ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರುಣ್ ಜೋಳದ ಕೂಡ್ಲಿಗಿ ಬರಹ ಏಕೋ ಸರಿಗಾಣಲಿಲ್ಲ..

‘ಸೋಷಿಯಲ್ ಮೀಡಿಯಾದಲ್ಲಿ ಗಂಡಸರು ಉತ್ಪಾದಿಸುವ ಮಹಿಳಾ ಕವಿ/ಲೇಖಕಿ/ಚಿಂತಕಿಯರು’ ಎನ್ನುವ  ಅರುಣಕುಮಾರ್ ಜೋಳದಕೂಡ್ಲಿಗಿ ಲೇಖನವನ್ನು ಪ್ರಕಟಿಸಿದ್ದೆವು. ಅದು ಇಲ್ಲಿದೆ.
ಜುಗಾರಿ ಕ್ರಾಸ್ ಚರ್ಚೆಗೆಂದೇ ಇರುವ ತಾಣ. ಹಾಗಾಗಿ ಪ್ರತಿಕ್ರಿಯಿಸಲು ಆಹ್ವಾನ ನೀಡಿದ್ದೆವು ಅದರಂತೆ ನಾ ದಿವಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ
ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ
avadhimag@gmail.comಗೆ ಕಳಿಸಿಕೊಡಿ


ಪುರುಷ ಅಹಮಿಕೆಯ ಸಾತ್ವಿಕ ಸ್ವರೂಪ
ನಾ ದಿವಾಕರ
“ಗಂಡು ಪ್ರಧಾನ ಸಮಾಜದ ಪ್ರತಿಸ್ಪಂದನೆ, ಗಂಡಾಳ್ವಿಕೆ‌ ಸಮಾಜದ ಪ್ರತಿಬಿಂಬ ಎಂದು ದೂಷಿಸುವ ಸಾಧ್ಯತೆ ಇದೆ ”ಎಂಬ ಆತಂಕ ವ್ಯಕ್ತಪಡಿಸುತ್ತಲೇ ಅರುಣ ಜೋಳದ ಕೂಡ್ಲಿಗಿಯವರು ತಮ್ಮ “ಸೋಷಿಯಲ್ ಮೀಡಿಯಾದಲ್ಲಿ ಗಂಡಸರು ಉತ್ಪಾದಿಸುವ ಮಹಿಳಾ ಕವಿ/ಲೇಖಕಿ/ಚಿಂತಕಿಯರು” ಎಂಬ ಟಿಪ್ಪಣಿಯನ್ನು ಮಂಡಿಸಿದ್ದಾರೆ.
ಬಹುಶಃ ಅರುಣ್ ಅವರು ತಾವು ಹೇಳಬೇಕಾದ್ದನ್ನು ಸಮರ್ಥವಾಗಿ ಮಂಡಿಸಲು ವಿಫಲರಾಗಿದ್ದಾರೆ ಎನಿಸುತ್ತದೆ.
ಲಿಂಗಸೂಕ್ಷ್ಮತೆ ಇಲ್ಲದ ಬರಹಗಳನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಕಟಿಸುವ ಕೆಲವು ಮಹಿಳೆಯರ ಬರಹಗಳನ್ನು ಹೀಗೆ ನೋಡುವುದು ಮತ್ತೊಮ್ಮೆ ಪುರುಷ ಸಮಾಜದ ಗ್ರಹೀತವೇ ಆಗುತ್ತದೆ ಅಲ್ಲವೇ.
ಲಿಂಗ ಸೂಕ್ಷ್ಮತೆಗೆ ವ್ಯಕ್ತಿಯ ಲಿಂಗತ್ವವೇ ಮುಖ್ಯವಲ್ಲ ಎನ್ನುವುದನ್ನು ಲೇಖಕರು ಗಮನಿಸಬೇಕಿತ್ತು. ಭಾರತದಂತಹ ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ, ಸಮಾಜೋ ಸಾಂಸ್ಕೃತಿಕ ಅಧಿಪತ್ಯ ಪುರುಷ ಸಮಾಜದ ಗ್ರಹೀತಳಿಗೇ ಜೋತುಬಿದ್ದಿರುವ ಸಂದರ್ಭದಲ್ಲಿ ಮಹಿಳಾ ಲೇಖಕರಲ್ಲಿ ಹಲವರು ಪುರುಷ ಪ್ರಧಾನ ಧೋರಣೆಯನ್ನು ಬಿಂಬಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಆದರೆ ಇದನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ನಾವು ಅಂಬೆಗಾಲಿಡುತ್ತಿರುವ ಲೇಖಕಿಯರನ್ನು ಅಥವಾ ಲಿಂಗ ಸೂಕ್ಷ್ಮತೆಯನ್ನು ಇನ್ನೂ ಬೆಳೆಸಿಕೊಳ್ಳದ ಲೇಖಕಿಯರನ್ನು ಪುರುಷ ಸಮಾಜದಿಂದ ಉತ್ಪಾದಿತ ಲೇಖಕಿಯರು ಎಂದು ಬಣ್ಣಿಸುವುದು ಸ್ತ್ರೀದ್ವೇಷದ ಒಂದು ಛಾಯೆಯಂತೆ ಕಾಣುತ್ತದೆ. ಲೇಖಕರು ಈ ವರ್ಗಕ್ಕೆ ಸೇರಿದವರು ಎಂದು ಭಾವಿಸುವ ಅಗತ್ಯವೂ ಇಲ್ಲ.
ಆದರೆ ಲೇಖಕರು ಎಲ್ಲೋ ಒಂದೆಡೆ ತಮ್ಮ ಪುರುಷ ಪ್ರಧಾನ ಧೋರಣೆಯನ್ನು ವ್ಯಕ್ತಪಡಿಸುವುದನ್ನು ಕಂಡಾಗ ಅಚ್ಚರಿಯಾಗುತ್ತದೆ.
“ಪ್ರತಿಭೆಯಿದ್ದೂ ಅವಕಾಶವಂಚಿತ ಲೇಖಕಿಯರನ್ನು ಮುನ್ನೆಲೆಗೆ ತಂದು ಪರಿಚಯಿಸಿದ ಪುರುಷ ಲೇಖಕರ ಪರಂಪರೆಯೇ ಇದೆ ” ಎಂದು ಹೇಳುತ್ತಾ ಲೇಖಕರು ಲಂಕೇಶ್ ಅವರನ್ನು ಉಲ್ಲೇಖಿಸುತ್ತಾರೆ. ಇದರ ಸತ್ಯಾಸತ್ಯತೆಯನ್ನು ಮತ್ತೊಮ್ಮೆ ಒರೆಹಚ್ಚಿ ನೋಡುವ ಹೊಣೆ ಲೇಖಕರ ಮೇಲಿದೆ. ಮುಂದುವರೆದು ಲೇಖಕರು, “ಹೀಗೆ ಮುನ್ನಲೆಗೆ ತರುವಲ್ಲಿ ಮಹಿಳೆಯರ ಪ್ರಖರ ಪ್ರತಿಭೆ ಜೊತೆಗೆ ಸಹಜವಾದ ವಿರುದ್ದ ಲಿಂಗದ ಆಕರ್ಷಣೆ ಇರುವುದು ಸುಳ್ಳಲ್ಲ” ಎಂದು ಹೇಳುವುದು ಸಾಹಿತ್ಯ ಲೋಕದಲ್ಲೂ ಮಹಿಳೆಯನ್ನು ಆಕರ್ಷಣೆಯ ವಸ್ತುವಿನಂತೆ ನೋಡುವ ಅಸೂಕ್ಷ್ಮತೆಯನ್ನು ತೋರುತ್ತಾರೆ.  ಇನ್ನೂ ಮುಂದುವರೆಯುತ್ತಾ “ಅಂದದ ಮಹಿಳೆಯರು ಕನಿಷ್ಠ ಪ್ರತಿಭೆಯಲ್ಲಿ ಗರಿಷ್ಠ ಪ್ರಚಾರ ಅವಕಾಶ ಪಡೆದದ್ದೂ ಇದೆ” ಎಂದು ಹೇಳುವ ಲೇಖಕರು ಮಹಿಳೆಯ ಅಂದಚೆಂದವನ್ನು ಮಾರುಕಟ್ಟೆಯ ಜಾಹೀರಾತಿನಲ್ಲಿ ನೋಡುವ ರೀತಿ ನೋಡಿದ್ದಾರೆ  ಎನಿಸುತ್ತದೆ.
“ಗಂಡಸರ ಲೈಕು ಕಮೆಂಟಾದಿಗಳಿಂದ ಹೊರಹೊಮ್ಮುವ ಲೇಖಕಿ/ಕವಯಿತ್ರಿ/ಚಿಂತಕಿಯರನ್ನು ಪ್ರೋತ್ಸಾಹದಾಯಕ ಬೆಳವಣಿಗೆ ಎಂದು ಕರೆಯದೆ ಗಂಡಸರು ಉತ್ಪಾದಿಸುತ್ತಿರುವ ಕವಯಿತ್ರಿ/ಲೇಖಕಿ/ಚಿಂತಕಿಯರು ಎಂದು ಕರೆಯುವೆ” ಎಂಬ ತಮ್ಮ ಹೊಸ ವ್ಯಾಖ್ಯಾನವನ್ನು ಲೇಖಕರು ಕೊಂಚ ಎಚ್ಚರಿಕೆಯಿಂದ ಮಾಡಬೇಕಿತ್ತು.
ಯಾವುದೇ ಬರಹಗಾರರು ಲೈಕು ಕಮೆಂಟಾದಿಗಳಿಂದ ತಾವು ಬೆಳೆದಿದ್ದೇವೆ ಎಂದು ಭಾವಿಸುವುದಿಲ್ಲ ಎಂದೇ ನನ್ನ ಭಾವನೆ. ಹಾಗೊಮ್ಮೆ ನಿರೀಕ್ಷೆ ಇಟ್ಟುಕೊಂಡಿದ್ದರೂ ಅದು ಕೇವಲ ಮನಸ್ಸಿನ ಸಮಾಧಾನಕ್ಕೆ ಸೀಮಿತವಾಗುವಂತಹುದೇ ಹೊರತು ಆತ್ಮರತಿಗೆ ನೆರವಾಗುವಂತಹುದಲ್ಲ. ಇದಕ್ಕೆ ಮಹಿಳೆಯರೂ ಹೊರತಾದವರಲ್ಲ. ಹಾಗೊಮ್ಮೆ ಗಂಡಸರ ಲೈಕು ಕಮೆಂಟಾದಿಗಳಿಂದ ಸ್ಪೂರ್ತಿ ಪಡೆದಿದ್ದರೂ ಅದು ಮೆಚ್ಚುಗೆಯ ದ್ಯೋತಕವಷ್ಟೇ ಅಲ್ಲವೇ. ಅದು ಉತ್ಪಾದನೆಯ ಸಾಧನವಾಗುವುದು ಎಂದರೇನು ?
ಮಹಿಳಾ ಬರಹಗಾರರು ಎಂದರೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಸರಕುಗಳೇ ? ಈ ಸ್ತ್ರೀ ವಿರೋಧಿ ಮನೋಭಾವದ ಮತ್ತೊಂದು ಸ್ವರೂಪವನ್ನು ಲೇಖಕರು  ಮುಂಚಿತವಾಗಿಯೇ ಅಂದದ ಮಹಿಳೆಯರನ್ನು ಉಲ್ಲೇಖಿಸುವಲ್ಲಿ ಹೊರಗೆಡಹುತ್ತಾರೆ. “ಮಹಿಳಾ ಲೇಖಕಿಯರು ಲಿಂಗನಿರಸನದ ಭಾಷೆಯನ್ನು ಮರೆತು ಗಂಡುಭಾಷೆಯನ್ನೇ ಅಭ್ಯಾಸ ಮಾಡಿಕೊಳ್ಳುವ ಸಾಧ್ಯತೆಯ ” ಬಗ್ಗೆ ಆತಂಕ ವ್ಯಕ್ತಪಡಿಸುವ ಲೇಖಕರು ತಮ್ಮ ಟಿಪ್ಪಣಿಯಲ್ಲಿ ಬಳಸಿರುವ ರೂಪಕಗಳು, ಪ್ರತಿಮೆಗಳು ಗಂಡುಭಾಷೆಯ ಮೂಲಕ ಮಹಿಳಾ ಲೇಖಕಿಯರ ಹೆಣ್ತನ ಮತ್ತು ಮಹಿಳಾ ಸಂವೇದನೆಯನ್ನೇ ಪ್ರಶ್ನಿಸುವಂತಿವೆ.
ಅರುಣ್ ತಮ್ಮ ಲೇಖನದಲ್ಲಿ ಮಹಿಳಾ ಸಾಹಿತ್ಯ ಲೋಕದ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ,ಅಂಬೆಗಾಲಿಡುತ್ತಿರುವ ಮಹಿಳಾ ಸಾಹಿತಿಗಳ ಅಸ್ತಿತ್ವ ಮತ್ತು ಅಸ್ಮಿತೆಯನ್ನೇ ಪ್ರಶ್ನಿಸಲು ಸಾಮಾಜಿಕ ತಾಣಗಳ ಬರಹಗಳನ್ನು ಭೂಮಿಕೆಯನ್ನಾಗಿ ಬಳಸಿಕೊಂಡಿದ್ದಾರೆ. ಆದರೂ ಕೊನೆಯಲ್ಲಿ “ಗಂಡು ಪ್ರಧಾನ ಸಮಾಜದ ಪ್ರತಿಸ್ಪಂದನೆ, ಗಂಡಾಳ್ವಿಕೆ‌ ಸಮಾಜದ ಪ್ರತಿಬಿಂಬ ಎಂದು ದೂಷಿಸುವ ಸಾಧ್ಯತೆ ಇದೆ” ಎಂದೂ ಆತಂಕ ವ್ಯಕ್ತಪಡಿಸುತ್ತಾರೆ.
ಆದರೆ ಇದು ಕೇವಲ ಆತಂಕ ಅಲ್ಲ. ವಾಸ್ತವ. ಇಲ್ಲಿ ಪ್ರಶ್ನೆ ದೂಷಣೆ ಅಥವಾ ಅಥವಾ ಅಪವಾದದ್ದಲ್ಲ. ನಮ್ಮ ಸೂಕ್ಷ್ಮತೆ ಮತ್ತು ಸಂವೇದನೆಯ ಪ್ರಶ್ನೆ ಇಲ್ಲಿ ಅಡಗಿದೆ ಎನ್ನುವುದನ್ನು ಲೇಖಕರಾದ ಅರುಣ್ ಗಮನಿಸಬೇಕಿದೆ. ಈ ಟಿಪ್ಪಣಿ ಚರ್ಚೆಗೊಳಗಾಗುವುದೂ ಬೇಕಿಲ್ಲ. ಆದರೆ ಇಲ್ಲಿರುವ ಕೆಲವು ಒಳಸುಳಿಗಳು ಈಗಾಗಲೇ ಸ್ತ್ರೀವಾದ ಮತ್ತು ಸ್ತ್ರೀ ಸಂವೇದನೆಯನ್ನು ಕಳೆದುಕೊಂಡಿರುವ ಪುರುಷ ಪ್ರಧಾನ ಸಮಾಜಕ್ಕೆ ತಪ್ಪು ಸಂದೇಶವನ್ನು ತಲುಪಿಸುವ ಸಾಧ್ಯತೆ ಇದೆ. ಹಾಗಾಗಿಯೇ ಈ ಪ್ರತಿಕ್ರಿಯೆ.
ಕೊನೆಯದಾಗಿ, ಅರುಣ್ ಜೋಳದ ಕೂಡ್ಲಿಗೆ ನನ್ನ ಮೆಚ್ಚಿನ ಲೇಖಕರಲ್ಲೊಬ್ಬರು. ಅವರ ಈ ಬರಹ ಏಕೋ ಸರಿಗಾಣಲಿಲ್ಲ.

‍ಲೇಖಕರು avadhi

11 July, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading