧವೆಯರ ಶಿಕ್ಷಣದ ಕನಸು ಕಂಡ ಹಾಗೂ ಬಾಲ್ಯವಿವಾಹದ ವಿರುದ್ಧ ಸಿಡಿದೆದ್ದ ರಮಾಬಾಯಿಯವರನ್ನು, ಹಿಂದೂ ಹುಡುಗಿಯರನ್ನು ಮತಾಂತರಗೊಳಿಸುವ ಮಿಷನರಿ ಚಟುವಟಿಕೆಗಳಲ್ಲಿ ಅವರು ತೊಡಗಿದ್ದಾರೆಂಬ ಆಪಾದನೆಯ ಮೇರೆಗೆ ಅಲ್ಲಿಂದ ಉಚ್ಛಾಟಿಸಲಾಯಿತು.
“ವಿಧವೆಯರಿಗೊಂದು ಶಾಲೆಯೇ? ಗಂಡನಾಗಲೀ, ಮಕ್ಕಳಾಗಲೀ ಇಲ್ಲದ ಅವರು ಬೀದಿ ನಾಯಿಗಳಿಗಿಂತಲೂ, ಕಾಗೆಗಳಿಗಿಂತಲೂ ಹೀನಾಯವಾಗಿರುವಾಗ?…. ಒಂದು ತುಣುಕು ರೊಟ್ಟಿಯನ್ನಾಗಲೀ, ಹಿಡಿಯನ್ನವನ್ನಾಗಲೀ ಅವರು ಹೇಗೂ ಸಂಪಾದಿಸಿಕೊಳ್ಳಬಹುದು. ಅಂತಹ ವಿಧವೆಯರಿಗೆ ಶಿಕ್ಷಣದ ಅಗತ್ಯವಿಲ್ಲ” ಎಂದು ಶಾರದ ಸದನವನ್ನು ನೋಡಿದ ಪೂರ್ವ ಪ್ರಾಂತ್ಯದ ರಾಜಕುಮಾರನೊಬ್ಬ ಉದ್ಗಾರ ತೆಗೆದದ್ದನ್ನು ಅವರ ಮಗಳು ಮನೋರಮಾ ಗುರುತಿಸುತ್ತಾಳೆ. ಹೀಗೆ ಉಚ್ಛಾಟನೆಗೊಂಡ ರಮಾಬಾಯಿಯವರಿಗೆ ಪುಣೆಯ ಬಳಿ ಕೇಡ್ ಗಾಂವ್ ನಲ್ಲಿ ೧೨೦ ಎಕರೆಗಳ ಒಂದು ಬೆಂಗಾಡನ್ನು ನೀಡಲಾಯಿತು. ಅದನ್ನು ಹಸನು ಮಾಡಲು ಸ್ವತಃ ರಮಾಬಾಯಿಯವರೇ ಮುಂದಾದಾಗ ಅಲ್ಲಿನ ಅನೇಕ ಮಹಿಳೆಯರು ಕೈಜೋಡಿಸಿದರು. ಹನ್ನೆರೆಡು ಬಾವಿಗಳನ್ನು ಕೊರೆದು ಕಟ್ಟಿದರು. ಅಲ್ಲಿರುವ ಚರ್ಚ್ ನ್ನು ಕಟ್ಟಲು ರಮಾಬಾಯಿಯವರು ಸ್ವತಃ ಗುದ್ದಲಿ ಸನಿಕೆಗಳನ್ನು ಹಿಡಿದರು. ಕಾಲಗುಣ ಸರಿಯಿಲ್ಲವೆಂದು ಮಾವನ ಮನೆಯಿಂದ ದೂಡಲ್ಪಟ್ಟ ಚಿಕ್ಕ ಹುಡುಗಿಯನ್ನು ಕರೆದು ಅವಳನ್ನು ಬರಮಾಡಿಕೊಳ್ಳುವುದರ ಮೂಲಕ ಮಹಿಳೆಯರ ಮುಕ್ತಿ ಮಿಷನ್ ಆರಂಭಿಸಿದವರು.

೧೯೦೦ ರ ಆಗಸ್ಟ್ ವೇಳೆಗೆ ವಿವಿಧ ವಯೋಮಾನದ ಸಾವಿರದ ಮುನ್ನೂರೈವತ್ತು ಅಶಿಕ್ಷಿತ ಹುಡುಗಿಯರನ್ನು ಸದನವು ಹೊಂದಿತ್ತೆಂದು ತಿಳಿದು ಬರುತ್ತದೆ. ಕೆಲವು ಸುಧಾರಕರ ಹಾಗೂ ಅಮೇರಿಕನ್ ಸ್ನೇಹಿತರ ನೆರವಿನಿಂದ ಸದನವನ್ನು ಅನೇಕ ವೈರುಧ್ಯಗಳ ನಡುವೆಯೂ ನಡೆಸಿಕೊಂದು ಹೋಗುತ್ತಿದ್ದ ಸಂದರ್ಭದಲ್ಲಿ ತನ್ನ ಸದನದ ಹೆಣ್ಣುಮಕ್ಕಳನ್ನು ಮತಾಂತರಗೊಳಿಸುತ್ತಿದ್ದರೆಂಬ ಆರೋಪಕ್ಕೆ ರಮಾಬಾಯಿಯವರು ಗುರಿಯಾಗಬೇಕಾಯಿತು. ತಿಲಕ್, ರಾನಡೆ, ಅಭ್ಯಂಕರ್ ರವರಂತಹ ‘ಪುರುಷ ಕೇಸರಿ’ಗಳ ವಿರೋಧಗಳ ನಡುವೆ ಅವರಿಗೆ ಸೆಡ್ಡು ಹೊಡೆದು ನಿಂತ ರಮಾಬಾಯಿಯವರು. ‘ಕೇಸರಿ’ ಮುಂತದ ಮರಾಠಿ ಪತ್ರಿಕೆಗಳಿಗಂತೂ ಇಂತಹ ಆಧಾರವಿಲ್ಲದ ಸುದ್ದಿಗಳು ಪುಷ್ಕಳವಾದ ಭೋಜನವನ್ನು ಒದಗಿಸಿದವು.
ಆಗ ದುಃಖಿತರಾದ ರಮಬಾಯಿಯವರು “ನನ್ನ ಹಿಂದೂ ಬಾಂಧವರು ನನ್ನ ಶಾಲೆಯನ್ನು ನೆಲಸಮ ಮಾಡಿ ಅದರ ಭಗ್ನಾವಶೇಷಗಳ ಮೇಲೆ ಮತ್ತೊಂದು ಶಾಲೆಯನ್ನು ಕಟ್ಟುವ ಯೋಜನೆಯಲ್ಲಿದ್ದಾರೆ. ಆದರೆ ನನ್ನ ಶಾಲೆಯು ಮರಳ ಮೇಲಲ್ಲದೆ, ಗಟ್ಟಿಯಾದ ಶಾಶ್ವತವಾದ ಕಲ್ಲುಬಂಡೆಯ ಮೇಲೆ ಕಟ್ಟಲ್ಪಟ್ಟಿದೆ. ಅದು ಇಂದಿನವರೆಗೆ ನಿಂತಿದೆ ಮತ್ತೆ ಮುಂದೆಯೂ ನಿಲ್ಲುತ್ತದೆ. ಅಲೆಗಳು ಮೇಲೆದ್ದಾಗ ಬಂದು ಬಡಿದವೆ ಹೊರತು ಅದನ್ನು ಅಲುಗಾಡಿಸಲಾಗಲಿಲ್ಲ” ಎಂದು ತನ್ನ ತಾಯಿಯ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮನೋರಮಾ ಹೇಳಿಕೊಳ್ಳುತ್ತಾಳೆ..
ರಮಾಬಾಯಿಯವರ ಸಾಹಸಗಾಥೆಗಳನ್ನು ಅವರು ಪಟ್ಟ ಪಾಡುಗಳನ್ನು, ಅವರ ಕೊಡುಗೆಗಳನ್ನು ನೋಡಿದರೆ ಬೆರಗಾಗುತ್ತದೆ. ರಮಾಬಾಯಿಯವರು ಆಶಿಸಿದಂತೆಯೇ ಅವರ ಶಾರದ ಸದನವು ಇಂದಿಗೂ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಇಂದು ಎಲ್ಲಾ ವಯಸ್ಸಿನ ಅನಾಥ ಮಕ್ಕಳು ಶಾರದಾ ಸದನ ಶಾಲೆಯಲ್ಲಿ ಕಲಿಯುತ್ತಾರೆ. ವಯಸ್ಸಾದ ಪರಿತ್ಯಕ್ತ ಮಹಿಳೆಯರೂ, ಅಂಧ ಮಹಿಳೆಯರೂ ಇಲ್ಲಿ ಇದ್ದಾರೆ.
ಇಂದು ಒಂದು NGO ಸಂಸ್ಥೆಯಾಗಿ ಸಾಮಾನ್ಯ ಮಹಿಳೆಯರೇ ಅಲ್ಲದೇ ಅಂಧ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿಯೂ ತನ್ನ ಪಾಡಿಗೆ ತಾನು ಕೆಲಸಮಾಡುತ್ತಿದೆ. ನಮ್ಮ ಸರ್ಕಾರ ಮನಸ್ಸು ಮಾಡಿದರೆ ಇದಕ್ಕೆ ಇನ್ನೂ ಹೆಚ್ಚಿನ ಕಾಯಕಲ್ಪವನ್ನು ಒದಗಿಸಬಹುದೇನೋ.
। ಮುಂದಿನ ವಾರವೂ ಓದಿ ।






0 Comments