ಫುಟ್ ಲಾಯಿರಿಯೊಬ್ಬರ “ಕ್ರಾಸು” ಮತ್ತು “ಚೀಫು”

ರಾಜಾರಾಂ ತಲ್ಲೂರು
ಸೋಮವಾರ ಟೈಮ್ಸ್ ನೌ ಚಾನಲ್ಲಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ಅರ್ನವ್ ಗೋಸ್ವಾಮಿ ನಡೆಸಿದ ಸಂದರ್ಶನ ಪ್ರಸಾರವಾಯಿತು. ಫ್ರಾಂಕ್ಲೀ ಸ್ಪೀಕಿಂಗ್, ಈ ಸಂದರ್ಶನವನ್ನು ನೋಡಿದಾಗ ಬೇಡಬೇಡವೆಂದರೂ ಎರಡು ವರ್ಷಗಳ ಹಿಂದೆ ನಡೆದ ಇನ್ನೊಂದು ಸಂದರ್ಶನ ನೆನಪಾಗುತ್ತದೆ. ಈ ಎರಡು ಓವರ್ ಡ್ಯೂ ಸಂದರ್ಶನಗಳನ್ನು ಮುಖಾಮುಖಿ ಮಾಡಿದಾಗ ಸಂದರ್ಶಿತರಿಬ್ಬರೂ ಅರ್ಥ ಆಗದೇ ಹೋದರೂ, ಭಾರತದ ಪತ್ರಿಕೋದ್ಯಮ ಸಾಗುತ್ತಿರುವ ದಾರಿ ಅರ್ಥವಾಗಿರುತ್ತದೆ. (ಅವೆರಡೂ ಸಂದರ್ಶನಗಳ ಲಿಂಕ್ ಇಲ್ಲಿದೆ)
ರಾಹುಲ್ ಸಂದರ್ಶನ: https://www.youtube.com/watch? v=xB_eWW5ttaM
ಮೋದಿ ಸಂದರ್ಶನ: https://www.youtube.com/watch? v=8En6Dw71gL8
ನ್ಯಾಯಾಲಯಗಳಲ್ಲಿ ವಾದಿ ಪರ ವಕೀಲರು ಸಾಕ್ಷ್ಯ ಹೇಳಿಸುವಾಗ ಮೊದಲು ತಮ್ಮ ಕ್ಲಯಂಟ್ ನ ಸಾಕ್ಷ್ಯ (ಚೀಫ್) ಹೇಳಿಸಿ, ಆ ಮೇಲೆ ಎದ್ರಿ ವಕೀಲರಿಗೆ ಪಾಟೀಸವಾಲು (ಕ್ರಾಸ್) ಮಾಡಲು ಬಿಡುತ್ತಾರೆ. ಅರ್ನವ್ ನಡೆಸಿಕೊಟ್ಟ ರಾಹುಲ್ ಗಾಂಧಿ ಸಂದರ್ಶನ ನೇರಾನೇರ ಪಾಟೀಸವಾಲಿನಂತಿದ್ದರೆ, ನಿನ್ನೆಯ ನರೇಂದ್ರ ಮೋದಿ ಸಂದರ್ಶನ ವಕೀಲರಿಂದ ವಾದಿಯ ವಿಚಾರಣೆಯಂತಿತ್ತು (ಚೀಫ್) ಎಂದರೆ ಸರಿಯಾಗುತ್ತದೆ.
I want your categoric and specific response ಎಂದೇ ರಾಹುಲ್ ಜೊತೆ ಆರಂಭವಾಗುವ ಸಂದರ್ಶನದಲ್ಲಿ ಅರ್ನವ್ ಕೇಳಿದ ಪ್ರಶ್ನೆಗಳು 84ರ ದಿಲ್ಲಿ ಪುಂಡಾಟ, ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರದ ಕುರಿತು ಶೆಹಜಾದಾ ನಿಲುವು, ಕಾಂಗ್ರೆಸ್ಸಿನ ಚುನಾವಣಾ ಫಂಡ್ ಯಾಕೆ RTI ಅಡಿ ಇಲ್ಲ, ಆದರ್ಶ-ವೀರಭದ್ರ ಸಿಂಗ್-ಎ ರಾಜ-2G-ಕೋಲ್ ಗೇಟ್-CWG ಹಗರಣಗಳು, ಬೆಲೆ ಏರಿಕೆ, AAP ವಿಚಾರ, ಸ್ವಾಮಿ ಎತ್ತಿದ ರಾಹುಲ್ ಡಿಗ್ರಿ ವಿಚಾರ… ಸಹಜವಾಗಿಯೇ ಕಕ್ಕಾಬಿಕ್ಕಿ ಆದ ರಾಹುಲ್ ರನ್ನು ಕಂಡು ಅರ್ನವ್ ವಿಜಯದ ನಗೆ ಬೀರಿ ಸಂದರ್ಶನ ಮುಗಿಸುತ್ತಾರೆ. You haven’t asked one question about development ಎಂದು ರಾಹುಲ್ ಅಳುಕುತ್ತಾ ಕೇಳಿದರೆ This is not Rahul Speech ಎಂದು ದಬಾಯಿಸಿ ಬಾಯಿ ಮುಚ್ಚಿಸುತ್ತಾರೆ. ಕಾಲಿನ ಮೇಲೆ ಕಾಲು ಹಾಕಿ ಕುಳಿತು ದಡ್ಡ ವಿದ್ಯಾರ್ಥಿಯ ಬಾಯಲ್ಲಿ ಮಗ್ಗಿ ಬಾಯಿಪಾಠ ಹೇಳಿಸುವ ಮೇಸ್ಟ್ರ ಸಂದರ್ಶನ ಅದು.
ನಿನ್ನೆ ಪ್ರಧಾನ ಮಂತ್ರಿಯವರ ಸಂದರ್ಶನ ಆರಂಭವಾಗುವುದು “First ever sitting PM giving interview to a private channel” ಎಂದು ಮೋದಿ ಅವರನ್ನು ಅಭಿನಂದಿಸುವುದರೊಂದಿಗೆ. ಹೇಳಿದ ಗುರಿ ಎಷ್ಟರ ಮಟ್ಟಿಗೆ ತಲುಪಿದ್ದೀರಿ, ವಿದೇಶ ನೀತಿ, ಆರ್ಥಿಕ ನೀತಿ, ಬೆಲೆ ಏರಿಕೆ, ಸ್ವಾಮಿ ಹರಕುಬಾಯಿ, ಕಪ್ಪು ಹಣ, ಪಾರ್ಲಿಮೆಂಟ್ ನಡೆಸಲು ಪ್ರತಿಪಕ್ಷಗಳು ನೀಡುತ್ತಿರುವ ತೊಂದರೆ, ವಿಕಾಸ, ರೈತರ ಸಮಸ್ಯೆ, ಪದೇ ಪದೇ ಚುನಾವಣೆಗಳಿಂದಾಗುತ್ತಿರುವ ತೊಂದರೆ – ಇವಿಷ್ಟು ವಿಚಾರದ ಬಳಿಕ ಸ್ಥಳದಲ್ಲೇ ಮೋದಿಯವರಿಗೆ A+ ಗ್ರೇಡ್ ಕೊಟ್ಟು ಸಂದರ್ಶನ ಮುಗಿಯುತ್ತದೆ.
ಕೇಳದಿರುವ ಸಂಗತಿಗಳು
ಈ ಎರಡೂ ಸಂದರ್ಶನಗಳಲ್ಲಿ ಅರ್ನವ್ ಕೇಳಿದ್ದಕ್ಕಿಂತ ಕೇಳದಿರುವ ಸಂಗತಿಗಳೇ ಎಲ್ಲರ ಗಮನ ಸೆಳೆಯುತ್ತವೆ. ಜೀವಮಾನದಲ್ಲಿ ಮೊದಲ ಮುಖಾಮುಖಿ ಸಂದರ್ಶನ ನೀಡಿದ ರಾಹುಲ್ ಗಾಂಧಿ ತಲೆಯಲ್ಲಿ ಏನಿದೆ ಎಂಬುದನ್ನ ಕೇಳುಗರಿಗೆ ತಿಳಿಸಿಕೊಡುವ ಸದವಕಾಶ ಕೈಚಲ್ಲಿದ ಅರ್ನವ್, ಕಾಂಗ್ರೆಸ್ಸಿನ ಕಪಾಟುಗಳಲ್ಲಿರುವ ಖಾಯಂ ಗುಮ್ಮಗಳನ್ನು ತಂದು ರಾಹುಲ್ ನನ್ನು ಕಕ್ಕಾಬಿಕ್ಕಿಗೊಳಿಸಿ ವಿಜ್ರಂಭಿಸಿದ್ದೇ ಆ ಸಂದರ್ಶನದ ಸಾಧನೆ.
ಅದಕ್ಕೆ ತದ್ವಿರುದ್ಧವಾಗಿ, ಆಡಳಿತದ ಎರಡು ವರ್ಷಗಳನ್ನು ಪೂರೈಸಿ ಕೋರ್ಸ್ ಕರೆಕ್ಷನ್ ಹಾದಿಯಲ್ಲಿರುವ ಪ್ರಧಾನಿಗೆ ಕಠಿಣ ಪ್ರಶ್ನೆಗಳ ಮೂಲಕ ಜನರ ಮನಸ್ಸಿನಲ್ಲೇನಿದೆ ಎಂಬುದನ್ನು ತಲುಪಿಸುವ ಅವಕಾಶ ಕೈಚಲ್ಲುವ ಅರ್ನವ್, ಉತ್ತರ ಪ್ರದೇಶ ಚುನಾವಣೆಗೆ ವಿಕಾಸದ ಭೂಮಿಕೆ ಹಾಕುವುದರಲ್ಲೇ ವ್ಯಸ್ತರಾಗಿ ಸಂದರ್ಶನ ಮುಗಿಸುತ್ತಾರೆ. ಜೊತೆಗೆ, ಅಂತಾರಾಷ್ಟ್ರೀಯವಾಗಿ ಇರುಸುಮುರುಸಾಗುತ್ತಿರುವ RBI ಗವರ್ನರ್ ರಾಜನ್ ಸಂಗತಿ, ಸುಬ್ರಹ್ಮಣ್ಯಂ ಸ್ವಾಮಿಯ ಗದ್ದಲಗಳಂತಹ ಕೆಲವು ಸಂಗತಿಗಳಿಗೆ ಅಧಿಕ್ರತ ಕ್ಲಾರಿಫಿಕೇಷನ್ ಸಿಗುತ್ತದೆ.
ಒಟ್ಟಿನಲ್ಲಿ, ಪ್ರಧಾನಿಯಾಗಿ ಎರಡು ವರ್ಷದ ಬಳಿಕ, ಅಂತೂ ಮಾಧ್ಯಮ ಭೇಟಿ (ಅದೂ ಸಕಲ ಸುರಕ್ಷೆಗಳ ಸಹಿತ) ಮಾಡುತ್ತಿರುವ ನರೇಂದ್ರ ಮೋದಿ ಅವರಿಗೆ ಸ್ವಲ್ಪವೂ ಕಿರಿಕಿರಿ ಆಗದಂತಹ, DAVP ಸಂದರ್ಶನ ನಡೆಸಲಾಗುತ್ತದೆ. ಸಂದರ್ಶಕರ ಬಾಡಿ ಲಾಂಗ್ವೇಜ್, ಸಹಜ ಧ್ವನಿಯಲ್ಲಿ ಮಾಡಿಕೊಂಡ ವಿಧೇಯ ಬದಲಾವಣೆ, ಎಲ್ಲವೂ ಕಣ್ಣಿಗೆ ರಾಚುವಂತೆ ಕಾಣಿಸುತ್ತವೆ.
Now, Nation wants to Know – ಪ್ರಧಾನಿ ನರೇಂದ್ರ ಮೋದಿಯವರು ಬಹಿರಂಗ ಪತ್ರಿಕಾಗೋಷ್ಠಿ ನಡೆಸುವುದು ಯಾವಾಗ?





Yesterday Arnab’s accent was low but Modi give clear answers clearity on his grounds of all his government programmes that’s good I think and one thing if Rahul become perfect n clear like Modi people accept him also.
Thank you. I believe, an Interview become an Interview only when tough questions are asked. Clarity in answers only indicate, a scripted session.
ನಿಜ. ನಿನ್ನೆಯ ಮೋದೀಜೀ ಸಂದರ್ಶನ ಬಹು ಸುರಕ್ಷಿತ ಸಿದ್ಧತೆಯಲ್ಲಿ ನಡೆದದ್ದು ಎಂತಹವರಿಗಾದರೂ ಗೊತ್ತಾಗತಕ್ಕಂತದೇ. ಮೊದಲೇ ಪ್ರಶ್ನೆ ತಿಳಿಸಿ ನಡೆಸುವ ಪರೀಕ್ಷೆಯ ತರಹ ಅದು ಕಾಣಿಸುತ್ತಿತ್ತು. ಆದರೆ ನೆನಪಲ್ಲಿಡಬೇಕಾದ್ದು ಮೋದಿಯವರು ಅತ್ಯಂತ ಚಾಣಾಕ್ಷ ವಿದ್ಯಾರ್ಥಿಯೆಂಬುದನ್ನು! ಈ ”ಗೊತ್ತಿರುವ” ಪ್ರಶ್ನೆಗಳಲ್ಲದೆ ಲೇಖನದಲ್ಲಿ ಹೇಳಿರುವಂತೆ ಕಠಿಣ ಪ್ರಶ್ನೆ ಕೇಳಿದ್ದರೂ ಅದನ್ನು ನಿಭಾಯಿಸುವ ಛಾತಿ ಮತ್ತು ಮತ್ತುಬರಿಸುವ ಮಾತಿನ ಕಲೆಗಾರಿಕೆ ಅವರಿಗಿದೆ. ಈ ರೀತಿಯ ಛಾತಿ ಬಹುಶಃ ನೆಹರೂಜೀಗಿತ್ತೆಂದು ನಮ್ಮಪ್ಪ ಹೇಳುತ್ತಿದ್ದುದು ನನಗೆ ನೆನಪಿದೆ. ಮಾತಿನ ಓಘ, ಸುಂದರ ರಮ್ಯತೆಯನ್ನು ಎಂತಹ ಸಬ್ಜೆಕ್ಟಿಗಾದರೂ ಆರೋಪಿಸುವ ಚಾಕಚಕ್ಯತೆ ಇರುವುವರನ್ನು ಮಾಸ್ ಮೆಚ್ಚುತ್ತದೆ. ಅವರಿಗೆ ಮರುಳಾಗುತ್ತದೆ. ಇದು ರಾಮರಸಪಾನ. ಮತ್ತಿಳಿದ ಮೇಲೆ ತಡವಿ ನೋಡಿಕೊಳ್ಳಬೇಕೆಂಬ ವಿವೇಕ ಬಂದರೇನು ಬರದಿದ್ದರೇನು.
ಇನ್ನೊಂದು ವಿಷಯ. ಭಾವೀ ಪ್ರಧಾನಿ ಎಂದು ಪಕ್ಷ ತೋರುಮನುಷ್ಯನನ್ನಾಗಿಸಿರುವ ರಾಹುಲ್ ಜಿ ಯುವಕರು. ಗೋಸ್ವಾಮಿಯಲ್ಲ ಯಾವ ಸ್ವಾಮಿಯನ್ನಾದರೂ ತಾರ್ಕಿಕವಾಗಿ ಮಾತನಾಡುವ ಮೂಲಕ ಬಾಯಿ ಕಟ್ಟಿಹಾಕುವ ಶಕ್ತಿ ಮತ್ತು ವಿಷಯಸಂಪತ್ತಿ ಅವರಲ್ಲಿರಬೇಕೆಂದು ದೇಶದ ಜನ ಅಂದುಕೊಂಡರೆ ಅದು ಸರಿ. ಹಾಗೆ ಅವರನ್ನು ತಯಾರು ಮಾಡುವ ಜವಾಬ್ದಾರಿಯನ್ನು ಹೊರದ ಪಕ್ಷನಾಯಕರು ಸುಮ್ಮನೆ ಮುಖಸ್ತುತಿ ಮಾಡುತ್ತಾ ಓಡಾಡಿದರೆ ಮೂರುಕಾಸಿಗೆ ಪಕ್ಷದ ಗಾಂಭೀರ್ಯ ಹರಾಜಿಟ್ಟಂತೆ ಅಷ್ಟೇ. ಪರೀಕ್ಷೆಯಲ್ಲಿ ನಾನು ಓದಿಕೊಂಡ ಪಾಠದ ಪ್ರಶ್ನೆಗಳೇ ಬರಲಿಲ್ಲ ಎಂದು ವಿದ್ಯಾರ್ಥಿಯೊಬ್ಬ ಅತ್ತರೆ ಸುತ್ತಿನ ಜನ ನಗುತಾರೆ ವಿನಾ ಅಯ್ಯೋ ಪಾಪ ಅನ್ನುವುದಿಲ್ಲ.
ಅರ್ನಾಬ್ ಬಾಯಿಬಡುಕ. ಆದರೆ ಫುಟ್ ಲಾಯರಿ ಎನ್ನುವುದು ಸದಭಿರುಚಿಯ ಶೀರ್ಷಿಕೆ ಎಂದು ನನಗೆ ಅನ್ನಿಸುತ್ತಿಲ್ಲ
ಥ್ಯಾಂಕ್ಯೂ. ಫುಟ್ ಲಾಯಿರಿ ಎಂಬುದು ಬೈಗುಳ ಪದವಾಗಲೀ, ಕೀಳುಗೊಳಿಸುವ ಪದವಾಗಲೀ ಅಲ್ಲ. ಹಳ್ಳಿಗಳಲ್ಲಿ, ಮೊದಲೆಲ್ಲ ಕಾನೂನು ಪದವಿ ಪಡೆಯದ, ಆದರೆ ಹಳ್ಳಿಗರ ಕೇಸುಗಳನ್ನು ಪಡೆದು ತಾವೇ ಕೇಳಿ ಪಡೆದು, ವಕೀಲರನ್ನು ಹಿಡಿದು ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ದೊರಕಿಸುವ ಇಲ್ಲವೇ ಪಂಚಾತಿಕೆಗಳ ಮೂಲಕ ತೊಂದರೆಗಳನ್ನೆಲ್ಲ ಪರಿಹರಿಸುವ ಪರಿಣತರಿದ್ದರು. ಅವರನ್ನು ಫುಟ್ ಲಾಯರಿಗಳೆಂದು ಕರೆಯಲಾಗುತ್ತಿತ್ತು. ನಿನ್ನೆಯ ಸಂದರ್ಶನದಲ್ಲಿ ಅರ್ನವ್ ಪಾತ್ರ ನನಗೆ ಇಂತಹದೇ ಅನ್ನಿಸಿತು. ನಿಮಗೆ ಇದರಿಂದ ಹಿತವಾಗಿರದಿದ್ದರೆ ಕ್ಷಮೆಯಿರಲಿ.
Scripted ಅಂತ ತಮಗೆ ಯಾಕೆ ಅನಿಸಿತು ಅರ್ಥವಾಗಲಿಲ್ಲ. ಮೋದಿಯ ಮಾತಿನ ಓಘ ತಿಳಿದವರಿಗೆ ಇದೇನು scripted ಅನಿಸುವುದಿಲ್ಲ. ಕೆಲವರಿಗೆ ಮಾತ್ರ ರಾಹುಲನಿಗೆ ಮೊದಲೇ most likely questions ಕೊಡದೇ ಇದ್ದುದಕ್ಕೆ, ಮತ್ತು ಮೋದಿ ಆರಾಮವಾಗಿ ಎಲ್ಲ ಪ್ರಶ್ನೆ ಗಳಿಗೆ ಉತ್ತರಿಸುತ್ತ ಹೋದದ್ದಕ್ಕೆ ಬಹಳ ಬೇಜಾರಾಗಿರುತ್ತದೆ. ಮೋದಿ ಚೆನ್ನಾಗಿ ಉತ್ತರಿಸುವುದಕ್ಕೆ ಕಾರಣ ಅವರಿಗಿರುವ ವಿಷಯ ಜ್ಞಾನ, ಮತ್ತು ರಾಹುಲ ಬಾಯಿಪಾಠ ಮಾಡಿದರೂ ಮಾತನಾಡಲು ಸಾಧ್ಯವಾಗದಿರುವುದು ಅವರ ಅಧ್ಯಯನ ಕೊರತೆಯ ಕಾರಣ. ಅದನ್ನು ಕಾಂಗ್ರೆಸ್ ಪಕ್ಷದವರೇ ಬಹಿರಂಗವಾಗಿ ಅಲ್ಲದಿದ್ದರೂ ಖಾಸಗಿಯಾಗಿ ಒಪ್ಪುತ್ತಿದ್ದಾರೆ. ಆದರೂ ಕೆಲವರು ಮಾತ್ರ ಇನ್ನೂ ಸತ್ಯವನ್ನು ನಿರಾಕರಿಸುತ್ತಿದ್ದಾರೆ. ಏನೂ ಮಾಡಲಿಕ್ಕಾಗದು.
ಸಂದರ್ಶನಗಳು ನನ್ನ ಅನುಭವದಲ್ಲಿ, ಸಂವಾದ ಕಟ್ಟುತ್ತ ಹೋಗುವ ಕ್ರಿಯೆ. ರಾಹುಲ್ ಪೆದ್ದುಪೆದ್ದಾಗಿ ತಡವರಿಸಿದರೂ ಅರ್ನವ್ ಅವರ ಜೊತೆ ಮತ್ತೆ ಮತ್ತೆ ಮೂಲ ಪ್ರಶ್ನೆಗೆ ಎಳೆದು ಉತ್ತರಕ್ಕಾಗಿ ಕಾಡುತ್ತಾರೆ. ನಿನ್ನೆ ಹಾಗಾಗಲಿಲ್ಲ. ಎರಡು ಮೂರು ಬಾರಿ ಮೂಲ ಪ್ರಶ್ನೆಯಿಂದ ಪ್ರಧಾನಿ ದೂರ ಸರಿದೇ ಉತ್ತರ ಕೊಟ್ಟರೂ, ಅರ್ನವ್ ಅದನ್ನು ವಿಧೇಯರಾಗಿ ಒಪ್ಪಿಕೊಂಡು ಮುಂದುವರಿದರು. ಹಠಾತ್ ಪ್ರಶ್ನೆಗಳು ಮತ್ತು ಹಠಾತ್ ಸಮರ್ಪಕ ಉತ್ತರಗಳು ಗುಮಾನಿಗೆ ಕಾರಣ ಆಗುತ್ತವೆ. ಹತ್ತು ಮಕ್ಕಳು ಹೆತ್ತವರಿಗೆ ನಿಂತ ಮೆಟ್ಟಿಗೆ ಎಲ್ಲ ಮಕ್ಕಳ ಹೆಸರು-ಪ್ರಾಯ ಅನುಕ್ರಮಣಿಕೆಯಲ್ಲಿ ಹೇಳುವಂತೆ ಕೇಳಿ ನೋಡಿ. ಜೊತೆಗೆ, ಮೋದಿ ಅವರಿಗೆ ಇರುಸುಮುರುಸಾಗುವ ಒಂದೇ ಒಂದು ಪ್ರಶ್ನೆ ಇರಲಿಲ್ಲ. ನೀವು ಈ ಹಿಂದೆ ಎಂದಾದರೂ ಅರ್ನವ್ ಸಂದರ್ಶನ ಮಾಡುವುದನ್ನು ನೋಡಿದ್ದರೆ ನಿಮಗೆ ಇದು ಅರಿವಾಗುತ್ತದೆ.
ರಾಹುಲ್, ಸೋನಿಯಾರೆಂದರೆ ಅನೇಕರಿಗೆ ಕೀಟಲೆ ಮಾಡಲು ಪ್ರಿಯವಸ್ತುಗಳು.
ಏಕೆಂದರೆ ಅವರು ಅನಾವಶ್ಯಕ ಕಲರ್ ಫುಲ್ ಮಾತನಾಡುವುದಿಲ್ಲ. ಬಾಯಿಪಾಠ, ಬರೆದುಕೊಟ್ಟದ್ದನ್ನು ಓದ್ತಾರೆ ಎಂಬಂಥವು ತುಂಬ ಲಘುವಾದ ಟೀಕೆಗಳು. ನಿರರ್ಗಳ ಮಾತುಗಳೇ ಉತ್ತಮ ಆಡಳಿತದ ಲಕ್ಷಣಗಳಲ್ಲ. ಗೋಸ್ವಾಮಿ ಮೇಲೆ ಈಗಾಗಲೇ ಸಾಕಷ್ಟು ಗುರುತರ ಆಪಾದನೆಗಳಿವೆ. ಅನೇಕ ಗಣ್ಯ ಅಧಿಕಾರಸ್ಥರಿಗೆ ಆತ ಫುಟ್ ಲಾಯರ್ ಗಿರಿ ಕೆಲಸ (ಅರ್ಥಾತ್ ಸಂದರ್ಶನ) ಮಾಡಿಕೊಟ್ಟಿದ್ದಾನೆ. ಇದು ಅದರಲ್ಲಿ ಮತ್ತೊಂದು ಅಷ್ಟೇ.
ತುಂಬಾ ಚೆನ್ನಾಗಿದೆ ತಲ್ಲೂರ್ ಸರ್ ಲೇಖನ,
and thanq for the links.
ಸ್ವಾಮಿ, ಒಳಗೆ ಏನಾದರೂ ಸರಕಿದ್ದರೆ ಅದು ಈಚೆಗೆ ಬಂದೆ ಬರುತ್ತೆ,
ಮನದೊಳಗೆ ತುಂಬಾ ಹೇಳಬೇಕಾದ ವಿಷಯಗಳಿದ್ದರೆ ನಿರರ್ಗಳವಾಗಿ ಮಾತನಾಡುವುದು ನೀರು ಕುಡಿದಷ್ಟೇ ಸುಲಭ!
ನನಗೆ ಅನ್ನಿಸುವ ಹಾಗೆ ಈ ರಾಹುಲ್ ಒಬ್ಬ serious ಆಗಿ ತೆಗೆದುಕೊಳ್ಳಬೇಕಾದ ಮನುಷ್ಯನೇ ಅಲ್ಲ, ಬಲವಂತವಾಗಿ ಪಕ್ಷದ ಮೇಲೆ, ದೇಶದ ಮೇಲೆ ಹೇರಲ್ಪಟ್ಟಿರುವ ಒಬ್ಬ ಅನಾಸಕ್ತ ದುರ್ಬಲ (ಆ)ನಾಯಕ, ಅವನ ಮಾತುಗಳಿಂದ, ಕೆಲಸಗಳಿಂದ, ಪದೇ, ಪದೇ ಮಾಯವಾಗುವ ಬೇಜವಾಬ್ದಾರಿ ನೆಡವಳಿಕೆಗಳಿಂದಾ ತಿಳಿಯುತ್ತೆ.. ಯಾವ ಕೋನದಿಂದಾ ಈ ವ್ಯಸನಿ ಕೆಲವರಿಗೆ ಪ್ರಧಾನಿ ಸ್ಥಾನಕ್ಕೆ ಒಬ್ಬ ಅರ್ಹ alternative ಆಗಿ ಕಾಣುತ್ತಾನೋ ಇದೊಂದು ಬರ್ಮುಡಾ triangle ನಂತ ಬಿಡಿಸಲಾಗದ ರಹಸ್ಯ!
The current reality of the country is we have no alternatives and we do not need one as long as Mr. Modi is on track.
I don’t see any reasons he would veer off the track as well.
ಮೋದಿಯವರ ಬಗ್ಗೆ ಹಲವು ಆರೋಪಗಳನ್ನು ಮಾಡಬಹುದು ಅಭಿವೃದ್ಧಿಮಾದರಿ, ಗುಜರಾತ್ ಗಲಭೆ ಸರ್ವಾಧಿಕಾರ ಇತ್ಯಾದಿ. ಮಾಧ್ಯಮಗಳಲ್ಲಿ ವಿಶೇಷವಾಗಿ ಇಂಗ್ಲಿಶ್ ಮಾಧ್ಯಮಗಳಲ್ಲಿ ಮತ್ತು ಅಕಡೆಮಿಕ್ ವಲಯದಲ್ಲಿ ಈ ಬಗ್ಗೆ ಚರ್ಚೆಗಳಗಿವೆ ಆಗುತ್ತಿವೆ. ಅರ್ನಬ್ ಸೌಮ್ಯನಾಗಿ ಸಂದರ್ಶನ ಮಾಡಿದ್ದೂ ನಿಜ. ಆದರೆ ಮೋದಿ ವಿರೋಧಿಗಳು (ಜನಸಾಮಾನ್ಯರು ಹಾಗೂ ಪತ್ರಕರ್ತರು ಹಾಗು ಅಕಡೆಮಿಚ್ ವಿದ್ವಾಂಸರು) ನೆನಪಿಗೆ ತಂದುಕೊಳ್ಳದ ಒಂದು ಮುಖ್ಯ ವಿಚಾರವೆಂದರೆ ಅವರ ಹಿಂದಿರುವ ಜೀವನಾನುಭವ. ಆರ್. ಎಸ್.ಎಸ್. ಪ್ರಚಾರಕರ ಜೀವನ ಶೈಲಿ ಬಗ್ಗೆ ಹತ್ತಿರದಿಂದ ನನಗೇನೂ ಗೊತ್ತಿಲ್ಲದಿದ್ದರೂ ದೂರದಿಂದ ನೋಡಿ ಗ್ರಹಿಸಿದವರಿಗೂ ಇದು ಅಂದಾಜಾದೀತು. ನಾನೂ ಹತ್ತಿರದಿಂದ ನೋಡಿಲ್ಲ. ಆದರೂ ಅಂದಾಜಿದೆ. ಆರ್ ಎಸ್ ಎಸ್ ಪ್ರಚಾರಕನೋ ಮತ್ತೊಂದೋ ಆಗಿ ಹಲವು ದಶಕಗಳನ್ನು ಕಳೆದ ಒಬ್ಬ ವ್ಯಕ್ತಿಗೆ ಇಂಥ ಎಷ್ಟೋ ಪ್ರಶ್ನೆಗಳು, ಸನ್ನಿವೇಶಗಳು ಎದುರಾಗುತ್ತವೆ. ಎಶ್ಟೋ ಮನೆಗಳಿಗೆ ಅವರು ಹೋಗಿ ಹುಡುಗರನ್ನು ಸಂಘ ಶಾಖೆಗೆ ಸೇರಿಸಲು ಯತ್ನ ಮಾಡುವಾಗ ನಾಯಿಯಿಂದ ಕಡೆ ಬೈಯಿಸಿಕೊಂಡು ಬರುವ ಸಂದರ್ಭವೂ ಇರುತ್ತದೆ!! ಸಂಘಪರಿವಾರದಲ್ಲಿ ಸರ್ವಾಧಿಕಾರ ಇದೆಯೆಂಬ ಪ್ರಚಾರವಿದ್ದರೂ ನಾನು ಕೇಳಿ ತಿಳಿದಂತೆ ಅವರ ಬೈಟಕ್ ಗಳಲ್ಲೂ ಮೇಲಿನವರ್ರು ಕಳಗಿನವರಿಂದ ಕಷ್ಟದ ಪ್ರಶ್ನೆಗಳನ್ನೂ ಎದುರಿಸಬೇಕಾಗುತ್ತದೆ-ಪೋಲಿಸಿ ಮೇಟರ್ ಅನುಷ್ಟಾನದ ಕಷ್ಟ ಇತ್ಯಾದಿ ವಿಷಯಗಳಲ್ಲಿ.ಅಲ್ಲದೆ, ಮಿತ್ರರು, ಶತ್ರುಗಳು ಹೀಗೆ ಎಲ್ಲೆಡೆ ಊಟ ಮಾಡಿ , ವಾಸಿಸಿ ಅನುಭವ ಇರುತ್ತದೆ. ಅಕ್ಷರಶಃ ಇಂಥ ಪ್ರಚಾರಕರು ಸಾರ್ವಜನಿಕ ಜೀವಿಗಳಾಗಿರುತ್ತಾರೆ. ಮೋದಿಗಿರುವ ಈ ಹಿನ್ನೆಲೆ ಬಹಳಶ್ಟು ರಾಜಕಾರಣಿಗಳಿಗೆ ಇಲ್ಲ. ರಾಹುಲ ಗಾಂಧಿ ಬಿಡಿ, ಅವರಿಗೆ ವಿನಾಯಿತಿಯಿದೆ. ಅವರಿಗೆ ರಕ್ಷಣೆ ಇತ್ಯಾದಿ ಕಾರಣಗಳಿಂದ ಜನರ ಜೊತೆ ಬೆರೆವ ಅವಕಾಶ ಇರಲಿಲ್ಲ. ಅವರು ಅಂತಲ್ಲ, ಬಿಜೆಪಿ ಕಾಂಗ್ರೆಸ್ ಸೇರಿದಂತೆ ಎಷ್ಟೋ ರಾಜಕಾರಣಿಗಳಿಗೆ, ಅನುವಂಶೀಯವಾಗಿ ರಾಜಕಾರಣಿಗಳಾದವರಿಗೂ ಇರೊಲ್ಲ. (ಗಮನಿಸಬೇಕಾದ್ದೆಂದರೆ ಇದು ರಾಜಕೀಯ ಅನುಭವ ಅಲ್ಲ). ಹೀಗೆ ದಶಕಗಳ ಕಾಲ ಬದುಕಿದ ಒಬ್ಬನಿಗೆ ಸ್ಕ್ರಿಪ್ಟೆಡ್ ಸಂದರ್ಶನ ಇದ್ದರೆ ಮಾತ್ರ ಮಾತಾಡಬಲ್ಲ ಎಂದು ನಾನು ಊಹಿಸಲಾರೆ. ನನಗನಿಸುವ ಮಟ್ಟಿಗೆ ಅರ್ನಬ್ ಕೇಳದೆ ಬಿಟ್ಟ ಪ್ರಶ್ನೆಗಳನ್ನು ಕೇಳುತ್ತಿದ್ದರೂ ಸಂದರ್ಶನದಲ್ಲಿ ಒಟ್ಟಾರೆ ಬಹಳ ಬದಲಾವಣೆ ಆಗುತ್ತಿರಲಿಲ್ಲ. ಸ್ವಾಮಿ ಬಗ್ಗೆ ಹೇಳಿದಂತಹ ಮಾತುಗಳೇ ಬರುತ್ತಿದ್ದವು. ಇನ್ನು ನಿರರ್ಗಳವಾಗಿ ಮಾತಾಡುವುದೇ ಉತ್ತಮ ಆಡಳಿತ ಅಲ್ಲ. ಆದರೆ ಸರಕಾರದ ನೀತಿ, ವಿದೇಶಾಂಗ ವಿಷಯ ಇತ್ಯಾದಿ ಬಗ್ಗೆ ಸ್ವಂತವಾಗಿ ಮಾತಾಡಬೇಕಾದರೆ ಆ ಬಗ್ಗೆ ಅಧ್ಯಯನ ಇರಬೇಕು. ಅದಕ್ಕಿಂತ ಮುಖ್ಯವಾಗಿ ಅದರಲ್ಲಿ ಮನಸ್ಸು ತೊಡಗಿಸಬೇಕು. ಹಾಗೆ ಮನಸ್ಸು ತೊಡಗಿಸಿದ್ದಾರೆಯೇ ಎಂಬುದು ಹೆಚ್ಚು ಮುಖ್ಯ. Ajakkala Girisha