ಅರುಣ್ ಜೋಳದಕೂಡ್ಲಿಗಿ ಸ್ಪಷ್ಟನೆ..

ಡಿಜಿಟಲ್ ಸ್ಪೇಸಿನ ಕಲ್ಪಿತ ಮಹಿಳೆಯ ಚರ್ಚೆಗೊಂದು ಪುಟ್ಟ ಕನ್ನಡಿ
ಅರುಣ್ ಜೋಳದಕೂಡ್ಲಿಗಿ.

`ಸೋಷಿಯಲ್ ಮೀಡಿಯಾದಲ್ಲಿ ಗಂಡಸರು ಉತ್ಪಾದಿಸುವ ಲೇಖಕಿಯರು’ ಎನ್ನುವ ಬರಹ ಸೋಷಿಯಲ್ ಮೀಡಿಯಾದ ತಿಳಿವಿನ ಮಿತಿಗಳನ್ನು ಅರಿಯಲು ಮಾಡಿದ ಒಂದು ಪ್ರಯೋಗ. ಹಾಗಾಗಿಯೇ ಈ ಎಲ್ಲಾ ಪ್ರತಿಕ್ರಿಯೆಗಳಿಗೆ ಉತ್ತರಿಸಲು ಚೂರು ಸಮಯ ತೆಗೆದುಕೊಂಡೆ. ಉದ್ದೇಶಪೂರ್ವಕವಾಗಿ ಚರ್ಚೆಯಾಗಲಿ ಎಂದು ಈ ಪೇಸ್‍ಬುಕ್ ಸ್ಟೇಟಸ್‍ನ್ನು ‘ಅವಧಿ’ಯ ‘ಜುಗಾರಿ ಕ್ರಾಸಿ’ಗೆ ಕಳಿಸಿದ್ದೆ. ಪೇಸ್‍ಬುಕ್ ಸ್ಟೇಟಸ್‍ನ್ನೂ ಡಿಲೀಟ್ ಮಾಡದೆ ಪ್ರತಿಕ್ರಿಯೆ ಪಡೆಯುವ ಸಲುವಾಗಿ ಉಳಿಸಿಕೊಂಡಿರುವೆ. ಇಲ್ಲಿ ನಾ.ದಿವಾಕರ್ ಸರ್ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಅಚ್ಚರಿ ಹುಟ್ಟಿಸುವಂತೆ ಖಾಸಗಿ ಮೆಸ್ಸೇಜುಗಳಲ್ಲಿ ಬೆಂಬಲಿಸಿದ್ದಿದೆ.

ಅಂತೆಯೇ ಈ ಹಿಂದೆಯೂ ನನ್ನ ಬರಹಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದವರು, `ನೀನು ಬರೆಯುವ ಬರಹ ಇದಲ್ಲ, ಇದರಲ್ಲೇನೋ ಕರಾಮತ್ತಿದೆ’ ಎಂದು ನನ್ನ ಪ್ರಯೋಗದ ಗುಟ್ಟನ್ನು ರಟ್ಟಾಗಿಸಿದ್ದೂ ಇದೆ. ಈ ಬರಹವನ್ನು `ಗಂಡಸು’ ಬರೆದದ್ದು ಎನ್ನುವ ನೋಟವನ್ನೆ ಪ್ರಧಾನವನ್ನಾಗಿಸಿಕೊಂಡು ಪ್ರತಿಕ್ರಿಯಿಸಿದವರೂ ಇದ್ದಾರೆ. ಇನ್ನು ನೀನು ಹೇಳುವ ಸಮಸ್ಯೆ ಶೇ ಐದೋ ಹತ್ತೋ ಪರಿಸೆಂಟಿನ ಸಂಗತಿ ಅದಕ್ಕಿಂತ ಬರವಣಿಗೆ ಆರಂಭಿಸಿ ಕಣ್ಮರೆಯಾಗುವ ಮಹಿಳೆಯರನ್ನು ಕುರಿತು ಚರ್ಚಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಬಹುಶಃ ಇದೇ ಬರಹವನ್ನು ಹೆಣ್ಣುಮಗಳೊಬ್ಬಳು ಬರೆದಿದ್ದರೆ ಈ ಪ್ರತಿಕ್ರಿಯೆಗಳ ಸ್ವರೂಪ ಹೇಗಿರಬಹುದೆಂಬ ಕುತೂಹಲವಿದೆ.

ಕೆಲವರು ನೀವು ಹೇಳುವುದು ಕೇವಲ ಸೋಷಿಯಲ್ ಮೀಡಿಯಾ ಮಾತ್ರವಲ್ಲ ಅದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕಂಡುಬರುವ ಸಾಮಾನ್ಯ ವಿಧ್ಯಮಾನ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಈ ವಿಷಯ ಚರ್ಚೆಗೆ ಅನರ್ಹ, ಅದೂ ಅವಧಿಯಲ್ಲಿ ಪ್ರಕಟಿಸಿದ್ದೂ ಇನ್ನೂ ಅಚ್ಚರಿ ಎಂದಿದ್ದಾರೆ. ಬಹುಶಃ ಬೇರೊಬ್ಬರ ಇದೇ ಬರಹಕ್ಕೆ ನನ್ನ ಪ್ರತಿಕ್ರಿಯೆ ಕೂಡ ನಾ.ದಿವಾಕರ್ ಸರ್ ಅಭಿಪ್ರಾಯದಂತಿರುತ್ತಿತ್ತು. ಹೀಗೆ ಪ್ರತಿಕ್ರಿಯಿಸಿದ ಎಲ್ಲರಿಗೂ ಹೇಳಬಯಸುವುದೇನೆಂದರೆ ಈ ಬರಹದ ಮಿತಿ ಗೊತ್ತಿಲ್ಲದೆ ಬರೆದದ್ದಲ್ಲ. ಈಗ ಬಂದ ಪ್ರತಿಕ್ರಿಯೆಯ ಎಲ್ಲಾ ಮಿತಿಗಳೂ ಸ್ವತಃ ನನಗೇ ಗೊತ್ತಿದೆ. ಉದ್ದೇಶಪೂರ್ವಕವಾಗಿ ಗಂಡಿನ ಅಹಮಿಕೆಯಿಂದಲೂ, ಓದಿದ ತಕ್ಷಣ ಪ್ರತಿಕ್ರಿಯಿಸಬೇಕೆಂದ ಕೆರಳಿಸುವ ಒರಟುತನದ ರೋಚಕತೆಯಿಂದಲೂ ಬರೆದಿರುವೆ. ತತಕ್ಷಣಕ್ಕೆ ಇದೊಂದು ಅನಾರೋಗ್ಯಕರವಾದ ಟಿಪ್ಪಣಿಯೆಂದೂ ಅನ್ನಿಸಿಬಿಡುವುದರಲ್ಲಿ ಅಚ್ಚರಿಯೇನಿಲ್ಲ. ಅದು ಸಹಜವಾಗಿಯೇ ಸಂಭವಿಸಿದೆ.

ಈ ಎಲ್ಲಾ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾ ಪ್ರವೃತ್ತಿಯನ್ನು ಗಮನಿಸುತ್ತಿರುವ ವಿವಿಧ ನೆಲೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾದದ್ದು ನನ್ನ ಈ ಬರಹದಿಂದ ನನಗಾದ ಲಾಭ. ನಾನು ಉದ್ದೇಶಪೂರ್ವಕವಾಗಿ ಕೆಲವು ಹಿರಿಯ ಚಿಂತಕ ಚಿಂತಕಿಯರಿಗೆ ಈ ಬರಹ ಕಳಿಸಿ ಪ್ರತಿಕ್ರಿಯೆ ನಿರೀಕ್ಷಿಸುತ್ತೇನೆ ಎಂದು ಕೇಳಿಕೊಂಡಿದ್ದೆ. ಆದರೆ ಅವರಾರು ನನ್ನ ಕೋರಿಕೆಯನ್ನು ಮನ್ನಿಸಲಿಲ್ಲ. ಅಥವಾ ಈ ಬರಹ ಪ್ರತಿಕ್ರಿಯೆಗೂ ಯೋಗ್ಯವಲ್ಲವೆಂದು ಮೌನತಾಳಿರಬಹುದು, ಇರಲಿ.

ಈ ಟಿಪ್ಪಣಿ ಒರಟಾಗಿದ್ದು, ಪುರುಷಹಂಕಾರದಲ್ಲಿ ಬರೆದಂತಿರುವುದೆ ಈ ಬರಹ ಎತ್ತುವ ಮುಖ್ಯ ಪ್ರಶ್ನೆಯನ್ನು ಬೈಪಾಸ್ ಮಾಡಿ ಚರ್ಚೆಯ ಕೇಂದ್ರವನ್ನು ತಪ್ಪಿಸಿದೆ. ಅದೇನೆಂದರೆ `ಮಹಿಳೆಯರು ಗಂಡಸರ ಹುಸಿ ವೈಭವೀಕರಣಕ್ಕೆ ಒಳಗಾಗುತ್ತಾ, ತಾವೂ ಗಂಡಸರ ಭಾಷೆಯನ್ನು ರೂಢಿಸಿಕೊಳ್ಳಲು’ ಪ್ರಯತ್ನಿಸುತ್ತಾರೆ ಎನ್ನುವುದಾಗಿತ್ತು. ಈ ಪ್ರಮಾಣ ಸದ್ಯಕ್ಕೆ ಕಡಿಮೆಯೇ ಇರಬಹುದು. ಆದರೆ ಸೋಷಿಯಲ್ ಮೀಡಿಯಾ ಬಳಕೆಯ ಪ್ರಮಾಣ ಹೆಚ್ಚುತ್ತಾ ಹೋದಂತೆ ಇದರ ಪ್ರಮಾಣ ಏರಿಕೆಯಾಗಬಹುದೆಂಬುದು ನನ್ನ ಊಹೆ ಮತ್ತು ಆತಂಕ. ಕೆಲವೊಮ್ಮೆ ನನ್ನ ಈ ಊಹೆ ಸುಳ್ಳಾಗಲು ಸಾಧ್ಯವಿದೆ. ಕೆಲವೊಮ್ಮೆ ಯಾವುದೇ ಬೆಳವಣಿಗೆ ಉದ್ದೇಶಿತವಲ್ಲದೆ ಅನುದ್ದೇಶಿತ ಪರಿಣಾಮಗಳನ್ನು ಬೀರಲು ಸಾಧ್ಯವಿದೆ.

ಸೋಷಿಯಲ್ ಮೀಡಿಯಾವನ್ನು ಒಳಗೊಂಡಂತೆ ಇಡೀ ಡಿಜಿಟಲ್ ಸ್ಪೇಸಿನಲ್ಲಿ ವಿರುದ್ಧಲಿಂಗದ ಆಕರ್ಷಣೆ ಬಹುದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿಯೇ ಈ ವಿರುದ್ಧ ಲಿಂಗದ ಆಕರ್ಷಣೆಯನ್ನೇ ಡಿಜಿಟಲ್ ಸ್ಪೇಸ್ ಕೃತಕವಾಗಿಯೂ ರೋಚಕಗೊಳಿಸಿ ಮಾರುಕಟ್ಟೆಯನ್ನು ಲಾಭಕ್ಕಾಗಿ ವಿಸ್ತರಿಸಿಕೊಳ್ಳುತ್ತಿದೆ. ಹೀಗಾಗಿಯೇ ಡಿಜಿಟಲ್ ಸ್ಪೇಸ್ ಕೃತಕವಾದ ಗಂಡು ಹೆಣ್ಣುಗಳನ್ನು ಸೃಷ್ಠಿಸಲಾಗುತ್ತಿದೆ. ಈ ಗಂಡು ಹೆಣ್ಣುಗಳು ವಾಸ್ತವ ಜಗತ್ತಿನ ಗಂಡು ಹೆಣ್ಣುಗಳಿಗಿಂತಲೂ ಭಿನ್ನರಾಗಿರುತ್ತಾರೆ. ಇದರಲ್ಲಿ ಕೃತಕ ಅಥವಾ ಕಲ್ಪಿತ ಮಹಿಳೆ ವಾಸ್ತವದಲ್ಲಿರುವ ಮಹಿಳೆಗಿಂತ ತುಂಬಾ ಮುಂದಿದ್ದಾಳೆ, ಬೋಲ್ಡ್ ಆಗಿದ್ದಾಳೆ. ಈ ಕಲ್ಪಿತ ಮಹಿಳೆಯ ಜತೆ ವ್ಯವಹರಿಸುವ ವಾಸ್ತವದ ಗಂಡಸರು ತನ್ನ ಒಡನಾಟದ ಹೆಣ್ಣುಗಳಲ್ಲಿ ಈ ಕಲ್ಪಿತ ಮಹಿಳೆಯನ್ನು ಹುಡುಕಲು ಪ್ರಯತ್ನಿಸುತ್ತಾರೆ. ಈ ಸಂಘರ್ಷದಲ್ಲಿ ಹೊಸತೊಂದು ಪುರುಷವಾದ ನಮಗರಿವಿಲ್ಲದೆ ರೂಪುಗೊಳ್ಳುತ್ತಿದೆ. ಈ ಡಿಜಿಟಲ್ ಸ್ಪೇಸಿನ ಕಲ್ಪಿತ ಮಹಿಳೆಯ ಉತ್ಪಾದನೆಗೂ, ಮಹಿಳೆಯರ ಮೇಲಿನ ಅತ್ಯಾಚಾರಗಳ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೂ ಸೂಕ್ಷ್ಮವಾದ ಸಂಬಂಧವಿದೆ ಎಂದು ದೆಹಲಿಯ ಜೆಎನ್‍ಯುನ ಮಹಿಳಾ ಅಧ್ಯಯನ ವಿಭಾಗದ ಅರುಣಿಮಾ ಆತಂಕ ವ್ಯಕ್ತಪಡಿಸುತ್ತಾರೆ.

ಹೀಗೆ ಡಿಜಿಟಲ್ ಲೋಕದಲ್ಲಿ ಸೃಷ್ಠಿಗೊಳ್ಳುತ್ತಿರುವ ಕಲ್ಪಿತ ಮಹಿಳೆ ಲೈಂಗಿಕ ಕ್ರಿಯೆಗಾಗಿ ಸದಾ ಹಪಾಹಪಿಸುವ ಮಹಿಳೆಯಾಗಿದ್ದಾಳೆ. ಹಾಗಾಗಿಯೇ ಗಂಡಸರನ್ನು ಎಂಗೇಜ್ ಮಾಡುವ ನೂರಾರು ಪೋರ್ನ್ ವೆಬ್ ಸೈಟುಗಳು, ಕಾಲ್ ಸೆಂಟರುಗಳಿವೆ. ಇದರಲ್ಲಿ ಕೇವಲ ಹೆಣ್ಣಿನ ಮಾದಕ ಧ್ವನಿಯಲ್ಲಿ ಗಂಡಸರ ಲೈಂಗಿಕ ಇಚ್ಚೆಯನ್ನು ಈಡೇರಿಸುವ ಗುಪ್ತ ಚಾಟಿಂಗ್‍ನ ವಾಟ್ಸಪ್‍ನ ಒಳಕೋಣೆಗಳಿವೆ. ಈ ಬಗೆಯ ಅಂತರ್ಜಾಲದ ಜಾಗಗಳು ಕೋಟ್ಯಾಂತರ ರೂಗಳ ವ್ಯವಹಾರ ಮಾಡುತ್ತಿವೆ. ಇವುಗಳು ಡಿಜಿಟಲ್ ಪರಿಭಾಷೆಯ ಕೋಡಿಂಗ್‍ನಲ್ಲಿರುವ ಕಾರಣ ಕಾಣುವ ಮತ್ತು ಅರ್ಥವಾಗುವ ಅಕ್ಷರ, ಘಟನೆ, ಸಂಗತಿಗಳಿಗೆ ಪ್ರತಿಕ್ರಿಯಿಸುವಂತೆ ಪ್ರತಿಕ್ರಿಯಿಸಲು ಆಗುವುದಿಲ್ಲ.

ನಾನು ಫೇಸ್‍ಬುಕ್‍ನ ಪ್ರವೃತ್ತಿಯನ್ನು ವಿವರಿಸುವಾಗ ನನ್ನ ಅಕೌಂಟಿನ ಐದು ಸಾವಿರ ನನ್ನಂತಹದ್ದೇ ಆಸಕ್ತಿ ಇರುವವರ ಪ್ರವೃತ್ತಿಗಳನ್ನು ಆಧರಿಸಿ ವಿವರಿಸುತ್ತಲೇ, ಇಡೀ ಪೇಸ್‍ಬುಕ್ ಬಳಕೆಗಾರರ ಪ್ರವೃತ್ತಿ ಬಗ್ಗೆ ಮಾತನಾಡುತ್ತಿದ್ದೇವೆಂದು ಭ್ರಮಿಸುತ್ತೇವೆ. ಹೀಗೆ ವಿವರಿಸ ಹೊರಡುವ ಪ್ರತಿಯೊಬ್ಬರೂ ತನ್ನ ಪೇಸ್‍ಬುಕ್ ಒಡನಾಟದ ಜನರ ಪ್ರವೃತ್ತಿಗಳನ್ನಾಧರಿಸಿ ಅವರವರ ಅರ್ಥೈಸಿಕೊಳ್ಳುವಿಕೆ ಬೇರೆಯೇ ಆಗಿರುತ್ತದೆ ಎನ್ನುವುದು ನಂಬಲಸಾಧ್ಯವಾದರೂ ಸತ್ಯ.

ಹಿಂದಿನ ಟಿಪ್ಪಣಿಯಲ್ಲಿ `ಉತ್ಪಾದನೆ’ ಎಂದು ಬಳಸಿದ ಪದದ ಬಗೆಗೆ ತುಂಬಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಪರಿಭಾಷೆಯಲ್ಲಿ ಒಂದು ಫೇಸ್‍ಬುಕ್ ಅಕೌಂಟ್ ಒಂದು ಸರಕು. ನಾವು ಮನುಷ್ಯರಾಗಿದ್ದರೂ ನಮ್ಮ ಅಂತರ್ಜಾಲದ ಒಂದು ಖಾತೆ ಲಾಭ ತರುವ ಒಂದು ಉತ್ಪಾದಿತ ವಸ್ತುವಷ್ಟೆ. ಜುಕರ್ ಬರ್ಗನ ಕೋಟ್ಯಾಂತರ ರೂ ಆದಾಯದಲ್ಲಿ ನನ್ನ ಖಾತೆಯು ಲಾಭಮಾಡಿಕೊಟ್ಟ ಪಾಲುದಾರಿಕೆಯೂ ಅದರಲ್ಲಿದೆ. ಜಾಗತೀಕರಣದಿಂದಾಗಿ ಹೀಗೆ ದಿನನಿತ್ಯವೂ ನಾವು ಒಂದಲ್ಲ ಒಂದು ರೀತಿಯಲ್ಲಿ ಸರಕಿನ ರೀತಿಯಲ್ಲಿ ಬಳಕೆಯಾಗುತ್ತಿದ್ದರೂ, ನಮ್ಮ ಪ್ರತಿ ಚಟುವಟಿಕೆಯೂ ಸರಕಿನ ಉತ್ಪಾದನೆಯಂತೆ ನಡೆಯುತ್ತಿದ್ದರೂ ನಾವು `ಉತ್ಪಾದನೆ’ ಎನ್ನುವ ಪದವನ್ನು ನಿಶೇಧಿತ ಪದವೆಂಬಂತೆ ಭಾವಿಸುತ್ತಿರುವುದು ಅಚ್ಚರಿ ಹುಟ್ಟಿಸುತ್ತದೆ.

ಇರಲಿ, ಅತ್ಯಂತ ಗಂಭೀರವಾಗಿ ಬರೆದಾಗ ಓದದೆ, ಸಣ್ಣ ಪ್ರತಿಕ್ರಿಯೆಯನ್ನೂ ಕೊಡದೆ ಇರುವವರು ಲಘುವಾದ, ಕೆರಳಿಸುವ ಬರಹಗಳಿಗೆ ಪ್ರತಿಕ್ರಿಯಿಸುತ್ತಾರೆ ಎಂದಾಯಿತು. ಇದು ಸೋಷಿಯಲ್ ಮೀಡಿಯಾದ ಒಂದು ಬಗೆಯ ಪ್ರವೃತ್ತಿಯನ್ನೂ ಕಾಣಿಸುತ್ತಿದೆ. ಒಟ್ಟಾರೆ ಈ ಚರ್ಚೆಯ ಮೂಲಕ ಡಿಜಿಟಲ್ ಸ್ಪೇಸಿನ ಕಲ್ಪಿತ ಮಹಿಳೆಯ ಚರ್ಚೆಗೊಂದು ಪುಟ್ಟ ಕನ್ನಡಿ ಒದಗಿದಂತಾಗಿದೆ. ಈ ಲಘುವಾದ ಬರಹದ ಮೂಲಕ ಗಂಭೀರ ಚರ್ಚೆಯೊಂದಕ್ಕೆ ಒಳಕರೆದುಕೊಳ್ಳುವುದು ಸೋಷಿಯಲ್ ಮೀಡಿಯಾದ ತಂತ್ರಗಳಲ್ಲೊಂದು ಎಂದು ನನಗೀಗ ಅರಿವಾಗಿದೆ. ಇಂತಹ ತಂತ್ರಗಳನ್ನು ಆಗಾಗ ಮಾಡುತ್ತಿರುವೆ. (ಈ ಗುಟ್ಟನ್ನು ಹೀಗೆ ಬಹಿರಂಗವಾಗಿ ಹೇಳುವುದೂ ತಪ್ಪೇ ಅಲ್ಲವೆ ?)  ನನ್ನ ಬರಹವನ್ನು ಗಂಭೀರವಾಗಿ ಪರಿಗಣಿಸಿ ಬೈದವರಿಗೂ, ಪ್ರತಿಕ್ರಿಯಿಸಿದವರಿಗೂ, ಮೆಚ್ಚಿದವರಿಗೂ, ಒಳಗೊಳಗೆ ಖುಷಿ ಪಟ್ಟವರಿಗೂ, ಪ್ರತಿಕ್ರಿಯಿಸಲೂ ಆಗದೆ ಸಿಟ್ಟಾದವರಿಗೂ, ಚರ್ಚೆಯನ್ನು ವಿಸ್ತರಿಸಿದವರಿಗೂ ಪ್ರೀತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುವೆ. ಮತ್ತೊಂದು ಬರಹದೊಂದಿಗೆ ಬೇಟಿಯಾಗೋಣ.

‍ಲೇಖಕರು avadhi

July 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. prathibha nandakumar

    ನೀವು ಹೇಳಿರುವ ಎಲ್ಲಾ ಅಂಶಗಳು ಪ್ರಶ್ನಾರ್ಹ

    ಪ್ರತಿಕ್ರಿಯೆ
  2. prathibha nandakumar

    “ಈ ಡಿಜಿಟಲ್ ಸ್ಪೇಸಿನ ಕಲ್ಪಿತ ಮಹಿಳೆಯ ಉತ್ಪಾದನೆಗೂ, ಮಹಿಳೆಯರ ಮೇಲಿನ ಅತ್ಯಾಚಾರಗಳ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೂ ಸೂಕ್ಷ್ಮವಾದ ಸಂಬಂಧವಿದೆ ಎಂದು ದೆಹಲಿಯ ಜೆಎನ್‍ಯುನ ಮಹಿಳಾ ಅಧ್ಯಯನ ವಿಭಾಗದ ಅರುಣಿಮಾ ಆತಂಕ ವ್ಯಕ್ತಪಡಿಸುತ್ತಾರೆ.” — ಜಿ ಅರುಣಿಮಾ ಅವರ ಈ ಲೇಖನದ ರೆಫರೆನ್ಸ್ ಕೊಡುತ್ತೀರಾ? ನಾನು ಹುಡುಕಿದೆ ಎಲ್ಲೂ ಸಿಕ್ಕಲಿಲ್ಲ.

    ಪ್ರತಿಕ್ರಿಯೆ
    • ಚಂಪಕಗೌರಿ

      ಈ ಡಿಜಿಟಲ್ ಸ್ಪೇಸಿನ ಕಲ್ಪಿತ ಮಹಿಳೆಯ ಉತ್ಪಾದನೆಗೂ, ಮಹಿಳೆಯರ ಮೇಲಿನ ಅತ್ಯಾಚಾರಗಳ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೂ ಸೂಕ್ಷ್ಮವಾದ ಸಂಬಂಧವಿದೆ ಎಂದು ದೆಹಲಿಯ ಜೆಎನ್‍ಯುನ ಮಹಿಳಾ ಅಧ್ಯಯನ ವಿಭಾಗದ ಅರುಣಿಮಾ ಆತಂಕ ವ್ಯಕ್ತಪಡಿಸುತ್ತಾರೆ.” – ಇದು ಅರುಣ್‌ ಅವರ ಉತ್ಪಾದನೆ ಮೇಡಂ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: